ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಧಾನಿಯಲ್ಲಿ ಕ್ಯಾದಗಿ ‘ಪುಷ್ಪಕ ಯಾನ’

ಏಕವ್ಯಕ್ತಿ ಕಲಾಪ್ರದರ್ಶನ * ಹಾಸ್ಯ ರಸದೌತಣ
Last Updated 11 ಡಿಸೆಂಬರ್ 2020, 12:27 IST
ಅಕ್ಷರ ಗಾತ್ರ

ಹಿಮ್ಮೇಳವನ್ನು ಇಟ್ಟುಕೊಂಡು ಏಕವ್ಯಕ್ತಿ ಯಕ್ಷಗಾನ ಕಲಾಪ್ರದರ್ಶನ ಏರ್ಪಡಿಸುವ ಪರಿಪಾಠ ಹಿಂದಿನಿಂದಲೂ ಇದೆ. ಆದರೆ, ಹಾಸ್ಯ ಕಲಾವಿದರೊಬ್ಬರು ಇಂತಹ ಸಾಹಸಕ್ಕೆ ಕೈಹಾಕಿದ ಉದಾಹರಣೆ ಇಲ್ಲವೆಂದೇ ಹೇಳಬಹುದು. ಬಡಗುತಿಟ್ಟಿನ ಹೆಸರಾಂತ ಹಾಸ್ಯ ಕಲಾವಿದ ಕ್ಯಾದಗಿ ಮಹಾಬಲೇಶ್ವರ ಭಟ್‌ ಅವರು ಕೊರೊನಾ ಸೃಷ್ಟಿಸಿರುವ ಬಿಕ್ಕಟ್ಟಿನಿಂದ ಯಕ್ಷರಂಗ ಕಂಗೆಟ್ಟಿರುವ ಕ್ಲಿಷ್ಟಕರ ಸಂದರ್ಭದಲ್ಲೂ ಇಂತಹದ್ದೊಂದು ಪ್ರಯತ್ನವನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ.

ಆದಿತ್ಯ ಟ್ರಸ್ಟ್‌ ವತಿಯಿಂದ ಗೋಪಾಡಿಯಲ್ಲಿ (ಕುಂಭಾಶಿ) ಅ.23ರಂದು ಏಕವ್ಯಕ್ತಿ ಅಭಿವ್ಯಕ್ತಿಯ ಮೊದಲ ಕಾರ್ಯಕ್ರಮ ‘ಪುಷ್ಪಕಯಾನ’ವನ್ನು ಕ್ಯಾದಗಿ ನಡೆಸಿಕೊಟ್ಟರು. ಆ ಬಳಿಕ ಈ ಕಾರ್ಯಕ್ರಮ ಅಲ್ಪಾವಧಿಯಲ್ಲೇ 15ಕ್ಕೂ ಅಧಿಕ ಪ್ರದರ್ಶನಗಳನ್ನು ಕಂಡಿದೆ. ಅವರ ಈ ಏಕವ್ಯಕ್ತಿ ಪ್ರದರ್ಶನಗಳಿಗೆ ಬೇಡಿಕೆ ಹೆಚ್ಚುತ್ತಲೇ ಇದೆ.

ಯಕ್ಷಗಾನದ ಯಾವುದೇ ಪಾತ್ರವನ್ನು ಚೇತೋಹಾರಿಯಾಗಿ ಪ್ರಸ್ತುತಪಡಿಸುವಲ್ಲಿ ಕ್ಯಾದಗಿ ಅವರು ನಿಸ್ಸೀಮರು. ಹಾಸ್ಯವನ್ನೇ ಉಸಿರಾಡುತ್ತಿರುವ, ಕಚಗುಳಿ ಇಡುವ ಮಾತುಗಳ ಮೂಲಕ ಪ್ರೇಕ್ಷರರನ್ನು ನಗೆಗಡಲಲ್ಲಿ ತೇಲಿಸುತ್ತಾ ಬಂದಿರುವ ಕ್ಯಾದಗಿ ಈ ಬಾರಿ ಒಂದೇ ರಂಗಸ್ಥಳದಲ್ಲಿ ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ಆವರಿಸಿಕೊಳ್ಳಲಿದ್ದಾರೆ. ‘ಪುಷ್ಪಕಯಾನ’ಕ್ಕಾಗಿ ಅವರು ಆರಿಸಿಕೊಂಡಿದ್ದು ಭೂಕೈಲಾಸ ಪ್ರಸಂಗವನ್ನು. ಈ ಪ್ರಸಂಗದಲ್ಲಿ ಬ್ರಾಹ್ಮಣ ಕುಮಾರ (ಗಣಪತಿ), ರಾವಣ, ಈಶ್ವರ, ಕೈಕಸೆ ಪಾತ್ರಗಳಿಗೆ ಜೀವ ತುಂಬಲಿದ್ದಾರೆ. ಇದು ಏಕವ್ಯಕ್ತಿ ಪ್ರದರ್ಶನವಾದರೂ, ಪ್ರತಿ ಪಾತ್ರಕ್ಕೂ ಪ್ರತ್ಯೇಕ ವೇಷಭೂಷಣದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಒಂದೂವರೆ ತಾಸಿನ ಈ ಕಾರ್ಯಕ್ರಮದಲ್ಲಿ ರಂಗಸ್ಥಳವನ್ನೇರುವ ಪಾತ್ರಗಳನ್ನು ಆಯಾ ವೇಷಭೂಷಣದಲ್ಲೇ ಪ್ರಸ್ತುತಪಡಿಸುವುದು ಕ್ಯಾದಗಿಯವರ ಚುರುಕುತನಕ್ಕೆ ಕನ್ನಡಿ. ಇದೇ 13ರಿಂದ ಒಂದು ವಾರ ಕಾಲ ಬೆಂಗಳೂರಿನ ವಿವಿಧೆಡೆ ಅವರ ‘ಪುಷ್ಪಕಯಾನ’ ವಿಹರಿಸಲಿದೆ.

‘ಏಕವ್ಯಕ್ತಿ ದಶಾಹ ಕಾರ್ಯಕ್ರಮ ಸರಣಿಯ ಮೊದಲ ಕಾರ್ಯಕ್ರಮವನ್ನು ಇದೇ 13ರಂದು ಸಂಜೆ 7ಕ್ಕೆ ವಿದ್ಯಾಪೀಠದ ಪೇಜಾವರ ಮಠದಲ್ಲಿ ಏರ್ಪಡಿಸಲಾಗಿದೆ. ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ವಿಧಿಸಿರುವ ನಿಬಂಧನೆಗಳನ್ನು ಪಾಲಿಸಬೇಕಿರುವುದರಿಂದ ಒಂದು ಕಾರ್ಯಕ್ರಮಕ್ಕೆ 100ರಿಂದ 150 ಪ್ರೇಕ್ಷಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತದೆ’ ಎಂದು ಕ್ಯಾದಗಿ ತಿಳಿಸಿದರು.

ರಾಘವೇಂದ್ರ ಮಯ್ಯ ನೇತೃತ್ವದ ಹಿಮ್ಮೇಳ ಕ್ಯಾದಗಿ ಅವರಿಗೆ ಸಾಥ್ ನೀಡಲಿದೆ. ಮದ್ದಲೆಯಲ್ಲಿ ಎ.ಪಿ.ಪಾಠಕ್‌, ಚಂಡೆಯಲ್ಲಿ ರಾಕೇಶ್‌ ಮಲ್ಯ ಹಳ್ಳಾಡಿ ನೆರವಾಗಲಿದ್ದಾರೆ. ಈ ಪರಿಕಲ್ಪನೆಗೆ ವಿದ್ವಾನ್‌ ಉಮಾಕಾಂತ ಭಟ್‌ ಮೇಲುಕೋಟೆ ಮಾರ್ಗದರ್ಶನ ಮಾಡಿದ್ದಾರೆ. ಈ ರಂಗ ಪರಿಕಲ್ಪನೆ ಚಿದಂಬರ ರಾವ್‌ ಜಂಬೆ ಅವರದು. ಗೀತ ಸಾಹಿತ್ಯ ದೇವದಾಸ್‌ ಈಶ್ವರಮಂಗಲ ಅವರದು. ಪ್ರಭಾ ಕ್ಯಾದಗಿ ಅವರು ಪಾತ್ರಕ್ಕೊಪ್ಪುವ ವಸ್ತ್ರವಿನ್ಯಾಸ ಮಾಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಕ್ಯಾದಗಿ ಗ್ರಾಮದ ಮಹಾಬಲೇಶ್ವರ ಭಟ್‌ ಬಡಗಿನ ರಂಗಸ್ಥಳದಲ್ಲಿ 20 ವರ್ಷಗಳ ಕಾಲ ಕಲಾ ರಸದೌತಣ ಉಣಬಡಿಸಿದವರು. ಸಾಲಿಗ್ರಾಮ ಮೇಳದಲ್ಲಿ 12 ವರ್ಷ, ಪೆರ್ಡೂರು ಮೇಳದಲ್ಲಿ ಆರು ವರ್ಷ, ಹಾಲಾಡಿ ಮೇಳದಲ್ಲಿ ಎರಡು ವರ್ಷ ತಿರುಗಾಟ ನಡೆಸಿದ್ದಾರೆ. ಪ್ರಸ್ತುತ ಸಾಲಿಗ್ರಾಮ ಮೇಳದಲ್ಲಿ ಕಲಾಸೇವೆ ನೀಡುತ್ತಿದ್ದಾರೆ.

ಏಕವ್ಯಕ್ತಿ ಪ್ರದರ್ಶನ ಏರ್ಪಡಿಸಲು ಬಯಸುವವರು ಅವರನ್ನು ಸಂಪರ್ಕಿಸಬಹುದು (ಮೊ: 8762647898)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT