ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶತಮಾನದ ‘ಪಲಾಂಡು ಚರಿತ್ರೆ’ಗೆ ಮರುಜೀವ

Last Updated 20 ಆಗಸ್ಟ್ 2020, 3:22 IST
ಅಕ್ಷರ ಗಾತ್ರ

ಮಣ್ಣಿನಡಿಯಲ್ಲಿ ಬೆಳೆಯುವ ಕಂದಮೂಲಗಳು ಮತ್ತು ಭುವಿಯ ಮೇಲಿನ ಹಣ್ಣು–ತರಕಾರಿಗಳಿಗೆ ಒಮ್ಮೆ ಭಾರಿ ವಾಗ್ವಾದವಾಯಿತು. ಯಾರು ಶ್ರೇಷ್ಠ ಎಂಬುದು ಈ ಜಗಳದ ವಿಷಯ. ಮಾತಿನ ಬಾಣಗಳಿಗೆ ಪರಿಹಾರ ಕಂಡುಕೊಳ್ಳಲು ಆಗಲಿಲ್ಲ. ವಿಷಯ ಶ್ರೀಕೃಷ್ಣ ಪರಮಾತ್ಮನ ಬಳಿಗೆ ತಲುಪಿತು. ಅಲ್ಲಿ ತೀರ್ಪು ಆಯಿತು. ಶ್ರೀಕೃಷ್ಣ ಏನು ಹೇಳಿದ ಎಂಬ ಕುತೂಹಲಕ್ಕೆ ಉತ್ತರ ರೂಪದಲ್ಲಿ ಸಿದ್ಧವಾಗಿದೆ, ‘ಪಲಾಂಡು ಚರಿತ್ರೆ‘ ಯಕ್ಷಗಾನ.

ನೂರು ವರ್ಷಗಳ ಹಿಂದೆ ರಚನೆಗೊಂಡ ಈ ಪ್ರಸಂಗವನ್ನು ರಂಗಕ್ಕೆ ತಂದಿರುವ ಕಾಸರಗೋಡಿನ ‘ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ’ವು ಯೂಟ್ಯೂಬ್‌ (youtube.com/c/svvision) ಮೂಲಕ ಸಾರ್ವಜನಿಕರಿಗೆ ಒದಗಿಸಿದೆ. ಕೊರೊನಾ ಸೋಂಕು ಆರಂಭವಾದಾಗ ಯಕ್ಷಗಾನ ಪ್ರಸಂಗದ ಮೂಲಕ ಜಾಗೃತಿ ಮೂಡಿಸಿದ ಸಿರಿಬಾಗಿಲು ಪ್ರತಿಷ್ಠಾನಕ್ಕೆ ‘ಪಲಾಂಡು ಚರಿತ್ರೆ’ಯನ್ನು ಬೆಳಕಿಗೆ ತರಲು ನೆರವಾಗಿರುವುದು ಹೈದರಾಬಾದ್‌ನ ಕನ್ನಡ ನಾಟ್ಯರಂಗ ಸಂಸ್ಥೆ. ಈ ಪ್ರಸಂಗದಲ್ಲೂ ಆರೋಗ್ಯ ಜಾಗೃತಿ ಇದೆ; ಜೀವನಮೌಲ್ಯದ ಸಂದೇಶವೂ ಇದೆ.

ಸಂಸ್ಕೃತದಲ್ಲಿ ಪಲಾಂಡು ಎಂದರೆ ಈರುಳ್ಳಿ. ಉಡುಪಿಯ ಕೆರೋಡಿ ಸುಬ್ಬರಾವ್ ರಚಿಸಿದ ‘ಪಲಾಂಡು ಚರಿತ್ರೆ’ ಇಲ್ಲಿಯವರೆಗೆ ರಂಗಪ್ರಯೋಗ ಕಂಡಿರಲಿಲ್ಲ ಎನ್ನುತ್ತಾರೆ ಈ ಪ್ರಯೋಗದ ಭಾಗವತರಾದ ರಾಮಕೃಷ್ಣ ಮಯ್ಯ. ಸಾಹಿತಿಯೂ ಆಗಿದ್ದ ಸುಬ್ಬರಾವ್ ಅವರ ಮೊಮ್ಮಗ ಕೆರೋಡಿ ಗುಂಡೂರಾಯರು ಕನ್ನಡ ನಾಟ್ಯರಂಗದ ಸ್ಥಾಪಕರು. ಅವರ ಕಾಳಜಿಯಿಂದ ಶತಮಾನದ ಪ್ರಸಂಗ ಈಗ ರಂಗಕ್ಕೆ ಬಂದಿರುವುದರಿಂದ ಇದರಲ್ಲಿ ತಲೆಮಾರುಗಳ ಸಂಬಂಧವೂ ಇದೆ.

ಯಕ್ಷಗಾನ ಪ್ರಸಂಗವು ಸಾಮಾನ್ಯವಾಗಿ ಪೌರಾಣಿಕ ಕಥೆಗಳಿಗೆ ಸೀಮಿತವಾಗಿರುತ್ತದೆ. ಆದರೆ, ‘ಪಲಾಂಡು ಚರಿತ್ರೆ’ ಸಾಮಾಜಿಕ ವಿಷಯದ ಮೇಲೆ ಹೆಣೆದ ಪ್ರಸಂಗ. ಆರೋಗ್ಯಕ್ಕೆ ಸಂಬಂಧಿಸಿದ ಅರಿವು ಕೂಡ ಇರುವುದರಿಂದ ಕೊರೊನಾ ಕಾಲದಲ್ಲಿ ಇದರ ಮಹತ್ವ ಹೆಚ್ಚಿದೆ. ‘ಇದು ವಿಶೇಷ ಪ್ರಸಂಗ. ಕಂದಮೂಲಗಳು ಮತ್ತು ಹಣ್ಣುಗಳ ಬಳಕೆ, ಯಾವ ಹಣ್ಣನ್ನು ಯಾವಾಗ–ಹೇಗೆ ಉಪಯೋಗಿಸಬೇಕು ಇತ್ಯಾದಿ ಮಾಹಿತಿಗಳನ್ನು ಒಳಗೊಂಡಿದೆ. ಎರಡು ತಾಸಿನ ಪ್ರಯೋಗದಲ್ಲಿ ನಾಲ್ವರನ್ನು ಹೊರತುಪಡಿಸಿದರೆ ಉಳಿದವರೆಲ್ಲ ವೃತ್ತಿ ಕಲಾವಿದರು. ಕಾಸರಗೋಡು ಕೊಲ್ಲಂಗಾನದ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಮೇಳದ ‘ಶ್ರೀನಿಲಯ’ದಲ್ಲಿ ಚಿತ್ರೀಕರಣ ಮಾಡಲಾಗಿದೆ’ ಎಂದು ರಾಮಕೃಷ್ಣ ಮಯ್ಯ ವಿವರಿಸಿದರು.

ಶ್ರೀಕೃಷ್ಣನಾಗಿವಾಸುದೇವ ರಂಗಭಟ್ ಮಧೂರು, ಚೂತ ಫಲವಾಗಿರಾಧಾಕೃಷ್ಣ ನಾವಡ ಮಧೂರು, ಪಲಾಂಡುವಾಗಿ ಜಯಪ್ರಕಾಶ್ ಶೆಟ್ಟಿ ಪರ್ಮುದೆ ವೇಷ ತೊಟ್ಟಿದ್ದು, ಮವ್ವಾರು ಬಾಲಕೃಷ್ಣ ಮಣಿಯಾಣಿ, ಹರೀಶ ಶೆಟ್ಟಿ ಮಣ್ಣಾಪು, ಮಾಧವ ಪಾಟಾಳಿ, ಪ್ರಕಾಶ್ ನಾಯಕ್, ಬಾಲಕೃಷ್ಣ ಸೀತಾಂಗೋಳಿ, ಶಿವರಾಜ ಪೆರ್ಲ, ಶಿವಾನಂದ ಪೆರ್ಲ, ಕಿಶನ್, ಉಪಾಸನಾ, ಸ್ವಸ್ತಿಕ್, ಶ್ರೀಗಿರಿ ಮೊದಲಾದವರು ಇತರೆ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಭಾಗವತಿಕೆಯಲ್ಲಿ ರಾಮಕೃಷ್ಣ ಮಯ್ಯ ಅವರೊಂದಿಗೆ ತಲ್ಪಣಾಜೆ ವೆಂಕಟರಮಣ ಭಟ್ ಕೂಡ ದನಿಗೂಡಿಸಿದ್ದಾರೆ.

ಚೆಂಡೆ-ಮದ್ದಳೆಯನ್ನು ಲಕ್ಷ್ಮೀನಾರಾಯಣ ರಾವ್ ಅಡೂರು ಮತ್ತು ಲಕ್ಷ್ಮೀಶ ಬೆಂಗ್ರೊಡಿ ನಿರ್ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT