ಅವನಿಗೂ ಇವೆ ಭಾವನೆಗಳು!

7
Men's commission

ಅವನಿಗೂ ಇವೆ ಭಾವನೆಗಳು!

Published:
Updated:

ಕುಂತ್ರೆನಿಂತ್ರೆ ಸಾಕು ಒಂದೇ ಸಮನೆ ಬೈಗುಳಗಳ ಸುರಿಮಳೆ. ಮನೆಯಲ್ಲಿರುವಷ್ಟು ಹೊತ್ತೂ ಮಾತುಮಾತು... ಈ ತಿಂಗಳು ಅದು ಬೇಕು, ಇದು ಬೇಕು... ಹೀಗೆ ಎಂದೂ ಮುಗಿಯದ ಅವಳ ಬೇಡಿಕೆಗಳ ಪಟ್ಟಿ... ಹೊರಗೆ ಹೈಪ್ರೊಫೈಲ್ ಇರುವ ಕಾರಣ ಯಾರ ಹತ್ತಿರವೂ ನನ್ನ ಸಂಕಟ ಹೇಳಿಕೊಳ್ಳಲಾಗದು... ಮಾನಸಿಕವಾಗಿ ತುಂಬಾ ಕಿರಿಕಿರಿ... ಕೆಲವೊಮ್ಮೆ ದೈಹಿಕವಾಗಿಯೂ ನೋವು ಅನುಭವಿಸಿದ್ದೀನಿ...

– ಇದು ಖಾಸಗಿ ಕಂಪನಿಯೊಂದರಲ್ಲಿ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರ ಮನದಾಳದ ಮಾತು. ಮನೆಯಲ್ಲಿ ನಿತ್ಯವೂ ಹೆಂಡತಿ ಕೊಡುವ ಮಾನಸಿಕ ಹಿಂಸೆಯಿಂದ ತತ್ತರಿಸುವ ಅವರಿಗೆ ಕಚೇರಿಯಲ್ಲಷ್ಟೇ ತುಸು ನೆಮ್ಮದಿ.

***

‘ಮನೆಯಲ್ಲಿ ನೋಡಿದ ಹುಡುಗಿಯನ್ನೇ ಇಷ್ಟಪಟ್ಟು ಮದುವೆಯಾದೆ. ಆದರೆ, ಮೊದಲ ರಾತ್ರಿಯೇ ಅವಳ ರೌದ್ರಾವತಾರ ಕಂಡು ಬೆಚ್ಚಿದೆ. ಮದುವೆಗೂ ಮುನ್ನ ಅವಳಿಗೆ ಬೇರೊಬ್ಬನ ಜತೆ ಗೆಳೆತನವಿತ್ತಂತೆ. ಆದರೆ, ಮನೆಯವರ ಒತ್ತಾಯಕ್ಕೆ ನನ್ನನ್ನು ಮದುವೆಯಾದಳಂತೆ. ಅವಳಿಚ್ಛೆಯಂತೆ ಬದುಕು ಎಂದು ಅವಳಿಗೆ ಹೇಳಿದ್ದರೂ ನಿತ್ಯವೂ ಒಂದೊಂದು ವಿಷಯಕ್ಕೆ ಜಗಳ. ಇತ್ತ ವಿಚ್ಛೇದನವೂ ಇಲ್ಲ, ಅತ್ತ ಮನೆಯಲ್ಲಿ ನೆಮ್ಮದಿಯೂ ಇಲ್ಲ. ನನ್ನ ಬಾಳು ನಾಯಿ ಪಾಡಿಗಿಂತಲೂ ಕಡೆಯಾಗಿದೆ’ ಹಾಗೆಂದು ನೊಂದುಕೊಂಡರು ಆ ಉಪನ್ಯಾಸಕ.

ಮಹಿಳಾ ಆಯೋಗದಂತೆ ನಮಗೂ ಒಂದು ಆಯೋಗ ಅಂತ ಇದ್ದಿದ್ದರೆ ನಮ್ಮ ಕಷ್ಟಗಳು ಅಲ್ಲಾದರೂ ಬಗೆಹರಿಯುತ್ತಿದ್ದವೋ ಏನೋ ಎಂದು ಅವರು ನಿಟ್ಟುಸಿರುಬಿಟ್ಟ.

‘ಕಾನೂನು ದುರುಪಯೋಗಪಡಿಸಿಕೊಳ್ಳುವ ಪತ್ನಿಯರಿಂದ ಶೋಷಣೆ ಅನುಭವಿಸುತ್ತಿರುವ ಪುರುಷರ ದೂರುಗಳನ್ನು ಪರಿಶೀಲಿಸಲು ಪುರುಷ ಆಯೋಗ ಬೇಕೆಂದು’ ಇತ್ತೀಚೆಗೆ ಇಬ್ಬರು ಸಂಸದರು ಬೇಡಿಕೆ ಇರಿಸಿದ್ದಾರೆ. ಕೆಲವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರೆ ಇನ್ನು ಕೆಲವರು ಆಯೋಗ ಬೇಕು ಅನ್ನುವ ಒತ್ತಾಯ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಪುರುಷಪರ ಹೋರಾಟಗಾರರು, ಕಾನೂನು ಸಲಹೆಗಾರರು ಮತ್ತು ಮಾನಸಿಕ ತಜ್ಞರು ಏನೆನ್ನುತ್ತಾರೆ.

ಗಂಡಸೂ ಸ್ವಲ್ಪ ನೋವು ಸಹಿಸಿಕೊಳ್ಳಲಿ!

ನಮ್ಮ ಸಂವಿಧಾನದಲ್ಲಿ ಅಲ್ಪಸಂಖ್ಯಾತರು, ಅಶಕ್ತರಿಗೆ ವಿಶೇಷ ಸವಲತ್ತು ಮತ್ತು ರಕ್ಷಣೆ ನೀಡಲಾಗಿದೆ. ಈ ವ್ಯಾಖ್ಯಾನದಡಿ ಮಹಿಳೆಯರು ಬರುತ್ತಾರೆ. ಶೋಷಣೆಗೊಳಗಾಗುತ್ತಿರುವ ವರ್ಗವಿದು. ಸಂವಿಧಾನದ ಆಶಯಕ್ಕೆ ತಕ್ಕಂತೆ ಮಹಿಳಾ ಆಯೋಗ ರಚಿಸಲಾಗಿದೆ. ಆದರೆ, ಪುರುಷರು ಮಹಿಳೆಯರಂತೆ ಶೋಷಣೆಗೊಳಪಟ್ಟಿಲ್ಲ. ಇದ್ದರೂ ಇಂಥ ಪ್ರಕರಣಗಳ ಸಂಖ್ಯೆ ತೀರಾ ಕಡಿಮೆ. ಇವುಗಳನ್ನೇ ಆಧರಿಸಿ ಪುರುಷ ಆಯೋಗ ರಚಿಸುವುದು ಮಹಿಳಾ ಸ್ವಾತಂತ್ರ್ಯ ಮತ್ತು ಮಹಿಳೆಯರ ರಕ್ಷಣೆಯನ್ನು ವಿರೋಧಿಸಿದಂತೆ.

ತನ್ನ ಅಸ್ತಿತ್ವಕ್ಕಾಗಿ ಹೆಂಡತಿ, ಗಂಡನ ಜತೆ ಜಗಳವಾಡುವುದು ಶೋಷಣೆ ಅಲ್ಲ. ಆದರೆ, ಗಂಡ ಕುಡಿದು ಬಂದು ಹೆಂಡತಿಗೆ ಹೊಡೆಯುವುದು, ಮನೆಗೆ ಏನೂ ತಂದು ಹಾಕದಿರುವುದು, ಹೆಂಡತಿಯನ್ನು ನಿರ್ಲಕ್ಷಿಸುವುದು ಶೋಷಣೆ. ವರದಕ್ಷಿಣೆ ವಿರೋಧಿ ಕಾಯ್ದೆಯಷ್ಟೇ ಅಲ್ಲ ಯಾವುದೇ ಕಾಯ್ದೆ ತೆಗೆದುಕೊಂಡರೂ  ತುಸು ಪ್ರಮಾಣದಲ್ಲಿ ದುರುಪಯೋಗ ಆಗುತ್ತಲೇ ಇರುತ್ತದೆ. ಆದರೆ, ಅದರ ಪ್ರಮಾಣ ಕಡಿಮೆ. ಹಾಗಾಗಿ, ಅದಕ್ಕಾಗಿಯೇ ಪುರುಷ ಆಯೋಗ ರಚಿಸುವ ಅಗತ್ಯವಿಲ್ಲ. ದೌರ್ಜನ್ಯಕ್ಕೊಳಗಾಗಿರುವ ಪುರುಷ ಅಶಕ್ತ ಅಲ್ಲ. ಅವನು ಕಾನೂನು ಹೋರಾಟ ಮಾಡಬಲ್ಲ. ಹಿಂದೂ ವಿವಾಹ ಕಾಯ್ದೆ ಪ್ರಕಾರ ಗಂಡನಾದವನು ವಿಚ್ಛೇದನ ಪಡೆಯಬಹುದು. ಶತಮಾನಗಳಿಂದ ಹೆಣ್ಣು ಈ ರೀತಿಯ ಶೋಷಣೆಗಳನ್ನು ಸಹಿಸಿಕೊಂಡಿದ್ದಾಳೆ. ಸಂಸಾರ– ಮಕ್ಕಳ ದೃಷ್ಟಿಯಿಂದ ಗಂಡಸೂ ಸ್ವಲ್ಪ ನೋವು ಸಹಿಸಿಕೊಳ್ಳಬೇಕು ಎಂಬುದು ನನ್ನ ಅಭಿಪ್ರಾಯ.

–ಎಚ್.ವಿ.ಮಂಜುನಾಥ್, ವಕೀಲರು, ಹೈಕೋರ್ಟ್

* * * *


ಕುಮಾರ್‌ ಜಾಗೀರ್‌ದಾರ್‌

 

ನಮಗೂ ಪ್ರತ್ಯೇಕ ಆಯೋಗಬೇಕು

ಸಂವಿಧಾನದಲ್ಲಿ ಹೆಣ್ಣು ಮತ್ತು ಗಂಡು ಇಬ್ಬರಿಗೂ ಸಮಾನ ಹಕ್ಕಿದೆ. ಎಲ್ಲಾ ಪುರುಷರೂ ಕೆಟ್ಟವರಲ್ಲ. ಹಾಗಂತ ಎಲ್ಲಾ ಮಹಿಳೆಯರೂ ಒಳ್ಳೆಯವರಂತಲ್ಲ. ನಗರಗಳಲ್ಲಿ ಶೇ 75ರಷ್ಟು ಮಂದಿ ವಿದ್ಯಾವಂತ ಮಹಿಳೆಯರಿದ್ದಾರೆ. ಅವರಿಗೆ ಕಾನೂನು ತಿಳಿವಳಿಕೆಯೂ ಇದೆ. ಆದರೆ, ಕೆಲ ಮಹಿಳೆಯರು ಕೌಟುಂಬಿಕ ದೌರ್ಜನ್ಯ ಕಾಯ್ದೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇದರಿಂದ ಅಮಾಯಕರು ನೋವು ಅನುಭವಿಸುತ್ತಿದ್ದಾರೆ.

ಪ್ರಾಣಿಪಕ್ಷಿಗಳಿಗೂ ಆಯೋಗವಿದೆ. ಆದರೆ, ಪುರುಷರಿಗೆ ಯಾವ ಆಯೋಗವಿದೆ ಹೇಳಿ? ನಮ್ಮ ಪಾಡು ಪ್ರಾಣಿಗಳಿಗಿಂತಲೂ ಕಡೆ. ಪತ್ನಿ ಪೀಡಕರ ಪ್ರಕರಣಗಳನ್ನು ಮಹಿಳಾ ಆಯೋಗಕ್ಕೆ ಒಯ್ದರೆ ಅವರು ಇದು ನಮ್ಮ ವ್ಯಾಪ್ತಿಗೆ ಬರೋದಿಲ್ಲ ಅಂತಾರೆ. ನಾವು ಎಲ್ಲಿಗೆ ಹೋಗಬೇಕು? ಆತ್ಮಹತ್ಯೆ ಪ್ರಕರಣಗಳಲ್ಲಿ ವಿವಾಹಿತ ಪುರುಷರ ಸಂಖ್ಯೆ ಹೆಚ್ಚಿವೆ ಎಂದು ಅಂಕಿ– ಅಂಶಗಳು ಹೇಳುತ್ತವೆ. ಶೋಷಣೆಗೆ ಲಿಂಗತಾರತಮ್ಯವಿಲ್ಲ. ಹೆಂಡತಿಯಿಂದ ಶೋಷಣೆಗೀಡಾದ ಗಂಡ ದೂರು ಕೊಡಲು ಹೋದರೆ, ಪೊಲೀಸರೇ ನಗುತ್ತಾರೆ. ನೊಂದ ಪುರುಷರ ಸಮಸ್ಯೆ ಆಲಿಸಲು ಪುರುಷ ಆಯೋಗ ಬೇಕು ಅನ್ನೋದು ನನ್ನ ಅಭಿಮತ.

–ಕುಮಾರ್ ಜಾಗೀರ್‌ದಾರ್, ಪುರುಷರಪರ ಹೋರಾಟಗಾರ


ಡಾ.ಸುನೀತಾ ರಾವ್‌, ಆಪ್ತ ಸಮಾಲೋಚಕಿ

ಪರಸ್ಪರ ಚರ್ಚೆ ಇರಲಿ

ತಮ್ಮ ಮೇಲಿನ ಶೋಷಣೆಗಳನ್ನು ಹೇಳಿಕೊಳ್ಳಲು ಪುರುಷರು ಹಿಂಜರಿಯುತ್ತಾರೆ. ಹೆಣ್ಣುಮಕ್ಕಳಂತೆ ಅವರು ತಮ್ಮ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳುವುದಿಲ್ಲ. ನಮ್ಮದು ಪುರುಷ ಪ್ರಧಾನ ಸಮಾಜವಾದ್ದರಿಂದ ಎಲ್ಲಿ ತಮ್ಮ ಗೌರವಕ್ಕೆ ಕುಂದು ಉಂಟಾಗುತ್ತದೋ ಎಂಬ ಆತಂಕ ಅವರಿಗಿರುತ್ತದೆ. ಕೆಲ ಪುರುಷರು ಪುರುಷಾಹಂಕಾರದ ಕಾರಣಕ್ಕಾಗಿಯೂ ಶೋಷಣೆ ಬಗ್ಗೆ ಮಾತನಾಡುವುದಿಲ್ಲ. ಗಂಡಸರು ಮಾಡುವ ಶೋಷಣೆಗಳನ್ನೇ ಹೆಣ್ಣು ಮಕ್ಕಳೂ ಮಾಡುತ್ತಿದ್ದಾರೆ. ಅದನ್ನು ಅಲ್ಲಗಳೆಯಲಾಗದು. ಈಗ ಹೆಣ್ಣುಮಕ್ಕಳ ಸ್ಥಿತಿ ಹಿಂದಿನಂತಿಲ್ಲ. ಒಳ್ಳೆಯ ಕೆಲಸ, ಆರ್ಥಿಕ ಸ್ವಾವಲಂಬನೆ ಬಂದಿದೆ. ಬರೀ ಹೆಣ್ಣು ಅನ್ನುವ ಕಾರಣಕ್ಕಾಗಿಯೇ ಅವಳಿಗೆ ಬೆಂಬಲ ನೀಡುವುದು ಸರಿಯಲ್ಲ. ಗಂಡು– ಹೆಣ್ಣು ಇಬ್ಬರಲ್ಲಿ ತಪ್ಪು ಯಾರದ್ದೇ ಆಗಿದ್ದರೂ ಅವರಿಗೆ ಶಿಕ್ಷೆಯಾಗಬೇಕು. ಗಂಡಂದಿರ ಒಳ್ಳೆಯತನವನ್ನು ಹೆಂಡತಿಯರು ದುರುಪಯೋಗಪಡಿಸಿಕೊಂಡ ಪ್ರಕರಣಗಳೂ ಇವೆ. ಗಂಡ–ಹೆಂಡತಿ ಮಾತುಕತೆ ಮೂಲಕ ಈ ರೀತಿಯ ಸಮಸ್ಯೆಗಳಣ್ನು ಬಗೆಹರಿಸಿಕೊಳ್ಳಬೇಕು. ಮುಖ್ಯವಾಗಿ ಇಬ್ಬರ ನಡುವೆ ಉತ್ತಮ ಸಂವಹನ ಇರಲೇಬೇಕು. ಸಂವಹನದ ಕೊರತೆಯೇ ಎಷ್ಟೋ ಬಾರಿ ಸಮಸ್ಯೆಗಳಿಗೆ ಮೂಲ ಕಾರಣ.

– ಡಾ. ಸುನೀತಾ ರಾವ್, ಆಪ್ತ ಸಮಾಲೋಚಕಿ

 

ಬರಹ ಇಷ್ಟವಾಯಿತೆ?

 • 15

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !