ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಗರ್‌ ತೀರದ ಸಂತ

Last Updated 23 ನವೆಂಬರ್ 2019, 19:30 IST
ಅಕ್ಷರ ಗಾತ್ರ

ನೈಜೀರಿಯಾದ ಪರಿಸರ ಮತ್ತು ಮಾನವ ಹಕ್ಕುಗಳ ಹೋರಾಟಗಾರ ಕೆನ್ ಸಾರೋ ವೀವಾ ಅಗಲಿ ಎರಡು ದಶಕಗಳು ಕಳೆದಿವೆ. ನಿಗರ್ ನದಿಪಾತ್ರದ ಒಗೋನಿ ಸಮುದಾಯಕ್ಕೆ ಸ್ಫೂರ್ತಿ ಸೆಲೆಯಾಗಿದ್ದ ಕೆನ್‍. ಆತನ ಮೌಲ್ಯಾದರ್ಶ, ಬಹುರಾಷ್ಟ್ರೀಯ ಸಂಸ್ಥೆಗಳ ವಸಾಹತುಶಾಹಿ ದಬ್ಬಾಳಿಕೆ ವಿರುದ್ಧದ ಆತನ ಅಹಿಂಸಾ ಪ್ರತಿರೋಧ ಜಗತ್ತಿನಾದ್ಯಂತ ಮೂಲ ನಿವಾಸಿಗಳ ಹೋರಾಟಕ್ಕೆ ಇಂದಿಗೂ ಮಾದರಿ.

ಕೆನ್ ಹುಟ್ಟಿದ್ದು ನಿಗರ್ ನದಿ ಪಾತ್ರದಲ್ಲಿ ಶತಮಾನಗಳಿಂದ ನೆಲೆಸಿರುವ ಒಗೋನಿ ಬುಡಕಟ್ಟು ಸಮುದಾಯದಲ್ಲಿ. ಆಗ್ನೇಯ ನೈಜೀರಿಯಾದ ಜನ, ಜಾನುವಾರು, ಜೀವವೈವಿಧ್ಯ ಮತ್ತು ಒಟ್ಟಾರೆ ಪರಿಸರವನ್ನು ಮಲಿನಗೊಳಿಸಿರುವ ಬ್ರಿಟನ್ ಮೂಲದ ರಾಯಲ್ ಡಚ್ ಷೆಲ್ ಕಂಪನಿ, ಕೆನ್ ಹುಟ್ಟುವ ಮೊದಲೇ ನೈಜೀರಿಯಾವನ್ನು ಪ್ರವೇಶಿಸಿತ್ತು.

ಒಂದೆಡೆ ಕೆನ್ ಬೆಳೆದು ವಿಶ್ವವಿದ್ಯಾಲಯ ಪ್ರವೇಶಿಸಿ ಸೃಜನಶೀಲ ಬರಹಗಾರನಾಗಿ, ವಿಚಾರವಂತಿಕೆ ರೂಢಿಸಿಕೊಂಡ ಹೋರಾಟಗಾರನಾಗಿ ಬೆಳೆಯುತ್ತಾ ಬಂದರೆ, ಮತ್ತೊಂದೆಡೆ ಷೆಲ್ ಕಂಪನಿ ಬಲಿಷ್ಠವಾಗಿ ಬೆಳೆದು ನೈಜೀರಿಯಾದ ತೈಲ ನಿಕ್ಷೇಪದ ಕಾರ್ಯ ನಿರ್ವಹಣೆಯ ಸಂಪೂರ್ಣ ಒಡೆತನವನ್ನು ಹಿಂಬಾಗಿಲಿನಿಂದ ಪಡೆದುಕೊಳ್ಳುತ್ತಿತ್ತು. ಕೆನ್‍ನ ಹೋರಾಟ ನೈಜೀರಿಯಾ ಮಿಲಿಟರಿ ಸರ್ಕಾರದ ಸಂಪೂರ್ಣ ಬೆಂಬಲ ಹೊಂದಿದ್ದ ಇಂತಹ ಬಲಿಷ್ಠ ಬಹುರಾಷ್ಟ್ರೀಯ ಕಂಪನಿಯ ವಿರುದ್ಧವಾಗಿತ್ತು. ಈ ಡೇವಿಡ್ ಮತ್ತು ಗೋಲಿಯತ್‍ನ ಯುದ್ಧದಲ್ಲಿ, ಡೇವಿಡ್ ಗೆಲುವು ಸಾಧಿಸಲಾಗಲಿಲ್ಲ. ಆದರೆ, ಗೋಲಿಯತ್‍ನ ಅಟ್ಟಹಾಸ ಮಾತ್ರ ಇನ್ನೂ ಮುಗಿದಿಲ್ಲ.

ಬಹುರಾಷ್ಟ್ರೀಯ ಕಂಪನಿ ದಬ್ಬಾಳಿಕೆ

2011ರ ನಂತರ ಷೆಲ್ ಸಂಸ್ಥೆ ನೈಜೀರಿಯಾದಲ್ಲಿ ತೈಲ ಉತ್ಪಾದನೆಯನ್ನು ನಿಲ್ಲಿಸಿದ್ದರೂ ಷೆಲ್ ಪೆಟ್ರೋಲಿಯಂ ಡೆವೆಲಪ್‍ಮೆಂಟ್ ಕಾರ್ಪೋರೇಷನ್ ಆಫ್ ನೈಜೀರಿಯಾ (ಎಸ್‍ಪಿಡಿಸಿ) ಎಂಬ ಅಂಗಸಂಸ್ಥೆ ಮೂಲಕ ಒಳನಾಡಿನಿಂದ ಕರಾವಳಿಗೆ ಸಂಬಂಧ ಕಲ್ಪಿಸುವ ಸಾವಿರಾರು ಕಿಲೋಮೀಟರ್‌ಗಳ ಪೈಪ್‍ಲೈನ್‍ನ ನಿಯಂತ್ರಣ ಸಾಧಿಸಿದೆ. 2008ರಲ್ಲಿ ಒಗೋನಿ ಪ್ರದೇಶದ ಬೋಡೋ ಎಂಬ ಗ್ರಾಮದಲ್ಲಿ ಪೈಪ್‍ಲೈನ್‍ಗಳಿಂದ ಎರಡು ಕಡೆ ಬೃಹತ್ ಪ್ರಮಾಣದಲ್ಲಿ ತೈಲ ಸೋರಿಕೆಯಾಗಿದ್ದು ಷೆಲ್ ಕಾರ್ಯಾಚರಣೆ ಮುಂದುವರಿಕೆಯ ಸ್ಪಷ್ಟ ನಿದರ್ಶನ.

2017ರಲ್ಲಿ ಸ್ವಿಡ್ಜರ್ಲೆಂಡ್‌ನ ಸೆಂಟ್ ಗ್ಯಾಲನ್ ವಿಶ್ವವಿದ್ಯಾಲಯದ ಪ್ರೊಫೆಸರ್ ರೋಲ್ಯಾಂಡ್ ಹಾಡ್ಲರ್ ‘ನೈಜೀರಿಯಾದ ಒಗೋನಿ ಪ್ರದೇಶದ ತೈಲ ಸೋರಿಕೆ ಮತ್ತು ಶಿಶು ಮರಣದ ಸಂಬಂಧ’ ಕುರಿತು ಅಧ್ಯಯನ ಕೈಗೊಂಡಿದ್ದರು. ತೈಲ ಸೋರಿಕೆಯ ಅವಧಿಯಲ್ಲಿ ಗರ್ಭಿಣಿಯರು ಒಗೋನಿ ಪ್ರದೇಶದಲ್ಲಿ ನೆಲೆಸಿದ್ದರೆ ಅಂತಹವರ ಮಕ್ಕಳ ಆಯಸ್ಸು ಒಂದು ತಿಂಗಳಿಗಿಂತ ಕಡಿಮೆ ಎಂಬ ಆಘಾತಕಾರಿ ಅಂಶ ಈ ಅಧ್ಯಯನದಲ್ಲಿ ಹೊರಬಂದಿದೆ. ಇನ್ನು ವಿಶ್ವಸಂಸ್ಥೆಯ ಪರಿಸರ ಯೋಜನೆಯ 2011ರ ವರದಿಯೊಂದು ದಶಕಗಳಿಂದ ತೈಲ ಸೋರಿಕೆಯಾಗುತ್ತಿರುವ ಒಗೋನಿ ಪ್ರದೇಶದಲ್ಲಿ ವಾಸಿಸುತ್ತಿರುವ ಜನರ ಆರೋಗ್ಯ ಸಹಜ ಸ್ಥಿತಿಗೆ ಬರಲು ಕನಿಷ್ಠ 30 ವರ್ಷಗಳು ಬೇಕಾಗುತ್ತವೆ ಎಂದು ದಾಖಲಿಸಿದೆ. ರೋಗ ನಿರೋಧಕ ಶಕ್ತಿ ಬೆಳವಣಿಗೆಯಾಗದ ನವಜಾತ ಶಿಶುಗಳು ತೈಲ ಸೋರಿಕೆಯ ಮಾಲಿನ್ಯ ಮತ್ತು ವಿಷಕಾರಿ ರಾಸಾಯನಿಕಗಳ ಹೊಡೆತಕ್ಕೆ ಸಿಲುಕಿ ತೀವ್ರ ಪೋಷಕಾಂಶಗಳ ಕೊರತೆಯಿಂದ ಸಾವನ್ನಪ್ಪುತ್ತಿವೆ ಎಂದು ವರದಿ ಹೇಳುತ್ತದೆ.

ಪರಿಸ್ಥಿತಿ ಇಷ್ಟು ವಿಕೋಪಕ್ಕೆ ಹೋಗಿದ್ದರೂ ಜಗತ್ತಿನ ಮಂಚೂಣಿಯ ಬಹುರಾಷ್ಟ್ರೀಯ ತೈಲ ಕಂಪನಿಯಾದ ಬ್ರಿಟನ್ ಮೂಲದ ರಾಯಲ್ ಡಚ್ ಷೆಲ್, ನೈಜೀರಿಯಾದಲ್ಲಿ ಪರ್ಯಾಯ ಮಾರ್ಗದ ಮೂಲಕ ತೈಲ ಕಾರ್ಯಾಚರಣೆಯನ್ನು ಎಗ್ಗಿಲ್ಲದೆ ಮುಂದುವರಿಸುತ್ತಿದೆ. 1936ರಲ್ಲಿ ನೈಜೀರಿಯಾಕ್ಕೆ ಕಾಲಿಡುವ ಷೆಲ್, 1958ರಲ್ಲಿ ಮೊಟ್ಟ ಮೊದಲಿಗೆ ತೈಲ ರಫ್ತು ಮಾಡುತ್ತದೆ. ಅಂದಿನಿಂದ ಇಂದಿನವರೆಗೆ ನಿಗರ್ ನದಿಪಾತ್ರದ ತೈಲ ನಿಕ್ಷೇಪದ ಹಿಂದೆ ಬಿದ್ದಿರುವ ಷೆಲ್, ಫ್ರಾನ್ಸ್‌ ದೇಶದ ಟೋಟಲ್ ಕಂಪನಿ ಮತ್ತು ಇಟಲಿ ಮೂಲದ ಇಎನ್‍ಐ ಕಂಪನಿಗಳು ಒಂದು ಕಾಲದಲ್ಲಿ ಅತ್ಯಂತ ಫಲವತ್ತಾಗಿದ್ದ ಒಗೋನಿ ಪ್ರದೇಶವನ್ನು ಸಂಪೂರ್ಣ ನಾಶಪಡಿಸಿದ ಆರೋಪ ಹೊತ್ತಿವೆ.

ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಸಂಸ್ಥೆಯ ಪ್ರಕಾರ 2011ರಲ್ಲಿ ರಾಯಲ್ ಡಚ್ ಷೆಲ್‍ನ ತೈಲ ಸೋರಿಕೆಯ ಪ್ರಮಾಣ 17.5 ಮಿಲಿಯನ್ ಲೀಟರ್‌ಗಳಿಷ್ಟಿದ್ದರೆ, ಇಟಲಿ ಮೂಲದ ಇಎನ್‍ಐ ಕಂಪನಿಯ ತೈಲ ಸೋರಿಕೆಯ ಪ್ರಮಾಣ 2014ರಲ್ಲಿ 4.1 ಮಿಲಿಯನ್ ಲೀಟರ್‌ಗಳಷ್ಟಿತ್ತು. 2011ರಿಂದ ಇಲ್ಲಿಯವರೆಗೆ ಷೆಲ್ ಮತ್ತು ಇಎನ್‍ಐನಿಂದ ಸುಮಾರು 136,821 ಬ್ಯಾರೆಲ್‍ಗಳಷ್ಟು ತೈಲ ಸೋರಿಕೆಯಾಗಿ ನಿಗರ್ ನದಿಗೆ ಸೇರಿದೆ ಎಂದು ಈ ಎರಡು ಕಂಪನಿಗಳು ಸ್ವತಃ ವರದಿ ಮಾಡಿವೆ.

1979ರ ಹೊತ್ತಿಗೆ ನೈಜೀರಿಯಾದ ತೈಲ ಉದ್ಯಮದಲ್ಲಿ ಮಂಚೂಣಿಯ ಸ್ಥಾನವನ್ನು ಆಕ್ರಮಿಸುವ ಷೆಲ್ ಶೇಕಡ 30ರಷ್ಟು ಹೂಡಿಕೆಯ ಮಾಲೀಕತ್ವ ಪಡೆದುಕೊಳ್ಳುತ್ತದೆ. ನೈಜೀರಿಯಾ ರಾಷ್ಟ್ರೀಯ ಪೆಟ್ರೋಲಿಯಂ ಸಂಸ್ಥೆ ಶೇಕಡ 55, ಇಎನ್‍ಐ ಶೇಕಡ 5 ಮತ್ತು ಟೋಟಲ್ ಶೇಕಡ 10ರಷ್ಟು ಷೇರು ಒಡೆತನ ಹೊಂದುತ್ತವೆ. ಆದರೆ, ಒಟ್ಟಾರೆ ಕಾರ್ಯಾಚರಣೆಯ ಸಂಪೂರ್ಣ ನಿಯಂತ್ರಣ ಷೆಲ್‍ನದಾಗುತ್ತದೆ. 1990ರ ಸರಿಸುಮಾರಿಗೆ ಒಗೋನಿ ಪ್ರದೇಶದಲ್ಲಿ ಸುಮಾರು 3000 ಕೋಟಿ ಡಾಲರ್‌ಗಳಷ್ಟು ಮೌಲ್ಯದ ತೈಲೋತ್ಪಾದನೆಯಾಗುತ್ತಿತ್ತು. ಜೊತೆಗೆ ಈ ಪ್ರದೇಶದ ಮಾಲಿನ್ಯ ಕೂಡ ಮಿತಿಮೀರಿತ್ತು. ತೈಲ ಉತ್ಪಾದನೆಯಿಂದ ಒಗೋನಿ ಸಮುದಾಯದವರಿಗೆ ಬಿಡಿಗಾಸಿನ ಲಾಭವೂ ದಕ್ಕಲಿಲ್ಲ.

ಕೆನ್ ಸಾರೋ ಹೋರಾಟ

ಸರ್ಕಾರ ಮತ್ತು ಷೆಲ್‍ನ ದಬ್ಬಾಳಿಕೆಯನ್ನು ಸಂಘಟಿತವಾಗಿ ವಿರೋಧಿಸುವುದಕ್ಕಾಗಿ ಒಗೋನಿ ಮಹಿಳೆಯರು, ಯುವಕರು, ಶಿಕ್ಷಕರು, ವಿದ್ಯಾರ್ಥಿಗಳು, ಮತ್ತು ಇತರ ವೃತ್ತಿಪರರನ್ನು ಒಳಗೊಂಡ ‘ಒಗೋನಿ ಸಮುದಾಯದ ಉಳಿವು ಚಳವಳಿ’ (ಎಂಒಎಸ್‍ಒಪಿ) 1990ರಲ್ಲಿ ಆರಂಭವಾಯಿತು. ಕೆನ್ ಸಾರೋ ವೀವಾ ನೇತೃತ್ವದ ಈ ಚಳವಳಿ ಎರಡು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿತ್ತು: ಒಂದೆಡೆ ಒಗೋನಿ ಸಮುದಾಯದ ರಾಜಕೀಯ, ಆರ್ಥಿಕ ಮತ್ತು ಪರಿಸರ ಹಕ್ಕುಗಳಿಗಾಗಿ ಎಂಒಎಸ್‍ಒಪಿ ರಚಿಸಿದ ‘ಒಗೋನಿ ಹಕ್ಕುಗಳ ಮಸೂದೆ’ಯನ್ನು ಪರಿಗಣಿಸಲು ನೈಜೀರಿಯಾ ಸರ್ಕಾರಕ್ಕೆ ಒತ್ತಡ ಹೇರಿದರೆ, ಮತ್ತೊಂದೆಡೆ ಷೆಲ್ ಕಂಪನಿ ನೈಜೀರಿಯಾ ಸರ್ಕಾರವನ್ನು ಬೈಪಾಸ್ ಮಾಡಿ, ತೈಲೋದ್ಯಮವು ನಿಗರ್ ನದಿಪಾತ್ರದ ಪರಿಸರದ ಮೇಲೆ ಉಂಟು ಮಾಡಿರುವ ಪ್ರಭಾವವನ್ನು ಪರಿಶೀಲಿಸಲು ಮತ್ತು ತನ್ನ ಕಾರ್ಯ ಚಟುವಟಿಕೆಯ ಗುಣಮಟ್ಟವನ್ನು ವೃದ್ಧಿಸಿಕೊಳ್ಳಲು ಒತ್ತಡ ಹೇರಿತು.

1993ರ ಜನವರಿ ತಿಂಗಳಲ್ಲಿ ವಿಶ್ವ ಮೂಲನಿವಾಸಿಗಳ ವರ್ಷಾಚರಣೆಯ ಭಾಗವಾಗಿ ಒಗೋನಿ ಸಮುದಾಯದ ಸುಮಾರು ಮೂರು ಲಕ್ಷ ಮಂದಿ ತಮ್ಮ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಶಾಂತಿಯುತ ಪ್ರತಿಭಟನೆ ಕೈಗೊಂಡರು. ಆದರೆ, ನೈಜೀರಿಯಾ ಸರ್ಕಾರ ಹಿಂಸೆ, ದಬ್ಬಾಳಿಕೆ ಮೂಲಕ ಪ್ರತಿಭಟನೆಯನ್ನು ಹತ್ತಿಕ್ಕಲು ಪ್ರಯತ್ನಿಸಿತು. ಸುಮಾರು ನಾಲ್ಕು ವರ್ಷಗಳ ಕಾಲ ನಡೆದ ಈ ಜನಾಂಗೀಯ ಮಿಲಿಟರಿ ಕಾರ್ಯಾಚರಣೆಯಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಹತ್ಯೆಗೊಳಗಾಗಿದ್ದು, ಲಕ್ಷಾಂತರ ಮಂದಿ ನಿರಾಶ್ರಿತರಾದರು. ಹೋರಾಟದಲ್ಲಿ ಭಾಗವಹಿಸಿದ ಸಾವಿರಾರು ಜನ ಯಾವುದೇ ರೀತಿಯ ನ್ಯಾಯಾಂಗ ವಿಚಾರಣೆ ಎದುರಿಸದೆ ಇಂದಿಗೂ ಜೈಲಿನಲ್ಲಿ ಕೊಳೆಯುತ್ತಿದ್ದಾರೆ.

1993ರಲ್ಲಿ ಕೆನ್ ಸಾರೋ ವೀವಾ ಹಲವು ಬಾರಿ ಬಂಧನಕ್ಕೊಳಗಾಗಿ ಬಿಡುಗಡೆಯಾದ. ಆದರೆ, ನೈಜೀರಿಯಾದ ನಾಲ್ಕು ಪ್ರಮುಖ ರಾಜಕೀಯ ನಾಯಕರ ಹತ್ಯೆಗೆ ಯುವಕರನ್ನು ಪ್ರಚೋದಿಸಿದ ಗಂಭೀರ ಆರೋಪದ ಮೇಲೆ 1994ರಲ್ಲಿ ಬಂಧನಕ್ಕೊಳಗಾಗುವ ಕೆನ್, ಮತ್ತೆ ಜೀವಂತವಾಗಿ ಹಿಂದಿರುಗಿ ಬರಲಿಲ್ಲ. ಜಾಗತಿಕವಾಗಿ ಖಂಡನೆಗೊಳಗಾದ ನ್ಯಾಯಾಂಗ ವಿಚಾರಣೆಯ ಬೃಹನ್ನಾಟಕವಾಡಿ, ‘ಬ್ರಿಟನ್ ಪ್ರಧಾನಿ ಪ್ರಾಯೋಜಿತ ನ್ಯಾಯಾಂಗ ಹತ್ಯೆ’ ಎಂದೇ ಬಿಂಬಿತವಾದ ತೀರ್ಪಿನ ಮೂಲಕ ನೈಜೀರಿಯಾದ ಮಿಲಿಟರಿ ಸರ್ವಾಧಿಕಾರಿ ಸಾನಿ ಅಬಾಚಾ ನೇತೃತ್ವದ ಸರ್ಕಾರ ಕೆನ್ ಮತ್ತು ಆತನ ಎಂಟು ಮಂದಿ ಸಹಚರರನ್ನು ಗಲ್ಲಿಗೇರಿಸಿತು.

ಷೆಲ್‍ನಂತಹ ಬಲಿಷ್ಠ ಬಹುರಾಷ್ಟ್ರೀಯ ಕಂಪನಿಗೆ ಅಹಿಂಸಾ ಮಾರ್ಗದ ಮೂಲಕ ಪ್ರತಿರೋಧ ಒಡ್ಡಿದ ಕೆನ್ ಸಾರೋ ವೀವಾನ ‘ಬ್ರಿಟನ್ ಸರ್ಕಾರದ ಕೃಪಾಪೋಷಿತ ಕೊಲೆ’ ವಿಶ್ವದಾದ್ಯಂತ ಸಂಚಲನ ಸೃಷ್ಟಿಸಿತು. ನೈಜೀರಿಯಾವನ್ನು ಕಾಮನ್‍ವೆಲ್ತ್ ರಾಷ್ಟ್ರಗಳ ಗುಂಪಿನಿಂದ ಮೂರು ವರ್ಷಗಳ ಕಾಲ ಬಹಿಷ್ಕರಿಸುವ ಮೂಲಕ ತಿಪ್ಪೆ ಸಾರಿಸಲಾಯಿತು. ಆದರೆ, ಇದ್ಯಾವುದೂ ಜನರ ಸ್ಮೃತಿಪಟಲದಲ್ಲಿ ಹೆಚ್ಚಿನ ಕಾಲ ಉಳಿಯಲಿಲ್ಲ. ‘ನಾನು ಮತ್ತು ಒಗೋನಿ ಸಮುದಾಯ ಅನುಭವಿಸುತ್ತಿರುವ ಶೋಷಣೆ, ಬಂಧನ, ಸೆರೆವಾಸ, ದಬ್ಬಾಳಿಕೆ ಮತ್ತು ಕೊನೆಗೆ ಸಾವು, ಲಕ್ಷಾಂತರ ಜನರ ದುಸ್ವಪ್ನವನ್ನು ಕೊನೆಗಾಣಿಸಲು ನಾವು ತೆರಬೇಕಾದ ಬೆಲೆ’ ಎಂದಿದ್ದ ಕೆನ್‍ನ ಪ್ರೇರಣೆ ಮಾತ್ರ ಹಾಗೇ ಇದೆ.

ಮನಕಲಕುವ ಭಾಷಣ

ಸ್ಫೂರ್ತಿದಾಯಕ ನಾಯಕನಾಗಿದ್ದ ಕೆನ್ ಸಾರೋ ವೀವಾ 1994ರಲ್ಲಿ ಪ್ರತಿಷ್ಠಿತ ರೈಟ್ ಲೈವ್ಲಿಹುಡ್ ಪ್ರಶಸ್ತಿಗೆ ಪಾತ್ರರಾದವರು. ನ್ಯಾಯಾಲಯ ಅವರಿಗೆ ಮರಣದಂಡನೆ ಶಿಕ್ಷೆಯ ತೀರ್ಪು ನೀಡುವ ಮುನ್ನ ಮಾಡಿದ ಮನಕಲಕುವ ಭಾಷಣದ ಸಣ್ಣ ತುಣುಕು ಇಲ್ಲಿದೆ:

‘ಓ ಭಗವಂತ, ನಾನು ಮತ್ತು ನನ್ನ ಸಹಚರರು ಇತಿಹಾಸದ ಹೊಸ್ತಿಲಲ್ಲಿ ನಿಂತಿದ್ದೇವೆ. ಇಂದು ಕಟಕಟೆಯಲ್ಲಿ ನಿಂತವರು ನಾವಷ್ಟೇ ಅಲ್ಲ, ಷೆಲ್ ಕಂಪನಿ, ನೈಜೀರಿಯಾ ದೇಶ, ದೇಶದ ನಾಯಕರು, ಅವರ ಭಟ್ಟಂಗಿಗಳು ಕೂಡ ನಮ್ಮೆದುರು ನಿಂತಿದ್ದಾರೆ. ನಾವೆಲ್ಲರೂ ಕೂಡ ನಮ್ಮ ದುರಾಸೆಯಿಂದ ನಮ್ಮ ಮಕ್ಕಳ ಭವಿಷ್ಯಕ್ಕೆ ತಿಲಾಂಜಲಿ ಇಡುತ್ತಿದ್ದೇವೆ. ಮುಕ್ತವಾದ ನಯವಂಚಕತೆಯಿಂದ ಅನ್ಯಾಯ ಮತ್ತು ದಬ್ಬಾಳಿಕೆಗೆ ಕುಮ್ಮಕ್ಕು ಕೊಡುತ್ತಿದ್ದೇವೆ. ನಮ್ಮ ಶಾಲೆಗಳು, ಆಸ್ಪತ್ರೆಗಳು ಭಣಗುಡುತ್ತಿವೆ.

‘ಹಸಿವಿನಿಂದ ಕಂಗೆಟ್ಟಿರುವ ನಾವು ದಾಸ್ಯದ ಸಂಕೋಲೆಯಲ್ಲಿ ಬಂಧಿಯಾಗುತ್ತಿದ್ದೇವೆ. ಸತ್ಯ, ನ್ಯಾಯ, ಮತ್ತು ಸ್ವಾತಂತ್ರ್ಯವನ್ನು ಗಾಳಿಗೆ ತೂರುತ್ತಿದ್ದೇವೆ. ಈ ದಬ್ಬಾಳಿಕೆಯ ಸರಮಾಲೆ ಮುಂದಿನ ತಲೆಮಾರುಗಳಲ್ಲಿ ಮತ್ತೆ ಮತ್ತೆ ಪುನರಾವರ್ತನೆಗೊಳ್ಳುತ್ತಲೇ ಇರುತ್ತದೆ. ಇದರಲ್ಲಿ ಒಂದೆಡೆ ರಕ್ಕಸರಿದ್ದರೆ, ಇನ್ನೊಂದೆಡೆ ಅಸಹಾಯಕರಿರುತ್ತಾರೆ. ಆದರೆ, ಕ್ರೌರ್ಯದ ಹಾದಿ ತುಳಿದವರಿಗೆ ಸನ್ಮಾರ್ಗದೆಡೆಗೆ ಸಾಗಲು ಇನ್ನೂ ಅವಕಾಶವಿದೆ. ಆಯ್ಕೆ ಅವರವರಿಗೆ ಬಿಟ್ಟದ್ದು.’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT