ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷದ ಲೆಕ್ಕ ಒಪ್ಪಿಸುವ ಹಬ್ಬ

Last Updated 5 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಕರ್ನಾಟಕದಲ್ಲಿ ಈಗ ಅಭಾವ ಪರ್ವ ಇರಬಹುದು. ಪ್ರವಾಹ ಬಂದರೂ ಪರಿಹಾರಕ್ಕೆ ಹಣ ಇಲ್ಲದಿರಬಹುದು. ಬರಗಾಲ ಬಂದರೂ ಕೊರತೆ ಕಾಡಬಹುದು. ಉದ್ಯೋಗ ದೊರಕುವುದು ಕಷ್ಟಕರವಾಗಿರಬಹುದು. ನೌಕರಿ ಇದ್ದವರಿಗೂ ಸರಿಯಾಗಿ ಸಂಬಳ ಬಾರದೇ ಇರಬಹುದು. ಆಡಳಿತದ ಸೌಧದಲ್ಲಿ ಕುಳಿತವರಿಗೆ ನೌಕರರ ಮೇಲೆ ಹಿಡಿತ ಇಲ್ಲದಿರಬಹುದು. ಆದರೆ, ಕರ್ನಾಟಕ ಮೊದಲು ಹೀಗಿರಲಿಲ್ಲ. ಇತಿಹಾಸದ ಪುಟದಲ್ಲಿ ಕರುನಾಡ ಆಡಳಿತ, ಹಣಕಾಸು ಸ್ಥಿತಿಯ ಬಗ್ಗೆ ಹೆಮ್ಮೆಯ ವಿಚಾರಗಳು ಹರಡಿಕೊಂಡಿವೆ. ದಸರಾ ಹಬ್ಬದ ಸಂದರ್ಭದಲ್ಲಿಯೇ ಇದನ್ನು ನೆನಪಿಸಿಕೊಳ್ಳಲೂ ಕಾರಣವಿದೆ.

ಕರ್ನಾಟಕದಲ್ಲಿ ದಸರಾ ಹಬ್ಬಕ್ಕೆ ವಿಶೇಷ ಅರ್ಥ ತಂದುಕೊಟ್ಟವರು ವಿಜಯನಗರದ ಅರಸರು. ವಿಜಯನಗರದಲ್ಲಿ ದಸರಾ ಹಬ್ಬ ಶುರುವಾಗುವುದರಲ್ಲಿಯೂ ಆಡಳಿತ ಕೌಶಲ ಇತ್ತು. ಆಗಿನ ರಾಜರ ದೂರದೃಷ್ಟಿ ಇತ್ತು. ದಸರಾ ಹಬ್ಬ ಕೇವಲ ಧಾರ್ಮಿಕ ಆಚರಣೆ ಆಗಿರಲಿಲ್ಲ. ಅದರೊಳಗೆ ರಾಜ್ಯದ ಆರ್ಥಿಕ ಪರಿಸ್ಥಿತಿಯ ಅವಲೋಕನ, ಹೊಸ ಬಜೆಟ್ ಮಂಡನೆ, ಸೇನೆಯ ಸಾಮರ್ಥ್ಯ ಪರೀಕ್ಷೆ, ಶತ್ರು ರಾಜ್ಯಗಳಿಗೆ ಎಚ್ಚರಿಕೆಯ ಸಂದೇಶ ಎಲ್ಲವೂ ಇದ್ದವು.

ವಿಜಯನಗರ ಅರಸರ ಕಾಲದಲ್ಲಿ ದಸರಾ ಹಬ್ಬದ ಆಚರಣೆಯಿಂದ ವಿಜಯನಗರದ ಶ್ರೀಮಂತಿಕೆ, ವೈಭವ, ಸೇನಾ ಸಾಮರ್ಥ್ಯ ಇಡೀ ಜಗತ್ತಿಗೇ ಗೊತ್ತಾಗುತ್ತಿತ್ತು. ಪ್ರವಾಸೋದ್ಯಮಕ್ಕೆ ಅನುಕೂಲವಾಗಿತ್ತು. ವ್ಯಾಪಾರಿಗಳಿಗೆ ತಮ್ಮ ವ್ಯಾಪಾರ ವ್ಯವಹಾರ ಬೆಳೆಸಿಕೊಳ್ಳಲು ಅವಕಾಶ ಒದಗಿಸುತ್ತಿತ್ತು. ರಾಜನ ಜೊತೆಗೆ ರಾಣಿಯರು, ಸಾಮಂತರು, ಮಾಂಡಲಿಕರು, ಪ್ರಾಂತಪಾಲರು, ದಳವಾಯಿಗಳೂ ತಮ್ಮ ಶ್ರೀಮಂತಿಕೆ ಪ್ರದರ್ಶಿಸುತ್ತಿದ್ದರು. ಮಾಂಡಲೀಕರು, ದಳವಾಯಿಗಳು, ಪ್ರಾಂತಪಾಲಕರು, ಅಧೀನರಾಜರು ಎಲ್ಲರೂ ಬಂದು ದಸರೆಯ ಸಂದರ್ಭದಲ್ಲಿಯೇ ವಿಜಯನಗರದ ಅರಸರಿಗೆ ಕಪ್ಪಕಾಣಿಕೆ ಸಲ್ಲಿಸುತ್ತಿದ್ದರು. ಅಲ್ಲದೆ ಆಯಾ ವರ್ಷದ ಲೆಕ್ಕವನ್ನೂ ಒಪ್ಪಿಸುತ್ತಿದ್ದರು. ಅಲ್ಲದೆ ಮುಂದಿನ ವರ್ಷದ ಕಪ್ಪದ ನಿರ್ಣಯವೂ ಆಗಲೇ ಆಗುತ್ತಿತ್ತು.

ರಕ್ಷಣಾ ವ್ಯವಸ್ಥೆ, ಅದರ ನ್ಯೂನತೆಗಳು, ಶತ್ರು ದಮನ ತಂತ್ರಗಳು, ರಾಜ್ಯ ವಿಸ್ತರಣಾ ತಂತ್ರ, ರಾಜ್ಯದ ಅಭಿವೃದ್ಧಿಗೆ ಕೈಗೊಳ್ಳಬಹುದಾದ ಯೋಜನೆಗಳು, ಹೊಸದಾಗಿ ವಿಧಿಸಬಹುದಾದ ಕಂದಾಯ, ತೆರಿಗೆ ಎಲ್ಲವೂ ದಸರೆಯ ಸಂದರ್ಭದಲ್ಲಿಯೇ ನಿಗದಿಯಾಗುತ್ತಿತ್ತು. ವಿಜಯನಗರದ ಅರಸರ ಕಾಲದಲ್ಲಿ ದಸರಾ ಹಬ್ಬ ಎಂದರೆ ಆಯಾ ವರ್ಷದ ಬಜೆಟ್ ಮಂಡನೆ.

ವಿಜಯನಗರದ ದಸರಾ ಸಂದರ್ಭದಲ್ಲಿ ಭೇಟಿ ನೀಡಿದ್ದ ಹಲವಾರು ವಿದೇಶಿ ಪ್ರವಾಸಿಗರು ಅದರ ವೈಭವವನ್ನು ಕಣ್ಣಿಗೆ ಕಟ್ಟುವ ಹಾಗೆ ವರ್ಣಿಸಿದ್ದಾರೆ. ಶ್ರೀಮಂತಿಕೆಯನ್ನು ಬಿಂಬಿಸಿದ್ದಾರೆ. ಕಪ್ಪಗಳ ಲೆಕ್ಕವನ್ನೂ ಕೊಟ್ಟಿದ್ದಾರೆ. ಆಗಿನ ಅರ್ಥ ವ್ಯವಸ್ಥೆಯನ್ನೂ ವಿವರಿಸಿದ್ದಾರೆ. ಫರ್ನಾವ್ ನ್ಯೂನಿಜ್ ಎಂಬ ಪೋರ್ಚುಗಲ್ ಪ್ರವಾಸಿ ಅಚ್ಚುತರಾಯನ ಕಾಲದಲ್ಲಿ ವಿಜಯನಗರಕ್ಕೆ ಬಂದಿದ್ದ (1535–37). ಆತನ ವಿವರಣೆ ಪ್ರಕಾರ ವಿಜಯನಗರದ ಸಾಮಂತನಾದ ಸಾಳ್ವ ನಾಯಕನಿಗೆ ವಾರ್ಷಿಕ ಹನ್ನೊಂದು ಲಕ್ಷ ಸುವರ್ಣ ‘ಪರ್ದಾಒ’ (ಅಂದಿನ ನಾಣ್ಯ ವ್ಯವಸ್ಥೆ) ಆದಾಯವಿತ್ತು. ಶ್ರೀಲಂಕಾ ಗಡಿಯವರೆಗೂ ಆತನ ಆಡಳಿತ ಇತ್ತು. ಆತ ತನಗೆ ಬರುವ ಆದಾಯದ ಒಂದು ಮೂರಾಂಶವನ್ನು ವಿಜಯನಗರದ ಅರಸರಿಗೆ ಕಪ್ಪ ನೀಡುತ್ತಿದ್ದ. ಎರಡು ಮೂರಾಂಶವನ್ನು ರಾಜನಿಗಾಗಿ ಸಲಹಲೇ ಬೇಕಾದ ಲಷ್ಕರಿ, ಕುದುರೆ, ಆನೆ, ಮೂವತ್ತು ಸಾವಿರ ಕಾಲಾಳುಗಳ ಖರ್ಚಿಗಾಗಿ ತನ್ನಲ್ಲೇ ಉಳಿಸಿಕೊಳ್ಳುತ್ತಿದ್ದ. ನಂತರ ಉಳಿಯುವ ಹಣವನ್ನು ಅವನು ಸ್ವಂತಕ್ಕೆ ಬಳಸುತ್ತಿದ್ದ.

ಅಜ್ಜಪ್ಪ ಮತ್ತು ತಿಮ್ಮಪ್ಪ ಎಂಬ ದಳವಾಯಿಗಳು ವಿಜಯನಗರದ ಅರಸನಿಗೆ ಪ್ರತಿವರ್ಷ ಮುನ್ನೂರು ಸುವರ್ಣ ಪರ್ದಾಒಗಳ ಕಪ್ಪ ನೀಡುತ್ತಿದ್ದರು. ಗೋಪನಾಯಕ ನೂರೈವತ್ತು ಸಾವಿರ, ಲೋಪನಾಯಕ ಎಂಬತ್ತು ಸಾವಿರ, ಹೊಸನಗರದ ದಳವಾಯಿ ಎರಡು ನೂರು ಸಾವಿರ ಪರ್ದಾಒ, ಚಿನ್ನಪ್ಪ ನಾಯಕ ಒಂದು ನೂರು ಸಾವಿರ, ಕೃಷ್ಣಪ್ಪ ನಾಯಕ ಏಳು ಸಾವಿರ ಪರ್ದಾಒಗಳಷ್ಟು ಕಪ್ಪ ನೀಡುತ್ತಿದ್ದರು.

ಇಟಲಿ ದೇಶದ ನಿಕೊಲೊ–ದೆ–ಕೊಂತಿ ಪ್ರಕಾರ ವಿಜಯನಗರದ ಕೃಷ್ಣದೇವರಾಯನಿಗೆ 12 ಸಾವಿರ ಪತ್ನಿಯರಿದ್ದರು. ಕೃಷ್ಣದೇವರಾಯ ಎಲ್ಲಿಗೆ ಹೋದರೂ ಆತನ ಅಡುಗೆ ಕೆಲಸ ನೋಡಿಕೊಳ್ಳಲು ನಾಲ್ಕು ಸಾವಿರ ಪತ್ನಿಯರು ಕಾಲ್ನಡಿಗೆಯಲ್ಲಿಯೇ ಸಾಗುತ್ತಿದ್ದರಂತೆ. ಇವರಿಗಿಂತ ರೂಪವತಿಯರಾದ ನಾಲ್ಕು ಸಾವಿರ ಪತ್ನಿಯರು ಕುದುರೆ ಮೇಲೆ ಸಾಗುತ್ತಾರೆ. ಉಳಿದ ಪತ್ನಿಯರನ್ನು ಗಂಡಸರು ಪಲ್ಲಕ್ಕಿಯ ಮೇಲೆ ಕರೆದುಕೊಂಡು ಹೋಗುತ್ತಾರೆ ಎಂದು ವರ್ಣಿಸಿದ್ದಾನೆ.

ಈಗ 500 ವರ್ಷಗಳ ಹಿಂದೆ ಅಂದರೆ 1520ರಲ್ಲಿ ವಿಜಯನಗರಕ್ಕೆ ಭೇಟಿ ನೀಡಿದ್ದ ಪೋರ್ಚುಗಲ್ ಪ್ರವಾಸಿ ಡೊಮಿಂಗೊ ಪಯಸ್ ಕೃಷ್ಣದೇವರಾಯನ ಆಡಳಿತ, ಸೈನ್ಯ, ಹಣಕಾಸು ನಿರ್ವಹಣೆ, ದಸರಾ ವೈಭವದ ಬಗ್ಗೆ ಸಾಕಷ್ಟು ಕುತೂಹಲಕಾರಿ ಅಂಶಗಳನ್ನು ವಿವರಿಸಿದ್ದಾನೆ. ವಿಜಯನಗರದ ಅರಸರಲ್ಲಿ ಒಂದು ಪದ್ಧತಿ ಇತ್ತು. ಪ್ರತೀ ರಾಜನೂ ತನ್ನದೇ ಒಂಡು ಭಂಡಾರವನ್ನು ಆರಂಭಿಸುತ್ತಿದ್ದರು. ಅದಕ್ಕೆ ಬೀಗ ಹಾಕಿ ಇಟ್ಟಿರುತ್ತಿದ್ದರು. ಯಾವ ರಾಜನೂ ಅದನ್ನು ಒಡೆಯುವಂತಿಲ್ಲ. ಬಹಳ ಅವಶ್ಯಕತೆ ಇದ್ದರೆ ಮಾತ್ರ ಅದನ್ನು ಬಳಸಬೇಕು. ಅದು ಆಪತ್ ಧನ. ಕೃಷ್ಣದೇವರಾಯ ಪ್ರತಿ ವರ್ಷ ಈ ಭಂಡಾರದಲ್ಲಿ ಒಂದು ಕೋಟಿ ಪರ್ದಾಒ ಇಡುತ್ತಿದ್ದನಂತೆ. ಪರ್ದಾಒ ನಾಣ್ಯಗಳು ದುಂಡಗಿವೆ. ಅದನ್ನು ಚಿನ್ನದಿಂದ ತಯಾರಿಸಲಾಗಿದೆ. ವಿಜಯನಗರದಲ್ಲಿ ಅಲ್ಲದೆ ಬೇರೆಲ್ಲಿಯೂ ನಾಣ್ಯಗಳನ್ನು ಟಂಕ ಒತ್ತುವ ಹಾಗಿಲ್ಲ. ಇದು ಭಾರತದ ಎಲ್ಲ ಕಡೆ ಚಲಾವಣೆಯಲ್ಲಿ ಇತ್ತು. ಕೃಷ್ಣದೇವರಾಯ ತನ್ನ ಆದಾಯವನ್ನು ನಾಲ್ಕು ಭಾಗಗಳಾಗಿ ವಿಂಗಡಿಸುತ್ತಿದ್ದ. ಒಂದು ಭಾಗವನ್ನು ದಾನ ಧರ್ಮಗಳಿಗೂ, ಇನ್ನೊಂದು ಭಾಗವನ್ನು ಸ್ವಂತ ವಿಲಾಸಕ್ಕೂ ಮೂರನೇ ಭಾಗವನ್ನು ಸೈನ್ಯದ ವೆಚ್ಚಕ್ಕೂ ಹಾಗೂ ನಾಲ್ಕನೇ ಭಾಗವನ್ನು ಭಂಡಾರದಲ್ಲಿ ಕೂಡಿಡುವುದಕ್ಕೂ ಬಳಸುತ್ತಿದ್ದ.

ಕೃಷ್ಣದೇವರಾಯನ ಬಳಿ ಯಾವಾಗಲೂ ಕಾದಾಟಕ್ಕೆ ಸಿದ್ಧವಾದ 10 ಲಕ್ಷ ಸೈನಿಕರ ಸೇನೆ ಇತ್ತು. ಇದರಲ್ಲಿ ಮೂವತ್ತೈದು ಸಾವಿರ ಶಸ್ತ್ರಸಜ್ಜಿತ ಅಶ್ವದಳವೂ ಸೇರಿದೆ. ಇದಲ್ಲದೆ ಸಾಮಂತರು, ದಳವಾಯಿಗಳ ಬಳಿಯೂ ಸಾಕಷ್ಟು ಸೇನೆ ಇದೆ. ರಾಜ ಕರೆದ ತಕ್ಷಣ ಈ ಸೈನಿಕರು ಬರುತ್ತಾರೆ. ದಸರಾ ಹಬ್ಬದಲ್ಲಿ ರಾಜನಿಗೆ ಎಲ್ಲ ಸಾಮಂತರೂ ಕಪ್ಪ ಒಪ್ಪಿಸುತ್ತಾರೆ. ಆಗ ಒಂದೇ ದಿನ ರಾಜನಿಗೆ ಹತ್ತು ಲಕ್ಷ ಐದು ಸಾವಿರ ಚಿನ್ನದ ಪಾರ್ದಾಒ ಬರುತ್ತದೆ.

1535–37ರ ನಡುವೆ ವಿಜಯನಗರಕ್ಕೆ ಭೇಟಿ ನೀಡಿದ್ದ ಫರ್ನಾವ್ ನ್ಯೂನಿಜ್ ಪ್ರಕಾರ ಆಗಿನ ವಿಜಯನಗರದ ಅರಸು ಅಚ್ಚುತರಾಯನಿಗೆ 200ಕ್ಕೂ ಹೆಚ್ಚು ಸಾಮಂತರಿದ್ದರು. ಸಾಮಂತರು ಅವರ ಆಡಳಿತಕ್ಕೆ ನೀಡಿದ ಪ್ರದೇಶವನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಶೇಕಡ 10ರಿಂದ ಶೇಕಡ 33ರಷ್ಟು ತೆರಿಗೆಯನ್ನು ಅವರು ರಾಜರಿಗೆ ನೀಡುತ್ತಿದ್ದರು. ಆಗಿನ ಕಾಲದಲ್ಲಿ ಭೂಮಿ ಎಲ್ಲವೂ ರಾಜನದ್ದೇ ಆಗಿತ್ತು. ಅತಿ ಹೆಚ್ಚಿನ ಆದಾಯ ಭೂ ಕಂದಾಯದಿಂದಲೇ ಬರುತ್ತಿತ್ತು.

ರಾಜನ ಬಳಿ 800 ಅಥವಾ 900 ಕುದುರೆಗಳು ಇದ್ದವು. ನಾಲ್ಕು ನೂರಕ್ಕೂ ಹೆಚ್ಚು ಆನೆಗಳಿದ್ದವು. ಕುದುರೆ ಮತ್ತು ಆನೆಗಳ ಊಟಕ್ಕಾಗಿಯೇ ಅಚ್ಚುತರಾಯ ಪ್ರತಿದಿನ ಎರಡು ಸಾವಿರ ಸುವರ್ಣ ಪರ್ದಾಒ ಖರ್ಚು ಮಾಡುತ್ತಿದ್ದ. ಕುದುರೆಯಾಳುಗಳೇ 6 ಸಾವಿರ ಮಂದಿ ಇದ್ದರು. ಅವರಲ್ಲಿ ಕೆಲವರಿಗೆ ಪ್ರತಿವರ್ಷ ಸಾವಿರ, ಕೆಲವರಿಗೆ ಐದು ನೂರು, ಇನ್ನು ಕೆಲವರಿಗೆ ಮೂರು ನೂರು ಪರ್ದಾಒಗಳನ್ನು ಸಂಬಳವಾಗಿ ನೀಡಲಾಗುತ್ತಿತ್ತು. ಯಾವ ಆಳಿನ ಸಂಬಳವೂ ಒಂದು ನೂರು ಪರ್ದಾಒಕ್ಕಿಂತ ಕಡಿಮೆ ಇರಲಿಲ್ಲ.

ದಸರಾ ಸಂದರ್ಭದಲ್ಲಿ ನಡೆಯುವ ರಾಜನ ದರ್ಬಾರು, ಅರಮನೆ ವೈಭವ, ರಾಜ ಬೀದಿಗಳ ಅಲಂಕಾರ, ಎಲ್ಲಿ ನೋಡಿದರೂ ವಜ್ರ ವೈಢೂರ್ಯ ಎಲ್ಲವನ್ನೂ ವಿದೇಶಿ ಪ್ರವಾಸಿಗರು ವರ್ಣಿಸಿದ್ದಾರೆ. ರಾಜ ದರ್ಬಾರಿನಲ್ಲಿರುವ ನರ್ತಕಿಯರು ಧರಿಸಿರುವ ಆಭರಣಗಳನ್ನು ವರ್ಣಿಸಲು ತನ್ನಲ್ಲಿ ಪದಗಳೇ ಇಲ್ಲ ಎಂದು ಪಯಸ್ ಹೇಳುತ್ತಾನೆ. ವಜ್ರ ವೈಢೂರ್ಯಗಳ, ಮುತ್ತು ಮಾಣಿಕ್ಯಗಳ ಕೊರಳ ಪಟ್ಟಿ, ತೋಳ್ಬಂದಿ, ನಡುಪಟ್ಟಿ, ಕಾಲ್ಕಡಗ ಇವುಗಳನ್ನು ನೋಡಿದರೆ ಅಚ್ಚರಿಯಾಗುತ್ತದೆ ಎಂದು ಹೇಳುತ್ತಾನೆ ಅವನು. ಈ ಊರಿನಲ್ಲಿ ಒಂದು ಲಕ್ಷ ಪರ್ದಾಒ ಆದಾಯ ಇರುವ ನಾಯಕಸಾನಿಗಳೂ ಇದ್ದಾರೆ ಎಂದು ಆತ ಹೇಳುತ್ತಾನೆ.

ಅರಮನೆಯ ದ್ವಾರಪಾಲಕಿಯರು, ಬೆಳ್ಳಿ ಬೆತ್ತವನ್ನು ಹಿಡಿದ ಪ್ರತಿಹಾರಿಗಳೂ ಅತ್ಯಂತ ಶ್ರೀಮಂತ ಆಭರಣಗಳನ್ನು ಧರಿಸಿರುತ್ತಾರೆ. ಮುತ್ತಿನ ಅಲಂಕಾರ ಮಾಡಿದ ಕುಲಾಯಿಗಳು, ಕುತ್ತಿಗೆಯಲ್ಲಿ ರತ್ನಖಚಿತವಾದ ಪದಕಗಳೂ, ಭುಜಕೀರ್ತಿಗಳೂ, ಕೈಗೆ ಬಂಗಾರದ ಬಳೆಗಳು, ತೋಳಿಗೆ ಬಂದಿಗಳು, ಸೊಂಟಕ್ಕೆ ಒಂದರ ಕೆಳಗೆ ಒಂದರಂತೆ ಹಲವಾರು ಪಟ್ಟಿಗಳು, ಕಾಲಿಗೆ ಕಡಗಗಳನ್ನೂ ಧರಿಸಿ ಚಿನ್ನದ ಗಿಂಡಿಗಳನ್ನು ಕೈಯಲ್ಲಿ ಹಿಡಿದಿರುತ್ತಾರೆ. ಚಿನ್ನದ ಗಿಂಡಿಗಳಿಗೂ ಮುತ್ತಿನ ಅಲಂಕಾರವಿರುತ್ತದೆ. ಇವರ ಮೈಮೇಲೆ ಎಷ್ಟು ಆಭರಣಗಳು ಇರುತ್ತವೆ ಎಂದರೆ ಅವರಿಗೆ ನಡೆಯಲೂ ಆಗುವುದಿಲ್ಲ. ಸಖಿಯರ ಭುಜದ ಮೇಲೆ ಕೈಯಿಟ್ಟು ನಡೆದು ಬರುತ್ತಾರೆ. ಇನ್ನು ಕೆಲವರನ್ನು ಸಖಿಯರೇ ಎತ್ತಿಕೊಂಡು ಬರುತ್ತಾರೆ. ಇವರೆಲ್ಲಾ ರಾಣಿಯರ ಗೌರವಾನುಚಾರಿಕೆಯರು. ನವರಾತ್ರಿಯ ಒಂಭತ್ತೂ ದಿನಗಳಲ್ಲಿ ಪ್ರತಿ ರಾಣಿಯೂ ಅನುಚಾರಿಕೆಯರನ್ನು ಭವ್ಯವಾಗಿ ಅಲಂಕರಿಸಿ ಕಳುಹಿಸುತ್ತಾರೆ.

ದಸರಾ ಸಂದರ್ಭದಲ್ಲಿ ಎಲ್ಲರಿಗೂ ಪುಷ್ಕಳ ಭೋಜನ. ಈ ಸಂದರ್ಭದಲ್ಲಿ ಕನಿಷ್ಠ ಎಂದರೂ 250 ಕೋಣಗಳನ್ನೂ 4500 ಕುರಿಗಳನ್ನೂ ಬಲಿ ಕೊಡಲಾಗುತ್ತದೆ. ದಸರಾ ಎಂದರೆ ಕೇವಲ ಹಬ್ಬವಲ್ಲ. ಆನೆ, ಕುದುರೆ, ವಜ್ರ ವೈಢೂರ್ಯ, ಬಟ್ಟೆ ಮುಂತಾದ ವಸ್ತುಗಳ ಆಮದು ರಫ್ತು ಚಟುವಟಿಕೆ ಹೆಚ್ಚಿಸಲೂ ಅವಕಾಶ ಒದಗಿಸುತ್ತಿತ್ತು. ಕುಸ್ತಿ, ಇಂದ್ರಜಾಲ, ನೃತ್ಯ, ಸಂಗೀತ, ಕ್ರೀಡಾ ಸ್ಪರ್ಧೆ ಎಲ್ಲವೂ ನಡೆಯುತ್ತಿತ್ತು.

ಐನೂರಕ್ಕೂ ಹೆಚ್ಚು ವರ್ಷಗಳಿಂದ ದಸರಾ ನಡೆಯುತ್ತಿದೆ. ರಾಜ್ಯಕ್ಕೆ ಆದಾಯ ತಂದುಕೊಡುವ, ಪ್ರವಾಸಿಗರನ್ನು ಆಕರ್ಷಿಸುವ, ಆಡಳಿತದಲ್ಲಿ ಸುಧಾರಣೆ ತರುವ, ಬಜೆಟ್ ಮಂಡಿಸುವ ಸಂದರ್ಭವಾಗಿದ್ದ ದಸರಾ ಹಬ್ಬವನ್ನು ನಾವು ಈಗ ಕೇವಲ ಸಂಗೀತ, ನೃತ್ಯ ಪ್ರದರ್ಶನ, ಕ್ರೀಡಾ ಸ್ಪರ್ಧೆಗಳಿಗೆ ಸೀಮಿತಗೊಳಿಸಿದ್ದೇವೆ. ಪ್ರವಾಸೋದ್ಯಮದ ದೃಷ್ಟಿಯಿಂದ ಕೆಲವು ಕಾರ್ಯಕ್ರಮಗಳು ನಡೆಯುತ್ತಿವೆಯಾದರೂ ವಿದೇಶಿಗರು ಅಚ್ಚರಿಪಡುವಂತಹ ಕಾರ್ಯಕ್ರಮಗಳು ಈಗಿಲ್ಲ. ಆಗ ನಮ್ಮ ರಾಜ್ಯದ್ದೇ ಆದ ವಿಶಿಷ್ಟ ಕಲೆಗಳು ಪ್ರದರ್ಶನಗೊಳ್ಳುತ್ತಿದ್ದವು. ಅದನ್ನು ನೋಡಿ ವಿದೇಶಿಗರು ತಮ್ಮ ದೇಶಕ್ಕೆ ಹೋಗಿ ಪ್ರಚಾರ ಮಾಡುತ್ತಿದ್ದರು. ಈಗ ಕಾಲ ಬದಲಾಗಿದೆ. ಅವರನ್ನು ಆಕರ್ಷಿಸುವ ಕಲೆಗಳನ್ನೂ, ಆಡಳಿತವನ್ನೂ ನಾವು ಬಿಟ್ಟಿದ್ದೇವೆ. ಈಗ ನಾವು ಕರೆದರೂ ಕಡಲಾಚೆಯವರು ಬರುತ್ತಿಲ್ಲ. ಬಂದವರೂ ಅಚ್ಚರಿ ಪಡುತ್ತಿಲ್ಲ. ದಸರೆ ಎಂಬುದು ನಾಡಸಿರಿ ನಿಜ. ಆದರೆ, ಅದು ನಿಜವಾದ ಅರ್ಥದಲ್ಲಿ ಮತ್ತೆ ನಾಡಸಿರಿ ಆಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT