ಶನಿವಾರ, ಡಿಸೆಂಬರ್ 7, 2019
25 °C

ಯುವ ಕಲಾವಿದನ ಚಿತ್ರಲೋಕ !

Published:
Updated:
Deccan Herald

ಕೊಪ್ಪಳದ ಬೆಲ್ದಾರ್ ಕಾಲೊನಿಯ ಮಹಮ್ಮದ್ ದಾದಾಪೀರ್ ರಂಗೋಲಿ, ಫೇಸ್‌ ಪೇಂಟಿಂಗ್, ಪೆನ್ಸಿಲ್ ಸ್ಕೆಚ್‌, ಸ್ಪೀಡ್ ಪೆಂಟಿಂಗ್, ಅಕ್ರಾಲಿಕ್ ಪೆಂಟಿಂಗ್, ವಾಟರ್ ಪೆಂಟಿಂಗ್, ಕ್ಯಾನ್ ವಾಸ್ ಪೆಂಟಿಂಗ್.. ಹೀಗೆ ವೈವಿಧ್ಯಮಯ ಪ್ರಾಕಾರಗಳಲ್ಲಿ ಚಿತ್ರ ಬಿಡಿಸುತ್ತಾರೆ.

ಶಿವಮೊಗ್ಗದಲ್ಲಿ ಎಂಜಿನಿಯರಿಂಗ್ ಪದವಿ ಓದುತ್ತಿರುವ ಈ ಯುವಕನಿಗೆ ಚಿತ್ರಕಲೆಯಲ್ಲಿ ತುಂಬಾ ಆಸಕ್ತಿ. ಯಾವುದೇ ಚಿತ್ರವನ್ನು ನಿಬ್ಬೆರಗಾಗುವಂತೆ ಬಿಡಿಸುತ್ತಾರೆ.

ಐದಾರು ನಿಮಷದಲ್ಲಿ ಪೆನ್ಸಿಲ್‌ ಸ್ಕೆಚ್‌, ಒಂದು ಗಂಟೆಯೊಳಗೆ ಫೇಸ್‌ಪೇಂಟಿಂಗ್ (ಮುಖದ ಮೇಲೆ ಬಣ್ಣದ ಚಿತ್ತಾರ ಬಿಡಿಸುವುದು) ಮಾಡುತ್ತಾರೆ. ಪೇಂಟಿಂಗ್ ಅಲ್ಲದೇ, ಬಣ್ಣದ ರಂಗೋಲಿಯಲ್ಲೂ ಖ್ಯಾತ ನಾಮರ ಚಿತ್ರ ಬಿಡಿಸುತ್ತಾರೆ. ದೊಡ್ಡ ದೊಡ್ಡ ರಂಗೋಲಿ ಚಿತ್ರ ಬಿಡಿಸಲು ಮೂರು ತಾಸು ಸಮಯ ಬೇಕಾಗುತ್ತದೆ ಎನ್ನುತ್ತಾರೆ ಅವರು.

ದಾದಾಪೀರ್‌ಗೆ ಬಾಲ್ಯದಲ್ಲೇ ಚಿತ್ರ ಬಿಡಿಸುವ ಆಸಕ್ತಿ. ಬೇರೆಯವರು ಚಿತ್ರಬರೆಯುವುದನ್ನು ನೋಡುತ್ತಲೇ ಪೇಟಿಂಗ್‌ನಲ್ಲಿ ಆಸಕ್ತಿ ಬೆಳೆಸಿ
ಕೊಂಡರು. ಪ್ರಾಥಮಿಕ ಶಾಲೆಯಲ್ಲಿರುವಾಗ ಇವರಲ್ಲಿದ್ದ ಬಣ್ಣದ ಬಗೆಗಿನ ಆಸಕ್ತಿಯನ್ನು ಶಿಕ್ಷಕ ಸಿಎಂ ಪುರ ಅವರು ಗುರುತಿಸಿದ್ದರು. ‘ಚಿತ್ರಕಲಾ ಶಿಕ್ಷಕರ ಪ್ರೋತ್ಸಾಹ ಹಾಗೂ ಮಾರ್ಗದರ್ಶನದಲ್ಲೇ ಪೇಟಿಂಗ್ ಕಲಿತೆ’ ಎಂದು ಅವರು ಗುರುಗಳನ್ನು ನೆನೆಯುತ್ತಾರೆ.

ಎಂಜಿನಿಯರಿಂಗ್ ಪದವಿಗೆ ಸೇರಿದ ನಂತರ ಶಿವಮೊಗ್ಗದಲ್ಲಿ ಖ್ಯಾತ ಚಿತ್ರಗಾರ ಹರಿಶ್ ಕುಮಾರ್ ಲಾತೋರೆಯವರ ಮಾರ್ಗದರ್ಶನದೊಂದಿಗೆ ಬೇರೆ ಬೇರೆ ಪ್ರಾಕಾರಗಳಲ್ಲಿ ಚಿತ್ರ ಬಿಡಿಸುವುದನ್ನು ಕಲಿತರು. ವಿಶ್ವವಿಖ್ಯಾತ ಕಲಾವಿದ ವಿಲಾಸ ನಾಯಕ ಅವರ ಸ್ಪೀಡ್ ಪೇಂಟಿಂಗ್‌ ಅನ್ನು ಯೂ ಟ್ಯೂಬ್ ನಲ್ಲಿ ನೋಡುತ್ತಾ, ತಾನೂ ಅದೇ ರೀತಿ ವೇಗವಾಗಿ ಚಿತ್ರಬಿಡಿಸುವುದನ್ನು ಅಭ್ಯಾಸ ಮಾಡಿದರು. ‘ವಿಲಾಸ್ ನಾಯಕ್ ಅವರೇ ನನ್ನ ಸ್ಪೀಡ್ ಪೇಟಿಂಗ್‌ಗೆ ಸ್ಫೂರ್ತಿ’ ಎನ್ನುತ್ತಾರೆ ದಾದಾಪೀರ್.

ರಂಗೋಲಿ ಚಿತ್ರಗಳು...

ರಂಗೋಲಿ ಚಿತ್ರಗಳಲ್ಲಿ ಮಹಾಪುರಷರ ಚಿತ್ರಗಳನ್ನು ಬಿಡಿಸುತ್ತಾರೆ ದಾದಾಪೀರ್. ಶಾಲಾ ಕಾಲೇಜು ಕಾರ್ಯಕ್ರಮಗಳಲ್ಲಿ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಇವರ ಚಿತ್ರಗಳು ಕಾಯಂ ಆಗಿರುತ್ತವೆ. ಕಲರ್ ರಂಗೋಲಿ, ಕಪ್ಪು ಬಿಳುಪಿನ ರಂಗೋಲಿ ಎರಡರಲ್ಲೂ ಚಿತ್ರಬಿಡಿಸುತ್ತಾರೆ. ಸಿದ್ದಗಂಗಾ ಶ್ರೀಗಳು, ಜಗಜ್ಯೋತಿ ಬಸವೇಶ್ವರ, ಮಹಾತ್ಮ ಗಾಂಧೀಜಿ, ವಿಶ್ವೇಶ್ವರಯ್ಯ ಸೇರಿದಂತೆ ಹಲವು ಮಹನೀಯರ ಚಿತ್ರಗಳನ್ನು ಬಿಡಿಸಿ, ಶಹಬ್ಬಾಸ್ ಎನ್ನಿಸಿಕೊಂಡಿದ್ದಾರೆ.

ಕಂಪ್ಯೂಟರ್, ಗ್ರಾಫಿಕ್ಸ್‌, ಡಿಜಿಟಲ್ ಪರದಯೆ ಮೇಲೆ ಚಿತ್ರಗಳನ್ನು ಬಿಡಿಸಿ ಸಂಭ್ರಮಿಸುವ ಕಾಲಘಟ್ಟದಲ್ಲಿ ದೇಸಿ ಚಿತ್ರಕಲೆಯಲ್ಲೇ ಸಾಧನೆ ಮಾಡಲು ಹೊರಟಿದ್ದಾರೆ ದಾದಾಪೀರ್. ದೇಸಿ ಕಲೆ ಬೆಳೆಸುತ್ತಿರುವ ಇಂಥ ಚಿತ್ರಕಲಾವಿದರಿಗೆ ಗುರಿ ಮುಟ್ಟಲು ಪ್ರೋತ್ಸಾಹದ ಅಗತ್ಯವಿದೆ. ಕಲಾವಿದ ದಾದಾಪೀರ್ ಸಂಪರ್ಕ ಸಂಖ್ಯೆ 8792222897.

ಪ್ರತಿಕ್ರಿಯಿಸಿ (+)