ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೊಂಬೆ ಹೇಳುತೈತೆ: ನನ್ನ ಭವಿಷ್ಯ ಚಿಂತಿ ತಂದೈತಿ ಸಾಹೇಬ್ರ...

Last Updated 6 ಆಗಸ್ಟ್ 2022, 19:31 IST
ಅಕ್ಷರ ಗಾತ್ರ

ದೇಶದ ಬೊಂಬೆಗಳ ಮಾರುಕಟ್ಟೆಯಲ್ಲಿ ತೀವ್ರ ಸಂಚಲನ ಮೂಡಿದ್ದು, ಬೊಂಬೆಗಳ ರಫ್ತು ವಹಿವಾಟಿನಲ್ಲಿಯೂ ಭಾರಿ ಏರಿಕೆ ಆಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ದೇಶದ ಬೊಂಬೆಗಳ ಮಾರುಕಟ್ಟೆಯಲ್ಲಿ ಮಹತ್ವದ ಸ್ಥಾನ ಪಡೆದಿರುವ ರಾಜ್ಯದ ಚನ್ನಪಟ್ಟಣ ಮತ್ತು ಕಿನ್ನಾಳ ಈ ಬೆಳವಣಿಗೆಗೆ ಹೇಗೆ ಸ್ಪಂದಿಸಿವೆ? ಈ ಪ್ರಶ್ನೆಗೆ ಉತ್ತರವಾಗಿ ಬೊಂಬೆಗಳೇ ಹೇಳಿದ ಕಥೆಗಳನ್ನು ಕೇಳೋಣ ಬನ್ನಿ...

ನಮಸ್ಕಾರ‍್ರೀ ಸಾಹೇಬ್ರ,

ಕಣ್ಣು ಹೆಂಗ ಹೊಳಿತಾವು ಗೊತ್ತೇನ್ರಿ? ನೋಡಾಕ ರಾಜಕುಮಾರಿ ಹಂಗ ಕಾಣ್ತೀನಿ. ಜರದಾರಿ ಸೀರಿ ಉಟ್ಟೀನಿ, ಕಾಸಿನ ಸರ ಹಾಕೀನಿ, ಮೈಮರೆಸುವ ಬಣ್ಣ ನನ್ನದೈತಿ, ನೋಡಿದ ಕೂಡ್ಲೇ ಎತ್ಕೊಂಡು ಮುದ್ದು ಮಾಡ್ಬೇಕು ನೋಡ್ರಿ ನನ್ನ. ಅಬ್ಬಬ್ಬಾ, ನನ್ನ ಜನ್ಮದಾತರು ನನ್ನೊಳಗ ಎಂಥಾ ಕಳೆ ತುಂಬ್ಯಾರ. ಜೀವನೂ ಇದ್‌ಬಿಟ್ಟಿದ್ರ ನಡೆದಾಡಿಬಿಡ್ತಿದ್ದೆ.

ಇಷ್ಟು ಹೇಳಿದ ಮೇಲೆ ನಾ ಯಾರೆಂದು ಗುರ್ತು ಸಿಕ್ತಲ್ಲ? ನಾನು ಬೊಂಬೆ, ಕಿನ್ನಾಳದ ಬೊಂಬೆ. ವಿಜಯನಗರ ಸಾಮ್ರಾಜ್ಯದ ಕಾಲದೊಳಗ ನಾನೂ ರಾಣಿಯಾಗಿ ಮೆರೆದಾಡೀನಿ. ಪಂಪಾ ವಿರೂಪಾಕ್ಷೇಶ್ವರ, ವಿಜಯವಿಠ್ಠಲ ದೇವಾಲಯ, ಕನಕಗಿರಿಯ ಕನಕಾಚಲಪತಿ ದೇವಸ್ಥಾನ ಹೀಗೆ ಎಲ್ಲ ಕಡಿಗೂ ನಾನದೀನಿ. ಕೊಪ್ಪಳ ಜಿಲ್ಲಾದ ಕಿನ್ನಾಳಕ್ಕ ಬಂದು ಶಾಶ್ವತವಾಗಿ ಠಿಕಾಣಿ ಹೂಡೀನಿ. ನನ್ನ ಇತಿಹಾಸ ಭಾಳಾ ದೊಡ್ಡದದ ನೋಡ್ರೆಪ.

ವಿಜಯನಗರ ಮತ್ತ ಮೈಸೂರಿನ ದೊರೆಗಳ ಬಳಿಕ ನವಾಬರ ಆಡಳಿತ ಶುರುವಾತಲ್ಲ? ಈಗಿನ ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಕೊಪ್ಪಳ ಜಿಲ್ಲೆಯಲ್ಲಿ ಸಾಲರ್‌ಜಂಗ್‌ ಎಂಬ ನವಾಬರು, ಪುಣ್ಯಾತ್ಮರು, ಕರಕುಶಲ ಕಲೆಗೆ ಪ್ರೋತ್ಸಾಹ ಕೊಟ್ಟಿದ್ರು. ಈ ನಾಡಿನೊಳಗ ನಾನು ಈಗಲೂ ಜೀವಂತವಾಗಿರಲು ಕಾರಣರಾದವರು ಅವರು ಅನ್ನೂದನ್ನ ಮನಸಾರೆ ಸ್ಮರಿಸ್ತೀನಿ. ವಿಜಯನಗರ ದೊರೆಗಳ ಕಾಲದೊಳಗ ಚಿತ್ರಗಾರ ಕುಟುಂಬದವರು ನನ್ನ ಉತ್ತುಂಗಕ್ಕೆ ಕೊಂಡೊಯ್ದದ್ದೂ ದೊಡ್ಡ ಕತಿ ಐತಿ ನೋಡ್ರೆಪ. ವಿಜಯನಗರ ಸಾಮ್ರಾಜ್ಯ ಪತನ ಆಯ್ತಲ್ಲ, ಚಿತ್ರಗಾರರಲ್ಲಿ ಕೆಲವರು ಹೊಟ್ಟೆಪಾಡಿಗಾಗಿ ಕನಕಗಿರಿಗೆ ಹೊಂಟ್‌ಹೋದ್ರು. ಉಳಿದವರು ಕಿನ್ನಾಳಕ್ಕೆ ಬಂದು ಬಿಡಾರ ಹೂಡಿದ್ರು. ಅವರೇ ಈಗಲೂ ನನ್ನ ಜನ್ಮದಾತರು.

ನನಗೆ ಹೆಂಗ ರೂಪ ಕೊಡ್ತಾರ ಅಂತ ಹೇಳಿ ಬಿಡುವೆ. ಕಟ್ಟಿಗಿಯಿಂದಲೇ ನಮ್‌ ದೇಹ ನೋಡ್ರಿ ಸಾಹೇಬ್ರ. ಸೆಣಬು ನೆನೆಸಿ ತುಂಡುಗಳಾಗಿ ಕತ್ತರಿಸಿ, ಒಣಗಿಸಿ ಪುಡಿಮಾಡ್ತಾರ. ಕಟ್ಟಿಗಿ ಪುಡಿ ಮತ್ತು ಹುಣಸೆ ಬೀಜದ ಪೇಸ್ಟ್ ಬೆರೆಸಿ ಕಿಟ್ಟಾ ತಯಾರು ಮಾಡ್ತಾರ. ಕಟ್ಟಿಗೆಯ ಪುಡಿಯನ್ನು ನೀರಿನಲ್ಲಿ ಕಲಿಸಿ ಹದಗೊಳಿಸಿ ಉಂಡಿ ಮಾಡಿ ಒಣಗಿಸ್ತಾರ. ಆಕಾರ ಕೊಟ್ಟ ನಂತರ ಕಿಟ್ಟಾ ಹಚ್‌ತಾರ.

ಕಿನ್ನಾಳ ಕಲೆಯೊಳಗ ನಮ್‌ ಜೊತಿ ಪ್ರಾಣಿಗಳು, ಪಕ್ಷಿಗಳು, ಕಾಯಿಪಲ್ಯ, ಹಣ್ಣು ಹಂಪಲುಗಳ ಮಾದರಿಗಳಿಗೂ ಬೇಡಿಕಿ ಐತೆಂತ. ಹಬ್ಬದ ಋತುವಿನಲ್ಲಿ, ಜೇಡಿಮಣ್ಣಿನ ಆಟಿಕೆ, ಚಿತ್ರಗಳನ್ನು ಹೆಚ್ಚಾಗಿ ಗೋಮಯ ಮತ್ತು ಕಟ್ಟಿಗಿಯಿಂದ ತಯಾರು ಮಾಡ್ತಾರ.

ಕಿನ್ನಾಳವೆಂದರೆ ನಮ್ಮ ಕಿಸ್ಕಾಲು ಬೊಂಬೆಕ್ಕ ಮೊದಲ ಅಕರ್ಷಣಾ. ರಾಮಾಯಣ, ಮಹಾಭಾರತ, ಸ್ಕಂದಪುರಾಣದ ದೃಶ್ಯ, ನವಗ್ರಹಗಳು, ಗ್ರಾಮದೇವತೆಗಳ ಮೂರ್ತಿ, ಪಲ್ಲಕ್ಕಿ, ಛತ್ರಿ, ಚಾಮರ, ದುರ್ಗಾದೇವಿ, ಕೀಲುಗೌರಿ, ಕೀಲುಗೊಂಬೆ, ಅಲಂಕಾರಕ್ಕೆ ಬಳಸುವ ಆಟಿಕೆ ಸಾಮಗ್ರಿ, ಆಕಳು, ಆನೆ, ಲಕ್ಷ್ಮಿ, ಸರಸ್ವತಿ, ಗಣೇಶ, ಮತ್ಸ್ಯ, ದ್ವಾರಪಾಲಕರು, ಆಂಜನೇಯ, ಪಲ್ಲಕ್ಕಿ, ಜಾತ್ರೆಯ ಸಾಮಗ್ರಿ, ಚೌಕಿ, ಟಿಪಾಯಿ, ಗರುಡ, ಆಂಜನೇಯ, ರತಿ ಮನ್ಮಥ, ಕೂರ್ಮಾವತಾರ, ವರಾಹ, ನರಸಿಂಹ, ವಾಮನ, ಗೌರಿ, ಕೊಂತಿ ಪಟ್ಟಿ, ಪರಶುರಾಮ, ರಾಮ, ಕೃಷ್ಣ, ಬುದ್ಧ, ಕಲ್ಕಿ, ದಸರಾ ಬೊಂಬೆ... ಹಿಂಗ ನಮ್ಗ ಏನೇನೋ ಹೆಸರು ಕೊಟ್ಟು ಇಲ್ಲಿಂದ ಕರ್ಕೊಂಡು ಹೊಕ್ಕಾರ.

ನನ್ನ ಸೃಷ್ಟಿಕರ್ತರ ಬಗ್ಗೆಯೂ ಒಂದಷ್ಟು ಮಾತನಾಡಬೇಕಾಗೈತ್ರಿ. ಕಿನ್ನಾಳದಲ್ಲಿರುವ 72 ಚಿತ್ರಗಾರ ಕುಟುಂಬಗಳಷ್ಟೇ ಈ ಕಲೆಯನ್ನು ಪೋಷಣಾ ಮಾಡಕ್ಕತ್ತಾವ. ನನ್ನನ್ನೇ ನಂಬಿಕೊಂಡು ಅವರೆಲ್ಲ ಜೀವನ ನಡೆಸ್ಯಾರ ಅನ್ನೂದು ನಂಗೂ ಹೆಮ್ಮೆಯ ಮಾತಾಗೇದ. ನಾನು ಮಾರಾಟವಾಗಿ ರಾಜ್ಯ, ಹೊರರಾಜ್ಯಕ್ಕೆ ಹೋಗೀನಿ. ಜರ್ಮನಿ, ಇಂಗ್ಲೆಂಡ್‌, ಮಲೇಷ್ಯಾ, ಸಿಂಗಪುರ, ಸ್ವಿಟ್ಜರ್ಲೆಂಡ್‌ ಅಂತ ಯಾವ, ಯಾವ್ದೊ ದೇಶ ಸುತ್ತಾಡೀನಿ.

ವಿಜಯನಗರ ಅರಸರು ತಾವು ಕುಳಿತುಕೊಳ್ಳುವ ಸಿಂಹಾಸನಕ್ಕೆ ನಮ್ಮ ಕಿನ್ನಾಳ ಕಲೆಯ ಕಲಾಕೃತಿ ಹಾಕ್ಸಿದ್ರು. ಇದು ಹೆಮ್ಮೆ ಮಾತು ಹೌದೊ, ಅಲ್ಲೊ ನೀವ ಹೇಳ್ರಿ. ಸುಳ್ಳು ಯಾಕ್‌ ಹೇಳ್ಬೇಕು, ಹಿಂದ ನನ್ನ ಸೃಷ್ಟಿಕರ್ತರು ನನ್ನನ್ನೇ ನಂಬಿಕೊಂಡು ಅನೇಕ ಬಾರಿ ಉಪವಾಸ ಬಿದ್ದಾರ. ಆ ಕಷ್ಟದ ದಿನಗಳನ್ನೂ ನಾವು ನೆಪ್ಪ ಮಾಡ್ಕೋಬೇಕು ನೋಡ್ರಿ. ದಿನಾ ಜೋಳದ ರೊಟ್ಟಿ ತಿಂದು ವಾರಕ್ಕೆ ಒಂದು ದಿನ ಮಾತ್ರ ಅನ್ನ ಉಣ್ಣಬೇಕಾದ ಕೆಟ್ಟ ಪರಿಸ್ಥಿತಿಯನ್ನ ಅವರು ಕಂಡಾರ. ಈಗ ಸ್ಥಿತಿ ಸಾಕಷ್ಟು ಸುಧಾರಣೆ ಆಗೈತಿ. ನನ್ನನ್ನೇ ನಂಬಿಕೊಂಡವರಿಗೆ ದಿನಾ ಹೊಟ್ಟೆ ತುಂಬಾ ಊಟ, ಮೈ ತುಂಬಾ ಬಟ್ಟೆಗೆ ಏನೂ ಕೊರತೆ ಆಗಿಲ್ಲ ನೋಡ್ರಿ.

ನನ್ನ ಭವಿಷ್ಯದ ಬಗ್ಗೆ ಚಿಂತಿ ಆಗೈತಿ. ನನ್ನ ಸೃಷ್ಟಿ ಮಾಡಾಕ ಬೇಕಾದ ಪೊಳಕಿ ಮರ ಹಾಗೂ ಟಣಕಿನ ಮರ (ಹಗುರವಾದ ಕಟ್ಟಿಗೆ) ಮೊದಲು ನನ್ನ ಜಿಲ್ಲೆಯಲ್ಲಿಯೇ ಸಿಗ್ತಿದ್ದವು. ಯಾರೊ ಕಟ್ಟಿಗೆ ಕದ್ದೊಯ್ದರು ಎಂದು ಈಗ ಯಾರಿಗೂ ಕೊಡಾಣಿಲ್ಲ ಅಂತಾರ. ನನ್ನ ಅಂದ ಹೆಚ್ಚಿಸಾಕ ಬಣ್ಣದಲ್ಲಿ ಹಾಕುವ ಚಮಟಗಿ ತಯಾರಿಸಲು ಸುಮಾರು ಒಂದು ತಾಸು ಕಲ್ಲಿನಿಂದ ಕುಟ್ಟಿದರೆ 100 ಗ್ರಾಂ ಮಾತ್ರ ಚಮಟಗಿ ಬರ್ತೈತಿ. ಇದಕ್ಕ ಒಂದು ಯಂತ್ರ ಬೇಕಾಗೈತಿ. ಹಿಂಗ ತಯಾರು ಮಾಡಿದ ಬಣ್ಣ ಕನಿಷ್ಠ 100 ವರ್ಷ ಬಾಳ್ತದ.
ನಮ್‌ ಆಂಜನೇಯ ಚಿತ್ರಗಾರ ಅದಾರಲ್ಲ, ಭಾಳಾ ಕೆಲಸ ಮಾಡಾಕತ್ಯಾರ. ನನ್‌ ಹೆಂಗ ತಯಾರು ಮಾಡ್ಬೇಕು ಅಂತ ಎಲ್ಲರಿಗೂ ಹೇಳಿಕೊಡ್ತಾರ. ಅವರ ಮಕ್ಕಳು ಸಂತೋಷ್‌ ಮತ್ತ ನಾಗರಾಜ್‌ ಅಂತ ಅದಾರ. ಅದೇನೋ ಅಂತೀರಲ್ಲಪ್ಪ, ಆನ್‌ಲೈನ್‌ ಅಂತ. ಅದ್ರಾಗಿಂದ ನಮ್ಮನ್ನ ಬೇರೆಯವ್ರ ಹತ್ರ ಕಳಿಸಿಕೊಡ್ತಾರ. ಕಿನ್ನಾಳಕ್ಕ ಸ್ಕಾಟ್ಲೆಂಡ್‌ನವರೂ ಬಂದು ನಮ್ಮನ್ನ ಸೃಷ್ಟಿ ಮಾಡುವ ಕಲೆ ಕಲ್ತು ಹೋಗ್ಯಾರ. ಅದೇನೋ ಟಾಯ್‌ ಕ್ಲಸ್ಟರ್‌ ಅಂತ್ರೆಪ, ಅದೂ ಬ್ಯಾರೆ ಇಲ್ಲೇ ಬಂದೈತಿ. ಅಲ್ಲೂ ನಮ್ಮನ್ನ ತಯಾರು ಮಾಡುವ ವಿಧಾನ ಹೇಳಿ ಕೊಡ್ತಾರ.

ಚಿತ್ರಗಾರ ಸಮಾಜದ ಎಲ್ಲರಿಗೂ ಮಾರುಕಟ್ಟೆ ಹ್ಯಾಂಗ ಕಂಡ್ಕೋಬೇಕು, ಆನ್‌ಲೈನ್‌ ಮೂಲಕ ಹ್ಯಾಂಗ ವಹಿವಾಟು ನಡೆಸಬೇಕು ಅನ್ನೂದು ಗೊತ್ತಿಲ್ಲ. ನಾನೇ ಎಷ್ಟೆಲ್ಲ ದೇಶಾ ಸುತ್ತು ಹೊಡೆದ್ರೂ ವ್ಯಾಪಾರದ ವಿಷ್ಯ ಬಂದ್ರ ಬಿಟ್‌ಕಣ್ಣು ಬಿಟ್ಟು ಮಿಕಿಮಿಕಿ ನೋಡ್ತಿರ್ತೀನಿ. ಸರ್ಕಾರ ನೇರವಾಗಿ ಖರೀದಿ ಮಾಡಿದ್ರ ಇನ್ನೊಂದಷ್ಟು ಕಾಲ ನೆಮ್ಮದಿಯಿಂದ ಬದುಕ್ತೀನಿ. ನನ್ನ ಕಲೆಯಿಂದ ವಿಜೃಂಭಿಸ್ತೀನಿ. ಇಲ್ಲದಿದ್ರೆ ನಾನು ಎಷ್ಟ್‌ ಚಂದ ಕಾಣ್ತಿದ್ರೂ ಕಣ್ಣೊಳಗ ನೀರು ಜಿನುಗ್ತಾನ ಇರತೈತಿ. ನೀವೆಲ್ಲರೂ ನನ್‌ ಜತಿಗೆ ಇರಿ. ನಿಮ್‌ ಮನಿಗೆ ಕರ್ಕೊಂಡು ಹೋಗಾಕ ಕಿನ್ನಾಳಕ್ಕ ಬರ‍್ರಿ. ನನ್ನ ಸೃಷ್ಟಿಕರ್ತರ ಕತಿ ಕೇಳ್ರಿ, ಅವರು ಬಿಚ್ಚಿಟ್ಟ ಬಾಳಿನ ಬುತ್ತಿಯ ಸವಿ ನೋಡ್ರಿ. ನನ್ನ ಅಲಂಕಾರವನ್ನ ಕಣ್ತುಂಬಿಕೊಳ್ರಿ.

ನೀವು ಬರ್ತೀರಂತ ಪ್ರೀತಿಯಿಂದ ಕಾಯಾಕತ್ತೀನಿ

ಕಿನ್ನಾಳದ ಬೊಂಬೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT