ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಟ್ಟ ಊರಿನ ದೊಡ್ಡ ಸಾಧಕ!

ಸಂಯೋಜಿತ ಚಿಕಿತ್ಸೆ ಮಾಡಿತು ಸದ್ದು; ಆನೆಕಾಲು ರೋಗಕ್ಕೆ ಸಿಕ್ಕಿತು ಮದ್ದು
Last Updated 23 ನವೆಂಬರ್ 2019, 19:30 IST
ಅಕ್ಷರ ಗಾತ್ರ

ರಾಜ್ಯದ ಗಡಿಭಾಗದ ಪ್ರಸಿದ್ಧ ಕ್ಷೇತ್ರ ಮಧೂರಿನಿಂದ ಕಾಸರಗೋಡಿನ ಕಡೆಗೆ ಹೋಗುವ ಬಸ್‌ ಏರಲು ನೀವೊಂದು ವೇಳೆ ಉಳಿಯತ್ತಡ್ಕದ ಬಸ್‌ ನಿಲ್ದಾಣದಲ್ಲಿ ನಿಂತಿದ್ದಾದರೆ ಮಣಭಾರದ ಕಾಲನ್ನು ಹೊರಲಾರದೆ ಹೊತ್ತು, ಯಾತನೆಯಿಂದ ಹೆಜ್ಜೆ ಹಾಕುವ ಹಲವರು ತಪ್ಪದೇ ನಿಮ್ಮ ಕಣ್ಣಿಗೆ ಬೀಳುತ್ತಾರೆ. ‘ಆನೆಕಾಲು’ ರೋಗದಿಂದ ಬಳಲುವ ಇಷ್ಟೊಂದು ಜನ ಎಲ್ಲಿಂದ ಬಂದರು ಎಂದು ನೀವು ತಲೆ ಕೆರೆದುಕೊಳ್ಳುತ್ತಿದ್ದರೆ, ‘ಇನ್ನೇನು ದೊಡ್ಡ ಹೊರೆಯಿಂದ ಮುಕ್ತರಾಗಲಿದ್ದೇವೆ’ ಎಂಬ ಆಸೆಯಿಂದ ಅವರೆಲ್ಲ ಕಾಲು ಎತ್ತಿಡಲು ಯತ್ನಿಸುತ್ತಿರುತ್ತಾರೆ!

‘ಆನೆಕಾಲು (ಲಿಂಫೋಡಿಮಾ, ಫೈಲೇರಿಯಾಸಿಸ್‌) ರೋಗವನ್ನು ಗುಣಪಡಿಸುವಂತಹ ಔಷಧಿಯೇ ಇಲ್ಲ’ ಎಂದು ಇಡೀ ವೈದ್ಯ ಜಗತ್ತು ಕೈಚೆಲ್ಲಿ ಕುಳಿತಿದ್ದಾಗ, ಅದನ್ನೇ ಸವಾಲಾಗಿ ಸ್ವೀಕರಿಸಿದವರು ಕಾಸರಗೋಡಿನ ಚರ್ಮರೋಗತಜ್ಞ ಡಾ.ಎಸ್‌.ಆರ್‌.ನರಹರಿ. ಕೊನೆಗೂ ಈ ಕಾಯಿಲೆಗೊಂದು ಸಂಯೋಜಿತ ಔಷಧಿಯನ್ನು (integrated medicine) ಕಂಡು ಹಿಡಿದುದಲ್ಲದೆ ಬಲೂನಿನಂತೆ ಊದಿಕೊಂಡ ಕಾಲುಗಳಿಂದ ಬಳಲುತ್ತಿದ್ದವರ ಹೊರೆಯನ್ನೆಲ್ಲ ಕಳಚಿಸಿ ಖುಷಿಯಿಂದ ಓಡಾಡುವಂತೆ ಮಾಡಿದವರು ಅವರು.

ಆನೆಕಾಲು ರೋಗಕ್ಕೆ ಚಿಕಿತ್ಸೆ ಬೇಕು ಎಂದೊಡನೆ –ಭಾರತ ಮಾತ್ರವೇ ಅಲ್ಲ– ಜಗತ್ತಿನ ಹಲವು ದೇಶಗಳ ದಾರಿಗಳು ರಾಜ್ಯದ ಗಡಿಭಾಗದಲ್ಲಿರುವ ಕೇರಳದ ಈ ಪುಟ್ಟ ಊರಿನ ಕಡೆಗೆ ಹೊರಳಿಬಿಡುತ್ತವೆ. ಹೌದು, ಸಮಾನಮನಸ್ಕರ ಜತೆಗೂಡಿ ಡಾ. ನರಹರಿ ಅವರು ಇಲ್ಲಿ ಆರಂಭಿಸಿದ ಇನ್ಸ್‌ಟಿಟ್ಯೂಟ್‌ ಆಫ್‌ ಅಪ್ಲಾಯ್ಡ್‌ ಡೆರ್ಮಟಾಲಜಿಯು (ಐಎಡಿ) ಲಿಂಫೋಡಿಮಾ ಸಂಬಂಧಿತ ಕಾಯಿಲೆಗಳಿಗೆ ರೂಪಿಸಿರುವ ಚಿಕಿತ್ಸೆಯ ಮ್ಯಾಜಿಕ್ಕೇ ಅಂತಹದ್ದು.

ಆರೋಗ್ಯವೂ ಒಂದು ಸರಕಾಗಿ, ಸುತ್ತಲೂ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳ ಸಂತೆಯೇ ನೆರೆದಿರುವ ಈ ಹೊತ್ತಿನಲ್ಲಿ ಅವುಗಳ ನಡುವೆ ಒಬ್ಬ ಸಂತನಂತೆ ರೋಗಿಗಳ ಸೇವೆಯಲ್ಲಿ ತೊಡಗಿದೆ ಐಎಡಿ. ಲಾಭದ ಉದ್ದೇಶವಿಲ್ಲದ ಈ ಸಂಸ್ಥೆಯ ಮುಖ್ಯ ಗುರಿ ಕಾಯಿಲೆಗಳನ್ನು ವಾಸಿ ಮಾಡಲು ಪರಿಣಾಮಕಾರಿ ಸಂಯೋಜಿತ ಔಷಧಿಯನ್ನು ಕಂಡು ಹಿಡಿಯುವುದು. ಅವುಗಳಲ್ಲಿ ಆನೆಕಾಲು ರೋಗಕ್ಕೆ ಈ ಸಂಸ್ಥೆ ಶೋಧಿಸಿದ ಸಂಯೋಜಿತ ಔಷಧಿ ಅತ್ಯಂತ ಹೆಚ್ಚಿನ ಯಶಸ್ಸು ಕಂಡಿದೆ. ಈ ಸಂಸ್ಥೆಯು ಸ್ಥಾಪನೆಯಾಗಿ ಇದೀಗ 20 ವಸಂತಗಳನ್ನು ಪೂರೈಸಿದ್ದು, ಇದುವರೆಗೆ ಹತ್ತು ಸಾವಿರಕ್ಕೂ ಹೆಚ್ಚು ರೋಗಿಗಳಿಗೆ ಮಣಭಾರದ ಮಾಂಸದ ಮುದ್ದೆಯನ್ನು ಹೊರುವ ಯಾತನೆಯಿಂದ ಮುಕ್ತಿ ನೀಡಿದೆ. ಅವರ ಆನೆಕಾಲುಗಳು ಮತ್ತೆ ಮನುಷ್ಯರ ಕಾಲುಗಳಾಗಿ ಬದಲಾಗಿವೆ!

ಏನಿದು ಸಂಯೋಜಿತ ಚಿಕಿತ್ಸೆ?

‘ಆನೆಕಾಲು ರೋಗಕ್ಕೆ ಮದ್ದೇ ಇರಲಿಲ್ಲ. ಎಲ್ಲೋ ದಾರಿಯಲ್ಲಿ ಸಿಗುತ್ತಿದ್ದ ಕಾಯಿಲೆ ಪೀಡಿತರ ಯಾತನೆಯನ್ನು ಕಂಡಾಗ ಕರಳು ಚುರ್ರ್ ಎನ್ನುತ್ತಿತ್ತು. ಹೇಗಾದರೂ ಮಾಡಿ ಅವರಿಗೆ ನೆರವಿನಹಸ್ತವನ್ನು ಚಾಚಬೇಕು ಎಂಬ ತುಡಿತ ಸದಾ ಕಾಡುತ್ತಿತ್ತು. ಆ ಉತ್ಕಟ ಹಂಬಲವೇ ನಮ್ಮನ್ನು ಪ್ರವಾಹದ ವಿರುದ್ಧ ಈಜುವಂತೆ ಮಾಡಿತು, ಯಶಸ್ವಿಯಾಗಿ ಸಂಯೋಜಿತ ಚಿಕಿತ್ಸಾ ವಿಧಾನವನ್ನು ಸಂಶೋಧಿಸಲೂ ಕಾರಣವಾಯಿತು’ ಎನ್ನುತ್ತಾರೆ ಡಾ. ನರಹರಿ.

ಪರಂಪರಾಗತ ಆಯುರ್ವೇದ ಮತ್ತು ಯೋಗ ಪದ್ಧತಿಗಳಲ್ಲಿ ಲಭ್ಯವಿರುವ ರೋಗ ಉಪಶಮನದ ಕ್ರಮಗಳನ್ನು, ಗಿಡಮೂಲಿಕೆಗಳಿಂದ ಸಿದ್ಧಪಡಿಸಿದ ಔಷಧಿಗಳನ್ನು ಅಲೊಪತಿ ವಿಧಾನದೊಂದಿಗೆ ಬೆರೆಸಿ, ಆನೆಕಾಲು ರೋಗಕ್ಕೆ ಸಂಯೋಜಿತ ಚಿಕಿತ್ಸಾ ಪದ್ಧತಿಯೊಂದನ್ನು ರೂಪಿಸಿರುವುದು ಡಾ.ನರಹರಿ ಅವರ ಹೆಗ್ಗಳಿಕೆ. ‘ಲಾಗಾಯ್ತಿನಿಂದ ಕಾಡುತ್ತಿದ್ದ ಈ ಸಮಸ್ಯೆಯನ್ನು ಸಮಗ್ರ ಚಿಕಿತ್ಸಾ ವಿಧಾನದ ಮೂಲಕ ಪರಿಹರಿಸಲು ಯತ್ನಿಸಿದ್ದೇವೆ’ ಎಂದು ಅವರು ವಿನೀತರಾಗಿ ಹೇಳುತ್ತಾರೆ.

ಚಿಕಿತ್ಸಾ ವಿಧಾನವನ್ನು ರೂಪಿಸಿದ ಕಥೆಯೂ ಅಷ್ಟೇ ರೋಚಕ. ಮೊದಲು ಆಯುರ್ವೇದ ಮತ್ತಿತರ ಶಾಖೆಗಳ ವೈದ್ಯರೆಲ್ಲ ಒಂದೆಡೆ ಕುಳಿತು ಚರ್ಚಿಸಿದರು. ರೋಗವನ್ನು ವಾಸಿ ಮಾಡಬಲ್ಲ ಔಷಧಿಗಳ ಕುರಿತು ಸಮೀಕ್ಷೆ ನಡೆಸಿದರು. ರೋಗಿಗಳು ಜತೆಯಲ್ಲಿ ತರುತ್ತಿದ್ದ ಫೈಲ್‌ಅನ್ನು ಡಾ. ನರಹರಿ ಬಲು ಸೂಕ್ಷ್ಮವಾಗಿ ಗಮನಿಸತೊಡಗಿದರು. ಇದರಿಂದ ರೋಗದ ಚಿಕಿತ್ಸೆಯಲ್ಲಿ ಉಪಯೋಗಜನ್ಯ ಹಾಗೂ ಉಪಯೋಗಶೂನ್ಯ ಔಷಧಿಗಳು ಯಾವುವು ಎಂಬುದನ್ನು ಪಟ್ಟಿ ಮಾಡಲು ಅವರಿಗೆ ಸಾಧ್ಯವಾಯಿತು.

ರೋಗದ ಲಕ್ಷಣಗಳನ್ನು ಅರಿಯಲು ಅಲೊಪತಿ ಪರೀಕ್ಷಾ ವಿಧಾನಗಳನ್ನೇ ಅನುಸರಿಸಲಾಯಿತು. ಆಯುರ್ವೇದದ ಔಷಧಿ ಹೊಟ್ಟೆಯೊಳಗಿನ ಹುಣ್ಣನ್ನು ಗುಣಪಡಿಸುತ್ತದೆ ಎಂದಾದರೆ ಅದೇ ಗುಣಲಕ್ಷಣ ಹೊಂದಿದ ಕಾಲಿನ ಊತವನ್ನು ಏಕೆ ಕಡಿಮೆ ಮಾಡದು ಎಂಬ ಪ್ರಶ್ನೆ ಸಂಶೋಧನೆಯಲ್ಲಿ ನಿರತವಾಗಿದ್ದ ಅವರನ್ನು ಕಾಡತೊಡಗಿತು. ಪೆಥಾಲಜಿಯಲ್ಲಿ ಅವರು ಹೊಂದಿದ್ದ ಜ್ಞಾನ ಹೊಸ ಚಿಕಿತ್ಸಾ ವಿಧಾನದ ಆವಿಷ್ಕಾರದ ಹಾದಿಯಲ್ಲಿ ನೆರವಿಗೆ ಬಂತು. ಆಯುರ್ವೇದದ ಆ ಔಷಧವನ್ನು ಬಕೆಟ್‌ನಲ್ಲಿ ಹಾಕಿ ‘ಆನೆಕಾಲ’ನ್ನು ಪ್ರತಿದಿನ ಕೆಲವು ಗಂಟೆಗಳ ಕಾಲ, ಹಲವು ದಿನಗಳವರೆಗೆ ಇರಿಸಿ ಪರೀಕ್ಷಿಸಲಾಯಿತು.

ಏನಾಶ್ಚರ್ಯ! ಕಾಲಿನ ಗಾಯಗಳು ಮಾಯವಾಗತೊಡಗಿದವು. ಅದರೊಡನೆ ಯೋಗಾಸನ ಮತ್ತು ಮಸಾಜ್‌ನಿಂದ ಊತವೂ ಕಡಿಮೆ ಆಗತೊಡಗಿತು. ಕಾಲಿನ ತೂಕ 18 ಕೆಜಿಯಿಂದ ಆರು ಕೆಜಿಗೆ ಇಳಿಯಿತು. ಚಿಕಿತ್ಸೆಯ ಅವಧಿಯಲ್ಲಿ ಸೋಂಕು ನಿಯಂತ್ರಣಕ್ಕಾಗಿ ಅಲೊಪತಿ ಔಷಧಿಯನ್ನು ಬಳಕೆ ಮಾಡಲಾಯಿತು. ಚಿಕಿತ್ಸೆ ಮುಗಿದ ಬಳಿಕ ಮತ್ತೆ ಅಲೊಪತಿ ವಿಧಾನದ ಮೂಲಕ ಪರೀಕ್ಷೆಗೆ ಒಳಪಡಿಸಿದರೆ ಕಾಯಿಲೆ ಬಹುಪಾಲು ಗುಣವಾಗಿರುವುದು ಖಚಿತವಾಯಿತು. ಆನೆಕಾಲು ರೋಗದ ಉಪಶಮನಕ್ಕೆ ಸಂಯೋಜಿತ ಚಿಕಿತ್ಸಾ ವಿಧಾನವೊಂದು ಈ ಪ್ರಯೋಗಗಳಿಂದ ಆವಿಷ್ಕಾರವಾಗಿತ್ತು.

ಚಿಕಿತ್ಸೆಗಾಗಿ ಒಂದು ಪ್ರೊಟೊಕಾಲ್‌ (ವಿಧಿಗಳು) ಸಿದ್ಧಪಡಿಸಲಾಗಿದ್ದರೂ ವ್ಯಕ್ತಿಯಿಂದ ವ್ಯಕ್ತಿಗೆ ಚಿಕಿತ್ಸಾ ಕ್ರಮ ತುಸು ಭಿನ್ನ. ರೋಗ ಹೇಗೆ ಉತ್ಪತ್ತಿಯಾಗಿದೆ ಎಂಬುದನ್ನು ಪತ್ತೆಮಾಡಿ, ಪೆಥೊ ಫಿಜಿಯಾಲಜಿಗೆ ತಕ್ಕಂತೆ ಸಣ್ಣಪುಟ್ಟ ಬದಲಾವಣೆಗಳನ್ನೂ ಮಾಡಿಕೊಂಡು ಚಿಕಿತ್ಸೆ ನೀಡುವಂತಹ ವ್ಯವಸ್ಥೆಯನ್ನು ಐಎಡಿ ರೂಪಿಸಿದೆ.

‘ನಾವು ಎಂಬಿಬಿಎಸ್‌ ಕಲಿಯುವಾಗ ಆಯುರ್ವೇದವಲ್ಲದೆ ಅಂತಹ ಇತರ ಅಂಧಶ್ರದ್ಧೆಗಳಿಂದ ಏನೇನೂ ಪ್ರಯೋಜನವಿಲ್ಲ ಎಂದು ನಮ್ಮ ಪ್ರಾಧ್ಯಾಪಕರು ಸಾಮಾನ್ಯವಾಗಿ ಪ್ರತಿಪಾದಿಸುತ್ತಿದ್ದರು. ಅಲೊಪತಿ ಹೊರತುಪಡಿಸಿ ಬೇರೆ ಔಷಧಗಳು ವೈಜ್ಞಾನಿಕವಾದವುಗಳಲ್ಲ ಎಂದೂ ಹೇಳಿಕೊಡಲಾಗುತ್ತಿತ್ತು. ಆದರೆ, ಮುಂಬೈನ ಜಿ.ಎಸ್‌.ಸೇಠ್‌ ಮೆಡಿಕಲ್‌ ಕಾಲೇಜಿನ ಡೀನ್‌ ಆಗಿದ್ದ ಡಾ. ಶಾರದಿನಿ ಎ.ದಹನುಕರ್‌ ಅವರ ‘ಆಯುರ್ವೇದ ಅನ್‌ರೆವೆಲ್ಡ್‌’ ಕೃತಿ ಆಯುರ್ವೇದವನ್ನು ಹೊಸದೊಂದು ದೃಷ್ಟಿಕೋನದಿಂದ ನೋಡುವಂತೆ ನನ್ನನ್ನು ಪ್ರೇರೇಪಿಸಿತು’ ಡಾ.ನರಹರಿ ಹೇಳುತ್ತಾರೆ.

‘ಇಂಗ್ಲೆಂಡ್‌ನ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದಲ್ಲಿ ಸಸ್ಯಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಡಾ.ಕೆಕೆಎಸ್‌ ಭಟ್‌, ಪಾಂಡಿಚೇರಿಯ ಜಿಪ್‌ಮರ್‌ ಮೆಡಿಕಲ್‌ ಕಾಲೇಜಿನ ಪ್ರಾಧ್ಯಾಪಕರಾಗಿದ್ದ ಡಾ. ವಿಷ್ಣುಭಟ್‌, ಮಂಗಳೂರಿನ ಹೆಸರಾಂತ ವೈದ್ಯ ಡಾ.ಬಿ.ಎಂ.ಹೆಗ್ಡೆ ಅವರಂತಹ ತಜ್ಞರ ಪ್ರೋತ್ಸಾಹ ನನಗೆ ಸಿಕ್ಕಿತು. ಅಲೊಪತಿ ವೈದ್ಯನಾಗಿ ಆಯುರ್ವೇದ ಔಷಧಿಯನ್ನು ಬಳಸಿದ್ದಕ್ಕೆ ಭಾರತೀಯ ವೈದ್ಯಕೀಯ ಸಂಘದಿಂದ ತೀವ್ರ ಪ್ರತಿರೋಧ ಎದುರಿಸಿದಾಗ ಅವರೆಲ್ಲರೂ ನೈತಿಕ ಬೆಂಬಲದ ಮೂಲಕ ನಮ್ಮನ್ನು ಬೀಳದಂತೆ ಕೈಹಿಡಿದು ಮುನ್ನಡೆಸಿದರು’ ಎಂದು ಸಂಶೋಧನೆಯ ಆರಂಭಿಕ ಹೆಜ್ಜೆಗಳನ್ನು ನೆನೆಯುತ್ತಾರೆ.

ಆನೆಕಾಲು ರೋಗಿಗಳು ಅನುಭವಿಸುವ ನೋವು ಡಾ. ನರಹರಿ ಅವರ ಅಂತಃಕರಣವನ್ನು ಬಹುವಾಗಿ ಕಲಕಿದೆ. ಕಾಯಿಲೆಪೀಡಿತರ ಕಾಲು ಹಲವು ಸಲ ತುಂಬಾ ದಪ್ಪವಾಗಿ ಕಕ್ಕಸಕ್ಕೆ ಹೋಗಲೂ ಆಗುವುದಿಲ್ಲ. ಬಹುತೇಕರು ಕೂರಲಾಗದೆ ನಿಂತುಕೊಂಡೇ ಶೌಚ ಕಾರ್ಯವನ್ನು ಪೂರೈಸಬೇಕಾಗುತ್ತದೆ. ಮಕ್ಕಳಿಗಾದರೆ ಅಮ್ಮಂದಿರ ನೆರವು ಸಿಗುತ್ತದೆ. ಆದರೆ, ಇವರು ಯಾರಿಂದ ನೆರವು ಪಡೆಯಬೇಕು? ಅವರ ಬಗೆಗಿನ ಇಂತಹ ನೋವಿನ ಪ್ರಶ್ನೆಗಳು ಮಾನವೀಯ ನೆಲೆಯಲ್ಲಿ ಸಮಸ್ಯೆಗೊಂದು ಪರಿಹಾರ ಹುಡುಕುವ ಐಎಡಿಯ ನಿರ್ಧಾರವನ್ನು ಇನ್ನಷ್ಟು ಗಟ್ಟಿಗೊಳಿಸಿದವು.

ಡಾ.ನರಹರಿ ಅವರ ನೇತೃತ್ವದ ಐಎಡಿ ತಂಡ ಸಂಯೋಜಿತ ಚಿಕಿತ್ಸೆಯನ್ನು ಶೋಧಿಸುವಲ್ಲಿ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ವೈದ್ಯಕೀಯ ವಿಭಾಗದ ಚರ್ಮರೋಗ ತಜ್ಞ ಡಾ.ಟೆರೆನ್ಸ್‌ ಜೆ. ರಯಾನ್‌ ಅವರ ಮಾರ್ಗದರ್ಶನ ಪ್ರಮುಖ ಕಾರಣವಾಯಿತು. ‘ಆನೆಕಾಲು ರೋಗಕ್ಕೆ ಫಲಪ್ರದವಾದ ಅತ್ಯಪೂರ್ವ ಚಿಕಿತ್ಸಾ ವಿಧಾನವನ್ನು ರೂಪಿಸಿದ ಐಎಡಿಯಂತಹ ಸಂಸ್ಥೆ ಜಗತ್ತಿನಲ್ಲಿ ಬೇರೊಂದಿಲ್ಲ. ಅದರ ಚಿಕಿತ್ಸಾ ಗುಣಮಟ್ಟವಂತೂ ಶಿಖರಪ್ರಾಯವಾದುದು’ ಎಂದು ಅವರು ಉದ್ಗಾರ ತೆಗೆದಿದ್ದುಂಟು. ಹಲವು ರಾಷ್ಟ್ರಗಳಿಂದ ಐಎಡಿಗೆ ಚಿಕಿತ್ಸೆಗಾಗಿ ಬರುತ್ತಿರುವ ರೋಗಿಗಳ ಸಂಖ್ಯೆಯೇ ಹೇಳುತ್ತದೆ, ಈ ಚಿಕಿತ್ಸಾ ವಿಧಾನವನ್ನು ಜಗತ್ತು ಹೇಗೆ ಸ್ವೀಕರಿಸಿದೆ ಎಂಬುದನ್ನು.

ಐಎಡಿಯ ಈ ಆವಿಷ್ಕಾರವನ್ನು ಇಡೀ ವೈದ್ಯಕೀಯ ಜಗತ್ತು ಸಹ ತುಂಬಾ ಗೌರವದಿಂದ ಸ್ವೀಕರಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯು ಈ ಯಶಸ್ವಿ ಚಿಕಿತ್ಸಾ ವಿಧಾನದ ಕುರಿತು ವಿವರವಾದ ವರದಿ ಪ್ರಕಟಿಸಿದೆ. ಚಿಕಿತ್ಸೆಯ ಸಂಶೋಧನೆಗಳ ಪ್ರಾಮುಖ್ಯತೆಯನ್ನು ತಿಳಿಸಲು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಕರೆಂಟ್‌ ಸೈನ್ಸ್‌ನ ವಿಶೇಷ ಸಂಚಿಕೆಯನ್ನೇ ಹೊರಡಿಸಿದೆ. ಇಂಟರ್‌ನ್ಯಾಷನಲ್‌ ಲೀಗ್‌ ಆಫ್‌ ಡೆರ್ಮಟಾಲಜಿಸ್ಟ್‌ ಅಸೋಶಿಯೇಷನ್ಸ್‌ನ ವ್ಯಾಂಕೋವರ್‌ ಅಧಿವೇಶನದಲ್ಲಿ ಈ ಚಿಕಿತ್ಸೆಯ ವಿವರ ನೀಡಲು ವಿಶೇಷ ಗೋಷ್ಠಿಯನ್ನು ನಡೆಸಿದ್ದು ಡಾ. ನರಹರಿ ಅವರ ಶ್ರಮಕ್ಕೆ ಸಿಕ್ಕ ಜಾಗತಿಕ ಮನ್ನಣೆ.

ಸಂಯೋಜಿತ ಚಿಕಿತ್ಸೆಗಳ ಆವಿಷ್ಕಾರದಲ್ಲಿ ಐಎಡಿಯೊಂದಿಗೆ ಈಗ ಕೇರಳ ಸರ್ಕಾರ ಸಹ ಕೈಜೋಡಿಸಿದೆ. ಆದರೆ, ಸಂಶೋಧನೆಗೆ ಕೇಂದ್ರ ಇಲ್ಲವೆ ರಾಜ್ಯ ಸರ್ಕಾರದ ನಯಾಪೈಸೆ ಅನುದಾನವನ್ನೂ ಬಳಸಿಲ್ಲ. ವೈದ್ಯರೆಲ್ಲ ಸ್ವಯಂಸೇವಕರಂತೆ ದುಡಿದಿದ್ದು, ದೇಣಿಗೆ ಸಂಗ್ರಹದ ಮೂಲಕ ಹಣಕಾಸಿನ ವ್ಯವಸ್ಥೆ ಮಾಡಿಕೊಂಡಿದ್ದು ವಿಶೇಷ. ಚಿಕಿತ್ಸೆ ಸೌಲಭ್ಯವು ಇನ್ನಷ್ಟು ದೇಶಗಳಲ್ಲಿ ಸಿಗುವಂತಾಗಲು ಬಿಲ್‌ ಗೇಟ್ಸ್‌ ಸಂಸ್ಥೆ ಕೈಜೋಡಿಸಲು ಮುಂದಾಗಿರುವುದು ಐಎಡಿಯ ಉತ್ಸಾಹವನ್ನು ಇಮ್ಮಡಿಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT