ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಸಿ ನಂಬಿಕೆಗಳು ದೂರವಾಗಬಹುದೆ?

Last Updated 26 ಅಕ್ಟೋಬರ್ 2018, 11:13 IST
ಅಕ್ಷರ ಗಾತ್ರ

‘ವಿವಾಹೇತರ ಸಂಬಂಧವನ್ನು ಹೊಂದುವುದು ಕಾನೂನಿನ ಪ್ರಕಾರ ಕ್ರಿಮಿನಲ್ ಅಪರಾಧವಲ್ಲ’ – ಸುಪ್ರೀಮ್ ಕೋರ್ಟಿನ ತೀರ್ಪು ಭಾರತೀಯ ಸಮಾಜದಲ್ಲಿ ಸಂಚಲನ ಮೂಡಿಸಿದೆ. ನೂರಾರು ಡಿಬೇಟುಗಳೂ ಪ್ರಖ್ಯಾತರ ಒಪಿನಿಯನ್‌ಗಳೂ ವ್ಯಂಗ್ಯಚಿತ್ರಗಳೂ ಮೆಮೆಗಳ ಸಾಲುಗಳೂ, ವಾಟ್ಸಾಪ್‌ಗಳ ಫಾರ್ವರ್ಡುಗಳೂ ಹರಿದಾಡಿವೆ; ಇನ್ನೂ ಹರಿದಾಡುತ್ತಿವೆ. ಮಹಿಳಾವಾದ, ಸಮಾಜಶಾಸ್ತ್ರ, ಮನಃಶಾಸ್ತ್ರ ಇತ್ಯಾದಿ ನೂರೆಂಟು ಸ್ಪೆಷಲಿಸ್ಟುಗಳೂ ಪ್ಯಾನೆಲ್ ಡಿಸ್ಕಷನ್ ನಡೆಸಿದರು. ಆದರೆ ನನ್ನ ಪ್ರಕಾರ ಇದು ‘ನಮ್ಮ ’ಸಮಾಜದಲ್ಲಿ ವಿಚ್ಛೇದನಗಳೇ ಇಲ್ಲ; ನಮ್ಮದು ಸುಭದ್ರ ಕುಟುಂಬ ವ್ಯವಸ್ಠೆ’ ಇತ್ಯಾದಿ ಸುಳ್ಳಿನ ಸರಮಾಲೆಯ, ಬೂಟಾಟಿಕೆಯ ಮುಖವಾಡದಿಂದ ಹೊರಬರುವ ಕಡೆ ಮೊದಲ ಹೆಜ್ಜೆ.

ಭಾರತೀಯ ಸಮಾಜದಲ್ಲಿ ಸಕಲ ಸಂತೃಪ್ತಿಯನ್ನೂ ವಿವಾಹ ಬಂಧನದ ಚೌಕಟ್ಟಿನೊಳಗೇ ಕಂಡುಕೊಳ್ಳಲು ಅತಿಯಾದ ಮಹತ್ವ ನೀಡಲಾಗುತ್ತದೆ. ಸಮಾಜದ ಮಾನಸಿಕತೆ ಕಾನೂನುಗಳಲ್ಲೂ ಪ್ರತಿಫಲನಗೊಳ್ಳುವುದರಲ್ಲಿ ಆಶ್ಚರ್ಯವೇನಿಲ್ಲ. ಒಂದು ಹೆಣ್ಣಿಗೆ ಒಂದೇ ಗಂಡು; ವಿವಾಹ ಅನ್ನುವುದು ಜನ್ಮ ಜನ್ಮಗಳ ಅನುಬಂಧ, ಕಾಮವೂ ಧಾರ್ಮಿಕ ಚೌಕಟ್ಟಿನೊಳಗಿರಬೇಕು – ಇತ್ಯಾದಿ ನಂಬಿಕೆಗಳು/ಹೇಳಿಕೆಗಳು ಪುಸ್ತಕದಲ್ಲಷ್ಟೆ ಸತ್ಯ. ಹೇಳುವುದೊಂದು, ಮಾಡುವುದೊಂದು; ವೈಯಕ್ತಿಕ ಬದುಕಿಗೂ, ಸಾಮಾಜಿಕ ನಡವಳಿಕೆಗೂ ಸಂಬಂಧವೇ ಇಲ್ಲದಂತೆ ವರ್ತಿಸುವುದು ಭಾರತೀಯರಿಗೆ ನೀರು ಕುಡಿದಷ್ಟೇ ಸುಲಭ! ಹೀಗಾಗಿಯೇ ಈ ದೇಶದಲ್ಲಿ ಅತ್ಯಾಚಾರದ ವಿರುದ್ಧ , ವರದಕ್ಷಿಣೆಯ ವಿರುದ್ಧ, ದೌರ್ಜನ್ಯದ ವಿರುದ್ಧ, ಬಾಲಕಾರ್ಮಿಕರ ವಿರುದ್ಧ – ಅಷ್ಟೇ ಏಕೆ ಕಸ ಚೆಲ್ಲುವುದರ ವಿರುದ್ಧ, ಸಾರ್ವಜನಿಕ ಸ್ಥಳಗಳಲ್ಲಿ ಫ್ಲೆಕ್ಸ್ ಹಾಕುವುದರ ವಿರುದ್ಧವೂ ಕಾನೂನುಗಳಿವೆ. ಆದರೆ ಅವು ಕಾನೂನುಗಳಾಗಿಯೇ ಉಳಿದುಕೊಂಡಿವೆ. ಹೀಗಾಗಿಯೇ ಮಕ್ಕಳ ಮೇಲೆ ಅತ್ಯಾಚಾರ, ಮಾಲಿನ್ಯದಿಂದ ಹೊತ್ತಿ ಉರಿವ ಕೆರೆ, ಮನೆಯೊಡತಿಯಿಂದ ದೌರ್ಜನ್ಯಕ್ಕೊಳಗಾದ ಮನೆಕೆಲಸದ ಅಪ್ರಾಪ್ತ ವಯಸ್ಸಿನ ಬಾಲಕಿ ಇತ್ಯಾದಿ ಸುದ್ದಿಗಳನ್ನು ಓದುತ್ತಲೇ ಇರುತ್ತೇವೆ. ಇದೇ ರೀತಿ ವಿವಾಹಬಾಹಿರ ಸಂಬಂಧ ಕ್ರಿಮಿನಲ್ ಅಪರಾಧ ಎನ್ನುವ ಕಾನೂನಿಂದ ಭಾರತೀಯರ ಇದುವರೆಗಿನ ವೈವಾಹಿಕ ಜೀವನ ಸಂತೃಪ್ತವಾಗಿತ್ತೆ? ವಿವಾಹಬಾಹಿರ ಸಂಬಂಧಗಳಿಂದ ಮುಕ್ತವಾಗಿತ್ತೆ? ಈ ಪ್ರಶ್ನೆಗಳೇ ಹಾಸ್ಯಾಸ್ಪದ ಅನ್ನಿಸುತ್ತದೆ. ಕಾನೂನಿನ ಪಾಡಿಗೆ ಕಾನೂನು ಇರುತ್ತದೆ, ಬದುಕು ತನ್ನ ಪಾಡಿಗೆ ತಾನಿರುತ್ತದೆ ಅನ್ನುವಂಥದ್ದು ನಮ್ಮ ಮನಃಸ್ಥಿತಿ. ಮೊದಲ ಪತ್ನಿಗೆ ವಿಚ್ಛೇದನವನ್ನೇ ಕೊಡದೆ ಸಂಬಂಧಗಳನ್ನಿಟ್ಟುಕೊಂಡ, ಸಾರ್ವಜನಿಕವಾಗಿ ಆ ಸಂಬಂಧಗಳನ್ನು ಪ್ರದರ್ಶಿಸುವ ರಾಜಕಾರಣಿಗಳೂ ಸಿನೆಮಾನಟರೂ ಕ್ರೀಡಾಪಟುಗಳೂ ನಮ್ಮ ನಡುವೆಯೇ ಇದ್ದಾರೆ. ವಿವಾಹೇತರ ಸಂಬಂಧಗಳಿಗಾಗಿ ಅವರಿಗೆಂದೂ ಬಹಿಷ್ಕಾರ, ಕಾನೂನಿನ ಪ್ರಕಾರ ಶಿಕ್ಷೆ, ಸಮಾಜದಿಂದ ತಿರಸ್ಕಾರ...? ಉಹೂಂ! ಇವರೆಲ್ಲ ಕಾನೂನಾತೀತರು! ಅಥವಾ ನಾವು ಅವರನ್ನು ಹಾಗೆಂದುಕೊಂಡಿದ್ದೇವೆ!! ಅಶ್ಲೀಲ ವೆಬ್‌ಸೈಟುಗಳನ್ನು ನೋಡುವವರಲ್ಲಿ, ಕಚೇರಿಗಳಲ್ಲಿ ಲೈಂಗಿಕ ಕಿರುಕುಳ ನೀಡುವವರಲ್ಲಿ, ಪತ್ನಿಪೀಡಕರಲ್ಲಿ ಹದಿಹರೆಯದವರಿಗಿಂತ, ಸೋ ಕಾಲ್ಡ್ ಸಂಸ್ಕೃತಿರಕ್ಷಕ, ಮದುವೆಯ ರಜತಮಹೋತ್ಸವವನ್ನು ಆಚರಿಸುವ ಮಧ್ಯವಯಸ್ಕರೇ ಜಾಸ್ತಿ ಇದ್ದಾರೆ ಎಂದು ಸಮೀಕ್ಷೆಯೊಂದು ಹೇಳುತ್ತಿದೆ. ಪರಿಸ್ಥಿತಿ ಹೀಗಿರುವಾಗ, ಸುಪ್ರೀಂ ಕೋರ್ಟ್‌ ‘ವಿವಾಹೇತರ ಸಂಬಂಧವನ್ನು ವಿಚ್ಛೇದನಕ್ಕೆ ಕಾರಣವಾಗಷ್ಟೆ ಪರಿಗಣಿಸಬಹುದು, ಕ್ರಿಮಿನಲ್ ಅಪರಾಧವಾಗಲ್ಲ’ ಎಂದಿರುವುದು ಸ್ವಾಗತಾರ್ಹ.

ಇನ್ನು ವಿಷಯದ ಇನ್ನೊಂದು ಮಗ್ಗಲನ್ನು ನೋಡಬಹುದು. ಸುಪ್ರಿಂ ಕೋರ್ಟ್‌ನ ವ್ಯಾಖ್ಯಾನದ ಕಾರಣದಿಂದಾಗಿ ವಿವಾಹೇತರ ಸಂಬಂಧಗಳು ಹೆಚ್ಚಾಗುತ್ತವೆ; ವಿಚ್ಚೇದನಗಳು ಹೆಚ್ಚಾಗುತ್ತವೆ; ಇದರಿಂದಾಗಿ ಭಾರತದ ಕುಟುಂಬವ್ಯವಸ್ಥೆ ಹಳ್ಳ ಹಿಡಿಯುತ್ತದೆ ಎನ್ನುವ ವಾದ. ಪರಸ್ಪರ ಪ್ರೀತಿ, ವಿಶ್ವಾಸ, ನಂಬಿಕೆ ಯಾವುದೂ ಇಲ್ಲದ, ಕೇವಲ ಅನಿವಾರ್ಯತೆಗಳ ಮೇಲೆ ನಿಂತಿರುವ ಸಂಬಂಧಗಳಿಗಿಂತ ವಿಚ್ಛೇದನವೇ ಮೇಲು. ಪಾಶ್ಚಾತ್ಯ ಪ್ರಭಾವ, ಮಕ್ಕಳ ಭವಿಷ್ಯಕ್ಕೆ ಮಾರಕ – ಇತ್ಯಾದಿ ವಾದಗಳೆಲ್ಲ ನಮ್ಮ ಹಿಪೋಕ್ರಸಿಗೆ; ಈ ಹಿಪೋಕ್ರಸಿ ಹೊರ ಪ್ರಪಂಚಕ್ಕೆ ಗೊತ್ತಾಗದಂತಿರಲು ಇಟ್ಟುಕೊಂಡಿರುವ ಆಯುಧಗಳಷ್ಟೆ. ಸದಾ ಮುಸುಕಿನೊಳಗೆ ಗುದ್ದಾಟ ನಡೆಸುವ, ಕದ್ದುಮುಚ್ಚಿ ಸಂಬಂಧಗಳನ್ನು ಮೇಂಟೇನ್ ಮಾಡುವ ಅದೆಷ್ಟು ಸಂಸಾರಗಳು ನಮ್ಮ ನಡುವಿಲ್ಲ? ಇವೆಲ್ಲ ಮಾನಸಿಕವಾಗಿ, ದೈಹಿಕವಾಗಿ ಸ್ವಸ್ಠ ಸಮಾಜವನ್ನು ಬೆಳೆಸುತ್ತದೆಯೆ? ಅಥವಾ ಇಷ್ಟೊಂದು ವರ್ಷಗಳೂ ಪಾಶ್ಚಾತ್ಯ ಪ್ರಭಾವವೇ ಇಲ್ಲದ ಸಮಾಜ ಕೇವಲ ಆರೋಗ್ಯಕರವಾಗಿದ್ದನ್ನೇ ನೀಡಿದೆಯೆ? ಭಾರತೀಯ ಸಮಾಜದ ಹಿಪೋಕ್ರಸಿಗೆ ಎಣೆಯೇ ಇಲ್ಲ. ಬೆಕ್ಕು ಕಣ್ಮುಚ್ಚಿ ಹಾಲು ಕುಡಿದಂತೆ ನಾವು ಅಪ್ರಿಯಸತ್ಯಗಳನ್ನೂ ಆಚಾರವಿಚಾರಗಳನ್ನೂ ಅತಿ ಪವಿತ್ರ ಧಾರ್ಮಿಕ ವಿಷಯವನ್ನಾಗಿಸಿಯೋ, ಪ್ರಶ್ನಿಸಲೇ ಬಾರದ ಸನಾತನ ಸಂಸ್ಕೃತಿಯ ಭಾಗವಾಗಿಸಿಯೋ ಜಾಣತನ ಮೆರೆದುಬಿಡುತ್ತೇವೆ ಅಥವಾ ಹಾಗೆಂದುಕೊಳ್ಳುತ್ತೇವೆ. ‘ಇಲ್ಲ’ ಎಂದು ನಟಿಸಿದ ಮಾತ್ರಕ್ಕೆವಾಸ್ತವವಿಷಯವೇನೂ ಮಾಯವಾಗುವುದಿಲ್ಲವಲ್ಲ. ಅರ್ಧಕ್ಕಿಂತಲೂ ಹೆಚ್ಚು ಕುಟುಂಬಗಳು ಮನಃಶಾಸ್ತ್ರದ ಪ್ರಕಾರ ಡಿಸ್ ಫಂಕ್ಷನಲ್. ಹೀಗಿರುವಾಗ ವಿವಾಹೇತರ ಸಂಬಂಧವಿರುವ ಮದುವೆಯೊಳಗೆ ಕಾನೂನಿನ ಬೆದರಿಕೆಯಿಂದ, ಆತ್ಮಾಭಿಮಾನವಿಲ್ಲದೆ ಬದುಕುತ್ತಾ, ಮಕ್ಕಳಲ್ಲೂ ಮದುವೆ–ಸಂಬಂಧ ಇತ್ಯಾದಿಗಳ ಬಗ್ಗೆ ಪ್ರಶ್ನೆಗಳನ್ನೂ ಸಂಶಯಗಳನ್ನೂ ಹುಟ್ಟುಹಾಕುತ್ತಾ, ‘ಎಲ್ಲವೂ ಸುಂದರವಾಗಿದೆ’ ಎಂದು ದಿನವೂ ಸುಳ್ಳಿನ ಕಂತೆಯನ್ನು ಕಟ್ಟಿ, ಸಮಾಜವನ್ನೂ ಆತ್ಮವನ್ನೂ ನಂಬಿಸುವ ಕೆಲಸವನ್ನು ಮಾಡುತ್ತಾ, ಉಸಿರುಕಟ್ಟಿ ಬದುಕುವ ಬದಲು, ಅರ್ಥವನ್ನೇ ಕಳೆದುಕೊಂಡ ಮದುವೆಗಳಿಂದ ದೂರ ಸರಿಯುವುದು ಮನಸ್ವಾಸ್ಥ್ಯದ ದೃಷ್ಟಿಯಿಂದ, ಸ್ವಸ್ಥಸಮಾಜದ ದೃಷ್ಟಿಯಿಂದ ಒಳ್ಳೆಯದಲ್ಲವೆ?

ಹೆಣ್ಣುಮಕ್ಕಳು ಹೊರಗೆ ಹೋಗಿ ಕೆಲಸ ಮಾಡುವುದು, ಆರ್ಥಿಕವಾಗಿ ಸ್ವಾವಲಂಬಿಗಳಾಗುವುದು – ಇವನ್ನು ಅಸಹನೀಯ ಅಸ್ವಾಭಾವಿಕ ಎನ್ನುವಂತೆ ನೋಡುವ ನಮ್ಮ ಸಮಾಜದ ಮನಃಸ್ಥಿತಿಯ ಮೇಲೂಈ ತೀರ್ಪಿನ ಗಾಢ ಪರಿಣಾಮವಾಗಿದೆ. ಮುಂದಿನ ದಿನಗಳಲ್ಲಿ ಈ ಮನೋಭಾವ ಬದಲಾಗಲು ಈ ತೀರ್ಪು ಮುನ್ನುಡಿಯನ್ನೂ ಬರೆಯಬಹುದು. ಇಂದಿಗೂ ನಮ್ಮಲ್ಲಿ ಹೆಣ್ಣುಮಕ್ಕಳನ್ನು ಓದಿಸಿದರೂ, ಅಂತಿಮ ಗುರಿ ಮಾತ್ರ ಮದುವೆಯೇ. ಈ ಶತಮಾನದಲ್ಲೂ ಪ್ರೀತಿಸಿ ಮದುವೆಯಾಗುವುದು ಅಪರಾಧವೇ. ಕಾರಣ ತಮ್ಮ ಮಕ್ಕಳು, ತಾವು ಅವರಿಗೆ ನೀಡಿದ ಶಿಕ್ಷಣ–ಸಂಸ್ಕಾರದ ಬಗೆಗೆ ಪೋಷಕರಿಗೇ ನಂಬಿಕೆ ಇಲ್ಲದಿರುವುದು. ವಿದೇಶಗಳಲ್ಲಿ ಓದಿಸಿದರೂ, ಹೆಣ್ಣುಮಕ್ಕಳಿಗೆ ಕೆಲಸವನ್ನೇ ಮಾಡಲು ಬಿಡದೆ ಕೋಟಿಗಟ್ಟಲೇ ವರದಕ್ಷಿಣೆಯನ್ನು ಕೊಟ್ಟು ಮದುವೆ ಮಾಡುವ ಅತಿ ಶ್ರೀಮಂತರನ್ನು ನೋಡಿದ್ದೇನೆ. ಮದುವೆಗಾಗಿಯೇ ಡಿಗ್ರಿ ಮಾಡಿಸುವವರೂ ಇದ್ದಾರೆ. ಹೆಣ್ಣಿನ ಶಿಕ್ಷಣಕ್ಕೆ, ವೃತ್ತಿಗೆ, ಜೀವನಸಂಗಾತಿಯ ಆಯ್ಕೆಗೆ ಅವಳಿಗೇ ಸ್ವಾತಂತ್ರ್ಯ ನೀಡುವಷ್ಟು ನಂಬಿಕೆ ಮತ್ತು ಧೈರ್ಯ ನಮ್ಮ ಸೋ ಕಾಲ್ಡ್ ಸದೃಢ ಕುಟುಂಬ ವ್ಯವಸ್ಥೆಯಲ್ಲಿಲ್ಲ! ಹೆಣ್ಣು ಹೊರ ಹೋಗಿ ಕೆಲಸ ಮಾಡಬೇಕಾಗಿರುವುದು ಗಂಡಿಗೆ ಹೊರ ಹೋಗಿ ದುಡಿಯುವ ಸಾಮರ್ಥ್ಯವಿಲ್ಲದಾಗ ಮಾತ್ರ ಎನ್ನುವ ಗಾಢ ನಂಬಿಕೆಯ ದಾಸರು ನಾವು. ಇದು ಹೆಣ್ಣುಮಕ್ಕಳನ್ನು ಹೊರ ಪ್ರಪಂಚದ ಅನುಭವದಿಂದ ದೂರ ಮಾಡಿದೆ. ಈ ಕಾರಣದಿಂದಾಗಿ ಸಮಸ್ಯೆಗಳನ್ನು ಎದುರಿಸುವ, ಪರಿಹಾರ ಕಂಡುಕೊಳ್ಳುವ, ನಿರ್ಧಾರಗಳನ್ನು ತೆಗೆದುಕೊಳ್ಳುವ, ಒಬ್ಬಂಟಿಯಾಗಿ ಪ್ರವಾಸ ಮಾಡುವ, ಎಲ್ಲಕ್ಕಿಂತ ಮಿಗಿಲಾಗಿ ಆರ್ಥಿಕ ಸ್ವಾವಲಂಬನೆಯಿಂದ ಅವರನ್ನು ವಂಚಿತರನ್ನಾಗಿ ಮಾಡಿದೆ. ಇನ್ನೊಂದು ಕಡೆ, ಹೆಂಡತಿಯನ್ನು ಕೆಲಸಕ್ಕೆ ಕಳುಹಿಸುವುದು ಎಂದರೆ ಗಂಡನ ಕೈಲಾಗದತನವನ್ನಾಗಿಯೋ, ಗಂಡುತನದ ಇಗೋ ವಿಷಯವನ್ನಾಗಿಯೋ ಮಾಡುತ್ತಾ, ಅವರನ್ನು ಅನಗತ್ಯ ಅಹಂಕಾರಿಯಾಗಿಸುತ್ತದೆ; ತಾನು ಎಷ್ಟೇ ಓದಿದರೂ ಸ್ವಂತ ಸಂಪಾದನೆ ಇಲ್ಲದೆ,ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳುತ್ತಾ ಇರುವುದಷ್ಟೆ ಹೆಂಡತಿಯ ಅರ್ಹತೆ ಎನ್ನುವ ಮನೋಭಾವವನ್ನು ಗಟ್ಟಿಯಾಗಿಸುತ್ತಿದೆ. ‘ಹೆಣ್ಣು ತಿರುಗಿ ಕೆಟ್ಟಳು, ಗಂಡು ಕೂತು ಕೆಟ್ಟ’ ಅನ್ನುವ ಕೆಟ್ಟ ನಂಬಿಕೆಗಳು ಹಾಸು ಹೊಕ್ಕಾಗಿರುವುದರಿಂದಲೇ ಭಾರತೀಯ ಮದುವೆಗಳು ಸ್ತ್ರೀಯರಿಗೆ ಆರ್ಥಿಕ ಅವಲಂಬನೆಯ ಬೇಡಿಗಳೇ ಹೌದು. ಭಾರತೀಯ ಮದುವೆಗಳಲ್ಲಿ ವಿಚ್ಛೇದನಗಳ ಸಂಖ್ಯೆ ಕಡಿಮೆ ಇರುವುದಕ್ಕೆ ಕಾರಣಹೊರಗಿನ ಪ್ರಪಂಚದಲ್ಲಿ ಅಸ್ತಿತ್ವವನ್ನು ಕಂಡುಕೊಳ್ಳಲಾಗದ ಹೆಣ್ಣುಮಕ್ಕಳ ಭಯ, ಅಸಾಹಯಕತೆಗಳೇ ಹೊರತು ‘ಮಹಾಸಂಸ್ಕೃತಿ’ ಇತ್ಯಾದಿ ಬೊಗಳೆಗಳಿಂದಲ್ಲ ಅನ್ನುವುದು ನನ್ನ ಖಚಿತ ಅಭಿಪ್ರಾಯ. ಹೀಗಾಗಿಯೇ ಇಲ್ಲಿ ಆತ್ಮಗೌರವಕ್ಕೆ ಎಷ್ಟೇ ಕುಂದುಂಟಾದರೂ, ಮಕ್ಕಳೆದುರಿಗೆ, ಸಮಾಜದ ಕಣ್ಣಿಗೆ ಅನುಕಂಪದ ವಸ್ತುವಾದರೂ ಹೆಣ್ಣು, ಜೊತೆಗಾರನ ವಿವಾಹಬಾಹಿರ ಸಂಬಂಧವನ್ನು ಸಹಿಸಿಕೊಳ್ಳುತ್ತಾಳೆ; ಅಂತಹ ಸಂಬಂಧಗಳನ್ನೂ ಡಿಫೇಂಡ್ ಮಾಡಲು ಇಷ್ಟು ದಿನ ಕ್ರಿಮಿನಲ್ ಅಪರಾಧದ ರಕ್ಷಣೆಯಿತ್ತು. ಈಗ ಈ ತೀರ್ಪು ನಮ್ಮ ಇಡೀ ಸಮಾಜವನ್ನು ಆತ್ಮನಿರೀಕ್ಷಣೆ ಮಾಡಲು ಒತ್ತಾಯಿಸುತ್ತಿದೆ. ಇನ್ನು ಮುಂದಾದರೂ ಹೆಣ್ಣುಮಕ್ಕಳ ಓದು, ಕೆಲಸ ಇತ್ಯಾದಿಯನ್ನು ಮದುವೆಗೆ, ಗಂಡಿನ, ಗಂಡಿನ ಮನೆಯವರ ಅನುಮತಿಗೆ, ಹೆಂಡತಿಯನ್ನು ಸಾಕುವ ಗಂಡನ ಸಾಮರ್ಥ್ಯಕ್ಕೆ ತಳುಕು ಹಾಕದೆ, ಅವರ ಆರ್ಥಿಕ ಸ್ವಾತಂತ್ರ್ಯಕ್ಕೆ, ಅಸ್ತಿತ್ವಕ್ಕೆ ಅರ್ಥ ನೀಡುವ ಮಾಧ್ಯಮವಾಗಿ ಪೋಷಕರು, ಸಮಾಜ ಪರಿಗಣಿಸಬಹುದೇನೋ ಎನ್ನುವ ಸಣ್ಣದೊಂದು ಆಶಾವಾದಕ್ಕೆ ಈ ತೀರ್ಪು ದಾರಿ ಮಾಡಿಕೊಟ್ಟಿದೆ. ವಿವಾಹಬಾಹಿರ ಸಂಬಂಧಗಳಿದ್ದೂ, ಮಕ್ಕಳ, ಅಸ್ತಿತ್ವದ, ಸಮಾಜದ ಸುಳ್ಳು ನೆವಗಳನ್ನು ಹೇಳುತ್ತಾ, ಅಂತಹ ಮದುವೆಯೊಳಗೆ ದಿನವೂ ಸಾಯುತ್ತಾ, ಬದುಕುವ ಅನಿವಾರ್ಯತೆಯನ್ನು ಈ ತೀರ್ಪು ಕಡಿಮೆ ಮಾಡಬಹುದು ಎನ್ನುವುದೊಂದು ಆಶಯ. ಕಾರಣ, ಸ್ವಸ್ಥ ಸಮಾಜವೊಂದು ಸುಳ್ಳುಗಳ ಮೇಲೆ, ಹಿಪೋಕ್ರಸಿಯ ಅಸ್ತಿಭಾರದ ಮೇಲೆ, ಮನಃಸಾಕ್ಷಿಯ ಕೊಲೆಯ ಮೇಲೆ ನಿರ್ಮಾಣವಾಗಲಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT