ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೇಖನಕ್ಕೆ ಪ್ರತಿಕ್ರಿಯೆ| ದ್ರಾವಿಡ ಸಂಸ್ಕೃತಿ ಮೇಲಿನ ಆಕ್ರಮಣ

ಅಕ್ಷರ ಗಾತ್ರ

ದ್ರಾವಿಡರ ಆತ್ಮ ಗೌರವ ಮತ್ತು ಉತ್ತರ ಭಾರತದ ಹಿಂದಿ ಹೇರಿಕೆ ಅರ್ಥಾತ್ ಆರ್ಯ ಆಕ್ರಮಣಶೀಲತೆಯ ಬಗ್ಗೆ ರಾಜೇಂದ್ರ ಪ್ರಸಾದರು ಬರೆದಿರುವ ಲೇಖನ- ಈ ಎರಡು ವಿಭಿನ್ನ ಜನಾಂಗಗಳ ಭಾಷೆ, ಸಂಸ್ಕೃತಿ ಮತ್ತು ದೈನಂದಿನ ಜೀವನ ವಿಧಾನದ ಬಗ್ಗೆ ಕ್ಷಕಿರಣ ಬೀರುತ್ತದೆ (ಜೂನ್ 9ರ ಭಾನುವಾರದ ಪುರವಣಿ ಸಂಚಿಕೆ).

ಹಿಂದಿನ ಬೃಹತ್ ಭಾರತದ (ಇಂದಿನ ಪಾಕಿಸ್ತಾನ, ಆಘ್ಗಾನಿಸ್ತಾನ, ಮಯನ್ಮಾರ್ ಅಥವಾ ಬರ್ಮಾ, ಬಾಂಗ್ಲಾದೇಶ, ಥಾಯ್ಲೆಂಡ್‌ ಸೇರಿದಂತೆ) ಮೂಲ ನಿವಾಸಿಗಳಾದ ಆಸ್ಟ್ರೊಲಾಯಿಡ್ಜ ಜನಾಂಗ ಈ ನೆಲದಿಂದ ವಲಸೆ ಹೋಗಿ ಇಂದಿನ ಆಸ್ಟ್ರೇಲಿಯಾ ಖಂಡದಲ್ಲಿ ತಳವೂರಿದಾಗ ಅದೇ ನೆಲಕ್ಕೆ ಅಂದರೆ ಈ ದೇಶಕ್ಕೆ ಆಫ್ರಿಕಾ ಖಂಡದಿಂದ ವಲಸೆ ಬಂದ ದ್ರಾವಿಡ ಜನಾಂಗ ಮೊದಲು ನೆಲೆಸಿದ್ದು ಸಿಂಧೂ ನದಿಯ ಪ್ರಾಂತ್ಯದಲ್ಲಿ (ಹರಪ್ಪ- ಮೊಹೆಂಜೊದಾರೊ ನಾಗರಿಕತೆ. ಹಾಗೆ ವಲಸೆ ಬಂದ ಕುರುಹಿನ ಪ್ರತೀಕವಾಗಿ ಬಲೂಚಿಸ್ತಾನ್ ಪ್ರದೇಶದಲ್ಲಿ ಇಂದಿಗೂ ಬ್ರಾಹೂಯಿ- ದ್ರಾವಿಡ ಭಾಷೆಯನ್ನಾಡುವ ಬುಡಕಟ್ಟು ಜನರಿದ್ದಾರೆ.)

ಸಿಂಧೂ ಬಯಲಿನ ನಾಗರಿಕತೆಯಲ್ಲಿ ಹೇರಳವಾಗಿ ದ್ರಾವಿಡ ಅಂಶಗಳಿರುವುದನ್ನು ಭಾರತೀಯ ಪುರಾತತ್ವ ತಜ್ಞರಾದ
ಎಸ್.ಆರ್. ರಾವ್, ಮಹದೇವನ್ (ಕ್ರಮವಾಗಿ ಕನ್ನಡ ಮತ್ತು ತಮಿಳು ಕ್ಷೇತ್ರದ ಸಂಶೋಧಕರು), ರಷ್ಯಾದ ಸಂಶೋಧಕರು ಮತ್ತು ವಿಶ್ವಸಂಸ್ಥೆಯ ಸಂಶೋಧಕರು ತಮ್ಮ ಅವಿರತ ಕ್ಷೇತ್ರ ಕಾರ್ಯದಿಂದ ಸಾಬೀತುಪಡಿಸಿದ್ದಾರೆ. ಪುರಾತತ್ವ ಸಂಶೋಧಕರೆಲ್ಲರೂ ಇದನ್ನು ಬಹುಪಾಲು ಒಪ್ಪಿದ್ದಾರೆ. ಈ ಸಂಗತಿ ಹೀಗಿರಲಿ.

ಪ್ರಸ್ತುತಕ್ಕೆ ಬಂದಾಗ ಕುಶಲಕರ್ಮಿಗಳಾದ ಆದರೆ, ಯುದ್ಧ ಪರಿಣತರಲ್ಲದ ದ್ರಾವಿಡ ಸಮುದಾಯ ಉತ್ತರ ಭಾರತದ ಬಹುಪಾಲು ಪ್ರದೇಶಗಳಲ್ಲಿ ತಮ್ಮಷ್ಟಕ್ಕೆ ತಾವು ಜೀವನ ನಡೆಸುತ್ತಿದ್ದಾಗ, ಆಕ್ರಮಣಶೀಲರಾದ ಆರ್ಯ (ಶ್ರೇಷ್ಠ) ಜನಾಂಗದ ಒಂದು ಗುಂಪು ಪರ್ಷಿಯಾ ದೇಶದಿಂದ (ಇಂದಿನ ಇರಾಕ್- ಇರಾನ್ ಪ್ರಾಂತ್ಯಗಳು) ಹೊರಟು ಹಿಂದೂಖುಷ್ ಪರ್ವತದ ಮೂಲಕ ಸಿಂಧೂ ನದಿಯ ಪ್ರಾಂತ್ಯಕ್ಕೆ ಬಂದು ಅಲ್ಲಿನ ನಾಗರಿಕತೆಯನ್ನು ಹತ್ತಿಕ್ಕಿ (ಬಹುಪಾಲು ವಿದ್ವಾಂಸರು ಇದನ್ನು ಒಪ್ಪಿದ್ದಾರೆ ಆದರೆ, ಸಿಂಧೂ ನದಿಯ ಪ್ರವಾಹದಿಂದ ಆ ನಾಗರಿಕತೆ ನಾಶವಾಗಿರಬೇಕೆಂಬುದು ಇನ್ನು ಕೆಲವರ ವಾದ). ಅಲ್ಲಿಂದ, ಅಲ್ಲಿದ್ದ ದ್ರಾವಿಡ ಸಮುದಾಯವನ್ನು ಸೆದೆಬಡಿದಾಗ ಅದು ಇತರೆಡೆ ಚದುರಿತು. ಅಂದರೆ, ಸಿಂಧೂ ನದಿಯ ನಾಗರಿಕತೆಯ ಪ್ರಾಂತ್ಯದಿಂದ ಬೇರೆಡೆಗೆ ಚಲಿಸತೊಡಗಿತು.

ಆಕಾರದಲ್ಲಿ ದಷ್ಟಪುಷ್ಟರಾದ, ದ್ರಾವಿಡ ಸಮುದಾಯಕ್ಕಿಂತ ದೈಹಿಕವಾಗಿ ಮತ್ತು ಕದನದಲ್ಲಿ ಬಲಿಷ್ಠರಾದ, ತಮ್ಮದೇ ಆದ ಸಾಹಿತ್ಯ ಸಂಸ್ಕೃತಿ ಮತ್ತು ಜೀವನ ವಿಧಾನ ಹೊಂದಿದ್ದ ಆರ್ಯರು ಎದುರಾಳಿಗಳ ಮೇಲೆ ಹಿಡಿತ ಸಾಧಿಸತೊಡಗಿದರು. ದೈಹಿಕ ಶಕ್ತಿಯಲ್ಲಿ ಮತ್ತು ಯುದ್ಧ ಕಲೆಯಲ್ಲಿ ಅಷ್ಟಾಗಿ ಪರಿಣತಿ ಹೊಂದಿರದ ದ್ರಾವಿಡರು ಆರ್ಯ ಶಕ್ತಿ, ಸಾಮರ್ಥ್ಯಕ್ಕೆ ಬೆರಗಾಗಿ, ಹಿಂದೆ ಸರಿಯಬೇಕಾಯಿತು.

ಕೆಲವೊಮ್ಮೆ ಅವರ ಆಧಿಕ್ಯವನ್ನು ಅನಿವಾರ್ಯವಾಗಿ ಒಪ್ಪಿಕ್ಕೊಳ್ಳಬೇಕಾಯಿತು. ಇದೇ ಕಾರಣದಿಂದಾಗಿ ದ್ರಾವಿಡರನ್ನು ‘ದಸ್ಯು’ (ಅಡಿಯಾಳು, ಗುಲಾಮ) ಎಂದು ಕರೆಯಲ್ಪಟ್ಟ ದ್ರಾವಿಡರಿಗೂ- ಆರ್ಯರಿಗೂ ನಿರಂತರ ಸಂಘರ್ಷ ಏರ್ಪಟ್ಟಿತು. ಅಧಿಕ ಸಂಖ್ಯೆಯಲ್ಲಿದ್ದ ದ್ರಾವಿಡರು ಕ್ರಮೇಣ ಚೆಲ್ಲಾಪಿಲ್ಲಿಯಾಗಿ ದೂರದ ಪ್ರಾಂತ್ಯಗಳಿಗೆ ಸರಿದರು ಮತ್ತು ಇನ್ನಷ್ಟು ಜನ ಅರಣ್ಯವಾಸಿಗಳಾಗಿ ಬುಡಕಟ್ಟು ಜನರೆಂದೆನಿಸಿದರು.

ಈ ಕಾರಣವೆ 29 ದ್ರಾವಿಡ ಭಾಷೆಗಳನ್ನಾಡುವ ಜನರು ಇಂದು ಉತ್ತರ ಭಾರತದಿಂದ ಹಿಡಿದು ದಕ್ಷಿಣದ ತುದಿಯವರೆಗೂ ಇದ್ದಾರೆ. ಪರಿಚಿತವಾದ ಕನ್ನಡ, ತಮಿಳು, ತೆಲುಗು, ಮಲಯಾಳ, ತುಳು ಈ ಕೆಲವಾರು ಭಾಷೆಗಳು ದಕ್ಷಿಣ ಭಾರತದಲ್ಲಿ ಪ್ರಮುಖವಾಗಿವೆ. ಮುಂಡ, ಕೋಲ, ಗೋಂಡಿ ಈ ಮೊದಲಾದ ಅಕ್ಷರ ಮಾಲೆ ಇಲ್ಲದ ದ್ರಾವಿಡ ಭಾಷಾ ಸಮುದಾಯದ ಬುಡಕಟ್ಟುಗಳು ಇಂದಿಗೂ ಉತ್ತರ ಭಾರತದಲ್ಲಿವೆ.

ಸಶಸ್ತ್ರಧಾರಿಗಳು, ಬಲಿಷ್ಠರೂ ಆದ ಸಂಸ್ಕೃತ ಸಾಹಿತ್ಯ ಸಂಪನ್ನತೆಯಿಂದ ಕೂಡಿದ ಅಲ್ಪಸಂಖ್ಯಾತರಾದ ಆರ್ಯರು, ದ್ರಾವಿಡ ಬಹುಸಂಖ್ಯಾತರನ್ನು ಉತ್ತರ ಭಾರತದಿಂದ ಓಡಿಸಿದ ಪರಿಣಾಮವೇ ಇಂದು ವಿಂಧ್ಯ ಪರ್ವತದ ಕೆಳ ಪ್ರದೇಶ ಅಥವಾ ದಕ್ಷಿಣ ಪ್ರಸ್ತಭೂಮಿಯಿಂದ ಕೆಳಭಾಗದಲ್ಲಿ ದ್ರಾವಿಡ ಸಮುದಾಯ ಅಧಿಕವಾಗಿರುವ ಕನ್ನಡ ನಾಡೇ ಮೊದಲಾದ ಪ್ರದೇಶಗಳಿವೆ. ಇಲ್ಲಿನ ಸಮುದಾಯಗಳು ದ್ರಾವಿಡ ಜನ್ಯ ಭಾಷೆ, ಸಾಹಿತ್ಯ- ಸಂಸ್ಕೃತಿಯನ್ನು ಬಹು ಜನತದಿಂದ ಕಾಪಾಡಿಕೊಂಡು ಬಂದಿವೆಯಾದರೂ ಆರ್ಯ ಸಾಹಿತ್ಯ- ಸಂಸ್ಕೃತಿಯಿಂದ ಸಾಕಷ್ಟು ಪ್ರಭಾವ ಹೊಂದಿರುವುದನ್ನು ನಾವು ಢಾಳಾಗಿ ಗುರುತಿಸಬಹುದಾಗಿದೆ.

ಆದರೆ, ಉತ್ತರ ಭಾರತದ ದ್ರಾವಿಡ ಬುಡಕಟ್ಟುಗಳ ಆಡು ಭಾಷೆಗಳು ತಮ್ಮ ಮೂಲ ನುಡಿಗಟ್ಟುಗಳನ್ನು ಉಳಿಸಿಕೊಂಡಿದ್ದರೂ ಸಂಸ್ಕೃತ ಜನ್ಯ ಭಾಷೆಗಳ ಪ್ರಭಾವಕ್ಕೆ ಒಳಗಾಗಿರುವುದನ್ನು ಕಾಣಬಹುದು. ಅಲ್ಲದೇ, ಜನವಸತಿ ಅಧಿಕವಾಗಿರುವ ಗ್ರಾಮ, ನಗರ, ಪಟ್ಟಣ ಮೊದಲಾದ ಪ್ರದೇಶಗಳಲ್ಲಿ ವ್ಯಾಪಕವಾಗಿ ಬಳಕೆಯಲ್ಲಿದ್ದ ದ್ರಾವಿಡ ಜನ್ಯ ಭಾಷೆಗಳು ಕ್ರಮೇಣ ಸಂಸ್ಕೃತ ಜನ್ಯ ಭಾಷೆಗಳಿಗೆ ಎಡೆಮಾಡಿಕೊಟ್ಟು ಸಂಪೂರ್ಣವಾಗಿ ಇಂದು ಇಲ್ಲವಾಗಿವೆ.

ಇದಕ್ಕೊಂದು ಉತ್ತಮ ಉದಾಹರಣೆಯೆಂದರೆ- ಬಹು ಹಿಂದಿನಿಂದಲೂ ಕನ್ನಡನಾಡೇ ಆಗಿದ್ದ ಇಂದಿನ ಮಹಾರಾಷ್ಟ್ರದಲ್ಲಿ ಸಂಸ್ಕೃತ (ಅದರ ಅಪಭ್ರಂಶ ರೂಪ ಹಾಗೂ ಪ್ರಾಕೃತ ಭಾಷೆಗಳು) ಮತ್ತು ಕನ್ನಡ ಈ ಎರಡರ ಸಮ್ಮಿಶ್ರ ಭಾಷೆಯಾಗಿ ಮರಾಠಿ ಜನ್ಮ ತಳೆದು, ಆಮೇಲೆ ಇಡಿಯಾಗಿ ಸಂಸ್ಕೃತ ಜನ್ಮ ಭಾಷೆಯಂತಾಗಿ ಪರಿವರ್ತನೆ ಹೊಂದಿರುವುದು. ವಾಸ್ತವವಾಗಿ, ಇತಿಹಾಸದಲ್ಲಿ ‘ತ್ರಯಾಣಾಂ ಮಹಾರಾಷ್ಟ್ರಃ’ (ಮೂರು ಮಹಾರಾಷ್ಟ್ರಗಳು- ಲಾಟ, ಕರ್ನಾಟ, ಕುಂತಳ) ಎಂದಿರುವುದು ಕನ್ನಡ ನಾಡಿಗೆ ಹೊರತು ಬೇರೆ ಪ್ರದೇಶಕ್ಕಲ್ಲ. ಮಹಾರಾಷ್ಟ್ರದ ಪ್ರಾಚೀನ ಇತಿಹಾಸವೆಂದರೆ ಅದು ಕರ್ನಾಟಕದ ಇತಿಹಾಸವೇ ಆಗಿತ್ತು (ಬಾಲಗಂಗಾಧರ ತಿಲಕ್ ಇತ್ಯಾದಿ). ಆರ್ಯ ಭಾಷೆಯ ಮತ್ತು ಸಂಸ್ಕೃತಿಯ ಪ್ರಭಾವದಿಂದಾಗಿ ಇಂದು ಅದು ಬೇರೆಯೇ ಆಗಿ ನಿಂತಿದೆ.

ಮತ್ತೆ ಪ್ರಾಚೀನ ಕನ್ನಡದ ವ್ಯಾಪ್ತಿಯನ್ನು ಗಮನಿಸಿದಾಗ ಅದು ಇದ್ದದ್ದು ನರ್ಮದಾ ನದಿಯ ತೀರದ ಉತ್ತರಕ್ಕೆ ಎಂಬ ಹಿರಿಯ ವಿದ್ವಾಂಸರಾದ ದಿವಂಗತ ಶಂ.ಬಾ. ಜೋಶಿ ಅವರ ಅಭಿಪ್ರಾಯವನ್ನು ನಾವಿಲ್ಲಿ ಸ್ಮರಿಸಬಹುದು. ಕ್ರಮೇಣ ಕನ್ನಡ ನಾಡು ಗೋದಾವರಿಯಿಂದ ನರ್ಮದಾ ನದಿಯವರೆಗಿನ ಪ್ರದೇಶವಾಗಿ, ಕ್ರಿ.ಶ. 9ನೆಯ ಶತಮಾನದ ಹೊತ್ತಿಗೆ ‘ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡು’ ಆಗಿ ಈಗ ಕಾವೇರಿಯಿಂದ ಕೃಷ್ಣೆಯವರೆಗಿನ ನಾಡಾಗಿದೆ. ದ್ರಾವಿಡ ಸೊಗಡನ್ನು ಇನ್ನೂ ತನ್ನ ಮೂಲದಲ್ಲಿ ಉಳಿಸಿಕೊಂಡಿರುವ ತಮಿಳುನಾಡು ಈಗ ಭಾರತದ ಒಂದು ಮೂಲೆಗೆ ಸರಿದಿದ್ದು ಭೌಗೋಳಿಕ ವಿಸ್ತೀರ್ಣದಲ್ಲಿ ಕರ್ನಾಟಕದ ಮುಕ್ಕಾಲು ಭಾಗ ಇದೆ (ಭಾರತದ ನಕ್ಷೆ ನೋಡಿ).

ಇಷ್ಟೆಲ್ಲ ಇಲ್ಲಿ ಬರೆಯಲು ಕಾರಣ - ಇತಿಹಾಸ ಕಾಲದಿಂದಲೂ ದ್ರಾವಿಡ ಸಮುದಾಯಗಳು ಆರ್ಯ ಸಮುದಾಯದ ಸಂಸ್ಕೃತಿ, ಸಾಮಾಜಿಕತೆ ಮತ್ತು ರಾಜಕಿಯದ ಪ್ರಭಾವಕ್ಕೆ ಒಳಗಾಗಿ ತಮ್ಮ ಅಸ್ತಿತ್ವಕ್ಕೆ ಹೆಣಗಾಡುತ್ತಿರುವುದನ್ನು ತಿಳಿಸುವುದೇ ಆಗಿದೆ.

1947ರಲ್ಲಿ ಒಂದು ರಾಷ್ಟ್ರವಾಗಿ ರೂಪುಗೊಳ್ಳುವುದರ ಮೂಲಕ (ಅಂದರೆ ಸ್ವತಂತ್ರ ರಾಷ್ಟ್ರವಾಗಿ) ಇಂದಿನ ರಾಜ್ಯಗಳು ಬಹುಪಾಲು ಒಂದೊಂದು ದೇಶದಂತೆಯೇ ವ್ಯವಹರಿಸುತ್ತಿದ್ದುದನ್ನು ನಾವು ಕಾಣಬಹುದು. ಸ್ವತಂತ್ರ ಆಡಳಿತ, ಸ್ವತಂತ್ರ ಭಾಷೆ ಹೊಂದಿದ್ದವು.

ಸ್ವಾತಂತ್ರ್ಯ ಬಂದು ಎಲ್ಲ ಭೌಗೋಳಿಕ ಪ್ರದೇಶಗಳು ಒಂದು ಸಾಂವಿಧಾನಿಕ ಆಡಳಿತದಡಿಯಲ್ಲಿ ಬಂದ ಮೇಲೆ ಉತ್ತರ ಭಾರತದ ಪ್ರಧಾನ ಭಾಷೆಯಾದ ಹಿಂದಿಯನ್ನು ರಾಷ್ಟ್ರಭಾಷೆ ಹೆಸರಿನಲ್ಲಿ ಹೇರಿದಾಗ ದೇಶದ ಭಾಷಾ ಸಾಮರಸ್ಯ ಹದಗೆಡುತ್ತಾ ಬಂತು. ವಾಸ್ತವವಾಗಿ, ನಮ್ಮ ದೇಶದ ರಾಷ್ಟ್ರಭಾಷೆಗಳಲ್ಲಿ ಕನ್ನಡವೂ ಒಂದು. ನಮ್ಮ ದೇಶ ಬಹು ಜನಾಂಗದಿಂದ ಕೂಡಿದ, ಬಹು ಭಾಷೆ, ಬಹು ಧರ್ಮಗಳಿಂದ ಕೂಡಿದ್ದು ಪ್ರತಿಯೊಂದು ತನ್ನದೇ ಆದೆ ಅಸ್ಮಿತೆಯನ್ನು ಹೊಂದಿದೆ. ಅದನ್ನು ಯಾವ ಕಾರಣಕ್ಕೂ ಬದಲಾಯಿಸಲು ಆಗದು. ನಾಶ ಮಾಡಲೂ ಆಗದು.

ಈಗ ಕೇಂದ್ರ ಸರ್ಕಾರ ರೂಪಿಸಿರುವ ‘ರಾಷ್ಟ್ರೀಯ ಶಿಕ್ಷಣ ನೀತಿ’ಯಲ್ಲಿ ಪ್ರಾಥಮಿಕ ಹಂತದಲ್ಲಿ ಅಂದರೆ ಒಂದರಿಂದ ಐದನೆಯ ತರಗತಿಯವರೆಗೆ ಮಾತೃಭಾಷಾ ಮಾಧ್ಯಮದ ಶಿಕ್ಷಣ ಇರಲಿ. ಎಂಟರಿಂದ ಹತ್ತನೆಯ ತರಗತಿವರೆಗೆ ಅದನ್ನೇ ಮುಂದುವರಿಸುವುದಕ್ಕೂ ಅವಕಾಶವಿರಲಿ (1968ರ ಹೊತ್ತಿನಲ್ಲೆ ರಾಷ್ರೀಯ ಶಿಕ್ಷಣ ನೀತಿಯು ಸರ್ಕಾರದ ಅಧಿಕೃತ ದಾಖಲೆಯಾಗಿ ನಮೂದಿತವಾಗಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು).

ಆದರೆ, ಹಿಂದಿ ಹೇರಿಕೆಯ ತ್ರಿಭಾಷಾ ಕಲಿಕೆ ಬೇಡ. ಐದನೆಯ ತರಗತಿಯ ನಂತರ ಯಾವುದಾದರೊಂದು ಭಾಷೆಯ ಕಲಿಕೆ ಇರಲಿ. ಅಂದರೆ, ದ್ವಿಭಾಷಾ ಸೂತ್ರ. ಅಲ್ಲಿಯೂ ಮಾತೃಭಾಷಾ ಕಲಿಕೆ ನಿರಂತರ ಮತ್ತು ಇನ್ನೊಂದು ಅಪೇಕ್ಷಿತ ಆಡು ಭಾಷೆ ಇರಲಿ. ಒಂದು ಭಾಷೆಯಲ್ಲಿ ವಿಶ್ವಾಸ ಗಳಿಸಿದ ವಿದ್ಯಾರ್ಥಿಗೆ ಇನ್ನೊಂದು ಭಾಷೆ ಕಲಿಯಲು ಎಂದೂ ತೊಂದರೆಯಾಗದು. ಜೀವನದ ಅಗತ್ಯ ಭಾಷೆ ಕಲಿಸುತ್ತದೆಯೇ ಹೊರತು ಅನಗತ್ಯ ಹೇರಿಕೆಯಿಂದಲ್ಲ.

ಹೇಗಾದರೂ ಮಾಡಿ ಹಿಂದಿ ತುರುಕುವ ಬದಲು ದೇಶದ ಬಹು ದೊಡ್ಡ ಸಮಸ್ಯೆಗಳಾದ ನಿರುದ್ಯೋಗ, ಬಡತನ, ಜನಸಂಖ್ಯಾ ಸ್ಫೋಟವನ್ನು ನಿವಾರಿಸಲು ಕೇಂದ್ರ ಸರ್ಕಾರದ ಪ್ರಯತ್ನವಿರಲಿ. ಉಳಿದ ಸಮಸ್ಯೆಗಳಿಗೆ ಪರಿಹಾರ ತನ್ನಿಂದ ತಾನೆ ಒದಗಿಬರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT