ಆಧುನಿಕ ಭಕ್ತಿ ಮೀಮಾಂಸೆ

7

ಆಧುನಿಕ ಭಕ್ತಿ ಮೀಮಾಂಸೆ

Published:
Updated:
Prajavani

ಭಕ್ತಿಯನ್ನು ಅನಿವರ್ಚನೀಯವಾದ ಆಧ್ಯಾತ್ಮಿಕ ಅನುಭವವೆಂದು ಬಣ್ಣಿಸಲಾಗುತ್ತದೆ. ಸಾಧಾರಣವಾಗಿ, ಮಧ್ಯಕಾಲೀನ ಭಾರತವೆಂದು ಇತಿಹಾಸಕಾರರು ವಿಂಗಡಿಸಿದ, ನಮ್ಮ ದೇಶ-ಕಾಲದ ನಿರ್ದಿಷ್ಟತೆಯಲ್ಲಿ ಸಂಭವಿಸಿದ ವಿಭಿನ್ನ ಬಗೆಯ ಆಧ್ಯಾತ್ಮಿಕ- ಸಾಮಾಜಿಕ ಚಳವಳಿಗಳ ಅನುಭಾವೀ ಸಂತರ ತತ್ವಜ್ಞಾನೀಯ ದರ್ಶನಗಳಲ್ಲಿ ಭಕ್ತಿಯ ವಿಶಿಷ್ಟ ಅಭಿವ್ಯಕ್ತಿಗಳನ್ನು ಗುರುತಿಸಲಾಗಿದೆ. ಆದರೆ, ಭಕ್ತಿ ದೇಶ-ಕಾಲ ಸ್ವತಂತ್ರವಾದುದು. ಅದನ್ನು ಭಾರತದ ಭಕ್ತಿ ಎಂದು ದೇಶ ನಿರ್ದಿಷ್ಟಗೊಳಿಸುವುದಾಗಲೀ ಅಥವಾ ಮಧ್ಯಯುಗದ ಭಕ್ತಿ ಎಂದು ಕಾಲ ನಿರ್ದಿಷ್ಟಗೊಳಿಸುವುದಾಗಲೀ ತಾತ್ವಿಕವಾಗಿ ಅಷ್ಟು ಸಮರ್ಪಕವಾದುದಲ್ಲ.

ಭಕ್ತಿಯನ್ನು ಕುರಿತು ನಾವೆಲ್ಲರೂ ನಡೆಸುವ ಜಿಜ್ಞಾಸೆಯಲ್ಲಿ ಸುಲಭದಲ್ಲಿ ಪರಿಹರಿಸಿಕೊಳ್ಳಲಾಗದ ಪ್ರಮುಖ ತೊಡಕು ಇದೆ. ಅದು ಗತಕಾಲವನ್ನು ಚಾರಿತ್ರಿಕವಾಗಿ ಪುನರ್‌ ರಚಿಸುವ ತೊಡಕು. ಉದಾಹರಣೆಗೆ, ಮಧ್ಯಕಾಲೀನ ಭಾರತದಲ್ಲಿ ಸಂಭವಿಸಿತು ಎಂದು ನಾವು ತಿಳಿಯುವ ಭಕ್ತಿಯ ಯಾವುದೇ ನಿದರ್ಶನವನ್ನು ನಾವು, ನಮ್ಮ ಕಾಲ ನಮಗೆ ಹಾಕಿ ಕೊಡುವ ಗಡಿರೇಖೆಗಳ ಪರಿಮಿತಿಯಲ್ಲಿಯೇ ಗ್ರಹಿಸಿ ಅರ್ಥಮಾಡಿಕೊಳ್ಳುತ್ತೇವೆ. ಆದರೆ, ಕಾಲದ ಗಡಿರೇಖೆಗಳು ಕೇವಲ ಕಾಲಮಾನಗಳಾಗಿರದೆ ಅವು ಸೈದ್ಧಾಂತಿಕ ದೃಷ್ಟಿಕೋನಗಳೂ ಆಗಿರುತ್ತವೆ. ಆದ್ದರಿಂದಲೇ ಕಬೀರ- ಅಲ್ಲಮ- ಅಕ್ಕ- ಕನಕನ ಕುರಿತು ನಾವು ನಡೆಸುವ ಚರ್ಚೆಗಳು, ಮುಂದಿಡುವ ಪ್ರತಿಪಾದನೆಗಳು ಹಾಗೂ ಆರೋಪಿಸುವ ಆಶೋತ್ತರಗಳು ನಮ್ಮ ಕಾಲದಲ್ಲಿ ನಮ್ಮನ್ನು ಪ್ರಭಾವಿಸಿದ ಸೈದ್ಧಾಂತಿಕ ದೃಷ್ಟಿಕೋನಗಳ ಪ್ರತಿಫಲನಗಳೇ ಆಗಿರುತ್ತವೆ.

ನಮ್ಮ ಕಾಲದ ನೆತ್ತಿ ಸುಡುವ ವಾಸ್ತವಗಳಿಗೆ ಪರಿಹಾರಗಳನ್ನು ಭಕ್ತಸಂತರಲ್ಲಿ ಕಂಡುಕೊಳ್ಳುವುದು ಅಸಮರ್ಪಕವಲ್ಲ.  ಆ ಸಂತರು ಬದುಕಿದ ಕಾಲ- ಸಮಾಜ- ಸಂಸ್ಕೃತಿ ಮತ್ತು ರಾಜಕಾರಣಗಳಿಗೂ ನಾವು ಇಂದು ಬದುಕುತ್ತಿರುವ ಕಾಲ- ಸಮಾಜ- ಸಂಸ್ಕೃತಿ ಹಾಗೂ ರಾಜಕಾರಣಗಳಿಗೂ ಅಗಾಧವಾದ ವ್ಯತ್ಯಾಸವಿದೆ. ಅವರ ಜ್ಞಾನಮೀಮಾಂಸೆಯ ಸ್ವರೂಪಕ್ಕೂ; ನಮ್ಮ ಕಾಲದ ಅರಿವಿನ ವಿನ್ಯಾಸಗಳಿಗೂ ನಡುವೆ ಆಳವಾದ ಕಂದಕಗಳಿವೆ. ಆದ್ದರಿಂದ ಕನಕ- ಬಸವಾದಿಗಳಂತಹ ಸಂತ ಭಕ್ತರನ್ನು ನಮ್ಮ ಕಾಲದ ಕಾಯಿಲೆ-ಕಸಾಲೆಗಳಿಗೆ ಔಷಧವಾಗಿ ತರುವಾಗ ಜ್ಞಾನಮೀಮಾಂಸೆಯ ಈ ಮಹತ್ವದ ಅಂತರಗಳನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು.

ಮಧ್ಯಕಾಲೀನ ಭಾರತದಲ್ಲಿ ಕಾಣಿಸಿಕೊಂಡ ಭಕ್ತಿ ಪ್ರತಿನಿಧಿಸುವ ಆಧ್ಯಾತ್ಮಿಕತೆ, ವಿಶ್ವವಿಮುಖವಾದ ಆಧ್ಯಾತ್ಮಿಕತೆಯಲ್ಲ. ಆ ಪರಂಪರೆಯ ಸಂತರು ಇಹಲೋಕದ ವಹಿವಾಟು ತ್ಯಜಿಸಿ ವಿರಕ್ತರಾಗಿ ತಪಸ್ಸು ಮಾಡಿದವರಲ್ಲ. ಅವರು ಸಂಸಾರವೆಂಬ ಸಾಗರದಲ್ಲಿ ಈಜಿಕೊಂಡೇ ಆಧ್ಯಾತ್ಮಿಕ ಸಾಧನೆಗಳನ್ನು ನಡೆಸಿದವರು. ಅವರ ಆಧ್ಯಾತ್ಮಿಕತೆ ಇಹಲೋಕದ ಜಂಜಾಟಗಳಲ್ಲಿ ಮೂಡಿಬಂದಿರುವಂತಹುದು. ಲೌಕಿಕತೆಯಲ್ಲಿ ಆಳವಾಗಿ ಬೇರೂರಿರುವಂತಹುದು. ತಮ್ಮ ಕಾಲದ ಸಮಾಜ, ರಾಜಕಾರಣ ಹಾಗೂ ಸಂಸ್ಕೃತಿಗಳ ಕಟುವಿಮರ್ಶೆಯಲ್ಲಿ ಅವರ ಆಧ್ಯಾತ್ಮಿಕತೆ ಮೈತಳೆದಿದೆ. ಆದ್ದರಿಂದಲೇ, ಇವರೆಲ್ಲರೂ ಸಾಮಾಜಿಕ ಕೆಡುಕುಗಳ ವಿರುದ್ಧ ಪ್ರತಿಭಟನೆಯ ಸ್ವರ ಎತ್ತಿದರು. ಅಧಿಕಾರಶಾಹಿ ರಾಜಕಾರಣದ ಅಬ್ಬರವನ್ನು ಧಿಕ್ಕರಿಸಿದರು ಮತ್ತು ಸಂಪತ್ತಿನ ಕ್ರೋಡೀಕರಣವನ್ನು ನಿರಾಕರಿಸಿದರು.

ಭಕ್ತಿ ಪರಂಪರೆಯ ಸಂತರು ತಮ್ಮ ತತ್ವಜ್ಞಾನೀಯ ಸಂಕಥನಗಳಲ್ಲಿ ಧರ್ಮ- ಕರ್ಮಗಳ ಕುರಿತ ಅಪೂರ್ವ ಜಿಜ್ಞಾಸೆ ನಡೆಸಿ ಧರ್ಮವನ್ನು ಸೂಕ್ಷ್ಮಗೊಳಿಸಿದ್ದಾರೆ. ಧರ್ಮಸೂಕ್ಷ್ಮದ ಮಹತ್ವದ ಪ್ರಶ್ನೆಗಳನ್ನು ನಮ್ಮ ತಲೆ ಮೇಲೆ ಹೊರಿಸಿ; ಹೊರೆ ಹೊತ್ತವರು ನಿಧಾನವಾಗಿ ನಡೆಯುವಂತೆ ನಮಗೆ ನಿಧಾನಗತಿಯನ್ನು ಬೋಧಿಸಿದ್ದಾರೆ. ಇವರು ಪ್ರತಿಪಾದಿಸಿದ ಭಕ್ತಿಯ ನೆಲೆಗಟ್ಟಿನಿಂದ ಹೊರಹೊಮ್ಮುವ ಧರ್ಮ ಏಕಕಾಲದಲ್ಲಿ ವೈಯಕ್ತಿಕವೂ ಹೌದು. ಸಾಮುದಾಯಿಕವೂ ಹೌದು.

ಭಕ್ತಿ ಪರಂಪರೆಗಳ ಆಧ್ಯಾತ್ಮಿಕತೆಯ ಅನೇಕ ಎಳೆಗಳು ಮತ್ತು ಸಾಮುದಾಯಿಕತೆಯ ಅನೇಕ ಸೆಲೆಗಳು ನಮ್ಮ ಕಾಲಕ್ಕೂ ಹರಿದು ಬಂದಿವೆ ಎಂದು ತಿಳಿಯುವುದಾದರೆ ಅವುಗಳನ್ನು ನಾವು ಇಂದಿನ ನಮ್ಮ ಕಾಲದ ವಾಸ್ತವದ ನಿರ್ದಿಷ್ಟತೆಯಲ್ಲಿ ಮರುಸಂಘಟಿಸಿಕೊಳ್ಳಬೇಕಾಗುತ್ತದೆ. ಹೀಗೆ ಮರುಸಂಘಟಿಸುವಾಗ ಭಕ್ತಿ ಮಾರ್ಗದ ಹೊಸ ರೂಪ ಮತ್ತು ಮಾದರಿಗಳು ಆಧುನಿಕ ಕಾಲದಲ್ಲೂ ಕಂಡುಬರುತ್ತವೆ. ನಮ್ಮ ಕಾಲದಲ್ಲಿ ಭಕ್ತಿಯನ್ನು ಮರುಶೋಧಿಸುವ ಪ್ರಯತ್ನ ಮಾಡುವಾಗ ಭಕ್ತಿಯ ಕುರಿತ ಇದುವರೆಗಿನ ಅದರ ನಿಶ್ಚಿತಾರ್ಥಗಳನ್ನು ಒಡೆದು ಅದನ್ನು ಅಸಂಖ್ಯಾತ ಅರ್ಥ-ನಿರೂಪಣೆಯ ಸಾಧ್ಯತೆಗಳಿಗೆ ತೆರೆದಿಡಬೇಕಾಗುತ್ತದೆ. ಆಗ ನಮ್ಮ ಕಾಲದಲ್ಲಿ ಭಕ್ತಿಯ ಅರ್ಥವೇನು? ಮತ್ತು ಅದರ ಪ್ರಕಟರೂಪಗಳಾವುವು? ಎನ್ನುವ ಹಳೆಯ ಸರಳ ಪ್ರಶ್ನೆಯನ್ನು ಮತ್ತೆ ಹೊಸದಾಗಿ ಕೇಳಬೇಕಾಗಿದೆ.

ಭಕ್ತಿ ಎನ್ನುವುದು ಒಂದು ಅನುಪಮವಾದ. ಆದರೆ, ಈ ಲೋಕದಲ್ಲಿಯೇ ಸಂಭವಿಸುವ ಆಧ್ಯಾತ್ಮಿಕ ಅನುಭೂತಿ ಎಂದಾದರೆ ನಮ್ಮ ಕಾಲದ ಕೆಲವು ಚಿಂತಕರ ತತ್ವದರ್ಶನಗಳಲ್ಲಿ ಭಕ್ತಿಯ ಎಸಳುಗಳಿಲ್ಲವೇ? ಇದ್ದರೆ, ಈ ಆಧುನಿಕ ಚಿಂತಕರನ್ನು ನಮ್ಮ ಕಾಲದ ಭಕ್ತಿಯ ದೃಷ್ಟಾರರೆಂದು ಭಾವಿಸಬಹುದೇ?

ಈ ಹಿನ್ನೆಲೆಯಲ್ಲಿ ನಮ್ಮ ಕಾಲದ ನಾಲ್ವರು ಮೇಧಾವಿ ಚಿಂತಕರನ್ನು ಭಕ್ತಿಯ ಆಧುನಿಕ ದೃಷ್ಟಾಂತಗಳನ್ನಾಗಿ ನೋಡಬೇಕು. ಮಾರ್ಕ್ಸ್, ಗಾಂಧಿ, ಅಂಬೇಡ್ಕರ್ ಹಾಗೂ ಲೋಹಿಯಾ ಇವರೇ ಈ ಚಿಂತಕರು.

ಮಾರ್ಕ್ಸ್‌ನಲ್ಲಿ ಕಂಡುಬರುವ ಚರಿತ್ರೆಯ ತತ್ವದರ್ಶನ, ಗಾಂಧೀಜಿಯವರಲ್ಲಿ ಕಾಣಿಸುವ ಸ್ವರಾಜ್ಯದ ಕನಸು, ಅಂಬೇಡ್ಕರರು ಮುಂದಿಡುವ ಸಮಾನತೆಯ ನೆಲೆಯ ವಿಶ್ವದೃಷ್ಟಿ ಹಾಗೂ ಲೋಹಿಯಾ ಪ್ರತಿಪಾದಿಸುವ ಸತ್ಯಾಗ್ರಹಿ ಸಮಾಜವಾದ ಭಕ್ತಿಯ ಆಧುನಿಕ ರೂಪಗಳಾಗಿ ನಮಗೆ ಕಾಣಿಸುತ್ತವೆ.

ಕಾರ್ಲ್‍ಮಾರ್ಕ್ಸ್‌ನ ತತ್ವಜ್ಞಾನೀಯ ಸಂಕಥನದಲ್ಲಿ ಇತಿಹಾಸದ ಜಿಜ್ಞಾಸೆ ಪ್ರಮುಖವಾದುದು. ಮಾರ್ಕ್ಸ್ ಮುಂದಿಡುವ ಮಾನವ ಇತಿಹಾಸದ ಪ್ರತಿಪಾದನೆಯಲ್ಲಿ ಭಕ್ತಿ ಜಿಜ್ಞಾಸೆಗೆ ಮುಖ್ಯವಾಗಬಹುದಾದ ಬೆಳಕು ಇದೆ. ಅದು ಮಾನವನ ಇತಿಹಾಸ. ಅಂತಿಮವಾಗಿ ತಲುಪುವ ಸಾಮ್ಯ ಸ್ಥಿತಿಯ ಕನಸಿಗೆ ಸಂಬಂಧಿಸಿದ್ದು.

ಅಚಲವಾದ ಧಾರ್ಮಿಕ ಶ್ರದ್ಧೆಯನ್ನು ಮತ್ತು ದೈವ ಭಕ್ತಿಯನ್ನೂ ಮೆರೆದ ಗಾಂಧಿ, ಭಕ್ತಿಯ ಎರಡನೆಯ ಆಧುನಿಕ ದೃಷ್ಟಾಂತ. ಭಕ್ತಿಯ ಸಮಕಾಲೀನತೆಯ ಕುರಿತಾದ ನಮ್ಮ ಚಿಂತನೆಗೆ ಗಾಂಧೀಜಿಯ ನೈತಿಕ ರಾಜಕೀಯ ತತ್ವಶಾಸ್ತ್ರದ ಎರಡು ಅಂಶಗಳು ಬಹುಮುಖ್ಯವಾಗುತ್ತವೆ. ಅವು ಸತ್ಯಾಗ್ರಹ ಮತ್ತು ಸ್ವರಾಜ್ಯಗಳೆನ್ನುವ ಅವಳಿ ತತ್ವಗಳು.

ಗಾಂಧೀಜಿ ಪ್ರಕಾರ ಸತ್ಯ ತನ್ನ ನಿಜಸ್ವರೂಪದಲ್ಲಿ ಸರಳವೂ, ಸರ್ವವ್ಯಾಪಿಯೂ ಮತ್ತು ಸಾರ್ವಕಾಲಿಕವೂ ಆಗಿದ್ದರೂ ಮಾನವ ಅದನ್ನು ಸಾಕ್ಷಾತ್ಕರಿಸಿಕೊಳ್ಳುವುದು ತನ್ನ ದಿನನಿತ್ಯದ ಬಾಳ್ವೆಯ ನಡೆ- ನುಡಿಗಳಲ್ಲಿ. ಈ ಅರ್ಥದಲ್ಲಿ ಗಾಂಧಿ ಚಲನಶೀಲ ಸತ್ಯದ ಪ್ರತಿಪಾದಕರು.

ಭಾರತದಂತಹ ಅಸಮಾನ ಸಮಾಜದಲ್ಲಿ ಮನುಷ್ಯನ ಘನತೆ- ಗೌರವಗಳಿಗಾಗಿ ಪರಿತಪಿಸಿದ ಅಂಬೇಡ್ಕರ್, ಭಕ್ತಿಯ ನಮ್ಮ ಕಾಲದ ಇನ್ನೊಂದು ನಿದರ್ಶನ. ತಮ್ಮ ಜೀವಮಾನದುದ್ದಕ್ಕೂ ಎಲ್ಲರನ್ನೂ ಒಳಗೊಳ್ಳುವ, ಎಲ್ಲರಿಗೂ ಸಮಾನಾವಕಾಶಗಳನ್ನು ನೀಡುವ ಸಮಾಜದ ನಿರ್ಮಾಣಕ್ಕಾಗಿ ಸಂಘರ್ಷ ನಡೆಸಿದ ಅಂಬೇಡ್ಕರ್, ಭಾರತದ ಕಬೀರ್ ಪಂಥೀಯ ಭಕ್ತಿಪರಂಪರೆಯ ಆಧುನಿಕ ಕೊಂಡಿಯೂ ಹೌದು.

ಲೋಹಿಯಾ ನಮ್ಮ ಕಾಲದ ಭಕ್ತಿಯ ಮತ್ತೊಂದು ಉಜ್ವಲ ನಿದರ್ಶನ. ಸಮುದಾಯಗಳನ್ನು ಸಂಘಟಿಸುವ ಶಕ್ತಿ ಹಾಗೂ ಜನರಲ್ಲಿ ಚಾರಿತ್ರ್ಯಶೀಲತೆ ತುಂಬಲು ಸಹಾಯಕವಾಗುತ್ತದೆ ಎಂಬ ಕಾರಣಕ್ಕೆ ಲೋಹಿಯಾರಿಗೆ ಧರ್ಮ ಬಲುಮಾನ್ಯ.

ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಸರ್ಕಾರವನ್ನು ಮತ್ತು ಪ್ರಜಾಪ್ರತಿನಿಧಿಗಳನ್ನು ನಿರಂತರವಾಗಿ ಪ್ರಶ್ನಿಸುವ, ಪ್ರತಿರೋಧಿಸುವ ಅಧಿಕಾರ ಪ್ರಜೆಗಳಿಗಿದೆ ಎಂದು ತಿಳಿಯುವ ಲೋಹಿಯಾ ಸತ್ಯಾಗ್ರಹಿ ಸಮಾಜವಾದದ ಪ್ರತಿಪಾದಕರು. ಈ ಸತ್ಯಾಗ್ರಹಿ ಸಮಾಜದ ಕಲ್ಪನೆಯೇ ಪ್ರಜಾತಂತ್ರದ ಆಧ್ಯಾತ್ಮಿಕ ಕೇಂದ್ರ ಬಿಂದುವಲ್ಲವೆ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !