ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡಕ್ಕೆ ‘ಹೊಸ ಬರಹ’ಭರವಸೆಗಳೂ ಮಿತಿಗಳೂ...

Last Updated 27 ಅಕ್ಟೋಬರ್ 2019, 7:47 IST
ಅಕ್ಷರ ಗಾತ್ರ

ಇಂದು ಬಳಸುತ್ತಿರುವ ಕನ್ನಡ ಬರಹದ ಸ್ವರೂಪವು ದಲಿತರೂ ಸೇರಿದಂತೆ ಕೆಲ ವರ್ಗಗಳ ಜನರನ್ನು ಬರಹದ ಕಲಿಕೆಯಿಂದ ದೂರ ಉಳಿಯುವಂತೆ ಮಾಡಿದೆ. ಯಾಕೆಂದರೆ ಈ ಬರಹ ಮತ್ತು ಸಾಮಾನ್ಯ ಜನರ ಮಾತಿನ ನಡುವೆ ದಿನದಿಂದ ದಿನಕ್ಕೆ ಅಂತರ ಹೆಚ್ಚುತ್ತಿದೆ. ಅವರು ಮಾತಿನಲ್ಲಿ ಬಳಸುವ ಪದಗಳಿಗೂ, ಬರಹಗಳಲ್ಲಿ ಬಳಕೆಯಾಗುತ್ತಿರುವ ಪದಗಳಿಗೂ ಅಂತರ ಹೆಚ್ಚುತ್ತಿದೆ. ಇದರಿಂದ ಕನ್ನಡ ಕಲಿಯುವ ಕೆಲಸ ಜಟಿಲವಾಗುತ್ತಿದೆ ಎಂದು ಭಾವಿಸಿದ ಭಾಷಾ ವಿದ್ವಾಂಸ ಡಿ.ಎನ್.
ಶಂಕರ ಬಟ್ಟರು ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಕನ್ನಡದಲ್ಲಿ ‘ಹೊಸ ಬರಹ’ವನ್ನು ರೂಪಿಸುವಲ್ಲಿ ನಿರತರಾಗಿದ್ದಾರೆ.

ಕನ್ನಡ ಭಾಷೆಯ ಚರಿತ್ರೆಯನ್ನು ಇದುವರೆಗೆ ಕಟ್ಟಲಾದ ಮಾದರಿಗಿಂತ ತೀರ ಭಿನ್ನವಾಗಿ ಅವರು ಕಟ್ಟಲು ಪ್ರಯತ್ನಿಸಿದ್ದಾರೆ. ಲಿಖಿತ ಆಧಾರಗಳಿಂದಷ್ಟೇ ಒಂದು ಭಾಷೆಯ ಚರಿತ್ರೆ ನಿರೂಪಿಸಲು ಸಾಧ್ಯ ಎಂದು ತಿಳಿದಿದ್ದ ನಮಗೆ ಕನ್ನಡ ಭಾಷೆಯ ಆಂತರಿಕ ರಚನೆಯ ಮೂಲಕವೇ ಅದರ ಚರಿತ್ರೆ ಕಟ್ಟಲು ಸಾಧ್ಯ ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ಕನ್ನಡ ಭಾಷೆಯ ಚರಿತ್ರೆ ರಚಿಸುವಲ್ಲಿ ನಾವು ಹೊಸ ಪ್ರಶ್ನೆಗಳನ್ನು ಎತ್ತಿಕೊಂಡಿಲ್ಲ. ಆದರೆ, ಶಂಕರ ಬಟ್ಟರು ಹಾಗೆ ಸುಮ್ಮನೆ ಕೂರಲಿಲ್ಲ ಎನ್ನುತ್ತಾರೆ ಕೆ.ವಿ. ನಾರಾಯಣ. ಬಟ್ಟರು ಭಾಷೆಯ ಚರಿತ್ರೆ ರಚಿಸುವಾಗ ಲಿಖಿತ ದಾಖಲೆಗಳನ್ನು ಮಾತ್ರ ಅವಲಂಬಿಸದೆ ಇಂದಿನ ಆಡುರೂಪಗಳನ್ನು ಕೂಡ ಪರಿಗಣಿಸುವುದು ವಿಶಿಷ್ಟವಾದದ್ದು.

ಕನ್ನಡ ಭಾಷೆಗೆ ಸಂಬಂಧಿಸಿದಂತೆ ಅವರು ಹಲವು ಕೃತಿಗಳನ್ನು ಪ್ರಕಟಿಸಿದ್ದಾರೆ. ಅವುಗಳೆಂದರೆ ‘ಭಾಷೆಯ ಬಗೆಗೆ ನೀವೇನು ಬಲ್ಲಿರಿ?’, ‘ಕನ್ನಡ ಭಾಷೆಯ ಕಲ್ಪಿತ ಚರಿತ್ರೆ’, ‘ಕನ್ನಡ ಪದಗಳ ಒಳರಚನೆ’, ‘ಕನ್ನಡದ ಸರ್ವನಾಮಗಳು’, ‘ಕನ್ನಡಕ್ಕೇ ಬೇಕು ಕನ್ನಡದ್ದೇ ವ್ಯಾಕರಣ’, ‘ಕನ್ನಡ ವಾಕ್ಯಗಳ ಒಳರಚನೆ’, ‘ಕನ್ನಡ ಬರಹವನ್ನು ಸರಿಪಡಿಸೋಣ!’, ‘ನಿಜಕ್ಕೂ ಹಳೆಗನ್ನಡ ವ್ಯಾಕರಣ ಎಂತಹದು?’, ‘ಕನ್ನಡ ನುಡಿ ನಡೆದು ಬಂದ ದಾರಿ’, ‘ಇಂಗ್ಲಿಷ್‌ ಪದಗಳಿಗೆ ಕನ್ನಡದ್ದೇ ಪದಗಳು’.

‘ನಾನು ಜೇನುಗೂಡಿಗೆ ಕೈ ಇಟ್ಟಿದ್ದೇನೆ; ಜೇನು ಎದ್ದಿದೆ; ಅದು ನನ್ನನ್ನು ಕಡಿದರೆ ಚಿಂತೆ ಇಲ್ಲ. ನಮ್ಮ ಜನಕ್ಕೆ ಜೇನುತುಪ್ಪ ದೊರಕಿದರೆ ಸಾಕು’ –ಇದು ‘ಕನ್ನಡ ಬರಹವನ್ನು ಸರಿಪಡಿಸೋಣ’ ಪುಸ್ತಕದ ಮುನ್ನುಡಿಯಲ್ಲಿ ಬಟ್ಟರು ತಮಗೆ ಅನ್ವಯಿಸಿಕೊಂಡು ಉದ್ಧರಿಸುವ ಎ.ಆರ್. ಕೃಷ್ಣಶಾಸ್ತ್ರಿಅವರ ಮಾತು. ಇಲ್ಲಿಯೇ ಬಟ್ಟರು ತಮ್ಮ ಪುಸ್ತಕವೊಂದನ್ನು ಓದಿದ ಮಿತ್ರರೊಬ್ಬರು ತಮ್ಮನ್ನು ‘ಸಂಸ್ಕೃತ ದ್ವೇಷಿ’ ಎಂದು ಜರಿದಿದ್ದನ್ನು ನೆನಪಿಸಿಕೊಳ್ಳುತ್ತಾರೆ.

ಇಲ್ಲಿ ಜೇನುಗೂಡು ಒಂದೇ ಆದರೂ ‘ತುಪ್ಪ ಕೊಡುವ ಜೇನು’ ಮತ್ತು ‘ಕಚ್ಚುವ ಜೇನು’ಗಳು ಬೇರೆ ಬೇರೆಯಾಗಿವೆ. ಇಲ್ಲಿ ‘ತುಪ್ಪ ಕೊಡುವ ಜೇನು’ ಸಂಸ್ಕೃತದ ಹೊರೆಯಿಂದ ಬಿಡಿಸಿಕೊಂಡ ಕನ್ನಡ ಎಂದೂ, ‘ಕಚ್ಚುವ ಜೇನು’ ಸಂಸ್ಕೃತದ ಹೊರೆಯಿಂದ ಕನ್ನಡವನ್ನು ಬಿಡಿಸಲೊಪ್ಪದ ಸಂಸ್ಕೃತಪ್ರೇಮಿಗಳು ಎಂದೂ ಮೇಲ್ನೋಟಕ್ಕೆ ಗ್ರಹಿಸಬಹುದಾಗಿದೆ.

ಯಾವುದೇ ಭಾಷೆಗೆ ಚೈತನ್ಯ ಕೊಡುವ ಶಕ್ತಿ ಅಥವಾ ಕಚ್ಚುವ ಗುಣ ಪ್ರಾಪ್ತವಾಗುವುದು ಆ ಭಾಷೆ ಯಾರ ಕೈಯಲ್ಲಿ ಯಾವ ರೀತಿಯ ಹತಾರವಾಗಿದೆ ಎಂಬುದರ ಮೇಲೆ. ‘ಸಂಸ್ಕೃತ ವಾಙ್ಮಯವನ್ನು ಜಡವೂ, ಸಾಂಪ್ರದಾಯಿಕವೂ ಆದ ದೃಷ್ಟಿಕೋನಕ್ಕಿಂತ ಭಿನ್ನವಾಗಿ, ಜನಪರ ಆಶೋತ್ತರಗಳಲ್ಲಿ ಅಧ್ಯಯನ ಮಾಡುವವರಿದ್ದರೆ, ಅವರನ್ನು ಒಂಟಿಯಾಗಿಸಲಾಗುತ್ತದೆ. ಸಂಸ್ಕೃತಿ ಚಿಂತಕ ಶಂಬಾ ಜೋಶಿಯವರ ವಿಷಯದಲ್ಲಿ ಈ ರಾಜಕಾರಣ ಮಾಡಲಾಯಿತು. ಈಗ ಸಂಸ್ಕೃತದ ಯಜಮಾನಿಕೆಯಿಂದ ಕನ್ನಡವನ್ನು ಹೊರತಂದು ಅದರ ಸ್ವಂತಿಕೆ ಶೋಧಿಸುತ್ತಿರುವ ಸಂಸ್ಕೃತ ಮತ್ತು ಕನ್ನಡ ವಿದ್ವಾಂಸ ಬಟ್ಟರ ವಿಷಯದಲ್ಲೂ ಸೂಕ್ಷ್ಮವಾದ ಹಲ್ಲೆಗಳನ್ನು ಆಯೋಜಿಸಲಾಗುತ್ತದೆ.’ ಇಲ್ಲಿ ಈ ಸೂಕ್ಷ್ಮವಾದ ಹಲ್ಲೆಗಳನ್ನು ಮಾಡುತ್ತಿರುವುದು ಬಟ್ಟರು ಹೇಳುವ ಕಚ್ಚುವ ಜೇನುಗಳು. ಕನ್ನಡ ಮತ್ತು ಸಂಸ್ಕೃತ ಸಂಬಂಧ ಕುರಿತಂತೆ ಭಟ್ಟರು ಆಳವಾಗಿ ಚಿಂತಿಸಿದ್ದಾರೆ. ಅವರ ಇಂತಹ ಚಿಂತನೆಗಳನ್ನು ಹೀಗೆ ಸಂಗ್ರಹವಾಗಿ ನೋಡಬಹುದು.

1 ಕನ್ನಡದ ಮೂಲ ಸಂಸ್ಕೃತವಲ್ಲ. ಆದರೆ, ಸಂಸ್ಕೃತದಿಂದ ಅನೇಕ ಅಕ್ಷರಗಳು ಮತ್ತು ಪದಗಳು ಕನ್ನಡಕ್ಕೆ ಬಂದಿವೆ. ಕೆಲವು ವಿಶಿಷ್ಟವಾದ ಚಾರಿತ್ರಿಕ ಮತ್ತು ಸಾಮಾಜಿಕ ಕಾರಣಗಳಿಂದಾಗಿ ಇದುವರೆಗೆ ಕನ್ನಡ ಬರಹ ಸಂಸ್ಕೃತವನ್ನು ಅವಲಂಬಿಸಿತ್ತು. ಹಾಗೆ ಅವಲಂಬಿಸಬೇಕೆಂದೇನೂ ಇಲ್ಲ. ಸ್ವತಂತ್ರವಾಗಿ ತನ್ನ ಕಾಲ ಮೇಲೆ ನಿಲ್ಲುವ ಶಕ್ತಿ ಕನ್ನಡಕ್ಕಿದೆ.

2 ಸಂಸ್ಕೃತದಿಂದ ಬಂದ ಅಕ್ಷರ ಮತ್ತು ಪದಗಳು ಕನ್ನಡಕ್ಕೆ ಲಾಭ ತಂದಿರುವುದಕ್ಕಿಂತ ಹೆಚ್ಚು ಹೊರೆಯಾಗಿ ಪರಿಣಮಿಸಿವೆ. ಕನ್ನಡದವೇ ಆದ ಪದಗಳನ್ನು ಬರೆಯಲು 31 ಅಕ್ಷರ ಸಾಕು. ಆದರೆ, ಈಗ ಬಳಸುತ್ತಿರುವುದು 51. ಈ ಹೆಚ್ಚುವರಿ ಅಕ್ಷರಗಳು ಸಂಸ್ಕೃತದಿಂದ ಬಂದಿರುವುವು. ಇದನ್ನು ನಿವಾರಿಸಿಕೊಳ್ಳಲು ಎರಡು ಬಗೆಯ ಕ್ರಾಂತಿಯಾಗಬೇಕು. ಒಂದನೆಯದು ಕನ್ನಡಕ್ಕೆ ಬೇಕಾಗಿರುವ ಅಕ್ಷರಗಳನ್ನು ಮಾತ್ರವೇ ಬಳಸುವಂತಹ ಲಿಪಿಕ್ರಾಂತಿ. ಎರಡನೆಯದು ಸಾಧ್ಯವಿರುವಲ್ಲೆಲ್ಲ ಕನ್ನಡದವೇ ಆದ ಪದಗಳನ್ನು ಬಳಸಲು ತೊಡಗುವ ಪದಕ್ರಾಂತಿ.

ಕನ್ನಡಕ್ಕೊಂದು ‘ಹೊಸ ಬರಹ’ ಹುಡುಕುವ ಹಂಬಲಕ್ಕೆ ತನ್ನದೇ ಆದ ಚರಿತ್ರೆಯಿದೆ. ಈ ಹಂಬಲ 12ನೇ ಶತಮಾನದ ವಚನಕಾರರಿಂದ ಆರಂಭವಾಗಿ ನಯಸೇನ, ಅಂಡಯ್ಯ, ಕೇಶಿರಾಜ, ಮುದ್ದಣ ಅವರನ್ನು ಹಾದು ಬಿ.ಎಂ.ಶ್ರೀರವರೆಗೆ ಹರಿದು ಬಂದಿದೆ. ಇಂತಹ ಪರಂಪರೆ ನಮ್ಮ ಬೆನ್ನಿಗಿರುವುದರಿಂದಲೇ ಆಧುನಿಕ ಸಾಹಿತ್ಯದ ವರ್ತಮಾನದಲ್ಲೂ ‘ವಚನಕಾರರ ನಂತರ ಕನ್ನಡದ ಹಿತವನ್ನು ತಾತ್ವಿಕ ನೆಲೆಯಲ್ಲಿ ನೋಡಿ ಪರ್ಯಾಯ ಚಿಂತನೆಯ ದಿಟ್ಟತನ ತೋರಿಸಲು ನಮ್ಮ ಪ್ರಾಚೀನ-ಮಧ್ಯಕಾಲೀನ ಕವಿಗಳಿಗೆ ಸಾಧ್ಯವಾದಂತೆ ಈ ಆಧುನಿಕರಿಗೆ ಯಾಕೆ ಸಾಧ್ಯವಾಗುತ್ತಿಲ್ಲ’ ಎಂಬ ತಾತ್ವಿಕ ಪ್ರಶ್ನೆ ಮೂಡಿದೆ. ಈ ತಾತ್ವಿಕ ಪ್ರಶ್ನೆಯ ಲಿಪಿಯ ಆಯಾಮಕ್ಕೆ ಉತ್ತರಿಸುವ ಜವಾಬ್ದಾರಿಯನ್ನು ಶಂಕರ ಭಟ್ಟರು ತಮ್ಮ ಹೆಗಲಿಗೇರಿಸಿಕೊಂಡಂತೆ ಕಾಣುತ್ತದೆ.

1915ರಲ್ಲಿ ನಡೆದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಎಚ್.ವಿ. ನಂಜುಂಡಯ್ಯ ಅವರು ‘ಈಗ ಪ್ರಕಟವಾಗುತ್ತಿರುವ ಗ್ರಂಥಗಳಲ್ಲಿ ಸಂಸ್ಕೃತವು ವಿಶೇಷವಾಗಿ ಬೆರೆತಿರುವುದರಿಂದ ಸಾಮಾನ್ಯ ಜನರಿಗೆ ಇಂತಹ ಗ್ರಂಥಗಳಿಂದ ಆಗುವ ಸಹಾಯವು ಎಲ್ಲಿಯೋ ಬಹು ಅಲ್ಪವಾಗಿದೆ’ ಎಂದು ಕನ್ನಡದ ಮೇಲಿನ ಸಂಸ್ಕೃತದ ಹೊರೆಯನ್ನು ಇಳಿಸಬೇಕಾದ ತುರ್ತನ್ನು ಗುರುತಿಸಿದ್ದರು. ಗೋವಿಂದ ಪೈ ಅವರೂ ಕೂಡ ಕನ್ನಡದಲ್ಲಿ ಹೊಸ ಶಬ್ದಗಳನ್ನು ಸೃಷ್ಟಿಸಬೇಕಾದ ಅಗತ್ಯವನ್ನು ಮನಗಂಡಿದ್ದರು. ಬಿ.ಎಂ.ಶ್ರೀ ಅವರೂ ಸಂಸ್ಕೃತ ಕನ್ನಡಕ್ಕೆ ಹೊರೆ ಎಂದೇ ಭಾವಿಸಿದ್ದರು. ಹಾಗೆ ನೋಡಿದರೆ ಸಂಸ್ಕೃತದ ಹಂಗಿನಿಂದ ತಪ್ಪಿಸಿ, ಕನ್ನಡ ಕರ್ನಾಟಕಗಳ ಕಥನವನ್ನು ದ್ರಾವಿಡ ಚೌಕಟ್ಟುಗಳ ಮೂಲಕ ನೋಡಲು ಮೊದಲು ಯತ್ನಿಸಿದವರು ಬಿ.ಎಂ.ಶ್ರೀಯವರೇ.

ಬಿ.ಎಂ.ಶ್ರೀ ಅವರು ಆರಂಭಿಸಿದ ಕನ್ನಡ- ಸಂಸ್ಕೃತ ವಾಗ್ವಾದವನ್ನು ಬೇರೊಂದು ಪರಿಯಲ್ಲಿ ಮುಂದುವರಿಸುತ್ತಿರುವಂತೆ ಕಾಣುವ ಭಟ್ಟರು ವ್ಯಾಕರಣ, ವಾಕ್ಯರಚನೆ, ಪದ ರಚನೆಗಳಲ್ಲಿ ಸಂಸ್ಕೃತದ ಯಜಮಾನಿಕೆಯನ್ನು ಪ್ರಶ್ನಿಸುತ್ತಿದ್ದಾರೆ. ‘ಬೀದಿಯಲ್ಲಿರುವ ಆಡುನುಡಿಯ ಪರವಾದ ಅವರ ವಾದಗಳು, ದಲಿತ- ಕೆಳಜಾತಿಗಳ ಭಾಷಿಕ ಅಭಿವ್ಯಕ್ತಿಗಳ ಪರವಾಗಿಯೂ ಇವೆ. ಕನ್ನಡದಲ್ಲಿ ಭಾಷೆಯ ವಾಗ್ವಾದವು ಸಾಮಾಜಿಕ ರಾಜಕೀಯ ಆಯಾಮವನ್ನು ಪಡೆಯುವುದು ಸಾಮಾನ್ಯವಾಗಿದೆ.

ಭಟ್ಟರು ಕನ್ನಡ ನುಡಿಯನ್ನು ಜನರು ಆಡುರೂಪಕ್ಕೆ ಸಮೀಪವಿರುವ ಹಾಗೆಯೇ ಬರೆಯಬೇಕೆಂದೂ ಸಂಸ್ಕೃತದವರು ಉಚ್ಚರಿಸುವ ರೀತಿಯಲ್ಲಿ ಬರೆಯಬಾರದೆಂದೂ ಘೋಷಿಸಿ, ತಮ್ಮ ಬರೆಹದ ರೀತಿಯನ್ನೇ ಬದಲಿಸಿಕೊಳ್ಳುತ್ತಿದ್ದಾರೆ. ಅವರ ಈ ಉಪಕ್ರಮವು ಕನ್ನಡ ಭಾಷೆಯನ್ನು ಸಂಸ್ಕೃತ ಶಬ್ದಗಳ ಹಂಗಿಲ್ಲದೆ ರೂಪಿಸುವತ್ತ ಕರೆದುಕೊಂಡು ಹೋಗುತ್ತಿದೆ. ಇದು ಶ್ರೀಯವರು ‘ಕನ್ನಡ ಬಾವುಟ’ದಲ್ಲಿ ಕನ್ನಡ ಬರಹವನ್ನು ಸುಧಾರಿಸಲು ಮಾಡಿದ ಪ್ರಯೋಗವನ್ನೂ ನೆನಪಿಸುತ್ತಿದೆ ಎಂದು ರಹಮತ್ ತರೀಕೆರೆ ಅವರು ಅಭಿಪ್ರಾಯಪಡುತ್ತಾರೆ.

ಶಂಬಾ ಜೋಶಿ ಅವರು ಕೂಡ ಶಂಕರ ಭಟ್ಟರಂತೆ ಸಾಹಿತ್ಯದೊಳಗಿನ ಗ್ರಂಥಸ್ಥ ರೂಪಗಳಿಗಿಂತ ನಿತ್ಯ ಬದುಕಿನ ಆಡುಮಾತುಗಳೆ ಹೆಚ್ಚು ನಂಬಲಿಕ್ಕೆ ಅರ್ಹವಾದುದು, ಏಕೆಂದರೆ ಅದು ಮೂಲರೂಪಕ್ಕೆ ಹೆಚ್ಚು ಹತ್ತಿರದಲ್ಲಿರುತ್ತದೆ ಎಂದು ಪ್ರತಿಪಾದಿಸುತ್ತಿದ್ದರು.

ನಗರಗಳಲ್ಲಿ ವಾಸಿಸುವ ಶ್ರೀಮಂತ ಮತ್ತು ಮಧ್ಯಮವರ್ಗಕ್ಕೆ ಕನ್ನಡ ಬೇಡವಾಗಿದೆ. ಯಾಕೆಂದರೆ ಬರಹದ ಮೂಲಕ ಪಡೆಯಬಹುದಾದ ಎಲ್ಲ ಪ್ರಯೋಜನಗಳನ್ನು ಇಂಗ್ಲಿಷಿನ ಮೂಲಕವೇ ತಾವು ಪಡೆಯಬಲ್ಲೆವು ಎಂದು ನಂಬಿದ್ದಾರೆ. ಉಳಿದವರೂ ಇದೇ ಹಾದಿ ಹಿಡಿದರೆ ಕನ್ನಡ ಭಾಷೆ ನಾಶವಾಗುತ್ತದೆ. ಕನ್ನಡ ಕೇವಲ ಕೆಲವೇ ವಿದ್ವಾಂಸರ ಅಗತ್ಯವಾಗಿ ಉಳಿಯುತ್ತದೆ. ಹಾಗಾಗದಂತೆ ತಡೆಯಲು ಮಡಿವಂತಿಕೆಯನ್ನು ಕೈಬಿಟ್ಟು ಬರಹಕ್ಕೆ ಜೀವಂತಿಕೆ ತುಂಬುವ ಮೂಲಕ ಅದು ಎಲ್ಲರಿಗೂ ಬೇಕಾಗುವ ಹಾಗೆ ಮಾಡುವುದು ‘ಹೊಸ ಬರಹ’ವನ್ನು ರೂಪಿಸುವ ಹಿಂದಿನ ತನ್ನ ಉದ್ದೇಶವೆಂದು ಭಟ್ಟರು ಹೇಳಿದ್ದಾರೆ. ಕನ್ನಡ ಬರಹದಲ್ಲಿ ಸಂಸ್ಕೃತ ಪದಗಳ ಬಳಕೆ ಕುರಿತು ಅವರು ಎರಡು ನಿರ್ಣಯಗಳಿಗೆ ಬರುತ್ತಾರೆ.

1. ಸಂಸ್ಕೃತ ಪದಗಳ ಬಳಕೆಯಿಂದಾಗಿ ನಾವು ತಿಳಿದಂತೆ ಖಚಿತಾರ್ಥ ಒದಗುವುದಿಲ್ಲ. ಆದರೆ ಖಚಿತವಾಗಿದೆ ಎಂದು ನಾವು ನಂಬಿರುತ್ತೇವೆ.
2. ಕನ್ನಡದ ಪದಗಳನ್ನು ಉಳಿಸಿ ಹೊಸ ಪದಗಳನ್ನು ಕಟ್ಟುವುದು ಕಷ್ಟ. ಆದರೂ ಅಸಾಧ್ಯವಲ್ಲ. ಕನ್ನಡದ ಪ್ರಕೃತಿಗಳನ್ನು, ಹೊಸ ಪದಗಳನ್ನು ನಿರ್ಮಿಸಲು ಸಾಧ್ಯ.
ಲಿಪಿಕ್ರಾಂತಿಯಲ್ಲಿ ಭಟ್ಟರು ಸೂಚಿಸುವ ಮಹಾಪ್ರಾಣಾಕ್ಷರಗಳನ್ನು ಕೈಬಿಡುವುದಕ್ಕೆ ಪರ ಮತ್ತು ವಿರೋಧದ ಎರಡೂ ಬಗೆಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಮಹಾಪ್ರಾಣಾಕ್ಷರಗಳು ಇರುವುದು ಕನ್ನಡ ಲಿಪಿ ವ್ಯವಸ್ಥೆಯ ಉದಾರವಾದಿ ಗುಣವೆಂದು ಅದನ್ನು ಮುಂದುವರಿಸಿಕೊಂಡು ಹೋಗುವ ಬಗ್ಗೆ ಸುಬ್ಬಣ್ಣ ಒಲವು ತೋರಿದರೆ, ಚಿದಾನಂದಮೂರ್ತಿ ಅವರು ಅವುಗಳನ್ನು ಉದ್ದೇಶಪೂರ್ವಕವಾಗಿ ಕೈಬಿಡುವುದನ್ನು ಕಟುವಾಗಿ ವಿರೋಧಿಸುತ್ತಾರೆ. ಈ ರೀತಿಯ ವಿರೋಧಕ್ಕೆ ಕಾರಣವಾಗಿರುವುದು ಪಾರಂಪರಿಕ ನೆಲೆಯ ಅಧ್ಯಯನಗಳು ಹೊಸ ಪ್ರಶ್ನೆಗಳನ್ನು ಎದುರಿಸದಿರುವುದು ಮತ್ತು ಹೊಸ ಚಿಂತನೆಗಳನ್ನು ತಾತ್ವಿಕವಾಗಿ ಮೈಮೇಲೆ ಹಾಕಿಕೊಳ್ಳದಿರುವುದು ಎಂದು ವಿಶ್ಲೇಷಿಸುವ ಕೆ.ವಿ. ನಾರಾಯಣ ಅವರು ಮಹಾಪ್ರಾಣಗಳ ಬದಲು ಅಲ್ಪಪ್ರಾಣ ಬರೆದರೆ ಅರ್ಥದ ನೆಲೆಯಲ್ಲಿ ಗೊಂದಲ ಉಂಟಾಗಬಹುದಾದ ಕನ್ನಡ ಬರಹದಲ್ಲಿ ಬಳಕೆಯಾಗುವಂತಹ ಪದಗಳ ಸಂಖ್ಯೆ ಇಪ್ಪತ್ತೊಂದನ್ನು ದಾಟುವುದಿಲ್ಲ. ಮಹಾಪ್ರಾಣಗಳನ್ನು ಕೈ ಬಿಡುವುದರಿಂದ ಕನ್ನಡಕ್ಕೆ ಕುತ್ತೇನೂ ಬಂದಿಲ್ಲ ಎಂದು ಭಟ್ಟರ ನಿಲುವನ್ನು ಸಮರ್ಥಿಸುತ್ತಾರೆ. ಭಟ್ಟರು ಆರಂಭಿಸಿರುವ ಲಿಪಿಕ್ರಾಂತಿ ಮತ್ತು ಪದಕ್ರಾಂತಿಯನ್ನು ಒಪ್ಪಿರುವ ಕನ್ನಡ ಸಾಹಿತ್ಯದ ಒಂದು ವಲಯ ಅದನ್ನು ಬರಹದಲ್ಲಿ ಅಳವಡಿಸಿಕೊಂಡಿದೆ.

ಪ್ರಮಾಣ ಭಾಷೆಯನ್ನು ತ್ಯಜಿಸಿ ಪ್ರಾದೇಶಿಕ ಪ್ರಭೇದಗಳನ್ನು ಪಠ್ಯಪುಸ್ತಕದಲ್ಲಿ ಅಳವಡಿಸಿಕೊಳ್ಳುವಾಗ ಒಂದು ಸಮಸ್ಯೆ ಎದುರಾಗುತ್ತದೆ. ಒಂದು ತರಗತಿಯಲ್ಲಿ ಕುಳಿತಿರುವ ಸಮಾಜದ ವಿವಿಧ ಸ್ತರದಿಂದ ಬಂದ ಮಕ್ಕಳು ಬೇರೆ ಬೇರೆ ಭಾಷಾ ಪ್ರಭೇದಗಳನ್ನು ಬಳಸುತ್ತಿರುತ್ತಾರೆ. ಹಾಗೇ ಒಂದೇ ಪಠ್ಯವನ್ನು ಇಡೀ ನಾಡಿನಲ್ಲಿ ಬಳಸುತ್ತಿರುವ ಸಂದರ್ಭದಲ್ಲಿ ಅದನ್ನು ಅಭ್ಯಾಸ ಮಾಡುತ್ತಿರುವ ಬೇರೆ ಬೇರೆ ಪ್ರದೇಶದ ಮಕ್ಕಳು ಒಂದೇ ಭಾಷೆಯ ಬೇರೆ ಬೇರೆ ಪ್ರಭೇದಗಳನ್ನು ಆಡುತ್ತಿರುತ್ತಾರೆ. ಇದು ಕಲಿಕೆಯಲ್ಲಿ ಯಾವ ಪರಿಣಾಮವನ್ನು ಬೀರುತ್ತದೆ ಎಂಬ ಬಗೆಗೆ ಪಠ್ಯಪುಸ್ತಕ ರಚನಾಕಾರರಾಗಲಿ, ಶಿಕ್ಷಣ ತಜ್ಞರಾಗಲಿ ಚಿಂತಿಸಲಿಲ್ಲ.

ಕರ್ನಾಟಕದಲ್ಲಿ ಇಂತಹ ಪರಿಸ್ಥಿತಿ ಇರುವುದು ಸ್ಪಷ್ಟವಾಗಿದೆ. ನಮ್ಮ ಶಾಲಾ ಶಿಕ್ಷಣವು ಈ ಸಮಸ್ಯೆಯನ್ನು ದಟ್ಟವಾಗಿ ಎದುರಿಸಿಲ್ಲ. ಅಂದರೆ ಭಾಷಾ ಪಠ್ಯಗಳಲ್ಲಿ ಹೀಗೆ ಪ್ರಭೇದಗಳನ್ನು ಅಳವಡಿಸಿ ಬಳಸಿಕೊಂಡುದರ ಉದ್ದೇಶವೇನಿದ್ದರೂ ಅದು ಯಶಸ್ಸು ಕಾಣುವುದು ಸುಲಭವಲ್ಲ ಎನ್ನುವುದು ಇದರಿಂದ ವ್ಯಕ್ತವಾಗುತ್ತದೆ. ಈ ಸಮಸ್ಯೆ ಭಟ್ಟರು ರಚಿಸುತ್ತಿರುವ ‘ಹೊಸ ಬರಹ’ಕ್ಕೂ ಎದುರಾಗಬಹುದು.

ಆಡುಮಾತನ್ನು ಆಧರಿಸಿ ರಚಿಸುವ ‘ಹೊಸ ಬರಹ’ ಸಮಾಜದ ಯಾವ ಸ್ತರದ ಮಕ್ಕಳಿಗೆ ಸೂಕ್ತವಾಗುತ್ತದೆ? ಬೇರೆ ಆಡುಮಾತಿನವರಿಗೆ ಈ ‘ಹೊಸ ಬರಹ’ವೂ ಒಂದು ಪ್ರಮಾಣಿತ ಕನ್ನಡ ಆಗುವುದಿಲ್ಲವೇ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾಗಿದೆ.

ಆಡುನುಡಿಯಂತೆ ಬರಹದ ಭಾಷೆಯೂ ಇದ್ದರಷ್ಟೇ ಸಾಹಿತ್ಯದಲ್ಲಿ ಜೀವಂತಿಕೆ ಸಾಧ್ಯ ಎನ್ನುವ ಭಟ್ಟರ ನಿಲುವನ್ನು ಸಾಹಿತ್ಯವಲಯ ಪೂರ್ಣವಾಗಿ ಒಪ್ಪಿಕೊಂಡಿಲ್ಲ. ಸಾಹಿತ್ಯವನ್ನು ಸಂವಹನಶೀಲತೆಯ ನೆಲೆಯಿಂದ ನೋಡುವ ದೃಷ್ಟಿಕೋನ ಭಟ್ಟರ ಆಡುನುಡಿ- ಸಾಹಿತ್ಯ ಕುರಿತ ಪ್ರಮೇಯದ ಬಗ್ಗೆ ಭಿನ್ನ ನಿಲುವು ತಾಳಿದೆ.
‘ತಾನು ಯಾರಿಗಾಗಿ, ಯಾಕೆ, ಹೇಗೆ ಬರೆಯಬೇಕು ಎಂಬುದರ ಬಗ್ಗೆ ಕವಿಯು ತೆಗೆದುಕೊಳ್ಳುವ ತೀರ್ಮಾನಗಳು ಖಂಡಿತವಾಗಿಯೂ ಅವನ ಬರಹದ ಭಾಷಿಕ ರೂಪವನ್ನು ತೀರ್ಮಾನಿಸುತ್ತದೆ’ ಎಂದು ಅಭಿಪ್ರಾಯಪಡುವ ಎಚ್.ಎಸ್. ರಾಘವೇಂದ್ರರಾವ್ ಅವರು ‘ದಿನನಿತ್ಯದ ವ್ಯವಹಾರದಲ್ಲಿ ಕನ್ನಡ -ಸಂಸ್ಕೃತಗಳ ಯೋಜನೆಗೂ, ಕಾವ್ಯ ಭಾಷೆಯಲ್ಲಿ ಆಗುವ ಅಂಥದೇ ಸಂಯೋಜನೆಗೂ ಇರುವ ವ್ಯತ್ಯಾಸ. ನಿತ್ಯ ವ್ಯವಹಾರದಲ್ಲಿ ನಿರುದ್ದೇಶವೂ, ನಿಯೋಗರಹಿತವೂ ಆಗಿರಬಹುದಾದ ಸಂಸ್ಕೃತದ ಬಳಕೆಯು ಕವಿತೆಯ ಚೌಕಟ್ಟಿನೊಳಗೆ, ಕೆಲವು ಖಚಿತವಾದ ಕಲಾತ್ಮಕವಾದ ಉದ್ದೇಶಗಳನ್ನು ಹೊಂದಿರುತ್ತದೆ.’ ಎಂದು ಸಂಸ್ಕೃತ ಬಳಕೆಯ ಹಿನ್ನೆಲೆಯಲ್ಲಿರಬಹುದಾದ ಇತರ ಉದ್ದೇಶಗಳತ್ತ ಗಮನ ಸೆಳೆಯುತ್ತಾರೆ.

ವಚನಕಾರರು, ನಯಸೇನ ಮುಂತಾದವರು ಕನ್ನಡವನ್ನು ಸಂಸ್ಕೃತದಿಂದ ಮುಕ್ತಗೊಳಿಸಬೇಕು ಎಂದು ಚಿಂತಿಸಿದ ಸಂದರ್ಭಕ್ಕೂ, 20ನೇ ಶತಮಾನದ ಆರಂಭದಲ್ಲಿ ಬಿ.ಎಂ.ಶ್ರೀ ಅವರು ಚಿಂತಿಸಿದ ಸಂದರ್ಭಕ್ಕೂ ಭಟ್ಟರು ಚಿಂತಿಸುತ್ತಿರುವ ಜಾಗತೀಕರಣೋತ್ತರ ಸಂದರ್ಭಕ್ಕೂ ಮಹತ್ತರ ವ್ಯತ್ಯಾಸಗಳಿವೆ. ವಚನಕಾರರು, ನಯಸೇನರ ಕಾಲಕ್ಕೆ ಕನ್ನಡದ ಎದುರು ಪ್ರಭುತ್ವದ ಭಾಷೆಯಾಗಿದ್ದುದು ಸಂಸ್ಕೃತ. ಶ್ರೀಯವರ ಕಾಲಕ್ಕೆ ಪ್ರಭುತ್ವದ ಭಾಷೆಯಾಗಿ ಇಂಗ್ಲಿಷ್‌ ಬದಲಾಗಿದ್ದರೂ ಕನ್ನಡದ ಮೇಲಿನ ಸಂಸ್ಕೃತದ ಯಜಮಾನ್ಯ ಎಂದಿನಂತೆ ಮುಂದುವರಿದಿತ್ತು. ಇವರೆಲ್ಲರೂ ಕನ್ನಡವನ್ನು ಸಂಸ್ಕೃತದ ಹೊರೆಯಿಂದ ಬಿಡಿಸಲು ಮುಂದಾದದ್ದು ಅತ್ಯಂತ ಸಹಜವಾಗಿದೆ. ಆದರೆ ಶಂಕರ ಭಟ್ಟರ ವರ್ತಮಾನದಲ್ಲಿ ಕನ್ನಡಕ್ಕೆ ಹೊರೆ ಎನಿಸುತ್ತಿರುವುದು ಸರ್ವವ್ಯಾಪಿಯಾಗಿರುವ ಇಂಗ್ಲಿಷ್‌ ಭಾಷೆಯಾಗಿದೆ.

ಸಂಸ್ಕೃತದಿಂದ ಕನ್ನಡದ ಬೆಳವಣಿಗೆಗೆ ಆಗುವ ತೊಡಕುಗಳ ಬಗ್ಗೆ ಗಂಭೀರವಾಗಿ ಚಿಂತಿಸುವ ಭಟ್ಟರು ಇಂಗ್ಲಿಷ್‌ ಭಾಷೆ ಕನ್ನಡದ ಮೇಲೆ ಉಂಟುಮಾಡಿರುವ ಪರಿಣಾಮಗಳ ಬಗ್ಗೆ ಅಷ್ಟು ತೀವ್ರವಾಗಿ ಚಿಂತಿಸುವುದಿಲ್ಲ. ಜಾಗತೀಕರಣಪೂರ್ವದಲ್ಲಿ ಸಂಸ್ಕೃತ ಕನ್ನಡದ ಮೇಲೆ ಮಾಡಿದ ಪರಿಣಾಮಗಳಿಗಿಂತ ಹೆಚ್ಚಿನ ಸ್ವರೂಪದಲ್ಲಿ ಜಾಗತಿಕರಣೋತ್ತರ ಸಂದರ್ಭದಲ್ಲಿ ಇಂಗ್ಲಿಷ್‌ ಭಾಷೆ ಕನ್ನಡದ ಮೇಲೆ ಮಾಡಿದೆ.
‘ಕನ್ನಡ ಬರಹಗಳಲ್ಲಿ ಹೆಚ್ಚು ಹೆಚ್ಚು ಸಂಸ್ಕೃತ ಪದಗಳನ್ನು ಅವುಗಳಲ್ಲಿ ಸ್ವಲ್ಪವೂ ಬದಲಾವಣೆ ಮಾಡದೆ ಹಾಗೆಯೇ ಬಳಸುವ ಪ್ರವೃತ್ತಿ ಮುಂದುವರಿದಲ್ಲಿ ಅದು ಕೊನೆಗೆ ತನ್ನದೇ ಆದ ಸೊಗಡನ್ನು ಪೂರ್ತಿ ಕಳೆದುಕೊಂಡೀತು’ ಎಂದು ಆತಂಕಪಡುವ ಭಟ್ಟರು, ಪ್ರಸ್ತುತ ಸಂಸ್ಕೃತದ ಜಾಗದಲ್ಲಿ ಇಂಗ್ಲಿಷನ್ನಿಟ್ಟು ನೋಡುವುದಿಲ್ಲ. ತಮಿಳು, ಮರಾಠಿಯಂತಹ ನೆರೆಯ ಭಾಷೆಗಳನ್ನು ಕನ್ನಡ ಭಾಷೆಯ ಶತ್ರುಸ್ಥಾನದಲ್ಲಿಟ್ಟು ವಿರೋಧಿಸುವಷ್ಟೇ ವಿರೋಧವನ್ನು ಇಂಗ್ಲಿಷಿನ ಬಗ್ಗೆ ತೋರಿಸದ ಕನ್ನಡಪರ ಹೋರಾಟಗಾರರ ನಿಲುವಿಗೂ ಈ ನಿಲುವಿಗೂ ತಾರ್ಕಿಕವಾಗಿ ಹೆಚ್ಚಿನ ಭಿನ್ನತೆಯಿಲ್ಲ.

ಭಟ್ಟರ ‘ಹೊಸ ಬರಹ’ ರೂಪಿಸುವ ಪ್ರಯತ್ನ ಕೆಲವು ಮಹತ್ವದ ಪ್ರಶ್ನೆಗಳನ್ನು ಎತ್ತುತ್ತಿದೆ. ಅವು ಹೀಗಿವೆ:
1. ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಗಳ ಕಾರಣದಿಂದ ಜನಭಾಷೆಗಳಿಗೆ ಯಜಮಾನಿಕೆಯ ಅಥವಾ ಶೋಷಿತ ಆಯಾಮಗಳು ದಕ್ಕುತ್ತವೆ. ಆದರೆ, ಈ ಭಾಷೆಗಳು ಕೊಡುಕೊಳ್ಳುವಿಕೆಯಿಂದ ಪರಸ್ಪರ ಶಕ್ತಿ ಸಂಚಯ ಮಾಡಿಕೊಳ್ಳುತ್ತಿರುತ್ತವೆ ಮತ್ತು ನಿರಂತರ ಬದಲಾಗುತ್ತಿರುತ್ತವೆ. ‘ಕನ್ನಡವು ಹೀಗೆ ನಿರಂತರವಾಗಿ ಬದಲಾಗುತ್ತಿದೆ. ಆ ಬದಲಾವಣೆಯ ಪರಿಣಾಮವಾಗಿ ಮುಂದೆಯೂ ಕನ್ನಡ ಇದ್ದೇ ಇರುತ್ತದೆ. ಮೊದಲೇ ಹೇಳಿದಂತೆ ಅದು ಗುರುತು ಹಿಡಿಯಲಾರದಷ್ಟು ಬೇರೆಯ ಆಕಾರವನ್ನು ಪಡೆಯಬಹುದು. ಹೀಗೆ ಮೂಲ ಆಕಾರ ಕಳೆದು ಹೋಗುವುದಕ್ಕೆ ಆತಂಕ ವ್ಯಕ್ತಪಡಿಸುವುದು ಅಷ್ಟೇನು ಸರಿಯಾದ ಪ್ರಕ್ರಿಯೆ ಅಲ್ಲ. ಏಕೆಂದರೆ ಒಂದು ಭಾಷೆ ಹೀಗೆ ಬೇರೆ ಬೇರೆ ಆಕಾರಗಳನ್ನು ಪಡೆಯುವುದು ಅದರ ಜೈವಿಕತೆಯ ಲಕ್ಷಣವಾಗಿದೆ’ (ಕೆವಿಎನ್). ಭಟ್ಟರು ರೂಪಿಸುತ್ತಿರುವ ‘ಹೊಸ ಕನ್ನಡ’ ಭಾಷೆಯ ಈ ಮೂಲಭೂತ ಗುಣಕ್ಕೆ ವ್ಯತಿರಿಕ್ತವಾಗಿರುವಂತಿದೆಯಲ್ಲವೇ?

2. ಕೆಳವರ್ಗಗಳು ಪ್ರಾಥಮಿಕ ಶಿಕ್ಷಣದಲ್ಲಿಯೇ ಇಂಗ್ಲಿಷ್ ಕಲಿಕೆಯನ್ನು ಸಾಮಾಜಿಕ ನ್ಯಾಯದ ಪ್ರಶ್ನೆಯಾಗಿ ಮುಂದಿಡುತ್ತಿರುವಾಗ ಸಂಸ್ಕೃತದ ಪ್ರಭಾವದಿಂದ ಸಂಪೂರ್ಣ ಬಿಡಿಸಿಕೊಳ್ಳುವ ಹಂಬಲದಿಂದ ಮೂಡಿದ ‘ಹೊಸ ಕನ್ನಡ’ದ ಬಳಕೆದಾರರು ಯಾರು? ಮೇಲ್ವರ್ಗಗಳು ಇಂಗ್ಲಿಷನ್ನು ಹಿಂಬಾಲಿಸುತ್ತ ‘ಮುನ್ನಡೆಯುತ್ತಿರುವಾಗ’ ಕನ್ನಡ ಉಳಿಸುವ ಜವಾಬ್ದಾರಿಯನ್ನು ತಮ್ಮ ಹೆಗಲಿಗೇರಿಸುವ ಜಾಣ ಪ್ರಯತ್ನವಾಗಿ ‘ಹೊಸ ಬರಹ’ ಕೆಳವರ್ಗಗಳಿಗೆ ಕಾಣುವುದಿಲ್ಲವೇ?
3. ‘ಹೊಸ ಕನ್ನಡ’ವನ್ನು ಸಮರ್ಥಿಸುತ್ತಿರುವ ಚಿಂತಕರು ಸಾಮಾಜಿಕ ನ್ಯಾಯದ ಪರವಿರುವ ವರ್ಗವೇ ಆಗಿದ್ದು ಅವರ ಈ ಸಮರ್ಥನೆಗೆ ಕಾರಣ ಕೆಳವರ್ಗಗಳಿಗೆ ಕಷ್ಟವಾದ ಸಂಸ್ಕೃತ ಶಬ್ದಗಳಿಂದ ಕನ್ನಡವನ್ನು ಮುಕ್ತಗೊಳಿಸುವ ಭಾಷಾಮೂಲದ್ದೋ ಅಥವಾ ಒಂದು ಕಾಲಘಟ್ಟದಲ್ಲಿ ಯಜಮಾನಿಕೆಗೆ ಕಾರಣವಾಗಿ ಮೇಲ್ಜಾತಿಗಳ ಕೈಯೊಳಗಿನ ಅಸ್ತ್ರವಾಗಿ ಕೆಳವರ್ಗಗಳಿಗೆ ಶಿಕ್ಷಣವನ್ನು ವಂಚಿಸಿದ ಸಂಸ್ಕೃತದ ಮೇಲಿನ ಸಿಟ್ಟೋ? ಹಾಗಿಲ್ಲವಾದರೆ ಸಂಸ್ಕೃತದಿಂದ ಪ್ರಭಾವಿತವಾದ ಕನ್ನಡ ಕೆಳವರ್ಗದವರಿಗೆ ಬಳಸುವ ಸಂದರ್ಭದಲ್ಲಿ ಸೃಷ್ಟಿ ಮಾಡುತ್ತಿರುವ ಕಷ್ಟಗಳನ್ನೇ ವರ್ತಮಾನದಲ್ಲಿ ಇಂಗ್ಲಿಷನ್ನು ಬೆರೆಸಿ ಆಡಲಾಗುತ್ತಿರುವ ಕನ್ನಡವೂ ಸೃಷ್ಟಿಸುತ್ತಿದ್ದು ಈ ವರ್ಗಕ್ಕೆ ಈ ನೆಲೆಯಲ್ಲಿ ಇಂಗ್ಲಿಷ್‌ ಕುರಿತು ಯಾಕೆ ಯಾವ ತಕರಾರುಗಳೂ ಇಲ್ಲ?

ಭಟ್ಟರು ರೂಪಿಸುತ್ತಿರುವ ‘ಹೊಸ ಬರಹ’ಕ್ಕೆ ಮೇಲಿನದರೊಂದಿಗೆ ಮತ್ತಷ್ಟು ಪ್ರಶ್ನೆಗಳು ಎದುರಾಗಿವೆ. ಈಗಾಗಲೇ ಬಳಕೆಯಲ್ಲಿರುವ ಕನ್ನಡದ ಬದಲಿಗೆ ಇನ್ನೊಂದು ಹೊಸ ಕನ್ನಡವನ್ನು ರೂಪಿಸಿದರೆ ಅದು ಅನಿಶ್ಚತತೆ ಮೂಡಿಸುವುದಿಲ್ಲವೇ? ಬರಹದಲ್ಲಿ ಅರ್ಥ ಸಂದಿಗ್ಧತೆ ಉಂಟಾಗುವುದಿಲ್ಲವೇ? ಎನ್ನುವುದು ಮತ್ತೆ ಮತ್ತೆ ಕೇಳಿ ಬರುವ ಪ್ರಶ್ನೆಗಳಾಗಿವೆ. ಇದಕ್ಕೆ ಶಂಕರ ಭಟ್ಟರು ಉತ್ತರ ನೀಡಿದ್ದಾರೆ.

ಉಚ್ಚಾರಣೆಗೆ ಅನುಸಾರವಾಗಿ ಬರಹವನ್ನು ಬದಲಾಯಿಸಿಕೊಳ್ಳುವ ಸಂದರ್ಭಗಳಲ್ಲೆಲ್ಲ ಮೊದಲ ಬಾರಿಗೆ ಅನಿಶ್ಚಿತತೆ ಕಾಣಿಸಿಕೊಳ್ಳುವುದಾದರೂ ಸಮಯ ಕಳೆದಂತೆ ಅನಿಶ್ಚಿತತೆ ಕಡಿಮೆಯಾಗುತ್ತಾ ಹೋಗಿ ಕೊನೆಗೆ ಒಂದು ರೀತಿಯ ಸ್ಥಿರತೆಯುಂಟಾಗುತ್ತದೆ. ಬರಹದಲ್ಲಿ ಅರ್ಥ ಸಂದಿಗ್ಧತೆ ಉಂಟಾಗುತ್ತದೆ ಎನ್ನುವುದು ಮಹಾಪ್ರಾಣ, ಷಕಾರ, ಋಕಾರ ಮೊದಲಾದ ಅಕ್ಷರಗಳನ್ನು ಕೈ ಬಿಡುವುದಕ್ಕಿರುವ ವಿರೋಧಕ್ಕೆ ಒಂದು ಪ್ರಮುಖ ಕಾರಣ. ಆದರೆ ಈ ವಿರೋಧ ಅರ್ಥಹೀನ ಎನ್ನುವುದನ್ನು ಭಟ್ಟರು ಸಮರ್ಥ ನಿದರ್ಶನಗಳೊಂದಿಗೆ ಸಾಬೀತುಪಡಿಸಿದ್ದಾರೆ. ನಾವು ಬರಹದಲ್ಲಿ ಬಳಸುವ ಪದಗಳಲ್ಲಿ ಹೆಚ್ಚಿನವಕ್ಕೆ ಒಂದಕ್ಕಿಂತ ಹೆಚ್ಚು ಅರ್ಥಗಳಿವೆ. ಕನ್ನಡದ ‘ಕಡಿ’ ಪದಕ್ಕೆ ಕಿಟ್ಟೆಲ್ ಡಿಕ್ಷನರಿಯಲ್ಲಿ ಒಂಬತ್ತು ಅರ್ಥಗಳನ್ನು ಕೊಡಲಾಗಿದೆ. ಆದರೂ ಇದು ಯಾವ ಸಮಸ್ಯೆಯನ್ನೂ ಸೃಷ್ಟಿಸುತ್ತಿಲ್ಲ. ಕಾರಣವೆಂದರೆ ಹೆಚ್ಚಿನಡೆಗಳಲ್ಲಿ ಈ ಪದಗಳನ್ನು ಬಳಸಿರುವ ಸಂದರ್ಭಗಳೇ ಅದನ್ನು ಯಾವ ಅರ್ಥದಲ್ಲಿ ಬಳಸಲಾಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತವೆ ಎನ್ನುವ ಭಟ್ಟರ ಸಮರ್ಥನೆ ತರ್ಕಬದ್ಧವಾಗಿದೆ.
‘ಮೂಲಭೂತವಾಗಿ ಬರಹದಲ್ಲಿ ಸರಿ-ತಪ್ಪು ಎನ್ನುವುದು ನಾವು ನಮ್ಮೊಳಗೆ ಮಾಡಿಕೊಂಡಿರುವ ಒಂದು ಸಂಪ್ರದಾಯ ಇಲ್ಲವೇ ಒಡಂಬಡಿಕೆಯನ್ನು ಅವಲಂಬಿಸಿಕೊಂಡಿದೆ. ಇವತ್ತಿಗೆ ತಪ್ಪೆಂದು ತೋರುವ ಬರಹ ಇನ್ನೊಂದು ದಿವಸಕ್ಕೆ ಸರಿಯಾಗಲು ಸಾಧ್ಯವಿದೆ’ ಎಂದು ಭಟ್ಟರು ಅಭಿಪ್ರಾಯಪಡುತ್ತಾರೆ.
‘ಬದಲಾಗದೆ ಉಳಿಯುವ ಬರಹದ ಪ್ರಭೇದ ತನ್ನ ಜೀವಂತಿಕೆಯನ್ನು ಕಳೆದುಕೊಂಡು ಕೃತಕತೆಯನ್ನು ತುಂಬಿಕೊಳ್ಳುತ್ತದೆ. ಕನ್ನಡ ಬರಹ ಈ ರೀತಿ ಬದಲಾಗದೆ ಉಳಿಯಲಿಲ್ಲ’ ಎಂದು ಬರಹದ ಬದಲಾವಣೆಯನ್ನು ಸಹಜವೆನ್ನುವ ಭಟ್ಟರು ಅದಕ್ಕೆ ನಿದರ್ಶನವಾಗಿ ವಚನಕಾರರ ಪ್ರಯತ್ನದಿಂದಾಗಿ ಹಳೆಗನ್ನಡವಿದ್ದುದು ನಡುಗನ್ನಡವಾಗಿ ಆನಂತರದ ಸಾಹಿತಿಗಳ ಪ್ರಯತ್ನದಿಂದ ನಡುಗನ್ನಡ ಹೊಸಗನ್ನಡವಾಗಿ ಬದಲಾದ ಉದಾಹರಣೆಯನ್ನು ನೀಡುತ್ತಾರೆ. ಭಟ್ಟರು ಹೇಳುವ ಮಾತುಗಳು ಭಾಷೆಯ ಬೆಳವಣಿಗೆಯ ಗತಿಯಲ್ಲಿ ನಿಜವೆನಿಸಿದರೂ ಕಾಲಬದ್ಧವಾಗಿ ಬರಹದಲ್ಲಿ ‘ಸರಿ-ತಪ್ಪು’ಗಳು ನಿರ್ಧಾರವಾಗದಿದ್ದರೆ ಅದು ಭಾಷೆಯ ಪ್ರಾಥಮಿಕ ಕೆಲಸವಾದ ಸಂವಹನವನ್ನೇ ಬಿಕ್ಕಟ್ಟಿಗೆ ಸಿಲುಕಿಸಿ ‘ಅರಾಜಕತೆಗೆ’ ದಾರಿ ಮಾಡಿಕೊಡುವ ಅಪಾಯವನ್ನು ಎದುರಿಸಬಹುದು ಎನಿಸುತ್ತದೆ.
(ಲೇಖಕ: ಮೈಸೂರಿನ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದಲ್ಲಿ ಅಸೋಸಿಯೇಟ್ ಫೆಲೋ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT