ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಮನೆಯಲ್ಲೂ ಕಲೆ!

Last Updated 17 ಡಿಸೆಂಬರ್ 2022, 19:31 IST
ಅಕ್ಷರ ಗಾತ್ರ

ಒಡಿಶಾದ ರಘುರಾಜಪುರ ದೇಶದ ಸಾಂಸ್ಕೃತಿಕ ನಕಾಶೆಯಲ್ಲಿ ಮಹತ್ವದ ಸ್ಥಾನ ಪಡೆದಿದೆ. ಜಗನ್ನಾಥನ ಪ್ರಭಾವಳಿಯ ಅಡಿ ಇಲ್ಲಿ ಅರಳಿ ಬೆಳೆದ ನೃತ್ಯ, ಚಿತ್ರ ಕಲೆಗಳು ಅದ್ಭುತವೇ ಸರಿ. ಏನೇನಿವೆ ಇಲ್ಲಿ? ಪುಟ್ಟ ನೋಟ ಹೀಗಿದೆ.

ಭಾ ರ್ಗವಿ ನದಿತೀರದಲ್ಲಿ ತೆಂಗು, ಮಾವು, ಹಲಸಿನ ಮರಗಳಿಂದ ಸುತ್ತುವರಿದ ಪುಟ್ಟ ಗ್ರಾಮ. ದೊಡ್ಡದೊಂದು ಕಮಾನಿನ ಒಳಹೊಕ್ಕು ಒಳಗೆ ಪ್ರವೇಶಿಸಿದರೆ ಬೀದಿಯ ಇಕ್ಕೆಲಗಳಲ್ಲಿ ಸಾಲಾಗಿ ಸುಮಾರು ನೂರೈವತ್ತು ಮನೆಗಳು. ಪ್ರತಿಯೊಂದೂ ವಿಶಿಷ್ಟ, ವರ್ಣಮಯ. ಅನತಿ ದೂರ ಸಾಗಿದರೆ ಗೆಜ್ಜೆಯ ಸದ್ದು, ಜಯದೇವನ ಗೀತಗೋವಿಂದದ ಹಾಡು. ಕಣ್ಣು-ಕಿವಿಗಿಲ್ಲಿ ಹಬ್ಬ. ಏಕೆಂದರೆ ಮನೆಮನೆಯ ನೆಲ-ಗೋಡೆ ಎಲ್ಲೆಲ್ಲೂ ವರ್ಣ ಚಿತ್ತಾರ. ಗಾಳಿಯೊಡನೆ ತೇಲಿಬರುವ ಗೆಜ್ಜೆ ಸದ್ದು!

ಈ ಊರಿನ ಹೆಸರು ರಘುರಾಜಪುರ ಎಂದು. ಒಡಿಶಾದ ಈ ಹಳ್ಳಿ, ಭಾರತದ ಸಾಂಸ್ಕೃತಿಕ ನಕಾಶೆಯಲ್ಲಿ ಮಹತ್ವದ ಸ್ಥಾನ ಪಡೆದಿದೆ. ಇದನ್ನು ‘ಪಾರಂಪರಿಕ ಗ್ರಾಮ’ ಎಂದು ಘೋಷಿಸಲಾಗಿದೆ.

ಒಡಿಶಾದ ಪ್ರಾಚೀನ ಹೆಸರು ಉತ್ಕಲಾ. ಕಲೆಯ ಉತ್ಕರ್ಷಕ್ಕೆ ಕಾರಣವಾದ ಉತ್ಕಲಾ ಎಂಬ ಹೆಸರು ನಿಜಕ್ಕೂ ಅನ್ವರ್ಥಕ ಅನ್ನಿಸಿದ್ದು ಒಡಿಶಾ ಸುತ್ತುವಾಗಲೆಲ್ಲಾ ಕಂಡ ಕಲ್ಲಿನಲ್ಲಿ ಕೊರೆದ ಸೂಕ್ಷ್ಮ ಚಿತ್ತಾರ, ಕಸೂತಿಯ ಸಂಭಲ್‌ಪುರಿ ಸೀರೆ, ನಾಜೂಕಾದ ಬೆಳ್ಳಿಯ ಆಭರಣ, ಶಂಖ-ಕಪ್ಪೆಚಿಪ್ಪಿನ ಕರಕುಶಲ ವಸ್ತುಗಳು, ಪಟ್ಟ ಚಿತ್ರಗಳು ಮತ್ತು ಒಡಿಸ್ಸಿ ನೃತ್ಯದಿಂದಾಗಿ!

ರಾಜಧಾನಿ ಭುವನೇಶ್ವರಕ್ಕೆ ಹೋಗುವಾಗ ಪುರಿಯಿಂದ ಕೇವಲ ಹತ್ತು ಕಿ.ಮೀ. ದೂರದಲ್ಲಿ ಚಿತ್ರ-ನೃತ್ಯ ಎರಡಕ್ಕೂ ಪ್ರಸಿದ್ಧವಾದ ಕಲಾಗ್ರಾಮ ಎಂದು ಜತೆಯಲ್ಲಿದ್ದ ರಂಜಿತ್ ತೋರಿಸಿದ್ದು ರಘುರಾಜಪುರ ಎಂಬ ಗ್ರಾಮವನ್ನು! ಇದು, ಶಿಲ್ಪ ಗುರು ಡಾ.ಜಗನ್ನಾಥ್ ಮಹಾಪಾತ್ರ, ಒಡಿಸ್ಸಿ ನೃತ್ಯಗುರು ಕೇಳುಚರಣ್ ಮಹಾಪಾತ್ರ ಮತ್ತು ಗುರು ಶ್ರೀಮಗುನಿ ಚರಣ್ ದಾಸ್‍ರಂಥ ಮೇರುಕಲಾವಿದರ ಜನ್ಮಸ್ಥಳ ಹಾಗೂ ಕರ್ಮಭೂಮಿ.

ಪುರಿಯ ಜಗನ್ನಾಥ ಇಲ್ಲಿನ ವಿಶಿಷ್ಟ ಚಿತ್ರ - ನೃತ್ಯಗಳೆರಡಕ್ಕೂ ಸ್ಫೂರ್ತಿ. ಒಡಿಯಾ ಜನರ ಆರಾಧ್ಯ ದೈವ ಮಾತ್ರವಲ್ಲ, ಆತ್ಮಬಂಧು ಜಗನ್ನಾಥ. ಪುರಿಯಲ್ಲಿ ಅಣ್ಣ ಬಲರಾಮ, ತಂಗಿ ಸುಭದ್ರೆಯೊಡನೆ ಆತ ಪ್ರತಿಷ್ಠಾಪಿತ. ದೇವಸ್ಥಾನ ಎಂದೊಡನೆ ಕರಿಕಲ್ಲಿನ / ಅಮೃತಶಿಲೆಯ ಮೂರ್ತಿಯಲ್ಲ. ಅಲ್ಲಿರುವುದು ಮರದಿಂದ ಮಾಡಿದ ಕಿವಿ - ಕಾಲಿಲ್ಲದ, ಕಣ್ಣಿನ ಜಾಗದಲ್ಲಿ ದೊಡ್ಡ ವರ್ತುಲ ಮತ್ತು ಮುರಿದ ಕೈಗಳ ಬೇರೆ ಬೇರೆ ಬಣ್ಣದ ಮೂರ್ತಿಗಳಿವು. ಆದರೆ ಜನರಿಗೆ ತಮ್ಮ ಕರೆ ಕೇಳಿದೊಡನೆ ಕಾಲಿಲ್ಲದಿದ್ದರೂ ಓಡಿಬರುವ, ಕಿವಿಯಿಲ್ಲದಿದ್ದರೂ ಆಲಿಸುವ, ಮುರಿದ ಕೈಯಿಂದಲೇ ಅಭಯ ನೀಡುವ, ಜಗನ್ನಾಥನೆಂದರೆ ಎಲ್ಲಿಲ್ಲದ ಭಕ್ತಿ-ಪ್ರೀತಿ.

ಜಗನ್ನಾಥ ಆಷಾಢದಲ್ಲಿ ಬಿಸಿಲ ತಾಪಕ್ಕೆ ಬಸವಳಿದು ಸ್ನಾನಯಾತ್ರೆ ಮಾಡುತ್ತಾನೆ. ನಂತರ ಹದಿನೈದು ದಿನಗಳ ಕಾಲ ಅಣ್ಣ ತಮ್ಮ ತಂಗಿಯರು ಜ್ವರಪೀಡಿತರಾಗುತ್ತಾರೆ. ಆಗ ಅವರಿಗೆ ಕಟ್ಟುನಿಟ್ಟಾದ ಆರೈಕೆ ಪ್ರತ್ಯೇಕ ಸ್ಥಳದಲ್ಲಿ ನಡೆಯುತ್ತದೆ. ಈ ಸಮಯದಲ್ಲಿ ಮೂರ್ತಿಗಳ ಬದಲಾಗಿ ಈ ಪಟ್ಟಚಿತ್ರಗಳನ್ನು ಇಟ್ಟು ಪೂಜಿಸಲಾಗುತ್ತದೆ! ಹೀಗೆ ಹನ್ನೆರಡನೇ ಶತಮಾನದಲ್ಲಿ ಇದೇ ಗ್ರಾಮದಲ್ಲಿ ಉಗಮವಾದದ್ದೇ ವಿಶೇಷ ಚಿತ್ರಕಲೆ, ಪಟ್ಟಚಿತ್ರಗಳು. ಪುರಿ ದೇವಾಲಯದ ವಿಧಿಯುಕ್ತ ಆಚರಣೆಗಳಲ್ಲಿ, ಧಾರ್ಮಿಕ ವಿಧಿವಿಧಾನಗಳಲ್ಲಿ ಇಲ್ಲಿಂದ ಸಿದ್ಧವಾದ ಪಟ್ಟಚಿತ್ರಗಳು ಬಳಕೆಯಾಗುತ್ತವೆ. ಜಗನ್ನಾಥನ ಲೀಲೆ, ಪುರಾಣಕಥೆಗಳ ಚಿತ್ರಣ ಮುಖ್ಯ ವಸ್ತು. ಈ ಕಲಾವಿದರಿಗೆ ಚಿತ್ರಕಾರ್ ಎಂದು ಕರೆಯಲಾಗುತ್ತದೆ.

ಪಟ್ಟ ಎಂದರೆ ರಟ್ಟರಿವೆ. ಅದರಲ್ಲಿ ತೆಗೆದ ಬಣ್ಣದ ಹಸೆಚಿತ್ರಗಳು. ಮೊದಲು ಹತ್ತಿಯ ಬಟ್ಟೆಯನ್ನು ಅಳತೆಗೆ ತಕ್ಕಂತೆ ಆರಿಸಿಕೊಳ್ಳುತ್ತಾರೆ. ನಂತರ ಹುಣಸೇಹಣ್ಣಿನ ಬೀಜವನ್ನು ಕುಟ್ಟಿ ಪುಡಿ ಮಾಡಿ ಅದನ್ನು ಸೀಮೆಸುಣ್ಣದೊಂದಿಗೆ ಬೆರೆಸಿ ಮಿಶ್ರಣವನ್ನು ತಯಾರಿಸುತ್ತಾರೆ. ಅಂಟಾದ ಇದರ ಲೇಪನದಿಂದ ಬಟ್ಟೆ ಒಣಗಿದ ನಂತರ ರಟ್ಟಿನಂತಾಗುತ್ತದೆ. ಇಡೀ ಬಟ್ಟೆ ನುಣುಪಾಗಿರಲು ನಿರ್ದಿಷ್ಟ ಕಲ್ಲಿನಿಂದ ಉಜ್ಜುತ್ತಾರೆ. ಹೀಗೆ ಚಿತ್ರ ಬಿಡಿಸಲು ರಟ್ಟರಿವೆ ಸಿದ್ಧವಾಗುತ್ತದೆ.

ಚಿತ್ರಕಾರರು ಪಟ್ಟದ ಮೇಲೆ ಚಿತ್ರವನ್ನು ಬರೆದು ಬಣ್ಣವನ್ನು ತುಂಬುತ್ತಾರೆ. ಗಾಢ ವರ್ಣಗಳಾದ ಕೆಂಪು, ನೀಲಿ, ಹಳದಿ, ಕಪ್ಪು ಹೆಚ್ಚಾಗಿ ಬಳಕೆಯಾಗುತ್ತವೆ. ಬಳಸುವುದು ನೈಸರ್ಗಿಕ ಬಣ್ಣಗಳು; ಕಪ್ಪೆಚಿಪ್ಪಿನಿಂದ ಬಿಳಿ, ಸುಟ್ಟ ಮಣ್ಣಿನ ಮಡಕೆಗಳಿಂದ ಕಪ್ಪು, ಹಿಂಗುಲಾ ಕಲ್ಲಿನಿಂದ ಕೆಂಪು ಮತ್ತು ಹರಿಕಲಾ ಕಲ್ಲಿನಿಂದ ಹಳದಿ ಹೀಗೆ. ಬಿಡಿಸಿರುವ ಚಿತ್ರ, ಲೇಪಿಸಿದ ಬಣ್ಣ ತೇವಕ್ಕೆ ಹಾಳಾಗದಂತೆ ನಾಜೂಕಾಗಿ ಶಾಖ ನೀಡಿ, ಹೊಳಪು ನೀಡುವ ಎಣ್ಣೆಯನ್ನು ಸವರಲಾಗುತ್ತದೆ. ಚಿತ್ರದ ವಿನ್ಯಾಸ, ಗಾತ್ರದ ಮೇಲೆ ಸಮಯ ಮತ್ತು ಬೆಲೆ ನಿರ್ಧಾರವಾಗುತ್ತದೆ. ಸಮಯ, ಒಂದು ವಾರದಿಂದ ವರ್ಷಗಟ್ಟಲೇ ತೆಗೆದುಕೊಂಡರೆ ಬೆಲೆ, ನೂರು ರೂಪಾಯಿಯಿಂದ ಲಕ್ಷವನ್ನೂ ಮೀರುತ್ತದೆ.

ಜಗನ್ನಾಥ, ವಿಷ್ಣುವಿನ ದಶಾವತಾರ, ಕೃಷ್ಣರಾಸಲೀಲೆ, ಪುರಾಣಕಥೆಗಳ ಚಿತ್ರಣ ಮುಖ್ಯ ವಸ್ತು. ಯಾವುದೇ ಪಟ್ಟಚಿತ್ರಕ್ಕೂ ಹೂಬಳ್ಳಿಗಳ ಅಲಂಕಾರಿಕ ಚೌಕಟ್ಟು ಇರುತ್ತದೆ. ತಲೆತಲಾಂತರದಿಂದ ಈ ಕಲಾಕಾರರ ಕುಟುಂಬಗಳು ಪಟ್ಟಚಿತ್ರಗಳ ತಯಾರಿಕೆಯಲ್ಲಿ ತೊಡಗಿಕೊಂಡಿವೆ. ಮನೆಮಂದಿಯೆಲ್ಲಾ ಪಟ್ಟಚಿತ್ರಗಳ ಸಿದ್ಧತೆಯ ವಿವಿಧ ಹಂತದಲ್ಲಿ ತೊಡಗಿಸಿಕೊಳ್ಳುತ್ತಾರೆ. ಮಹಿಳೆಯರು ಈ ಅಂಟು, ರಟ್ಟರಿವೆ ಮತ್ತು ಚಿತ್ರದ ಚೌಕಟ್ಟಿನಲ್ಲಿ ನಿರತರಾದರೆ ಮುಖ್ಯ ಚಿತ್ರಕಾರ ಪುರುಷನಾಗಿರುವುದು ರೂಢಿ. ಆದರೀಗ ಯುವತಿಯರೂ ಮುಖ್ಯಚಿತ್ರಕಾರರಾಗಿ ಮನ್ನಣೆ ಪಡೆಯುತ್ತಿದ್ದಾರೆ.

ಧಾರ್ಮಿಕ ವಿಧಿವಿಧಾನಗಳಿಗೆ ಮೀಸಲಾಗಿದ್ದ ಪಟ್ಟಚಿತ್ರಗಳ ಮೂಲ ಆಶಯವನ್ನು ಉಳಿಸಿಕೊಂಡು ಚಿತ್ರಕಾರರು ಹೊಸ ಸಾಧ್ಯತೆಗಳತ್ತ ಗಮನಹರಿಸಿದ್ದಾರೆ. ಬಟ್ಟೆಯ ಬದಲು ಮರ, ಚರ್ಮ, ಕಾಗದ, ಲೋಹ ಹೀಗೆ ಬೇರೆ ಮಾಧ್ಯಮ ಬಳಸಿ ವಸ್ತು ವೈವಿಧ್ಯವನ್ನೂ ಮೂಡಿಸಿದ್ದಾರೆ. ಕೈಚೀಲ, ಸೀರೆ, ಸ್ಮರಣಿಕೆ ಹೀಗೆ ಜನಸಾಮಾನ್ಯರಿಗೆ ಪ್ರಿಯವಾಗುವ ವಿನ್ಯಾಸ, ಕೈಗೆಟುಕುವ ಬೆಲೆಯಲ್ಲಿ ಕಲೆ ಮುಖ ಮಾಡಿದೆ. ಇತ್ತೀಚೆಗೆ ಕೋವಿಡ್ ಬಗ್ಗೆಯೂ ಪಟ್ಟಚಿತ್ರ ತಯಾರಿಸಿ ಆ ಮೂಲಕ ತಮ್ಮ ಸಾಮಾಜಿಕ ಬದ್ಧತೆಯನ್ನು ಚಿತ್ರಕಾರರು ಮೆರೆದಿದ್ದಾರೆ. ದೇಶ ವಿದೇಶಗಳ ಗಣ್ಯರಿಗೆ ನೀಡಲು ಪಟ್ಟಚಿತ್ರ ಕೊಡುಗೆಯಾಗಿ ಬಳಕೆಯಲ್ಲಿದೆ (ವ್ಯಾಟಿಕನ್ ಪೋಪ್ ಫ್ರಾನ್ಸಿಸ್, ಡೆನ್ಮಾರ್ಕ್‍ನ ಪ್ರಧಾನಮಂತ್ರಿ ಇತ್ಯಾದಿ).

ಮನೆಗಳ ಎದುರಿನಲ್ಲಿ ಪಟ್ಟಚಿತ್ರಗಳನ್ನು ತಯಾರಿಸುವ ಚಿತ್ರಕಾರರನ್ನು ಕಂಡು, ಸ್ಮರಣಿಕೆ ಕೊಂಡು, ಕೇಳುತ್ತಿರುವ ಗೆಜ್ಜೆ ನಾದವನ್ನು ಹಿಂಬಾಲಿಸಿದರೆ ಬೀದಿಯಿಂದ ತುಸು ದೂರದಲ್ಲಿ ಎರಡು ಗುರುಕುಲ (ದಸಭುಜ ಮತ್ತು ಅಭಿನ್ನ ಸುಂದರ) ಮಾದರಿಯ ನೃತ್ಯಶಾಲೆಗಳು. ರಘುರಾಜಪುರ ಘರಾನಾದ ಗೊತಿಪುವಾ ನೃತ್ಯಶಿಕ್ಷಣವನ್ನು ಇಲ್ಲಿ ನೀಡಲಾಗುತ್ತದೆ.

ಈ ನೃತ್ಯದ ಹಿಂದೆಯೂ ಜಗನ್ನಾಥನಿದ್ದಾನೆ! ಜಗತ್ತಿಗೇ ಒಡೆಯ ಅಂದರೆ ರಾಜನಾದ ಜಗನ್ನಾಥನಿಗೆ ಪುರಿಯಲ್ಲಿ ಸಲ್ಲುವ ವೈಭವ ಅಷ್ಟಿಷ್ಟಲ್ಲ. ಅನ್ನ ನೈವೇದ್ಯದ ಐವತ್ತಾರು ಬಗೆ ಛಪ್ಪನ್ ಭೋಗ್, ಸೋನಾ ಬೇಷ್ (ಸ್ವರ್ಣ ವೇಷ), ನೃತ್ಯ ಸೇವೆ-ಹೀಗೆ ಪಟ್ಟಿ ದೊಡ್ಡದು. ನೃತ್ಯಸೇವೆ ಸಲ್ಲಿಸುವವರು ಜಗನ್ನಾಥನಿಗೆ ಪ್ರಿಯರಾದ ಮಹಾ ನಾರಿಯರು-ಮಹಾರಿಯರು! ಭಾರತದ ಶಾಸ್ತ್ರೀಯ ನೃತ್ಯ ಪದ್ಧತಿಗಳಲ್ಲಿ ಒಂದಾಗಿರುವ ಒಡಿಸ್ಸಿಯ ಮೂಲ ಮಹಾರಿ ನೃತ್ಯ ಎನ್ನಲಾಗುತ್ತದೆ.

ಕಾರಣಾಂತರದಿಂದ ಈ ಮಹಾರಿಗಳು ಕಡಿಮೆಯಾದಂತೆ ನೃತ್ಯಸೇವೆಯ ಸಂಪ್ರದಾಯ ಉಳಿಸುವ ದೃಷ್ಟಿಯಿಂದ ಹದಿನಾರನೇ ಶತಮಾನದಲ್ಲಿ ಈ ರಘುರಾಜಪುರದಲ್ಲಿ ಆರಂಭವಾದದ್ದು ಗೊತಿಪುವಾ. ಈಗಲೂ ಜಗನ್ನಾಥನಿಗೆ ಸಂಬಂಧಿಸಿದ ಎಲ್ಲಾ ಉತ್ಸವಗಳಲ್ಲಿ ರಥಯಾತ್ರಾ, ಡೋಲಾಯಾತ್ರಾ, ಝೂಲಾನಾಗಳಲ್ಲಿ ಗೊತಿಪುವಾದ ಮೂಲಕ ನೃತ್ಯಸೇವೆ ಸಲ್ಲುತ್ತದೆ. ಆದರಿಲ್ಲಿ ನರ್ತಿಸುವವರು ಬಾಲಕಿಯರಲ್ಲ; ಹಾಗೆ ಅಲಂಕೃತರಾಗಿ ಸಾಹಸ- ದೈಹಿಕ ಕಸರತ್ತನ್ನು ಒಳಗೊಂಡು ರಾಧಾ-ಕೃಷ್ಣರ ಕತೆಯನ್ನು ನಿರೂಪಿಸುವವರು ಪುಟ್ಟ ಬಾಲಕರು. ಹೆಸರು ಗೊತಿ- ಒಬ್ಬ ಪುವಾ -ಹುಡುಗ ಎಂದಾದರೂ ಇದು ಸಮೂಹ ನೃತ್ಯವಾಗಿ ಆಚರಣೆಯಲ್ಲಿದೆ.

ಐದು ವರ್ಷದವರಿದ್ದಾಗಲೇ ಬಾಲಕರಿಗೆ ತರಬೇತಿ ನೀಡಲಾಗುತ್ತದೆ. ಗೊತಿಪುವಾದಲ್ಲಿ ಹಾಡುಗಳನ್ನು ಹಾಡುತ್ತಾ, ಜಾನಪದ ವಾದ್ಯಗಳನ್ನು ನುಡಿಸುತ್ತಾ ನೃತ್ಯ ಮಾಡುವುದು ವಿಶೇಷ. ಈ ಬಾಲಕರು ಹದಿನೈದು ವರ್ಷದ ನಂತರ ಅಂದರೆ ಪ್ರೌಢಾವಸ್ಥೆ ತಲುಪುತ್ತಿದ್ದಂತೆ ಗೊತಿಪುವಾ ಮಾಡುವಂತಿಲ್ಲ. ಆದರೆ ಇತರ ನೃತ್ಯಪ್ರಕಾರಗಳಲ್ಲಿ ತೊಡಗಿಸಿಕೊಳ್ಳುವುದು ಸುಲಭ ಮತ್ತು ಸಾಮಾನ್ಯ.

ಒಡಿಸ್ಸಿ ನೃತ್ಯದಲ್ಲಿ ಇದರ ಪ್ರಭಾವ ಬಹಳಷ್ಟಿದೆ ಎನ್ನಲಾಗುತ್ತದೆ. ಗುರು ಕೇಳುಚರಣ್ ಮಹಾಪಾತ್ರ ಬಾಲ್ಯದಲ್ಲಿ ಗೊತಿಪುವಾ ನರ್ತಕರಾಗಿದ್ದರು! ಕೃಷ್ಣನ ರಾಧೆ ತಾನು ಎಂಬ ಸಖೀಭಾವ ಅವರ ಅಭಿನಯದಲ್ಲಿ ಅದ್ಭುತವಾಗಿ ಮೂಡಿಬರಲು ಗೊತಿಪುವಾ ನೃತ್ಯದ ಹಿನ್ನೆಲೆಯೇ ಕಾರಣ ಎನ್ನಲಾಗುತ್ತದೆ. ಒಡಿಸ್ಸಿ ನೃತ್ಯದಷ್ಟು ಪ್ರಚಾರ ಪಡೆಯದ, ಅಳಿವಿನ ಅಂಚಿನಲ್ಲಿರುವ ಈ ಕಲೆಯನ್ನು ಉಳಿಸುವ ದೃಷ್ಟಿಯಿಂದ ಸ್ಥಾಪಿತವಾದ ಈ ಗುರುಕುಲಗಳಲ್ಲಿ ಸುಮಾರು ಅರವತ್ತು ಜನ ಬಡ ಕುಟುಂಬದ ಹುಡುಗರು ಶಿಕ್ಷಣ ಪಡೆಯುತ್ತಿದ್ದಾರೆ. ‘ಬಸಂತ್ ಉತ್ಸವ್ ಪರಂಪರಾ’ ಹೆಸರಿನಲ್ಲಿ ಪ್ರತಿವರ್ಷ ಎರಡು ದಿನಗಳ ಕಾಲ ರಘುರಾಜಪುರದಲ್ಲಿ ನೃತ್ಯ-ಚಿತ್ರ ವೈಭವವನ್ನು ಹಮ್ಮಿಕೊಳ್ಳಲಾಗುತ್ತಿದೆ. ದೇಶ-ವಿದೇಶಗಳ ಪ್ರವಾಸಿಗರು ಇದರಲ್ಲಿ ಪಾಲ್ಗೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT