ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಟ್ಟೆ ಮೇಲೆ ಭವ್ಯ ಇತಿಹಾಸ

Last Updated 25 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಅದೊಂದು ಕಲಾಕೃತಿ. ಅದರಲ್ಲಿ ದೇವರಿದ್ದಾನೆ, ಪುರಾಣವಿದೆ, ಇತಿಹಾಸವಿದೆ, ಜೊತೆಗೊಂದು ಸಂದೇಶ, ಅದರೊಂದಿಗೆ ಮನರಂಜನೆ.

ಬಟ್ಟೆಯ ಮೇಲೆ ಹೀಗೆ ‘ಪರಂಪರೆ’ ಒಂದನ್ನು ಅನಾವರಣಗೊಳಿಸುವ ಕಲೆಗಾಗಿ ರಾಷ್ಟ್ರಪ್ರಶಸ್ತಿ ಪಡೆದವರು ಕಲ್ಯಾಣ್‌ ಜೋಶಿ. ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ‘ದಸ್ತಕಾರ್‌’ ಕಲಾಕೃತಿಗಳ ಮೇಳದಲ್ಲಿ ‘ಪ್ರಜಾವಾಣಿ’ಗೆ ಸಿಕ್ಕ ಅವರು, ಫಡ್‌ ಪೇಂಟಿಂಗ್‌ನಂತಹ ಜನಪದ ಕಲೆಯ ಹಿನ್ನೆಲೆ–ಭವಿಷ್ಯದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ರಾಜಸ್ಥಾನದ ರಕ್ಷಕರು, ದೇವಮಾನವರು ಎಂದೇ ಕರೆಯಲಾಗುವ ಪಾಬುಜಿ ಮತ್ತು ದೇವನಾರಾಯಣರ ಕಥೆಗಳನ್ನು ಬಟ್ಟೆಗಳ ಮೇಲೆ ಬಿಡಿಸುತ್ತಾರೆ ಜೋಶಿ. ರಾಜಸ್ಥಾನದ ಜನರ ಪಾಲಿಗೆ ಪಾಬುಜಿ ಜನಪದ ದೇವರಾದರೆ, ದೇವನಾರಾಯಣ ವಿಷ್ಣುವಿನ ಅವತಾರ.

700 ವರ್ಷಗಳ ಇತಿಹಾಸ
ಬಟ್ಟೆ ಮೇಲೆ ಹೀಗೆ ಚಿತ್ರಗಳನ್ನು ರಚಿಸುವುದಕ್ಕೆ ‘ಫಡ್‌ ಪೇಂಟಿಂಗ್‌’ ಎನ್ನುತ್ತಾರೆ. ಈ ರೀತಿಯ ಕಲಾಕೃತಿ ರಚನೆ ಆರಂಭವಾಗಿದ್ದು ಸುಮಾರು 700 ವರ್ಷಗಳ ಹಿಂದೆ, ರಾಜಸ್ಥಾನದ ಭಿಲ್ವಾರ ಭಾಗದಲ್ಲಿ. ಈ ಕಲಾಕೃತಿಗಳೊಂದಿಗೆ ಹಾಡು–ನೃತ್ಯವೂ ಸೇರಿಕೊಂಡು ಇದೊಂದು ಮನರಂಜನೆಯ ಮತ್ತು ಜನರಿಗೆ ಸಂದೇಶ ನೀಡುವ ಮಾಧ್ಯಮವಾಗಿ ಬೆಳೆಯಿತು.

ರಬರಿ ಬುಡಕಟ್ಟು ಸಮುದಾಯದ ‘ಭೋಪ–ಭೋಪಿ’ ಎಂದು ಕರೆಯಲಾಗುತ್ತಿದ್ದ ಪುರುಷ ಮತ್ತು ಮಹಿಳೆಯರು, ಗಾಯನ ಮತ್ತು ನೃತ್ಯದ ಮೂಲಕ ಇವುಗಳನ್ನು ಜನರ ಬಳಿ ಒಯ್ಯುತ್ತಿದ್ದರು. ಅಲೆಮಾರಿಗಳಾಗಿದ್ದ ಇವರು ಕುರಿಗಾಹಿಗಳು ಮತ್ತು ಒಂಟೆ ಸಾಕುವವರು. ನಮ್ಮಲ್ಲಿ ಹೆಳವರು ಇದ್ದಂತೆ, ರಾಜಸ್ಥಾನದಲ್ಲಿ ಈ ಸಮುದಾಯದವರು ಇದ್ದಾರೆ.

ಹೆಳವರು ಜನರ ವಂಶವೃಕ್ಷವನ್ನು ಹೇಳಿದರೆ, ಈ ಬುಡಕಟ್ಟು ಜನಾಂಗವು, ಪಾಬುಜಿ ಮತ್ತು ದೇವನಾರಾಯಣರ ಕಥೆಗಳನ್ನು ಜನರಿಗೆ ಮುಟ್ಟಿಸುತ್ತದೆ. ಇದಲ್ಲದೆ, ರಾಮಾಯಣ, ಹನುಮಾನ್ ಚಾಲೀಸಾ ಮತ್ತು ಇತರೆ ಪೌರಾಣಿಕ ಕಥೆಗಳನ್ನು ಈ ಕಲೆಯ ಮೂಲಕ ಜನರಿಗೆ ತಲುಪಿಸುತ್ತದೆ.

ಊರಿಂದ ಊರಿಗೆ ಅಲೆಯುತ್ತಿದ್ದ ಈ ಸಮುದಾಯಕ್ಕೆ, ನಿತ್ಯ ದೇಗುಲಗಳಿಗೆ ಹೋಗಲು, ದೇವರಿಗೆ ಪೂಜೆ ಸಲ್ಲಿಸಲು ಆಗುತ್ತಿರಲಿಲ್ಲ. ಹೀಗಾಗಿ, ಬಟ್ಟೆಯ ಮೇಲೆಯೇ ‘ದೇಗುಲ–ದೇವಸ್ಥಾನ’ವನ್ನು ರಚಿಸಿ, ಪೂಜಿಸಲು ಪ್ರಾರಂಭಿಸಿದವರು ಇವರು. ನಂತರ, ಇದೇ ಒಂದು ಜನಪದ ಕಲೆಯಾಯಿತು.

ಜೋಶಿ ಮನೆತನದ ಕಲೆ
ಈ ಪ್ರಾಚೀನ ಕಲೆಯನ್ನು ರಾಜಸ್ಥಾನದಲ್ಲಿ ಜನಜನಿತಗೊಳಿಸಿದ ಶ್ರೇಯ ಜೋಶಿ ಮನೆತನಕ್ಕೆ ಸೇರುತ್ತದೆ. ರಬರಿ ಸಮುದಾಯದ ಭೋಪ–ಭೋಪಿಗಳು ಈ ಕಲಾಕೃತಿ ರಚಿಸುವ ಕಾರ್ಯವನ್ನು ‘ಚಿಪ್ಪ’ ಸಮುದಾಯಕ್ಕೆ ಜೋಶಿಗಳಿಗೆ ವಹಿಸುತ್ತಾರೆ. ಬದಲಾದ ತಂತ್ರಗಳಿಗೆ ಪೂರಕವಾಗಿ ಈ ಕಲೆಗೆ ಜೀವ ತುಂಬುವ ಕೆಲಸವನ್ನು ಜೋಶಿ ಮನೆತನ ಮಾಡುತ್ತದೆ.

‌‘ಫಡ್‌ ಪೇಂಟಿಂಗ್‌’ನಲ್ಲಿ ದೊಡ್ಡ ಹೆಸರು ಮಾಡಿದವರು ಕಲ್ಯಾಣ್‌ ಜೋಶಿಯವರ ತಂದೆ ಶ್ರೀಲಾಲ್ ಜೋಶಿ. ಈ ಕಲೆಯ ಮಹತ್ವವನ್ನು ಅರಿತು, ಮುಂದಿನ ಸಮುದಾಯಕ್ಕೂ ಇದನ್ನು ವಿಸ್ತರಿಸಬೇಕು ಎಂದುಕೊಂಡಿದ್ದ ಶ್ರೀಲಾಲ್, ಫಡ್‌ ಪೇಂಟಿಂಗ್ ಕಲಿಸುವ ‘ಜೋಶಿ ಕಲಾ ಕುಂಜ್‌‘ ಅನ್ನು 1960ರಲ್ಲಿ ಕಟ್ಟಿದರು. ಈಗ ಇದನ್ನು ಚಿತ್ರಶಾಲಾ ಎಂದು ಕರೆಯಲಾಗುತ್ತಿದೆ.

ರಾಜಸ್ಥಾನದಲ್ಲಿ ಮಾತ್ರವಲ್ಲದೆ, ಹೊರರಾಜ್ಯದ ಕಲಾವಿದರಿಗೂ ಈ ಕಲೆಯನ್ನು ಕಲಿಸಲಾಗುತ್ತಿದೆ. ತಂದೆಯ ಕಲೆಯನ್ನು ಮುಂದಿನ ಪೀಳಿಗೆಗೆ ತಲುಪಿಸುತ್ತಿದ್ದಾರೆ ಕಲ್ಯಾಣ್ ಜೋಶಿ.

ಪರಿಸರ ಸ್ನೇಹಿ
ಯಾವುದೇ ರಾಸಾಯನಿಕ ಬಣ್ಣ, ಅಂಶಗಳನ್ನು ಬಳಸಿಕೊಳ್ಳದೆ, ನೈಸರ್ಗಿಕ ಬಣ್ಣಗಳಿಂದಲೇ ಕಲಾಕೃತಿಗಳನ್ನು ಜೋಶಿ ರಚಿಸುತ್ತಾರೆ.

ಕಲಾಕೃತಿ ರಚನೆಗೆ ಕೈಯಿಂದ ನೇಯ್ದ ಬಿಳಿ ಬಟ್ಟೆಯನ್ನು ಬಳಸುವುದು ಉತ್ತಮ. ಈ ಬಟ್ಟೆಯನ್ನು ರಾತ್ರಿ ಇಡೀ ನೆನೆಸಿಡಬೇಕು. ನಂತರ, ಅದಕ್ಕೆ ಗಂಜಿ ಹಾಕಿಟ್ಟು, ತೊಳೆದ ನಂತರ ಒಣಗಿಸಿ, ಅದು ಹೊಳಪು ಬರುವಂತೆ ಮಾಡಿದ ನಂತರ, ಅದರ ಮೇಲೆ ಚಿತ್ರ ರಚಿಸಲು ಆರಂಭಿಸಬೇಕು. ಕ್ಯಾನ್‌ವಾಸ್‌ ಅನ್ನು ಮೊದಲು ದಟ್ಟ ಬಣ್ಣಗಳಿಂದ ತುಂಬಿ, ಅದರ ಮೇಲೆ ಪೌರಾಣಿಕ ಪಾತ್ರ, ಕಥೆಯ ಸರಣಿ ರಚಿಸುತ್ತಾ ಹೋಗಬೇಕು ಎಂದು ಸಲಹೆ ನೀಡುತ್ತಾರೆ ಜೋಶಿ.

ಚಿತ್ರದಲ್ಲಿ ಕೈ–ಕಾಲುಗಳನ್ನು ಬಿಡಿಸಲು ಕೇಸರಿ, ಆಭರಣಗಳು ಮತ್ತು ಉಡುಪಿಗೆ ಹಳದಿ, ಪ್ರಕೃತಿಗೆ ಹಸಿರು, ವಾಸ್ತುಶಿಲ್ಪಗಳಿಗೆ ಕಂದು, ವೈಭವೋಪೇತ ಉಡುಪುಗಳನ್ನು ಸಂಕೇತಿಸಲು ಕೆಂಪು ಬಣ್ಣ ಬಳಸಬಹುದು. ಬಹಳ ಮುಖ್ಯ ಅಂಶ ಅಂದರೆ, ಕಲಾಕೃತಿಗೆ ಜೀವಕಳೆ ಬರುವುದೇ ಕಣ್ಣುಗಳಿಂದ. ಇಡೀ ಕಲಾಕೃತಿಯ ಕೇಂದ್ರಬಿಂದುವಿನಂತಿರುವ ಕಣ್ಣುಗಳನ್ನು ಕೊನೆಯಲ್ಲಿ ರಚಿಸಬೇಕು. ಅದು ಇಡೀ ಕಲಾಕೃತಿಯ ಕೇಂದ್ರವಾಗಿರುವಂತೆ ನೋಡಿಕೊಳ್ಳಬೇಕು ಎಂದು ಅವರು ಹೇಳುತ್ತಾರೆ.

‘ಸದ್ಯ, ದೇಶದಲ್ಲಿ ಕಡಿಮೆ ಸಂಖ್ಯೆಯ ಕಲಾವಿದರು ಮಾತ್ರ ಈ ಕಲೆಯಲ್ಲಿ ಪೂರ್ಣಾವಧಿಯಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬಹುತೇಕರು ಹವ್ಯಾಸಕ್ಕೆ ಮಾತ್ರ ಇದನ್ನು ಸೀಮಿತಗೊಳಿಸಿಕೊಂಡಿದ್ದಾರೆ. ನಮ್ಮ ಪರಂಪರೆಯನ್ನು, ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೂ ಮುಂದುವರಿಸಿಕೊಂಡು ಹೋಗಬೇಕು ಎಂದರೆ ಇಂತಹ ಕಲೆಗಳು ಉಳಿಯಬೇಕು’ ಎಂಬ ಅಭಿಪ್ರಾಯ ಕಲ್ಯಾಣ್ ಜೋಶಿಯವರದ್ದು.

ಫಾಡ್‌ ಕಲೆಯ ದೃಶ್ಯ ವೈಭವ
ಫಾಡ್‌ ಕಲೆಯ ದೃಶ್ಯ ವೈಭವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT