ಸೋಮವಾರ, ಜೂನ್ 21, 2021
30 °C

ಯುವ ಮನಸು; ಹೊಸ ಕನಸು| ಸಂಕಟಗಳ ಜತೆಗೆ ಗುದ್ದಾಡಬೇಕು...

ಮುಸ್ತಾಫ ಕೆ.ಎಚ್., ಯುವ ಕವಿ Updated:

ಅಕ್ಷರ ಗಾತ್ರ : | |

Prajavani

ಹೊಸ ವರ್ಷ ಹರುಷಗಳನ್ನೇ ಹೊತ್ತು ತರಲೆಂಬ ಕನಸು ಎಲ್ಲರಲ್ಲೂ ಅಂತಸ್ಥವಾಗಿರುವುದು ಸಹಜ. ಕಾರಣ ಹಳೆ ವರ್ಷದ ಸೋಲು, ನಿರಾಶೆ, ಹತಾಶೆಗಳನ್ನು ಮೂಟೆಕಟ್ಟಿ ಅಟ್ಟಕ್ಕೊ, ಗುಜರಿಗೋ, ಗೋಡಾಣಕ್ಕೊ ಎಸೆಯುವ ಕಾತರವನ್ನು ಹೊಸ ವರ್ಷದ ಹುಮ್ಮಸ್ಸು ತಂದೊಡ್ಡುತ್ತದೆ. ಮುಂದಿನ ಇಡೀ ವರ್ಷ ನಾನೇನು ಮಾಡಬೇಕು? ಬದುಕನ್ನು ಸುಲಭವೂ, ಸುಖವೂ ಆಗಿಸುವುದು ಹೇಗೆ? ಯಾವ ಶತಪಥದ ಶಪಥಗಳು ಈ ಸೋಲನ್ನು ನಿವಾಳಿಸಿ ಒಗೆದು ಬಿಡುತ್ತವೆ ಎಂಬ ಸಾಲು ಸಾಲು ಪ್ರಶ್ನೆಗಳ ಜೊತೆಗೆ ಯೋಜನೆಯೊಂದನ್ನು ರೂಪಿಸುವುದು; ನೀಲಿನಕ್ಷೆ ಹಾಕಿಟ್ಟುಕೊಳ್ಳುವುದು ಯಾಕೋ ಏನೋ ನನಗೆ ಇನ್ಶುರೆನ್ಸ್, ಮ್ಯೂಚುವೆಲ್ ಫಂಡ್‌ಗಳ ಲೆಕ್ಕಾಚಾರದ ಚೊಕ್ಕಾಟದಂತೆ ಕಾಣುತ್ತದೆ. ಆದ್ದರಿಂದ ಚುಕ್ತಾ ಮಾಡುವ ಲೆಕ್ಕದ ಜೀವಕಥನದ ಬಗ್ಗೆ ನನಗೆ ಸದಾ ಅಸಮಾಧಾನ.

ಕಾಲ ನಿಲ್ಲುವುದಿಲ್ಲ ಎಂಬ ಕವಿವಾಣಿಯಂತೆ ವರ್ಷ ಕಳೆದರೂ ಹರುಷ ಬಂದರೂ, ಮುಳುಗಿಸಿ ಕುಕ್ಕಿ ಬೆಂಡೆತ್ತಿದ ನಿರಾಶೆಯ ಕಾಲದ ಲೆಕ್ಕಾಚಾರವಿಲ್ಲದ ಬದುಕು ಸದಾ ಸ್ವೀಕೃತವಾಗುವಂತಾಗಿದ್ದರೆ!

ಆಗ ಸ್ವೀಕಾರದ ಸ್ಥಿತಿ ನಿರಾಶೆಯ ಒಣತ್ವವನ್ನು ಹಸಿರಾಗಿಸುತ್ತಿತ್ತೇನೊ ಎಂಬ ಕನಸು ಮುಟ್ಟಲಾರದ ಆಶಾವಾದದ ಸ್ಥಿತಿಯನ್ನು ನಿರ್ಮಿಸಿಬಿಟ್ಟಿದೆ. ಜೊತೆಗೆ ಹೊಸಹೊಸ ಕಥನಗಳಿಗೆ ದಾರಿ ಮಾಡಿಕೊಡುತ್ತಿತ್ತೇನೊ ಎಂಬ ಪ್ರಶ್ನೆಯನ್ನೂ ಸದಾ ನನ್ನನ್ನು ಜಾಗೃತಗೊಳಿಸಿದೆ. ಏನೇ ಇರಲಿ ಸಂಕಟ ಬಂದಾಗ ವೆಂಕಟರಮಣ ಎನ್ನುವ ಸ್ಥಿತಿಗಿಂತ ಸಂಕಟವೇ ಸುಧಾರಣಾವಾದಿ ನೆಲೆಯನ್ನು ತಾಳಬೇಕು. ಈ ಹೊತ್ತು ದೇಶ ಎದುರಿಸುತ್ತಿರುವ ಸಂಕಟಗಳ ಜೊತೆಗೆ ಸದಾ ಗುದ್ದಾಡುತ್ತಲೇ ನನ್ನ ಅಸ್ತಿತ್ವವನ್ನು, ಅಸ್ಮಿತೆಯನ್ನು ಚುರುಕಾಗಿಸುವ ಪ್ರಯತ್ನವನ್ನು ಇಡೀ ಬದುಕಿನುದ್ದಕ್ಕೂ ನಾನು ಸಾಧಿತವಾಗಿಸಬೇಕಾಗಿದೆ. ಅದು ನನ್ನ ಕರ್ಮವೋ ಅಥವಾ ಅನಿವಾರ್ಯವೋ ಅಥವಾ ಆತಂಕವೋ ಏನೊಂದನೂ ನಾ ಆರಿಯೆ..

ಕೊನೆಯದಾಗಿ ‘ಗಾಳಿಗೂ ನೀರಿಗೂ ಗುರುತಿಲ್ಲ/ ನನಗೂ ಹಾಗೇ/ ನನ್ನಿಷ್ಟದಾಗೆ ಸೀಮೆಯ ಮೀರುವ/ ಗಡಿಯಾರದ ಚಲನೆಗಿಂತ ವೇಗವಾಗಿ/ ಆಕಾಶದ ನೀಲಿಗೆ ಚುಂಬಿಸಿ/ ಪಾತಾಳದ ನೀರಿಗೆ ಮುಖವೊತ್ತಿ/ ಕನವರಿಕೆ ಇಲ್ಲದ ನಿದ್ರೆಗೆ ಜಾರಬೇಕಿದೆ/ ಸೀಮೆಗಳಿಲ್ಲದ ಕನಸಿನೂರ ಕಾಣುವ ತವಕಿಯಂತೆ...’

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು