ಶನಿವಾರ, ಡಿಸೆಂಬರ್ 14, 2019
21 °C

ಬಣ್ಣಗಳಿಂದ ಸ್ನೇಹಿತರ ಸಮಾಗಮ

ಕಾವ್ಯ ಸಮತಳ Updated:

ಅಕ್ಷರ ಗಾತ್ರ : | |

ಟಾರ್‌ ನೋಡಿರದ ರಸ್ತೆ, ರಿಕ್ಷಾವಾಲಾನ ಬಂಡಿ, ಗಾಳಿಪಟ, ಹೀಗೆ ಬಾಲ್ಯದ ಅವಿಸ್ಮರಣೀಯ ನೆನಪುಗಳು ಬಣ್ಣದಿಂದ ಶೃಂಗಾರಗೊಂಡಿವೆ. ಅಜಂತಾ ಎಲ್ಲೋರಾದ ಶಿಲ್ಪಕಲೆಗಳು ಕಲಾವಿದರ ಕುಂಚದಲ್ಲಿ ಸಿಂಗಾರಗೊಂಡಿವೆ. ಯೋಚನೆ ಮೂಡಿಸುವ ಅಮೂರ್ತ ಪೇಂಟಿಂಗ್‌ಗಳು ಮನ ತಣಿಸಲಿವೆ. 

ಕರ್ನಾಟಕ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಹಾಗೂ ಪಂಜಾಬ್‌ನ ಕಲಾವಿದರಾದ ಬಲದೇವ್‌ ಗಂಭೀರ್‌, ಲಲಿತ್‌ ಗೋಪಾಲ್‌ ಪರಶಾರ್‌, ಬಸವರಾಜು ಕೆ.ಎಸ್‌., ಎಂ.ಎನ್‌.ನರಸಿಂಹಮೂರ್ತಿ, ಅನೂಪ್‌ ಕುಮಾರ್‌ ಮಿತ್ರ, ಗಗನ್‌ ಗಂಭೀರ್‌ ಅವರು ಆಯೋಜಿಸಿರುವ ‘ಸಿಕ್ಸ್‌ ಎಸೆನ್ಸ್‌’ ಚಿತ್ರಕಲಾ ಪ್ರದರ್ಶನದಲ್ಲಿ ಕಲಾವಿದರ ಭಾವರೂಪಗಳು ನಗರದಲ್ಲಿ ಅಭಿವ್ಯಕ್ತಿಗೊಳ್ಳುತ್ತಿವೆ!  

ಕನ್ನಡಿಗನೊಬ್ಬ ಭಾರತೀಯ ಸಾಂಸ್ಕೃತಿಕ ಪರಂಪರೆಯನ್ನು ವಿವರಿಸುವಂತಹ ಪೌರಾಣಿಕ ಕಲಾಕೃತಿಗಳು ಮುಖ್ಯವಾಗಿ ಅಜಂತಾ, ಎಲ್ಲೋರಾದ ಪದ್ಮಪಾಣಿ ಮತ್ತು ವಜ್ರಪಾಣಿ ಕಲಾಕೃತಿಗಳಾಗಿ ಕ್ಯಾನ್ವಾಸ್ ಮೇಲೆ ಮೂಡಿ ಬಂದಿರುವ ಕಲೆಗಳು, ಸಾಂಸ್ಕೃತಿಕ ಪರಂಪರೆಯ ನಾಡಾದ ಪಶ್ಚಿಮ ಬಂಗಾಳದ ಕಲಾವಿದನ ಕುಂಚದಲ್ಲಿ ಮೂಡಿಬಂದ ರಿಕ್ಷಾವಾಲಾಗಳ ಬದುಕು ಬವಣೆ, ಮಗನೊಟ್ಟಿಗೆ ಅಪ್ಪನ ಕಲಾಕೃತಿಗಳು ಇಲ್ಲಿ ಪ್ರದರ್ಶನಗೊಳ್ಳಲಿವೆ. ಗಗನ್ ಗಂಭೀರ್ ಅವರ ತಂದೆ ಬಲದೇವ್ ಗಂಭೀರ್ ಕೂಡ ಚಿತ್ರಕಲಾವಿದರು. ಹಾಗೆಯೇ ಕಲಾ ಶಿಕ್ಷಕ ಲಲಿತ್‌ ಗೋಪಾಲ್‌ ಪರಾಶರ್‌ ಅವರ ಕಲಾಕೃತಿಗಳು ಪ್ರದರ್ಶನಗೊಳ್ಳುತ್ತಿವೆ.

ರೈತ ಕುಟುಂಬದಿಂದ ಬಂದ ಕಲಾವಿದ ಎಂ.ಎನ್. ನರಸಿಂಹಮೂರ್ತಿ ಮೂಲತಃ ತುಮಕೂರಿನವರು. ದೇವನಹಳ್ಳಿಯ ಪ್ರೌಢಶಾಲೆಯಲ್ಲಿ ಕಲಾ ಶಿಕ್ಷಕರಾಗಿರುವ ಇವರು ಬಾಲ್ಯದಲ್ಲಿಯೇ ಚಿತ್ರಕಲೆ ಬಗ್ಗೆ ಆಸಕ್ತಿ ಹೊಂದಿದ್ದರು. ‘ನನಗೆ ಸ್ಫೂರ್ತಿ, ಪ್ರೇರಣೆ ಅಂತ ಏನು ಇಲ್ಲ, ಚಿತ್ರಕಲೆ ಎಂದರೆ ಇಷ್ಟ ಅಷ್ಟೆ. ನನ್ನ ಶಿಕ್ಷಕರು ಪ್ರೋತ್ಸಾಹ ನೀಡಿದರು. ಆದ್ದರಿಂದ ಕಲೆಯ ಅಭಿರುಚಿ ಬೆಳೆಯಿತು. ಅದೇ ಇಂದು ಹಲವಾರು ಪ್ರದರ್ಶನಗಳಿಗೆ ಕಾರಣವಾಗಿದೆ’ ಎನ್ನುತ್ತಾರೆ ಅವರು.

ಎತ್ತಣ ಮಾಮರ ಎತ್ತಣ ಕೋಗಿಲೆ ಎನ್ನುವ ಹಾಗೇ ಕರ್ನಾಟಕಕ್ಕೂ ಪಶ್ಚಿಮ ಬಂಗಾಳಕ್ಕೂ ನಂಟು ಬೆಳೆದಿದ್ದೇಗೆ ಎಂದು ಕೇಳಿದರೆ ‘ನಾನು, ಅನೂಪ್, ಗಗನ್ ಮತ್ತು ಕೆ.ಎಸ್. ಬಸವರಾಜು ನಾಲ್ವರಿಗೂ ಪಶ್ಚಿಮ ಬಂಗಾಳದ ಶಾಂತಿನಿಕೇತನ ಸ್ನೇಹ ಸೇತುವೆ ನಿರ್ಮಿಸಿದ ಜಾಗ. ಸ್ನಾತಕ್ಕೋತ್ತರ ಪದವಿ ವ್ಯಾಸಂಗ ಮಾಡಿದ್ದು ಶಾಂತಿನಿಕೇತನದಲ್ಲಿ.’

‘ಅದಾದ ನಂತರ ನಾವೆಲ್ಲರೂ ತಮ್ಮ ತಮ್ಮ ಕೆಲಸಗಳಲ್ಲಿ ನಿರತರಾದೆವು. ನಮ್ಮ ಚಿತ್ರಕಲೆಗಳ ಪ್ರದರ್ಶನಗಳು ದೇಶದ ನಾನಾ ಭಾಗಗಳಲ್ಲಿ ನಡೆಯುತ್ತಿವೆ. ಆದರೆ ನಾವೆಲ್ಲರೂ ಒಟ್ಟಿಗೆ ಸೇರಿ ಚಿತ್ರಕಲಾ ಪ್ರದರ್ಶನ ಏರ್ಪಡಿಸಬೇಕು ಎಂಬ ಹಂಬಲ ಮೊದಲಿನಿಂದಲೂ ಇತ್ತು ಅದು ಇಂದು ಸಾಕಾರವಾಗುತ್ತಿದೆ. ಕಲಾಪ್ರದರ್ಶನ ತುಂಬಾ ವರ್ಷಗಳ ನಂತರ ನಮ್ಮನ್ನೆಲ್ಲಾ ಒಟ್ಟಿಗೆ ಸೇರಿಸುತ್ತಿದೆ. ಹಾಗಾಗಿ ಬೇರೆಲ್ಲಾ ಪ್ರದರ್ಶನಗಳಿಗಿಂತ ಈ ಪ್ರದರ್ಶನ ಹೆಚ್ಚು ಪ್ರಾಮುಖ್ಯತೆ ಪಡೆದಿದೆ’ ಎನ್ನುತ್ತಾರೆ ನರಸಿಂಹಮೂರ್ತಿ.

ಪ್ರತಿಕ್ರಿಯಿಸಿ (+)