ಸೋಮವಾರ, ಆಗಸ್ಟ್ 8, 2022
21 °C

ಕಿಡ್ನಿ ಫಾದರ್

ವಿಕ್ರಂ ಕಾಂತಿಕೆರೆ Updated:

ಅಕ್ಷರ ಗಾತ್ರ : | |

Prajavani

ದಶಕದ ಹಿಂದಿನ ಘಟನೆ. ಮೊದಲು ಕೇರಳದ, ಮತ್ತೆ ವಿಶ್ವದ ‘ಚರ್ಚ್’ನಲ್ಲಿ ಚರ್ಚೆಗೆ ಕಾರಣವಾದ ‘ಕಿಡ್ನಿ’ ಪ್ರಕರಣ ಸಂಪ್ರದಾಯಕ್ಕೆ ಕಟ್ಟುಬಿದ್ದವರ ಸುತ್ತ ಅಸಮಾಧಾನ ಹೊಗೆ ಆವರಿಸುವಂತೆ ಮಾಡಿತ್ತು. ಕ್ರೈಸ್ತ ಧರ್ಮಗುರು ಒಬ್ಬರು ಅವಯವ ದಾನ ಮಾಡಲು ಮುಂದಾದದ್ದು ಅವರ ನಿದ್ದೆಗೆಡಿಸಿತ್ತು. ಅಂದು ಕಿಡ್ನಿ ದಾನ ಮಾಡಿ ಗೋಪಿನಾಥನ್ ಎಂಬ ಯುವಕನ ಜೀವ ಉಳಿಸಿದ ಧರ್ಮಗುರು ನಂತರ ಮೂತ್ರಪಿಂಡ ದಾನಕ್ಕೆ ಸಂಬಂಧಿಸಿದಂತೆ ಕೈಗೊಂಡ ಆಂದೋಲನದ ಮೂಲಕ ‘ಕಿಡ್ನಿ ಫಾದರ್’( ಕಿಡ್ನಿ ಪ್ರೀಸ್ಟ್) ಎಂದೇ ಚಿರಪರಿಚಿತರಾದರು. ಅವರ ಹೆಸರೇ ಡೇವಿಸ್ ಚಿರಮೇಲ್.

ಧರ್ಮಗುರುಗಳು ಅವಯವ ದಾನ ಮಾಡಿದ ಪ್ರಸಂಗಗಳೇ ಇಲ್ಲದಿದ್ದುದರಿಂದ ಡೇವಿಸ್ ಅವರ ಜೀವರಕ್ಷಕ ಕಾರ್ಯವು ಚರ್ಚೆಯನ್ನು ಹುಟ್ಟುಹಾಕಿತ್ತು. ಆದರೆ, ನಿಲುವು ಬದಲಿಸದ ಫಾದರ್ ಡೇವಿಸ್ ನಂತರ ಸಾವಿರಾರು ಮಂದಿಯ ಕಿಡ್ನಿದಾನಕ್ಕೆ ಪ್ರೇರಣೆಯಾದರು. ಕಿಡ್ನಿ ಫೆಡರೇಷನ್ ಆಫ್ ಇಂಡಿಯಾ ಸಂಸ್ಥೆ ರೂಪುಗೊಳ್ಳುವುದರೊಂದಿಗೆ ಅದು ಆಂದೋಲನದ ರೂಪ ತಾಳಿತು. ಕೇರಳದಲ್ಲಿ ಈಚೆಗೆ ಬಿಷಪರು ಕೂಡ ಕಿಡ್ನಿ ಕೊಟ್ಟು ಹೊಸ ಹಾದಿಯನ್ನು ತೆರೆದಿಟ್ಟಾಗ ಡೇವಿಸ್ ಅವರ ಕಿಡ್ನಿ ದಾನ ಹೊಸ ವ್ಯಾಖ್ಯಾನಕ್ಕೆ ಬರೆಯಿತು.

ಅವಯವ ದಾನದ ಮೂಲಕ ಚರ್ಚಿನ ‘ಗರ್ಭಗುಡಿ’ಯಿಂದ ಹೊರಬಂದು ಸಮಾಜಮುಖಿಯಾದ ಡೇವಿಸ್ ನಂತರ ಕೇರಳದಲ್ಲಿ ಸಾಮಾಜಿಕ ಹೋರಾಟಗಳ ಮುಂಚೂಣಿಗೆ ಬಂದರು. ಅಪಘಾತಕ್ಕೆ ಒಳಗಾದವರಿಗೆ ತಕ್ಷಣ ಚಿಕಿತ್ಸೆ ಒದಗಿಸುವ ಸೌಲಭ್ಯಗಳ ಸಂಸ್ಥೆ ಸ್ಥಾಪಿಸುವಲ್ಲಿಂದ ಹಿಡಿದು ಕೊರೊನಾ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳ ವರೆಗೆ, ಪರಿಸರವನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವ ಜನಾಂದೋಲನದಿಂದ ಶುರು ಮಾಡಿ ನದಿಯ ಹೂಳು ತೆಗೆದು ಪ್ರವಾಹ ತಡೆಯುವಂತೆ ಮಾಡುವ ವರೆಗೆ, ಹರತಾಳಕ್ಕೆ ಅಂತ್ಯ ಹಾಡುವ ಕಾಳಜಿ ಮೆರೆಯುವ ವರೆಗೆ ಇದು ಸಾಗಿತು.

ಕೊರೊನಾ ಕಾಲದಲ್ಲಿ ಆನ್‌ಲೈನ್ ತರಗತಿಗಳಲ್ಲಿ ಪಾಲ್ಗೊಳ್ಳಲು ಬಡಮಕ್ಕಳಿಗೆ ಟಿ.ವಿ ಒದಗಿಸುವ ಯೋಜನೆಯನ್ನು ಜೂನ್‌ನಲ್ಲಿ ಆರಂಭಿಸಿರುವ ಅವರು ಈಗ, ವಿದೇಶದಿಂದ ಮರಳಿ ಸಂಕಷ್ಟಕ್ಕೆ ಸಿಲುಕಿದವರಿಗೆ ‘ಹೃದಯಪೂರ್ವಂ ಪ್ರವಾಸಿ’ ಕಾರ್ಯಕ್ರಮದ ಮೂಲಕ ಮತ್ತೆ ಸಂಕಟಹರಣ ಮಾಡಲು ಮುಂದಾಗಿದ್ದಾರೆ.

ಫಾದರ್ ಡೇವಿಸ್ ಅವರದು ಅಧ್ಯಾತ್ಮ ಕುಟುಂಬ. ಇಬ್ಬರು ಸಹೋದರಿಯರು ‘ಸಿಸ್ಟರ್’ಗಳಾಗಿದ್ದಾರೆ. ಡೇವಿಸ್ ಧರ್ಮಗುರು ಆಗಿ ಮೂರು ದಶಕಗಳಾಗಿವೆ. 20ಕ್ಕೂ ಹೆಚ್ಚು ಚರ್ಚ್‌ಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಈಗ ತ್ರಿಶೂರಿನ ಕಡಂಗೋಡ್ ಚರ್ಚಿನ ಧರ್ಮಗುರು. ‘ನಡೆಯುವುದೆಲ್ಲವೂ ದೈವನಿಶ್ಚಯ’ ಎಂದು ಹೇಳುವ ಅವರದು, ‘ದೇವರೆಂದರೆ ಒಳಿತಿನ ಸಂಕೇತ. ಅದರೊಳಗೆ ಕೆಡುಕಿನ ವೈರಸ್ ದಾಳಿ ಇಟ್ಟಾಗ ಸಮಾಜಕ್ಕೇ ರೋಗ ಬಾಧಿಸುತ್ತದೆ’ ಎಂಬ ವಾದ. ಜನರು ‘ಯಾವುದನ್ನೂ ಕಳೆದುಕೊಳ್ಳಲು ಸಿದ್ಧರಿಲ್ಲ. ಇರುವುದರಲ್ಲೇ ಸುಖ ಎಂಬುದು ಅವರ ಭಾವನೆ. ವಾಸ್ತವದಲ್ಲಿ, ಕಳೆದುಕೊಂಡದ್ದರ ಬಗ್ಗೆ ನೆನೆದುಕೊಳ್ಳುವಾಗ ಸಿಗುವ ಖುಷಿಗೆ ಸೀಮೆ ಇಲ್ಲ’ ಎಂದು ಹೇಳುವ ಉದಾರಿ. ವಾಡಾನಪಳ್ಳಿಯ ಗೋಪಿನಾಥ ಮೂತ್ರಪಿಂಡ ತೊಂದರೆಗೆ ಒಳಗಾಗಿ ಸಾವಿನ ಕದ ತಟ್ಟುತ್ತಿದ್ದರು. ಧಾರ್ಮಿಕ ಚೌಕಟ್ಟಿನ ಸಂಕೋಲೆ ಕಿತ್ತೆಸೆದು ಅವರಿಗೆ ಕಿಡ್ನಿ ಕೊಟ್ಟದ್ದು 2009ರ ಸೆಪ್ಟೆಂಬರ್ 30ರಂದು. ಈ ಕಿಡ್ನಿ ಕಸಿಯೂ ವಿಶಿಷ್ಟವಾಗಿತ್ತು. ಶಸ್ತ್ರಚಿಕಿತ್ಸೆ ನೆರವೇರಿಸುವ ಮೂಲಕ ಡಾ.ಜಾರ್ಜ್ ಪಿ. ಅಬ್ರಹಾಂ ಅವರಿಂದ ಕಿಡ್ನಿ ಫೆಡರೇಷನ್‌ನ ಉದ್ಘಾಟನೆಯೂ ಆಗಿತ್ತು. ಕೆಲವೇ ದಿನಗಳ ನಂತರ ಫಾದರ್ ಡೇವಿಸ್ ಅಂಗಾಂಗ ದಾನದ ಮಹತ್ವ ಸಾರಲು ಕೇರಳದ ಉತ್ತರ ತುದಿ ಕಾಸರಗೋಡಿನಿಂದ ದಕ್ಷಿಣ ಕೊನೆಯ ತಿರುವನಂತಪುರದ ವರೆಗೆ ಯಾತ್ರೆ ಮಾಡಿದರು.

ಅವಯವ ತೆಗೆದ ನಂತರವೂ ಆರೋಗ್ಯವಂತನಾಗಿ ಓಡಾಡಬಲ್ಲೆ ಎಂಬುದನ್ನು ಸಾಬೀತು ಮಾಡುವ ಉಮೇದು ಕೂಡ ಈ ಯಾತ್ರೆಯಲ್ಲಿತ್ತು. ದಾನಕ್ಕೆ ಜನರು ಸ್ಪಂದಿಸತೊಡಗುತ್ತಿದ್ದಂತೆ ವಿಶ್ವ ಪರ್ಯಟನೆಯನ್ನೂ ಮಾಡಿದರು. ಕೇರಳದಲ್ಲಿ ನಂತರವೂ ಮೂರು ಯಾತ್ರೆಗಳಾದವು. ಇದೆಲ್ಲದರ ಪರಿಣಾಮ, 40ರಷ್ಟು ಧರ್ಮಗುರುಗಳು ಮತ್ತು 30ಕ್ಕೂ ಹೆಚ್ಚು ಸಿಸ್ಟರ್‌ಗಳು ಕೂಡ ಕಿಡ್ನಿ ದಾನ ಮಾಡಿದ್ದಾರೆ. 2017ರಲ್ಲಿ ದೇಶದಲ್ಲಿ ಅಂಗಾಂಗ ದಾನಕ್ಕಾಗಿ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿದವರಲ್ಲಿ ಅತಿಹೆಚ್ಚು ಮಂದಿ ಕೇರಳೀಯರು. 10 ಲಕ್ಷ ಮಂದಿಯ ಸಹಿ ಇರುವ ಪತ್ರವನ್ನು ಕೇಂದ್ರ ಸರ್ಕಾರದ ರಾಷ್ಟ್ರೀಯ ಅಂಗಾಂಗ ದಾನ ಸಂಸ್ಥೆಗೆ (ನೋಟೊ) ಆ ವರ್ಷ ಕಿಡ್ನಿ ಫೆಡರೇಷನ್ ಹಸ್ತಾಂತರಿಸಿತ್ತು. ಈಗ ಫಾದರ್ ಡೇವಿಸ್ ಅವರು ನೋಟೊದ ರಾಯಭಾರಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು