ಶಿಲ್ಪಕಲೆಯಲ್ಲಿ ವಿವಿಧ ಮಜಲು

7

ಶಿಲ್ಪಕಲೆಯಲ್ಲಿ ವಿವಿಧ ಮಜಲು

Published:
Updated:

ಯಿಯ ಮಡಿಲೊಳಗೆ ಬೆಚ್ಚಗೆ ಕೂತ ಕಂದಮ್ಮ, ಸುತ್ತಲಿನ ಪಕಳೆ ಸಡಿಲಿಸಿಕೊಂಡು ಹೊರ ಜಗತ್ತನ್ನು ನೋಡಲು ಹವಣಿಸುತ್ತಿರುವ ಮೊಗ್ಗು, ಇಂದಿನ ಶಿಕ್ಷಣ ಪದ್ಧತಿಯ ಅವ್ಯವಸ್ಥೆ, ದೇಶದ ರೈತರ ನೋವು, ಬವಣೆ ಹಾಗೂ ಆತ್ಮಹತ್ಯೆ, ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯ, ಅಕ್ರಮಗಳ ಚಿತ್ರಣ... ಈ ಎಲ್ಲವನ್ನೂ ತಮ್ಮ ಶಿಲ್ಪಕಲಾಕೃತಿಗಳ ಮೂಲಕ ಬೆರಗು ಮೂಡಿಸುವಂತೆ ರಚಿಸಿದವರು ಕಲಾವಿದ ನಿಂಗಪ್ಪ ಡಿ. ಕೇರಿ.

ಇವರು ರಚಿಸಿರುವ ಕಲಾಕೃತಿಗಳ ಏಕವ್ಯಕ್ತಿ ಶಿಲ್ಪಕಲೆ ಪ್ರದರ್ಶನ ‘ರೈತರ ಬದುಕು ಹಾಗೂ ಶಿಕ್ಷಣ ವ್ಯವಸ್ಥೆ’ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ನಡೆಯುತ್ತಿದೆ. 

ಕಲಬುರ್ಗಿಯವರಾದ ನಿಂಗಪ್ಪ ಅವರು ಶಾಲಾ ದಿನಗಳಿಂದಲೂ ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದವರು. ಆ ದಿನಗಳಲ್ಲಿ ತಮ್ಮ ಮನಸ್ಸಿಗೆ ತೋಚುತ್ತಿದ್ದ ಚಿತ್ರಗಳನ್ನು ಹಾಳೆಯ ಮೇಲೆ ಗೀಚುತ್ತಿದ್ದರು. ಅವರ ಮನೆಯಲ್ಲಿ ಚಿತ್ರಕಲೆ ಹಾಗೂ ಶಿಲ್ಪಕಲಾಕೃತಿಗಳ ಬಗ್ಗೆ ಬಲ್ಲವರು ಯಾರೂ ಇರಲಿಲ್ಲ. ತಮ್ಮ ಜಿಲ್ಲೆಯ ಎಸ್. ಎಂ. ಪಂಡಿತ್ ಹಾಗೂ ಧನಂಜಯ ಕುಂತಿ ಇವರ ಕಲಾಕೃತಿಗಳನ್ನು ನೋಡಿ ಪ್ರೇರಣೆಗೊಂಡು ತಾವು ಶಿಲ್ಪಕಲಾಕೃತಿಗಳನ್ನು ರಚಿಸಲು ಆಭ್ಯಾಸ ಮಾಡಿಕೊಂಡರು. ಇವರು ಹೈಸ್ಕೂಲ್‌ನಲ್ಲಿದ್ದಾಗ ಮಕಂದ್‌ರಾವ್ ಎಂಬ ಡ್ರಾಯಿಂಗ್ ಟೀಚರ್ ಇವರಿಗೆ ಹೈಯರ್ ಹಾಗೂ ಲೋಯರ್ ಪರೀಕ್ಷೆ ತೆಗೆದುಕೊಳ್ಳಲು ಸಹಾಯ ಮಾಡಿದರು. ಹೀಗೆ ಅಲ್ಲಿಂದ ಅವರ ಶಿಲ್ಪಕಲೆಯ ಆಸಕ್ತಿ ಇಮ್ಮಡಿಸಿತು.

‘ಇಂದಿನ ಮಕ್ಕಳನ್ನು ನಾವು ಗೊಂದಲದಲ್ಲಿ ಓದಿಸುತ್ತಿದ್ದೇವೆ. ಅವರ ಆಸಕ್ತಿಯ ಕ್ಷೇತ್ರವನ್ನು ಗುರುತಿಸಿ ಅದನ್ನು ಪ್ರೋತ್ಸಾಹಿಸುವ ಬದಲು, ಬರೀ ಓದಿ ಓದಿ ಎಂದು ಅವರ ಮೇಲೆ ಒತ್ತಡ ಹೇರುತ್ತಿದ್ದೇವೆ. ಎಲ್ಲರೂ ತಮ್ಮ ಮಕ್ಕಳು ಡಾಕ್ಟರ್, ಎಂಜಿನಿಯರ್‌ ಆಗಬೇಕು ಅಂದುಕೊಳ್ಳುತ್ತಾರೆ ಹೊರತು ಸಾಹಿತಿ, ಸಂಗೀತಕಾರ ಆಗಬೇಕು ಎಂದುಕೊಳ್ಳುವುದಿಲ್ಲ. ಇದನ್ನೇ ನನ್ನ ಕಲಾಕೃತಿಯಲ್ಲಿ ಮೂಡಿಸಲು ಪ್ರಯತ್ನಿಸಿದ್ದೇನೆ. ಜೊತೆಗೆ ರೈತರ ಆತ್ಮಹತ್ಯೆ, ರೈತರ ಮನೆಯಲ್ಲಿರುವ ಗೂಳಿ ಇವೆಲ್ಲವನ್ನೂ ನನ್ನ ಮನಸ್ಸಿನ ಪರಿಕಲ್ಪನೆಯಂತೆ ಕೆತ್ತಿದ್ದೇನೆ. ಈ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂಬುದು ನನ್ನ ಬಯಕೆ’ ಎಂದು ಶಿಲ್ಪಕಲೆ ಪರಿಕಲ್ಪನೆಯ ಕುರಿತು ವಿವರಣೆ ನೀಡುತ್ತಾರೆ ಈ ಕಲಾವಿದ.

ಸಮಕಾಲೀನ ಹಾಗೂ ಸಾಂಪ್ರದಾಯಿಕ ಶಿಲ್ಪಕಲಾಕೃತಿಗಳನ್ನು ರಚಿಸುವ ಇವರು ದೇವಸ್ಥಾನಗಳಲ್ಲಿ ಶಿಲ್ಪಗಳ ಕೆತ್ತನೆಯನ್ನೂ ಮಾಡುತ್ತಾರೆ.

ಪ್ರಸ್ತುತ ಕಲಬುರ್ಗಿಯ ‘ದಿ ಆರ್ಟ್‌ ಇಂಟಿಗ್ರೇಷನ್ ಫೈನ್ ಆರ್ಟ್ ಕಾಲೇಜು ಗುಲ್ಬರ್ಗ’ ಇಲ್ಲಿ ಶಿಲ್ಪಕಲಾ ಪ್ರಾಧ್ಯಾಪಕರಾಗಿದ್ದಾರೆ. ಜೊತೆಗೆ ಆರ್ಟ್‌ ಸ್ಟುಡಿಯೊ ಒಂದನ್ನು ನಡೆಸುತ್ತಿದ್ದಾರೆ. ರಾಜ್ಯ ಹಾಗೂ ರಾಷ್ಟ್ರಮಟ್ಟದ ಶಿಲ್ಪಕಲಾ ಪ್ರದರ್ಶನಗಳಲ್ಲಿ ಭಾಗವಹಿಸಿ, ಹೈದರಾಬಾದ್ ಆರ್ಟ್ಸ್ ಸೊಸೈಟಿಯಿಂದ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಈವೆರಗೂ ಐದು ಕಡೆ ಪ್ರದರ್ಶನ ನೀಡಿರುವ ಇವರು, ಮೂರು ಬಾರಿ ಏಕವ್ಯಕ್ತಿ ಶಿಲ್ಪಕಲಾ ಪ್ರದರ್ಶನ ನಡೆಸಿದ್ದಾರೆ.


ಹಂಪಿ ವಿಶ್ವವಿದ್ಯಾಲಯದಲ್ಲಿ ಫೈನ್‌ ಆರ್ಟ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದು, ಬಿಡದಿಯ ಕರಕುಶಲ ಕೇಂದ್ರವೊಂದರಲ್ಲಿ 18 ತಿಂಗಳು ಕಲ್ಲು ಹಾಗೂ ಮರದ ಕೆತ್ತನೆಯಲ್ಲಿ ತರಬೇತಿಯನ್ನೂ ಪಡೆದಿದ್ದಾರೆ.

**

* ಕಲಾವಿದ: ನಿಂಗಪ್ಪ ಡಿ. ಕೇರಿ

* ವಿಶೇಷ: ಶಿಲ್ಪಕಲೆ ಪ್ರದರ್ಶನ

* ಸ್ಥಳ: ಗ್ಯಾಲರಿ 2, ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ. 

* ದಿನ: ಆಗಸ್ಟ್‌ 8

* ಸಮಯ: ಬೆಳಿಗ್ಗೆ 10ರಿಂದ ರಾತ್ರಿ 7


ನಿಂಗಪ್ಪ ಡಿ. ಕೇರಿ

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !