ಕಾಂಕ್ರೀಟ್‌ ಕಾಡಿನ ಚಿತ್ರಗಳು!

7

ಕಾಂಕ್ರೀಟ್‌ ಕಾಡಿನ ಚಿತ್ರಗಳು!

Published:
Updated:
ನಾಗರಾಜ್‌ ಅವರ ಕಲಾಕೃತಿಗಳು

ಸುತ್ತಲು ಹಸಿರು, ದೊಡ್ಡ ದೊಡ್ಡ ಮರಗಳು, ವಿಶಾಲವಾಗಿ ಹರಡಿಕೊಂಡಿರುವ ಗದ್ದೆಗಳು, ತಣ್ಣನೆ ಬೀಸುವ ಗಾಳಿ, ಇವೆಲ್ಲವನ್ನು ಬಿಟ್ಟು ಉದ್ಯೋಗ ಅರಸಿ ನಗರಕ್ಕೆ ವಲಸೆ ಬಂದವನ ಕಣ್ಣಲ್ಲಿ ಒಂದಕ್ಕೊಂದು ಹೆಣೆದುಕೊಂಡಿರುವಂತೆಯೇ ಮುಗಿಲೆತ್ತರಕ್ಕೆ ಚಾಚಿಕೊಂಡಿರುವ ಕಟ್ಟಡಗಳು, ಹಗಲು–ರಾತ್ರಿಗೆ ವ್ಯತ್ಯಾಸವಿಲ್ಲದಂತೆ ಕೆಲಸದಲ್ಲಿ ಮಗ್ನರಾಗಿರುವ ಜನರು, ಗಿಜಿಗುಟ್ಟುವ ರಸ್ತೆಗಳು ಇವೆಲ್ಲವನ್ನೂ ದಿಟ್ಟಿಸಿ ನೋಡುತ್ತಾ ಬೆರಗಾದ ಚಿತ್ರಕಾರನ ಕೈಯಲ್ಲಿ ನಗರದ ಕಟ್ಟಡಗಳು ಬಣ್ಣಗಳಲ್ಲಿ ಮೂಡಿಬಂದಿವೆ. 

ನಗರದ ದೊಡ್ಡ ದೊಡ್ಡ ಕಟ್ಟಡಗಳನ್ನು ಚಿತ್ರಿಸುವುದರ ಮೂಲಕ ಹಳ್ಳಿ ಬಿಟ್ಟು ಪಟ್ಟಣ ಸೇರುವ ಜನರಿಗಾಗುವ ತೊಳಲಾಟ, ಅನುಭವ, ಒದ್ದಾಟಗಳನ್ನು ವಿವರಿಸಲು ಪ್ರಯತ್ನಿಸಿರುವ ನಾಗರಾಜ್‌, ವಿಜಯಪುರ ಜಿಲ್ಲೆಯ ವೀರೇಶ್‌ನಗರದವರು. ಬಾಲ್ಯದಿಂದಲೇ ಚಿತ್ರಕಲೆಯ ಬಗ್ಗೆ ಆಸಕ್ತಿ ಹೊಂದಿದ್ದ ಇವರಿಗೆ ಶಾಲಾ ಶಿಕ್ಷಕರು ಮತ್ತು ಸ್ನೇಹಿತರು ಪ್ರೋತ್ಸಾಹಿಸಿದರು. ಹೀಗೆ ಆರಂಭವಾದ ಚಿತ್ರಕಲೆಯೊಂದಿಗಿನ ಪಯಣಕ್ಕೀಗ 15 ವರ್ಷ ಎಂದು ನೆನಪಿಸಿಕೊಳ್ಳುತ್ತಾರೆ. ಅವರು ಸದ್ಯಕ್ಕೀಗ ನಗರದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಇವರಿಗೆ ಚಿತ್ರಕಲೆ ನೆಚ್ಚಿನ ಸಂಗಾತಿ.

‘ಜೀವನದ ಪಯಣದಲ್ಲಿ ನೋಡಿದ್ದು, ಅನುಭವಕ್ಕೆ ಬಂದದ್ದನ್ನು ಬಣ್ಣಗಳಲ್ಲಿ ಚಿತ್ರಿಸುವುದು ಎಂದರೆ ನನಗೆ ಇಷ್ಟ. ಹಳ್ಳಿಯಿಂದ ಬಂದವನು ನಾನು. ನಗರ ಜೀವನ ನನಗೆ ಹೊಸತು. ಇಲ್ಲಿಗೆ ಬಂದ ನಂತರ ನನ್ನಲ್ಲಾದ ಬದಲಾವಣೆ, ಈ ನಗರದಲ್ಲಿ ನನಗೆ ಕಂಡದ್ದನ್ನು ಬಣ್ಣಗಳಲ್ಲಿ ಅಭಿವ್ಯಕ್ತಿ ಪಡಿಸಿದ್ದೇನೆ. ಕ್ಯಾನ್ವಾಸ್‌ ಮೇಲೆ ಅಕ್ರಲಿಕ್ ಬಣ್ಣಗಳನ್ನು ಬಳಸಿ ಚಿತ್ರ ರಚಿಸುತ್ತೇನೆ’ ಎನ್ನುತ್ತಾರೆ ನಾಗರಾಜ್‌.

‘ಅಪ್ಪ ಅಮ್ಮನಿಗೆ ಚಿತ್ರಕಲೆಯ ಪರಿಚಯವಿಲ್ಲ. ಮೊದಮೊದಲು ನಾನು ಚಿತ್ರಬಿಡಿಸುತ್ತಿದ್ದಾಗ ಕೆಲಸಕ್ಕೆ ಬರುವುದೇನಾದರೂ ಮಾಡು ಎನ್ನುತ್ತಿದ್ದರು. ನನ್ನ ಚಿತ್ರಕಲೆಗಳನ್ನು ಬೇರೆಯವರು ಅಭಿನಂದಿಸಿದಾಗ, ಖರೀದಿಸಿದಾಗ ಇವರು ಖುಷಿ ಪಟ್ಟರು. ಆಗಲೇ ಕಲೆಯ ಬಗ್ಗೆ ಅವರಿಗಿದ್ದ ಅನಿಸಿಕೆ ಬದಲಾಗಿದ್ದು. ಈಗ ಅವರು ನನ್ನ ಬೆನ್ನುತಟ್ಟಿ ನನ್ನೊಟ್ಟಿಗಿದ್ದಾರೆ. ಚಿತ್ರಕಲೆಯನ್ನು ಅಭ್ಯಸಿಸುತ್ತೇನೆ ಎಂದಾಗ ಸಮ್ಮತಿ ಸೂಚಿಸಿದರು.
ಉದ್ಯೋಗ ಮತ್ತು ಚಿತ್ರಕಲೆ ಎರಡನ್ನೂ ಸರಿದೂಗಿಸಿಕೊಂಡು ಹೋಗುತ್ತಿರುವುದರಿಂದ ಅವರಿಗೆ ನನ್ನ ಬಗ್ಗೆ ಯಾವುದೇ ಬೇಸರವಿಲ್ಲ’ ಎಂದರು.

ಇಲ್ಲಿಯವರೆಗೂ ತಂಡಗಳಲ್ಲಿ ನನ್ನ ಕಲಾಕೃತಿ ಪ್ರದರ್ಶನವನ್ನು ಆಯೋಜಿಸಿದ್ದೆ. ಇದೇ ಮೊದಲ ಬಾರಿಗೆ  ಬೆಂಗಳೂರಿನಲ್ಲಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ನಡೆಸುತ್ತಿದ್ದೇನೆ. ಕಳೆದ ವರ್ಷವಷ್ಟೆ ಹೈದರಾಬಾದ್‌ನಲ್ಲಿಯೂ ಕಲಾಕೃತಿಗಳ ಪ್ರದರ್ಶನವನ್ನು ನಡೆಯಿತು ಎಂದು ಸಂತಸ ವ್ಯಕ್ತಪಡಿಸುತ್ತಾರೆ ಅವರು.

‘ಚಿತ್ರಕಲೆಯ ಬಗ್ಗೆ ಗ್ರಾಮೀಣ ಭಾಗದ ಜನರಿಗೆ ಪರಿಚಯವಿಲ್ಲ. ಚಿತ್ರಕಲೆ ಮಾತ್ರವಲ್ಲದೇ ಇತರ ಕಲೆಗಳ ಬಗ್ಗೆ ಅವರಲ್ಲಿ ಅರಿವು ಮೂಡಿಸಬೇಕು’ ಎನ್ನುವುದು ಅವರ ಆಶಯ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !