ಶಾಸನಗಳ ಪ್ರತಿಕೃತಿ ಬೇಕೇ?

7

ಶಾಸನಗಳ ಪ್ರತಿಕೃತಿ ಬೇಕೇ?

Published:
Updated:
Deccan Herald

ರಾಜಧಾನಿಯಲ್ಲಿ ಲಭ್ಯವಿರುವ ಅತ್ಯಂತ ಹಳೆಯ ಕಲ್ಬರಹದ (ಶಾಸನ) ಪ್ರತಿಕೃತಿ ಬೇಕಾ? ಇತಿಹಾಸ ಮತ್ತು ಪರಂಪರೆ ಸಾರುವ ಈ ಶಾಸನಗಳ ಪಡಿಯಚ್ಚುಗಳನ್ನು ನಿಮ್ಮ ಮನೆಗಳಲ್ಲಿ ಸಂಗ್ರಹಿಸಲು ಬಯಸುತ್ತೀರಾ? ಅಂಚೆ ಚೀಟಿ, ನಾಣ್ಯ, ನೋಟು, ಪೆನ್ನು, ವಾಚು, ವಿವಿಧ ದೇಶಗಳ ಕರೆನ್ಸಿಗಳನ್ನು ಸಂಗ್ರಹಿಸಿದಂತೆ ಶಾಸನಗಳನ್ನು ಸಂಗ್ರಹಿಸಲು ಸಾಧ್ಯವಾ? ಎಂಬ ಪ್ರಶ್ನೆ ಕಾಡುವುದು ಸಹಜ.

ಅವುಗಳಿಗೆ ಹೌದು ಎಂಬ ಉತ್ತರವನ್ನು ನಗರದ ಯುವ, ಉತ್ಸಾಹಿ ಇತಿಹಾಸಕ್ತರೂ ಆದ ಟೆಕಿಗಳು ನೀಡುತ್ತಾರೆ. ಅದಕ್ಕೆ ಪೂರಕವಾಗಿ ಚಿಕ್ಕ ಗಾತ್ರದಲ್ಲಿ ಶಾಸನದ ಪ್ರತಿಕೃತಿಗಳನ್ನು ಆಧುನಿಕ ತಂತ್ರಜ್ಞಾನದ ನೆರವಿನಿಂದ ಸಿದ್ಧಪಡಿಸಿರುವ ಅವರು, ಶಾಸನಗಳನ್ನೂ ಮನೆಗಳಲ್ಲಿ ಸಂಗ್ರಹಯೋಗ್ಯವನ್ನಾಗಿಸಿದ್ದಾರೆ.

ಕಳೆದ ಜೂನ್‌ನಲ್ಲಿ ಲಭ್ಯವಾದ ಕ್ರಿ.ಶ 750ರ ಕಾಲದ ‘ಹೆಬ್ಬಾಳ’ ಶಾಸನದ ಪ್ರತಿಕೃತಿಯನ್ನು (Replica) ಅತ್ಯಾಧುನಿಕ ‘3ಡಿ ಸ್ಕ್ಯಾನಿಂಗ್‌’ ತಂತ್ರಜ್ಞಾನ ಬಳಸಿ ಅವರು ಇತ್ತೀಚೆಗೆ ತೆಗೆದಿದ್ದಾರೆ. ಇದೊಂದು ವೀರಗಲ್ಲು ಶಾಸನವಾಗಿದ್ದು, ಅದರಲ್ಲಿರುವ ಶಿಲ್ಪದ ಉಬ್ಬು, ತಗ್ಗುಗಳು, ಲಿಪಿ ಮೂಲ ಶಾಸನದಂತೆ ಅಥವಾ ಅದಕ್ಕಿಂತ ಹೆಚ್ಚು ಸ್ಪಷ್ಟವಾಗಿ ಗೋಚರಿಸುವಂತಹ ಪಡಿಯಚ್ಚನ್ನು ಈ ತಂಡ ಮುದ್ರಿಸಿದೆ. ಸುಮಾರು 1.2 ಮೀಟರ್‌ ಗಾತ್ರದ ಶಿಲಾಶಾಸನವನ್ನು 3ಡಿ ತಂತ್ರಜ್ಞಾನದ ನೆರವಿನಿಂದ 15 ಸೆಂ.ಮೀ ಗಾತ್ರಕ್ಕೆ ತಗ್ಗಿಸಿದ್ದು, ಬ್ಯಾಗು ಅಥವಾ ಕಿಸೆಯಲ್ಲಿಟ್ಟುಕೊಂಡು ಹೋಗಬಹುದಾಗಿದೆ.

ಏರೋಸ್ಪೇಸ್‌ನಲ್ಲಿ ಬಳಸುವ ತಂತ್ರಜ್ಞಾನವನ್ನು ಬಳಸಿ ಈ ತಂಡ 3ಡಿ ಸ್ಕ್ಯಾನ್‌ ಮಾಡುತ್ತಿದೆ. ಏರೋಸ್ಪೇಸ್‌ನಲ್ಲಿ ವಿವಿಧ ತಂತ್ರಜ್ಞಾನ ಅಥವಾ ತಂತ್ರಾಂಶದ ನಕಲು ಪ್ರತಿಕೃತಿಗಳನ್ನು ಸಿದ್ಧಪಡಿಸಲು ಈ ತಂತ್ರಜ್ಞಾನ ಬಳಸಲಾಗುತ್ತಿದೆ. ಅದನ್ನು ಈ ತಂಡವು ಶಾಸನಗಳ ಪ್ರತಿಕೃತಿ ಸಿದ್ಧಪಡಿಸಲು ಬಳಸುತ್ತಿದೆ.

‘ಆರ್ಕಿಯಾಲಜಿಕಲ್‌ ಸರ್ವೆ ಆಫ್‌ ಇಂಡಿಯಾ (ಎಎಸ್‌ಐ) ದೇಶದ ಕೆಲ ಸ್ಮಾರಕಗಳನ್ನು 3ಡಿ ಸ್ಕ್ಯಾನ್‌ ಮಾಡುತ್ತಿದೆ. ಆದರೆ ಶಾಸನಗಳ ಕ್ಷೇತ್ರದಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಈ ಪ್ರಯೋಗ ಮಾಡಿ ಯಶಸ್ವಿಯಾಗಿದ್ದೇವೆ’ ಎನ್ನುತ್ತಾರೆ ಹವ್ಯಾಸಿ ಇತಿಹಾಸಕಾರರೂ ಆದ ಸಾಫ್ಟ್‌ವೇರ್‌ ಎಂಜಿನಿಯರ್‌ ಪಿ.ಎಲ್‌. ಉದಯಕುಮಾರ್‌. ಅವರೊಂದಿಗೆ ಏರೋಸ್ಪೇಸ್‌ ಎಂಜಿನಿಯರ್‌ ವಿನಯ್‌ ಕುಮಾರ್‌, ರಿವೈವಲ್‌ ಹೆರಿಟೇಜ್‌ ಹಬ್‌, ‘ಆಲ್ಟೆಮ್‌ ಕಂಪೆನಿ, ಆರ್‌ಟೆಕ್‌ 3ಡಿ, ಟಾಟಾ ಎಲೆಕ್ಸಿ ಕಂಪನಿ ಕೈಜೋಡಿಸಿದ್ದಾರೆ.

ಹೆಬ್ಬಾಳ ಶಾಸನದ ಮೇಲೇಕೆ ಪ್ರಯೋಗ: ಬೆಂಗಳೂರಿನ ಪ್ರಸ್ತಾಪ ಇರುವ ಮೊದಲ ಶಾಸನ ‘ಬೇಗೂರು ಶಾಸನ’ (ಕ್ರಿ.ಶ 890) ಎಂದು ಕರೆಯಲಾಗುತ್ತಿತ್ತು. ಆದರೆ, ಹೆಬ್ಬಾಳದ ಶಾಸನ ಇದಕ್ಕೂ ಹಳೆಯದು (ಕ್ರಿ.ಶ 750). ಇದರಲ್ಲಿ ಹೆಬ್ಬಾಳವನ್ನು ‘ಪೆರ್ಬೊಳಲನಾಡು‘ ಎಂದು ಉಲ್ಲೇಖಿಸಿದೆ. ಗಂಗರ ಕಾಲದಲ್ಲಿ ಇಲ್ಲಿನ ನಿವಾಸಿಯಾಗಿದ್ದ ಕಿತ್ತಯ್ಯ ಎಂಬಾತ ರಾಷ್ಟ್ರಕೂಟರ ವಿರುದ್ಧ ವೀರಮರಣವಪ್ಪಿದ ಕುರಿತ ಶಾಸನ ಇದಾಗಿದ್ದು, ಕನ್ನಡದಲ್ಲಿದೆ.

ಬೆಂಗಳೂರಿನ ವ್ಯಾಪ್ತಿಯಲ್ಲಿ ಇಲ್ಲಿಯವರೆಗೂ ದೊರೆತಿರುವ ಅತಿ ಪ್ರಾಚೀನ ಕನ್ನಡ ಶಾಸನ ಎಂಬ ಹಿರಿಮೆಯಿರುವ ಇದರದ್ದು. ಹಾಗಾಗಿ ಈ ಶಾಸನಕ್ಕೆ ಪ್ರಥಮ ಆದ್ಯತೆ ನೀಡಿ ‘3ಡಿ ಸ್ಕ್ಯಾನ್‌’ ಮಾಡಿ ಪ್ರತಿಕೃತಿ ಸಿದ್ಧಪಡಿಸಿದ್ದೇವೆ ಎಂದು ಮಾಹಿತಿ ನೀಡುತ್ತಾರೆ ಉದಯ ಕುಮಾರ್‌.

ಈ ಮಹತ್ವದ ಶಾಸನದ ಸಂರಕ್ಷಣೆಗೆ ಈಗಾಗಲೇ ಹೆಬ್ಬಾಳ ಗ್ರಾಮದವರೂ ಪಣತೊಟ್ಟಿದ್ದಾರೆ. ಅದಕ್ಕಾಗಿ ಯುವ ಆರ್ಕಿಟೆಕ್ಟ್‌ ಯಶಸ್ವಿನಿ ಶರ್ಮ ಉಚಿತವಾಗಿ ಗಂಗರ ಶೈಲಿಯ ಮಂಟಪದ ನೀಲಿ ನಕ್ಷೆ ಸಿದ್ಧಪಡಿಸಿಕೊಟ್ಟಿದ್ದಾರೆ. ಅದರ ನಿರ್ಮಾಣಕ್ಕೆ ಅಗತ್ಯವಿರುವ ಹಣ ಸಂಗ್ರಹಕ್ಕೆ ಈ ಕಾರ್ಯದ ಮೂಲಕ ನೆರವಾಗಬೇಕು ಎಂಬುದು ಈ ತಂಡದ ಆಶಯ. ಈ ಶಾಸನದ ಪ್ರತಿಕೃತಿಯನ್ನು ತಾಮ್ರದ ಫಲಕಗಳಲ್ಲಿ ಮುದ್ರಿಸಿ ಆಸಕ್ತರಿಗೆ ನೀಡಲು ಈ ತಂಡ ಉದ್ದೇಶಿಸಿದೆ. ಇದಕ್ಕೆ ತಲಾ ₹ 2,650 ಅನ್ನು ನಿಗದಿಪಡಿಸಿದೆ.

1023 ಶಾಸನಗಳ ಸ್ಕ್ಯಾನಿಂಗ್‌ಗೆ ಯೋಜನೆ: ಬೇಗೂರು ಸೇರಿದಂತೆ ಬೆಂಗಳೂರು ಜಿಲ್ಲಾ ವ್ಯಾಪ್ತಿಯಲ್ಲಿರುವ 1023 ಶಾಸನಗಳ ಪ್ರತಿಕೃತಿಯನ್ನೂ 3ಡಿ ಸ್ಕ್ಯಾನಿಂಗ್‌ ನೆರವಿನಿಂದ ಸಿದ್ಧಪಡಿಸಲು ಈ ತಂಡ ಯೋಜಿಸಿದೆ. ಇದಕ್ಕೆ ನಗರದ ಕೆಲವು ಎಂಜಿನಿಯರಿಂಗ್‌ ಕಾಲೇಜುಗಳು ನೆರವು ನೀಡಲು ಮುಂದೆ ಬಂದಿವೆ. ಅಲ್ಲಿನ ವಿದ್ಯಾರ್ಥಿಗಳನ್ನು ಈ ಯೋಜನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ವರ್ಷದೊಳಗೆ ಈ ಎಲ್ಲ ಶಾಸನಗಳ ಸ್ಕ್ಯಾನಿಂಗ್‌ ಮಾಡುವ ಉದ್ದೇಶವನ್ನು ಈ ತಂಡ ಹೊಂದಿದೆ.


3ಡಿ ಸ್ಕ್ಯಾನಿಂಗ್‌ ಬಳಿಕ ಹೆಬ್ಬಾಳ ಶಾಸನದ ಪ್ರತಿಕೃತಿಯನ್ನು ತಾಮ ಫಲಕದಲ್ಲಿ ತಂದಿರುವುದು

3ಡಿ ಸ್ಕ್ಯಾನಿಂಗ್‌ನ ಉಪಯೋಗಗಳು
* ಶಾಸನದ ಶಿಲ್ಪ, ಪೂರ್ಣ ಪಾಠ ಸ್ಪಷ್ಟವಾಗಿ ಗೋಚರಿಸುತ್ತದೆ. ವಿವಿಧ ಕೋನಗಳಿಂದ ಇದನ್ನು ಗಮನಿಸಬಹುದು. 
* ಲಿಪಿ, ಅಕ್ಷರಗಳ ಬೆಳವಣಿಗೆ, ಬದಲಾವಣೆಗಳನ್ನು ಸೂಕ್ಷ್ಮವಾಗಿ ಗುರುತಿಸಲು ಉಪಯುಕ್ತ.
* ಶಾಸನವನ್ನು ತಪ್ಪಿಲ್ಲದೆ, ಕರಾರುವಕ್ಕಾಗಿ ಓದಲು ಸಾಧ್ಯ. 
* ಶಾಸನದ ಸಂರಕ್ಷಣೆಯೂ ಇದರಿಂದ ಸಾಧ್ಯ. ಒಮ್ಮೆ ಸ್ಕ್ಯಾನ್‌ ಮಾಡಿದರೆ ಎಷ್ಟಾದರೂ ಪ್ರತಿಕೃತಿ ಪಡೆಯಬಹುದು. ಮೂಲ ಶಾಸನ ನಾಶವಾದರೂ ಡಿಜಿಟಲ್‌ ಪ್ರತಿ ನೆರವಿನಿಂದ ಬೇಕಾದಷ್ಟು ಪ್ರತಿಕೃತಿ ಪಡೆಯಬಹುದು.

ಶಾಸನದ ಪ್ರತಿಕೃತಿಗಾಗಿ ಸಂಪರ್ಕಿಸಿ: 9845204268/ 9448274373/ 7259138077 (ರಾತ್ರಿ 7ರಿಂದ 10ರವರೆಗೆ ಮಾತ್ರ)

********

ಕ್ರಿ.ಶ 1800ರಿಂದ ದಕ್ಷಿಣ ಭಾರತದಲ್ಲಿ ಶಾಸನ ಓದುವ ಪ್ರಕ್ರಿಯೆ ಆರಂಭವಾಯಿತು. ಶಾಸನಗಳನ್ನು ಮೊದಲು ಕಣ್ಣಲ್ಲಿ ನೋಡಿ ಕಲಾವಿದರಿಂದ ಅದರ ಪ್ರತಿರೂಪ ಬರೆಸಿ ಓದಲಾಗುತ್ತಿತ್ತು. ನಂತರ ‘ಎಸ್ಟಾಂಪೇಜ್‌’ ತೆಗೆಯುವ ವಿಧಾನ ಬಂದಿತು. ಇದು ಶತಮಾನಕ್ಕೂ ಹೆಚ್ಚು ಕಾಲದಿಂದ ಬಳಕೆಯಲ್ಲಿದೆ. 20 ವರ್ಷಗಳಿಂದೀಚೆಗೆ ಡಿಜಿಟಲ್‌ ಫೋಟೊಗ್ರಫಿಯಲ್ಲಿ ಆಗಿರುವ ಬೆಳವಣಿಗೆಯಿಂದ ಶಾಸನಗಳ ಅಧ್ಯಯನಕ್ಕೆ ಹೊಸ ರೂಪ ಸಿಕ್ಕಿದೆ. ಇದೀಗ ‘3ಡಿ ಸ್ಕ್ಯಾನಿಂಗ್‌’ ವಿಧಾನವಂತೂ ಅತ್ಯಂತ ಮಹತ್ವದ ಬೆಳವಣಿಗೆಯಾಗಿದ್ದು, ಶಾಸನಗಳ ಸಂರಕ್ಷಣೆಯ ಜತೆಗೆ ಅದನ್ನು ಖಚಿತವಾಗಿ ಓದಲು ನೆರವಾಗುತ್ತದೆ. ಅವುಗಳ ಪ್ರತಿಕೃತಿಗಳನ್ನು ಸಿದ್ಧಪಡಿಸಲು ಪೂರಕವಾಗಿದೆ.
-ಡಾ. ಎಸ್‌.ಕೆ. ಅರುಣಿ, ಪ್ರಾದೇಶಿಕ ನಿರ್ದೇಶಕ, ಐಸಿಎಚ್‌ಆರ್‌

*
3ಡಿ ಸ್ಕ್ಯಾನಿಂಗ್‌ ತಂತ್ರಜ್ಞಾನ ಬಳಕೆಗೂ ಮುನ್ನ ಎರಡು ವಿಧಾನಗಳ ಮೂಲಕ ಶಾಸನಗಳ ಸಂರಕ್ಷಣೆಗೆ ನಮ್ಮ ತಂಡ ಕಾರ್ಯ ನಿರ್ವಹಿಸಿತ್ತು. ಮೊದಲಿಗೆ RTI (Reflectance transformation imaging) ಮೂಲಕ ಬೆಳಕನ್ನು ಶಾಸನದ ವಿವಿಧ ಮೂಲೆಗಳಲ್ಲಿ ಹರಿಸಿ 200 ಫೋಟೊಗಳನ್ನು ತೆಗೆದು, ಅಕ್ಷರಗಳು ಸ್ಪಷ್ಟವಾಗಿ ಕಾಣುವಂತೆ ಮಾಡಿದೆವು. ಎರಡನೇ ವಿಧಾನವಾಗಿ ಶಾಸನದ 200ಕ್ಕೂ ಹೆಚ್ಚು ಫೋಟೊಗಳನ್ನು ವಿವಿಧ ಕೋನಗಳಿಂದ ತೆಗೆದು ವಿಶ್ಲೇಷಿಸಿದೆವು. ಇವೆರಡಕ್ಕಿಂತ ಸುಧಾರಿತ ವಿಧಾನ ‘3ಡಿ ಸ್ಕ್ಯಾನಿಂಗ್‌’. –ಪಿ.ಎಲ್‌. ಉದಯ ಕುಮಾರ್‌

*


ಹೆಬ್ಬಾಳ ಶಾಸನವನ್ನು 3ಡಿ ಸ್ಕ್ಯಾನಿಂಗ್‌ ಮಾಡುತ್ತಿರುವುದು

 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !