ಬುಧವಾರ, ಆಗಸ್ಟ್ 21, 2019
22 °C

ಸ್ವರ್ಗವೇನೋ ನಿಜ | ಕಾಶ್ಮೀರ ಕಣಿವೆಯ ಒಡಲ ಹಾಡು

Published:
Updated:
Prajavani

ಬೆಂಗಳೂರಿನಿಂದ ದೆಹಲಿಯ ಮಾರ್ಗವಾಗಿ ಶ್ರೀನಗರಕ್ಕೆ ವಿಮಾನದ ಟಿಕೀಟುಗಳನ್ನು ಕಾದಿರಿಸುವಾಗಲೇ ನಾನೇನು ಮಾಡುತ್ತಿದ್ದೇನೆಂಬುದರ ಸ್ಪಷ್ಟ ಅರಿವಿತ್ತು. ಪ್ರವಾಸದ ಅನುಭವ ಸಾಕಷ್ಟಿದ್ದರೂ ಈ ಬಾರಿ ನಾನು ಹೊರಟಿದ್ದುದು ಕಾಶ್ಮೀರಕ್ಕೆ. ಮಧುಚಂದ್ರಕ್ಕೆ ಹೊರಟ ದಂಪತಿ ಅದನ್ನು ಪ್ರವಾಸಿತಾಣ ಎಂದಾರೇನೋ, ಅದರ ಇತಿಹಾಸವನ್ನು ಸಾಕಷ್ಟು ಬೆದಕಿದ್ದ ನನಗೆ ಹಾಗೆನ್ನುವ ಧೈರ್ಯ ಅಂದೂ ಇರಲಿಲ್ಲ; 370ನೇ ವಿಧಿ ಹಾಗೂ 35(ಎ) ವಿಧಿ ರದ್ದಾಗಿರುವ ಇಂದೂ ಇಲ್ಲ!

ಇದನ್ನೂ ಓದಿ: ಕಾಶ್ಮೀರ: ಅಸ್ಮಿತೆಯ ಪ್ರಶ್ನೆ ನಮ್ಮನ್ನು ಕಾಡುತ್ತಿದೆ​

ಕಾಶ್ಮೀರ ಪ್ರವಾಸಿತಾಣವಾಗುವುದು ಸುರಳೀತವಲ್ಲ. ನಿರಂತರ ದಾಳಿಗಳಿಂದ ಜರ್ಝರಿತಗೊಂಡಿರುವ ಅದು ಕಾಲಾವಕಾಶ ಬೇಡುತ್ತದೆ. ಯಾವುದೇ ಸ್ಥಳವನ್ನು ಸಂದರ್ಶಿಸುವ ನಿಟ್ಟಿನಲ್ಲಿ ನಡೆಸುವ ಅಧ್ಯಯನ ಒಂದು ಮಟ್ಟದ ತಿಳಿವಳಿಕೆ ಹಾಗೂ ಆತ್ಮವಿಶ್ವಾಸಗಳನ್ನು ನೀಡುತ್ತದೆ ನಿಜ. ಆದರೆ ಅದು ಕಾಶ್ಮೀರದ ವಿಷಯದಲ್ಲಿ ಸ್ವಲ್ಪವೂ ಅನ್ವಯವಾಗುವುದಿಲ್ಲ. ಗಳಿಸಿದ ಜ್ಞಾನಬುದ್ಧಿಯನ್ನು ದೃಢವಾಗಿರಿಸಿದರೂ ಹೃದಯ ಹೆಜ್ಜೆಹೆಜ್ಜೆಗೂ ಲಯತಪ್ಪುತ್ತದೆ. ಕಲ್ಲೆಸೆತ, ಗುಂಡಿನ ಮೊರೆತಗಳಿಂದ ತುಂಬಿದ್ದ ಕಾಶ್ಮೀರವನ್ನು ಎಲ್ಲಿಂದ ನೋಡಲಾರಂಭಿಸಿ ಎಲ್ಲಿಗೆ ಮುಗಿಸಬೇಕೆಂಬ ನಿಶ್ಚಿತ ರೀತಿಯಿಲ್ಲದೆ ಹೊರಟಿದ್ದೆ. ಹೊರಡುವಾಗ ಯಾವುದನ್ನೂ ಯೋಜಿಸುವುದು ಸಾಧ್ಯವಿರಲಿಲ್ಲ. ಸ್ಥಳಗಳ, ಭೇಟಿಯಾಗಬೇಕಾದ ವ್ಯಕ್ತಿಗಳ ಪಟ್ಟಿಯೇನೋ ಸಿದ್ಧವಿತ್ತು. ಅದನ್ನು ಅಲ್ಲಿಯ ಸ್ನೇಹಿತರಿಗೆ ರವಾನಿಸಿಯೂ ಆಗಿತ್ತು. ಆದರೆ, ಆತಂಕಕಾರಿ ಸನ್ನಿವೇಶ ಸೃಷ್ಟಿಯಾದರೆ ಎಲ್ಲ ಕಾರ್ಯಕ್ರಮಗಳನ್ನೂ ರದ್ದುಗೊಳಿಸಿ ನಿಂತ ನಿಲುವಿನಲ್ಲೇ ಹಿಂತಿರುಗಬೇಕೆಂಬ ಅವರ ಶರತ್ತನ್ನು ಒಪ್ಪುವುದೂ ಅನಿವಾರ್ಯವಾಗಿತ್ತು.

ದೆಹಲಿಯಲ್ಲಿ ವಿಮಾನಹತ್ತಿ ಶ್ರೀನಗರದ ನಿಲ್ದಾಣದಲ್ಲಿ ಇಳಿದು ಕಾಶ್ಮೀರ ಭೂಮಿಯ ಮೇಲೆ ಹೆಜ್ಜೆಯಿಡುವ ವೇಳೆಗೆ ಕಲ್ಹಣ, ಅಭಿನವಗುಪ್ತರ ಹೆಸರುಗಳು ಸಂಪೂರ್ಣ ಮರೆತಿದ್ದವು. ಇದು ಆದಿಶಂಕರರು ಅಡಿಯಿಟ್ಟ ಸ್ಥಳವೆಂಬುದಾಗಲೀ, ಶಾರದೆಯ ಆವಾಸಸ್ಥಾನವೆಂಬುದಾಗಲೀ ಅಥವಾ ಪಾರ್ವತಿದೇವಿಯೇ ವಿತಸ್ತಾ ನದಿಯ ರೂಪದಲ್ಲಿ ಹರಿಯುತ್ತಿದ್ದಾಳೆಂಬ ಐತಿಹಾಸಿಕ, ಪೌರಾಣಿಕ ಸಂಗತಿಗಳಾಗಲೀ ಯಾವುದೂ ಸ್ಮರಣೆಯಲ್ಲಿರುವುದು ಸಾಧ್ಯವಿರಲಿಲ್ಲ. ಸುತ್ತಲಿನವರ ದಿರಿಸು, ಚರ್ಯೆಗಳು ಹುಟ್ಟಿಸುತ್ತಿದ್ದ ಚಡಪಡಿಕೆ ಮೇಲುಗೈ ಪಡೆದಿತ್ತು. ದೂರದಲ್ಲೆಲ್ಲೋ ಕುಳಿತು, ಸೆಕ್ಯುಲರಿಸಂನ ಬಗ್ಗೆ, 370ನೇ ವಿಧಿಯ ಅಗತ್ಯದ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವುದು ಬೇರೆ. ವೈರುಧ್ಯವಿರುವ, ಅದಕ್ಕಿಂತಲೂ ಮಿಗಿಲಾಗಿ, ರಕ್ತಪಾತದ ಹಿನ್ನೆಲೆಯಿರುವ ಪ್ರದೇಶದ ನಟ್ಟನಡುವೆ, ಹಣ್ಣೆಯಲ್ಲಿ ಕುಂಕುಮವಿಟ್ಟು ಅಥವಾ ತಲೆಗೆ ಪೇಟತೊಟ್ಟು ಕೂರುವುದು ಬೇರೆ. ಈ ಮಾತಿನಲ್ಲಿ ಎಳ್ಳಷ್ಟೂ ಅತಿಶಯವಿಲ್ಲ ಎಂಬುದು ಕಾಶ್ಮೀರಕ್ಕೆ ಒಬ್ಬಂಟಿಯಾಗಿ ಭೇಟಿ ನೀಡಿದ ಎಲ್ಲರಿಗೂ ತಿಳಿದಿರುತ್ತದೆ.

ಕಾಶ್ಮೀರವನ್ನು ನೋಡುವುದರಲ್ಲಿ ಎರಡು ಬಗೆಗಳಿವೆ. ಒಂದು, ನಗರದ, ಹಳ್ಳಿಗಳ ಜನಸಾಮಾನ್ಯರೊಂದಿಗೆ ಬೆರೆತು ಅವರ ಬದುಕನ್ನು ಅರಿಯಲೆತ್ನಿಸುವುದು. ಆ ಅನುಭವ ವಿಶಿಷ್ಟವಾಗಿರುತ್ತದಾದರೂ ಅದರಲ್ಲಿ ಆ ನಾಡಿನ ಒಳಸುಳಿಗಳು ಗ್ರಹಿಕೆಗೆ ಸಿಗುವುದಿಲ್ಲ. ಏಕೆಂದರೆ ತಮ್ಮ ಸಿರಿತನ, ಬಡತನಗಳ ಕುರಿತು ಮುಕ್ತವಾಗಿ ಮಾತನಾಡುವ ಆ ಜನ ರಾಜಕೀಯ ಆಗುಹೋಗುಗಳಿಗೆ ಅಷ್ಟಾಗಿ ಪ್ರಾಮುಖ್ಯ ನೀಡುವುದಿಲ್ಲ. ವೈಯಕ್ತಿಕವಾಗಿ ಸ್ಪಂದಿಸುವುದೂ ಕಡಿಮೆ. ತಮ್ಮ ವ್ಯಾಪಾರ-ವಹಿವಾಟು, ಕೇಸರಿಯ ಹೊಲಗಳ ನಿರ್ವಹಣೆ, ಉದ್ಯೋಗ - ಇವುಗಳ ಆಲೋಚನೆಯಲ್ಲಿ ತೊಡಗಿರುವ ಅವರಿಗೆ ದಾರಿದ್ರ್ಯ, ರಕ್ತಪಾತಗಳಿಂದ ಮುಕ್ತಿ ದೊರೆತರೆ ಸಾಕೆಂಬ ಭಾವನೆ. ಬಹುತೇಕರು ಹೇಳುವುದು - `ಪಾಕಿಸ್ತಾನದಲ್ಲಿ ನಿತ್ಯವೂ ಭಯೋತ್ಪಾದನೆ, ಸಾವುನೋವುಗಳು. ಅಭಿವೃದ್ಧಿ ಕಾಣುತ್ತಿರುವ ಭಾರತ ಸರ್ಕಾರದ ಜತೆಗಿದ್ದರೆ ನಮ್ಮ ಬವಣೆಗಳೂ ಕೊನೆಯಾದಾವು' ಎಂದೇ. ಇಂಥವರೊಂದಿಗಿನ ಒಡನಾಟ ಮನಸ್ಸಿಗೆ ಮುದ ನೀಡಿದರೂ ಕಾಶ್ಮೀರದ ವಸ್ತುಸ್ಥಿತಿಯ ಚಿತ್ರಣ ದೊರೆಯಬೇಕಾದಲ್ಲಿ ಅದನ್ನು ನೋಡುವ ಇನ್ನೊಂದು ಬಗೆಯ ಮೊರೆಹೋಗುವುದು ಅನಿವಾರ್ಯ. ಹಾಗೆ ಮಾಡಿದಾಗ ಆರು ವಿಧದ ವರ್ಗೀಕರಣ ಕಾಣಸಿಗುತ್ತದೆ.

ಮೊದಲನೆಯದು -ಭಾರತದ ವಿವಿಧೆಡೆ ಇರುವ ಇತರ ಮುಸ್ಲಿಮರಿಗೂ ಕಾಶ್ಮೀರದ ಮುಸ್ಲಿಮರಿಗೂ ಇರುವ ಅಂತರ. ಒಂದು ಸರಳ ಉದಾಹರಣೆಯೆಂದರೆ ಅವರ ಪ್ರಾರ್ಥನೆ. ಭಾರತದ ಎಲ್ಲೆಡೆ ಅದನ್ನು ‘ನಮಾಜ್’ ಎಂದು ಕರೆದರೆ ಕಾಶ್ಮೀರದಲ್ಲಿ `ನಿಮಾಜ್’ ಎನ್ನುತ್ತಾರೆ (ಸಾಂಸ್ಕೃತಿಕ ಭಿನ್ನತೆಯಿರುವ ಇಂಥ ಹಲವು ಅಂಶಗಳು, ಆಚರಣೆಗಳನ್ನು ಉದಾಹರಿಸಬಹುದು). ಮತ್ತೊಂದು ಬಹುಮುಖ್ಯ ಅಂತರ, ಕಾಶ್ಮೀರದಲ್ಲಿ ಚಾಲ್ತಿಯಲ್ಲಿರುವ ಇಸ್ಲಾಂ. ಕಳೆದ ನಾಲ್ಕು ದಶಕಗಳಿಂದ ಸೌದಿ ಅರೇಬಿಯಾ ಹಾಗೂ ಪಾಕಿಸ್ತಾನಗಳ ಮೂಲಕ ಪ್ರಾಯೋಜಿತವಾಗಿ ರಫ್ತಾಗುತ್ತಿರುವ ವಹಾಬಿ ಇಸ್ಲಾಂ, ಕಾಶ್ಮೀರೀ ಯುವಕರಲ್ಲಿ ವಿಷಮ ಮನಸ್ಥಿತಿಯನ್ನು ಮೂಡಿಸಿ, ಪೋಷಿಸಿದೆ.

ಎರಡನೆಯದು -ಎಪ್ಪತ್ತು ವರ್ಷಗಳ ಭಾರತದ ಅನುದಾನದಿಂದ ಕೊಬ್ಬಿರುವ ಭ್ರಷ್ಟಾಚಾರ. ಸಾಮಾನ್ಯ ವಿದ್ಯಾವಂತ ಉದ್ಯೋಗವಿಲ್ಲದೆ ಕಂಗಾಲಾಗಿದ್ದರೆ ಪದವಿಯಲ್ಲಿ ಅನುತ್ತೀರ್ಣನಾದವನು ಪಿ.ಎಚ್.ಡಿ ಯನ್ನು ಖರೀದಿಸಿ ಪ್ರೊಫೆಸರನಾಗಿ ನಿಯುಕ್ತಿಗೊಳ್ಳುವ ಅವಕಾಶ! ಹದ್ದುಮೀರಿರುವ ವಶೀಲಿ, ಲಂಚಗುಳಿತನಗಳು. ವಿದ್ಯುತ್ತಿನ, ನೀರಿನ ಬಿಲ್ಲುಗಳನ್ನು ಪಾವತಿಸಿ ರೂಢಿಯಿರದ ಜನಸಾಮಾನ್ಯರು. ಆದಾಯ ತೆರಿಗೆಯೆಂದರೆ ಅಚ್ಚರಿಯಿಂದ ಮೂಗಿನಮೇಲೆ ಬೆರಳಿಡುವ ಮಂದಿ. ತೆರಿಗೆ ಪಾವತಿಸುವ ಕ್ರಮ ಈಗ ಕೆಲವರ್ಷಗಳಿಂದ ಜಾರಿಗೆ ಬಂದಿದೆಯಾದರೂ ಕಡ್ಡಾಯವಾಗಿ ಪಾಲಿಸುತ್ತಿರುವವರು ವಿರಳ.

ಮೂರನೆಯದು - ಕಾಶ್ಮೀರದ ಅತಿದೊಡ್ಡ ಮಾಫಿಯಾ. ಕಲ್ಲೆಸೆಯುವವರದ್ದು. ಸಾಧಾರಣವಾಗಿ ಅವರು ಕಲ್ಲು ತೂರುವುದು ಭಾರತೀಯ ಸೇನೆಯನ್ನು ಗುರಿಯಾಗಿಸಿಕೊಂಡು. ಈ ರೋಷ ಕೆಲವೊಮ್ಮೆ ಸ್ಥಳೀಯ ಆಫೀಸರುಗಳ ಮೇಲೆ ತಿರುಗುತ್ತದೆ. ಕಲ್ಲು ಹೊಡೆಯುವವರ ಸಮೂಹ ಸನ್ನಿಗೆ ಹಲವರು ಬಲಿಯಾದ ಉದಾಹರಣೆಗಳು ಇವೆ.

ನಾಲ್ಕನೆಯದು -ಊರಿನ ಮನೆಯಲ್ಲೇ ಅಡಗಿಕುಳಿತು ಕಾರ್ಯಾಚರಣೆಯ ರೂಪುರೇಷೆಗಳನ್ನು ತಯಾರಿಸಿ ದಿಢೀರನೆ ಪ್ರತ್ಯಕ್ಷವಾಗುವ ಉಗ್ರರು. ಅವರ ಬೆಂಬಲಿಗರ ದೊಡ್ಡ ಗುಂಪು. ಅದರ ಭಾಗವಾಗುವ ಹೆಂಗಸರು, ಮಕ್ಕಳು, ಮುದುಕರು, ಮೋಟರು. ಇವರನ್ನೆಲ್ಲ ತಮ್ಮ ಮನಬಂದಂತೆ ಕುಣಿಸುವ ಮತಾಂಧರು.

ಐದನೆಯದು - ಇವರೆಲ್ಲರ ನಡುವೆ, ಏನೇ ಮಾಡಿದರೂ ಈ ಜಾಗವನ್ನು ತೊರೆದುಹೋಗೆವು ಎಂದು ಹಟ ಹಿಡಿದು ಜಿಗಣೆಗಳಂತೆ ಕಚ್ಚಿಕುಳಿತ ಕೆಲವು ಸಾವಿರ ಕಾಶ್ಮೀರೀ ಹಿಂದೂಗಳು. ಅವರಿಗೆಂದೇ ಮೀಸಲಾದ ವಸತಿಪ್ರದೇಶಗಳು. ಸದ್ಯಕ್ಕೆ ಆರು ಜಿಲ್ಲೆಗಳಲ್ಲಿವೆ. ಜಿಲ್ಲೆಗೊಂದರಂತೆ. ಆರನೆಯದು- ಈ ಹಿಂದೂಗಳನ್ನು ಬೆಂಬಲಿಸುವ, ನಿಜವಾಗಿಯೂ ಕನಿಕರಿಸಿ ಅವರಿಗೆ ನೆರವಾಗುವ ಮನಸ್ಥಿತಿಯಿರುವ ವಿದ್ಯಾವಂತ ಮುಸ್ಲಿಮರ ಯುವಪೀಳಿಗೆ. ಅವರನ್ನು ಅನುಮೋದಿಸುವ, ಮಧ್ಯವಯಸ್ಕರ ಹಾಗೂ ಹಿರಿಯರ ವರ್ಗ. 

ಎಲ್ಲರಿಗಿಂತಲೂ ಬಹು ಮುಖ್ಯಪಾತ್ರ ನಿರ್ವಹಿಸುತ್ತಿರುವವರು, ಈ ಆರೂ ವರ್ಗಗಳನ್ನೂ ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿರುವ, ಕುಟುಂಬ ರಾಜಕಾರಣದಲ್ಲಿ ಪಳಗಿರುವ ಧುರೀಣರು! ಇದು ಸಮಸ್ಯೆಯ ಸ್ಥೂಲರೂಪ. ಆಳ, ವಿಸ್ತಾರಗಳನ್ನು ಲೇಖನದ ಚೌಕಟ್ಟಿನಲ್ಲಿ ಹಿಡಿದಿಡಲು ಸಾಧ್ಯವಿಲ್ಲವಾದುದರಿಂದ ಇವರೊಂದಿಗಿನ ನನ್ನ ಅನುಭವದ ಕೆಲವು ತುಣುಕುಗಳನ್ನು ಹಂಚಿಕೊಳ್ಳುತ್ತೇನೆ. ಮೊದಲನೆಯ ವರ್ಗಕ್ಕೆ ಉದಾಹರಣೆ, ನಾನು ಇಳಿದುಕೊಂಡಿದ್ದ ಹೋಟೆಲಿನ ಮಾಲೀಕ. ಶ್ರೀನಗರವನ್ನು ತಲುಪಿದ ದಿನ, ಪ್ರಯಾಣದ ಬಳಲಿಕೆಯ ನಡುವೆಯೇ ಅಂದಿಗೆ ನಿಗದಿಯಾಗಿದ್ದ ಕೆಲಸಗಳನ್ನು ಮುಗಿಸಿ ಕೋಣೆ ಸೇರಿದೊಡನೆ ಮಾತಿಗೆ ಬಂದ ಮಹಾಶಯ ಕೋಣೆಯಿಂದ ಹೊರನಡೆದಾಗ ನಡುರಾತ್ರಿ ಮೀರಿತ್ತು. ಮಾತು ಚರ್ಚೆಗೆ ತಿರುಗಿ, ನನ್ನನ್ನೊಪ್ಪಿಸುವ ಆತನ ಯತ್ನ ಸಫಲವಾಗದೆ ಆತ ಸಿಟ್ಟಿನಿಂದ ಮುಖ ಕೆಂಪಗಾಗಿಸಿಕೊಂಡು ಧಡಾರನೆ ಬಾಗಿಲು ಹಾಕಿ ನಡೆದಾಗ ನಾನು ಮಲಗುವುದೋ, ಸ್ನೇಹಿತರಿಗೆ ಕರೆಮಾಡುವುದೋ ತಿಳಿಯದ ಗೊಂದಲದಲ್ಲಿದ್ದೆ. ಅವನದೇ ಮನಸ್ಥಿತಿಯ ಇತರರನ್ನು ನಂತರ ಭೇಟಿಯಾದರೂ ಅವನ ನಡವಳಿಕೆ ಅನಿರೀಕ್ಷಿತವಾಗಿತ್ತು. ಸಾಧಾರಣವಾಗಿ ಕಾಶ್ಮೀರೀ ಮುಸ್ಲಿಮರು ಪ್ರವಾಸಿಗಳ ಮನನೋಯಿಸುವುದಿಲ್ಲ. ಅಂತಃಕರಣಕ್ಕಿಂತ ಉದ್ಯಮಕ್ಕೆ ಪೆಟ್ಟುಬಿದ್ದರೆ ಹೇಗೆ ಎಂಬ ಕಾರಣಕ್ಕೆ. ತುಟಿಕಚ್ಚಿ, ಕೋಪವನ್ನು ಎದೆಯೊಳಗೇ ಅವಿತಿಟ್ಟುಕೊಂಡು ನಮ್ಮನ್ನು ಪ್ರೇಕ್ಷಣೀಯ ಸ್ಥಳಗಳಿಗೆ ಕರೆದೊಯ್ಯುತ್ತಾರೆ. ಹಾಗೆಂದು ನಮ್ಮೊಡನೆ ಹಾರ್ದಿಕ ಸಂಭಾಷಣೆ ನಡೆಸುವುದಿಲ್ಲ. ಅಪವಾದವೆಂಬಂತೆ ಕೆಲವರಿರುತ್ತಾರೆ.

ಎರಡನೆಯ ವರ್ಗಕ್ಕೆ, ಎಂದರೆ ಭ್ರಷ್ಟಾಚಾರದಿಂದ ಹಳಸಿರುವ ವ್ಯವಸ್ಥೆಯ ಬಗ್ಗೆ ರೊಚ್ಚಿಗೆದ್ದಿರುವವರ ಹಲವಾರು ಉದಾಹರಣೆಗಳು ದೊರಕುತ್ತವೆ. ಸ್ನಾತಕೋತ್ತರ ಪದವಿ ಪಡೆದಿರುವ (ಖರೀದಿಸಿರುವವರಲ್ಲ) ಯುವಕರು ಶಿಕಾರಾ ನಡೆಸುವುದು ಅಥವಾ ಕಾರು ಡ್ರೈವರುಗಳಾಗುವುದು ಸರ್ವೇ ಸಾಮಾನ್ಯ. ಇವರಿಗೆ ಬೇಸರ, ಹತಾಶೆ. ಸ್ಥಳೀಯ ರಾಜಕಾರಣಿಗಳ ಬಗ್ಗೆ ರೋಷ. ಸಂವಿಧಾನದ ಯಾವ ವಿಧಿ ಇದ್ದರೂ ಇರದಿದ್ದರೂ ವ್ಯತ್ಯಾಸವಾಗದವರು. ಕಾಶ್ಮೀರ ಭಾರತಕ್ಕೆ ಸೇರಲಿ, ಬಿಡಲಿ. ಇವರ ರಕ್ತದೊತ್ತಡ ಏರುಪೇರಾಗದು. ವ್ಯವಸ್ಥೆ ಹೀಗೆ ಅಧೋಗತಿಗಿಳಿಯಲು ಕಾರಣರಾದ ಖ್ಯಾತನಾಮರುಗಳನ್ನು ಪ್ರತ್ಯೇಕವಾಗಿ ಹೆಸರಿಸಬೇಕಿಲ್ಲ ಎಂದುಕೊಳ್ಳುತ್ತೇನೆ.  

ಮೂರನೆಯ, ಕಲ್ಲುತೂರುವ ವರ್ಗದ ನಾಯಕನೊಡನೆ ಮಾತನಾಡುವಾಗ ಎಚ್ಚರದಿಂದಿರಬೇಕು ಎಂಬುದು ನನಗೆ ಮಾತನ್ನಾರಂಭಿಸಿದ ನಂತರ ತಿಳಿಯಿತು. ಬಹಳ ಬೇಗ ಆಕ್ರೋಶಗೊಳ್ಳುವ ಅವನಿಗೆ ಕರೆದು ಉದ್ಯೋಗ ಕೊಟ್ಟರೂ ಬೇಕಿಲ್ಲ. ಲಕ್ಷಗಟ್ಟಳೆ ಹಣ ಪಾಕಿಸ್ತಾನದಿಂದ ರವಾನೆಯಾಗುತ್ತಿರುವತನಕ ಅವನಿಗೆ 370ನೇ ವಿಧಿ ಬೇಕು. ಪಾಕಿಸ್ತಾನದ ಕೈಖಾಲಿಯಾದರೆ ಅವನಿಗೂ ಭಾರತದೊಂದಿಗಿನ ವಿಲೀನದ ಬಗ್ಗೆ ಅಭ್ಯಂತರವಿಲ್ಲ. ಹಣ ಗಳಿಸುವ ಮಾರ್ಗವೊಂದಿದ್ದರೆ ಸಾಕು. 

ನಾಲ್ಕನೆಯ ವರ್ಗಕ್ಕೆ ಸೇರುವ ಉಗ್ರರನ್ನು ಭೇಟಿಯಾಗಲು ನಾವು ಸಿದ್ಧರಿದ್ದರೂ ಅವಕಾಶ ಲಭಿಸುವುದಿಲ್ಲ. ಮಾಜಿ ಉಗ್ರರನ್ನು ಮಾತನಾಡಿಸಲು ಯತ್ನಿಸುವುದೂ ಅಪಾಯಕರ. ಅವರಿಗೆ ಮಾತ್ರವಲ್ಲ, ನಮಗೂ. ಫೋನಿನಲ್ಲಿ ನಾಲ್ಕು ಮಾತನಾಡಬೇಕೆಂದರೂ ಗಂಟೆಗಟ್ಟಳೆ ಕಾದು, ಸಂಪರ್ಕ ದೊರೆತಾಗ ನಾನೊಂದು ಪ್ರಶ್ನಿಸಿದರೆ ಅವರದ್ದು ಬೇರೆಯೇ ಉತ್ತರ. ಒತ್ತಾಯಿಸಿದರೆ ಆಡುವ ಮಾತನ್ನೂ ನಿಲ್ಲಿಸಿಯಾರೆಂಬ ಆತಂಕ.

ಐದನೆಯ ವರ್ಗದ ಕಾಶ್ಮೀರೀ ಹಿಂದೂಗಳ ಪಾಡನ್ನು ಹೇಳದಿರುವುದೇ ಸೂಕ್ತ. ಬಹುತೇಕ ಸರ್ಕಾರಿ ಉದ್ಯೋಗಗಳಲ್ಲಿರುವ ಅವರದು ಪಂಜರದ ಗಿಳಿಗಳ ಬದುಕು. ಕುಹಕ, ಬೆದರಿಕೆಯ ನೋಟ ಮಾತುಗಳಿಗೆ ಸ್ಪಂದಿಸದಿರುವುದನ್ನು ರೂಢಿಸಿಕೊಂಡು, ತಗ್ಗಿಸಿದ ತಲೆಯನ್ನು ಮೇಲೆತ್ತದೆ ಜೀವನ ಸವೆಸುತ್ತಾರೆ.

ಆರನೆಯ ವರ್ಗ, 370ನೇ ವಿಧಿಯ ರದ್ದನ್ನು ಸಂಭ್ರಮಿಸುತ್ತಿರುವವರದ್ದು. ಇವರಿಗೆ ಭಾರತವೂ ಬೇಕು. ಇಲ್ಲಿಯ ಜನ, ತಿನಿಸು, ಬಾಲಿವುಡ್‌ನ ಹಿಂದಿ ಹಾಡುಗಳು, ಎಲ್ಲವೂ ಪ್ರಿಯವೇ. ಇವರು ಮುಖ್ಯವಾಗಿ, ಕಾಶ್ಮೀರೀ ಹಿಂದೂಗಳು ತಮ್ಮ ಮೂಲಸ್ಥಾನಗಳಿಗೆ ಹಿಂತಿರುಗಬೇಕೆಂಬ ಪ್ರಾಮಾಣಿಕ ಕಳಕಳಿ ಹೊಂದಿರುವವರು. ಸೋಜಿಗವೆಂದರೆ, ಈ ವರ್ಗವೂ ಸೇರಿದಂತೆ, ಕಾಶ್ಮೀರದಲ್ಲಿರುವ ಯಾವ ಮುಸ್ಲಿಮರಿಗೂ ತಮ್ಮದು ಧರ್ಮಯುದ್ಧವೆಂಬ ಭ್ರಮೆಯಿಲ್ಲ. ಒಂದು ಉದಾಹರಣೆ - ರಮ್ಜಾನ್ ಹಬ್ಬದ ಉಪವಾಸದ ಸಮಯದಲ್ಲಿ ಯುವಕ-ಯುವತಿಯರು ಹಗಲಿನಲ್ಲಿಯೇ ಹಿಂದೂ ಹೋಟೆಲುಗಳಿಗೆ ಭೇಟಿ ನೀಡಿ ತಿಂಡಿ-ಊಟವನ್ನು ಸೇವಿಸುತ್ತಾರೆ. ಇವರು ಒಳಗೆ ಕುಳಿತಿರುವುದು ಕಾಣಿಸಬಾರದೆಂದು ಹೋಟೆಲಿನ ಬಾಗಿಲಿಗೆ ಪರದೆಯನ್ನು ಇಳಿಬಿಡಲಾಗಿರುತ್ತದೆ!

ಸೂಕ್ಷ್ಮ ಪ್ರದೇಶಗಳಲ್ಲಂತೂ ಎಲ್ಲೆಡೆ ಹೆಪ್ಪುಗಟ್ಟಿರುವ ಮೌನ. ಮಾತಿನಲ್ಲಿ, ಕೃತಿಯಲ್ಲಿ, ಮೌನದಲ್ಲೂ ಎದ್ದುಕಾಣಿಸುವ ದಿಗಿಲು. ಪ್ರತಿ ರಸ್ತೆಯಲ್ಲೂ ಗಸ್ತು ತಿರುಗುತ್ತಲೇ ಇರುವ ಸೇನೆಯ, ಪೋಲೀಸರ ತುಕಡಿಗಳು. ಎಲ್ಲಿ ಹೆಜ್ಜೆಯಿಟ್ಟರೆ ಏನು ಘಟಿಸುವುದೋ ಎಂದು ಪ್ರತಿಕ್ಷಣವೂ ಕಾಡುವ ಆತಂಕ. ಇದ್ದಕ್ಕಿದ್ದಂತೆ ಆರಂಭವಾಗುವ ಕಲ್ಲುಗಳ ಸುರಿಮಳೆ. ಸೈನಿಕರ ಬಂದೂಕುಗಳಿಂದ ತೂರಿಬರುವ ಪೆಲ್ಲೆಟ್‌ಗಳು. ಈ ಕ್ಷಣ ನೆಲೆಸಿರುವ ಶಾಂತಿ ಮರುಕ್ಷಣವೇ ಮರೀಚಿಕೆ.`ಮೇಡಂ ಅಷ್ಟು ಬೇಗ ನಡೆಯಬೇಡಿ, ಹಾಗೆ ನಿಲ್ಲಬೇಡಿ, ಹಾಗೆ ನೋಡಬೇಡಿ, ಅವರನ್ನ ಮಾತನಾಡಿಸಬೇಡಿ.' ಎಲ್ಲದಕ್ಕೂ 'ಬೇಡಿ' ತೊಡಿಸಿದ ಜೊತೆಗಾರರು.`ಇದೆಂಥ ಕಾಶ್ಮೀರ ತೋರಿಸುತ್ತಿದೀರ ನನಗೆ?' ಮನನೊಂದು ಪ್ರಶ್ನಿಸಿದರೆ, `ಕಾಶ್ಮೀರವಿರುವುದೇ ಹೀಗೆ. ಇತರರಿಗೆ ತೋರಿಸುವುದಕ್ಕಿಂತ ಹೆಚ್ಚಿನದನ್ನು ತೋರಿಸುತ್ತಿದ್ದೇವೆ. ಸುಮ್ಮನೆ ನಾವು ಹೇಳಿದಂತೆ ಕೇಳಿ. ಊರಿಗೆ ಹಿಂತಿರುಗಬೇಕೋ ಬೇಡವೋ?' ತಂದೆ ಮಕ್ಕಳನ್ನು ಗದರುವಂತೆ ನನ್ನನ್ನು ಗದರಿ ಪ್ರತಿಯೊಂದಕ್ಕೂ ತಡೆಹಾಕಿದ್ದರು. ಅಷ್ಟಾಗಿಯೂ ಕೆಲವು ಅಪಾಯಕರ ಸನ್ನಿವೇಶಗಳಲ್ಲಿ ಸಿಲುಕಿದಾಗಲೇ ಅವರ ಮಾತುಗಳು ಸರಿಯಾಗಿ ಅರ್ಥವಾದದ್ದು.

ಇಂತಿಪ್ಪ ಕಾಶ್ಮೀರವನ್ನು, ನಂತರ ಜಮ್ಮುವಿನ ವಸತಿಪ್ರದೇಶದಲ್ಲಿರುವ ಕಾಶ್ಮೀರೀ ಹಿಂದೂಗಳನ್ನು ಭೇಟಿಯಾಗಿ ಮರಳುವ ವೇಳೆಗೆ ಮನಸ್ಸನ್ನು ಆವರಿಸಿದ್ದು ಖಿನ್ನತೆ. ನನ್ನೊಂದಿಗೆ ಒಂದಿಡೀ ದಿನವನ್ನು ವ್ಯಯಿಸಿ ಹಲವಾರು ವಿಷಯಗಳನ್ನು ಚರ್ಚಿಸಿದ್ದ ಯುವಕ ಪುಲ್ವಾಮಾ ಜಿಲ್ಲೆಯ ಶಬ್ಬೀರ್ ಅಹಮದ್ ಭಟ್ ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಉಗ್ರರ ಗುಂಡಿಗೆ ಬಲಿಯಾದಾಗ ಖಿನ್ನತೆ ಮರುಕಳಿಸಿತ್ತು. `ನಾನು ಹಿಟ್ ಲಿಸ್ಟ್ ನಲ್ಲಿದೀನಿ. ನನ್ನ ಕಾರಿನಲ್ಲಿ ಕೂರುವ ಮುನ್ನ ಚೆನ್ನಾಗಿ ಆಲೋಚಿಸಿ.' ನಗುತ್ತಾ ನುಡಿದಿದ್ದ ಆತನೊಡನೆಯೇ ನಕ್ಕಿದ್ದ ನೆನಪು ನಂತರವೂ ಬಹಳ ದಿನ ಬಾಧಿಸಿತ್ತು. ಊರಿಗೆ ಮರಳುವ ವೇಳೆಗೆ, ಈ ಮೊದಲು ಮೂಡಿದ್ದ ಕಾದಂಬರಿಯ ಕಥಾಸ್ವರೂಪದ ಕಲ್ಪನೆ ಅಳಿಸಿಹೋಗಿ, ಈ ದುಸ್ಥಿತಿಗೆ ಕಾರಣವಾಗಿರುವ ಸತ್ಯವನ್ನಲ್ಲದೆ ಬೇರಾವುದನ್ನು ಆಧರಿಸಿ ಬರೆದರೂ ಅದು ಕಾಶ್ಮೀರಕ್ಕೆ ಬಗೆಯುವ ದ್ರೋಹವೆನಿಸಿ ಕೆಲದಿನಗಳನ್ನು ವಿಷಣ್ಣತೆಯಿಂದ ಕಳೆದು ನಂತರ ಬರೆದಾಗ ಮೂಡಿದ್ದು ‘ಕಶೀರ’.

ಮುಂದಿನ ದಿನಗಳು ಕಾಶ್ಮೀರೀ ಹಿಂದೂಗಳ ಮುಖದಮೇಲೆ ನಗೆಯರಳಿಸೀತು. ಆದರೆ ಈತನಕ ಅನುಭವಿಸಿರುವ ಯಾತನೆಯನ್ನು ಮರೆಯುವುದು ಅವರಿಗೆ ಸುಲಭವಲ್ಲ.ಅವರ ವ್ಯಸನವನ್ನು ಕಣ್ಣಾರೆ ಕಂಡಿರುವವರ ಪಾಡೂ ಅವರದಕ್ಕಿಂತ ಭಿನ್ನವಲ್ಲ.

(ಲೇಖಕಿ: ಕಶೀರ ಕೃತಿಯ ಕರ್ತೃ) 

Post Comments (+)