ಬಿಜಿಎಲ್ ಸ್ವಾಮಿ ಜನ್ಮಶತಾಬ್ದಿಗೆ‘ಮೀನಾಕ್ಷಿಯ ಸೌಗಂಧ’ದ ಘಮ

7

ಬಿಜಿಎಲ್ ಸ್ವಾಮಿ ಜನ್ಮಶತಾಬ್ದಿಗೆ‘ಮೀನಾಕ್ಷಿಯ ಸೌಗಂಧ’ದ ಘಮ

Published:
Updated:
Deccan Herald

‘ಮೀನಾಕ್ಷಿಯ ಸೌಗಂಧ’ ಕನ್ನಡದ ಅನನ್ಯ ಬರಹಗಾರ‌ ಬಿ.ಜಿ.ಎಲ್. ಸ್ವಾಮಿ ಅವರ ಜನ್ಮಶತಾಬ್ದಿಯನ್ನು ಸ್ಮರಣೀಯಗೊಳಿಸುವ ಉದ್ದೇಶದಿಂದ ಪ್ರಕಟಗೊಂಡಿರುವ ಕೃತಿ. ಸ್ವಾಮಿಯವರು ಕನ್ನಡ ಸಾರಸ್ವತ ತೋಟದ ಸೌಗಂಧಿಕಾ ಪುಷ್ಪ. ಆ ದಿವ್ಯ ಪರಿಮಳದ ಅನುಭವ ‘ಮೀನಾಕ್ಷಿಯ ಸೌಗಂಧ’ ಕೃತಿಯ ಪ್ರತಿ ಬರಹದಲ್ಲೂ ಇದೆ.

ಪ್ರಸಕ್ತ ಕೃತಿ ಒಂದರ್ಥದಲ್ಲಿ ಹಲವು ಪರಿಮಳಗಳ ಸಂಕಲನ. ಸಾಹಿತ್ಯದ ಜೊತೆಗೆ ಚರಿತ್ರೆ, ವಿಜ್ಞಾನ ಹಾಗೂ ಕಲೆಗೆ ಸಂಬಂಧಿಸಿದ ಬರಹಗಳು ಇಲ್ಲಿವೆ. ವಸ್ತು ಯಾವುದಾದರೂ ಅದು ಸ್ವಾಮಿಯವರ ಸ್ಪರ್ಶದಲ್ಲಿ ವಿಶಿಷ್ಟ ಕಲಾಕೃತಿಯಾಗಿರುವ ಜಾದೂವನ್ನು ಬರಹಗಳಲ್ಲಿ ನೋಡಬಹುದು. ಇಲ್ಲಿನ ಲೇಖನಗಳ ವೈವಿಧ್ಯ ಸ್ವಾಮಿಯವರ ಹಲವು ಆಸಕ್ತಿಗಳನ್ನು ಸೂಚಿಸುವಂತಿವೆ. ಸಸ್ಯವಿಜ್ಞಾನದ ವಿದ್ವತ್ತಿನ ಜೊತೆಗೆ ಚಿತ್ರಕಲೆ, ಸಾಹಿತ್ಯ, ಪುರಾಣ ಹಾಗೂ ಇತಿಹಾಸದ ಬಗ್ಗೆ ಅವರಿಗಿದ್ದ ಗಾಢಪ್ರೇಮವೇ ಬರಹಗಳ
ರೂಪ ತಾಳಿದೆ, ರೇಖೆಗಳಾಗಿ ಮೂಡಿದೆ.

ಪುಸ್ತಕದ ಕಡೆಯ ಭಾಗದಲ್ಲಿ ಸ್ವಾಮಿ ಅವರ ಜೀವನ–ಸಾಧನೆಯನ್ನು ಪರಿಚಯಿಸುವ ಎಚ್.ಎಸ್. ಗೋಪಾಲರಾವ್ ಅವರ ಬರಹವಿದೆ. ಸ್ವಾಮಿಯವರು ಟಿ.ವಿ. ವೆಂಕಟಾಚಲಶಾಸ್ತ್ರಿಗಳಿಗೆ ಬರೆದ ಕೆಲವು ಪತ್ರಗಳೂ ಇವೆ.

ಟಿ.ಆರ್.ಅನಂತರಾಮು, ಎಸ್.ಎಲ್.ಶ್ರೀನಿವಾಸಮೂರ್ತಿ, ಜಿ.ಎನ್.‌ ನರಸಿಂಹಮೂರ್ತಿ ಹಾಗೂ ಕೆ.ಎಸ್. ಮಧುಸೂದನ ಕೃತಿಯ ಸಂಪಾದಕರು. ಸ್ವಾಮಿಯವರ ಬರಹಗಳನ್ನು ಸಂಪಾದಿಸಲು ಈ ‘ಸ್ವಾಮಿ ಪ್ರೇಮಿ’ಗಳು ಪಟ್ಟಿರುವ ಶ್ರಮ ಅಷ್ಟಿಷ್ಟಲ್ಲ. ಹಲವು ಗ್ರಂಥಾಲಯಗಳನ್ನು ಜಾಲಾಡಿ, ಹಳೆಯ ಪತ್ರಿಕೆಗಳ ದೂಳು ಕೊಡವಿ ಬರಹಗಳನ್ನು ಸಂಪಾದಿಸಿದ್ದಾರೆ. ‘ಚಾಮಿ’ ಹೆಸರಿನಲ್ಲಿ ಪ್ರಕಟಗೊಂಡಿದ್ದ ವಿನೋದ ಬರಹಗಳು ಸ್ವಾಮಿ ಅವರವೇ ಎಂದು ಕಂಡುಕೊಳ್ಳಲು ಹರಸಾಹಸ ಪಟ್ಟಿದ್ದಾರೆ.

ಸ್ವಾಮಿ ಅವರ ಬರಹಗಳ ಸಂಪಾದನೆಯ ಕೆಲಸವನ್ನು ಅನಂತರಾಮು ಅವರು ‘ಒಂದು ಹೋರಾಟ’ ಎಂದು ನೆನಪಿಸಿಕೊಳ್ಳುತ್ತಾರೆ. ‘ಎರಡು ವರ್ಷಗಳ ಮೊದಲೇ ಕೇಂದ್ರ ಸಾಹಿತ್ಯ ಅಕಾಡೆಮಿ ಸ್ವಾಮಿಯವರ ಶತಮಾನೋತ್ಸವ ಆಚರಿಸಿದೆ.
ಈಗ ಈ ಕೃತಿಯ ಮೂಲಕ ನಾವು ಆಚರಿಸುತ್ತಿದ್ದೇವೆ’ ಎಂದು ಸಂಭ್ರಮಿಸುವ ಅವರು – ‘ಸ್ವಾಮಿಯವರ ಮರಣಾನಂತರ ಒಂಬತ್ತು ಕೃತಿಗಳು ಪ್ರಕಟಗೊಂಡಿರುವುದು ಅವರ ಪುಸ್ತಕಗಳಿಗಿರುವ ಬೇಡಿಕೆಯನ್ನು ಸೂಚಿಸುತ್ತದೆ. ಈ ಕೃತಿ ಕೂಡ ಸಹೃದಯರ ಮೆಚ್ಚುಗೆ ಪಡೆಯಲಿದೆ’ ಎನ್ನುತ್ತಾರೆ.

ಆಧುನಿಕ ಕನ್ನಡ ಸಾಹಿತ್ಯದ ಅಗ್ರಗಣ್ಯ ಸಾಹಿತಿಗಳಲ್ಲೊಬ್ಬರಾದ ಡಿ.ವಿ. ಗುಂಡಪ್ಪನವರ ಪುತ್ರರಾದ ಸ್ವಾಮಿ (ಫೆ.5, 1918 - ನ. 2 1980), ಅಪ್ಪನಿಗೆ ತಕ್ಕ‌ ಮಗ. ಸಸ್ಯವಿಜ್ಞಾನಿಯಾಗಿ ಅವರದು ಅಂತರರಾಷ್ಟ್ರೀಯ ಖ್ಯಾತಿ. ಅಮೆರಿಕದ ಹಾರ್ವರ್ಡ್‌ ವಿಶ್ವವಿದ್ಯಾಲಯದಲ್ಲಿ ಪ್ರೊ. ಇರ್ವಿಂಗ್‌ ಬೈಲಿ ಎನ್ನುವ ಸುಪ್ರಸಿದ್ಧ ಸಸ್ಯಶಾಸ್ತ್ರಜ್ಞರ ವಿದ್ಯಾರ್ಥಿಯಾಗಿ, ಆರು ವರ್ಷಗಳ ಕಾಲ ಸಹ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ ಹಿರಿಮೆ ಸ್ವಾಮಿ ಅವರದು. ನಂತರ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸುಮಾರು ಎರಡು ದಶಕಗಳ ಕಾಲ ಕೆಲಸ ಮಾಡಿದರು. ನಿವೃತ್ತಿಯ ನಂತರ ಮೈಸೂರು ವಿ.ವಿ.ಯಲ್ಲಿ ಸಂದರ್ಶಕ ಪ್ರಾಧ್ಯಾಕರಾಗಿಯೂ ದುಡಿದಿದ್ದಾರೆ.

ಸಸ್ಯ ವಿಜ್ಞಾನಿಯಾಗಿ ಸ್ವಾಮಿಯವರ ನೂರಾರು ವಿದ್ವತ್ಪೂರ್ಣ ಪ್ರಬಂಧಗಳು ಅಂತರರಾಷ್ಟ್ರೀಯ ನಿಯತಕಾಲಿಕಗಳಲ್ಲಿ ಪ್ರಕಟಗೊಂಡಿವೆ. ಕೆಲವು ಸಸ್ಯ ಪ್ರಭೇದಗಳನ್ನು ಅವರ ಹೆಸರಿನಲ್ಲಿ ಗುರ್ತಿಸಿರುವುದು ಸಸ್ಯವಿಜ್ಞಾನಿಯಾಗಿ ಸ್ವಾಮಿಯವರ ಸಾಧನೆಗೆ ಸಂದ ಗೌರವವಾಗಿದೆ.

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ‘ಹಸುರು ಹೊನ್ನು’, ‘ತಮಿಳು ತಲೆಗಳ ನಡುವೆ’, ‘ಪಂಚಕಳಸ ಗೋಪುರ’, ‘ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕ’, ‘ಕಾಲೇಜು ತರಂಗ’, ‘ಪ್ರಾಧ್ಯಾಪಕನ ಪೀಠದಲ್ಲಿ’, ‘ಸಾಕ್ಷಾತ್ಕಾರದ ದಾರಿಯಲ್ಲಿ’ ಅವರ ಕೆಲವು ಕೃತಿಗಳು. ಈ ಕೃತಿಗಳ ಸಾಲಿಗೆ ಹೊಸ ಸೇರ್ಪಡೆ ‘ಮೀನಾಕ್ಷಿಯ ಸೌಗಂಧ’. ಸ್ವಾಮಿ ಅವರನ್ನು ಮತ್ತೆ ನೆನಪಿಸಿಕೊಳ್ಳಲು, ಅವರ ಜನ್ಮಶತಾಬ್ದಿಯನ್ನು ಸ್ಮರಣೀಯಗೊಳಿಸಲು ಈ ಕೃತಿ ಒಂದು ಸುಂದರ ನೆಪವಾಗಿದೆ.

ವಸಂತ ಪ್ರಕಾಶನ ಕೃತಿಯನ್ನು ಪ್ರಕಟಿಸಿದೆ. 244 ಪುಟಗಳ ಕೃತಿಯ ಬೆಲೆ ರೂ. 180.

ಇಂದು ಬಿಡುಗಡೆ

‘ಮೀನಾಕ್ಷಿಯ ಸೌಗಂಧ’ ಕೃತಿ ಆಗಸ್ಟ್‌ 11ರ ಶನಿವಾರ ಸಂಜೆ 4.30ಕ್ಕೆ ಚಾಮರಾಜಪೇಟೆಯಲ್ಲಿನ ‘ಕನ್ನಡ ಸಾಹಿತ್ಯ ಪರಿಷತ್ತಿನ ‘ಶ್ರೀಕೃಷ್ಣರಾಜೇಂದ್ರ ಪರಿಷನ್ಮಂದಿರ’ದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಿಡುಗಡೆಯಾಗಲಿದೆ.

ಡಾ. ವಸುಂಧರಾ ಭೂಪತಿ ಹಾಗೂ ಎಂ.ಎಸ್‌. ಶ್ರೀರಾಮ್‌ ಮುಖ್ಯ ಅತಿಥಿಗಳು. ಸ್ವಾಮಿಯವರ ಕಲೆ–ಸಾಹಿತ್ಯ ಸಾಧನೆ ಕುರಿತು ಎಂ.ಎಚ್‌. ಕೃಷ್ಣಯ್ಯ ಹಾಗೂ ಜೀವನ–ಸಾಧನೆ ಕುರಿತು ಎಸ್‌. ದಿವಾಕರ್‌ ಮಾತನಾಡುವರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !