ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮ್ಮ ಮಗಳ ‘ಮಿರಿಯಾಡ್’ ಸಂಗಮ

Last Updated 30 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ಬಣ್ಣಗಳ ಲೋಕದಲ್ಲಿ ಕಳೆದುಹೋಗುವ, ವಿನ್ಯಾಸ ಮತ್ತು ವೈವಿಧ್ಯಗಳ ವಾಸ್ತವದ ಅನುಭವ ಕಟ್ಟಿಕೊಡುವ‘ಮಿರಿಯಾಡ್’ ವಿನ್ಯಾಸ ಹಾಗೂ ಕಲಾಪ್ರದರ್ಶನವು ಕಲಾಪ್ರೇಮಿಗಳಿಗೆ ರಸದೌತಣ ಬಡಿಸಲು ಸಜ್ಜಾಗಿದೆ. ಕಲಾವಿದೆಸಂಧ್ಯಾ ಕೆ. ಸಿರ್ಸಿ ಹಾಗೂ ಅವರ ಮಗಳಾದ ನಿಹಾರಿಕಾ ಸಿರ್ಸಿ ಕಲಾ ಸಂಗಮವೇ ಈ ಪ್ರದರ್ಶನದ ವಿಶೇಷ.

ಕಲಾ ಪ್ರಕಾರ ಹಾಗೂ ವಿನ್ಯಾಸ ಪ್ರಕಾರದ ನಡುವಿನ ನೈಸರ್ಗಿಕ ಸಂಬಂಧವನ್ನು ಈ ಪ್ರದರ್ಶನ ಅನಾವರಣಗೊಳಿಸಲಿದೆ. ಸಂಧ್ಯಾ ಅವರು ಬಣ್ಣಗಳಲ್ಲಿಮೋಡಿ ಮಾಡಿದರೆ, ಅಮ್ಮನ ಜೊತೆಗೂಡಿ ಕಲೆಯ ಅಭಿರುಚಿಯನ್ನು ಮೈಗೂಡಿಸಿಕೊಂಡ ನಿಹಾರಿಕಾ ವಿವಿಧ ವಿನ್ಯಾಸಗಳ ಕಲಾಕೃತಿಗಳನ್ನು ಚೆಂದವಾಗಿ ರಚಿಸಿದ್ದಾರೆ.

‘ಮಿರಿಯಾಡ್‍ನ’ಲ್ಲಿ ಏರ್ಪಡಿಸಿರುವ ‘ಆರ್ಟಿಕ್ಯುಲೇಟ್’ ಪ್ರದರ್ಶನವು ಪೇಂಟಿಂಗ್ ಮತ್ತು ಶಿಲ್ಪಕಲೆಯ ಆಕರ್ಷಕ ಲೋಕವನ್ನು ತೆರೆದಿಡಲಿದೆ. ಸಾಂಪ್ರದಾಯಿಕ ಬುಡಕಟ್ಟು ಕಲೆಯಾದ ‘ಡೋಕ್ರಾ’ ಕಲಾವಿದರಿಗೆ ಇಲ್ಲಿ ವಿಶೇಷವಾಗಿ ವೇದಿಕೆ ಒದಗಿಸಲಾಗಿದೆ. ಡೋಕ್ರಾ ಕಲಾ ಪ್ರಕಾರದ ಕಲಾಕೃತಿಗಳ ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆಯೂ ನಡೆಯಲಿದೆ.

ಡೋಕ್ರಾ ಕಲೆ ಬಳಸಿ ಶಿಲ್ಪಕಲಾಕೃತಿಗಳನ್ನು ಹೇಗೆ ತಯಾರಿಸಲಾಗುತ್ತದೆ ಹಾಗೂ ಆಧುನಿಕ ಕಲೆಯನ್ನು ಡೋಕ್ರಾ ಕಲಾವಿದರು ಹೇಗೆ ವಿಶಿಷ್ಟವಾಗಿ ಅಳವಡಿಸಿಕೊಳ್ಳುತ್ತಾರೆ ಎಂಬ ಬಗ್ಗೆ ಮಾಹಿತಿ ನೀಡಲಾಗುತ್ತದೆ. ನೀಹಾರಿಕಾ ಸಿರ್ಸಿ ಅವರು ಸಿದ್ಧಪಡಿಸಿರುವ ‘3ಡಿ ಪ್ರಿಂಟೆಡ್’ ವಿನ್ಯಾಸಗಳು ನೋಡುಗರನ್ನು ಸೆಳೆಯುತ್ತವೆ.

ಕಲಾವಿದೆ ಸಂಧ್ಯಾ ಕೆ. ಸಿರ್ಸಿ, ‘ಚೌಕಟ್ಟುಗಳನ್ನು ಮೀರಿದ ಕಲೆ ಹಾಗೂ ಗಡಿಗಳನ್ನು ಮೀರಿ ಬೆಳೆದ ವಿನ್ಯಾಸಗಳು ಕಲೆಯ ಸುಸ್ಥಿರ ಅಭಿವೃದ್ಧಿಗೆ ಅತ್ಯಗತ್ಯ. ಸಾವಿರಾರು ವರ್ಷಗಳ ಇತಿಹಾಸವುಳ್ಳ ‘ಡೋಕ್ರಾ’ ಕಲೆಗೆ ಇಂದು ಆಧುನಿಕತೆಯ ಸ್ಪರ್ಶ ಅಗತ್ಯವಿದೆ. ಈ ಕಲೆ ಹಾಗೂ ಸಮಕಾಲಿನ ಕಲೆಯ ನಡುವೆ ಸಂಪರ್ಕ ಬೆಸೆಯಬೇಕಿದೆ. ಹೀಗಾಗಿ, ಈ ಬುಡಕಟ್ಟು ಕಲಾವಿದರಿಗೆ ವೇದಿಕೆ ಕಲ್ಪಿಸಲು ‘ಆರ್ಟಿಕ್ಯುಲೇಟ್’ ಪ್ರದರ್ಶನ ಆಯೋಜಿಸಿದ್ದೇವೆ’ ಎನ್ನುತ್ತಾರೆ.

‌‘ಡೋಕ್ರಾ ಬುಡಕಟ್ಟು ಕಲಾವಿದರು ನಡೆಸಿಕೊಡುವ ಹಿತ್ತಾಳೆಯ ಶಿಲ್ಪಕಲಾಕೃತಿಗಳನ್ನು ರಚಿಸುವ ಬ್ರಾಸ್ ಟ್ಯಾಕ್ಸ್ ಡೋಕ್ರಾ ಆರ್ಟ್ ಕ್ಯಾಂಪ್‍ಗಳಲ್ಲಿ ಭಾಗಿಯಾಗಿದ್ದೆ. ಅವರ ಜೊತೆಗೂಡಿ ಈ ಕಲೆಯ ಸಂಸ್ಕೃತಿ, ಪರಂಪರೆ ಹಾಗೂ ಇತಿಹಾಸದ ಬಗ್ಗೆ ಸಾಕಷ್ಟು ಅರಿತೆ. ಆ ಅನುಭವ ಬಳಸಿ ಡೋಕ್ರಾ ಕಲೆಯನ್ನು ಸಮಕಾಲೀನ ಕಲಾಪ್ರಕಾರಗಳ ಜೊತೆ ಬೆಸೆಯುವ ಪ್ರಯತ್ನ ಮಾಡಿದ್ದೇನೆ’ ಅಂದರು.

‘ಬಹುತೇಕ ಡೋಕ್ರಾ ಕಲಾವಿದರು ತಮ್ಮ ಪೂರ್ವಜರಿಂದ ಈ ಕಲೆಯನ್ನು ಕಲಿತು, ತಾವು ತಯಾರಿಸುವ ಕಲಾಕೃತಿಗಳನ್ನು ಪೂಜಿಸುತ್ತಾರೆ. ಆ ಕಲಾಕೃತಿಗಳು ಪವಿತ್ರವಾದುವು ಎಂಬ ನಂಬಿಕೆ ಅವರದ್ದು. ಅವರ ಮತ್ತೊಂದು ವಿಶೇಷ, ಗಿಳಿಯನ್ನು ಮನೆಗಳಲ್ಲಿ ಅಲಂಕಾರಿಕ ವಸ್ತುವಾಗಿ ಇರಿಸಿಕೊಳ್ಳುವುದು. ನಾವು ಹೇಳಿದ್ದನ್ನೇ ಗಿಳಿ ಮತ್ತೆ ಹೇಳುವುದರಿಂದ ಅದು ನಮ್ಮ ಯೋಚನೆ ಹಾಗೂ ಕನಸುಗಳನ್ನೇ ಮತ್ತೊಮ್ಮೆ ಸಾರಿ ಹೇಳುತ್ತದೆ ಎಂಬ ನಂಬಿಕೆ ಅವರದ್ದು’ ಎಂದು ಡೋಕ್ರಾ ಕಲೆ ಹಾಗೂ ಡೋಕ್ರಾ ಕಲಾವಿದರ ಬಗ್ಗೆ ತಿಳಿಸಿಕೊಟ್ಟರು ಸಂಧ್ಯಾ.

ಬೆಟ್ಟಗುಡ್ಡಗಳ ಮೇಲೆ, ಮರಗಿಡಗಳ ಹಿನ್ನೆಲೆಯ ಪ್ರಖರ ಬೆಳಕಿನ ಮೋಡಗಳಿಂದ ತುಂಬಿದ ಆಹ್ಲಾದಕರ ದೃಶ್ಯವನ್ನು ಆಸ್ವಾದಿಸುವ ರೀತಿಯ (ಬಟ್ಟೆಗಳನ್ನು ಬಳಸಿ ರಚಿಸಿದ ವಿನ್ಯಾಸ) ನಿಹಾರಿಕಾ ಅವರ ಕಲಾಕೃತಿ ನೋಡಲು ಆಕರ್ಷಕವಾಗಿದೆ. ಸೂರ್ಯಾಸ್ತವನ್ನು ಬಣ್ಣಿಸುವ ಇನ್ನೊಂದು ಕಲಾಕೃತಿಯು ಸುಂದರವಾಗಿದೆ.

ವಿನ್ಯಾಸಗಾರ್ತಿಯೂ ಆಗಿರುವ ಮತ್ತು ಸಿಂಗಪುರದ ರ‍್ಯಾಫಲ್ಸ್ ಸಂಸ್ಥೆಯಲ್ಲಿ ಒಳಾಂಗಣ ವಿನ್ಯಾಸ ವಿಷಯದಲ್ಲಿ ಪದವಿ ಅಧ್ಯಯನ ಮಾಡುತ್ತಿರುವ ನಿಹಾರಿಕಾ, ‘ಮಿರಿಯಾಡ್‍’ನಲ್ಲಿ 3ಡಿ ಪೇಂಟಿಂಗ್, ಡಿಸೈನ್, ವಿಶುವಲ್ ಕ್ರಿಯೇಟಿವ್ಸ್ ಹಾಗೂ ಡೋಕ್ರಾ ಬುಡಕಟ್ಟು ಕಲೆಯ ಜೊತೆಗಿನ ಕೊಲಾಬರೇಶನ್ ಕಲಾಕೃತಿಗಳನ್ನು ಪ್ರದರ್ಶಿಸಲಿದ್ದಾರೆ. ಚಿಕ್ಕ ವಯಸ್ಸಿನಿಂದಲೇ ಕಲೆ ಹಾಗೂ ವಿನ್ಯಾಸದ ಬಗ್ಗೆ ಆಸಕ್ತಿ ಹೊಂದಿರುವ ಅವರು ತಮ್ಮ ಮೊದಲ ಕಲಾ ಪ್ರದರ್ಶನಕ್ಕೆ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುವ ನಿರೀಕ್ಷೆಯಲ್ಲಿದ್ದಾರೆ.

‘ವಿನ್ಯಾಸ ಹಾಗೂ ಸಾಂಪ್ರದಾಯಿಕ ಕಲೆಯನ್ನು ಒಂದುಗೂಡಿಸುವುದು ಬಹಳ ಆಸಕ್ತಿಕರ ವಿಷಯ. ವಿನ್ಯಾಸ ಕೂಡ ಕಲೆಯ ಅಂಗವೇ ಆಗಿದ್ದು, ಕಲೆಯಲ್ಲೇ ತನ್ನ ಬೇರುಗಳನ್ನು ಹೊಂದಿದೆ’ ಎನ್ನುತ್ತಾರೆ ಅವರು.

ಕಲಾಪ
* ಆಯೋಜನೆ: ಆರ್ಟ್ ಲ್ಯಾಬ್ಸ್
* ಕಲಾವಿದರು: ಸಂಧ್ಯಾ ಕೆ. ಸಿರ್ಸಿ, ನಿಹಾರಿಕಾ ಸಿರ್ಸಿ
* ಸ್ಥಳ: ವಿಸ್ಮಯ ಆರ್ಟ್ ಗ್ಯಾಲರಿ, ರಂಗೋಲಿ ಮೆಟ್ರೊ ಕಲಾಕೇಂದ್ರ, ಎಂ.ಜಿ.ರಸ್ತೆ
* ಎಲ್ಲಿಯವರೆಗೂ: ಸೆಪ್ಟೆಂಬರ್ 2ರ ವರೆಗೆ, ನಿತ್ಯ ಮಧ್ಯಾಹ್ನ 12 ರಿಂದ ರಾತ್ರಿ 7

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT