ಕ್ಯಾನ್ವಾಸ್ ಮೇಲೆ ಐತಿಹಾಸಿಕ ಸ್ಮಾರಕಗಳು

6
ಕಲಾಪ

ಕ್ಯಾನ್ವಾಸ್ ಮೇಲೆ ಐತಿಹಾಸಿಕ ಸ್ಮಾರಕಗಳು

Published:
Updated:
Deccan Herald

ಐತಿಹಾಸಿಕ ಸ್ಮಾರಕಗಳಾದ ಗೋಲ್‌ಗುಂಬಜ್, ದಕ್ಷಿಣ ಭಾರತದ ತಾಜ್‌ ಮಹಲ್ ಎಂದೇ ಪ್ರಸಿದ್ಧಿಯಾಗಿರುವ ಇಬ್ರಾಹಿಂ ರೋಜಾ, ಭಾರತದ ಶಿಲ್ಪಕಲೆ ತೊಟ್ಟಿಲು ಐಹೊಳೆಯ ದೇವಾಲಯಗಳು, ಪಟ್ಟದಕಲ್ಲಿನ ಶಿಲ್ಪಕಲೆಗಳು, ಹಂಪಿಯ ನಿಸರ್ಗದ ವಿಹಂಗಮ ನೋಟದ ಜೊತೆಗೆ ಬಿತ್ತಿ ಮೇಲಿನ ವರ್ಲಿ ಕಲೆ... ಪ್ರತಿ ಕಲಾಕೃತಿಗಳನ್ನು ನೋಡುವಾಗ ಇವು ಫೋಟೊಗಳೇನೋ ಎಂಬಂತೆ ಭಾಸವಾಗುತ್ತವೆ. 

ಗದಗಿನ ಶ್ರೀ ವೀರನಾರಾಯಣ, ಲಕ್ಕುಂಡಿಯ ಜೈನ ಬಸದಿ, ಹಂಪಿಯ ವಿರೂಪಾಕ್ಷ ದೇವಾಲಯ, ವಿಜಯಪುರದ ಬಾರಾಕಮಾನ್, ತಾಜ್ ಬಾವಡಿ, ಇಬ್ರಾಹಿಂ ರೋಜಾ, ಜೈನಬಸದಿ ಸೇರಿದಂತೆ ನಾಡಿನ ಐತಿಹಾಸಿಕ ಸ್ಥಳಗಳ ಹಿನ್ನಲೆಯ ಮಹತ್ವ ಸಾರುವ ಅದ್ಭುತವಾದ ಚಿತ್ರಗಳು ಬಿಟಿಎಂ ಲೇಔಟ್‌ನ ಇರಾ ಆರ್ಟ್ ಗ್ಯಾಲರಿಯಲ್ಲಿ ಪ್ರದರ್ಶನಕ್ಕಿವೆ.

ವಾಟರ್ ಕಲರ್, ತೈಲವರ್ಣ ಮತ್ತು ಆಕ್ರಿಲಿಕ್‌ನಲ್ಲಿ ರಚಿಸಿರುವ ಈ ಚಿತ್ರಗಳು ವಿರೂಪಾಕ್ಷಪ್ಪ ಎಫ್. ಕುಂದ್ರಳ್ಳಿ ಅವರ ಕುಂಚದಲ್ಲಿ ರಚನೆಗೊಂಡಿವೆ. ಇಲ್ಲಿ ಒಟ್ಟು 26 ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ವಿರೂಪಾಕ್ಷಪ್ಪ ಅವರು ಗದಗ ಜಿಲ್ಲೆಯ ಯಲಿಶಿರೂರು ಗ್ರಾಮದವರು. ಚಿಕ್ಕವಯಸ್ಸಿನಲ್ಲಿ ತಂದೆ– ತಾಯಿಯನ್ನು ಕಳೆದುಕೊಂಡವರು.

‘ಹೈಸ್ಕೂಲ್‌ ಓದುತ್ತಿರುವಾಗಲೇ ಕಲೆ ಬಗ್ಗೆ ಆಸಕ್ತಿ ಬೆಳೆಯಿತು. ಪದವಿ ಕಾಲೇಜಿನಲ್ಲಿ ಕೆ.ಎಸ್.ಬಂಡಿ ಗುರುಗಳು ಚಿತ್ರಕಲೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸಿದರು. ಜೊತೆಗೆ ಇಂದಿನ ಪೀಳಿಗೆಗೆ ನಮ್ಮ ನಾಡಿನ ಶಿಲ್ಪಕಲೆ ಹಾಗೂ ಐತಿಹಾಸಿಕ ಸ್ಥಳಗಳ ಮಹತ್ವವನ್ನು ತಿಳಿಸುವ ಉದ್ದೇಶದಿಂದ ರಾಜ್ಯದ ಪ್ರಸಿದ್ಧ ಐತಿಹಾಸಿಕ ಸ್ಥಳಗಳ ಚಿತ್ರಗಳನ್ನು ಬಿಡಿಸಿದ್ದೇನೆ’ ಎನ್ನುತ್ತಾರೆ ವಿರೂಪಾಕ್ಷಪ್ಪ.


–ವಿಜಯಪುರದ ‘ಗೋಲ್‌ಗುಂಬಜ್‌’ನ ಸುಂದರ ನೋಟ

ಗದಗದ ವಿಜಯ ಕಾಲೇಜ್ ಆಫ್ ಫೈನ್ ಆರ್ಟ್‌ ಕಾಲೇಜಿನಲ್ಲಿ ಎಂ.ಎಫ್‌.ಎ ಸ್ನಾತಕೋತ್ತರ ಪದವಿ ಪಡೆದ ಅವರು, 3ಡಿ ಚಿತ್ರಗಳನ್ನೂ ರಚಿಸುತ್ತಾರೆ.

‘ನನ್ನ ಕಲಾಕೃತಿಗಳಿಗೆ ನಿಸರ್ಗವೇ ಪ್ರೇರಣೆ’ ಎನ್ನುವ ಅವರು ಪ್ರಾಣಿ, ಪಕ್ಷಿಗಳ ಚಿತ್ರಗಳನ್ನೂ ಬಿಡಿಸಿದ್ದಾರೆ. ಜೊತೆಗೆ ಯಕ್ಷಗಾನ, ಲಂಬಾಣಿ ನೃತ್ಯ ಕುರಿತು ತೈಲವರ್ಣದ ಚಿತ್ರಗಳನ್ನು ಬಿಡಿಸಿದ್ದಾರೆ.

ಹೈದಾರಾಬಾದ್‌, ಪಾಂಡಿಚೇರಿ, ನಾಗ್ಪುರ, ಮೈಸೂರು, ಬೆಂಗಳೂರು, ಹಂಪಿ, ಉತ್ತರ ಪ್ರದೇಶ, ರಾಜಸ್ಥಾನ, ದೆಹಲಿ ಕರ್ನಾಟಕ ಸಂಘ ಆರ್ಟ್ ಗ್ಯಾಲರಿ ಸೇರಿದಂತೆ ದೇಶದ ಹಲವಾರು ಕಡೆ ಇವರು ತಮ್ಮ ಕಲಾಕೃತಿಗಳನ್ನು ಪ್ರದರ್ಶನ ಮಾಡಿದ್ದಾರೆ. ಈ ಬಾರಿ 4ನೇ ಬಾರಿಯ ಏಕವ್ಯಕ್ತಿ ಚಿತ್ರ ಪ್ರದರ್ಶನ ಮಾಡುತ್ತಿದ್ದಾರೆ. ಚಿತ್ರಪ್ರದರ್ಶನ ಆಗಸ್ಟ್‌ 12ರವರೆಗೆ ನಡೆಯಲಿದೆ.

***

* ಕಲಾವಿದ ಹೆಸರು: ವಿರೂಪಾಕ್ಷಪ್ಪ ಎಫ್. ಕುಂದ್ರಳ್ಳಿ
* ಚಿತ್ರಕಲೆ ಮಾಧ್ಯಮ: ಆಕ್ರಿಲಿಕ್, ತೈಲವರ್ಣ ಮತ್ತು ವಾಟರ್ ಕಲರ್
* ವಿಳಾಸ: ಇರಾ ಆರ್ಟ್ ಗ್ಯಾಲರಿ, #17, ಅಪೂರ್ವ ಬಿಲ್ಡಿಂಗ್, ಬಿಟಿಎಂ ಒಂದನೇ ಹಂತ
* ಸಮಯ: ಬೆಳಿಗ್ಗೆ 10.30 ರಿಂದ 5.30
* ಸಂಪರ್ಕಕ್ಕೆ: 9743468423

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !