ಮರೆತುಹೋದ ಮಹನೀಯರು

ಗುರುವಾರ , ಜೂನ್ 27, 2019
23 °C

ಮರೆತುಹೋದ ಮಹನೀಯರು

Published:
Updated:

ಜ್ಯೋತಿಷ ಎಂಬುದು ಕಬ್ಬಿಣದ ಕಡಲೆ. ಆದ್ದರಿಂದಲೇ ಅದು ಕೆಲವರಿಗೆ ಮಾತ್ರ ನಿಲುಕುವಂತಿತ್ತು. ಈಗಲೂ ಅಷ್ಟೇ. ಹಿಂದೆಯೂ ಅಷ್ಟೇ. ಒಬ್ಬನೇ ತಂದೆಯ ಐವರು ಮಕ್ಕಳಲ್ಲಿ ಬಹುಶಃ ಇಬ್ಬರಿಗೆ ಮಾತ್ರ ಅದರ ಪೂರ್ಣ ಪರಿಚಯ ಆಗಿರುತ್ತಿತ್ತೋ ಏನೋ. ಯಾರೊಬ್ಬರಿಗೂ ಅದು ತಿಳಿಯದಿದ್ದಲ್ಲಿ ಅಥವಾ ವಂಶಪಾರಂಪರ್ಯವಾಗಿ ಅದು ಹಸ್ತಗತವಾಗಿರದಿದ್ದಲ್ಲಿ ಅದು ನಶಿಸಿದ ಹಾಗೆಯೇ ಎನ್ನಬಹುದು. ಹಾಗಾಗದಿರಲಿ ಎಂದು ಜ್ಯೋತಿಷಿಗಳು ತಮ್ಮ ಲೆಕ್ಕದ ವಿಧಾನಗಳನ್ನು ಸರಳಗೊಳಿಸುವ ಪ್ರಯತ್ನವನ್ನು ಮುಂದುವರೆಸುತ್ತಲೇ ಇದ್ದರು. ಕೆಲವು ಹಸ್ತಪ್ರತಿಗಳು ಉಳಿದುಕೊಂಡವು. ಕೆಲವು ಅಳಿದುಹೋದವು. ಕೆಲವು ವಿದ್ವಾಂಸರ ಹೆಸರುಗಳು ಶಾಶ್ವತವಾಗಿ ಅಳಿಸಿಹೋದವು.

ಅದೃಷ್ಟವಶಾತ್ ಕೆಲವು ಹೆಸರುಗಳು, ಗ್ರಂಥಗಳು ಉಳಿದುಕೊಂಡಿವೆ. ಜತನವಾಗಿ ಕಾಪಾಡಿಕೊಂಡಿದ್ದ ತಾಳೆಗರಿಯ ಪುಟಗಳು ಮತ್ತೆ ಜೀವ ಪಡೆಯುತ್ತಿವೆ. ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿರುವ ಇಂತಹ ಒಂದು ದೊಡ್ಡ ಕ್ರಾಂತಿಯ ಫಲವಾಗಿ ಅನೇಕ ಸಂಘ ಸಂಸ್ಥೆಗಳು ತಮ್ಮಲ್ಲಿಯ ಅಮೂಲ್ಯ ಗ್ರಂಥಭಂಡಾರಗಳನ್ನು ಜನಸಾಮಾನ್ಯರಿಗೆ ನಿಲುಕುವಂತೆ ಪ್ರಕಟಿಸುತ್ತಿವೆ.

ಶೃಂಗೇರಿಯ ಕುಲಪತಿ ಶಂಕರನಾರಾಯಣ ಜೋಯಿಸರ (1903-98) ಹೆಸರು ಸಂಸ್ಕೃತ ವಿದ್ವಾಂಸರಿಗೆ ಪರಿಚಿತವಾದದ್ದು. ಮೈಸೂರು ಮಹಾರಾಜ ಕಾಲೇಜಿನಲ್ಲಿ ಶಿಕ್ಷಣ ಪಡೆದ ಅವರು ಶೃಂಗೇರಿಯಲ್ಲಿ ಆಸ್ಥಾನ ಜ್ಯೋತಿಷ ವಿದ್ವಾಂಸರಾಗಿದ್ದರು. ಅವರ ವಿದ್ವತ್ ಹಾಗೂ ಸೇವೆಯನ್ನು ಗುರುತಿಸಿ ಶ್ರೀಮಠದ ಶಂಕರಾಚಾರ್ಯರು ‘ಕುಲಪತಿ’ ಎಂಬ ಬಿರುದನ್ನು ಕೊಟ್ಟು ಗೌರವಿಸಿದ್ದರು. ಸದ್ವಿದ್ಯಾ ಸಂಜೀವಿನಿ ಪಾಠಶಾಲೆಯಲ್ಲಿ ಶಿಕ್ಷಕರಾಗಿ 40 ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದರು. ಆ ಸಂಸ್ಥೆಯ ಮುಖ್ಯಸ್ಥರಾಗಿಯೂ ಅದನ್ನು ಮುನ್ನಡೆಸಿದರು. ಅವರ ಬಳಿ ಇದ್ದ ತಾಳೆಗರಿಗಳ ಕಡತ ಅವರ ಮೊಮ್ಮೊಗನನ್ನು ಆಕರ್ಷಿಸಿತು. ಕುತೂಹಲದಿಂದ ಪುಟಗಳನ್ನು ತಿರುವಿ ಹಾಕಿದ ಸೀತಾರಾಮ್ ಅವರಿಗೆ ಅದರಲ್ಲಿ ಅಡಕವಾಗಿರುವ ವಿಷಯ ಏನು ಎಂದೇ ತಿಳಿಯದಂತಾಯಿತು. ಏಕೆಂದರೆ ಅದು ಕನ್ನಡವೂ ಅಲ್ಲ; ಸಂಸ್ಕೃತವೂ ಅಲ್ಲ. ಹಳೆಯ ತಾಳೆಗರಿಗಳನ್ನು ಓದುವ ಸಾಮರ್ಥ್ಯ ಬೆಳೆಸಿಕೊಂಡಿದ್ದ ಹಿರಿಯರತ್ತ ಧಾವಿಸಿದರು. ಕೆಳದಿಯ ಗುಂಡಾ ಜೋಯಿಸರು ಅದರು ನಂದಿನಾಗರಿ ಎಂದು ಗುರುತಿಸಿಕೊಟ್ಟರು. ಈ ಲಿಪಿ ಹಳೆಯ ಮೈಸೂರು ಪ್ರಾಂತದಲ್ಲಿ ಮತ್ತು ಇಂದಿನ ತಮಿಳು ನಾಡಿನಲ್ಲಿ ಸುಮಾರು 13ರಿಂದ 16ನೆಯ ಶತಮಾನಗಳಲ್ಲಿ ಪ್ರಚಲಿತವಾಗಿತ್ತು. ಸೀತಾರಾಂ ಅವರು ಕಷ್ಟಪಟ್ಟು ಆ ಲಿಪಿಯನ್ನು ಓದಲು ಕಲಿತುಕೊಂಡರು. ಸಾಕಷ್ಟು ಸ್ಫುಟವಾಗಿಯೇ ಉಳಿದಿದ್ದ ತಾಳೆಗರಿಯನ್ನು ಓದಿದರು. ಅವರಿಗೊಂದು ಆಶ್ಚರ್ಯ ಕಾದಿತ್ತು. ಅದು ಕನ್ನಡದಲ್ಲಿ ಬರೆದ ಜ್ಯೋತಿಷ್ಯದ ಗ್ರಂಥವಾಗಿತ್ತು. ‘ಗಣಿತಗನ್ನಡಿ’ ಎಂದದರ ಹೆಸರು. ಉಳಿದ ತಾಳೆಗರಿಗಳನ್ನೂ ಬಿಡಿಸಿ ಓದಿದರು. ಐದು ಮಾತ್ರ ಜ್ಯೋತಿಷ್ಯದ ಗ್ರಂಥಗಳು - ಸಂಸ್ಕೃತದಲ್ಲಿ ರಚಿತವಾಗಿದ್ದವು. ಒಂದೊಂದನ್ನೂ ಕಣ್ಣಲ್ಲಿ ಕಣ್ಣಿಟ್ಟು ಓದಿ ಬರೆದಿಟ್ಟುಕೊಂಡರು. ಹಲವಾರು ವರ್ಷಗಳ ಪರಿಶ್ರಮದ ನಂತರ ಓದಲು ಸಾಧ್ಯವಾಯಿತು. ಅದನ್ನು ಕಂಪ್ಯೂಟರ್‌ನಲ್ಲಿ ಯೂನಿಕೋಡ್‍ನಲ್ಲಿ ತಾವೇ ಬರೆದರು. ಅದ್ಭುತ! ಈಗದು ಎಲ್ಲರಿಗೂ ಓದಲು ಸುಲಭವಾಯಿತು.

ಈಗ ಅದರ ಕರ್ತೃ ಯಾರು, ವಿಷಯ ಏನು ಎಂದು ತಿಳಿಯುವುದು ಮುಂದಿನ ಕೆಲಸ. ಕರ್ತೃವಿನ ಹೆಸರು ಕೂಡ ಶಂಕರನಾರಾಯಣ ಜೋಯಿಸ ಎಂದೇ ಇತ್ತು. (ಸೀತಾರಾಂ ಅವರ ಅಜ್ಜನ ಹೆಸರೂ ಅದೇ) ಅವರ ತಂದೆಯ ಹೆಸರು ದೇಮಣ ಜೋಯಿಸ. ಇಬ್ಬರೂ ಉದ್ದಾಮ ಪಂಡಿತರು. ಗ್ರಹಣ ಮುಕುರ ಎಂಬ (ತಾಳೆಗರಿಯ) ಪುಸ್ತಕದ ಕರ್ತೃ ದೇಮಣ ಜೋಯಿಸರು. ಗಣಿತಗನ್ನಡಿ, ತಂತ್ರ ದರ್ಪಣ, ಕರಣಾಭರಣ, ಗ್ರಹಣ ರತ್ನ – ಈ ಎಲ್ಲದರ ಕರ್ತೃ ಶಂಕರನಾರಾಯಣ ಜೋಯಿಸರು. ರಚಿಸಿದ ಕಾಲ ಸುಮಾರು ಕ್ರಿಸ್ತ ಶಕ 1601ರಿಂದ 1610 ಎನ್ನಬಹುದು. ಗಣಿತಗನ್ನಡಿ ಮಾತ್ರ ಕನ್ನಡ ಭಾಷೆಯಲ್ಲಿದೆ. ಈ ಗ್ರಂಥದ ಪ್ರತಿಯೊಂದು ಅಧ್ಯಾಯದ ಕೊನೆಯಲ್ಲಿಯೂ ಕರ್ತೃ ತನ್ನ ಹೆಸರನ್ನು ಹೇಳಿಕೊಂಡಿದ್ದಾರೆ. ಕೊನೆಯಲ್ಲಿ ಎರಡು ವಿಶೇಷಣಗಳೂ ಇವೆ. ಜ್ಯೋತಿಷ್ಯಾಗ್ರಗಣ್ಯ ಸುಧಾರ್ಣವ ಪೂರ್ಣಚಂದ್ರ, ಗಣಕ ಪನ್ನಗ ಸುಪರ್ಣ ಎಂಬ ಈ ಬಿರುದುಗಳು ಬಹುಶಃ ಗ್ರಂಥವನ್ನು ಮುಗಿಸುತ್ತಿರುವ ಹಂತದಲ್ಲಿ ದೊರಕಿರಬೇಕು ಎಂದು ಊಹಿಸಬಹುದು.

ತಂತ್ರ ದರ್ಪಣ ಮತ್ತು ಗಣಿತಗನ್ನಡಿ – ಈ ಎರಡೂ ಗ್ರಂಥಗಳು ‘ವಾರ್ಷಿಕ ತಂತ್ರ’ ಎಂಬ ಗ್ರಂಥದ ವ್ಯಾಖ್ಯೆ. ಹಾಗಾದರೆ ಆ ಗ್ರಂಥ ಬರೆದವರು ಯಾರು? ಆ ವಿವರವೂ ಗಣಿತಗನ್ನಡಿಯಲ್ಲಿಯೇ ದೊರಕಿತು. ದಕ್ಷಿಣಾಚಾರ್ಯ ಅಥವಾ ವಿದ್ದಣಾಚಾರ್ಯ ಎಂಬುವರೇ ಅದರ ಕರ್ತೃ. ಈತನ ಬಗ್ಗೆ ಹುಡುಕುತ್ತಾ ಹೊರಟ ಸೀತಾರಾಂ ಅವರಿಗೆ ಎರಡು ಮುಖ್ಯ ಸುಳಿವುಗಳು ಸಿಕ್ಕವು. ಡೇವಿಡ್ ಪಿಂಗ್ರಿ ಎಂಬ ಅಮೆರಿಕದ ವಿಜ್ಞಾನಿ ಭಾರತದುದ್ದಕ್ಕೂ ತಿರುಗಾಟ ನಡೆಸಿ ಸಂಸ್ಕೃತ ಜ್ಯೋತಿಷ್ಯ ಗ್ರಂಥಗಳ ಬೃಹತ್ ಪಟ್ಟಿಯನ್ನೇ ತಯಾರು ಮಾಡಿದ್ದಾರೆ. ಅದರಲ್ಲಿ ಈ ಗ್ರಂಥದ ಹೆಸರಿದೆ. ಹೀಗೆ ಶೃಂಗೇರಿಯಲ್ಲಿಯೇ ಇನ್ನೊಂದು ಪ್ರತಿ ಇದೆ ಎಂದು ತಿಳಿಯಿತು. ಸೀತಾರಾಂ ಅವರು ಸಂಸ್ಕೃತಿ ಅಧ್ಯಯನ ಪೀಠವನ್ನು ಕೇಳಿಕೊಂಡು ಆ ಎರಡನೆ ಪ್ರತಿಯನ್ನು ಸ್ಕ್ಯಾನ್ ಮಾಡಿಸಿಕೊಂಡರು. ಅದು ತಂತ್ರ ದರ್ಪಣದ ಇನ್ನೊಂದು ಪ್ರತಿ.

ಭಾರತೀಯ ಜ್ಯೋತಿಷ್ಯದ ಕುರಿತು ಮೊದಲ ಆಕರ ಗ್ರಂಥವನ್ನು ಸಿದ್ಧಪಡಿಸಿದವರು ಮಹಾರಾಷ್ಟ್ರದ ಶಂಕರ ಬಾಲಕೃಷ್ಣ ದೀಕ್ಷಿತ್. 150 ವರ್ಷಗಳ ಹಿಂದೆ ಎಲ್ಲ ವಿದ್ಯಾಸಂಸ್ಥೆಗಳಿಗೂ ಭೇಟಿಕೊಟ್ಟು ಪುಸ್ತಕಗಳು, ಜ್ಯೋತಿಷಿಗಳು, ಗ್ರಂಥಗಳು – ಇವೆಲ್ಲವುಗಳ ವಿವರಗಳನ್ನು ಎರಡು ಬೃಹತ್ ಸಂಪುಟಗಳನ್ನಾಗಿ ತಯಾರಿಸಿದರು. ಮರಾಠಿಯಲ್ಲಿ ಪ್ರಕಟವಾದ ಈ ಗ್ರಂಥಗಳು ಹಿಂದಿಗೆ ಮತ್ತು ಇಂಗ್ಲಿಷ್‍ಗೆ ಅನುವಾದವಾದ ಕೂಡಲೇ ಎಲ್ಲ ಸಂಶೋಧನಾಸಕ್ತರಿಗೆ ಒಂದು ದೊಡ ನಿಧಿಯೇ ಸಿಕ್ಕಿದಂತಾಯಿತು. ಈ ಗ್ರಂಥದಲ್ಲಿ ವಿದ್ದಣಾಚಾರ್ಯರ ಉಲ್ಲೇಖವಿದೆ. ಇವರು ಬರೆದ ವಾರ್ಷಿಕ ತಂತ್ರದ ವ್ಯಾಖ್ಯೆಯ ಪ್ರತಿ ದೀಕ್ಷಿತ್ ಅವರಿಗೆ ಸೋಲಾಪುರದಲ್ಲಿ ಸಿಕ್ಕಿತ್ತು. ಅದನ್ನೋದಿ, ಅಲ್ಲಿಯ ಲೆಕ್ಕಗಳು ಕ್ರಿ.ಶ. 1634ಕ್ಕೆ ಅನ್ವಯವಾಗುವಂತಿದ್ದುವು ಎಂಬುದರ ಆಧಾರದ ಮೇಲೆ ಅವರು ಅದರ ರಚನೆಯ ಕಾಲವನ್ನು ಇನ್ನೂ ಹಿಂದೆ ಸುಮಾರು 15ನೆಯ ಶತಮಾನ ಎಂದು ಊಹಿಸಿದರು. ಅಲ್ಲದೇ ಗ್ರಂಥದಲ್ಲಿ ಉಜ್ಜಯಿನಿಯಿಂದ ತನ್ನ ಸ್ಥಳಕ್ಕೆ ಕರ್ತೃ ಸೂಚಿಸಿರುವ ದೇಶಾಂತರ ಸಂಸ್ಕಾರ ಮತ್ತು ಅಕ್ಷಾಂಶದ ವಿವರಣೆಯಿಂದ ವಿದ್ದಣಾಚಾರ್ಯ ಎಂಬುವರು ಧಾರವಾಡದ ಸಮೀಪ ಇದ್ದಿರಬೇಕು ಎಂದೂಹಿಸಿದರು. ಕಾರ್ತೀಕ ಪರ್ವತದ ಪಶ್ಚಿಮ ಎಂಬ ವಿವರಣೆಯೂ ಇದೆ. ಆದರೆ ಈ ಕಾರ್ತೀಕ ಪರ್ವತ ಯಾವುದು ಎಂದು ಈಗ ತಿಳಿಯುವಂತಿಲ್ಲ. ಹೀಗಾಗಿ ಈ ವಿದ್ದಣಾಚಾರ್ಯರ ವಿಷಯ ಇನ್ನೇನೂ ತಿಳಿದಿಲ್ಲ.

ಶಂಕರನಾರಾಯಣ ಜೋಯಿಸರ ವಂಶವೃಕ್ಷವೇ ದೊರಕಿರುವುದರಿಂದ ಅವರ ಬಗ್ಗೆ ಸಾಕಷ್ಟು ಮಾಹಿತಿ ದೊರಕಿದೆ. ಅವರ ತಂದೆ ದೇಮಣ ಜೋಯಿಸರ ಹೆಸರನ್ನೂ ಒಳಗೊಂಡ ಶಿಲಾಶಾಸನವೂ ಶೃಂಗೇರಿಯಲ್ಲಿದೆ. ನೃಸಿಂಹಪುರ ಎಂಬ ಅಗ್ರಹಾರದಲ್ಲಿ ಇವರಿಗೆ ದತ್ತಿಕೊಟ್ಟಿರುವ ಉಲ್ಲೇಖವಿದೆ. ಗಣಿತಗನ್ನಡಿಯ ಪ್ರತಿ ಅಧ್ಯಾಯದ ಕೊನೆಯಲ್ಲಿಯೂ ಕರ್ತೃ ತನ್ನ ಹೆಸರನ್ನು ಹೇಳಿಕೊಂಡಿದ್ದಾನೆ. ಕೊನೆಯ ಅಧ್ಯಾಯದಲ್ಲಿ ಎರಡು ಬಿರುದುಗಳೂ ಸೇರಿವೆ. ಇವು ಬಹುಶಃ ಗ್ರಂಥ ರಚನೆಯ ಮುಕ್ತಾಯದ ಹಂತದಲ್ಲಿ ದೊರಕಿರಬೇಕು ಎಂದು ಊಹಿಸಬಹುದು.

ಇಷ್ಟೆಲ್ಲಾ ಕುತೂಹಲ ಹುಟ್ಟಿಸಿದ ಈ ಗಣಿತಗನ್ನಡಿ ಈಗ ಓದಲು ಸಾಧ್ಯವಾಗಿದೆ. ಆದರೆ ಅರ್ಥಮಾಡಿಕೊಳ್ಳುವುದು ಬಹಳ ಕಷ್ಟವೇ ಸರಿ. ಇಗೋ ಇಲ್ಲಿದೆ ಒಂದು ಉದಾಹರಣೆ.

“ಖಖಾಂಗೈಃ ಯೆಂಬ 600 ರಿಂ ಭಾಗಿಸಿ ಬಂದ ಲಬ್ಧಂ ಭಗಣ ಶೇಷವಂ 12 ರಿಂ ಗುಣಿಸಿ 600 ರಿಂ ಭಾಗಿಸಿ ಬಂದವು ರಾಶಿ | ಶೇಷವಂ 30 ರಿಂ ಹೆಚ್ಚ ಗುಣಿಸಿ 600 ರಿಂ ಭಾಗಿಸಿ ಬಂದವು ಭಾಗಿ | ಶೇಷವಂ ಷಷ್ಟಿಘ್ನವ ಮಾಡಿ 600 ರಿಂ ಭಾಗಿಸೆ ಬಂದವು ಲಿಪ್ತಿ | ಇಂತು ವಿಲಿಪ್ತಿಯಂ ತಹುದು | ಇದು ಭಗಣಾದಿ ಭೌಮ ಧ್ರುವವಹುದು | ಇಲ್ಲಿ ಸಿದ್ಧಾಂತೋಕ್ತ ಮಹಾಯುಗವಂ ಕುಜ ಭಗಣವಂ 7200 ರಿಂ ಭಾಗಿಸಿಕೊಂಡನು | ಅಲ್ಲಿ ಕುಜ ಭಗಣ ಶೇಷ 32 ಇವಂ ದ್ವಾದಶಘ್ನವ ಮಾಡಲಾದ ರಾಶಿ 384 ಇವಂ ತ್ರಿಂಶದ್ಗುಣಿತ ವ ಮಾಡಲಾದ ಭಾಗಿ 11520 ಇವರಿಂದಾ ಮಹಾಯುಗವಂ ಭಾಗಿಸೆ ಬಂದ ಲಬ್ಧ 375 . ಇದೀಗ ಬೀಜ ಸಂಸ್ಕಾರವ ಮಾಡಿದ ಪಂಚಾದ್ರಿ ರಾಮೈಃಯೆಂಬ ಛೇದ ||”

ವಾರ್ಷಿಕ ತಂತ್ರ ಎಂಬ ಗ್ರಂಥವನ್ನು ಮುಗ್ಧರು ಅರ್ಥಮಾಡಿಕೊಳ್ಳಲು ಕಷ್ಟವಾಗುವುದರಿಂದ ಈ ವ್ಯಾಖ್ಯೆಯನ್ನು ರಚಿಸಿದೆ ಎಂದು ಪೀಠಿಕೆಯಲ್ಲಿ ಹೇಳಿದ್ದಾರೆ. ಹಾಗಾದರೆ ಆ ಗ್ರಂಥದಲ್ಲಿ ಈ ವಾಕ್ಯ ಹೇಗಿರಬಹುದು?
“ಭೌಮೋ ನವೇಂದ್ರಾಗ್ನಿ ಹತಾತ್ ಖಖಾಂಗೈಃ” – ಇಷ್ಟೇ.
ಆದ್ದರಿಂದಲೇ ಇದು ಕಬ್ಬಿಣದ ಕಡಲೆ ಆಗಿರುವುದು!

ಈ ‘ಪುಟ್ಟ’ ಪುಸ್ತಕಕ್ಕೆ ವಿವರಣೆ ಬರೆದು ಇಂದು ನಮಗೆ ಅರ್ಥವಾಗುವ ಗಣಿತದ ಭಾಷೆಗೆ ‘ಅನುವಾದಿಸಿ’ದರೆ ಇದೊಂದು ಬೃಹತ್ ಗ್ರಂಥವೇ ಆಗಲಿದೆ. ನಾಲ್ಕೈದು ಜನರಾದರೂ ಓದಿ ಅರ್ಥಮಾಡಿಕೊಳ್ಳಬಲ್ಲರು. ಅಷ್ಟೇ ಆಗಿದ್ದರೆ ಈ ಪುಸ್ತಕ ಹತ್ತರಲ್ಲಿ ಅಥವಾ ನೂರರಲ್ಲಿ ಒಂದು ಎಂದಾಗುತ್ತಿತ್ತು. ಆದರೆ ಇದಕ್ಕೊಂದು ವೈಶಿಷ್ಟ್ಯವಿದೆ.

ಭಾಸ್ಕರಾಚಾರ್ಯ ಮೊದಲಾಗಿ ಎಲ್ಲ ಖಗೋಳಜ್ಞರ ಕೃತಿಗಳು ಆರಂಭವಾಗುವುದು ಅಹರ್ಗಣ ಎಂಬ ಸಂಖ್ಯೆ ಲೆಕ್ಕದಿಂದ. ಅಂದರೆ ಯಾವುದೋ ಒಂದು ನಿರ್ದಿಷ್ಟ ತಾರೀಖಿನಿಂದ (ಸುಮಾರು 6ನೇ ಶತಮಾನದ್ದು) ಇಂದಿನವರೆಗೆ ಸೂರ್ಯ ಎಷ್ಟು ಬಾರಿ ಭೂಮಿಯನ್ನು ಸುತ್ತಿದೆ (ಅಥವಾ ಭೂಮಿ ಸೂರ್ಯನನ್ನು ಸುತ್ತಿದೆ) ಎಂದು ತಿಳಿದು, ಅದೇ ಅವಧಿಯಲ್ಲಿ ಚಂದ್ರ ಎಷ್ಟು ಬಾರಿ ಸುತ್ತಿದೆ, ಎಷ್ಟು ಅಧಿಕಮಾಸಗಳಾಗಿವೆ, ಎಷ್ಟು ಕ್ಷಯದಿನಗಳಾಗಿವೆ ಇವೆಲ್ಲಾ ಲೆಕ್ಕ ಮಾಡಿ ಕೊನೆಗೆ ಸಿಗುವ ಒಂದು ಸಂಖ್ಯೆಯೇ ಅಹರ್ಗಣ. (ಹಗಲುಗಳ ಎಣಿಕೆ) ಈ ಪುಸ್ತಕದಲ್ಲಿ ಎರಡೇ ಹಂತದಲ್ಲಿ ಈ ಸಂಖ್ಯೆ ದೊರಕುತ್ತದೆ. ಇದು ಹೇಗೆ ಎಂಬುದನ್ನು ಶಂಕರನಾರಾಯಣ ಜೋಯಿಸರು ವಿವರಿಸಿದ್ದಾರೆ.

ಇದು ಪ್ರತಿ ವರ್ಷಕ್ಕೆ ಹೊಸದಾಗಿ ಮಾಡಿಕೊಳ್ಳಬೇಕಾದ ಲೆಕ್ಕ. ಆದ್ದರಿಂದಲೇ ವಾರ್ಷಿಕ ತಂತ್ರ ಎಂದು ಹೆಸರು. ಇದು ಆಗ್ಗೆ ಕರ್ನಾಟಕದ ಬಹುಭಾಗಗಳಲ್ಲಿ ಜನಪ್ರಿಯವಾಗಿತ್ತು ಎಂದು ದೀಕ್ಷಿತರು 1870ರಲ್ಲಿಯೇ ಬರೆದಿದ್ದಾರೆ.

ಆದರೆ, ಈ ವಿದ್ದಣಾಚಾರ್ಯ (ಇವರಿಗೆ ದಕ್ಷಿಣಾಚಾರ್ಯ ಎಂಬ ಹೆಸರೂ ಇತ್ತು) ಯಾರು ಎಂಬುದು ಮಾತ್ರ ನಿಗೂಢವಾಗಿಯೇ ಉಳಿದಿದೆ. ಸುಗಂಧದ ಜಾಡು ಹಿಡಿದು ವನಸುಮವನ್ನು ಅರಸಿದ ಹಾಗೆ. ಅದರ ಹೆಸರು, ಇರುವ ಜಾಗ ಏನೂ ಗೊತ್ತಿಲ್ಲ. ಯಾರಿಗಾದರೂ ಗೊತ್ತಿದ್ದರೆ ತಿಳಿಸಿ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !