ಹೋರಾಟದ ಧ್ವನಿಯಾದ ‘ಚಿಲ್ಲರ ಸಮರಮ್’

ಶನಿವಾರ, ಏಪ್ರಿಲ್ 20, 2019
29 °C

ಹೋರಾಟದ ಧ್ವನಿಯಾದ ‘ಚಿಲ್ಲರ ಸಮರಮ್’

Published:
Updated:
Prajavani

ರಂಗಭೂಮಿ ಅಂತಿಮವಾಗಿ ನಟರ ಮಾಧ್ಯಮ. ನಟನೆಯೇ ಅದರ ಶಕ್ತಿ ಮತ್ತು ಜೀವಾಳ. ಉಳಿದೆಲ್ಲ ಸರಕುಗಳು ಅಂದರೆ ಬೆಳಕು, ರಂಗಪರಿಕರಗಳು ನಟನ ಘನತೆಗೆ ಧಕ್ಕೆ ಬಾರದ ರೀತಿಯಲ್ಲಿ ಹಿತಮಿತವಾಗಿ ಘನತೆಯಿಂದ ಕೂಡಿರಬೇಕು. ನಟರ ನಟನೆ ಶಕ್ತಿಯಿಂದ ನೋಡುಗನಲ್ಲಿ ಭಾವಸ್ಫುರಣೆ ಉಂಟಾಗಿ ಅದರ ಅನುಭೂತಿಯಿಂದ ದಕ್ಕಿದ ರಸಾಸ್ವಾದ ಬಹಳ ದೀರ್ಘಕಾಲ ಗುಂಯ್‍ ಗುಟ್ಟುತ್ತಿರುತ್ತದೆ. ಆದರೆ ಇತ್ತೀಚೆಗೆ ನಾಟಕೀಕರಣವಾಗಬಲ್ಲ ರಂಗ ಕ್ರಿಯೆಗಳನ್ನು ಮರೆಸಿಬಿಡುವಂತೆ ಹೊಗೆಭರಿತ ಮಾಯಾ ಬೆಳಕಿನ ವರ್ತುಲಗಳಿಂದ ರಂಗದ ಮೇಲೆ ಅತಿರಂಜಿತ ಲೋಕವನ್ನು ಸೃಷ್ಟಿಸಿ, ನಟ ಮತ್ತು ನೋಡುಗನ ನಡುವೆ ಇರಬೇಕಾದ ಭಾವ ಲೋಕವನ್ನು ಭ್ರಮಾಲೋಕವಾಗಿಸಿ ಬಿಡುವ ಅತಿರೇಕದ ರಂಗ ಪ್ರಯೋಗಗಳನ್ನು ಕಾಣುತ್ತಿದ್ದೇವೆ. ಇದಕ್ಕೆ ಅಪವಾದ ಮತ್ತು ಅಪರೂಪವೆಂಬಂತೆ ಪ್ರಸ್ತುತಗೊಂಡ ನಿಜದ ನಾಟಕ ಚಿಲ್ಲರ ಸಮರಮ್. ಇದು ಇವತ್ತಿನ ರಂಗಭೂಮಿಯ ವ್ಯಾಕರಣದಲ್ಲಿ ನಟನ ಘನತೆ ಮತ್ತು ನಿರ್ದೇಶಕನ ಸೃಜನಶೀಲತೆಗೆ ಸಾಕ್ಷಿಯಾದ ಜನ ಸಾಮಾನ್ಯರ ಹೋರಾಟದ ನಾಟಕ.

ಚಿಲ್ಲರ ಸಮರಮ್ ನಾಟಕ ಕೇರಳದ ‘ಲಿಟ್ಲ್ ಅರ್ಥ್ ಸ್ಕೂಲ್ ಅಫ್ ಥಿಯೇಟರ್’ ನವರು ಪ್ರಸ್ತುತ ಪಡಿಸಿದ ಮಲಯಾಳಂ ನಾಟಕ. ಮುರಾರಿ-ಕೆದ್ಲಾಯ ನಾಟಕೋತ್ಸವದಲ್ಲಿ ರಥಬೀದಿ ಗೆಳೆಯರು ಉಡುಪಿ ಇದರ ಆಯೋಜನೆಯಲ್ಲಿ ಪ್ರದರ್ಶನಗೊಂಡ ನಾಟಕ. ಕೇರಳದ ಯುವ ಪ್ರತಿಭಾನ್ವಿತ ನಿರ್ದೇಶಕ ಅರುಣ್ ಲಾಲ್ ನಿರ್ದೇಶನದ ಒಂದು ಘಂಟೆ ಹದಿನೈದು ನಿಮಿಷದ ಈ ನಾಟಕ ಜನಸಾಮಾನ್ಯರ ದಿನನಿತ್ಯದ ಹೋರಾಟದ, ಛಲದ ಬದುಕಿನ ಕತೆಯ ಚಿತ್ರಣ. ಹಾಗೆಯೇ ಪ್ರತಿ ಫ್ರೇಮ್‍ನಲ್ಲೂ ಹಲವಾರು ಒಳ ನೋಟಗಳಿಂದ ಮನಸ್ಸನ್ನು ಆದ್ರಗೊಳಿಸುವ ನಾಟಕವೂ ಹೌದು.

ಜನಸಾಮಾನ್ಯರ ಹೋರಾಟದ ಕಥೆಯಿದು: ಇದು ಚಿಕ್ಕ ಮೌಲ್ಯದ, ದಿನನಿತ್ಯದ ಬಳಕೆಯ ಅತೀ ಅಗತ್ಯದ ಚಿಕ್ಕ ಚಿಕ್ಕ ವಸ್ತುಗಳ ಕೊಡುಕೊಳ್ಳುವಿಕೆ ಮೌಲ್ಯವಾಗಿ ಸದಾ ಕೆಳವರ್ಗದ ಜನರ ಒಡನಾಡಿಯಾಗಿ ಇರುವ ಚಿಲ್ಲರೆ ನಾಣ್ಯದ ಕತೆ. ಆದರೆ ಅದಷ್ಟೇ ಆಗದೆ ಇದರ ಮುಂದೆ ನಾಗರೀಕತೆಯ ಹೆಸರಲ್ಲಿ ಅಡಿಯಿಡುವ ಕರೆನ್ಸಿ ನೋಟುಗಳಿಗೆ ಪ್ರತಿರೋಧದ ಸಂಕೇತವಾಗಿಯೂ ಧ್ವನಿಸಲ್ಪಡುವ ಹೋರಾಟದ ಕತೆಯಿದು.

ಸಣ್ಣ ಸಣ್ಣ ಊರುಗಳಲ್ಲಿ, ಸಣ್ಣ ಸಣ್ಣ ಗುಡಿಸಲು ಕಟ್ಟಿ, ಸಣ್ಣ ಸಣ್ಣ ಕಸುಬುಗಳೊಂದಿಗೆ, ಸಣ್ಣ ಸಣ್ಣ ಕನಸುಗಳನ್ನು ಹೆಣೆದು ಸಂತಸವಾಗಿ ಬದುಕುವ ಅದೆಷ್ಟು ಜನಸಮುದಾಯವಿದೆ. ಈ ಪ್ರತಿಯೊಂದು ಜನಸಮುದಾಯವೂ ತಮ್ಮದೇ ಆದ ಶ್ರೇಷ್ಠತೆ ಜನಪದದೊಂದಿಗೆ ಅದರದ್ದೇ ಆದ ಸಂಗೀತದೊಂದಿಗೆ ಭೂಮಿಗೆ ಹತ್ತಿರವಾಗಿ ಬದುಕುತ್ತಿದ್ದಾರೆ. ಹುಟ್ಟಿನಿಂದ ಆರಂಭಿಸಿ ಸಾವಿನ ನಂತರವೂ ಜೊತೆಯಾಗುವ ಈ ಭೂಮಿಯೊಂದಿಗಿನ ನಂಟುತನ ಮತ್ತು ಅದರೊಂದಿಗೆ ಬೆಸೆದುಕೊಂಡ ಸಂಗೀತವೇ ಅವರಿಗೆ ಅಂತಿಮ. ಇದರ ಮುಂದೆ ನಾಗರೀಕತೆಯ ಯಾವುದೇ ಹೆಸರಿನಲ್ಲಿ ನಡೆಯುವ ದಬ್ಬಾಳಿಕೆಗಳು ನಿಲ್ಲಲು ಸಾಧ್ಯವೇ ಇಲ್ಲ. ಆದರೆ, ಕೆಲವೊಮ್ಮೆ ಲಾಭ ಬಡುಕ ಅಧಿಕಾರ ದಾಹದ ಆಧುನಿಕ ಜೀವನ ಮತ್ತು ಬಂಡವಾಳಶಾಹಿ ಶಕ್ತಿಗಳು ಈ ಸಂಗೀತವನ್ನು ತಡೆದು ನಿಲ್ಲಿಸುವ ಪ್ರಯತ್ನ ಮಾಡಿದರೂ ತಮ್ಮ ತನವನ್ನು ಉಳಿಸಿಕೊಳ್ಳುವ ಸ್ವಾತಂತ್ರ್ಯ ಮತ್ತು ಛಲದ ಹಾಡುಗಳ ಮುಂದೆ ಎಲ್ಲಾ ಪ್ರತಿರೋಧಗಳು ಸವರಿ ಹೋಗುತ್ತವೆ. ಹೀಗಾಗಿ ಚಿಲ್ಲರೆ ನಾಣ್ಯದ ಸದ್ದುಗಳೊಂದಿಗೆ ಮತ್ತು ಭೂಮಿಯ ನಂಟುತನ ಬೆಸೆದುಕೊಂಡ ಹೋರಾಟದ ಹಾಡುಗಳೊಂದಿಗೆ ಚಿಲ್ಲರ ಸಮರಮ್ ಒಂದು ಪ್ರತಿಮಾ ನಾಟಕವಾಗಿ ಮುಖ್ಯವೆನಿಸುತ್ತದೆ.

ಪ್ರತಿಮೆಗಳಾಗುವ ಒಳನೋಟದ ಹಲವು ರೂಪಕ: ಇಪ್ಪತೈದು ಪೈಸೆ ನಾಣ್ಯವನ್ನು ಪ್ರಧಾನ ಭೂಮಿಕೆಯಲ್ಲಿರಿಸಿ ಬೆಂಕಿ ಪೊಟ್ಟಣವನ್ನು ಅದರ ಜೊತೆಯಾಗಿಸುವ ಪ್ರತಿಮೆಗಳು ನಮ್ಮೊಳಗನ್ನು ಸದಾಕಾಡುವ ರೂಪಕಗಳಾಗುತ್ತವೆ. ಬಹಳ ಪ್ರಖ್ಯಾತವಾದ ಅಯ್ಯಪ್ಪನ ಕತೆಯನ್ನಿಟ್ಟುಕೊಂಡು ಬಲೂನ್‌ಗಳ ಮೂಲಕ ಸೆಕ್ಯುಲರಿಸಂನ ಪಾಠ ಮಾಡುತ್ತದೆ. ಬೀಡಿ ಮತ್ತು ಸಿಗರೇಟ್‌ಗಳ ಪ್ರತಿಮೆಗಳನ್ನಿಟ್ಟುಕೊಂಡು ಧನಿಕರು ಮತ್ತು ಬಡವರ ನಡುವಿನ ಅಸಮಾನತೆಯನ್ನು ಸಾರಾಸಗಾಟಾಗಿ ಧಿಕ್ಕರಿಸುತ್ತದೆ. ಚಿನ್ನ ಮತ್ತು ರೈತನನ್ನು ಪ್ರತಿಮೆಗಳಾಗಿಸಿ ಚಿತ್ರಿಸಿದ ರೀತಿ ಆಕರ್ಷಣೆ ಮತ್ತು ಸಹಜತೆಗಳ ನಡುವಿನ ಸಮರವನ್ನಾಗಿಸುತ್ತದೆ. ಟಿಶ್ಯೂ ಪೇಪರ್‌ನ್ನು ಪ್ರತಿಮೆಯಾಗಿಸಿ ಕೂಲಿಕಾರ್ಮಿಕರಿಗೆ ಯೂನಿಫಾರ್ಮ್ ಹಾಕಿಸಿ ಕಾರ್ಪೊರೇಟ್ ಯಂತ್ರಗಳ ಅಡಿಯಾಳಾಗಿಸಿಕೊಂಡು ಯಾಂತ್ರಿಕ ಬದುಕಿನ ನಶ್ವರತೆಯನ್ನು ಮತ್ತು ಆಡಳಿತಶಾಹಿಗಳ ಒಳಗಣ ತಣ್ಣಗಿನ ಕ್ರೌರ್ಯವನ್ನು ಏಕಕಾಲಕ್ಕೆ ಅನಾವರಣಗೊಳಿಸುತ್ತದೆ. ಜನಸಾಮಾನ್ಯರನ್ನು ಆಕರ್ಷಕ ಜಾಹಿರಾತುಗಳಿಗೆ ಮೂರ್ಖರನ್ನಾಗಿಸಿ ಟಿಶ್ಯೂಪೇಪರ್ ನಂತೆ ಬಳಸಿ ಎಸೆದು ಹತಾಶರನ್ನಾಗಿಸುವ ರೂಪಕ ನಾಟಕ ಮುಗಿದ ಮೇಲೂ ಬಹಳ ಕಾಲ ಕಾಡುತ್ತದೆ.

ಸರಳತೆ ದರ್ಶನ ಮತ್ತು ನೈಜತೆ ವಾಸ್ತವೀಕರಣ: ಚಿಲ್ಲರ ಸಮರಮ್ ಬಹಳವಾಗಿ ಆಪ್ತವಾಗುವುದು ಅದರ ಸರಳತೆಯಿಂದಾಗಿ. ಬಹಳ ಸಂಕೀರ್ಣವಾದ ವಸ್ತುವನ್ನು ಭಾಷೆಯ ಹಂಗಿಲ್ಲದೆ ಸರಳವಾಗಿ ಅರ್ಥೈಸುವಂತೆ ಹೆಣೆಯಲಾಗಿದೆ. ವೈಭವೋಪೇತ ಸೆಟ್‍ಗಳಿಲ್ಲದೆ, ಅದ್ದೂರಿ ಕುಸುರಿ ಕೆಲಸಗಳನ್ನು ಒಳಗೊಂಡ ರಂಗಪರಿಕರಗಳಿಲ್ಲದೆ, ಆಕರ್ಷಕ ಪೋಷಾಕುಗಳಿಲ್ಲದೆ, ದಿನ ನಿತ್ಯ ಬಳಸುವ, ಬಳಸಿ ಎಸೆದ ವಸ್ತುಗಳನ್ನು ಅದರ ಮೂಲ ಸ್ವರೂಪದಲ್ಲೇ ಕಚ್ಛಾ ಆಗಿ ಬಳಸುವ ರೀತಿ ಅದ್ಭುತವೆನಿಸುತ್ತದೆ. ಮೌನವನ್ನೂ ಸಂಗೀತವಾಗಿ ಧ್ಯಾನಿಸುವ, ಯಾವುದೇ ನಿರ್ಬಂಧಿತ ಪಕ್ಕವಾದ್ಯಗಳಿಲ್ಲದೆ ಜಾನಪದ ಲಯವನ್ನು ಹೋರಾಟದ ಹಾಡಾಗಿಸುವ ಮೂಲಕವೂ ಸರಳತೆಯನ್ನು ಸಂಗೀತದಲ್ಲಿಯೂ ಪರಿಣಾಮಕಾರಿಯಾಗಿಸುತ್ತದೆ. ಹೀಗೆ ಕಡಿಮೆ ಬಂಡವಾಳದಲ್ಲಿಯೂ ಪರಿಣಾಮಕಾರಿಯಾದ ಪ್ರಾಮಾಣಿಕ ಪ್ರಯತ್ನ ರಂಗಭೂಮಿಯಲ್ಲಿ ಸಾಧ್ಯ ಎನ್ನುವುದನ್ನು ಸಾಧಿಸಿ ತೋರಿಸಿದ ಸೃಜನಶೀಲ, ವಾಸ್ತವದ ನಾಟಕ.

ಸಹಜ ಬೆಳಕಿನಿಂದ ನಿಜದ ನಾಟಕ ನೋಡಿದ ಅನುಭವ: ನಾಟಕವನ್ನು ನೋಡುಗನ ದೃಷ್ಠಿಯಲ್ಲಿ ಕಟ್ಟುವ ಕ್ರಿಯೆಯಲ್ಲಿ ಇತ್ತೀಚಿನ ದಿನಗಳಲ್ಲಿ ಗಮನಿಸಬೇಕಾದ ಅಂಶ ಬೆಳಕಿನ ವಿನ್ಯಾಸ. ಪಾರಂಪರಿಕ ಸ್ಪಾಟ್ ಮತ್ತು ಪಾರ್ ಲೈಟ್‍ಗಳ ಮೇಲೆ ಎಲ್.ಇ.ಡಿ.ಗಳೆಂಬ ಮಾಯಾ ಬೆಳಕಿನ ಆರ್ಭಟ. ಅದು ಜನಪದದ ಮೇಲೆ ಬಂಡವಾಳಶಾಹಿಯ ಆಕ್ರಮಣದಷ್ಟೇ ಭೀಕರವಾದುದು. ನಟನ ದೇಹಭಾಷೆಯನ್ನು ಸಂಕುಚಿಸುವ ಮಾಯಾಬೆಳಕಿನ ಹಂಗಿಲ್ಲದೆ, ನಟನ ದೇಹಭಾಷೆಯನ್ನು ವಿಸ್ತರಿಸುವ ಪಾರಂಪರಿಕ ಲೈಟ್‍ಗಳ ಬಳಕೆ ನಾಟಕದ ಸಹಜ ಸುಂದರತೆಗೆ ಸಾಕ್ಷಿಯಾಯಿತು.

ಜೀವಾಳವಾದ ನಟನೆ: ನಟನೆ ಅದು ನಾಟಕವನ್ನು ಎಲ್ಲಾ ತಾಂತ್ರಿಕ ವಿನ್ಯಾಸಗಳ ನಡುವೆಯೂ ಅಥವಾ ಅದೂ ಇಲ್ಲದೆಯೂ ದಾಟಿಸುವ ಅಂತಿಮ ಮತ್ತು ಮೂಲಭೂತ ಕ್ರಿಯೆ. ಸುಮಾರು 8 ಮಂದಿ ನಟರು ಒಂದಾದ ಮೇಲೆ ಒಂದರಂತೆ ವಿಭಿನ್ನ ಪಾತ್ರಗಳಲ್ಲಿ ವಿಭಿನ್ನ ಪೋಷಾಕಿನಲ್ಲಿ ಅದೇ ಶಕ್ತಿಯನ್ನಿಟ್ಟುಕೊಂಡು ಪ್ರತಿ ಪಾತ್ರಗಳನ್ನು ವಿಭಿನ್ನವಾಗಿ ಕಾಣಿಸುವುದಿದೆಯಲ್ಲಾ ಅದು ನಿಜಕ್ಕೂ ಒಬ್ಬ ನಟನಿಗೆ ಸಮಸ್ಯೆ ಮತ್ತು ಸವಾಲೂ ಕೂಡಾ ಆಗಿರುತ್ತದೆ. ಚಿಲ್ಲರ ಸಮರಮ್ ನಾಟಕದ ಎಲ್ಲಾ ನಟರು ಸ್ಪರ್ಧೆಗೆ ಬಿದ್ದವರಂತೆ ಈ ಸವಾಲನ್ನು ಅತ್ಯಂತ ನಾಜೂಕಾಗಿ ನಿಭಾಯಿಸುತ್ತಾರೆ. ಲವಲವಿಕೆಯ ಶಕ್ತಿಯುತ ಮತ್ತು ಪಕ್ಕಾ ಟೈಮಿಂಗ್‍ನ ನಟರ ದೇಹಭಾಷೆಯ ನಡುವೆ ವಿಕ್ಷಿಪ್ತ ಹೊಂದಾಣಿಕೆ ಅಗತ್ಯವಿರುವ ಈ ಕಥಾವಸ್ತುವನ್ನು ನಟರು ನಿಭಾಯಿಸಿದ ರೀತಿ ಅನನ್ಯವಾದುದು. ನಿರ್ದೇಶಕನ ಭಾಷೆಯಲ್ಲಿ ಹೇಳುವುದಾದರೆ ಈ ನಾಟಕ ಯಾರೂ ನಕಲು ಮಾಡಲು ಸಾಧ್ಯವಾಗದ ಅಥವಾ ಅದೇ ನಿರ್ದೇಶಕ ಇನ್ನೊಂದು ಗುಂಪಿಗೆ ಪುನರಪಿ ಇದನ್ನು ನಿರ್ವಹಿಸಲಾಗದ ಅದಮ್ಯ ಹೊಂದಾಣಿಕೆ ನಾಟಕ ಎನ್ನುವುದು ಅಷ್ಟೇ ಸತ್ಯ.

ಅಂತಿಮವಾಗಿ ಇದು ನಟರ ನಾಟಕ: ನಾಟಕಕಾರ ಮತ್ತು ನಿರ್ದೇಶಕ ಇವರಿಬ್ಬರ ಅರ್ಥ ಸಾಧ್ಯತೆಗಳ ವಿಸ್ತರಣೆಯನ್ನು ತನ್ನ ಮನೋರಂಗದಲ್ಲಿ ಕಟ್ಟಿಕೊಂಡು ಬೆಳೆಸಿ; ಮಾಗಿಸಿ ಅಂತಿಮವಾಗಿ ಪ್ರತಿ ಪ್ರದರ್ಶನವೂ ಹೊಸತೆಂಬಂತೆ ಪ್ರೇಕ್ಷಕರಲ್ಲಿ ರಸಾನುಭವವನ್ನು ಉಂಟುಮಾಡುವ ನಟ ರಂಗಭೂಮಿಕೆ ಪ್ರಧಾನ ಮತ್ತು ಅಂತಿಮ ಬಿಂದುವೇ ಹೌದು. ವಿನ್ಯಾಸ ಮತ್ತು ರಂಗ ತಂತ್ರಗಳ ನಡುವೆ ತನ್ನ ಅಸ್ತಿತ್ವಕ್ಕಾಗಿ ಹೆಣಗಾಟ ನಡೆಸಬೇಕಾದ ನಟ ಇವತ್ತಿನ ರಂಗಭೂಮಿಯಲ್ಲಿ ತನ್ನ ಅಗತ್ಯವನ್ನು ಕಳೆದುಕೊಳ್ಳುತ್ತಿದ್ದಾನೆ. ಅಂದರೆ ನಿರ್ದೇಶನದ ಪ್ರಕ್ರಿಯೆಯಲ್ಲಿ ನಟರನ್ನು ಸಿದ್ಧಗೊಳಿಸುವ ಪ್ರಕ್ರಿಯೆ ಗೌಣವಾಗಿ ಕೇವಲ ಕೆಲಸ ನಿರ್ವಹಿಸುವ ಸರಕು ಮಾತ್ರವಾದರೆ ಸಾಕು ಎಂಬ ಕಲ್ಪನೆ ಬೆಳೆಯುತ್ತಿರುವ ಈ ಹೊತ್ತಿನಲ್ಲಿ ನಟ ಪರಂಪರೆ ಎನ್ನುವುದು ಕಡೆಗಣಿಸಲ್ಪಟ್ಟಿದೆ. ಆದರೆ ಚಿಲ್ಲರ ಸಮರಮ್ ಆ ಎಲ್ಲಾ ನಿರ್ದೇಶಕರಿಗೆ ಉತ್ತರ ಕೊಡುತ್ತಿದೆ, ಇದರಿಂದ ಅದು ನಟರ ನಾಟಕವಾಗುತ್ತದೆ. ಅದರ ಮೂಲಕ ನಿರ್ದೇಶಕನ ಘನತೆ ಇನ್ನೂ ಹೆಚ್ಚಿಸಿದೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !