ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಭಿನ್ನ ಪ್ರಯೋಗದ ಪದ್ಮವ್ಯೂಹ

Last Updated 29 ಜನವರಿ 2022, 19:30 IST
ಅಕ್ಷರ ಗಾತ್ರ

ಮಹಾಭಾರತದ ಕಥೆಗಳನ್ನು ತಮ್ಮದೇ ಶೈಲಿಯಲ್ಲಿ, ಅದ್ಧೂರಿ ವೇದಿಕೆಯಲ್ಲಿ ರಾಜ ಪೋಷಾಕುಗಳೊಂದಿಗೆ ಹಲವಾರು ರಂಗತಂಡಗಳು ಪ್ರದರ್ಶಿಸಿವೆ. ಆದರೆ ಥಿಯೇಟರ್ ಸಮುರಾಯ್-ಪುರಪ್ಪೆಮನೆ ತಂಡದವರು ಪ್ರದರ್ಶಿಸಿದ ಅಭಿಮನ್ಯುವಿನ ಪ್ರಸಂಗ ‘ಮಹಾಭಾರತ ಪದ್ಮವ್ಯೂಹ’ ಹಲವು ರೀತಿಯಲ್ಲಿ ಭಿನ್ನವಾಗಿತ್ತು, ಆಕರ್ಷಕವಾಗಿತ್ತು...

***

ಶಿವಮೊಗ್ಗದ ಮುಖಾಮುಖಿ ಥಿಯೇಟರ್ ಸಮುರಾಯ್ (ಎಸ್.ಟಿ.) ರಂಗತಂಡ ಮಂಜಮ್ಮ ಜೋಗತಿ ಅವರಿಗೆ ಗೌರವ ಅಭಿನಂದನೆ ಸಲ್ಲಿಕೆ ಕಾರ್ಯಕ್ರಮವನ್ನು ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿತ್ತು. ಈ ಸಂದರ್ಭದಲ್ಲಿ ‘ಮಹಾಭಾರತ ಪದ್ಮವ್ಯೂಹ’ ಎಂಬ ನಾಟಕವು ಪ್ರದರ್ಶನಗೊಂಡಿತು.

ಮಹಾಭಾರತದಲ್ಲಿ ಬರುವ ಅಭಿಮನ್ಯುವಿನ ಪ್ರಸಂಗವನ್ನು ವಿಭಿನ್ನ ಪರಿಕಲ್ಪನೆಯೊಂದಿಗೆ ಥಿಯೇಟರ್ ಸಮುರಾಯ್-ಪುರಪ್ಪೆಮನೆ ತಂಡದವರು ರಂಗದ ಮೇಲೆ ತಂದರು. ಕೌರವರು ಪಾಂಡವರ ಪರಸ್ಪರ ದ್ವೇಷ, ಅಸೂಯೆ, ಯುದ್ಧ, ಅಂತ್ಯದ ಕುರಿತಾಗಿ ಹಲವಾರು ರಂಗಪ್ರಯೋಗಗಳು ನಡೆದಿವೆ. ಆದರೆ ಥಿಯೇಟರ್ ಸಮುರಾಯ್ ತಂಡ ಆಡಿದ ‘ಮಹಾಭಾರತ ಪದ್ಮವ್ಯೂಹ’ ನಾಟಕವು ತುಂಬಾ ಭಿನ್ನವಾಗಿದೆ. ನಾಟಕದ ಸಂಪೂರ್ಣ ಸಂಭಾಷಣೆ ಆಡುಮಾತಿನಲ್ಲಿದ್ದ ಕಾರಣ ಮಕ್ಕಳಾದಿಯಾಗಿ ಎಲ್ಲರನ್ನೂ ಅದು ತಲುಪಿದೆ. ಅತ್ಯಂತ ಸರಳ ರಂಗಪರಿಕರ ಹಾಗೂ ವೇಷಭೂಷಣ ಅಳವಡಿಸಿಕೊಂಡು ಒಂದು ಅದ್ಭುತ ಪ್ರದರ್ಶನವನ್ನು ನೀಡುವಲ್ಲಿ ಈ ತಂಡ ಯಶಸ್ವಿಯಾಗಿದೆ.

ಕಾಡುಜನರ ಬೇಟೆ ನೃತ್ಯದೊಂದಿಗೆ ಆರಂಭಗೊಳ್ಳುವ ನಾಟಕ ಅವರ ಮುಖಂಡನೊಬ್ಬ ಬಾಲಕ ಅಭಿಮನ್ಯುವಿನ ಕತೆಯನ್ನು ಹೇಳುವುದರೊಂದಿಗೆ ಮಹಾಭಾರತದ ಕತೆ ತೆರೆದುಕೊಳ್ಳುತ್ತದೆ. ಕೃಷ್ಣನು ಹೇಳುವ ಚಕ್ರವ್ಯೂಹದ ರಚನೆ, ಅದರ ಭೇದಿಸುವಿಕೆಯ ಕುರಿತ ವಿವರಣೆಗೆ ಪ್ರತಿಸ್ಪಂದಿಸುವ ಗರ್ಭದಲ್ಲಿರುವ ಅಭಿಮನ್ಯುವಿನ ಚಿತ್ರಣವನ್ನು ಒಂದು ಬೊಂಬೆಯ ಮೂಲಕ ಕಟ್ಟಿ ಕೊಡುವಲ್ಲಿ ನಿರ್ದೇಶಕರ ಜಾಣ್ಮೆ ಎದ್ದು ಕಾಣುತ್ತದೆ. ನಂತರದ ಪಗಡೆಯಾಟದ ಸೋಲು, ಸಭೆಯಲ್ಲಿ ಪಾಂಚಾಲಿಗಾಗುವ ಅವಮಾನ ಮಹಾಭಾರತದ ಯುದ್ಧಕ್ಕೆ ಕಾರಣವಾಗುತ್ತದೆ. ಯುದ್ಧದ ವೀರಾವೇಷದ ದೃಶ್ಯಗಳಲ್ಲಿ ನಿರ್ದೇಶಕರು ಅಳವಡಿಸಿಕೊಂಡ ಪಟ್ಟುಗಳು ಕಳರಿಪಯಟ್ಟು ಕಲೆಯನ್ನು ನೆನಪಿಸಿದವು.

ಅಭಿಮನ್ಯು-ಉತ್ತರೆಯರ ಸರಸ-ಸಲ್ಲಾಪ, ಚಕ್ರವ್ಯೂಹವನ್ನು ಭೇದಿಸಲು ಹೊರಡುವ ಅಭಿಮನ್ಯುವನ್ನು ಗರ್ಭಿಣಿ ಉತ್ತರೆಯು ಹೋಗದಂತೆ ತಡೆಯುವ ದೃಶ್ಯಗಳು ಕಣ್ಣಿಗೆ ಕಟ್ಟುವಂತಿದ್ದವು. ಬಾಲಕ ಅಭಿಮನ್ಯು ಹತನಾದಾಗ ಸುಭದ್ರೆ, ಉತ್ತರೆಯರು ರೋದಿಸುವುದನ್ನು ಕಂಡಾಗ ಯುದ್ಧಗಳು ಅನಿವಾರ್ಯವೇ ಎಂಬ ಪ್ರಶ್ನೆ ಮೂಡುತ್ತದೆ. ಪಟ್ಟಕ್ಕಾಗಿ ಮೋಸ, ಕೊಲೆ ಅನಿವಾರ್ಯ ಎನ್ನುವ ಕೌರವರ ಅನಿಸಿಕೆ ಇಂದಿನ ವಾಸ್ತವಕ್ಕೆ ಹಿಡಿದ ಕನ್ನಡಿಯಾಗಿದೆ. ಮಾನವನ ಸ್ವಾರ್ಥ, ಅಧಿಕಾರಲಾಲಸೆಯ ಕಾರಣದಿಂದ ನಡೆಯುವ ಯುದ್ಧಗಳು ಎಷ್ಟೋ ಮಾತೆಯರ ಮಡಿಲನ್ನು ಬರಿದು ಮಾಡುತ್ತವೆ. ತಮ್ಮವರ ಬರುವಿಗಾಗಿ ಎದುರು ನೋಡುವ ಹೃದಯಗಳು ಬದುಕಿಡೀ ಬೇಯುತ್ತಲೇ ಇರುತ್ತವೆ ಎಂಬ ಸಂದೇಶವನ್ನು ಯುದ್ಧಗಳು ನೀಡುತ್ತಲೇ ಇವೆ. ದುರ್ಯೋಧನನ ಸಾವಿನೊಂದಿಗೆ ಯುದ್ಧ ಅಂತ್ಯವಾಗಿ, ಉತ್ತರೆಯ ಗರ್ಭದಿಂದ ಪರೀಕ್ಷಿತನ ಜನನವಾಗುವ ಮೂಲಕ ನಾಟಕ ಕೊನೆಗೊಳ್ಳುತ್ತದೆ.

ಕತೆಯ ಎಳೆ ಹಳತೇ ಆದರೂ ಆ ಭಾವನೆಯನ್ನು ಪ್ರೇಕ್ಷಕನಲ್ಲಿ ಸುಳಿಯಗೊಡದೇ ವಿಭಿನ್ನವಾಗಿ ರಂಗಕ್ಕಿಳಿಸಿದ ರೀತಿ ಎಲ್ಲರ ಮೆಚ್ಚುಗೆ ಗಳಿಸಿತು. ಯಾವುದೇ ಥಳುಕು ಬಳುಕಿನ ರಾಜ ಪೋಷಾಕುಗಳಿಲ್ಲದೇ ಎಲ್ಲ ಪಾತ್ರಗಳೂ ಕಾಡಿನ ಜನರ ವೇಷದಲ್ಲಿಯೇ ಮಹಾಭಾರತದ ಸನ್ನಿವೇಶಗಳನ್ನು ಕಟ್ಟಿ ಕೊಡುವಲ್ಲಿ ಗೆದ್ದಿತು. ಕಾಡು ಜನರ ನೆಲೆಗಟ್ಟಿನಲ್ಲಿಯೇ ಅಳವಡಿಸಿದ ಸಂಗೀತ, ನೃತ್ಯಗಳು ನಾಟಕಕ್ಕೆ ಮೆರುಗನ್ನು ತಂದುಕೊಟ್ಟವು. ನಾಟಕದುದ್ದಕ್ಕೂ ಬಳಕೆಯಾದ ರಂಗ ಪರಿಕರಗಳು ಸತೀಶ್ ಪುರಪ್ಪೆಮನೆ ಅವರ ಕೌಶಲವನ್ನು ಹೇಳುತ್ತಿದ್ದವು.

ಅದ್ಭುತವಾದ ಬೆಳಕಿನ ವಿನ್ಯಾಸ ನಾಟಕದ ಪ್ಲಸ್ ಪಾಯಿಂಟ್. ವಾಮನ ಮಾಸ್ತರರ ‘ವೀರ ಅಭಿಮನ್ಯು’ವನ್ನು ಆಧಾರವಾಗಿಟ್ಟುಕೊಂಡು ‘ಮಹಾಭಾರತ ಪದ್ಮವ್ಯೂಹ’ ನಾಟಕವನ್ನು ಅಭಿನಯಿಸಲಾಯಿತು. ಸಾಲಿಯಾನ್ ಉಮೇಶ್ ನಾರಾಯಣ ಹಾಗೂ ರಘು ಪುರಪ್ಪೆಮನೆಯವರ ನಿರ್ದೇಶನದಲ್ಲಿ ಮೂಡಿಬಂದ ನಾಟಕ ನೆನಪಿನಲ್ಲಿ ಉಳಿಯುವಂತಿತ್ತು. ವಿಶೇಷವೆಂದರೆ ಕೇವಲ ಆರೇಳು ಜನ ನಟ ನಟಿಯರಿದ್ದ ಈ ತಂಡ ಕೌರವ, ಪಾಂಡವರ ಸಂಖ್ಯಾಬಲದ ಕೊರತೆ ಕಾಣದಂತೆ ತೂಗಿಸಿಕೊಂಡು ಹೋಯಿತು. ಮುಂಬರುವ ದಿನಗಳಲ್ಲಿ ತಮ್ಮ ಸದಸ್ಯರನ್ನು ಹೆಚ್ಚಿಸಿಕೊಂಡು ಇನ್ನೂ ಹೆಚ್ಚಿನ ರಂಗಪ್ರಯೋಗಗಳಲ್ಲಿ ತಂಡ ತೊಡಗಿಕೊಳ್ಳಲಿ ಎಂಬ ಹಾರೈಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT