ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲಾ ಯೋಜನೆಗಳ ಫಲ ಕಟ್ಟಕಡೆಯ ಪ್ರಜೆಗೆ ತಲುಪುವುದೇ ಅನುಮಾನ

Last Updated 8 ಸೆಪ್ಟೆಂಬರ್ 2019, 7:22 IST
ಅಕ್ಷರ ಗಾತ್ರ

ಒಂದು ನೈಜ ಕತೆ, ಒಮ್ಮೆ ಹೀಗಾಯ್ತು: ದಿಲ್ಲಿಯಲ್ಲಿ ಬೇರು ಬಿಟ್ಟಿದ್ದ ಕಶ್ಯಪ್ ಸಾಹೇಬರಿಗೆ ಬೆಂಗಳೂರಿಗೆ ವರ್ಗವಾಯಿತು. ಸಾಮಾನೆಲ್ಲ ಪ್ಯಾಕ್ ಮಾಡಿ ಲಾರಿಗೆ ಹೇರಿದ್ದಾಯಿತು. ಬಣ್ಣದ ಮೀನುಗಳಿದ್ದ ಸುಂದರ ಇಟಾಲಿಯನ್ ಗಾಜಿನ ಹೂಜಿಯನ್ನು ಹಾಗೆ ಕಳಿಸುವಂತಿಲ್ಲ. ತಾನೇ ಕೈಯಾರೆ ಹೊತ್ತು ಬೆಂಗಳೂರಿಗೆ ಒಯ್ಯಲು ಸಾಹೇಬರ ಬಾಮೈದ ಒಪ್ಪಿಕೊಂಡ. ತೀರ ಹುಷಾರಾಗಿ ಟ್ಯಾಕ್ಸಿಯಿಂದ ರೈಲು ನಿಲ್ದಾಣಕ್ಕೆ, ಅಲ್ಲಿಂದ ಏಳನೇ ಪ್ಲಾಟ್‍ಫಾರ್ಮಿಗೆ, ಅಲ್ಲಿಂದ ರೈಲಿಗೆ, ಅಲ್ಲಿಂದ ರಾತ್ರಿ ಹಗಲು ಜೊಂಪಿನಲ್ಲೂ ಹೂಜಿಯನ್ನು ಹುಷಾರಾಗಿ ಹಿಡಿದು, ಬೆಂಗಳೂರಿನ ನಿಲ್ದಾಣಕ್ಕೆ, ಅಲ್ಲಿಂದ ನಾಜೂಕಾಗಿ ಟ್ಯಾಕ್ಸಿಗೆ, ಅಲ್ಲಿಂದ ಮನೆಗೆ.. ಅಬ್ಬ! ‘ಅಂತೂ ತಂದೇಬಿಟ್ಟೆ, ನೋಡು ಮಾವ’ ಎನ್ನುತ್ತ ಒಂದೇ ಕೈಯಿಂದ ಗೇಟ್ ತೆರೆಯಲು ಯತ್ನಿಸಿದ್ದೇ ತಡ, ಕೈಯಲ್ಲಿದ್ದ ಹೂಜಿ ಢಮಾರ್.

ಹಣೇಬರ

ಆದರೆ ಹಾಳಾದ್ದು ಈ ಹಣೇ-ಬರಹ ಮೊದಮೊದಲೆಲ್ಲ ಚೆನ್ನಾಗಿಯೇ ಇರೋದು, ಕೊನೆಯ ವಾಕ್ಯಕ್ಕೆ ಬಂದಾಗ ಯಾಕೆ ಗಿಜಿಗಿಜಿಯ ಬ್ರಹ್ಮಲಿಪಿ? ಇದು ನನಗಷ್ಟೇ ಅಲ್ಲ, ಮ್ಯಾನೇಜ್‍ಮೆಂಟ್ ಧುರಂಧರರಿಗೂ ತಲೆ ತಿನ್ನುವ ಸಮಸ್ಯೆ. ಅದೇ ‘ಲಾಸ್ಟ್ ಮೈಲ್’ ಸಮಸ್ಯೆ. ಯಾವುದೇ ಮಹಾಕಾರ್ಯದ ಕೊನೆಯ ಹಂತದಲ್ಲಿ ಇಡೀ ಯೋಜನೆ ಸೋತು ಸುಣ್ಣವಾಗುತ್ತದೆ. ಇದಕ್ಕೆ ಸಾವಿರ ಉದಾಹರಣೆ ಕೊಡಬಹುದು. ನ್ಯೂಜಿಲ್ಯಾಂಡ್ ವಿರುದ್ಧ ಧೋನಿ ಇನ್ನೊಂದಡಿ ಮುಂದಕ್ಕೆ ಜಾರಿದ್ದಿದ್ದಿರೆ ಸೆಮಿಫೈನಲ್ಲು, ಫೈನಲ್ಲನ್ನೂ ಭಾರತವೇ ಗೆಲ್ಲುವ ಸಾಧ್ಯತೆಯಿತ್ತು. ಇಲ್ಲಿ ಹೇಳಹೊರಟಿದ್ದು ಅಂಥ ಅದೃಷ್ಟದ ಆಟವಲ್ಲ. ಬಿಡುಗಡೆಯ ಭಾಗ್ಯವಿಲ್ಲದೆ ಡಬ್ಬದೊಳಕ್ಕೇ ಮುಗ್ಗುತ್ತಿರುವ ಸಿನಿಮಾಗಳೊ, ಪ್ರಕಟಣೆಯ ಅವಕಾಶವಿಲ್ಲದೆ ರದ್ದಿಯಾಗುವ ಕತೆ-ಕಾದಂಬರಿಗಳ ಕತೆಯೂ ಅಲ್ಲ. ಅದ್ದೂರಿಯ ಸಿದ್ಧತೆಯ ನಂತರವೂ ತುದಿ ಮುಟ್ಟದ ಸರ್ಕಾರಿ ಯೋಜನೆಗಳ ಬಗೆಗಿನ ಪ್ರವರ ಇಲ್ಲಿದೆ. ಹುಲಿಗಳ ಸಂರಕ್ಷಣೆ ಮಾಡಲೆಂದು ಅದೆಷ್ಟೊ ಸಾವಿರ ಕೋಟಿ ರೂಪಾಯಿಗಳ ಯೋಜನೆ ತಯಾರಾಗಿ, ತಜ್ಞರಿಗೆ ಏಸೀ ರೂಮು, ಏಸೀ ಕಾರು, ಕಾಡಂಚಿನಲ್ಲಿ ಐಷಾರಾಮಿ ಐಬಿ ಎಲ್ಲ ರೆಡಿಯಾಗುತ್ತದೆ. ಕಾಡಿನಲ್ಲಿ ಓಡಾಡಿ ಹುಲಿ ಹಂತಕರ ಬೆನ್ನಟ್ಟಬೇಕಾದ ಗಾರ್ಡಪ್ಪನಿಗೆ ಮಾತ್ರ ಹರಕು ಬೂಟು, ಮುರುಕು ದೊಣ್ಣೆ. ಸರಿಸ್ಕಾ ಹುಲಿಧಾಮದಲ್ಲಿ ಒಂದು ಹುಲಿಯೂ ಉಳಿದಿಲ್ಲ ಎಂದು ಗೊತ್ತಾದಾಗ ಮತ್ತೆ ದಿಲ್ಲಿಯಲ್ಲಿ ತಜ್ಞರ ಸಭೆ, ತನಿಖೆಗೆ ಸಮಿತಿ, ವಿಮಾನಯಾನ, ಐಬಿಯಲ್ಲಿ ವಿಚಾರಣೆ. ವರದಿ ದಿಲ್ಲಿಗೆ, ಕಡತ ಕಪಾಟಿಗೆ.

ಹುಲಿ ರಕ್ಷಣೆ ಮಾಡಬೇಕಾದ ಕಾವಲುಗಾರನ ಸ್ಥಿತಿಯೇ ಗಡಿರಕ್ಷಣೆಯ ಸಿಪಾಯಿಗಳದ್ದೂ ಹೌದು, ಮಾದಕದ್ರವ್ಯಗಳ (ನಾರ್ಕೋಟಿಕ್) ಪತ್ತೆದಳದ ಸಿಪಾಯಿಗಳದ್ದೂ ಹೌದು, ಪೊಲೀಸ್ ಪೇದೆಗಳದ್ದೂ ಹೌದು. ಬಿಹಾರದ ಮಾಜಿ ಮುಖ್ಯಮಂತ್ರಿ ಜಗನ್ನಾಥ ಮಿಶ್ರಾ ಮೊನ್ನೆ ಆಗಸ್ಟ್ 19ರಂದು ತೀರಿಕೊಂಡಾಗ ಅಂತಿಮ ನಮನಕ್ಕೆಂದು ಸಿಡಿಸಲು ಹೊರಟ 21 ಹುಸಿ ತೋಪುಗಳಲ್ಲಿ ಒಂದೂ ಢಮ್ಮೆನಲಿಲ್ಲ; ಎಲ್ಲವೂ ಹುಸಿ! ಅಂಥ ದೂರದವರ (ಅಂದರೆ ದೂರಲಾರದವರ) ಸ್ಥಿತಿ ಹಾಗಿರಲಿ, ಶಾಲಾ ಮಕ್ಕಳ ಕತೆ ನೋಡಿ: ಅವರಿಗೆ ಕತೆ ಪುಸ್ತಕ ತಲುಪಿಸಲೆಂದು ಎಷ್ಟೊಂದು ಕೋಟಿ ವೆಚ್ಚ ಮಾಡಿ, ಎಷ್ಟೊಂದು ಇಲಾಖೆಗಳು, ಸಂಘ–ಸಂಸ್ಥೆಗಳು ಎಂತೆಂಥ ಪ್ರಸಿದ್ಧ ಸಾಹಿತಿಗಳಿಂದ ಕತೆ ಬರೆಸಿ, ಆಕರ್ಷಕ ಪುಸ್ತಕಗಳನ್ನು ಮುದ್ರಿಸಿ ಶಾಲೆಗಳಿಗೆ ಕಳಿಸಿದರೆ -ಅವು ಅಲ್ಲಿ ಕಪಾಟೆಂಬ ಲಾಕಪ್ಪಿನಲ್ಲಿ ಬಂದ್. ಇತ್ತ ಮಕ್ಕಳು ಹಾವು, ಮೊಸಳೆ, ಚಿರತೆ, ಚೇಳುಗಳನ್ನೆಲ್ಲ ಮುಟ್ಟಿ ನೋಡಿ, ಮೆಟ್ಟಿ ನೋಡಿ ಪಾಠ ಕಲಿಯಬೇಕು. ಹಾವು ಕಚ್ಚಿ ಸಾಯುವವರ ಸಂಖ್ಯೆ ನಮ್ಮ ದೇಶದಲ್ಲಿ ಪ್ರತಿವರ್ಷ 50 ಸಾವಿರ ತಲುಪುತ್ತಿದೆ. ವಿಷ ನಿರೋಧಕ ಔಷಧ ತಯಾರಿಕೆಗೆ ಬೇಕಾದ ಲ್ಯಾಬು, ಟ್ಯೂಬುಗಳಿಗೆ ಕೋಟಿಗಟ್ಟಲೆ ಹಣವಿದೆ. ಆದರೂ ಔಷಧ, ಡಾಕ್ಟರು ಮತ್ತು ರೋಗಿ ಈ ಮೂರೂ ಒಟ್ಟಿಗೆ ಹಳ್ಳಿಯ ಆಸ್ಪತ್ರೆ ಸೇರುವುದೇ ಅಪರೂಪ.

ಇನ್ನು, ನೀರಾವರಿ ಇಲಾಖೆ ಎಂದರೆ ‘ಕೊನೆಮುಟ್ಟದ ಸಾಧನೆಗಳ ಮ್ಯೂಸಿಯಂ’ ಎಂತಲೇ ಹೇಳಬಹುದು. ಉದಾಹರಣೆ ಬೇಕಿದ್ದರೆ ನೀವು ನಿಮ್ಮೂರಿನ ಸಮೀಪದ್ದನ್ನೇ ನೆನಪಿಸಿಕೊಳ್ಳಬಹುದು. ನಾನು ತುಸು ದೂರದ ಪ್ರಸಂಗ ಹೇಳುತ್ತೇನೆ: 1970ರಲ್ಲಿ ನರ್ಮದಾ ನದಿಗೆ ಬಾರ್ಗಿ ಎಂಬಲ್ಲಿ ಅಣೆಕಟ್ಟು ಕಟ್ಟಿ 162 ಗ್ರಾಮಗಳನ್ನು ಮತ್ತು 2,800 ಕೋಟಿ ರೂಪಾಯಿಗಳನ್ನು ಮುಳುಗಿಸಿದ್ದಾಯಿತು. ಮುಖ್ಯ ಕಾಲುವೆಗಳನ್ನು ನಿರ್ಮಿಸಿದ ನಂತರ ಉಪಕಾಲುವೆಗಳ ನಿರ್ಮಾಣ ಮರೆತೇಹೋಯಿತು. ಸುಮಾರು 35 ವರ್ಷಗಳ ನಂತರ ಶೇಕಡ 14ರಷ್ಟು ಫಲಾನುಭವಿಗಳಿಗೆ ಮಾತ್ರ ನೀರು. ಉಳಿದವರ ಆಸೆಗೆ ಎಳ್ಳು ನೀರು. ಇದೇ ರೀತಿ, ಪ್ರಧಾನ ಮಂತ್ರಿ ಕೃಷಿ ನೀರಾವರಿ ಯೋಜನೆಯಡಿ ದೇಶದಲ್ಲಿ 8,214 ಅಪೂರ್ಣ ಸ್ಥಿತಿಯಲ್ಲಿವೆ ಎಂದು ಸಂಸದೀಯ ಸಮಿತಿ ಕಳೆದ ವರ್ಷ ವರದಿ ಮಾಡಿತ್ತು. ಒಟ್ಟು 51 ಸಾವಿರ ಕೋಟಿ ಮೊತ್ತದ ಯೋಜನೆಗಳಂತೆ. ಇರಲಿ (ಸಮಿತಿಯ ಬೈಠಕ್ ಆಗಿ ವರದಿಯೂ ಸಲ್ಲಿಕೆ ಆಗಿದೆ ಎಂಬುದೇ ಅಚ್ಚರಿಯ ಹಾಗೂ ಸಮಾಧಾನದ ಸಂಗತಿ ತಾನೆ?) ಈಗ ಬಾರ್ಗಿ ಯೋಜನೆಯ ಆ ಶೇಕಡ14ರಷ್ಟು ಅದೃಷ್ಟವಂತರಿಗೆ ನಿಜಕ್ಕೂ ನೀರು ದಕ್ಕಿದೆಯೆ? ಅವರ ಪಂಪ್‍ಸೆಟ್‍ಗೆ ವಿದ್ಯುತ್ ಇದೆಯೆ? ಶೋಧಕ್ಕಿಳಿದರೆ ಅದು ಇನ್ನೊಂದು ಪಂಪ ಪುರಾಣವೇ ಆದೀತು.

ಪಂಪ್ ಸರಿ ಇದ್ದರೂ ವಿದ್ಯುತ್ತು, ಬೆಳೆ ಸಾಲ, ರಸಗೊಬ್ಬರ, ಬಿತ್ತನೆ ಬೀಜಕ್ಕೆಂದು ಅಲ್ಲಿ ಇಲ್ಲಿ ಎಡತಾಕಿ, ಭಾರತಾಂಬೆಯ ಪುಣ್ಯದಿಂದ ಎಷ್ಟೊ ಬೆಳೆ ಬಂದು ಅದರಲ್ಲೂ ಒಂದಿಷ್ಟನ್ನು ಸರ್ಕಾರ ಲೆವಿ ಸಂಗ್ರಹ ಮಾಡಿ ಗೋದಾಮಿನಲ್ಲಿ ಹಾಕಿತೊ ಅದರಲ್ಲಿ ಮುಗ್ಗದೆ, ಹುಳ ಹಿಡಿಯದೇ ಉಳಿದ ಒಂದಿಷ್ಟನ್ನು ಪಡಿತರ ಅಂಗಡಿಗಳಿಗೆ ರವಾನಿಸಿದರೆ ಅಲ್ಲೂ ಬೆರಳ ತುದಿಯಲ್ಲಿ ಲಾಸ್ಟ್ ಮೈಲ್ ಸಮಸ್ಯೆ. ಆಧಾರ್ ದಾಖಲೆಗೆ ಬೆರಳಚ್ಚು ಹೊಂದುವುದೇ ಇಲ್ಲ. ಅಥವಾ ದಿನವಿಡೀ ನೆಟ್‍ವರ್ಕ್ ಇಲ್ಲ.

‘ನಿಲ್ರೀ ಸರ! ನೀರಾವರಿ ಯೋಜನೆಗಳ ಫಲಾನುಭವಿಗಳು ಅಂದರೆ ರೈತರಲ್ಲ, ಗುತ್ತಿಗೆದಾರರು, ಉಕ್ಕು- ಸಿಮೆಂಟ್ ಉದ್ಯಮಿಗಳು!’ ಎಂದು ನೀವು ವಾದಿಸಿದಿರಾ? ಅಲ್ಲೂ ಕೊನೇ ಮೈಲಿನ ಸಮಸ್ಯೆ ಇದೆ. ತಳಮಟ್ಟದ ಚಿಕ್ಕಪುಟ್ಟ ಗುತ್ತಿಗೆದಾರರು, ಕಿರು ಉದ್ಯಮಿಗಳ ಕತೆ ನಿಮಗೆ ಗೊತ್ತಿಲ್ಲ ಅಷ್ಟೆ. ಸಣ್ಣಪುಟ್ಟ ಬಿಲ್ ಪಾಸ್ ಮಾಡಿಸಿಕೊಳ್ಳಲು ‘ಕೇಸ್ ವರ್ಕರ್’ ಎಂಬ ಗುಮಾಸ್ತನ ಬಳಿ ಅದೆಷ್ಟು ಬಾರಿ ಕೈಹೊಸೆಯುತ್ತ ನಿಂತಿರುತ್ತಾರೊ ನಿಮಗೇನು ಗೊತ್ತು? ತಬರನ ಕತೆ ಗೊತ್ತಿದ್ದವರಿಗೆ ಗೊತ್ತು ಅಷ್ಟೆ. ನನ್ನ ಗುಮಾನಿ ಏನೆಂದರೆ, ಭಾರತ ದೇಶ ಹೀಗೆ ಹಿಂದಿದ್ದ ಸ್ಥಿತಿಯಲ್ಲೇ ಉಳಿಯಲೆಂದು ಬ್ರಿಟಿಷರು ಬೇಕಂತಲೆ ಈ ‘ಕೇಸ್ ವರ್ಕರ್’ ಎಂಬಾತನನ್ನು ಇಲ್ಲೇ ಬಿಟ್ಟು ಹೋಗಿದ್ದಾರೆ. ಅವನ ಗುಣಗಳೆಲ್ಲ ಸಾಂಕ್ರಾಮಿಕವಾಗಿ ಕಚೇರಿಯ ಮೇಲಧಿಕಾರಿಗಳವರೆಗೂ ಏರಿ, ರಾಷ್ಟ್ರಕ್ಕೆಲ್ಲ ವ್ಯಾಪಿಸಿದೆ.

ಹೀಗಾಗುತ್ತದೆಂದು ಗಾಂಧೀಜಿ ಮೊದಲೇ ಊಹಿಸಿದ್ದರೆಂದು ಕಾಣುತ್ತದೆ. ಈ ದೇಶ ಉದ್ಧಾರವಾಗಲೆಂದು ಅವರು ಒಂದು ಮಂತ್ರದ ತಾಯಿತವನ್ನು ರಾಜಕಾರಣಿಗೆ ಕೊಟ್ಟಿದ್ದರು. ‘ನೀನು ಮಾಡುವ ಕೆಲಸದಿಂದ ನಮ್ಮ ಕೊಟ್ಟಕೊನೆಯ ಪ್ರಜೆಗೆ ಕಿಂಚಿತ್ತಾದರೂ ಪ್ರಯೋಜನವಾದೀತೆ? ಈ ತಾಯಿತವನ್ನು ಹಿಡಿದು ಆ ಪ್ರಜೆಯ ಮುಖವನ್ನು ಊಹಿಸಿಕೊ; ಆಮೇಲೆ ನಿನ್ನ ಯೋಜನೆಯನ್ನು ಜಾರಿಗೊಳಿಸು’ ಎಂದು ಗಾಂಧೀಜಿ ಹೇಳಿದ್ದರು. ಈಗಿನ ನಾಯಕರ ಯೋಜನೆ ಗೊತ್ತಲ್ಲ? ಹೇಗಾದರೂ ಮಾಡಿ ಆ ಕೊಟ್ಟ ಕೊನೆಯ ಪ್ರಜೆಯನ್ನು ಐದು ವರ್ಷಗಳಿಗೊಮ್ಮೆ ಮತಗಟ್ಟೆಗೆ ಸೆಳೆದು ಮತಗಿಟ್ಟಿಸುವುದು ಅಷ್ಟೇ! ಅದು ಮಾತ್ರ ಶೇಕಡ 70ರಷ್ಟು ಜಾರಿಯಾಗುತ್ತಿದೆ.

ಲಾಸ್ಟ್ ಮೈಲ್ ಕನೆಕ್ಟಿವಿಟಿ ಬಗ್ಗೆ ಕಾರ್ಪೊರೇಟ್ ವಲಯದ ಮ್ಯಾನೇಜ್‍ಮೆಂಟ್ ಪರಿಣತರು ಏನೇನೊ ಸರ್ಕಸ್ ಮಾಡಿ ಯಶಸ್ವಿಯಾಗಿದ್ದಾರೆ. ಲಾಜಿಸ್ಟಿಕ್ಕಂತೆ, ಅಲ್ಗೊರಿದಮ್ಮಂತೆ, ಆನ್‍ಲೈನಂತೆ. ಅಂತೂ ಸಣ್ಣಪುಟ್ಟ ಪಟ್ಟಣಗಳಲ್ಲೂ ನಿಮಗೆ ಬೇಕಾದ ಶೋಕಿವಸ್ತುಗಳು ಜಗತ್ತಿನ ಯಾವ ಅಂಚಿನಿಂದಾದರೂ ಮನೆಗೇ ಬರುತ್ತಿವೆ. ಎಪ್ಪತ್ತರ ದಶಕದಲ್ಲಿ ಟೆಲಿಫೋನೇ ಇಲ್ಲದಿದ್ದಾಗ ಸಕ್ಕರೆ, ಸಿಮೆಂಟಿಗೂ ಪರ್ಮಿಟ್ ಪಡೆಯಲು ಕ್ಯೂ ನಿಲ್ಲಬೇಕಾಗಿತ್ತು. ಆ ಕೆಲಸಕ್ಕೆಂದೇ ಪಟ್ಟಣಿಗರು ತಮ್ಮೊಂದಿಗೆ ಮುದಿ ಅಪ್ಪ, ಅಮ್ಮನನ್ನೂ ಸಾಕಿಕೊಳ್ಳುತ್ತಿದ್ದರು. ಜನರು ಸುಖಿಯಾಗಿದ್ದರು. ಈಗ ಸ್ಮಾರ್ಟ್ ಫೋನಿದ್ದರೆ (ಬಿಎಸ್‍ಎನ್‍ಎಲ್ ಎಂಬ ಕುಣಿಕೆಯಿಂದ ನುಣುಚಿಕೊಂಡಿದ್ದರೆ) ಸಾಕು, ಎಲ್ಲವೂ ಸಿಗುತ್ತವೆ. ನಾವು ಹ್ಯಾಪಿ. ಎಷ್ಟು ಸುಖಿಗಳೆಂದರೆ ನಮಗೆ ನಮ್ಮ ಹಿತ್ತಿಲತ್ತ ನೋಡಲು ಪುರುಸೊತ್ತೇ ಇಲ್ಲ. ಕೊರಿಯರ್ ಮೂಲಕ ಬರುವ ಸರಕುಗಳ ಪೊಟ್ಟಣವನ್ನು ಬಿಚ್ಚಿ ಪ್ಯಾಕಿಂಗ್ ಕಾಗದ, ರಟ್ಟು, ಪ್ಲಾಸ್ಟಿಕ್ಕನ್ನು ಲಾರಿಗೆ ಹಾಕುವ ‘ಲಾಸ್ಟ್ ಮೈಲ್’ ಕೆಲಸ ಮಾತ್ರ ನಮ್ಮಿಂದ ಸಾಧ್ಯವಿಲ್ಲ. ಅದು ನಮ್ಮ ರಾಷ್ಟ್ರೀಯ ಹೆಗ್ಗುಣವೇ ಇರಬೇಕು.

ಕೆಲವರ ಮನೆಯಲ್ಲಿ ಹಸಿಕಸ, ಒಣಕಸ ಬೇರ್ಪಡಿಸುವುದೂ ಇಲ್ಲ. ಎಲ್ಲವನ್ನೂ ಒಟ್ಟಾಗಿಸಿ ತಿಪ್ಪೆಗುಂಡಿಯವರೆಗೆ ಹೋದರೆನ್ನಿ. ಲಾಸ್ಟ್ ಮೀಟರ್ ತಲುಪುವ ಮೊದಲೇ ದೂರದಿಂದಲೇ ಡಿಸ್ಕಸ್ ಥ್ರೋ! ಆದ್ದರಿಂದಲೇ ಎಲ್ಲ ಊರುಗಳಲ್ಲಿ ಚೆಲ್ಲಾಪಿಲ್ಲಿ ತಿಪ್ಪೆ. ‘ಅದನ್ನು ಎತ್ರಪಾ’ ಎಂದು ಪ್ರಧಾನ ಮಂತ್ರಿಯೇ ಕೆಂಪು ಕೋಟೆಯ ಮೇಲಿಂದ ಕೂಗಿ ಕೂಗಿ ಹೇಳಬೇಕು.

ಬೇರೆ ಅದೆಷ್ಟೊ ದೇಶಗಳಲ್ಲಿ ಹಳೇ ಬ್ಯಾಟರಿ ಸೆಲ್, ಖಾಲಿ ಬಾಟಲಿಗಳನ್ನು ಕಂಪನಿಗಳೇ ಮರಳಿ ಪಡೆಯಬೇಕು ಎಂಬ ಕಾನೂನು ಇದೆಯಂತೆ. ಅದು ಗೊತ್ತಾಗಿ, ನಂಜನಗೂಡಿನ ಶಾಲೆಯ ಶಿಕ್ಷಕ ಸಂತೋಷ ಗುಡ್ಡಿಯಂಗಡಿ ತಮ್ಮ ವಿದ್ಯಾರ್ಥಿಗಳ ಮೂಲಕ ಒಂದು ಚಳವಳಿಯನ್ನು ಆರಂಭಿಸಿದ್ದಾರೆ: ‘ನಿಮ್ಮ ಕಸವನ್ನು ನೀವೇ ಪಡೆಯಿರಿ’ ಎಂದು ಕಂಪನಿಗಳಿಗೆ ಹಾಲಿನ ಖಾಲಿ ಪ್ಯಾಕೆಟ್, ಚಾಕೊಲೇಟ್ ರ‍್ಯಾಪರ್, ಖಾಲಿ ಟೂಥ್ ಪೇಸ್ಟ್, ಬ್ಯಾಟರಿ ಸೆಲ್ ಇತ್ಯಾದಿಗಳನ್ನು ವಾಪಸ್ ಕಳಿಸುತ್ತಿದ್ದಾರೆ. ಅದನ್ನು ಪಡೆದ ಕಾಲ್ಗೇಟ್ ಕಂಪನಿ ಮಾತ್ರ ‘ನಾವು ಮುಂದಕ್ಕೆ ಪರಿಸರಕ್ಕೆ ಧಕ್ಕೆಯಾಗದಂತೆ ಪ್ಯಾಕಿಂಗ್ ಮಾಡಲಿದ್ದೇವೆ, ನಿಮ್ಮ ಕಾಳಜಿಗೆ ಧನ್ಯವಾದ’ ಎಂದು ಉತ್ತರಿಸಿ, ಜೊತೆಗೆ ಈಗಿನದೇ ಇನ್ನಷ್ಟು ಪೇಸ್ಟು, ಬ್ರಶ್‍ಗಳನ್ನು ಉಚಿತವಾಗಿ ಮುಂಬೈಯಿಂದ ಮಕ್ಕಳಿಗೆ (ಎಂದಿನ ಪ್ಯಾಕಿಂಗ್ ಸಮೇತ) ಕಳಿಸಿದೆ. ಉಳಿದ ಕಂಪನಿಗಳು ಕಮ್ ಕಿಮ್ ಎನ್ನಲಿಲ್ಲ.

ಗ್ರಾಹಕರನ್ನು ತಲುಪುವುದಷ್ಟೇ ಲಾಸ್ಟ್ ಮೈಲ್ ಎಂದು ನಮ್ಮ ದೇಶದ ಕಂಪನಿಗಳು ಭಾವಿಸಿದ್ದರಿಂದಲೇ ಇಲ್ಲಿ ತಿಪ್ಪೆಯ ಸಾಗರ/ಬೆಟ್ಟ ಸೃಷ್ಟಿ ಆಗುತ್ತಿವೆ. ನಗರದ ಮಧ್ಯದಲ್ಲಿ ಸ್ವಚ್ಛ ಭಾರತ, ಅಂಚಿನಲ್ಲಿ ತುಚ್ಛ ಭಾರತ ಎಂಬಂತಾಗಿದೆ. ‘ಬಳಸಿದ ಸ್ಯಾನಿಟರಿ ಪ್ಯಾಡ್‍ಗಳನ್ನು ಚೀಲದಲ್ಲಿ ಕಟ್ಟಿ ತಂದರೆ ಮಾತ್ರ ಹೊಸ ಪ್ಯಾಡ್ ಕೊಡುತ್ತೇವೆ’ ಎಂಬ ಆದರ್ಶ ನೀತಿಯನ್ನು ಪಾಲಿಸುವ ಖಾಸಗಿ ಕಂಪನಿ ನಮ್ಮಲ್ಲಿದೆಯೆ? ಈ ಮಹಾನ್ ದೇಶದಲ್ಲಿ ಪ್ರತಿ ವರ್ಷ 1,230 ಕೋಟಿ ಪ್ಯಾಡ್‍ಗಳು ತಿಪ್ಪೆ ಸೇರಿ ಇನ್ನು ಕಲಿಯುಗ ಮುಗಿಯುವವರೆಗೂ ಕೂತಿರುತ್ತವೆ. ಒಂದೊಂದು ಪ್ಯಾಡ್‍ನಲ್ಲೂ ತನ್ನ ತೂಕಕ್ಕಿಂತ ಎಂಟು ಪಟ್ಟು ಜಾಸ್ತಿ ದ್ರವವನ್ನು ಹೀರಿಕೊಳ್ಳಬಲ್ಲ ಸೂಪರ್ ಹೀರುಹತ್ತಿ ಇರುತ್ತದೆ. ನೆದರ್‌ಲ್ಯಾಂಡ್ಸ್‌ ದೇಶದ ಆರ್ನೆಮ್ ಪಟ್ಟಣದಲ್ಲಿ ಬಳಸಿದ ಪ್ರತಿ ಪ್ಯಾಡನ್ನೂ ಬಿಡಿಸಿ, ಅದರೊಳಗಿನ ಹೀರುಹತ್ತಿಯನ್ನು ಯಂತ್ರದಲ್ಲಿ ಮತ್ತೆ ಮತ್ತೆ ತೊಳೆದು ಹಿಂಡಿ ಒಣಗಿಸಿ, ಹೂದೋಟಗಳಲ್ಲಿ ಹೂಳುವ ವ್ಯವಸ್ಥೆ ಇದೆಯಂತೆ. ಇದೆಯೆಂದು ಬೆಂಗಳೂರಿನ ಘನಕಸಗಳ ಹೋರಾಟಗಾರ್ತಿ ಆಲ್ಮಿತ್ರಾ ಪಟೇಲ್ ಹೇಳುತ್ತಾರೆ. ನಮ್ಮ ಕೃಷಿಭೂಮಿಯಲ್ಲಿ ಅಂಥ ಹೀರುಹತ್ತಿಯನ್ನು ಹೂತಿಟ್ಟರೆ ಕಮ್ಮಿ ನೀರಿನಲ್ಲೂ ಬೆಳೆ ಬೆಳೆಯಬಹುದು. ಆದರೆ ನಮ್ಮಲ್ಲಿ ಹಳ್ಳಿಯ ಹೊಲಗಳೂ ಲಾಸ್ಟ್ ಮೈಲಲ್ಲಿವೆ. ಹಾಗಾಗಿ ನಗರದ ಕೊಳೆದ್ರವವನ್ನು ಕಾಪಿಡುವುದೇ ಈ ಪ್ಯಾಡುಗಳ ಪಾಡಾಗಿದೆ.

ಕತೆ ಎಲ್ಲೆಲ್ಲಿಗೋ ಹೋಗಿ ನಗರಕ್ಕೇ ಬಂತು. ಲಾಸ್ಟ್ ಮೈಲಿನಲ್ಲಿ ಕೊಟ್ಟಕೊನೆಯ ಹಳ್ಳಿಹೈದರೇ ಇರಬೇಕೆಂದಿಲ್ಲ. ನಗರದ ಕಿಷ್ಕಿಂಧೆಯ ಹತ್ತಡಿ ಅಗಲದ ರಸ್ತೆಯುಳ್ಳ ಖಾಸಗಿ ಲೇಔಟ್‍ನ ನಟ್ಟನಡುವಣ ವ್ಯಕ್ತಿಯೂ ಆಗಬಹುದು. ಅವನ ಮನೆಗೆ ಬೆಂಕಿ ಬಿದ್ದರೆ ಅಥವಾ ಮನೆಯೇ ಕುಸಿದರೆ ಅಗ್ನಿಶಾಮಕ ದಳದವರೊ, ಕ್ರೇನೊ, ಓಬಿ ವ್ಯಾನೊ ತಲುಪುವುದು ಹೇಗೆ? ಚಂದ್ರನನ್ನು ತಲುಪಿದಷ್ಟು ಸುಲಭವೆ ಅದು?

ಬಿಡಿ; ಲಾಸ್ಟ್‌ ಮೈಲ್ ಫಲಾನುಭವಿಗಳ ಕುರಿತು ರಾಜೀವ್ ಗಾಂಧಿಯವರಿಂದ ಹಿಡಿದು ಮಾಜಿ ಹಣಕಾಸು ಸಚಿವ ಚಿದಂಬರಂವರೆಗೆ ಅನೇಕರು ಸಂಸತ್ತಿನಲ್ಲಿ ಚಿಂತಿಸಿದ್ದಾರೆ. ಸರಕಾರ ಕೈ ಇಕ್ಕಲ್ಲೆಲ್ಲ ಹೀಗಾಗುತ್ತದೆ ಎಂದು ಗೊತ್ತಾಗಿದ್ದರಿಂದಲೇ ಈಗಿನ ಪ್ರಧಾನಿಯವರು ‘ಆದಷ್ಟು ಕಡಿಮೆ ಸರಕಾರ’ವನ್ನು ಜನಸೇವೆಗೆ ಕಳಿಸುವುದಾಗಿ ಹೇಳುತ್ತಿದ್ದಾರೆ. ಕಳೆದೆರಡು ದಶಕಗಳಿಂದ ಅದು ತಾನಾಗಿಯೇ ಆಗುತ್ತಿದೆ: ಶಿಕ್ಷಣ, ಆರೋಗ್ಯ, ಸಂಚಾರ-ಸಂಪರ್ಕ ಎಲ್ಲ ಸರಕಾರಿ ಸೌಲಭ್ಯಗಳೂ ತಾವಾಗಿ ದಿನದಿನಕ್ಕೂ ಕಡಿಮೆ, ಇನ್ನೂ ಕಡಿಮೆ ಸಿಗುತ್ತಿವೆ. ಮತ್ತೂ ಕಡಿಮೆ ಮಾಡಲು ಹೋಗಿ ಕೊನೆಗೆ ಸರಕಾರವನ್ನೇ ಖಾಸ-ಘೀ-ಕರಣ ಮಾಡಿಬಿಟ್ಟರೆ?

ಆಗ ರೊಟ್ಟಿ ಜಾರಿ ತುಪ್ಪಕ್ಕೆ ಬಿತ್ತೂ ಅನ್ನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT