‘ದೇಹಿ’ ಚಿತ್ರದಲ್ಲಿ ಕಳರಿಪಯಟ್ಟು ಆ್ಯಕ್ಷನ್‌

7

‘ದೇಹಿ’ ಚಿತ್ರದಲ್ಲಿ ಕಳರಿಪಯಟ್ಟು ಆ್ಯಕ್ಷನ್‌

Published:
Updated:
Deccan Herald

ಮೂಲ ಕೇರಳವಾದರೂ ದೇಶದಾದ್ಯಂತ ಜನಪ್ರಿಯಗೊಂಡಿರುವ ಕಲೆ ಕಳರಿಪಯಟ್ಟು. ಈ ಪುರಾತನ ಕಲೆಯಿಂದ ಅಭ್ಯಾಸದಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯ ಎರಡೂ ಉತ್ತಮವಾಗುತ್ತದೆ. ನಗರದಲ್ಲಿ ಈ ಕಲೆಯನ್ನು ಆಸಕ್ತರಿಗೆ ಹೇಳಿಕೊಡುವ ಕೆಲಸ ಮಾಡುತ್ತಿದೆ ಕಳರಿ ಗುರುಕುಲಂ. ಚಿಕ್ಕಗುಬ್ಬಿಯಲ್ಲಿರುವ ಈ ತರಬೇತಿ ಹಾಗೂ ಸಂಶೋಧನಾ ಕೇಂದ್ರ ಈಗ ಹೊಸ ಸಾಹಸಕ್ಕೆ ಮುಂದಾಗಿದೆ. 

ದೇಶದ ಅತ್ಯಂತ ಜನಪ್ರಿಯ ಸಮರಕಲಾ ಪ್ರಕಾರ ಹಾಗೂ ಅದರ ಮಹತ್ವವನ್ನು ಬೆಳ್ಳಿ ಪರದೆಯ ಮೇಲೆ ತರುವ ವಿಶಿಷ್ಟ ಪ್ರಯತ್ನವನ್ನು ಕಳರಿ ಗುರುಕುಲಂ ಮಾಡುತ್ತಿದೆ. ಈ ಗುರುಕುಲದ ವಿದ್ಯಾರ್ಥಿಗಳೇ ಬಂಡವಾಳ ಒಟ್ಟು ಸೇರಿಸಿ, ಪುರಾತನ ಕಲೆ ಕುರಿತಾದ ಅಪರೂಪದ ಚಿತ್ರ ನಿರ್ಮಾಣ ಮಾಡುತ್ತಿದೆ. ಇದರ ಪಾತ್ರವರ್ಗದಲ್ಲಿ ಈ ಶಾಲೆಯ ವಿದ್ಯಾರ್ಥಿಗಳೇ ಅಭಿನಯಿಸಲಿರುವುದು ಚಿತ್ರದ ಮತ್ತೊಂದು ವಿಶೇಷ. 

ಈ ಚಿತ್ರದ ಹೆಸರು ‘ದೇಹಿ’. ಇದರಲ್ಲಿ ಕಳರಿಪಯಟ್ಟು ಮಹತ್ವ, ಅದರ ಉಪಯೋಗ ಹಾಗೂ ಆ್ಯಕ್ಷನ್‌ ದೃಶ್ಯಗಳನ್ನೊಳಗೊಂಡಿರಲಿದೆ. ಈ ಚಿತ್ರವು ಕನ್ನಡ, ಮಲಯಾಳಂ ಹಾಗೂ ತಮಿಳು ಮೂರೂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ಕಳರಿ ಗುರುವಿನ ಜೀವನ ಅನಾವರಣದ ಜೊತೆಗೆ  ಸ್ತ್ರೀ ಸಬಲೀಕರಣದ ಕಥಾ ಹಂದರ ಹೊಂದಿದೆ. ಗುರುವಿನ ಪಾತ್ರದಲ್ಲಿ ನಟ ಕಿಶೋರ್‌ ನಟಿಸುತ್ತಿದ್ದಾರೆ. 

ಈ ಚಿತ್ರದ ನಾಯಕಿಯಾಗಿ ನಟಿಸುತ್ತಿರುವವರು ಕಳರಿ ಗುರುಕುಲಂನ ವಿದ್ಯಾರ್ಥಿನಿ ಉಪಾಸನಾ ಗುರ್ಜರ್‌. ಏಳು ವರ್ಷಗಳಿಂದ ಅವರು ಕಳರಿಪಯಟ್ಟು ಕಲಿಯುತ್ತಿದ್ದಾರೆ. ಅನೇಕ ರಾಷ್ಟ್ರೀಯ ಕಳರಿಪಯಟ್ಟು ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ಪದಕ ಪಡೆದುಕೊಂಡಿದ್ದಾರೆ. ಉಪಾಸನಾ ಈ ಚಿತ್ರದಲ್ಲಿ ದಿವ್ಯಾ ಎಂಬ 17 ವರ್ಷದ ಯುವತಿಯ ಪಾತ್ರ ಮಾಡಿದ್ದಾರೆ.

‘ದಿವ್ಯಾ ದೊಡ್ಡ ಕನಸು ಕಾಣುತ್ತಾ ಸಾಧನೆ ಮಾಡಲು ಬಯಸುವ ಹುಡುಗಿ. ಆದರೆ ಸಮಾಜದ ಕ್ರೂರತೆಯಿಂದ ಸ್ವಚ್ಛಂದವಾಗಿ ಹಾರಾಡುತ್ತಿರುವ ರೆಕ್ಕೆಗಳನ್ನೇ ಕಳೆದುಕೊಳ್ಳುವ ಹಕ್ಕಿಯಂತಾಗುತ್ತಾಳೆ. ಹೆಣ್ಣಾಗಿರುವುದೇ ತಪ್ಪೇ? ದಿವ್ಯಾ ಕಳರಿ ಗುರುವಿನ ಸಹಾಯದಿಂದ ಕಳರಿಪಯಟ್ಟು ಕಲಿತು ಆಕೆ ಮಾನಸಿಕ ಹಾಗೂ ದೈಹಿಕವಾಗಿ ಶಕ್ತಿವಂತಳಾಗುತ್ತಾಳೆ ಎಂಬುದು ಈ ಸಿನಿಮಾದ ಕತೆ. ಪ್ರಸ್ತುತ ಮಹಿಳೆಯರ ಮೇಲಿನ ದೌರ್ಜನ್ಯ ಅಧಿಕವಾಗುತ್ತಿದ್ದು, ಅದರ ಬಗ್ಗೆ ಹಾಗೂ ಕೆಲ ಪರಿಹಾರಗಳ ಬಗ್ಗೆ ಈ ಸಿನಿಮಾದಲ್ಲಿ ತೋರಿಸಲಾಗಿದೆ’ ಎಂದು ಚಿತ್ರದ ಎಳೆ ಬಗ್ಗೆ ಗುಟ್ಟು ಬಿಚ್ಚಿಡುತ್ತಾರೆ ಕಳರಿ ಗುರುಕುಲಂನ ಮುಖ್ಯಸ್ಥ ರಂಜನ್‌ ಮುಲ್ಲಾರಟ್‌. ದಿವ್ಯಾ ಇವರ ಶಿಷ್ಯೆ.

ಈ ಸಿನಿಮಾವನ್ನು ‘ಪಡೈವೀರನ್‌’ ಸಿನಿಮಾ ಖ್ಯಾತಿಯ ನಿರ್ದೇಶಕ ಧನಶೇಖರ್‌ ನಿರ್ದೇಶಿಸುತ್ತಿದ್ದಾರೆ.  ಚಿತ್ರೀಕರಣವನ್ನು ಹಂಪಿ, ಬೇಲೂರು, ಹಳೆಬೀಡು ಸೇರಿದಂತೆ ರಾಜ್ಯದ ಪ್ರಸಿದ್ಧ ಪಾರಂಪಾರಿಕ ತಾಣಗಳು ಹಾಗೂ ಜಲಪಾತಗಳಿರುವ ಸ್ಥಳಗಳಲ್ಲಿ ಮಾಡಲಾಗಿದೆ. ‘ಸದ್ಯ ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸ ನಡೆಯುತ್ತಿದ್ದು, ನವೆಂಬರ್‌ ತಿಂಗಳಾಂತ್ಯದಲ್ಲಿ ಚಿತ್ರ ಬಿಡುಗಡೆ ಮಾಡಲಿದ್ದೇವೆ’ ಎಂದು ಮಾಹಿತಿ ನೀಡುತ್ತಾರೆ ರಂಜನ್‌ ಮುಲ್ಲಾರಟ್‌. 

ಜನಪ್ರಿಯ ಸಿನಿಮಾಗಳಾದ ‘ಎಂದಿರನ್‌– 2’, ‘ಇಂಡಿಯನ್‌’ ಸಿನಿಮಾಗಳಿಗೆ ಕತೆ, ಚಿತ್ರಕತೆ ಹಾಗೂ ಸಂಭಾಷಣೆ ಬರೆದಿರುವ ಬಿ. ಜಯಮೋಹನ್‌ ಅವರೇ ಈ ಸಿನಿಮಾಕ್ಕೂ ಕತೆ, ಚಿತ್ರಕತೆ, ಸಂಭಾಷಣೆ ಬರೆದಿದ್ದಾರೆ. ಆನಂದ ಸುಂದರೇಶ್‌ ಅವರ ಛಾಯಾಗ್ರಹಣ ಚಿತ್ರಕ್ಕಿದ್ದು, ರಂಜನ್‌ ಮುಲ್ಲಾರಟ್‌ ಅವರೇ ನೃತ್ಯ ನಿರ್ದೇಶನ ಮಾಡಿದ್ದಾರೆ. 

‘ದೇಹಿ’ ಸಿನಿಮಾವನ್ನು ಅಂದಾಜು ₹3 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿದ್ದು, ಎಲ್ಲಾ ಬಂಡವಾಳವನ್ನು ಕಳರಿ ಗುರುಕುಲಂ ವಿದ್ಯಾರ್ಥಿಗಳೇ ಭರಿಸಿದ್ದಾರೆ. ‘ಕಳರಿಪಯಟ್ಟು ಬಗ್ಗೆ ಕೆಲ ಸಿನಿಮಾಗಳು ಬಂದಿವೆ. ಸಂಪೂರ್ಣವಾಗಿ ಈ ಕುರಿತಾದ ಸಿನಿಮಾವೊಂದು ತಯಾರಾಗುತ್ತಿರುವುದು ಇದೇ ಮೊದಲು. ಈ ಕಲೆಯ ಬಗ್ಗೆ ಅಂತರರಾಷ್ಟ್ರೀಯವಾಗಿ ಗಮನ ಸೆಳೆದು, ಪ್ರೇಕ್ಷಕರಲ್ಲಿ ಜಾಗೃತಿ ಹಾಗೂ ಕಲೆ ಬಗ್ಗೆ ಆಸಕ್ತಿ ಮೂಡಿಸುವುದು ಇದರ ಹಿಂದಿನ ಉದ್ದೇಶ‘ ಎಂದು ರಂಜನ್‌ ವಿವರಿಸುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !