ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಂಪುರದಲ್ಲಿ ಪರಿಷೆಯೊಂದಿಗೆ ಸಂಕ್ರಾಂತಿ

Last Updated 13 ಜನವರಿ 2019, 19:45 IST
ಅಕ್ಷರ ಗಾತ್ರ

ನಗರದ ಹೊರವಲಯ ಸೋಂಪುರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ವಿಶೇಷವಾಗಿ ಸಂಕ್ರಾಂತಿ ಹಬ್ಬ ಆಚರಿಸಲಾಗುತ್ತಿದೆ. ಇಲ್ಲಿನ ನಂದಿ ಬಸವೇಶ್ವರ ದೇವಸ್ಥಾನದಲ್ಲಿ ಸಂಕ್ರಾಂತಿ ಹಬ್ಬದೊಂದಿಗೆ ಕಡಲೆಕಾಯಿ ಪರಿಷೆ ಮತ್ತು ಜಾತ್ರಾಮಹೋತ್ಸವ ಕೂಡ ಜರುಗುತ್ತವೆ. ನೆರೆ ಹೊರೆ ಗ್ರಾಮದ ಜನರು ಈ ಹಬ್ಬದಲ್ಲಿ ಪಾಲ್ಗೊಂಡು ಸಂಭ್ರಮಿಸುತ್ತಾರೆ.

ಸೋಂಪುರ ಬಳಿಯ ಚನ್ನವೀರಯ್ಯನ ಪಾಳ್ಯದಲ್ಲಿರುವ ನಂದಿ ಬಸವೇಶ್ವರಸ್ವಾಮಿ ದೇವಸ್ಥಾನವು ಇತಿಹಾಸ ಪ್ರಸಿದ್ಧವಾಗಿದ್ದುದಲ್ಲದೆ ಚೋಳರ ಕಾಲದಲ್ಲಿ ನಿರ್ಮಾಣಗೊಂಡಿದ್ದು. ಶಿಥಿಲಾವಸ್ಥೆಯಲ್ಲಿದ್ದ ಈ ದೇವಾಲಯವನ್ನು ಗ್ರಾಮಸ್ಥರು ಎಂ.ರುದ್ರೇಶ್‍ ಅವರ ನೇತೃತ್ವದಲ್ಲಿ ಶ್ರೀ ಬಸವೇಶ್ವರ ಭಕ್ತ ಮಂಡಳಿ ಯುವಕ ತಂಡ ಕಟ್ಟಿಕೊಂಡು 2006ರಲ್ಲಿ ಜೀರ್ಣೋದ್ಧಾರ ಮಾಡಿದ್ದಾರೆ.

ನಂದಿ ಬಸವೇಶ್ವರ ದೇವರ ಉತ್ಸವ, ಜಾತ್ರಾ ಮಹೋತ್ಸವದಲ್ಲಿ ಹೆಮ್ಮಿಗೆಪುರದ ಮಾರಮ್ಮ, ಗಟ್ಟಿಗೆರೆ ಪಾಳ್ಯ, ಶ್ರೀ ಕಬ್ಬಾಳಮ್ಮ, ಚನ್ನವೀರಯ್ಯನಪಾಳ್ಯ, ಶ್ರೀ ಮಾರಮ್ಮ, ಎಚ್.ಗೊಲ್ಲಹಳ್ಳಿ ಶ್ರೀ ಕಬ್ಬಾಳಮ್ಮ ಸೇರಿದಂತೆ ವಿವಿಧ ದೇವರುಗಳ ಮೆರವಣಿಗೆ ನಡೆಯುತ್ತದೆ.

ಸಹಸ್ರಾರು ಮಹಿಳೆಯರು ಹೂವು, ತಂಬಿಟ್ಟಿನ ಆರತಿಯೊಂದಿಗೆ ದೇವಾಲಯಕ್ಕೆ ಮೆರವಣಿಗೆ ಮೂಲಕ ಬಂದು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಡಂಕಣಿಕೋಟೆ, ತಳಿ, ಧರ್ಮಪುರಿ, ಪಾವಗಡ, ಗೌರಿಬಿದನೂರು ಕನಕಪುರ, ಮಾಗಡಿಯಿಂದ ನೂರಾರು ಕ್ವಿಂಟಲ್ ಕಡಲೆಕಾಯಿ ತಂದು ಸುರಿಯಲಾಗುತ್ತದೆ. ಅದನ್ನು ಎಲ್ಲರಿಗೂ ತಲಾ ಎರಡು ಲೀಟರ್ ಕಡಲೆಕಾಯಿ ಹಾಗೂ ಒಂದು ಜೊತೆ ಕಬ್ಬನ್ನು ಉಚಿತವಾಗಿ ವಿತರಿಸಿ ಕಡಲೆಕಾಯಿ ಪರಿಷೆಯನ್ನು ಆಚರಿಸಲಾಗುತ್ತದೆ. ಜತೆಗೆ ಬೇಯಿಸಿದ ಗಿಣ್ಣು, ಅವರೇಕಾಯಿ, ಗೆಣಸು ಮತ್ತು ಎಳ್ಳು ಬೆಲ್ಲ ವಿತರಣೆಯ ಜತೆಗೆ ಅನ್ನದಾಸೋಹ ಕೂಡ ಇಲ್ಲಿ ನಡೆಯುತ್ತದೆ. ಜಾತ್ರಾ ಮಹೋತ್ಸವಕ್ಕೆ ನೈಸ್ ರಸ್ತೆ, ವರಹಾಸಂದ್ರ, ಚನ್ನವೀರಯ್ಯನಪಾಳ್ಯ, ಸೋಂಪುರ, ಗೊಲ್ಲಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಭಕ್ತರು ಬರುತ್ತಾರೆ.

ಸಂಕ್ರಾಂತಿ ಉತ್ಸವದೊಂದಿಗೆ ಗ್ರಾಮೀಣ ಹಬ್ಬಕ್ಕೆ ಮತ್ತಷ್ಟು ಮೆರಗು ನೀಡಲು ನಾಡಿನ ಸುಪ್ರಸಿದ್ಧ ಕಲಾವಿದರಿಂದ ಪೂಜಾಕುಣಿತ, ಪಠದ ಕುಣಿತ, ಡೊಳ್ಳು ಕುಣಿತ, ನಂದಿಧ್ವಜ, ಗೊರವನ ಕುಣಿತ, ವೀರಭದ್ರನ ಕುಣಿತ, ನಗಾರಿವಾದ್ಯ ಮಹಿಳೆಯರಿಂದ ವೀರಗಾಸೆ, ಕಂಸಾಳೆ, ಕರಡಿಕುಣಿತ, ಸೇರಿದಂತೆ ಹಲವಾರು ಜಾನಪದ ಕಲೆಗಳ ರೋಮಾಂಚಕ ಕಲಾ ಪ್ರದರ್ಶನ ದಿನ ಪೂರ್ತಿ ನಡೆಯಲಿವೆ. ಕ್ರೀಡಾಸಕ್ತಿಯನ್ನೂ ಬೆಳೆಸಿಕೊಂಡಿರುವ ಗ್ರಾಮೀಣ ಯುವಕರಿಗೆ ಗ್ರಾಮೀಣ ಕ್ರೀಡೆಗಳಾದ ಮಲ್ಲಗಂಬ ಏರುವುದು. ಗುಂಡು ಎತ್ತುವ ಸ್ಪರ್ಧೆ, ಮಡಕೆ ಒಡೆಯುವುದು, ಹೆಣ್ಣು ಮಕ್ಕಳಿಗಾಗಿ ಹಾಲು ಕರೆಯುವ ಸ್ಪರ್ದೆ, ರಂಗೋಲಿ ಸ್ಪರ್ಧೆಗಳು ನೆಡೆಯಲಿದ್ದು, ವಿಜೇತರಿಗೆ ಬಹುಮಾನ ನೀಡಲಾಗುವುದು. ಮಕ್ಕಳಿಗಾಗಿ ಜಾತ್ರೆಯಲ್ಲಿ ಆಟಿಕೆಗಳ ಅಂಗಡಿಗಳನ್ನು ತೆರೆಯಲಾಗುವುದು. ಗೃಹೋಪಯೋಗಿ ವಸ್ತು, ಮತ್ತಿತರರ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳು ತೆರೆದಿರುತ್ತವೆ.

ಸಂಜೆ 6 ಗಂಟೆಗೆ ವಿವಿಧ ಗ್ರಾಮಗಳ ರೈತರು ತಾವು ಸಾಕಿರುವ ಹಸು, ಎಮ್ಮೆ, ಎತ್ತುಗಳನ್ನು ಒಂದೆಡೆ ಸೇರಿಸಿ ಸಂಜೆ ಕಿಚ್ಚಾಯಿಸುತ್ತಾರೆ. ಕಾರ್ಯಕ್ರಮದಲ್ಲಿ ದೇಗುಲಮಠದ ನಿರ್ವಾಣ ಸ್ವಾಮಿ, ಮರಳೇಗವಿ ಮಠದ ಶಿವರುದ್ರ ಸ್ವಾಮೀಜಿ ಪಾಲ್ಗೊಳ್ಳುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT