ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಲೂರಿನಲ್ಲೂ ಚಿತ್ರಸಂತೆ ಸಂಭ್ರಮ

Last Updated 7 ಜನವರಿ 2019, 19:45 IST
ಅಕ್ಷರ ಗಾತ್ರ

ಕಲಾವಿದರ ಕಲಾಕೃತಿಗಳನ್ನು ಕಲಾಸಕ್ತರಿಗೆ ತಲುಪಿಸುವ ಮತ್ತು ಅವುಗಳ ಮೂಲಕ ಸಂವಹನ ನಡೆಸುವ ಉದ್ದೇಶ ದಿಂದ ಕಲಾವಿದರು ಮತ್ತು ಕಲಾ ಪರಿಣಿತರು ಜೊತೆಗೂಡಿ ಕಲಬುರ್ಗಿಯಲ್ಲಿ ಜನವರಿ 13ರಂದು 6ನೇ ಚಿತ್ರಸಂತೆ ಆಯೋಜಿಸಿದ್ದಾರೆ. ಅಂದು ಬೆಳಿಗ್ಗೆ 8 ರಿಂದ ಸಂಜೆ 7ರವರೆಗೆ ಕಲಾವಿದರು ಬರೀ ಕಲೆಯನ್ನೆ ಧ್ಯಾನಿಸುವರು. ಅದರ ಬಗ್ಗೆಯೇ ಮಾತನಾಡುವರು. ಕಲಾಕೃತಿಯ ಒಂದೊಂದು ಗೆರೆ ಮತ್ತು ಚುಕ್ಕಿಯ ಮಹತ್ವ ತಿಳಿಸುವರು. ಕಲಾಸಕ್ತರ ಮನ ಗೆದ್ದು, ಸೂರ್ಯೋದಿಂದ ಸೂರ್ಯಾಸ್ತದವರೆಗೆ ರಂಗಿನ ಪಯಣಕ್ಕೆ ಕರೆದೊಯ್ಯುವರು.

ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ, ಕಲಬುರ್ಗಿ ವಿಕಾಸ ಅಕಾಡೆಮಿ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಚೈತನ್ಯಮಯಿ ಆರ್ಟ್ ಗ್ಯಾಲರಿ, ದೃಶ್ಯ ಬೆಳಕು ಸಾಂಸ್ಕೃತಿಕ ಸಂಸ್ಥೆ ಮತ್ತು ಗುಲ್ಬರ್ಗ ವಿಶ್ವವಿದ್ಯಾಲಯ ಸಹಯೋಗದಲ್ಲಿ ನಡೆಯುವ ಚಿತ್ರಸಂತೆಯಲ್ಲಿ 250ಕ್ಕೂ ಹೆಚ್ಚು ಕಲಾವಿದರು ಭಾಗವಹಿಸುವರು. 2,500ಕ್ಕೂ ಹೆಚ್ಚು ಕಲಾಕೃತಿ ಗಳನ್ನು ಪ್ರದರ್ಶಿಸುವವರು. ಶಿಲ್ಪಕಲಾವಿದರು ಸಿದ್ಧಪಡಿಸಿರುವ ಮಣ್ಣಿನ, ಕಲ್ಲುಗಳ ಆಕೃತಿಗಳು ವಿಶೇಷ ಮೆರುಗು ತರಲಿವೆ.

ಕಲಾವಿದರು ತಮ್ಮ ಬಿಡುವಿನ ಅವಧಿ ಯಲ್ಲಿ ಸಿದ್ಧಪಡಿಸಿರುವ ಕಲಾಕೃತಿಗಳನ್ನು ಪ್ರದರ್ಶಿಸುವುದರ ಜೊತೆಗೆ ಸ್ಥಳದಲ್ಲೇ ಕಲಾಕೃತಿಗಳನ್ನು ರಚಿಸಲಿದ್ದಾರೆ. ವ್ಯಕ್ತಿಯೊಬ್ಬನನ್ನು ಎದುರಿಗೆ ಕೂರಿಸಿಕೊಂಡು ಚಿತ್ರ ಬಿಡಿಸುವ ‘ಪೋರ್ಟ್ರೈಟ್’ ರಚನೆಯೂ ಇರಲಿದೆ. ಇದು ಅಲ್ಲದೇ ಮೈಮೇಲೆ ಟ್ಯಾಟೂ ಹಾಕುವವರು ಮತ್ತು ಬಗೆಬಗೆಯ ಸೃಜನಾತ್ಮಕ ಕಲಾ ಕ್ಷೇತ್ರದಲ್ಲಿ ತೊಡಗಿಕೊಂಡಿರುವವರು ಪಾಲ್ಗೊಳ್ಳುವರು. ವೃತ್ತಿನಿರತ ಕಲಾವಿದರು, ಸಾಂಪ್ರದಾಯಿಕ ಕಲಾವಿದರು, ಹವ್ಯಾಸಿ ಕಲಾವಿದರು, ಸಮಕಾಲೀನ ಕಲಾವಿದರು, ಕಲಾ ವಿದ್ಯಾರ್ಥಿಗಳು ಮತ್ತು ಕಲಾ ಸಂಸ್ಥೆಯ ಪ್ರತಿನಿಧಿಗಳ ಕಲಾಕೃತಿಗಳನ್ನು ನೋಡುವ ಅವಕಾಶ ಲಭಿಸಲಿದೆ.

ಹೈದರಾಬಾದ್ ಕರ್ನಾಟಕ ಪ್ರದೇಶ ವ್ಯಾಪ್ತಿಯ ವಿವಿಧ ಜಿಲ್ಲೆಗಳ ಕಲಾವಿದರ ಅಲ್ಲದೇ ವಿವಿಧ ಜಿಲ್ಲೆ ಮತ್ತು ರಾಜ್ಯಗಳ ಕಲಾವಿದರ ವಿಶಿಷ್ಟ ಕಲಾಕೃತಿಗಳನ್ನು ವೀಕ್ಷಣೆಗೆಂದೇ ಕಲಾಸಕ್ತರು, ಕಲಾ ಪರಿಣಿತರು ಮತ್ತು ವಿಮರ್ಶಕರು ಚಿತ್ರಸಂತೆಗೆ ಬರುವರು. ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ಪ್ರತಿ ವರ್ಷ ನಡೆಯುವ ಚಿತ್ರಸಂತೆ ಮಾದರಿಯಲ್ಲಿ ಚಿತ್ರಸಂತೆ ನಡೆದರೂ ಕೊಂಚ ವಿಭಿನ್ನತೆ ಕಾಯ್ದುಕೊಳ್ಳುತ್ತದೆ.

ಈ ಚಿತ್ರಸಂತೆಯಲ್ಲಿ ಭಾಗವಹಿಸಲು ಇಚ್ಛಿಸುವ ಕಲಾವಿದರಿಂದ ಈಗಾಗಲೇ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಆಸಕ್ತರು ಸಂಪರ್ಕಿಸಬೇಕಾದ ಡಾ. ಪಿ.ಪರುಶರಾಮ-99013 60105 ಅಥವಾ ಡಾ. ಎ.ಎಸ್.ಪಾಟೀಲ-94492 91682

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT