ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ನಾಡ್‌ ಕಾಲೇಜಿನ ‘ಸ್ನೇಹದ ಕಡಲು’

Last Updated 21 ಡಿಸೆಂಬರ್ 2018, 19:40 IST
ಅಕ್ಷರ ಗಾತ್ರ

ಪ್ರತಿಷ್ಠಿತ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಒಂದಾದ ಹಾಸನದ ‘ಮಲ್ನಾಡ್‌ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌’ನ (ಎಂಸಿಇ) ಹಳೆ ವಿದ್ಯಾರ್ಥಿಗಳ ಸಂಘದ (ಅಲ್ಯುಮಿನಿ ಅಸೋಸಿಯೇಷನ್‌) ಸದಸ್ಯರು ಶನಿವಾರ ಬೆಂಗಳೂರಿನ ಜಯಮಹಲ್‌ ಪ್ಯಾಲೇಸ್‌ ಹೋಟೆಲ್‌ನಲ್ಲಿ ಸಭೆ ಸೇರಲಿದ್ದಾರೆ.

1960ರಲ್ಲಿ ಆರಂಭವಾದ ಈ ಕಾಲೇಜು ಐದು ದಶಕಕ್ಕೂ ಹೆಚ್ಚು ಕಾಲದಿಂದ ಗುಣಮಟ್ಟದ ಎಂಜಿನಿಯರಿಂಗ್‌ ಶಿಕ್ಷಣವನ್ನು ನೀಡುತ್ತಾ ಬಂದಿದೆ. ಸಾವಿರಾರು ತಂತ್ರಜ್ಞರು, ಶಿಕ್ಷಣ ತಜ್ಞರು ಮತ್ತು ಉದ್ಯಮಿಗಳನ್ನು ಸೃಷ್ಟಿಸಿರುವ ಈ ಕಾಲೇಜು ರಾಜ್ಯಕ್ಕೆ ನಾಲ್ಕು ಕುಲಪತಿಗಳನ್ನು ನೀಡಿದೆ.

ವಿಟಿಯು ಕುಲಪತಿ ಡಾ. ಕರಿದಾಸಪ್ಪ, ಪಿಇಎಸ್‌ ಕುಲಪತಿ ಡಾ. ಕೆ.ಎನ್‌. ಬಾಲಸುಬ್ರಹ್ಮಣ್ಯ ಮೂರ್ತಿ, ಪಿಇಎಸ್‌ನ ಪ್ರೊ ವೈಸ್‌ ಚಾನ್ಸಲರ್‌ ಡಾ. ಎಸ್‌.ಆರ್‌. ಶಂಖ್‌ಪಾಲ್‌, ರಾಜಸ್ಥಾನದ ಮೋದಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಯೂ ಆದ ಶಿಕ್ಷಣ ತಜ್ಞ ಡಾ. ಎನ್‌.ವಿ.ಸುಬ್ಬಾರೆಡ್ಡಿ ಅವರು ಎಂಸಿಇನ ಹಳೆವಿದ್ಯಾರ್ಥಿಗಳು. ಇವರೇ ಅಲ್ಲದೆ ರಾಜ್ಯದ 24 ಪ್ರತಿಷ್ಠಿತ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಪ್ರಾಂಶುಪಾಲರಾಗಿ ಕೆಲಸ ಮಾಡುತ್ತಿರುವವರು ಎಂಸಿಇಯಲ್ಲಿ ಎಂಜಿನಿಯರಿಂಗ್‌ ಪದವಿಗಳನ್ನು ಪೂರೈಸಿದವರು.

ಇಷ್ಟೆಲ್ಲ ಖ್ಯಾತನಾಮರುಗಳ ಸಮೂಹವನ್ನೇ ಒಳಗೊಂಡಿರುವ ‘ಎಂಸಿಇ’ ಅಲ್ಯುಮಿನಿ ಅಸೋಷಿಯೇಷನ್‌ ತಮ್ಮನ್ನು ಈ ಹಂತಕ್ಕೆ ಬೆಳೆಸಿದ ಕಾಲೇಜಿನ ಅಭಿವೃದ್ಧಿಗೂ ಕೈಜೋಡಿಸಿದೆ. ‘ಜ್ಞಾನ ಸೇತು’, ‘ಮೇಕ್‌ ಇನ್‌ ಎಂಸಿಇ’ ಕಾರ್ಯಕ್ರಮಗಳ ಮೂಲಕ ಇಲ್ಲಿನ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ, ಅವರಿಗೆ ವಿದ್ಯಾರ್ಥಿ ವೇತನ ನೀಡುವ ಕಾರ್ಯವನ್ನೂ ಈ ಸಂಘ ಮಾಡುತ್ತಿದೆ.

ಜಗತ್ತಿನ ವಿವಿಧ ದೇಶಗಳಲ್ಲಿ ನೆಲೆಸಿರುವ ಎಂಸಿಇ ಹಳೆ ವಿದ್ಯಾರ್ಥಿಗಳು ಈ ಹಿಂದೆ ಬೆಂಗಳೂರು, ಅಮೆರಿಕ, ದುಬೈ, ಲಂಡನ್‌, ಮುಂಬೈ, ಮಂಗಳೂರು ಮತ್ತು ಹಾಸನಗಳಲ್ಲಿ ಸಭೆ ಸೇರಿದ್ದಾರೆ.

ಈ ಸಂಘಟನೆಯು ಇದೇ 22ರಂದು (ಶನಿವಾರ) ನಗರದಲ್ಲಿ ‘ಸ್ನೇಹದ ಕಡಲು’ ಹೆಸರಿನಲ್ಲಿ ‘ಅಲ್ಯುಮಿನಿ ಗ್ಲೋಬಲ್‌ ಮೆಗಾ ಮೀಟ್‌’ ಹಮ್ಮಿಕೊಂಡಿದೆ. ವಿಶ್ವದ ವಿವಿಧ ಭಾಗದಲ್ಲಿರುವ ಕಾಲೇಜಿನ ಹಳೆ ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಳ್ಳುವರು.

ಈ ಸಂಘದ ಕೋರ್‌ ಸಮಿತಿಯ ಸದಸ್ಯರಾದ ಚಂದ್ರಶೇಖರ್‌, ತುಳಸಿರಾಂ, ಮಹೇಂದ್ರ, ಧರ್ಮ ವಿಜೆತ್‌, ದಿವ್ಯಾ ಮುತ್ತಣ್ಣ, ಸಂದೇಶ್‌, ಕೃಷ್ಣ ಮೂರ್ತಿ, ಲಕ್ಷ್ಮೀಷಾ, ಮಾಧು, ಸತ್ಯೇಶ್‌ ಬೆಳ್ಳೂರು, ರಾಘು, ಶಶಿ, ಸುಮನ್‌, ಸತ್ಯನ್‌, ಹೇಮಂತ್‌, ಪವಿತ್ರ ಅವರು ಈ ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸುತ್ತಿದ್ದಾರೆ. ಹಾಸನದಲ್ಲಿರುವ ಎಂಸಿಇ ಆವರಣದಲ್ಲಿ ‘ಅಲ್ಯುಮಿನಿ ಕನ್ವೆನ್ಷನ್‌ ಸೆಂಟರ್‌’ ನಿರ್ಮಿಸುವ ಕನಸನ್ನೂ ಈ ಸಂಘ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT