ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಿತದ ಹೊನಲಿನಲ್ಲಿ ‘ಮಂಜುಳ ನಿನಾದ’!

Last Updated 13 ಜನವರಿ 2019, 2:41 IST
ಅಕ್ಷರ ಗಾತ್ರ

ಜಗತ್ತಿನ ಶ್ರೇಷ್ಠ ಗಣಿತ ಶಾಸ್ತ್ರಜ್ಞರಲ್ಲಿ ಒಬ್ಬರಾಗಿರುವ, ಗಣಿತ ಕ್ಷೇತ್ರದ ನೊಬೆಲ್‌ ಎಂದೆನಿಸಿದ ಫೀಲ್ಡ್‌ ಪ್ರಶಸ್ತಿ ಪುರಸ್ಕೃತರೂ ಆಗಿರುವ ಮಂಜುಳ್‌ ಭಾರ್ಗವ ಅವರೊಂದಿಗೆ ಹರಟಲು ಹೋದಾಗ ಅವರು ಇನ್ನೇನು ಅಮೆರಿಕದ ವಿಮಾನ ಹಿಡಿಯುವ ತಯಾರಿಯಲ್ಲಿದ್ದರು. ಸಂಖ್ಯಾ ಸಿದ್ಧಾಂತವನ್ನೂ (Number Theory) ಕಲನ (Calculus), ಅನುಕಲನ (Integration), ತ್ರಿಕೋನಮಿತಿಯಂತಹ (Trigonometry) ಜಟಿಲ ಸೂತ್ರಗಳನ್ನೂ ಸಂಸ್ಕೃತದ ಸಾವಿರಾರು ಶ್ಲೋಕಗಳನ್ನೂ ತಬಲಾ ನಾದದ ಲಯವನ್ನೂ ಇವರು ಒಟ್ಟೊಟ್ಟಿಗೆ ಅರೆದು ಕುಡಿದಿದ್ದಾದರೂ ಹೇಗೆ ಎಂಬ ಸೋಜಿಗದೊಂದಿಗೇ ಮಾತಿಗೆ ಕುಳಿತಿದ್ದಾಯಿತು.

ಕೆನಡಾದಲ್ಲಿ ಜನಿಸಿ, ಅಮೆರಿಕದಲ್ಲಿ ಬೆಳೆದು, ಈಗ ಅಲ್ಲಿಯೇ ನೆಲೆ ನಿಂತಿರುವ ಭಾರತೀಯ ಮೂಲದ ಸಾಧಕ ಭಾರ್ಗವ. ‘ಭಾರತೀಯ ಹೃದಯದ ವ್ಯಕ್ತಿ ನಾನು’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಅವರು, ಪ್ರತಿ ವರ್ಷ ನಾಲ್ಕಾರು ವಾರಗಳನ್ನಾದರೂ ನಮ್ಮ ಬೆಂಗಳೂರು, ಜೈಪುರ, ಹೈದರಾಬಾದ್‌ ಹಾಗೂ ಚೆನ್ನೈ ನಗರಗಳಲ್ಲಿ ಕಳೆಯುವುದುಂಟು. ಈ ನಂಟು ಇಂದು–ನಿನ್ನೆಯದಲ್ಲ; ಬಾಲ್ಯದಲ್ಲಿ ಅಮೆರಿಕದ ತಮ್ಮ ಶಾಲೆಗೆ ತಿಂಗಳುಗಟ್ಟಲೆ ಚಕ್ಕರ್ ಹೊಡೆದು ರಾಜಸ್ಥಾನದ ಜೈಪುರದಲ್ಲಿರುವ ಅಜ್ಜನ ಮನೆಗೆ ಬಂದು ಠಿಕಾಣಿ ಹೂಡುತ್ತಿದ್ದರು. ಸಂಸ್ಕೃತದ ಪಂಡಿತರಾದ ಅಜ್ಜನ ಭಂಡಾರದಲ್ಲಿದ್ದ ಅಪರೂಪದ ಗ್ರಂಥಗಳೆಲ್ಲ ಈ ಹುಡುಗನಿಗೆ ಗೆಳೆಯರಂತೆ ಒದಗಿದವು. ಹೌದು, ಬ್ರಹ್ಮಗುಪ್ತನ ‘ಬ್ರಹ್ಮಸ್ಫುಟ ಸಿದ್ಧಾಂತ’ದ ಸೂತ್ರಗಳು ಮಂಜುಳ್‌ ಅವರ ತಲೆಯಲ್ಲಿ ಆಗಲೇ ಇಳಿಯಲು ಆರಂಭಿಸಿದವು.

‘ನಿಮಗೆ ಗೊತ್ತೆ? ಸೊನ್ನೆಯ ಮಹತ್ವವನ್ನು ಜಗತ್ತಿಗೆ ಮೊದಲು ತೋರಿಸಿಕೊಟ್ಟವನೇ ಬ್ರಹ್ಮಗುಪ್ತ. ಸೊನ್ನೆಯೊಂದಿಗೆ ವ್ಯವಹರಿಸುವ ಸೂತ್ರವನ್ನು (1+0=1; 1–0=1; 1X0=0) ಕೊಟ್ಟವನೂ ಅವನೇ. ಋಣಾತ್ಮಕ ಸಂಖ್ಯೆಗಳನ್ನು (Negative Numbers) ಪರಿಚಯಿಸಿದ ಕೀರ್ತಿ ಕೂಡ ಅವನಿಗೆ ಸಲ್ಲುತ್ತದೆ. ಜೈಪುರದ ಅಜ್ಜನ ಮನೆಯಲ್ಲಿ ನಾನು ಖುಷಿಯಿಂದ ಪಠಿಸುತ್ತಿದ್ದ ಈ ಸೂತ್ರಗಳು, ಮುಂದೆ ಕಾಲೇಜಿನಲ್ಲಿ ಇಂಗ್ಲಿಷ್‌ನ ಹೊಸ ಹೆಸರುಗಳಲ್ಲಿ ಎದುರಾದಾಗ ತುಂಬಾ ಸೋಜಿಗಪಟ್ಟಿದ್ದೆ’ ಎಂದು ‘ಬ್ರಹ್ಮಸ್ಫುಟ ಸಿದ್ಧಾಂತ’ದ ಮಹತ್ವದ ಕುರಿತು ಪುಟ್ಟದೊಂದು ಉಪನ್ಯಾಸ ನೀಡಿದರು ಭಾರ್ಗವ.

ಭಾರ್ಗವ ಅವರ ಅಜ್ಜಿ ಶಾಂತಿ, ಹಿಂದೂಸ್ತಾನಿ ಸಂಗೀತದ ಆರಾಧಕಿ. ಸಂಸ್ಕೃತದ ಜತೆಗೆ ಈ ಹುಡುಗನಿಗೆ ಸಂಗೀತದ ಹುಚ್ಚೂ ಹಿಡಿಯಲು ಇಷ್ಟು ಸಾಕಾಯಿತು. ತಬಲಾ ವಾದನದ ಲಯದಲ್ಲೂ ಮಂಜುಳ್‌ ಅವರಿಗೆ ಸಂಖ್ಯೆಯಾಟದ ಮಹಿಮೆ ಕಾಣತೊಡಗಿತು. ಮನೆಯ ನೆಲಹಾಸಿನ ಟೈಲ್ಸ್‌ಗಳನ್ನೂ ಗೋಡೆಯ ಮೇಲಿನ ಚಿತ್ರಪಟಗಳನ್ನೂ ಅವರು ಅಂಕಿಗಳ ಜತೆಗಿನ ಆಟಕ್ಕೆ ಬಳಸಿಕೊಂಡರು. ‘ಮಂಜು, ಟೆಲ್‌ ಮೀ 123 ಮಲ್ಟಿಪ್ಲೈಡ್‌ ಬೈ 48...’ ಅಜ್ಜನ ಪ್ರಶ್ನೆ ಪೂರ್ಣಗೊಳ್ಳುವ ಮುನ್ನವೇ ಬಿಲ್ಲಿನಿಂದ ಹೂಡಿದ ಬಾಣದಂತೆ ‘5,904’ ಎಂದು ಮೊಮ್ಮಗನಿಂದ ಉತ್ತರ ತೂರಿ ಬರುತ್ತಿತ್ತು. ಬೀಜಗಣಿತ, ಬಾಲ್ಯದಲ್ಲೇ ಈ ಹುಡುಗನ ಆಡುಂಬೊಲವಾಯಿತು.

‘ಮನೆಯಲ್ಲಿ ಒಮ್ಮೆ ಅಜ್ಜಿ ಜ್ಯೂಸ್‌ ಮಾಡಲು ಕಿತ್ತಳೆ ಹಣ್ಣುಗಳನ್ನು ತಂದಿಟ್ಟಿದ್ದರು. ಎಷ್ಟು ಕಿತ್ತಳೆ ಹಣ್ಣುಗಳ ನೆರವಿನಿಂದ ತ್ರಿಕೋನಾಕೃತಿಯ ಪಿರಾಮಿಡ್‌ ಸೃಷ್ಟಿಸಬಹುದು ಎನ್ನುವ ಪ್ರಶ್ನೆ ನನ್ನ ತಲೆ ಕೊರೆಯುತ್ತಿತ್ತು. ಪ್ರಾಯಶಃ ನನ್ನ ಸಂಖ್ಯಾ ಆಟದಲ್ಲಿ ನಾನು ಎದುರಿಸಿದ ಮೊದಲ ಪಜಲ್‌ ಇದು. ಈ ಪ್ರಶ್ನೆಗೆ ಉತ್ತರ ಕಂಡುಕೊಂಡದ್ದು ನನ್ನ ಮೊದಲ ‘ಯುರೇಕಾ’ ಕ್ಷಣ’ ಎಂದು ಒಮ್ಮೆ ನಕ್ಕರು ಮಂಜುಳ್‌.

‘ನಮ್ಮ ಶಾಸ್ತ್ರೀಯ ಕಾವ್ಯಗಳ ತುಂಬಾ ಗಣಿತ ಹಾಸುಹೊಕ್ಕಾಗಿದೆ. ಗಣಿತ, ವಿಜ್ಞಾನವಷ್ಟೇ ಅಲ್ಲ; ಕಲೆಯೂ ಹೌದು’ ಎಂದು ಭಾರ್ಗವ ಹೇಳಿದರು. ಉಸ್ತಾದ್‌ ಝಕೀರ್‌ ಹುಸೇನ್‌ ಅವರಲ್ಲಿ ತಬಲಾ ವಾದನ ಕಲಿತಿರುವ ಅವರು, ಗಣಿತದ ಕಲಿಕೆಯಲ್ಲಿ ಈ ಕಲೆಯನ್ನೂ ಹದವಾಗಿ ಬೆರೆಸಿದವರು. ‘ಸಂಗೀತದಿಂದ ಎಡ ಮಿದುಳಿನ ಜತೆಗೆ ಬಲ ಮಿದುಳೂ ಕ್ರಿಯಾಶೀಲಗೊಂಡು ಸೃಜನಶೀಲತೆಗೆ ನೀರೆರೆಯುತ್ತದೆ’ ಎನ್ನುವುದು ಅವರ ಖಚಿತ ಅಭಿಪ್ರಾಯ.

‘ಗಣಿತ ಜಗತ್ತಿಗೆ ಭಾರತ ಕೊಟ್ಟ ಕೊಡುಗೆ ಬಲು ದೊಡ್ಡದು. ಇಂತಹ ದೇಶದಲ್ಲಿ ಈಗ ಈ ಶಾಸ್ತ್ರದ ಸನ್ನಿವೇಶ ಹೇಗಿದೆ’ ಎನ್ನುವುದು ನಾವು ಮುಂದಿಟ್ಟ ಪ್ರಶ್ನೆ. ‘ಅಮೆರಿಕ ಇಲ್ಲವೆ ಯುರೋಪ್‌ ದೇಶಗಳಂತೆ ಭಾರತದಲ್ಲಿ ಈಗ ಗಣಿತದ ಪ್ರತಿಭೆಗಳಿಗೆ ಉತ್ತೇಜನ ಸಿಗುತ್ತಿಲ್ಲ’ ಎಂದು ವಿಷಾದದಿಂದಲೇ ಉತ್ತರಿಸಿದರು. ‘ಭಾರತೀಯ ಗಣಿತ ಕ್ಷೇತ್ರದಲ್ಲಿ ಯುವ ಪ್ರತಿಭೆಗಳ ದೊಡ್ಡ ಪಡೆಯೇ ಇದ್ದರೂ ಅವರನ್ನು ಎಂಜಿನಿಯರಿಂಗ್‌ ಕ್ಷೇತ್ರದ ಕಡೆಗೆ ತಳ್ಳಲಾಗುತ್ತಿದೆ. ವೃತ್ತಿಯ ವಿಷಯ ಬಂದಾಗ ಗಣಿತವನ್ನೂ ಆಯ್ಕೆ ಮಾಡಿಕೊಳ್ಳಬಹುದು ಎನ್ನುವ ವಾತಾವರಣ ಕಾಣುತ್ತಿಲ್ಲ. ಮಕ್ಕಳು ಯಾವುದನ್ನು ಇಷ್ಟಪಟ್ಟು ಕಲಿಯಲು ಬಯಸುತ್ತವೋ ಅದಕ್ಕೆ ತಕ್ಕಂತೆ ಪ್ರೋತ್ಸಾಹ ಸಿಕ್ಕರೆ ಫಲಿತಾಂಶ ಸಂಪೂರ್ಣ ಭಿನ್ನವಾಗಿರುತ್ತದೆ. ಈ ನಿಟ್ಟಿನಲ್ಲಿ ಶೈಕ್ಷಣಿಕ ದೃಷ್ಟಿಕೋನವೇ ಬದಲಾಗಬೇಕಿದೆ’ ಎಂದು ಸಲಹೆಯಿತ್ತರು.

‘ಭಾರತೀಯ ಸಂಸ್ಕೃತಿಯ ಬಹುಮುಖ್ಯ ಅಂಗವಾಗಿದೆ ಗಣಿತ. ಈ ಗೆಳೆತನಕ್ಕೆ ಶತಮಾನಗಳ ಇತಿಹಾಸವೇ ಇದೆ. ವೇದದಲ್ಲಿ ‘ಪೂರ್ಣಸ್ಯ ಪೂರ್ಣಂ ಆದಾಯ ಪೂರ್ಣಂ ಏವ ಅವಶಿಷ್ಯತೇ’ (ಅನಂತದಲ್ಲಿ ಅನಂತವನ್ನು ಕಳೆದಾಗ ಉಳಿಯುವುದು ಅನಂತವೇ) ಎಂಬ ಶ್ಲೋಕವಿದೆ. ಗಣಿತದ ಅಸ್ಮಿತೆ ನಮ್ಮ ಸಂಸ್ಕೃತಿಯ ಭಾಗವಾಗಿದ್ದಕ್ಕೆ ಲೆಕ್ಕಾಚಾರದ ಈ ಶ್ಲೋಕವೇ ಸಾಕ್ಷಿ’ ಎಂದು ಹೇಳಿದರು.

ಮಂಜುಳ್‌ ಅವರ ‘ಮ್ಯಾಥಮೆಟಿಕ್ಸ್‌ ಆಫ್‌ ಮ್ಯಾಜಿಕ್‌ ಟ್ರಿಕ್ಸ್‌ ಆ್ಯಂಡ್‌ ಗೇಮ್ಸ್‌’ ಕ್ಲಾಸ್‌ಗಳು ಜಗತ್ತಿನಾದ್ಯಂತ ಹೆಸರುವಾಸಿ. ಅದರ ಹಿಂದಿನ ಗುಟ್ಟೇನು ಗೊತ್ತೆ? ಗಣಿತವನ್ನು ಕೇವಲ ವಿಜ್ಞಾನ ರೂಪದಲ್ಲಿ ಕಲಿಸದೆ ಕಲೆಯನ್ನಾಗಿಯೂ ನೋಡಿ ಹೇಳಿಕೊಡುವುದು. ಗಣಿತದ ಕಲಿಕೆಯಲ್ಲಿ ಅವರು ಪಜಲ್‌, ಟಾಯ್‌, ಮ್ಯಾಜಿಕ್‌, ಮ್ಯೂಜಿಕ್‌ ಮತ್ತು ಕಾವ್ಯ – ಎಲ್ಲವನ್ನೂ ಹದವಾಗಿ ಬೆರೆಸುತ್ತಾರೆ. ‘ಯಾವುದೇ ವಿದ್ಯಾರ್ಥಿ ರೋಬೊಟ್‌ ರೀತಿಯಲ್ಲಿ ಸಮಸ್ಯೆಯನ್ನು ಬಗೆಹರಿಸಬಾರದು. ಅದರ ಬದಲು ತನಗೆ ಇಷ್ಟವಾದ ರೀತಿಯಲ್ಲಿಯೇ ಗಣಿತದ ಸೂತ್ರಗಳ ಹಿಂದಿರುವ ತಿರುಳನ್ನು ಆವಿಷ್ಕಾರ ಮಾಡಲು ಆತ ಕಲಿಯಬೇಕು. ಹೌದು, ಗಣಿತವೆಂದರೆ ಕೌತುಕದಿಂದ ಆವಿಷ್ಕರಿಸುವ ಒಂದು ಸೃಜನಶೀಲ ಪ್ರಕ್ರಿಯೆ’ ಎಂದು ಅವರು ಅಭಿಪ್ರಾಯಪಡುತ್ತಾರೆ.

ಸ್ಥಳೀಯ ಭಾಷೆಗಳ ಕುರಿತು ಅವರು ಅತೀವ ಕಾಳಜಿ ವ್ಯಕ್ತಪಡಿಸುತ್ತಾರೆ. ‘ಇಂಗ್ಲಿಷ್‌ನಲ್ಲಿ ಕಲಿಯುವಷ್ಟೇ ಮಾತೃಭಾಷೆಯ ಮೇಲಿನ ಪ್ರೀತಿಯೂ ಮುಖ್ಯ. ಸ್ಥಳೀಯ ಭಾಷೆಗಳಲ್ಲಿ ಹೊಸ ಜ್ಞಾನದ ಸೃಷ್ಟಿಯಾಗಬೇಕು. ಅವುಗಳು ಉಳಿಯಬೇಕು. ದೊಡ್ಡದಾಗಿ ಬೆಳೆಯಬೇಕು’ ಎಂದು ಪ್ರೀತಿ ತೋರಿಸಿದರು. ‘ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆಯಲ್ಲವೇ’ ಎಂದೂ ಕೇಳಿದರು.

ಮಂಜುಳ್‌ ಅವರು ಇಳಿದುಕೊಂಡಿದ್ದ ತಾಜ್‌ ವೆಸ್ಟ್‌ ಎಂಡ್‌ನ ಲಾಬಿಯಲ್ಲಿ ಮಾತುಕತೆ ಮುಗಿಸಿ, ಹೊರಬಂದಾಗ ಬೀಳ್ಕೊಡಲು ಅವರೂ ಹೊರಬಂದರು. ಹೋಟೆಲ್‌ನ ಹುಲ್ಲುಹಾಸಿನಲ್ಲಿ ನಮ್ಮನ್ನು ನಿಲ್ಲಿಸಿ ಛಾಯಾಚಿತ್ರ ತೆಗೆದುಕೊಂಡ ಅವರು, ‘ನಾನು ಆಗಾಗ ಬೆಂಗಳೂರಿಗೆ ಬರುತ್ತಲೇ ಇರುತ್ತೇನೆ. ಮುಂದಿನ ಸಲ ಬಂದಾಗ ಮತ್ತೆ ಸಿಗೋಣ’ ಎನ್ನುತ್ತಾ ಬೈ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT