ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಊಟದ ಬಿಡುವಿನಲ್ಲಿ...

Last Updated 20 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

breakfast ಮತ್ತು lunch ಪದಗಳನ್ನು ತುಂಡರಿಸಿ brunch ಅನ್ನು ಸಂಶೋಧಿಸಿರುವ ನಮಗೆ ತಿಂಡಿ ಮತ್ತು ಊಟ ಎರಡರ ಸಮಯವೂ ಒಂದೇ ಆಗಿರಲಿ ಎಂಬ ಆಸೆ. ಉಪಾಹಾರವನ್ನೂ ಮತ್ತು ಮಧ್ಯಾಹ್ನದ ಭೋಜನವನ್ನೂ ಸಾವಕಾಶವಾಗಿ ಸವಿಯಲಾರದ ನಮಗೆ, ಕೆಲಸದತ್ತಲೇ ಲಕ್ಷ್ಯ. ಆದರೆ ಅದು ನಮ್ಮ ಮನವನ್ನು ಪುನಶ್ಚೇತನಗೊಳಿಸುವ ಸಮಯ. ಜಾಣ್ಮೆಯಿಂದ ಬಳಸುವುದು ಮುಖ್ಯ.

Lunch breakನಲ್ಲಿ ನಾವು ಅನುಸರಿಸಬೇಕಾದ ಸರಳ ಸಪ್ತ ಸೂತ್ರ ಇದೊ...
ಆರೋಗ್ಯಕರ ಉಪಾಹಾರ ತಪ್ಪಿಸಬಾರದು ಎಂಬುದಕ್ಕೇ ಹೆಚ್ಚು ಮಹತ್ವ ನೀಡಿ ಕೆಲವೊಮ್ಮೆ ಮಧ್ಯಾಹ್ನದ ಊಟವನ್ನು ನಿರ್ಲಕ್ಷಿಸುವುದಿದೆ. ಊಟದ ಸಮಯ ಇರುವುದು ಏನೋ ಒಂದು ತಿಂದು ಮತ್ತೆ ಕೆಲಸ ಏನಂದು ಓಡುವುದಕ್ಕಲ್ಲ. ಸಾವಕಾಶವಾಗಿ ಸವಿಯುವುದಕ್ಕಾಗಿ.

ಊಟವಂತೂ ಸರಿಯೇ, ಸರಿಯಾಗಿ ವಿರಾಮ ಸಮಯ ಬಳಸಿದರೆ ನಮ್ಮ ಸೃಜನಶೀಲತೆ ಮತ್ತು ಉತ್ಪಾದಕತೆ ಹೆಚ್ಚುತ್ತದೆ. ಒತ್ತಡ ಕಡಿಮೆ ಮಾಡಿ ಸಹಯೋಗವನ್ನು ಹೆಚ್ಚಿಸುತ್ತದೆ.

ಕೆಲಸ ಮಾಡುತ್ತಲೇ ಗಂಟೆಗಟ್ಟಲೆ ತಿನ್ನುತ್ತ ಕೂರುವ ಬದಲು ಈ ವಿರಾಮದ ಅನುಕೂಲ ನೋಡಿ, ಇದರಿಂದ ಲಾಭವೇ ಹೆಚ್ಚು. ಎದ್ದು ಸ್ವಲ್ಪ ಓಡಾಡಿ, ಹತ್ತು ನಿಮಿಷದ ಸಣ್ಣ ನಿದ್ದೆ, ಪ್ರಿಯರಿಗೊಂದು ಫೋನ್‌ ಕಾಲ್‌...ಇಂತಹ ಹಲವಾರು ದಾರಿಗಳು ಮಿದುಳಿಗೆ ಶಕ್ತಿದುಂಬಲು...ಮುಂದಿನ ದಿನವೆಲ್ಲ ಚೆನ್ನಾಗಿ ಕೆಲಸ ಮಾಡುವಂತೆ ಮಾಡಲು.

ವಿರಾಮ ಮುಖ್ಯ:

ವಿರಾಮ ತೆಗೆದುಕೊಳ್ಳುವುದರಿಂದ ನಮ್ಮ ಉದ್ದೇಶಗಳಿಂದ ಗಮನ ಬೇರೆಡೆ ಹೋಗದಂತೆ ಉತ್ತೇಜಿಸಿದಂತಾಗುತ್ತದೆ. ಬದಲಾಗಿ ದೀರ್ಘ ಸಮಯ ವಿರಮಿಸದೆ ಕೆಲಸ ಮಾಡುವಾಗ ನಮ್ಮ ಪರ್‌ಫಾರ್ಮನ್ಸ್ ಮತ್ತು ಗಮನ ಕಡಿಮೆ ಆಗುತ್ತದೆ. ಚಿಕ್ಕ ವಿರಾಮ ಕೂಡ ಏಕಾಗ್ರತೆಯ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸುತ್ತದೆ. ಯಶಸ್ವಿ ಉದ್ಯೋಗಿಗಳು 52 ನಿಮಿಷ ಕೆಲಸದಲ್ಲಿ ನಿರತರಾದರೆ, 17 ನಿಮಿಷ ವಿರಮಿಸುತ್ತಾರಂತೆ.

ವಿರಾಮ ಸಮಯ:

ಉತ್ಪಾದಕತೆ ಹೆಚ್ಚಿಸುತ್ತದೆ

ಸೃಜನಾತ್ಮಕತೆ ಹೆಚ್ಚಿಸುತ್ತದೆ

ಒತ್ತಡ ಕಡಿಮೆಗೊಳಿಸುತ್ತದೆ

ಸಹಯೋಗವನ್ನು ಸುಧಾರಿಸುತ್ತದೆ

ಜಾಣ್ಮೆಯಿಂದ ಉಪಯೋಗಿಸಿ:

ವಿರಾಮ ಕಾಲವನ್ನೂ ಯೋಜಿಸಿಟ್ಟುಕೊಳ್ಳಿ. ಸಮಯವೆಂಬುದು ನವೀಕರಣಗೊಳಿಸಲಾಗದ ಸಂಪನ್ಮೂಲ.

ಕಂಪ್ಯೂಟರ್ ಪರದೆಯನ್ನೇ ನೋಡುತ್ತ ವಿರಾಮ ಸಮಯ ಕಳೆಯದಿರಿ.

ನಿಜವಾದ ವಿರಾಮವನ್ನೇ ತೆಗೆದುಕೊಳ್ಳಿ. ಟೇಬಲ್‌ ಬಳಿಯೇ ಕೂತು ಕೆಲಸದ ಮಧ್ಯೆ ಆಹಾರ ಅಗಿಯಲೆಂದು 60 ಸೆಕೆಂಡುಗಳನ್ನು ವ್ಯಯಿಸುವುದೇನು ವಿರಾಮದ ಲೆಕ್ಕಕ್ಕೆ ಬರುವುದಿಲ್ಲ!

1. ಊಟದಲ್ಲಿ ಪೌಷ್ಟಿಕ ಆಹಾರಗಳಾದ ನಟ್ಸ್, ಸೇಬು, ಬೆಣ್ಣೆ, ಮೀನು, ಮೊಟ್ಟೆ ಇದ್ದರೆ ದೇಹಕ್ಕೆ ಅಗತ್ಯ ಗ್ಲುಕೋಸ್ ಸೇರುವುದಕ್ಕೆ ಇರುವ ಉತ್ತಮ ಮಾರ್ಗ. ಊಟ ಮಾಡುವುದನ್ನು ಆನಂದಿಸಿ.

2. ದೈಹಿಕ ಚಟುವಟಿಕೆ ಮಿದುಳಿನಲ್ಲಿನ ಅನೇಕ ರಾಸಾಯನಿಕಗಳನ್ನು ಉತ್ತೇಜಿಸುತ್ತದೆ. ಇದರಿಂದ ಸಂತೋಷ ನಿರಾಳತೆ ಎರಡೂ ಒದಗುತ್ತದೆ.

ಊಟದ ನಂತರ ಒಂದು ಪುಟ್ಟ ವಾಕಿಂಗ್ ಮಾಡಿಬಿಡಿ.

3. ಒಂದು ಕೋಳಿ ನಿದ್ರೆ ಬಹಳ ಮುಖ್ಯ. ಇದರಿಂದಲೂ ಒತ್ತಡ ಕಡಿಮೆಯಾಗಿ ತಾಜಾ ಆರಂಭ ಒದಗುತ್ತದೆ. ಮಧ್ಯಾಹ್ನದ ಕಿರು ನಿದ್ರೆ ಮಾಡುವವರು ಭಾವನಾತ್ಮಕವಾಗಿ ಸಮತೋಲನ ಮತ್ತು ಸುಧಾರಿಸಿದ ಕಾರ್ಯಕ್ಷಮತೆ ತೋರಲು ಸಾಧ್ಯ. ಪೈಲಟ್‌ಗಳ ಮೇಲೆ ನಡೆದ ಪ್ರಯೋಗವೊಂದು ಸಾಬೀತು ಪಡಿಸಿದ್ದೇನೆಂದರೆ 26 ನಿಮಿಷದ ಕಿರು ನಿದ್ರೆ ಅವರ ಕಾರ್ಯಕ್ಷಮತೆಯನ್ನು ಶೇ 34ರಷ್ಟು ಮತ್ತು ಜಾಗೃತಿಯನ್ನು ಶೇ 54ರಷ್ಟು ಹೆಚ್ಚಿಸಿತು.

4. ಆತ್ಮೀಯರೊಡನೆ ಬೆರೆತು ಮಾತನಾಡಿ
ವಿರಾಮದಲ್ಲಿ ಕೇವಲ ಊಟ ಮಾಡುವುದಲ್ಲದೆ, ಸ್ವಲ್ಪ ಸಮಯವನ್ನು ನಿಮ್ಮ ಸಹೋದ್ಯೋಗಿಗಳ ಜೊತೆ ಮಾತಿಗೆ ಮೀಸಲಿಡಿ. ತಮ್ಮ ಸಹೋದ್ಯೋಗಿಗಳ ಜೊತೆ ಹೆಚ್ಚು ಬೆರೆಯುವವರು ಸದಾ ಕೆಲಸದಲ್ಲಿ ಮುಳುಗಿರುವವರಿಗಿಂತ ಖುಷಿಯಾಗಿಯೂ ಅಷ್ಟೇ ಕ್ಷಮತೆಯನ್ನೂ ಹೊಂದಿರಬಲ್ಲರು.

5. ಕೆಲಸದ ಏಕತಾನತೆ ಮುರಿಯರಿ
ದಿನವೂ ಅದದೇ ಸ್ನೇಹಿತರೊಂದಿಗೆ ಊಟಕ್ಕೆ ಹೋಗಬೇಡಿ. ಯಾವಾಗಲೂ ಅದೇ ರೆಸ್ಟೋರೆಂಟ್, ಖಾನಾವಳಿ, ಕ್ಯಾಂಟೀನ್ನ ಅದೇ ಜಾಗದಲ್ಲಿ ಕೂರಬೇಕು ಏಕೆ? ತಲೆಯಲ್ಲಿ ಸ್ವಲ್ಪ ಸ್ಪಷ್ಟತೆ ನುಸುಳಲು ಆಗಾಗ ಬೇಡವಾದುದನ್ನು ಖಾಲಿ ಮಾಡುತ್ತಿರಬೇಕು. ಇದರಿಂದ ಚೈತನ್ಯವೂ ಹೆಚ್ಚುತ್ತದೆ. ದೇಹ, ಮನಸ್ಸು ಆಹ್ಲಾದ ಅನುಭವಿಸುತ್ತದೆ.

6. ವಿರಾಮದ ಸಮಯವಾದರೂ ನಿಮ್ಮ ಕೆಲಸದ ಸ್ಥಳದಲ್ಲಿ ನಿಮ್ಮ ಅಗತ್ಯ ಇದ್ದಾಗ ಲಭ್ಯ ಇರಿ. ಯಾರೂ ಮಿಸ್‌ ಮಾಡಿಕೊಳ್ಳದಂತೆ ತುರ್ತು ಕೆಲಸವೇನಾದರೂ ಇದ್ದರೆ ಸಂಪರ್ಕಿಸಲು ನಂಬರ್ ಇರಿಸಿರಿ. ಇದು ಒತ್ತಡವನ್ನೇನೂ ತರುವುದಿಲ್ಲ. ಬದಲಾಗಿ ನಿರಾಳವಾಗಿ ಲಂಚ್‌ ಸಮಯದಲ್ಲೂ ಚಡಪಡಿಸದೆ ಇಲ್ಲದೆ ಇರಬಹುದು. ಆಫೀಸ್‌ ಗ್ರೂಪಿನ ಮೆಸೇಜ್‌ ಅಥವಾ ಮೇಲ್ ಚೆಕ್‌ ಮಾಡದಂತೆ ಇರಲು ಸಹಾಯ ಮಾಡುತ್ತದೆ.

7. ಒಂದೊಳ್ಳೆ ಪುಸ್ತಕ ಸಂಗಾತಿ ಆಗಲಿ
ಹೊರ ಜಗತ್ತನ್ನೇ ಮರೆಸುವ ಪುಸ್ತಕದಲ್ಲಿ 10-15 ನಿಮಿಷ ಮಗ್ನರಾಗುವುದರಿಂದ ಭಾಷಾಜ್ಞಾನ ಮತ್ತು ಏಕಾಗ್ರತೆ ಹೆಚ್ಚುತ್ತದೆ. ಸಂಶೋಧಕರ ಪ್ರಕಾರ ವಿದ್ಯಾರ್ಥಿಗಳು 15 ನಿಮಿಷ ಪುಸ್ತಕ ಓದುವುದರಿಂದ ವರ್ಷದಲ್ಲಿ ಮಿಲಿಯನ್‌ಗಟ್ಟಲೆ ಹೊಸ ಪದಗಳನ್ನೇ ಕಲಿತುಬಿಡಬಹುದಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT