ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪಾಟು

Last Updated 27 ಏಪ್ರಿಲ್ 2019, 19:30 IST
ಅಕ್ಷರ ಗಾತ್ರ

ವೈ.ಎಸ್.ವಿ. ದತ್ತ ಉತ್ತಮ ವಾಗ್ಮಿ. ಜೆ.ಪಿ. ಚಳವಳಿಯಿಂದ ಇಂದಿನ ರಾಜಕಾರಣವನ್ನು ಬಲ್ಲವರು. ಆಯಾ ಕಾಲಮಾನಕ್ಕೆ ಅನುಗುಣವಾಗಿ ದತ್ತ ಅವರು ವಿವಿಧ ಪತ್ರಿಕೆಗಳಿಗೆ ಬರೆದ ಲೇಖನಗಳ ಗುಚ್ಛವೇ ವರ್ತಮಾನ ಪುಸ್ತಕ. ಒಟ್ಟು ಹದಿನಾಲ್ಕು ಲೇಖನಗಳು ಇಲ್ಲಿವೆ. ಅವರ ಎಲ್ಲ ಬರಹಗಳಲ್ಲಿ ಪ್ರಗತಿಪರವಾದ ಚಿಂತನೆ ಕಾಣುತ್ತದೆ. ಜನರ ಸಂಕಷ್ಟಗಳ ಬಗ್ಗೆ ರಾಜಕೀಯ ವ್ಯವಸ್ಥೆ ತೋರುವ ಧೋರಣೆ ಬಗ್ಗೆ ಅವರಲ್ಲಿ ವಿಷಾದವೂ ಇರುವುದು ಗೊತ್ತಾಗುತ್ತದೆ. ಇಲ್ಲಿರುವ ಸಾರ್ವಜನಿಕ ಚುನಾವಣೆಗಳ ವಿಶ್ಲೇಷಣೆಗಳೂ ಪ್ರಬುದ್ಧವಾಗಿವೆ. ತಮ್ಮ ಪಕ್ಷದಿಂದ ಸ್ವಯಂಕೃತ ಅಪರಾಧದಿಂದ ಆದ ಕಳಾಹೀನ ಸಾಧನೆ ಬಗ್ಗೆಯೂ ಅವರು ವಸ್ತುನಿಷ್ಠವಾಗಿ ಬರೆದುಕೊಂಡಿದ್ದಾರೆ.

ನಾವಿಂದು ಆಧುನಿಕ ಶೈಲಿಗೆ ಮಾರುಹೋಗಿದ್ದೇವೆ. ಭ್ರಮಾಲೋಕದಲ್ಲಿ ತೇಲುತ್ತಿದ್ದೇವೆ. ಕ್ಷಣಿಕ ಸುಖಕ್ಕಾಗಿ ಒತ್ತಡಕ್ಕೆ ಸಿಲುಕಿದ್ದೇವೆ. ಇದರ ಪರಿಣಾಮ ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯ ಹದೆಗೆಡುತ್ತಿದೆ. ಈ ಬಗೆಯ ಹಲವು ವಿಷಯಗಳನ್ನು ‘ಆನಂದದಾಯಕ ಬದುಕು’ ಪುಸ್ತಕದಲ್ಲಿ ಡಾ.ಸಿ.ಚ. ಪುರಾಣಿಕಮಠ ಸವಿಸ್ತಾರವಾಗಿ ಪ್ರಸ್ತಾಪಿಸಿದ್ದಾರೆ.

ಬದುಕಿನಲ್ಲಾಗಿರುವ ಪಲ್ಲಟಗಳ ಬಗ್ಗೆ ಅವರು ದಿನನಿತ್ಯದ ಉದಾಹರಣೆಗಳನ್ನು ನೀಡಿದ್ದಾರೆ. ಸರಳ ಭಾಷೆಯಲ್ಲಿಯೇ ಅರ್ಥವಾಗುವಂತೆ ವಿವರಿಸಿದ್ದಾರೆ.ಬದುಕಿನ ವಿವಿಧ ಮಗ್ಗುಲುಗಳು, ಆನಂದದಾಯಕ ಬದುಕಿನ ಸೂತ್ರಗಳ ಬಗ್ಗೆಯೂ ತಿಳಿಹೇಳಿದ್ದಾರೆ. ಇಲ್ಲಿ ಸಮಸ್ಯೆಗಳಿಗೆ ಕಾರಣಗಳನ್ನಷ್ಟೇ ಅವರು ಹೇಳಿಲ್ಲ. ಸುಲಭ ಪರಿಹಾರೋಪಾಯಗಳನ್ನು ನೀಡಿರುವುದು ವಿಶೇಷ.

ಸಾವಿನ ನಂತರದ ಬದುಕಿನ ಬಗ್ಗೆ ಈಗಾಗಲೇ ಅನೇಕ ಅಧ್ಯಯನಗಳು, ಕಲ್ಪನೆ, ಭ್ರಮೆ, ಸಾಹಿತ್ಯ ಮತ್ತು ಚರ್ಚೆ, ವಿಚಾರ– ವಾದಗಳು ನಡೆದಿವೆ. ಆದಾಗ್ಯೂ ಅದೊಂದು ಸುಲಭವಾಗಿ ಬೇಧಿಸಲಾಗದ ರಹಸ್ಯ. ಲಭ್ಯ– ಅಲಭ್ಯ ಮಾಹಿತಿ ಆಧರಿಸಿ ನಂಬಿಕೆ, ಅಪನಂಬಿಕೆ, ಮೂಢನಂಬಿಕೆಗಳೂ ಚಾಲ್ತಿಯಲ್ಲಿ ಇವೆ.

ಈವರೆಗಿನ ಅಧ್ಯಯನ, ವೈಜ್ಞಾನಿಕ ವಿವರಣೆಗಳಲ್ಲದೇ ಗರುಡ ಪುರಾಣ, ಟಿಬೆಟನ್‌ ಬಾರ್ದೊ ಥೊದೋಲ್ ಧರ್ಮಗ್ರಂಥಗಳನ್ನು ಆಧರಿಸಿ ಬದುಕುವ ಕಲೆಯಂತೆ ಸಾಯುವ ಕಲೆಯನ್ನು ಅರಿಯಬಹುದಂತೆ. ಕರ್ಮಸಿದ್ಧಾಂತ, ಪುನರ್ಜನ್ಮ, ಆತ್ಮದ ತೂಕ ಮತ್ತು ಪಯಣ ಸೇರಿದಂತೆ ಇಂತಹ ಸಾವಿನ ನಂತರವೇನು ಎಂಬುದರ ಚಿತ್ರಣ ಕೊಡಲು ಯತ್ನಿಸುವ ಕೃತಿ ‘ಸಾವು ಒಂದು ಹುಡುಕಾಟ’.

ಅಂಗವಿಕಲರಾಗಿದ್ದೂ ಜಗತ್ತಿಗೆ ಮಾದರಿಯಾದ 31 ಮಂದಿಯ ರೋಚಕ ಕಥೆಯನ್ನು ‘ವಿಧಿಯ ಬೆನ್ನೇರಿ’ ಕೃತಿ ಹೇಳುತ್ತದೆ. ವಿಜ್ಞಾನ, ಸಾಮಾಜಿಕ, ವಾಣಿಜ್ಯ, ಕ್ರೀಡೆ ಸೇರಿದಂತೆ ಅನೇಕ ಕ್ಷೇತ್ರದಲ್ಲಿ ಕೊಡುಗೆ ನೀಡಿದವರ ಬಾಲ್ಯ, ಆಟ, ಪಾಠಗಳನ್ನು ಹೇಳುತ್ತಾ ಅವರ ಸಾಧನೆಯ ಮೆಟ್ಟಿಲುಗಳ ಕುರಿತಾದ ನೈಜ ಕಥೆಗಳು ಇಲ್ಲಿವೆ.

ಎಲ್ಲಾ ದೇಶದ ಸಾಧಕರೂ ಕಣ್ಣಿನ ಮುಂದೆ ಬಂದು ಹೋಗುತ್ತಾರೆ. ಅವರೆಲ್ಲರ ಕಥೆಆರಂಭವಾಗುವುದು ಬಾಲ್ಯದಿಂದ. ಕೆಲವರು ಹುಟ್ಟುವಾಗಲೇ ಅಂಗವಿಕಲಾಗಿದ್ದರೆ ಇನ್ನು ಕೆಲವರು ‘ವಿಧಿಯ’ ಆಟಕ್ಕೆ ಬಲಿಯಾಗುತ್ತಾರೆ ಎನ್ನುವುದು ಲೇಖಕರ ಒಕ್ಕಣೆ.

ಕಾಯಿಲೆಯೊಂದಿಗೆ ಹೋರಾಡುತ್ತಲೇ ವಿಜ್ಞಾನಿಯಾದ ಸ್ಟೀಫನ್‌ ಹಾಕಿಂಗ್‌, ರೈಲಿನಿಂದ ಬಿದ್ದಮೇಲೆ ಕಾಲು ಕಳೆದುಕೊಂಡು, ವಾಲಿಬಾಲ್‌ ಕನಸು ಕೈಬಿಡಬೇಕಾದರೂ ಹಿಮಾಲಯದ ನೆತ್ತರು ತಲುಪಿದಅರುಣಿಮಾ ಸಿನ್ಹಾರಂತಹ ರೋಚಕ ಕಥೆಗಳನ್ನು ಇಲ್ಲಿ ಹೇಳಲಾಗಿದೆ. ಎಲ್ಲರಿಗೂ ಗೊತ್ತಿರುವ ನೈಜ ಕಥೆಗಳನ್ನು ಬರೆಯುವಾಗ ಲೇಖಕನ ಕ್ರಿಯಾಶೀಲತೆ ಉಳಿದುಕೊಳ್ಳುವುದು ಭಾಷೆ ಹಾಗೂ ಜ್ಞಾನ ವಿಸ್ತಾರ ಮಾಡುವಲ್ಲಿ ಮಾತ್ರ. ಆದರೆ, ಇಲ್ಲಿ ಈ ಪ್ರಯತ್ನಕ್ಕೆ ಹೆಚ್ಚು ಕೈಹಾಕಿದಂತೆ ಕಾಣುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT