ಮಂಗಳವಾರ, ಆಗಸ್ಟ್ 20, 2019
25 °C

ಈ ದಾಸ್ಯಗಳಿಂದಲೂ ಬಿಡುಗಡೆ ಬೇಕಲ್ಲವೇ?

Published:
Updated:

ಸ್ವಾತಂತ್ರ್ಯಕ್ಕೆ ಭಾರತ ಇನ್ನೂ ಸಿದ್ಧವಾಗಿಲ್ಲ ಎನ್ನುವುದು ಬಾಬಾಸಾಹೇಬ್ ಅಂಬೇಡ್ಕರ್‌ ಅವರ ನಿಲುವಾಗಿತ್ತು. ಭಾರತೀಯರು ‘ನಾವು’ ಅಥವಾ ‘ನಮಗೆ’ ಎನ್ನುವಾಗ ಅದು ಸಮಸ್ತ ಭಾರತೀಯರನ್ನು ಉದ್ದೇಶಿಸಿ ಬಳಸುವ ಪದವಾಗಿರುವುದಿಲ್ಲ.

ಪ್ರತಿ ಭಾರತೀಯನಿಗೂ ಬಹಳಷ್ಟು ಮಂದಿ ದೇಶವಾಸಿಗಳು ‘ಇತರರು’ ಎನ್ನುವ ಮನೋಭೂಮಿಕೆಯೇ ಇರುವುದು. ಸಮಯ, ಸಂದರ್ಭ ಅನುಸರಿಸಿ ಯಾರು ‘ನಾವು’ ಮತ್ತು ಯಾರು ‘ಇತರರು’ ಎನ್ನುವುದು ಬದಲಾಗುತ್ತಲೇ ಇರುತ್ತದೆ. ಈ ಪರಿಸ್ಥಿತಿಯಲ್ಲಿ ಸ್ವಾತಂತ್ರ್ಯ ಬಂದರೂ ರಾಷ್ಟ್ರ ಕಟ್ಟುವುದು ಹೇಗೆ ಎನ್ನುವುದು ಅಂಬೇಡ್ಕರ್‌ ಮುಂದಿಟ್ಟ ಪ್ರಶ್ನೆಯಾಗಿತ್ತು. ಮಹಾತ್ಮ ಗಾಂಧಿ ಈ ವಿಚಾರದಲ್ಲಿ ಭಿನ್ನವಾಗಿ ಯೋಚಿಸಿದರು. ಭಾರತೀಯರ ಮೂಲಭೂತವಾದಲ್ಲಿ ಒಂದು ಒಳ್ಳೆಯತನವಿದೆ. ಆ ಒಳ್ಳೆಯತನ ಕ್ರಮೇಣ ಭೇದಗಳನ್ನೆಲ್ಲಾ ತೊಡೆದು ಹಾಕುತ್ತದೆ ಎಂದು ನಂಬಿದ್ದರು.

ಈ ಭಾರತೀಯ ಒಳ್ಳೆಯತನದ ಸಾಕ್ಷಾತ್ಕಾರವಾಗಬೇಕಾದರೆ ಮೊದಲು ಬ್ರಿಟಿಷ್ ಆಳ್ವಿಕೆ ಹೋಗಿ ದೇಶ ಸ್ವತಂತ್ರವಾಗಬೇಕು ಎನ್ನುವುದು ಅವರ ನಿಲುವು. ಆದರೆ, ಸ್ವಾತಂತ್ರ್ಯ ಬೇಕು ಎಂದು ಬಲವಾಗಿ ನಂಬಿದ್ದ ಗಾಂಧೀಜಿ ಅವರಿಗೆ ಬ್ರಿಟಿಷರು ಈ ದೇಶಕ್ಕೆ ತಂದ ಆಧುನಿಕತೆ, ಅದರ ಜತೆಗೆ ಬಂದ ಆಧುನಿಕ ಆಡಳಿತ ವ್ಯವಸ್ಥೆ ಮತ್ತು ಅರ್ಥ ವ್ಯವಸ್ಥೆ ದೊಡ್ಡ ಅಪಾಯಗಳಾಗಿ ಕಂಡವು. ಅವುಗಳ ಬಗ್ಗೆ ಅವರಿಗೆ ಅತೀವ ತಿರಸ್ಕಾರವಿತ್ತು. ಅವುಗಳ ಮೂಲದಲ್ಲಿ ಮನೆ ಮಾಡಿರುವ ಹಿಂಸೆ ಒಂದು ದಿನ ಭಾರತೀಯ ಎನ್ನಬಹುದಾದ ಎಲ್ಲವನ್ನೂ ಸುಡಬಹುದು ಎಂದು ಎಚ್ಚರಿಸಿದರು.

ಆಧುನಿಕ ಆಡಳಿತ ವ್ಯವಸ್ಥೆಯಂತೂ ಗಾಂಧೀಜಿಯವರ ದೃಷ್ಟಿಯಲ್ಲಿ ಒಂದು ‘ಆತ್ಮರಹಿತ ಯಂತ್ರ’ವಾಗಿತ್ತು. ದೇಶದ ಸ್ವಾತಂತ್ರ್ಯದ ಜತೆಗೆ ಬ್ರಿಟಿಷರು ಭಾರತಕ್ಕೆ ಏನೇನು ತಂದಿದ್ದರೋ ಅವೆಲ್ಲವುಗಳಿಂದಲೂ ಸ್ವಾತಂತ್ರ್ಯ ಪಡೆಯಬೇಕು ಎಂದು ಅವರು ಪ್ರಾಮಾಣಿಕವಾಗಿ ನಂಬಿದ್ದರು. ಪಂಡಿತ್‌ ಜವಾಹರಲಾಲ್‌ ನೆಹರೂ ಅವರ ಚಿಂತನೆ ಮತ್ತೊಂದು ರೀತಿಯಿತ್ತು. ಅವರಿಗೆ ಸ್ವಾತಂತ್ರ್ಯ ತುರ್ತಾಗಿ ಬರುವುದು ಅಗತ್ಯವೆಂದು ಕಂಡಿತು. ಹಾಗೆಯೇ, ಆಧುನಿಕತೆ, ಅದರ ರಾಜಕೀಯ ಮತ್ತು ಆರ್ಥಿಕ ಪರಿಕರಗಳ ಬಗ್ಗೆ ಅವರಿಗೆ ಅತೀವ ಭರವಸೆಯೂ ಇತ್ತು. ಆಧುನಿಕ ಆಡಳಿತ ವ್ಯವಸ್ಥೆಯ ಅತಿರೇಕದ ಬಗ್ಗೆ ಗಾಂಧೀಜಿಗಿದ್ದ ಆತಂಕಗಳನ್ನು ಪ್ರಜಾತಂತ್ರದ ಮೂಲಕ ಪರಿಹರಿಸಿಕೊಳ್ಳಬಹುದು ಎಂದು ನೆಹರೂ ನಂಬಿದ್ದರು. ಆಧುನಿಕತೆ ಮತ್ತು ಪ್ರಜಾತಂತ್ರ ಅಂಬೇಡ್ಕರ್‌ ನಂಬಿದ ಮಾರ್ಗವೂ ಆಗಿತ್ತು. ಅಂತೂ ಭಾರತಕ್ಕೆ ಸ್ವಾತಂತ್ರ್ಯವೂ ಬಂತು. ಅದರ ಜತೆಗೆ ಆಧುನಿಕ ಅರ್ಥ ವ್ಯವಸ್ಥೆ ಮತ್ತು ಆಧುನಿಕ ರಾಜ್ಯ ವ್ಯವಸ್ಥೆಗಳೂ ಬಂದವು.

ಆ ಕಾಲದ ಪ್ರವಾಹವೇ ಹಾಗಿತ್ತು. ಪ್ರಪಂಚವೆಲ್ಲಾ ಆಧುನಿಕತೆಯತ್ತ, ಆಧುನಿಕ ಜನತಂತ್ರೀಯ ಆಡಳಿತ ವ್ಯವಸ್ಥೆಯತ್ತ ತುಡಿಯುತ್ತಿರುವ ಹೊತ್ತಿಗೆ ಭಾರತ ಇನ್ನೆತ್ತ ಹೊರಳಲು ಸಾಧ್ಯವಿತ್ತು? ಕಾಲಧರ್ಮಕ್ಕೆ ಅನುಗುಣವಾಗಿ ವ್ಯಕ್ತಿಗಳು ಸೃಷ್ಟಿಯಾಗುತ್ತಾರೋ ಅಥವಾ ವ್ಯಕ್ತಿಗಳೇ ಕಾಲಧರ್ಮವನ್ನು ರೂಪಿಸುತ್ತಾರೋ ಗೊತ್ತಿಲ್ಲ. ಅಂತೂ ಸ್ವಾತಂತ್ರ್ಯ ಬಂತು. ಗಾಂಧೀಜಿಯವರ ಜತೆ ನಿಂತು ಯೋಚಿಸಿದವರಿಗೆ ಬಂದ ಸ್ವಾತಂತ್ರ್ಯ ಹೊಸದಾಸ್ಯವನ್ನು ಸೃಷ್ಟಿಸಿತು. ನೆಹರೂ ಮತ್ತು ಅಂಬೇಡ್ಕರ್‌ ಅವರನ್ನು ಒಪ್ಪಿಕೊಂಡವರಿಗೆ ರಾಜಕೀಯ ಸ್ವಾತಂತ್ರ್ಯದ ಜತೆಗೆ ಇತರ ಸ್ವಾತಂತ್ರ್ಯಗಳ ಬಾಗಿಲುಗಳೂ ತೆರೆದುಕೊಳ್ಳುವ ಸಾಧ್ಯತೆ ಗೋಚರಿಸಿತು.

‘ಎಲ್ಲಾ ಸ್ವಾತಂತ್ರ್ಯಗಳೂ ಹಲವು ರೀತಿಯ ದಾಸ್ಯಗಳನ್ನು ಹೊತ್ತು ತರುತ್ತವೆ ಮತ್ತು ಎಲ್ಲಾ ಬಂಧನಗಳಲ್ಲೂ ಕೆಲವು ಸ್ವಾತಂತ್ರ್ಯಗಳಿರುತ್ತವೆ’ ಎನ್ನುವ ಸತ್ಯ ಮನುಷ್ಯರಿಗೆ ಅಷ್ಟು ಬೇಗ ಅರ್ಥವಾಗುವುದಿಲ್ಲ. ಬ್ರಿಟಿಷರು ದಾಸ್ಯ ಸೃಷ್ಟಿಸುವ ಜತೆಗೆ ಭಾರತೀಯರನ್ನು ಹಲವು ಬಂಧನಗಳಿಂದ ಮುಕ್ತಗೊಳಿಸಿದ್ದೂ ಸತ್ಯವಲ್ಲವೇ?

ಆ ಮುಕ್ತ ಸ್ಥಿತಿಯಲ್ಲೇ ಭಾರತೀಯರು ತಾವು ಬ್ರಿಟಿಷರ ರಾಜಕೀಯ ದಾಸ್ಯದಿಂದ ಬಿಡುಗಡೆ ಹೊಂದಬೇಕು ಎಂಬ ಹಂಬಲ ಬೆಳೆಸಿಕೊಂಡದ್ದು. ಸ್ವತಂತ್ರ ಸ್ಥಿತಿಯಲ್ಲಿ ಹೊಸ ಬಂಧನಗಳಿಗೆ ಅಧೀನವಾಗುವ ಮತ್ತು ಆ ಬಂಧನಗಳನ್ನು ಅನುಭವಿಸುತ್ತಾ ಹೊಸದೊಂದು ‘ಬಂಧರಹಿತ ಸುಖದ ಸ್ವರ್ಗ’ಕ್ಕಾಗಿ ಹೋರಾಡುವ ಒಂದು ನಿರಂತರ ಪ್ರಕ್ರಿಯೆ ಮಾನವ ಚರಿತ್ರೆಯ ಸರ್ವೇಸಾಮಾನ್ಯ ಚರ್ಯೆ ಅಂತ ಅನ್ನಿಸುತ್ತದೆ.

ಬ್ರಿಟಿಷರು 1947ರಲ್ಲಿ ಬಿಟ್ಟುಹೋದ ನಂತರದ ಭಾರತದ ರಾಜಕೀಯ ಸ್ಥಿತಿ ಮತ್ತು ಆ ಸ್ಥಿತಿಗೆ 1950ರ ಸಂವಿಧಾನ ನೀಡಿದ ಗತಿ ಇವೆರಡನ್ನೂ ಒಟ್ಟಾಗಿ ಸೇರಿಸಿದರೆ ಅದು ಭಾರತೀಯರು ಪಡೆದ ಸ್ವಾತಂತ್ರ್ಯ. ಆ ಸ್ವಾತಂತ್ರ್ಯವನ್ನು ಬಳಸಿಕೊಂಡು ಅವರು ತಮಗಾಗಿ ಒಂದು ಪ್ರಜಾತಂತ್ರ ವ್ಯವಸ್ಥೆ ಮತ್ತು ಒಂದು ಅರ್ಥ ವ್ಯವಸ್ಥೆಯನ್ನು ರೂಪಿಸಿಕೊಂಡದ್ದು. ಈ ಹೊಸ ವ್ಯವಸ್ಥೆ ತಮ್ಮನ್ನು ಸ್ವಾತಂತ್ರ್ಯದ ಇನ್ನೊಂದು ಸಂತುಲಿತ ಸ್ಥಿತಿಗೆ ಒಯ್ಯುತ್ತದೆ ಎಂದು ಅವರು ನಂಬಿದ್ದು ಸಹಜವಾಗಿಯೂ ಹಾಗೂ ಕಾಲಧರ್ಮಕ್ಕೆ ಅನುಗುಣವಾಗಿಯೂ ಇತ್ತು. ಏಳು ದಶಕಗಳ ನಂತರ ಈಗ ಯೋಚಿಸಬೇಕಾಗಿರುವುದು ಇದೇ ಪ್ರಜಾತಂತ್ರ ವ್ಯವಸ್ಥೆ ಮತ್ತು ಅರ್ಥ ವ್ಯವಸ್ಥೆ ಸೃಷ್ಟಿಸಿರುವ ಹೊಸ ರೀತಿಯ ದಾಸ್ಯದ ಸುಳಿಗಳ ಬಗ್ಗೆ. ಇಷ್ಟು ಸಮಯ ಒಪ್ಪಿಕೊಂಡು ಅಪ್ಪಿಕೊಂಡು ಬಂದಿರುವ ಪ್ರಜಾತಂತ್ರಿಕ ಮತ್ತು ಆರ್ಥಿಕ ಮಾದರಿಗಳು ತಂದೊಡ್ಡುತ್ತಿರುವ ಅನಾಹುತಗಳಿಂದ ಸ್ವಾತಂತ್ರ್ಯ ಪಡೆಯುವ ಬಗ್ಗೆ. ಇದರರ್ಥ ಪ್ರಜಾತಂತ್ರವನ್ನು ಬಿಟ್ಟು ಇನ್ಯಾವುದನ್ನೋ ಹುಡುಕಬೇಕೆಂದಲ್ಲ. ಇದರರ್ಥ ಆರ್ಥಿಕ ಅಭಿವೃದ್ಧಿಯನ್ನು ತಿರಸ್ಕರಿಸಬೇಕಂತಲೂ ಅಲ್ಲ.

ಈಗ ಇರುವ ಪ್ರಜಾತಂತ್ರ ಮಾದರಿಯ ಬಗ್ಗೆ ನಮಗಿರುವ ಹೆಮ್ಮೆ ಇದೆಯಲ್ಲಾ ಅದು ದೊಡ್ಡ ಆಷಾಢಭೂತಿತನದಿಂದ ಕೂಡಿದ್ದು. ಭಾರತೀಯ ಪ್ರಜಾತಂತ್ರದ ಬಗ್ಗೆ ಬಹಳಷ್ಟು ಸಿನಿಕತನದಿಂದ ಮಾತನಾಡುವವರು ಕೂಡ ಕಾಲಕಾಲಕ್ಕೆ ಇಲ್ಲಿ ಚುನಾವಣೆಗಳು ನಡೆಯುತ್ತಿವೆ, ಕೆಲವೊಮ್ಮೆ ಚುನಾವಣೆಯಲ್ಲಿ ಕೆಟ್ಟ ಸರ್ಕಾರಗಳನ್ನು ಜನರು ಸೋಲಿಸುತ್ತಾರೆ ಎನ್ನುವ ಕಾರಣಕ್ಕೆ ಭಾರತದ ಪ್ರಜಾತಂತ್ರದ ಬಗ್ಗೆ ಹೆಮ್ಮೆ ಪಟ್ಟುಕೊಳ್ಳುತ್ತಾರೆ.

ಆಯ್ದ ಚುನಾವಣೆಗಳ ಫಲಿತಾಂಶವನ್ನಷ್ಟೇ ನೋಡಿದರೆ ಪ್ರಜಾತಂತ್ರ ಸುಂದರವಾಗಿ ಕಾಣುತ್ತದೆ. ಕೆಟ್ಟು ನಿಂತಿರುವ ಗಡಿಯಾರವೂ ದಿನಕ್ಕೆ ಎರಡು ಬಾರಿ ಸರಿಯಾದ ಸಮಯವನ್ನೇ ತೋರಿಸುತ್ತದೆಯಲ್ಲಾ, ಹಾಗೆ. ಭಾರತೀಯ ಪ್ರಜಾತಂತ್ರದ ಇಂಚಿಂಚೂ ಕೊಳೆತಿದೆ. ಪ್ರಜಾತಂತ್ರದ ರಾಜಕೀಯ ಮುಖ ಮಾತ್ರವಲ್ಲ, ಅದರ ಆಡಳಿತಾತ್ಮಕ ಮುಖವೂ ವಿರೂಪಗೊಂಡಿದೆ. ಆಡಳಿತ ವ್ಯವಸ್ಥೆಯ ಪ್ರತೀ ಸಾಂಸ್ಥಿಕ ಸ್ತ೦ಭವೂ ನಮ್ಮ ಕಣ್ಣೆದುರಿಗೆ ಕುಸಿಯುತ್ತಿದೆ ಎನ್ನುವುದರಲ್ಲಿ ಲವಲೇಶ ಉತ್ಪ್ರೇಕ್ಷೆಯೂ ಇಲ್ಲ ಅಂತ ಗೊತ್ತಿದ್ದೂ ಏನೂ ಆಗುತ್ತಿಲ್ಲ ಎನ್ನುವ ಹಾಗೆ ಇರುವಂತೆ ಭಾರತೀಯ ಮನಸ್ಸುಗಳಿಗೆ ನಶೆ ಏರಿಸಿದ ರಾಜಕೀಯದ ಮುಂದೆ ಶತಮಾನಗಳ ಕಾಲ ಭಾರತೀಯರ ಚಿಂತನೆಯನ್ನು ದಾಸ್ಯದಲ್ಲಿಟ್ಟ ವಸಾಹತೀಕರಣ ಏನೇನೂ ಅಲ್ಲ.

ಭಾರತದ ಪೊಲೀಸ್‌ ವ್ಯವಸ್ಥೆ ಬಳಸುವ ಅಸ್ತ್ರ ಕಾನೂನಲ್ಲ. ಕ್ರೌರ್ಯ ಎನ್ನುವ ಸತ್ಯವನ್ನು ಅನಿವಾರ್ಯ ಅಂತ ಒಪ್ಪಿಕೊಳ್ಳುವ ಮನಸ್ಥಿತಿ ದೇಶದ ನಾಗರಿಕತೆಯ ದಾರಿದ್ರ್ಯದ ಕುರುಹು. ಯಾವ ಪರಿಸ್ಥಿತಿಯಲ್ಲೂ ಭ್ರಷ್ಟಗೊಳ್ಳಬಾರದ ಭಾರತದ ನ್ಯಾಯಾಂಗ ವ್ಯವಸ್ಥೆಯೇ ಪರಮ ಭ್ರಷ್ಟ ಸ್ಥಿತಿಯನ್ನು ತಲುಪುತ್ತಿದೆ ಅಂತ ಅದರೊಳಗಿನ ಮಂದಿಯೇ ಸಾರಿ ಸಾರಿ ಹೇಳುತ್ತಿರುವಾಗಲೂ ಅದು ಯಾರನ್ನೂ ತಟ್ಟುತ್ತಿಲ್ಲ ಎನ್ನುವುದು ಪರಮ ಆತ್ಮವಂಚನೆಯ ಸ್ಥಿತಿ.

ಭಾರತದ ಉನ್ನತ ಶಿಕ್ಷಣ ವ್ಯವಸ್ಥೆ ದಿನದಿಂದ ದಿನಕ್ಕೆ ಹಳ್ಳ ಹಿಡಿಯುತ್ತಾ ಸಾಗಿದೆ ಎಂದು ವರದಿಗಳ ಮೇಲೆ ವರದಿಗಳು ಬರುತ್ತಿದ್ದರೂ ಎಲ್ಲವೂ ಸರಿ ಇದೆ ಅಂತ ಕಾಲ ದೂಡುವುದು ಒಂದು ಭ್ರಮಾಧೀನ ಅವಸ್ಥೆ. ಹೀಗೆ ಭಾರತದ ಭವಿಷ್ಯವನ್ನು ಭಯಾನಕಗೊಳಿಸಬಲ್ಲ ಸಾಲು ಸಾಲು ಪ್ರಶ್ನೆಗಳಿವೆ. ಇಂತಹ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ರಾಜಕೀಯ ಸಾಗದಿದ್ದರೆ, ಇಂತಹ ವಿಚಾರಗಳಿಗೆ ರಾಜಕೀಯ ಪಕ್ಷಗಳಿಗಿರುವ ಸ್ಪಷ್ಟತೆ ಮತ್ತು ಬದ್ಧತೆಯ ಆಧಾರದಲ್ಲಿ ಚುನಾವಣೆಗಳು ನಡೆಯದೆ ಹೋದರೆ ಎಲ್ಲವೂ ಹೀಗೆ ಮುಂದುವರಿಯುತ್ತವೆ.
ಇತ್ತೀಚೆಗೆ ರಾಜಕೀಯ ಚಿಂತಕ ಯೋಗೇಂದ್ರ ಯಾದವ್‌ ‘ಕಾಂಗ್ರೆಸ್‌ ಪಕ್ಷ ಸಾಯಬೇಕು’ ಎಂದರು.

ಸಾಯಬೇಕಾಗಿರುವುದು ಕಾಂಗ್ರೆಸ್‌ ಮಾತ್ರವಲ್ಲ. ಈ ದೇಶದಲ್ಲಿ ಈಗ ಇರುವ ಪ್ರತೀ ಪಕ್ಷವೂ ಮತದಾರರ ಕೈಗೆ ಹಣ ನೀಡದ ಹೊರತು, ಅವರ ಮನಸ್ಸಿಗೆ ವಿಷ ಉಣ್ಣಿಸದ ಹೊರತು ಚುನಾವಣೆ ಗೆಲ್ಲಲಾಗದು ಎನ್ನುವ ತತ್ವಕ್ಕೆ ಬೇರೆ ಬೇರೆ ಪ್ರಮಾಣದಲ್ಲಿ ಬದ್ಧವಾಗಿವೆ. ಈ ಸೂತ್ರದಿಂದ ಹೊರಬಂದು ರಾಜಕೀಯ ಮಾಡಲು ಬೇಕಾದ ಯೋಚನೆಯಾಗಲೀ, ನಾಯಕತ್ವವಾಗಲೀ ಯಾವ ಪಕ್ಷದಲ್ಲೂ ಇಲ್ಲ. ಈ ಕಾರಣಕ್ಕೆ ದೇಶದಲ್ಲಿ ಈಗ ಇರುವ ಪ್ರತೀ ಪಕ್ಷವೂ ಸಾಯಬೇಕು. ಅಂದರೆ ಈಗ ಇರುವ ರಾಜಕೀಯ ಪಕ್ಷಗಳು ಮತ್ತು ಅವು ನಿಭಾಯಿಸುತ್ತಿರುವ ನಮ್ಮ ಪ್ರಜಾತಂತ್ರದ ಮಾದರಿಯಿಂದಲೇ ದೇಶಕ್ಕೆ ಬಿಡುಗಡೆ ಬೇಕು.

ಒಮ್ಮೆ ಈ ನಿಲುವಿಗೆ ಭಾರತೀಯ ಸಮಾಜ ಬಂದರೆ ಆಗ ಪರ್ಯಾಯಗಳು ಗೋಚರಿಸಬಹುದು. ಈಗ ಇರುವ ಸ್ಥಿತಿಯನ್ನೇ ಅಲ್ಲಿ ಇಲ್ಲಿ ದುರಸ್ತಿ ಮಾಡುತ್ತೇವೆ ಎನ್ನುವ ಸದ್ಯದ ಮನಸ್ಥಿತಿ ಬ್ರಿಟಿಷರೇ ದೇಶ ಆಳಲಿ, ಆದರೆ ಅವರು ಸಾಧ್ಯವಾದಷ್ಟು ಒಳ್ಳೆಯ ರೀತಿಯಲ್ಲಿ ಆಳುವಂತೆ ಒತ್ತಡ ತರೋಣ ಎನ್ನುವ ಸ್ವಾತಂತ್ರ್ಯ ಸಂಗ್ರಾಮದ ಆರಂಭದ ದಿನಗಳನ್ನು ನೆನಪಿಸುತ್ತವೆ.

ಎರಡನೆಯ ಸ್ವಾತಂತ್ರ್ಯ ಭಾರತಕ್ಕೆ ಬೇಕಾಗಿರುವುದು; ದೇಶವನ್ನು ಆಕ್ರಮಿಸಿಕೊಂಡಿರುವ ಅಭಿವೃದ್ಧಿಯ ವ್ಯಸನದಿಂದ. ತಮ್ಮನ್ನೇ ತಾವು ಮಾರಿಕೊಳ್ಳುತ್ತಿರುವ ಶಾಸಕರಿಂದ ಹಿಡಿದು ಪ್ರಧಾನ ಮಂತ್ರಿವರೆಗೆ ಜಪಿಸುತ್ತಿರುವ ಈ ಅಭಿವೃದ್ಧಿ ಮಂತ್ರ ತುಂಬಾ ಅಪಾಯಕಾರಿಯಾದದ್ದು. ಏನು ಅಭಿವೃದ್ಧಿ, ಎಷ್ಟು ಅಭಿವೃದ್ಧಿ, ಹೇಗೆ ಅಭಿವೃದ್ಧಿ ಎನ್ನುವ ಯಾವ ವಿಚಾರದ ಬಗ್ಗೆಯೂ ಒಂದಿನಿತೂ ಸ್ಪಷ್ಟತೆಯೇ ಇಲ್ಲದ ಅಭಿವೃದ್ಧಿ ಎನ್ನುವ ಮರೀಚಿಕೆಗೆ ಮಾನಸಿಕವಾಗಿ ಇಡೀ ಭಾರತ ದಾಸ್ಯವನ್ನು ಒಪ್ಪಿಕೊಂಡಿದೆ.

ಅಭಿವೃದ್ಧಿ ಎಂದರೆ ಮತ್ತಷ್ಟೂ ಕಟ್ಟಡಗಳು, ಇನ್ನಷ್ಟೂ ಅಗಲದ ರಸ್ತೆಗಳು, ಅಭಿವೃದ್ಧಿ ಎಂದರೆ ನದಿ ತಿರುಗಿಸುವುದು, ಪರ್ವತಗಳನ್ನು ನೆಲಸಮ ಮಾಡುವುದು, ಅಭಿವೃದ್ಧಿ ಎಂದರೆ ಎಲ್ಲವನ್ನೂ ‘ಸ್ಮಾರ್ಟ್’ ಮಾಡಿ ಬಿಡುವುದು ಎಂಬಿತ್ಯಾದಿ ಹುಚ್ಚುಗಳು ಈ ದೇಶದ ದೇಹವನ್ನೂ, ಆತ್ಮವನ್ನೂ ಏಕಕಾಲಕ್ಕೆ ನಾಶಗೊಳಿಸುತ್ತಿವೆ. ನಿಜ, ಇದು ಭಾರತಕ್ಕೆ ಮಾತ್ರ ಹಿಡಿದ ಹುಚ್ಚಲ್ಲ. ಇಡೀ ಪ್ರಪಂಚವೇ ಈ ಅಭಿವೃದ್ಧಿ ಎನ್ನುವ ಮಾಯಾಂಗನೆಯ ಅಧೀನದಲ್ಲಿದೆ.

ಆದರೆ, ಈ ವಿಚಾರದಲ್ಲಿ ಇತರ ದೇಶಗಳು ತೋರಿಸಿದ ಜಾಗರೂಕತೆ ಮತ್ತು ಪ್ರಬುದ್ಧತೆ ತೋರಿಸಲು ಭಾರತಕ್ಕೆ ಸಾಧ್ಯವಾಗುತ್ತಿಲ್ಲ. ಅಭಿವೃದ್ಧಿ ಎಂದರೆ ಏನು ಎಂದು ಕಲ್ಪಿಸಿಕೊಳ್ಳುವಲ್ಲಿ, ಅಗತ್ಯ ಅಭಿವೃದ್ಧಿ ಸಾಧಿಸಲು ಬಳಸುವ ಮಾರ್ಗಗಳ ವಿಚಾರದಲ್ಲಿ ಮತ್ತು ಸಾಧಿಸಿದ ಅಭಿವೃದ್ಧಿಯನ್ನು ನಿಭಾಯಿಸುವಲ್ಲಿ ಭಾರತದ ದಾಖಲೆ ಶೋಚನೀಯ. ಹಾಗಿದ್ದರೂ ಅಭಿವೃದ್ಧಿಯ ಹೆಸರಿನಲ್ಲಿ ಭಾರತದಲ್ಲಿ ಏನು ಮಾಡಿದರೂ ಅದು ಸಮರ್ಥನೀಯ. ಒಂದು ಬೃಹತ್ ಅನುಭೋಗದ ಸಂಸ್ಕೃತಿ ಅಭಿವೃದ್ಧಿಯ ಬೆನ್ನೇರಿ ಬಂದು ಭಾರತವನ್ನು ಅತಿಕ್ರಮಿಸಿಕೊಂಡಿವೆ. ಅದರ ಪರಿಣಾಮಗಳನ್ನು ನಿಭಾಯಿಸಲಾರದೆ ದೇಶ ತೊಳಲಾಡುತ್ತಿದೆ.

ಭಾರತದ ಯಾವ ಮೂಲೆಯಲ್ಲಾದರೂ ಪ್ರಯಾಣಿಸಿದಾಗ ರಸ್ತೆಯ ಇಕ್ಕೆಲಗಳಲ್ಲಿ ಪ್ಲಾಸ್ಟಿಕ್ ಅವಶೇಷಗಳ ರಾಶಿ ಅಸಹ್ಯಕರ ರೀತಿಯಲ್ಲಿ ಕಣ್ಣಿಗೆ ರಾಚುತ್ತದಲ್ಲಾ, ಅದು ಈ ಅನುಭೋಗದ ಸಂಸ್ಕೃತಿ ಎಂತಹದ್ದು ಅಂತ ಬಹುವಿಧಗಳಲ್ಲಿ ಜಗತ್ತಿಗೆ ಸಾರುತ್ತಿದೆ. ಈ ಅನುಭೋಗದ ದಾಸ್ಯದಿಂದ ಭಾರತಕ್ಕೆ ಸ್ವಾತಂತ್ರ್ಯ ಬೇಕಿದೆ. ಅಭಿವೃದ್ಧಿಯ ಕುರಿತು ಪರ್ಯಾಯ ಮಾರ್ಗಗಳನ್ನು ಅರಸುವುದು ಈ ಸ್ವಾತಂತ್ರ್ಯಕ್ಕಾಗಿ ನಡೆಸುವ ಹೋರಾಟವಾಗುತ್ತದೆ.

ಇನ್ನು ದೇಶವನ್ನು ಭೀಕರವಾಗಿ ಆವರಿಸುತ್ತಿರುವ ಸಾಮಾಜಿಕ ಅಸ್ವಸ್ಥತೆಯ ಪಿಡುಗಿನಿಂದ ಬಿಡುಗಡೆ ಅಗತ್ಯವಿದೆ. ಇದು ಭಾರತ ಈ ಕಾಲಕ್ಕೆ ಅರಸಬೇಕಾದ ಮೂರನೆಯ ಸ್ವಾತಂತ್ರ್ಯ. ಸಮಾಜದಲ್ಲಿ ಪರಸ್ಪರ ನಂಬಿಕೆ ಕಳೆದುಹೋದ ಸ್ಥಿತಿಯಲ್ಲಿ ಸ್ವಾತಂತ್ರ್ಯಕ್ಕೂ ಅರ್ಥವಿರುವುದಿಲ್ಲ, ಆರ್ಥಿಕ ಪುರೋಗತಿಗೂ ಅರ್ಥವಿರುವುದಿಲ್ಲ.

1997ರಲ್ಲಿ ಭಾರತ ಸ್ವಾತಂತ್ರ್ಯ ಸುವರ್ಣ ಮಹೋತ್ಸವ ಆಚರಿಸುವ ಸಂದರ್ಭದಲ್ಲಿ ಡೆಕ್ಕನ್‌ ಹೆರಾಲ್ಡ್‌ ಪತ್ರಿಕೆ ಶತಾಯುಷಿ ಕನ್ನಡ ಸಾಹಿತಿ ಎ.ಎನ್. ಮೂರ್ತಿರಾಯರ ಜತೆ ಸಂದರ್ಶನವೊಂದನ್ನು ನಡೆಸಿತು.

ಅವರಿಗೆ ಕೇಳಿದ ಒಂದು ಪ್ರಶ್ನೆ: ‘ಸ್ವತಂತ್ರ ಭಾರತದಲ್ಲಿ ನೀವು ಕಂಡ ಅತ್ಯಂತ ಮಹತ್ವದ ಬದಲಾವಣೆ ಅಂತ ಒಂದಿದ್ದರೆ ಅದು ಯಾವುದು?’.

ಅವರ ಉತ್ತರ: ‘ಭಾರತದಲ್ಲಿ ಜಾತಿ ವ್ಯವಸ್ಥೆ ತನ್ನ ಪ್ರಾಬಲ್ಯ ಕಳೆದುಕೊಳ್ಳುತ್ತಿರುವುದೇ ನಾನು ಕಂಡ ಅತ್ಯಂತ ಮಹತ್ವದ ಬದಲಾವಣೆ’.

ಹೌದು, ಸಮಾಜ ಶಾಸ್ತ್ರೀಯ ದೃಷ್ಟಿಯಿಂದ ನೋಡಿದರೆ ಜಾತಿ ವ್ಯವಸ್ಥೆ ಶಿಥಿಲವಾಗಿದೆ ಅಂತ ಅನ್ನಿಸುತ್ತದೆ. ಜಾತಿ ಈಗ ತಾರತಮ್ಯದ ಸಾಧನವಾಗಿ ಪ್ರಾಬಲ್ಯ ಕಳೆದುಕೊಳ್ಳುತ್ತಿದೆ. ಆದರೆ ಅದು ಅಸ್ಮಿತೆಯ ಅಸ್ತ್ರವಾಗಿ ಪ್ರಾಬಲ್ಯ ಹೊಂದುತ್ತಿದೆ ಅಂತ ಸಮಾಜ ಶಾಸ್ತ್ರಜ್ಞರು ಹೇಳುತ್ತಾರೆ. ಅದೇನೇ ಇರಲಿ. ಜಾತಿ ವ್ಯವಸ್ಥೆ ಉಚ್ರಾಯ ಸ್ಥಿತಿಯಲ್ಲಿದ್ದ ಕಾಲದಲ್ಲೂ ಇಲ್ಲದಷ್ಟು ಮಟ್ಟಿಗೆ ಮನುಷ್ಯ ಮನುಷ್ಯರ ನಡುವಣ ನಂಬಿಕೆ, ವಿಶ್ವಾಸ ಭಾರತದಲ್ಲಿ ಈಗ ಕುಸಿದು ಹೋಗಿದೆ. ಎಗ್ಗಿಲ್ಲದೆ ನಡೆಯುತ್ತಿರುವ ಗುಂಪು ಹತ್ಯೆಗಳು, ಇಂತಹ ಹತ್ಯೆಯಲ್ಲಿ ಪಾಲ್ಗೊಂಡವರಿಗೆ ಸಿಗುವ ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ಮನ್ನಣೆಯನ್ನು ನೋಡಿದರೆ ಇದು ಕೇವಲ ಒಂದು ಪಿಡುಗಲ್ಲ. ಇದು ಭಾರತೀಯ ಸಮಾಜಕ್ಕೆ ಅಂಟಿಕೊಂಡಿರುವ ಹೊಸ ಮನೋರೋಗ ಅನ್ನಿಸುತ್ತದೆ.

ಒಂದು ಸಮಾಜಕ್ಕೆ ಕೆಲವೊಂದು ಮಾತುಗಳನ್ನು ಸಾರ್ವಜನಿಕವಾಗಿ ಆಡುವುದಕ್ಕೆ, ಕೆಲವೊಂದು ಕೃತ್ಯಗಳನ್ನು ಸಾರ್ವಜನಿಕವಾಗಿ ಮಾಡುವುದಕ್ಕೆ, ಕೆಲವೊಂದು ವಿಚಾರಗಳನ್ನು ಸಾರ್ವಜನಿಕವಾಗಿ ಸಮರ್ಥಿಸುವುದಕ್ಕೆ ಒಂದಿಷ್ಟು ಅಂಜಿಕೆ, ಅಳುಕು, ನಾಚಿಕೆ ಇತ್ಯಾದಿ ಇರಬೇಕು. ಇಂಥ ಅಂಜಿಕೆ, ಅಳುಕು, ನಾಚಿಕೆ ಕೂಡ ಇಲ್ಲದಷ್ಟು ಸ್ವಾತಂತ್ರ್ಯವನ್ನು ಹೊಂದುವುದು ಒಂದು ಅತಿರೇಕದ ಅನಾಗರಿಕತೆಯ ಸ್ಥಿತಿ. ಈ ಅನಾಗರಿಕತೆ ಇನ್ನಷ್ಟೂ ವ್ಯಾಪಕವಾಗುವುದಕ್ಕೆ ಮೊದಲೇ ಇದರಿಂದ ಸ್ವಾತಂತ್ರ್ಯ ಪಡೆಯಬೇಕಿದೆ.

Post Comments (+)