ಶುಕ್ರವಾರ, ಅಕ್ಟೋಬರ್ 18, 2019
24 °C

ಜಗತ್ತಿನ ಚಾವಣಿಯಲ್ಲಿ ಭಾರತೀಯ ಕವ್ವಾಲಿ

Published:
Updated:
Prajavani

ತಜಕಿಸ್ತಾನಕ್ಕೆ ಬರುವವರಿಗೆಲ್ಲ ಪಮೀರ್‌ ಪರ್ವತಗಳ ಹೆಸರು ಕೇಳಿದರೆ ರೋಮಾಂಚನವಾಗುತ್ತದೆ. ತಜಕಿ ದೇಶಿಯರಿಗೆ ಕೂಡಾ ಪಮೀರ್‌ ಎಂದರೆ ಏನೋ ಹೆಮ್ಮೆ ಹಾಗೂ ಬಹಳ ಜನಕ್ಕೆ ತಾವೇ ನೋಡಿಲ್ಲವೆಂಬ ಕೊರಗು.

ಪಮೀರ್‌ನಲ್ಲೇ ಹುಟ್ಟಿ ಬೆಳೆದವರು ಕೂಡ ಈಚೆಗೆ ಅಲ್ಲಿಗೆ ಹೋಗದೇ ಎರಡು– ಮೂರು ವರ್ಷವಾಗಿದ್ದರೆ ಆಶ್ಚರ್ಯವಿಲ್ಲ. ಯಾಕೆಂದರೆ ಪಮೀರ್‌ಗೆ ಹೋಗುವುದೆಂದರೆ 650 ಕಿ.ಮೀ. ಕಡಿದಾದ ರಸ್ತೆಯಲ್ಲಿ 15 ಗಂಟೆ ಪ್ರಯಾಣ. ಅದೂ ಯಾವ ಕ್ಷಣದಲ್ಲೂ ನದಿಗೆ ವಾಹನ ಜಿಗಿಯುವ ಸಾಧ್ಯತೆ ಇರುವ ರಸ್ತೆಯಾದ್ದರಿಂದ ರಾತ್ರಿ ಪ್ರಯಾಣ ನಿಷಿದ್ಧ. ಹಿಂದೆ ವಿಮಾನ ಹಾರಾಟವಿತ್ತು. ಈಗ ಇಲ್ಲ. ಕೆಲವೆಡೆ ರಸ್ತೆಯೂ ಇಲ್ಲ. ಮೇಲಾಗಿ ವಿದೇಶಿಯರು ಪಮೀರ್‌ಗೆ ಭೇಟಿ ನೀಡುವುದಿದ್ದರೆ ಪ್ರತ್ಯೇಕ ವೀಸಾ ಬೇಕು. ಅದನ್ನು ತಜಕಿಸ್ತಾನ ಸರ್ಕಾರವೇ ನೀಡಬೇಕು.

ಈ ಎಲ್ಲ ಕಾರಣದಿಂದ ಪಮೀರ್‌ ಎಂದರೆ ಜೀವನದಲ್ಲಿ ಒಮ್ಮೆ ನೋಡಬೇಕಾದ ಪ್ರವಾಸಿ ತಾಣ ಹಾಗೂ ಒಮ್ಮೆ ಮಾತ್ರ! ಪಮೀರ್‌ಗೆ ಹೋಗಿಬರುವ ಕಷ್ಟವನ್ನು ಯೋಚಿಸಿದರೆ ಜೀವಮಾನದಲ್ಲಿ ಒಮ್ಮೆ ಮಾತ್ರ ಹೋಗಬೇಕಾದ ಜಾಗ ಎಂಬುದು ನಿಜ; ನಿಮ್ಮ ಬೆನ್ನು- ಸೊಂಟದ ಹಿತದೃಷ್ಟಿಯಿಂದ.

ದುಶಾಂಬೆಗೆ ಬಂದು ಒಂದು ವರ್ಷ ಕಾದಿದ್ದ ಮೇಲೆ ಪಮೀರ್‌ಗೆ ಹೋಗುವ ಅವಕಾಶ ದೊರೆಯಿತು. ಪಮೀರ್ ಪ್ರಾಂತ್ಯದ ರಾಜಧಾನಿ ಖೊರೋಗ್‍ನಲ್ಲಿ ನಡೆಯಲಿದ್ದ 12ನೇ ‘ಜಗತ್ತಿನ ಮೇಲ್ಚಾವಣಿ ಹಬ್ಬ’ಕ್ಕೆ ಭಾರತೀಯ ದೂತಾವಾಸವನ್ನು ಪ್ರತಿನಿಧಿಸಿ ಕಲಾವಿದರ ತಂಡವನ್ನು ಕರೆದುಕೊಂಡು ಹೋಗುವ ಅವಕಾಶ ಭಾರತೀಯ ಸಾಂಸ್ಕೃತಿಕ ಕೇಂದ್ರದ ನಿರ್ದೇಶಕನಾಗಿ ನನಗೆ ದೊರೆಯಿತು. ಆರು ಜನ ಹುಡುಗರು, ಆರು ಹುಡುಗಿಯರು ಹಾಗೂ ತಬಲಾ ಶಿಕ್ಷಕ ಯೋಗೇಶ ಶರ್ಮಾ ಅವರ ಜೊತೆ ನಾನು ಪಮೀರ್‌ಗೆ ಹೊರಟು ನಿಂತೆ.

ಅಂದು ಬೆಳಿಗ್ಗೆ ಏಳು ಗಂಟೆಗೆ ಹೊರಟಿದ್ದಾದರೂ ಖೊರೋಗ್‌ ತಲುಪುವಾಗ ರಾತ್ರಿ ಹತ್ತು ಗಂಟೆ. ಮಧ್ಯ ಸಿಕ್ಕ ಕುಲೋಬ್, ದರ್ವಾಜ್, ರುಶಾನ್‍ಗಳಲ್ಲಿ ಊಟ, ತಿಂಡಿಗೆ, ವಿಶ್ರಾಂತಿಗೆ ನಿಂತಿದ್ದು ಒಂದು ಕಾರಣವಾಗಿದ್ದರೆ ಹದಗೆಟ್ಟ ರಸ್ತೆ ಇನ್ನೊಂದು ಕಾರಣ.

ವಿಶೇಷವೆಂದರೆ 650 ಕಿ.ಮೀ. ದೂರದ ದಾರಿಯಲ್ಲಿ 300 ಕಿ.ಮೀ. ದೂರ- ಬಲಕ್ಕೆ ಅಫ್ಗಾನಿಸ್ತಾನ, ಎಡಕ್ಕೆ ಪಮೀರ್ ಪರ್ವತಗಳ ಸಾಲು- ತಜಕಿಸ್ತಾನ. ನಡುವೆ ಪಾಂಜೋದರಿಯಾ ನದಿ. ತಜಕಿಸ್ತಾನದ ಕಡೆ ಪರ್ವತಗಳ ಬುಡವನ್ನು ಕಡಿದು ಮಾಡಿದ ರಸ್ತೆಯಲ್ಲಿ ಯಾವಾಗ ಬೇಕಾದರೂ ಮಣ್ಣು- ಕಲ್ಲು ಕುಸಿದು ಬೀಳಬಹುದು. ಚಾಲಕ ಕೊಂಚ ಮೈಮರೆತರೂ ವಾಹನ ಪ್ರಪಾತಕ್ಕೆ ಬೀಳುವುದು ನಿಶ್ಚಿತ. ಇಂಥ ರಸ್ತೆಯ ಬಲಕ್ಕೆ ಅಬ್ಬರದಿಂದ ಬೊಬ್ಬಿಡುವ ನದಿಯ ಆಚೆ ಅಫ್ಗಾನಿಸ್ತಾನ ಹಾಗೂ ಈಚೆ ತಜಕಿಸ್ತಾನ. ಆ ಕಡೆಯ ಜನರೊಡನೆ ಈ ಕಡೆಯವರು ಮಾತನಾಡಬಹುದು. ಆದರೆ, ತಲುಪಲು ವೀಸಾ ಬೇಕು!

ನಾವು ಆ ರಾತ್ರಿ ಖೊರೋಗ್‍ಗೆ ಬಂದಾಗ ಹಿತವಾದ ಚಳಿಯ ವಾತಾವರಣ. ಇನ್ನೂ ನಾಲ್ಕು ತಿಂಗಳು ಬಿಟ್ಟರೆ ಇಲ್ಲಿ ಮೈನಸ್‌ 15 ಡಿಗ್ರಿ ಇರುವುದಾಗಿ ಹೋಟೆಲ್‌ನವರು ಹೇಳಿದರು. ನಮಗೆ ವಸತಿ ಏರ್ಪಾಟಾಗಿದ್ದ ಅತಿಥಿ ಗೃಹಕ್ಕೆ ಬಂದರೆ ಕೆಳಗೆ ಪಾಂಜೋದರಿಯಾ ನದಿ ಅಬ್ಬರಿಸುತ್ತ ಹರಿಯುತ್ತಿತ್ತು. ಅದರ ಮೇಲಕ್ಕೆ ನಮ್ಮ ಕೋಣೆ. ರಾತ್ರಿಯಿಡೀ ನೀರಿನ ಮೊರೆತದ ನಡುವೆಯೇ ಮಲಗಬೇಕು. ಖಂಡಿತವಾಗಿ ಇದೊಂದು ಮರೆಯಲಾರದ ಅನುಭವ.

ತಜಿಕ್‌ ಕಲಾವಿದ ಸಮಂದರ್‍ಪುಲುದೋವ್‌ 12 ವರ್ಷಗಳಿಂದ ‘ರೂಫ್‍ ಆಫ್ ದಿ ವರ್ಲ್ಡ್‌’ ಹಬ್ಬವನ್ನು ಆಚರಿಸುತ್ತ ಬಂದಿದ್ದಾರೆ. 2008ರಲ್ಲಿ ಸ್ಥಳೀಯ ಕಲಾವಿದರಿಗೆ ಅವಕಾಶ ನೀಡುವ ಸಂದರ್ಭವಾಗಿ ಆರಂಭವಾದ ಈ ಹಬ್ಬ ಈಗ ಬೃಹತ್ತಾಗಿ ಬೆಳೆದು ಜಾಗತಿಕ ಗಮನ ಸೆಳೆಯುತ್ತಿದೆ. ಖೊರೋಗ್ ಸಮುದ್ರಮಟ್ಟದಿಂದ 2200 ಮೀಟರ್‌  ಎತ್ತರದಲ್ಲಿದ್ದು ಇಡೀ ಜಗತ್ತಿನ ಮೇಲ್ಚಾವಣಿ ಎಂಬುದಾಗಿ ಕರೆಸಿಕೊಳ್ಳುತ್ತದೆ. ಇಲ್ಲಿ ನಾಲ್ಕು ತಿಂಗಳು ಚಳಿಗಾಲವಾದರೆ, ಇನ್ನು ನಾಲ್ಕು ತಿಂಗಳು ಹಿಮಪಾತದ ಕಾಲ. ಉಳಿದ ನಾಲ್ಕು ತಿಂಗಳು ಮಾತ್ರ ಪ್ರವಾಸಿಗರು ಪಮೀರ್ ಎಂಬ ಚಾರಣಪ್ರಿಯರ ಸ್ವರ್ಗವನ್ನು ಹುಡುಕಿ ಬರುತ್ತಾರೆ.

ಖೊರೋಗ್‍ ಬಡಕ್ ಶಾನ್ ಪ್ರದೇಶದ ರಾಜಧಾನಿಯಾದರೂ ಸಣ್ಣ ಊರು. ನಮ್ಮ ಶಿಮ್ಲಾದಂತಿದೆ. ವ್ಯತ್ಯಾಸವೆಂದರೆ ಪೈನ್ ಕಾಡುಗಳಿಲ್ಲ. ಎಲ್ಲಿ ನೋಡಿದರೂ ಬೋಳುಗುಡ್ಡಗಳು. ಅವು ನಾನಾ ಬಣ್ಣದ ಹರಳು ಕಲ್ಲುಗಳಿಗೆ ಪ್ರಖ್ಯಾತವಾಗಿವೆ. ಈ ಗುಡ್ಡಗಳು ಹಾಗೂ ಮನೆ ಮಠಗಳು ಎಲ್ಲವೂ ಜನವರಿಯಿಂದ ನಾಲ್ಕು ತಿಂಗಳು ಹಿಮದಲ್ಲಿ ಮುಚ್ಚಿರುತ್ತವೆ. ಆಗ ಯಾವ ಪ್ರವಾಸಿಗರೂ ಇತ್ತ ಸುಳಿಯುವುದಿಲ್ಲ. ಬೇಸಿಗೆಯೆಂದು ಕರೆಯುವ ಮೂರ್ನಾಲ್ಕು ತಿಂಗಳಲ್ಲಿ ಮಾತ್ರ ಪ್ರವಾಸಿಗರು ಲಗ್ಗೆ ಇಡುವುದರಿಂದ ನಗರ ಗಿಜಿಗುಡುತ್ತದೆ.

ಈ ನಗರದಲ್ಲಿ ಜಗತ್ತಿನ ಎರಡನೇ ಅತಿ ಎತ್ತರದ ಬಟಾನಿಕಲ್ ಗಾರ್ಡನ್‍ ಇದೆ. ಮಧ್ಯ ಏಷ್ಯಾದಲ್ಲಿ ಪ್ರತಿಷ್ಠಿತ ಯುಸಿಎಸ್ ವಿಶ್ವವಿದ್ಯಾಲಯವಿದೆ. ಇಲ್ಲಿನ ಜನಗಳು ಬಹುತೇಕ ಇಸ್ಮಾಯಿಲಿಗಳು. ಅವರು ಸುನ್ನಿಗಳಲ್ಲ. ಷಿಯಾಗಳೂ ಅಲ್ಲ. ಆಘಾಖಾನ್ ಇಸ್ಮಾಯಿಲಿಗಳ ಧರ್ಮಗುರು. ಜಾಗತಿಕವಾಗಿ ಆಘಾಖಾನ್‍ಗೆ ಶಿಷ್ಯರಿದ್ದು, ಭಾರತವೂ ಸೇರಿ ನಾನಾ ದೇಶಗಳಲ್ಲಿ ಆಘಾಖಾನ್ ಫೌಂಡೇಷನ್‌ನಿಂದ ಜನಸೇವೆ ನಡೆದಿದೆ. ಆಘಾಖಾನ್‍ ಅವರು ಏನೇ ಮಾಡಿದರೂ ಅದರಲ್ಲಿ ಕಲೆಯ ಸೊಗಡಿದೆ. ಆಧುನಿಕ ತಂತ್ರಜ್ಞಾನದ ಬಳಕೆಯಿದೆ. ಜಗತ್ತಿನಾದ್ಯಂತದಿಂದ ಬರುವ ಹಣದ ಶ್ರೀಮಂತಿಕೆ ಎದ್ದುಕಾಣುತ್ತದೆ. ಕೇಂದ್ರೀಯ ಪಾರ್ಕಿನ ಪಕ್ಕದಲ್ಲೇ ಇರುವ ಇಸ್ಮಾಯಿಲಿ ಸೆಂಟರು ಕೂಡಾ ಖೊರೋಗ್‍ನ ಆಕರ್ಷಣೆಗಳಲ್ಲಿ ಒಂದು ಎನಿಸಿದೆ.

ಮೂರು ದಿನಗಳ ‘ರೂಫ್‌ ಆಫ್ ದಿ ವರ್ಲ್ಡ್‌’ ಹಬ್ಬದಲ್ಲಿ ತಜಕಿಸ್ತಾನ ಸೇರಿದಂತೆ ಏಳು ದೇಶಗಳು ಭಾಗವಹಿಸಿದ್ದವು. ತಜಕಿಸ್ತಾನ, ಕಜಕಸ್ತಾನ, ಕಿರ್ಗಿಸ್ತಾನ, ತುರ್ಕಮೆನಿಸ್ತಾನ, ಉಜ್ಬೆಕಿಸ್ತಾನ, ಭಾರತ ಮತ್ತು ಅಮೆರಿಕ. ದುಶಾಂಬೆಯಲ್ಲಿ ಅಮೆರಿಕದ ದೂತಾವಾಸವಿದ್ದು ಈ ಹಬ್ಬದ ಪ್ರಾಯೋಜಕರಾಗಿ ಸೇರಿಕೊಂಡಿದ್ದು ರಾಜಕೀಯ ಚಾಣಾಕ್ಷತೆ.

ಆಘಾಖಾನ್ ಫೌಂಡೇಷನ್, ಸ್ವಿಸ್ ಅಭಿವೃದ್ಧಿ ಸಹಕಾರ ಸಂಸ್ಥೆ, ಹಬ್ಬದ ಪ್ರಾಯೋಜಕರು. ಬೇರೆ ಬೇರೆ ದೇಶದ ಕಲಾವಿದರ ಮೆರವಣಿಗೆಯೊಂದಿಗೆ ಆರಂಭವಾದ ಹಬ್ಬಕ್ಕೆ ಸ್ಥಳೀಯ ಮೇಯರ್ ಹಾಗೂ ರಾಜ್ಯದ ಸಾಂಸ್ಕೃತಿಕ ಮಂತ್ರಿ ಶುಭ ಕೋರಿದರು. ಯಾರದೂ ಉದ್ದುದ್ದ ಭಾಷಣವಿಲ್ಲದಿರುವುದು ವಿಶೇಷವಾಗಿತ್ತು. ಪಾರ್ಕಿನ ಬಯಲು ರಂಗಮಂದಿರ ಈ ಹಬ್ಬಕ್ಕಾಗಿ ಸುಂದರವಾಗಿ ಸಜ್ಜುಗೊಂಡಿತ್ತು. ರಾತ್ರಿ ಹತ್ತರವರೆಗೂ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನೆರೆದ ಮೂರು ಸಾವಿರಕ್ಕೂ ಹೆಚ್ಚು ಜನ ಹುಚ್ಚೆದ್ದು ಕುಣಿದರು.

ಬೆಳಗಿನ ಹೊತ್ತು ವಸ್ತು ಪ್ರದರ್ಶನ ಮತ್ತು ಮಾಸ್ಟರ್ ತರಗತಿಗಳು ಇಸ್ಮಾಯಿಲಿ ಸೆಂಟರಿನಲ್ಲಿ ಇದ್ದರೆ ಸಂಜೆ ಹೊತ್ತು ಉದ್ಯಾನದ ಬಯಲು ರಂಗಮಂದಿರದಲ್ಲಿ ಕಾರ್ಯಕ್ರಮ. ವಿವಿಧ ದೇಶಗಳ ಕಲಾವಿದರು ನಾವು ಕಂಡು ಕೇಳರಿಯದ ಸಂಗೀತ ವಾದ್ಯಗಳನ್ನು ಪರಿಚಯಿಸಿದರು. ಭಾರತದ ಪರವಾಗಿ ನಮ್ಮ ತಬಲಾ ಶಿಕ್ಷಕ ಹಾಗೂ ಸಂಗೀತಗಾರ ಯೋಗೇಶ್ ಶರ್ಮಾ ತಬಲದ ವಿಶೇಷತೆಗಳನ್ನು ಪರಿಚಯಿಸಿಕೊಟ್ಟರು.

ಮೂರು ದಿನವೂ ಭಾರತೀಯ ಎಂಬೆಸಿಯ ವಿವೇಕಾನಂದ ಸಾಂಸ್ಕೃತಿಕ ಕೇಂದ್ರದ ಪರವಾಗಿ ಕವ್ವಾಲಿ ಸಂಗೀತ  ಹಾಗೂ ಕಥಕ್ ನೃತ್ಯಗಳನ್ನು ನಡೆಸಿಕೊಡಲಾಯ್ತು. ‘ಆಲಿ ಅಲಿ’ ಎಂದು ಭಜನೆ ಮಾಡುವ ಸೂಫಿ ಸಂತರ ಕವ್ವಾಲಿಯಂತೂ ಪ್ರೇಕ್ಷಕರು ಸ್ವರ ಸೇರಿಸಿ ಹಾಡಿ, ಕುಣಿಯಲು ಪ್ರೇರೇಪಿಸಿತು. ಇದರ ನಡುವೆಯೇ ಕನ್ನಡದ ರಂಗಗೀತೆ ‘ಶರಣು ಬಂದೆವು ಸ್ವಾಮಿ ನಾವು ನಿಮಗ’ ಪಮೀರ್ ಪರ್ವತಗಳ ಮಧ್ಯೆ ಸಿರಿ ಅವರ ಕಂಠದಿಂದ ರಿಂಗಣಿಸಿದಾಗ ರೋಮಾಂಚನವಾಯ್ತು. ಆರು ನಿಮಿಷದ ಹಾಡು ಮುಗಿಯುವಷ್ಟರಲ್ಲಿ ಈ ಕನ್ನಡದ ಕಲಾವಿದೆ ಸಿಲೆಬ್ರಿಟಿಯಾಗಿಬಿಟ್ಟಿದ್ದಳು.

ಉಜ್ಬೆಕ್‌ನವರ ತಂತಿ ವಾದ್ಯಗಳು, ಅಫ್ಗಾನಿಸ್ತಾನದವರ ಮೇಲು ಸ್ವರದ ಹಾಡುಗಳು ಪ್ರೇಕ್ಷಕರ ಮನಗೆದ್ದವು. ತಜಕಿಸ್ತಾನದ ಖ್ಯಾತ ಹಾಡುಗಾರರಾದ ಖಯೋ ಖಾಯೊಲ್ಬೆಕೊವ್ ಮತ್ತು ಮದಿನಾ ಅಕ್ನಜರೋವಾ ಪ್ರೇಕ್ಷಕರ ಆಕರ್ಷಣೆಯ ಕೇಂದ್ರವಾಗಿದ್ದರು. ಕೊನೆಯ ದಿನ ಅಮೆರಿಕದ ಪಾಪ್ ಸಂಗೀತದ ಗುಂಪು ‘ಬರ್ನ್‌ ದಿ ಬಾಲ್‍ರೂಮ್’ ಎಂಬ ಅದ್ದೂರಿಯ ಸದ್ದು ತುಂಬಿದ ಸಂಗೀತದ ಮಳೆ ಗರೆದರು.

ಮೂರನೆಯ ದಿನ ನೃತ್ಯಗಳು ಮುಗಿಯುವಾಗ ನಡುರಾತ್ರಿಯಾಗಿತ್ತು. ಪ್ರಾಯೋಜಕರಲ್ಲಿ ಒಬ್ಬರಾಗಿದ್ದ ಸ್ವಿಸ್ ಅಭಿವೃದ್ಧಿ ಸಹಕಾರದವರು ‘ಇಡೀ ನಗರ ಭಾರತದ ಪ್ರದರ್ಶನವನ್ನು ಕೊಂಡಾಡುತ್ತಿದೆ. ಹಬ್ಬದ ವಿನ್ನರ್ ನೀವೇ’ ಎಂದು ಆಲಂಗಿಸಿ ಅಭಿನಂದಿಸಿದರು. ಮುಂದಿನ ವರ್ಷವೂ ಹಬ್ಬಕ್ಕೆ ಬರಬೇಕು ಎಂಬ ಆಸೆಯೊಂದಿಗೆ ಮರುದಿನ ಬೆಳಿಗ್ಗೆ ಪಾಮೀರ್‌ಗೆ ಟಾಟಾ ಹೇಳಿದೆವು.

Post Comments (+)