ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾಪ್ರಭುತ್ವಕ್ಕೆ ಸಂದ ಜಯ: ಸಂಭ್ರಮ

ಕಾಂಗ್ರೆಸ್‌–ಜೆಡಿಎಸ್‌ ಕಾರ್ಯಕರ್ತರಿಂದ ವಿಜಯೋತ್ಸವ
Last Updated 20 ಮೇ 2018, 11:56 IST
ಅಕ್ಷರ ಗಾತ್ರ

ಮಂಗಳೂರು: ವಿಧಾನಸೌಧದಲ್ಲಿ ಶನಿವಾರ ವಿಶ್ವಾಸ ಮತ ಯಾಚಿಸದೇ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ರಾಜೀನಾಮೆ ನೀಡುತ್ತಿದ್ದಂತೆಯೇ ನಗರದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕಾರ್ಯಕರ್ತರು ಪ್ರತ್ಯೇಕವಾಗಿ ವಿಜಯೋತ್ಸವ ಆಚರಿಸಿದರು.

ನಗರದ ಬೆಂದೂರವೆಲ್‌ನಲ್ಲಿ ಜೆಡಿಎಸ್‌ ಕಾರ್ಯಕರ್ತರು ಮಂಗಳೂರು ನಗರ ದಕ್ಷಿಣ ಘಟಕದ ಅಧ್ಯಕ್ಷ ವಸಂತ ಪೂಜಾರಿ ನೇತೃತ್ವದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಪಾಲಿಕೆ ಸದಸ್ಯರಾದ ಅಝೀಝ್‌ ಕುದ್ರೋಳಿ, ರಮೀಝಾ ಬಾನು, ರಾಮಗಣೇಶ್‌, ಗೋಪಾಲಕೃಷ್ಣ ಅತ್ತಾವರ, ಎನ್‌.ಪಿ. ಪುಷ್ಪರಾಜ್‌, ಮಧುಸೂಧನ ಗೌಡ, ರತ್ನಾಕರ ಸುವರ್ಣ, ಕನಕದಾಸ ಕೂಳೂರು, ಮುನೀರ್‌ ಮುಕ್ಕಚ್ಚೇರಿ, ಸುಮತಿ ಹೆಗ್ಡೆ, ಭಾರತಿ ಪುಷ್ಪರಾಜ್‌, ಯುವ ಜೆಡಿಎಸ್‌,
ಬ್ಲಾಕ್‌ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಮಲ್ಲಿಕಟ್ಟೆಯಲ್ಲಿ ಮಾಜಿ ಶಾಸಕ ಜೆ.ಆರ್‌. ಲೋಬೊ ನೇತೃತ್ವದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಬೈಕ್‌ಗಳಲ್ಲಿ ಪಕ್ಷದ ಬಾವುಟ ಹಿಡಿದು ಸಂಭ್ರಮಿಸಿದ ಕಾರ್ಯಕರ್ತರು, ಮೈತ್ರಿಕೂಟದ ಸರ್ಕಾರಕ್ಕೆ ಜಯಘೋಷ ಕೂಗಿದರು. ನಂತರ ಕಾಂಗ್ರೆಸ್‌ ಕಚೇರಿ ಎದುರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮವನ್ನು ಹಂಚಿಕೊಂಡರು.

ಜನಪರ ಆದೇಶಕ್ಕೆ ಗೆಲುವು: ರಾಜ್ಯದ ಇತಿಹಾಸದಲ್ಲಿ ಮುಖ್ಯಮಂತ್ರಿಯಾಗಿ ತನ್ನ ಹೆಸರಿನಲ್ಲಿಯೇ ಇದ್ದ 7 ದಿನಗಳ ಆಡಳಿತದ ದಾಖಲೆಯನ್ನು ಮುರಿದು, 3 ದಿನಗಳ ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ ಎಂದು ಜೆಡಿಎಸ್‌ ಜಿಲ್ಲಾ ವಕ್ತಾರ ಸುಶೀಲ್‌ ನೊರೊನ್ಹ ಲೇವಡಿ ಮಾಡಿದ್ದಾರೆ.

ಮಾಜಿ ಮುಖ್ಯಮಂತ್ರಿಗಳು 2001ರಲ್ಲಿ ಬಿಡುಗಡೆಯಾದ ನಾಯಕ್ ಹಿಂದಿ ಚಿತ್ರದಲ್ಲಿ ಅನಿಲ್ ಕುಮಾರ್ ನಟಿಸಿದ ಒಂದು ದಿನದ ಮುಖ್ಯಮಂತ್ರಿಯಾಗಿ ಕಂಡ ಯಶಸ್ಸನ್ನು ನಿಜ ಜೀವನದಲ್ಲಿ ಅಳವಡಿಸಲು ಮುಂದಾದರು. ಏಕಾಏಕಿ ಬಹುಮತವಿಲ್ಲದೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ, ಏನೂ ಮಾಡಲಾಗದೆ ರಾಜ್ಯದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದರು ಎಂದು ಅವರು ದೂರಿದ್ದಾರೆ.

ಕರ್ನಾಟಕದ ಜಾತ್ಯತೀತ ತತ್ವದ ಚುನಾಯಿತ ಶಾಸಕರು ಯಾವುದೇ ಅಮಿಶಕ್ಕೆ ಬಲಿಯಾಗದೆ ತಮ್ಮ ಪಕ್ಷದ ಹೈಕಮಾಂಡ್ ನಿಲುವಿಗೆ ಬದ್ಧರಾಗಿರುವುದು ಇಡೀ ರಾಷ್ಟ್ರ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ. ಇನ್ನು ಮುಂದೆ ಎಚ್.ಡಿ.ಕುಮಾರಸ್ವಾಮಿ ನಾಯಕತ್ವದಲ್ಲಿ ರಾಜ್ಯಕ್ಕೆ ಉತ್ತಮ ಜನಪರ ದೀನದಲಿತರಿಗೆ ಉತ್ತಮ ಆಡಳಿತ ದೊರಕುವುದರಲ್ಲಿ ಸಂಶಯವಿಲ್ಲ ಎಂದು ಆಶಯ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಅಭಿವೃದ್ಧಿಗೆ ಹೊಸ ದಿಕ್ಕು: ಕಾಂಗ್ರೆಸ್–ಜೆಡಿಎಸ್‌ ಮೈತ್ರಿಕೂಟದ ಸರ್ಕಾರ ಸೋಮವಾರ ಅಸ್ತಿತ್ವಕ್ಕೆ ಬರಲಿದ್ದು, ಆಡಳಿತದಲ್ಲಿ ಅಪಾರ ಅನುಭವ ಹೊಂದಿರುವ ಎರಡೂ ಪಕ್ಷಗಳ ಸರ್ಕಾರದಿಂದ ರಾಜ್ಯದ ಅಭಿವೃದ್ಧಿಗೆ ಹೊಸ ದಿಕ್ಕು ಸಿಗಲಿದೆ ಎಂದು ಮಾಜಿ ಶಾಸಕ ಜೆ.ಆರ್‌. ಲೋಬೊ ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕಿಸುವ ರೀತಿಯಲ್ಲಿ ತಪ್ಪು ದಾರಿಯನ್ನು ತೋರಿಸುತ್ತಿರುವ ಬಿಜೆಪಿಯನ್ನು ದೇಶದಿಂದಲೇ ಕಿತ್ತೊಗೆಯಬೇಕಾಗಿದೆ. ಅದಕ್ಕೆ ಕರ್ನಾಟಕದಿಂದಲೇ ನಾಂದಿ ಹಾಡಲಾಗಿದೆ ಎಂದು ತಿಳಿಸಿದ್ದಾರೆ.

ಬಿಜೆಪಿ ಸ್ಪಷ್ಟ ಬಹುಮತ ಇಲ್ಲದೇ ಇದ್ದರೂ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಿ.ಎಸ್‌. ಯಡಿಯೂರಪ್ಪ ಕೇವಲ 51 ಗಂಟೆಗಳಲ್ಲಿ ವಿಶ್ವಾಸಮತವನ್ನೂ ಯಾಚಿಸದೇ ರಾಜೀನಾಮೆ ನೀಡಿರುವುದು ರಾಜ್ಯದ ಇತಿಹಾಸದಲ್ಲಿಯೇ ಇದೇ ಮೊದಲು. ವಿಶ್ವಾಸಮತವನ್ನು ಎದುರಿಸುವ ಧೈರ್ಯವೂ ಇಲ್ಲದೇ ಪಲಾಯನ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.

ಜಾತ್ಯತೀತ ಶಕ್ತಿಗಳಿಂದ ಜನಪರ ಆಡಳಿತ: ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿಕೂಟದ ಜಾತ್ಯತೀತ ಪಕ್ಷಗಳಿಂದ ರಾಜ್ಯದಲ್ಲಿ ಜನಪರ ಆಡಳಿತ ಸಿಗಲಿದೆ ಎಂದು ಜೆಡಿಎಸ್‌ ನಗರ ದಕ್ಷಿಣ ಘಟಕದ ಅಧ್ಯಕ್ಷ ವಸಂತ ಪೂಜಾರಿ ಹೇಳಿದ್ದಾರೆ.

55 ಗಂಟೆ ಏಕಪಾತ್ರಾಭಿನಯ ಮಾಡಿದ ಬಿ.ಎಸ್‌. ಯಡಿಯೂರಪ್ಪ ಅವರು, ಪ್ರಜಾಪ್ರಭುತ್ವವನ್ನು ಅಣಕಿಸುವ ರೀತಿಯಲ್ಲಿ ಶಾಸಕರ ಖರೀದಿಗೆ ಯತ್ನಿಸಿದರು. ಶಾಸಕರಿಗೆ ಆಮಿಷಗಳನ್ನು ಒಡ್ಡಿದರು. ಆದರೆ, ಜಾತ್ಯತೀತ ತತ್ವದಲ್ಲಿ ನಂಬಿಕೆ ಇರುವ ಉಭಯ ಪಕ್ಷಗಳ ಶಾಸಕರು, ಈ ಆಮಿಷಗಳಿಗೆ ಬಲಿಯಾಗದೇ ಪ್ರಜಾಪ್ರಭುತ್ವವನ್ನು ಗೆಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ.

ಮೈತ್ರಿ ಸರ್ಕಾರಕ್ಕೆ ಶ್ರೀರಾಮ, ಆಂಜನೇಯನ ಆಶೀರ್ವಾದವಿದೆ. ರಾಜ್ಯದ ಆರೂವರೆ ಕೋಟಿ ಜನರ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕುಮಾರಸ್ವಾಮಿ ಕೆಲಸ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಒಳ್ಳೆಯ ಆಡಳಿತ: ರಾಜ್ಯದಲ್ಲಿ ಪ್ರಜಾಪ್ರಭುತ್ವಕ್ಕೆ ಜಯ ಸಿಕ್ಕಿದೆ. ಎಚ್‌.ಡಿ. ಕುಮಾರ ಸ್ವಾಮಿ ನೇತೃತ್ವದಲ್ಲಿ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿಕೂಟ ಒಳ್ಳೆಯ ಆಡಳಿತ ನೀಡಲಿದೆ ಎಂದು ಜಿಲ್ಲಾ ಘಟಕದ ಅಧ್ಯಕ್ಷ ವಿಟ್ಲ ಮಹಮ್ಮದ್‌ ಕುಂಞಿ ಪ್ರತಿಕ್ರಿಯಿಸಿದ್ದಾರೆ.

ರಾಜ್ಯದಲ್ಲಿ 20 ತಿಂಗಳ ಅಧಿಕಾರಾವಧಿಯಲ್ಲಿ ಕುಮಾರಸ್ವಾಮಿ ಅವರು ನೀಡಿದ ಉತ್ತಮ ಆಡಳಿತವನ್ನು ಜನರು ಮರೆತಿಲ್ಲ. ಇದೀಗ ಮತ್ತೊಮ್ಮೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲಿದ್ದು, ರಾಜ್ಯದ ಸಮಗ್ರ ಅಭಿವೃದ್ಧಿಗೆ ಆದ್ಯತೆ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಮೈತ್ರಿ ಸರ್ಕಾರಕ್ಕೆ ಅನುವು ಮಾಡಿಕೊಡಿ’

ವಿಧಾನಸಭೆ ಸೇರಿ ಅದರಲ್ಲಿ ವಿಶ್ವಾಸ ಮತ ಸಾಬೀತು ಪಡಿಸಲು ಸಾಧ್ಯವಾಗದ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರುವುದು ಪ್ರಜಾಪ್ರಭುತ್ವಕ್ಕೆ ಸಿಕ್ಕಿದ ಗೆಲುವಾಗಿದೆ. ರಾಜ್ಯಪಾಲರು ಕುಮಾರಸ್ವಾಮಿಯವರನ್ನು ಕೂಡಲೇ ಕರೆದು ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚಿಸಲು ಅನುವು ಮಾಡಿ ಕೊಡಬೇಕು ಎಂದು ಸಿಪಿಐ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಮಿತಿ ಕಾರ್ಯದರ್ಶಿ ವಿ.ಕುಕ್ಯಾನ್ ಆಗ್ರಹಿಸಿದ್ದಾರೆ.

ವಿಧಾನಸಭೆಗೆ ಚುನಾವಣೆ ನಡೆದು ಯಾವುದೇ ಪಕ್ಷಕ್ಕೆ ಬಹುಮತ ಬರದೆ ಅನೇಕ ಸಮಸ್ಯೆಗಳು ಸೃಷ್ಟಿಯಾಗಿವೆ. ಕಾಂಗ್ರೆಸ್ ಮತ್ತು ಜೆಡಿಎಸ್‌ ಒಂದಾಗಿ ಸರ್ಕಾರ ರಚಿಸಲು ತಯಾರಿದ್ದು, ರಾಜ್ಯಪಾಲರನ್ನು ಭೇಟಿಯಾಗಿ ಮನವಿ ಮಾಡಿದರೂ ಅದನ್ನು ಲೆಕ್ಕಿಸದೆ ರಾಜ್ಯಪಾಲರು 104 ಶಾಸಕರಿರುವ ಬಿಜೆಪಿಗೆ ಸರ್ಕಾರ ರಚಿಸಲು ಅನುವು ಮಾಡಿ ಕೊಟ್ಟರು. ಅಲ್ಲದೇ ಬಹುಮತ ಸಾಧಿಸಲು 15 ದಿನಗಳ ಗಡುವು ಕೊಟ್ಟಿರುವುದು ಪ್ರಜಾಪ್ರಭುತ್ವದ ಕೊಲೆ ಎಂದರೆ ತಪ್ಪಾಗಲಾರದು ಎಂದು ತಿಳಿಸಿದ್ದಾರೆ. ಮಧ್ಯ ಪ್ರವೇಶಿಸಿದ ಸುಪ್ರೀಂ ಕೋರ್ಟ್‌, ಶನಿವಾರ ಸಂಜೆ 4 ಗಂಟೆಗೆ ಬಹುಮತ ಸಾಬೀತು ಪಡಿಸಲು ಗಡುವು ಕೊಟ್ಟಿರುವುದು ಸ್ವಾಗತಾರ್ಹ. ವಿಧಾನಸಭೆಯಲ್ಲಿ ಅತಿ ಹಿರಿಯ ಶಾಸಕರನ್ನು ಹಂಗಾಮಿ ಸಭಾಧ್ಯಕ್ಷರಾಗಿ ನೇಮಿಸುವುದು ಸಂಪ್ರದಾಯವಾಗಿದ್ದರೂ ರಾಜ್ಯಪಾಲರು ಬೋಪಯ್ಯರನ್ನು ಹಂಗಾಮಿ ಸಭಾಧ್ಯಕ್ಷರಾಗಿ ನೇಮಿಸಿರುವುದು ಖಂಡನೀಯ ಎಂದು ಹೇಳಿದ್ದಾರೆ.

**
ವಿಧಾನಸಭೆಯಲ್ಲಿ ನಡೆದ ವಿದ್ಯಮಾನಗಳು ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಸಂದ ಜಯವಾಗಿದೆ
ಯು.ಟಿ.ಖಾದರ್‌, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT