ಅಂಗನವಾಡಿಗಳ ಪುನಶ್ಚೇತನಕ್ಕೆ ರೋಟರಿ ಕಲಾಪ್ರದರ್ಶನ

7

ಅಂಗನವಾಡಿಗಳ ಪುನಶ್ಚೇತನಕ್ಕೆ ರೋಟರಿ ಕಲಾಪ್ರದರ್ಶನ

Published:
Updated:
Prajavani

1934ರಿಂದ ಇದುವರೆಗೆ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ಸಂಸ್ಥೆ ರೋಟರಿ ಕ್ಲಬ್ ಬೆಂಗಳೂರು. ಸೇವಾಮನೋಭಾವದಿಂದಲೇ ಹುಟ್ಟಿದ ಈ ಕ್ಲಬ್, ಶಿಕ್ಷಣ, ಆರೋಗ್ಯ ಸೇರಿದಂತೆ ಬಹುತೇಕ ಕ್ಷೇತ್ರಗಳಿಗೆ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದೆ.

ಶಿಕ್ಷಣಕ್ಕಾಗಿ ನಿಧಿ ಸಂಗ್ರಹಿಸುವ ಸಲುವಾಗಿ ಹತ್ತು ವರ್ಷಗಳ ಹಿಂದೆ ಕ್ಲಬ್ ಆರಂಭಿಸಿದ್ದ ಯೋಜನೆ ‘ಕಲಾ ಫಾರ್ ವಿದ್ಯಾ’. ಈ ಯೋಜನೆಯ ಮೂಲಕ ದೇಶದ ಖ್ಯಾತ ಕಲಾವಿದರು ಹಾಗೂ ಹೊಸ ಕಲಾವಿರದರನ್ನು ಗುರುತಿಸಿ ಅವರ ಕಲಾಕೃತಿಗಳನ್ನು ಪ್ರದರ್ಶನಕ್ಕಿಡಲಾಗುತ್ತದೆ. ಕಲಾಕೃತಿಗಳ ಮಾರಾಟದಿಂದ ಬರುವ ಶೇಕಡ 25 ರಿಂದ  ಶೇಕಡ 50 ರಷ್ಟು ಹಣವನ್ನು ಕಲಾವಿದರು ರೋಟರಿ ಕ್ಲಬ್‌ಗೆ ನೀಡುತ್ತಾರೆ. ಆರ್ಟ್‌ಲೋಕ ಸಂಸ್ಥೆಯ ಸಹಯೋಗವು ಇದೆ.

ಇಷ್ಟು ದಿನ ಶಾಲೆಗಳ ಪುನಶ್ಚೇತನಕ್ಕಾಗಿ ‘ಕಲಾ ಫಾರ್ ವಿದ್ಯಾ’ ಪ್ರದರ್ಶನದ ದೇಣಿಗೆಯನ್ನು ರೋಟರಿ ಕ್ಲಬ್ ಬಳಸುತ್ತಿತ್ತು. ಬೆಂಗಳೂರು ಸೇರಿದಂತೆ ಸುತ್ತಮುತ್ತಲ ತಾಲ್ಲೂಕುಗಳ ಸರ್ಕಾರಿ ಶಾಲೆಗಳನ್ನು ಗುರುತಿಸಿ, ಅವುಗಳಲ್ಲಿದ್ದ ಮೂಲಸೌಕರ್ಯಗಳ ಕೊರತೆ ನೀಗಿಸಿ ಶಿಕ್ಷಣಕ್ಕೆ ಪೂರಕ ವಾತಾವರಣ  ನಿರ್ಮಿಸಿಕೊಟ್ಟಿದೆ ಕ್ಲಬ್. ಆದರೆ, ಈ ಬಾರಿ ಪ್ರದರ್ಶನದಿಂದ ಸಂಗ್ರಹವಾಗುವ ದೇಣಿಗೆಯನ್ನು ಅಂಗನವಾಡಿಗಳ ಪುನಶ್ಚೇತನಕ್ಕೆ ಬಳಸಿಕೊಳ್ಳಲು ಕ್ಲಬ್ ಮುಂದಾಗಿದೆ.

ಗುರುದಾಸ್ ಶೆಣೈ, ಎಸ್.ಜಿ.ವಾಸುದೇವ್, ಎಂ.ಜಿ.ದೊಡ್ಡಮನಿ ಸೇರಿದಂತೆ ದೇಶದ ಹಲವು ಭಾಗಗಳ 30 ಕಲಾವಿದರು ಜ. 12 ಹಾಗೂ 13ರಂದು ನಡೆಯಲಿರುವ ಈ ಬಾರಿಯ ಪ್ರದರ್ಶನದಲ್ಲಿ ಪಾಲ್ಗೊಳ್ಳಲಿದ್ದಾರೆ. ಆ ಎಲ್ಲ ಕಲಾವಿದರ ನೂರಕ್ಕೂ ಅಧಿಕ ವಿಭಿನ್ನ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ.

‘ಶಾಲೆಗಳ ಪುನಶ್ಚೇತನಕ್ಕಷ್ಟೇ ಆದ್ಯತೆ ನೀಡಿದ್ದೆವು. ಅಂಗನವಾಡಿಗಳ ಬಗ್ಗೆ ಹೆಚ್ಚಾಗಿ ಆಸಕ್ತಿ ವಹಿಸಿರಲಿಲ್ಲ. ರೋಟರಿ ಕ್ಲಬ್ ಗಮನಿಸಿದಂತೆ, ನಗರದ ಹಾಗೂ ನಗರದ ಸುತ್ತಮುತ್ತಲ ಸಾಕಷ್ಟು ಅಂಗನವಾಡಿಗಳ ಸ್ಥಿತಿಗತಿಯು ಹದಗೆಟ್ಟಿದೆ. ಶಿಕ್ಷಣದ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಬೆಳೆಸುವಲ್ಲಿ ಅಂಗನವಾಡಿಗಳ ಪಾತ್ರ ಪ್ರಮುಖವಾದದ್ದು. ಹೀಗಾಗಿ, ಕಲಿಕೆಗೆ ಪೂರಕ ವಾತಾವರಣವನ್ನು ಅಂಗನವಾಡಿಗಳಿಂದಲೇ ನಿರ್ಮಾಣ ಮಾಡಲು ಮುಂದಾಗಿದ್ದೇವೆ’ ಎನ್ನುತ್ತಾರೆ ರೋಟರಿ ಕ್ಲಬ್‌ (ಬೆಂಗಳೂರು) ಅಧ್ಯಕ್ಷ ವಿವೇಕ್ ಪ್ರಭು.

‘ಶಿಕ್ಷಣಕ್ಕೆ ರೋಟರಿ ಕ್ಲಬ್ ಆದ್ಯತೆ ನೀಡಿದೆ. ಹೀಗಾಗಿ, ಈ ಹಿಂದೆ ಆಯೋಜಿಸಿದ್ದ ಪ್ರದರ್ಶನಗಳಿಂದ ಸಂಗ್ರಹವಾದ ದೇಣಿಗೆಯನ್ನು ಸರ್ಕಾರಿ ಶಾಲೆಗಳು ಹಾಗೂ ಸರ್ಕಾರದ ಅಧೀನದಲ್ಲಿರುವ ಅಂಗನವಾಡಿಗಳ ಪುನಶ್ಚೇತನಕ್ಕೆ ಬಳಸಿದ್ದೇವೆ. ನಿಧಿ ಸಂಗ್ರಹಕ್ಕೆ ಸಮಾಜದಲ್ಲಿ ಈಗಾಗಲೇ ಖ್ಯಾತಿ ಗಳಿಸಿದ ಕಲಾವಿದರು ಹಾಗೂ ಉದಯೋನ್ಮುಖ ಕಲಾವಿದರನ್ನು ಗುರುತಿಸಿ ಈ ಪ್ರದರ್ಶನ ಆಯೋಜಿಸುತ್ತಿದ್ದೇವೆ’ ಎಂದರು.

‘ಕಲಾ ಫಾರ್ ವಿದ್ಯಾ’ ಪ್ರದರ್ಶನದಿಂದ ದೇಣಿಗೆ ಸಂಗ್ರಹದ ಜೊತೆಗೆ ಕಲಾವಿದರಿಗೂ ವೇದಿಕೆ ಕಲ್ಪಿಸಿಕೊಟ್ಟಂತಾಗುತ್ತದೆ. ಕಲೆಯನ್ನೇ ಬದುಕಾಗಿಸಿಕೊಂಡ ಕಲಾವಿದರಿಗೆ ಇದರಿಂದ ಹಣ ಸಿಕ್ಕಾಂತಾಗುತ್ತದೆ’ ಎಂದು ಹೇಳಿದರು.

‘ಇಷ್ಟು ದಿನ ರೋಟರಿ ಕ್ಲಬ್ ಈ ಪ್ರದರ್ಶನ ಆಯೋಜಿಸುತ್ತಿತ್ತು. ಸಮಾಜಕ್ಕೆ ಕೊಡುಗೆ ನೀಡುವುದರ ಸಲುವಾಗಿ ಕ್ಲಬ್ ಜೊತೆಗೂಡಿ ಪ್ರದರ್ಶನ ಆಯೋಜಿಸುವ ಹೊಣೆ ಹೊತ್ತಿದ್ದೇವೆ. ಹೀಗಾಗಿ, ಖ್ಯಾತ ಕಲಾವಿದರನ್ನು ಗುರುತಿಸಿ, ಅವರ ಕಲಾಕೃತಿಗಳ ಪ್ರದರ್ಶನದ ವ್ಯವಸ್ಥೆ ಮಾಡಿದ್ದೇವೆ’ ಎನ್ನುತ್ತಾರೆ ಆರ್ಟ್ ಲೋಕ ಸಂಸ್ಥೆಯ ಸಹ ಸಂಸ್ಥಾಪಕಿ ಶೃತಿ.

‘ಯೋಜನೆ ಆರಂಭವಾದಗಿನಿಂದಲೂ ಈ ಪ್ರದರ್ಶನದಲ್ಲಿ ನಾನು ಭಾಗವಹಿಸುತ್ತಿದ್ದೇನೆ. ಇಲ್ಲಿ ಭಾಗಿಯಾಗುವುದರಿಂದ ಸಾರ್ಥಕತೆಯ ಭಾವ ನನ್ನಲ್ಲಿ ಮೂಡುತ್ತಿದೆ. ನನ್ನ ಕಲಾಕೃತಿಗಳು ಬೇರೆಡೆ ಮಾರಾಟ ಆಗುವದಕ್ಕಿಂತಲೂ ಈ ಪ್ರದರ್ಶನದಲ್ಲಿ ಮಾರಾಟವಾದಾಗ ಹೆಚ್ಚು ಖುಷಿಯಾಗುತ್ತದೆ. ನನ್ನ ಕಲೆಯಿಂದ ಮಕ್ಕಳ ಶಿಕ್ಷಣಕ್ಕೆ ಸಹಾಯವಾಗುತ್ತದೆ ಎಂಬುದೇ ಹೆಮ್ಮೆಯ ವಿಚಾರ’ ಎನ್ನುತ್ತಾರೆ ಕಲಾವಿದ ಗುರುದಾಸ್ ಶೆಣೈ.

**********

ಪ್ರದರ್ಶನ –1

ಸ್ಥಳ: ತಾಜ್ ವೆಸ್ಟ್ ಎಂಡ್, ರೇಸ್‌ ಕೋರ್ಸ್ ರಸ್ತೆ

ಯಾವಾಗ: ಜ.12 ಮತ್ತು 13

ಸಮಯ: ಬೆಳಿಗ್ಗೆ 11 ರಿಂದ ರಾತ್ರಿ 8

ಪ್ರದರ್ಶನ –2

ಸ್ಥಳ: ಆರ್‌ಎಂಸಿ ಇಕೊ ವರ್ಲ್ಡ್ ಸರ್ಜಾಪುರ

ಯಾವಾಗ: ಜ.23ರಿಂದ ಜ. 25ರ ವರೆಗೆ

ಸಮಯ: ಬೆಳಿಗ್ಗೆ 11 ರಿಂದ ರಾತ್ರಿ 8

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !