ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಭಾರತದ ದೃಶ್ಯಕಾವ್ಯ: ಚಂದ್ರನಾಥ ಆಚಾರ್ಯ ಅವರ ಕಲಾಕೃತಿಗಳು

Last Updated 18 ಜೂನ್ 2022, 19:30 IST
ಅಕ್ಷರ ಗಾತ್ರ

ಮ ಹಾಭಾರತದ ಕಥೆ ನಮ್ಮಲ್ಲಿ ಯಾರಿಗೆ ತಾನೆ ಗೊತ್ತಿಲ್ಲ! ಕಥೆಗಳ ಮೂಲಕವೋ, ಓದಿನ ಮೂಲಕವೋ, ನಮ್ಮ ಊರುಗಳ ಸ್ಥಳಪುರಾಣಗಳ ಮೂಲಕವೋ – ಅಂತೂ ಕಥೆಯ ಹಂದರವನ್ನು ದಕ್ಕಿಸಿಕೊಂಡಿರುತ್ತೇವೆ; ಜೊತೆಗೆ ನಮ್ಮದೇ ಕಲ್ಪನೆಗಳನ್ನು ಸೇರಿಸಿಕೊಂಡು ಮಹಾಭಾರತವನ್ನು ಭಾವಭಿತ್ತಿಯಲ್ಲಿ ಚಿತ್ರಿಸಿಕೊಳ್ಳುತ್ತಲೇ ಇರುತ್ತೇವೆ. ಹೀಗೆ ನಮ್ಮ ಕಾಲದಲ್ಲಿ ನಮ್ಮ ಪುರಾಣಲೋಕದ ಕಲ್ಪನೆಗಳನ್ನು ಅರಳಿಸುವ ಕೆಲಸವನ್ನು ಹಲವು ಪತ್ರಿಕೆಗಳೂ ಮಾಡಿವೆ; ಅವುಗಳ ಮೂಲಕ ಹಲವರು ಕಲಾವಿದರೂ ಮಾಡಿದ್ದಾರೆ. ‘ಚಂದಮಾಮ’ದಂಥವುಗಳ ಜೊತೆಗೆ ‘ಸುಧಾ’ದಂಥ ಪತ್ರಿಕೆಗಳು ಕಲೆಯನ್ನು ಜನರಲ್ಲಿಗೇ ಒಯ್ಯುವಂಥ ಕೆಲಸನ್ನು ಅನನ್ಯವಾಗಿ ಮಾಡಿವೆ; ಈ ಪತ್ರಿಕೆಗಳೊಂದಿಗೆ ಗುರುತಿಸಿಕೊಂಡಿದ್ದ ಕಲಾವಿದರ ಕಲಾಕೌಶಲವು ನಮ್ಮ ಪುರಾಣಲೋಕವನ್ನು ವಿಸ್ತರಿಸಿದೆ.

ಎಂ.ಟಿ.ವಿ. ಆಚಾರ್ಯರಂಥ ಹಲವರು ‘ಇಲಸ್ಟ್ರೇಷನ್‌’ ಪ್ರಕಾರದ ಮೂಲಕ ಭಾರತೀಯ ಚಿತ್ರಕಲೆಗೆ ಕೊಟ್ಟ ಕೊಡುಗೆ ಅಪೂರ್ವವಾದುದು. ಇದೇ ಸಾಲಿಗೆ ಸೇರುತ್ತಾರೆ ಚಂದ್ರನಾಥ ಆಚಾರ್ಯ; ಅವರು ‘ಸುಧಾ’ ವಾರ‍ಪತ್ರಿಕೆಗಾಗಿ ರಚಿಸಿದ್ದ ಮಹಾಭಾರತ ಸರಣಿಯ ಚಿತ್ರಗಳು ಇದೀಗ ಬೆಂಗಳೂರಿನ ‘ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌’ನ ಆರ್ಟ್‌ ಗ್ಯಾಲರಿಯಲ್ಲಿ ಪ್ರದರ್ಶನಗೊಳ್ಳುತ್ತಿವೆ; ಸಾವಿರಾರು ಸಹೃದಯರನ್ನು ಆಕರ್ಷಿಸುತ್ತಿವೆ.

ದುಶ್ಯಂತ ಮತ್ತು ಶಕುಂತಲೆ
ದುಶ್ಯಂತ ಮತ್ತು ಶಕುಂತಲೆ

ಚಂದ್ರನಾಥ ಆಚಾರ್ಯ ನಮ್ಮ ದೇಶದ ಶ್ರೇಷ್ಠ ಚಿತ್ರಕಲಾವಿದರರಲ್ಲಿ ಒಬ್ಬರು; ಪ್ರಾಚೀನ–ನವೀನ ಮತ್ತುಪೌರ್ವಾತ್ಯ–ಪಾಶ್ಚಾತ್ಯ ಕಲಾತತ್ತ್ವಗಳ ಸಿದ್ಧಿಯನ್ನು ಅವರಲ್ಲಿ ಕಾಣಬಹುದು. ಅವರ ಜಲವರ್ಣಚಿತ್ರಗಳಂತೂ ಅತ್ಯಂತ ಆಕರ್ಷಣೀಯ. ಇದೀಗ ಅವರ ಮಹಾಭಾರತ ಸರಣಿಯ ಚಿತ್ರಗಳು ಒಂದೆಡೆ ಕಾಣುವ ಅವಕಾಶ ಒದಗಿದೆ. ಆ ಅದ್ಭುತ ಕಲಾಪ್ರಪಂಚದಲ್ಲಿ ವಿಹರಿಸಿ, ನನ್ನ ಭಾವಪ್ರಪಂಚ ಸುಖಿಸಿದೆ, ಸಂತೋಷಿಸಿದೆ, ಆನಂದಿಸಿ ವಿಸ್ತಾರವಾಗಿದೆ; ಅಲ್ಲಿ ನನಗೆ ಒದಗಿದೆ ಕೆಲವೊಂದು ರಸಕ್ಷಣಗಳನ್ನು ಇಲ್ಲಿ ಹಂಚಿಕೊಳ್ಳುವ ಉತ್ಸಾಹ ನನ್ನದು; ಹೀಗೆಂದು ಇದೇನೂ ಕಲಾವಿಮರ್ಶೆಯಲ್ಲ, ಕಲಾಸ್ಪಂದನವಷ್ಟೆ.

ಕಲಾಭವನವನ್ನು ಪ್ರವೇಶಿಸುತ್ತಿದ್ದಂತೆ ನಮ್ಮನ್ನು ಮೂರು ಚಿತ್ರಗಳು ಎದುರುಗೊಳ್ಳುತ್ತವೆ; ಇವು ಒಟ್ಟು ಮಹಾಭಾರತದ, ಅಷ್ಟೇಕೆ ನಮ್ಮ ಜೀವನದ ಗೊತ್ತು–ಗುರಿಗಳ ಮೀಮಾಂಸೆಯನ್ನೇ ಸಾರುವಂತಿವೆ; ‘ದುಷ್ಯಂತ–ಶಕುಂತಲೆ’, ‘ಪರಾಶರ–ಸತ್ಯವತಿ’ ಮತ್ತು ‘ಯಯಾತಿ–ದೇವಯಾನಿ’. ಈ ಮೂರು ಕೂಡ ಸ್ತ್ರೀ–ಪುರುಷ ಸಮಾಗಮವನ್ನೇ ಪ್ರತಿನಿಧಿಸುವಂಥವು. ಆದರೆ ಈ ಒಂದೊಂದು ಕಥನಕ್ಕೂ ಎಷ್ಟೊಂದು ಆಯಾಮಗಳು! ಕಲಾನಿರ್ಮಾಣದ ಮೂಲಕವೇ ಕಥಾನಕಗಳ ಮತ್ತು ಪಾತ್ರಗಳ ಸ್ವಭಾವವನ್ನೂ ಮೌಲ್ಯವನ್ನೂ ದಿಕ್ಕನ್ನೂ ಸೂಚಿಸುವ ಅಪೂರ್ವ ಸಿದ್ಧಿಯನ್ನು ದಕ್ಕಿಸಿಕೊಂಡಿದ್ದಾರೆ, ಚಂದ್ರನಾಥ ಆಚಾರ್ಯ. ಕೆಲವೊಂದು ಸೂಕ್ಷ್ಮಗಳನ್ನಷ್ಟೆ ಇಲ್ಲಿ ಮೆಲುಕು ಹಾಕಬಹುದು. ಶಕುಂತಲೆಯ ವಸ್ತ್ರಗಳ ಪಾರದರ್ಶಕತೆ ಸಹಜವಾಗಿಯೇ ನಮ್ಮನ್ನು ಸೆಳೆಯುತ್ತವೆಯೆನ್ನಿ! ಆದರೆ ಅವಳ ವ್ಯಕ್ತಿತ್ವದ ಪಾರದರ್ಶಕತೆ ಮತ್ತು ಪ್ರಾಂಜಲತೆಗಳನ್ನು ಮುಖಭಾವದಲ್ಲಿ ಆಚಾರ್ಯರು ಅಪೂರ್ವವಾಗಿ ಕಂಡರಿಸಿದ್ದಾರೆ. ಸ್ತ್ರೀಸಾಮಿಪ್ಯದಲ್ಲಿದ್ದಾಗಲೂ ಮುಕ್ಕಾಗದ ಪರಾಶರರ ದೇಹದ ಭಂಗಿ ಅವರ ತಪಸ್ಸಿನ ಶಕ್ತಿಯ ಸ್ವರೂಪವಾಗಿ ತೋರುತ್ತದೆ. ದೇವಯಾನಿಗೆ ಆಸರೆಯಾಗಿರುವ ಯಯಾತಿ ತಾನು ಬಳ್ಳಿಯ ಆಸರೆಯಲ್ಲಿಯೇ ಇದ್ದಾನೆ; ಅವನ ಸುಖ ಇನ್ನೊಬ್ಬರ ಆಶ್ರಯವನ್ನೇ ನೆಚ್ಚಿಕೊಂಡಿತ್ತು ಎಂಬುದರ ಧ್ವನಿಯನ್ನು ಈ ಚಿತ್ರದಲ್ಲಿ ತೋರುವುದು ಆಕಸ್ಮಿಕ ವಿವರವೇನಲ್ಲ.

ಧೃಷ್ಟದ್ಯಮ್ನನು ದ್ರೌಪದಿಯನ್ನು ಸ್ವಯಂವರ ಮಂಟಪಕ್ಕೆ ಕರೆತರುತ್ತಿರುವುದು
ಧೃಷ್ಟದ್ಯಮ್ನನು ದ್ರೌಪದಿಯನ್ನು ಸ್ವಯಂವರ ಮಂಟಪಕ್ಕೆ ಕರೆತರುತ್ತಿರುವುದು

ಕಲಾನಿರ್ಮಾಣದಲ್ಲಿ ಕಲಾವಿದರಿಗೆ ಆವಶ್ಯಕವಾದ ಭಿತ್ತಿ ಎಂದರೆ ‘ಕ್ಯಾನ್ವಾಸ್‌’. ಇದು ಕಾಗದ ಮಾತ್ರವೇ ಅಲ್ಲ, ಲೋಕವೇ ಕಲಾವಿದನಿಗೆ ದಿಟವಾದ ಕ್ಯಾನ್ವಾಸ್‌ ಆಗಿ ಒದಗುತ್ತದೆ. ಲೋಕವನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿ, ಅದರ ಜೀವರೇಖೆಗಳನ್ನು ಕಲಾವಿದ ಕಾಗದದ ಮೂಲಕ ಅಭಿವ್ಯಕ್ತಿಸುತ್ತಾನೆ. ಈ ದೃಷ್ಟಿಯಿಂದಲೂ ಆಚಾರ್ಯರ ಲೋಕಸಂಗ್ರಹವೂ ವಿಶಿಷ್ಟ; ಅವರು ಸಂಪಾದಿಸಿಕೊಂಡಿರುವ ಕಲೆಯ ‘ಟೆಕ್ನಿಕ್‌’ಗಳೂ ವಿಶೇಷ. ಅವರು ಬಳಸುವ ಒಂದೊಂದು ಕಾಗದದ ಮಾದರಿಯ ಸ್ವಭಾವಗಳನ್ನು ವ್ಯಕ್ತಿಗಳ ಸ್ವಭಾವದಂತೆಯೇ, ದೀರ್ಘಕಾಲದ ಒಡನಾಟದ ದೆಸೆಯಿಂದ ಆಳವಾಗಿ ಮನದಟ್ಟು ಮಾಡಿಕೊಂಡಿದ್ದಾರೆ; ಹೀಗಾಗಿಯೇ ಅವರ ಕಲಾತಂತ್ರಗಾರಿಕೆ ನವನವೋನ್ಮೇಷಶಾಲಿನಿಯಾಗಿ ಹೊಳೆಯುತ್ತಿರುವುದು. ಉದಾಹರಣೆಗೆ ನೋಡಿ: ನವಜಾತ ಕೃಷ್ಣನನ್ನು ವಸುದೇವನು ಗೋಕುಲಕ್ಕೆ ಒಯ್ಯುತ್ತಿರುವ ಚಿತ್ರವೊಂದಿದೆ. ಇದಕ್ಕಾಗಿ ಆಚಾರ್ಯರು ಬಳಸಿರುವ ಕಾಗದ ‘ಡೆಕಾಪೋ’. ಅದರ ಸ್ವಭಾವವನ್ನು ಚೆನ್ನಾಗಿ ಹೃದ್ಗತ ಮಾಡಿಕೊಂಡು, ‘ಕುಂಚವಿಟ್ಟಳುಪದೊಂದ ಅಗ್ಗಳಿಕೆ‘ಯಂತೆ ಅವರು ಸಮುದ್ರದ ಅಲೆಗಳನ್ನು ಮೂಡಿಸಿರುವ ಪರಿ ಅಪೂರ್ವವಾಗಿದೆ. ಜಲವರ್ಣಚಿತ್ರಗಳ ಅಂತರಂಗದರ್ಪಣಕ್ಕೆ ಇಂಥ ರಸಸನ್ನಿವೇಶಗಳೇ ರಸಕ್ಷಣಗಳಲ್ಲವೆ? ಕಲಾವಿದನ ಲೋಕಸಹಾನುಭೂತಿಯ ಜೊತೆಗೆ ಅವನ ವ್ಯಕ್ತಿತ್ವದ ಹೃದಯದರ್ಶನಕ್ಕೂ ಅವನ ಕಲಾಕೃತಿಗಳೇ ಸಾಕ್ಷಿಯಾಗಿ ನಿಂತಿರುತ್ತವೆ. ಆಚಾರ್ಯರು ತಮ್ಮ

ಚಂದ್ರನಾಥ ಆಚಾರ್ಯ
ಚಂದ್ರನಾಥ ಆಚಾರ್ಯ

ಕಲಾಕೃತಿಗಳಲ್ಲಿ ಸಹಿಯನ್ನು ಬಳಸುವ ವಿಧಾನದಲ್ಲಿ ಅವರ ಕಲಾದರ್ಶನವೂ ವ್ಯಕ್ತಿತ್ವದ ಪಾಕವೂ ಕಾಣುತ್ತದೆ. ಚಿತ್ರದಿಂದ ಪ್ರತ್ಯೇಕವಾಗಿಯೋ ಅಥವಾ ಎದ್ದುಕಾಣುವಂತೆಯೋ ಅವರ ಸಹಿ ಇರುವುದಿಲ್ಲ; ಚಿತ್ರದ ಸೌಂದರ್ಯಕ್ಕೆ ‘ಕಲೆ’ಯಾಗದಂತೆ, ಸಹಜವಾಗಿ ಕಲೆಯ ಭಾಗವಾಗಿಯೇ ಅದು ಸೇರಿಕೊಂಡಂತೆ ಇರುತ್ತದೆ. ಆಚಾರ್ಯರು ನೇರವಾಗಿ ಬಿಳಿಬಣ್ಣವನ್ನು ತಮ್ಮ ಚಿತ್ರರಚನೆಯಲ್ಲಿ ಬಳಸಿಕೊಳ್ಳುವುದು ವಿರಳ; ಕ್ಯಾನ್ವಾಸಿನ ಮೂಲವರ್ಣವನ್ನೇ ಚಿತ್ರದ ಭಾಗವಾಗಿ ಉಳಿಸಿಕೊಳ್ಳುತ್ತಾರೆ; ಲೋಕವನ್ನೂ ಕಲೆಯನ್ನೂ ಜೀವನವನ್ನೂ ಹೀಗೆ ಒಂದಾಗಿ ಬೆಸೆಯುವ ಮಹಾತಂತ್ರ ಅವರ ಕಲಾಕೌಶಲದ ಮಹಾದರ್ಶನವೇ ಹೌದು. ಈ ಕಲಾಯಾತ್ರೆ ಇದೇ 23ರವರೆಗೂ ಇರುತ್ತದೆ. ನೀವೂ ಒಮ್ಮೆ ಮಹಾಭಾರತದ ಕಲಾನುಭವದಲ್ಲಿ ವಿಹರಿಸಿ ಬನ್ನಿ.

ನವಜಾತ ಕೃಷ್ಣನನ್ನು ವಸುದೇವ ಗೋಕುಲಕ್ಕೆ ಒಯ್ಯುತ್ತಿರುವುದು
ನವಜಾತ ಕೃಷ್ಣನನ್ನು ವಸುದೇವ ಗೋಕುಲಕ್ಕೆ ಒಯ್ಯುತ್ತಿರುವುದು
ಕರ್ಣನನ್ನು ಪಡೆದ ಬಳಿಕ ಚಕಿತಳಾಗಿ ನೋಡುತ್ತಿರುವ ಕುಂತಿ
ಕರ್ಣನನ್ನು ಪಡೆದ ಬಳಿಕ ಚಕಿತಳಾಗಿ ನೋಡುತ್ತಿರುವ ಕುಂತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT