ಕೊಳೆಯಲ್ಲ ಈ ಸೈಕಲ್ಲು ಕಲೆಯ ಬಲೆಯು

7
ಚೌಕಟ್ಟು

ಕೊಳೆಯಲ್ಲ ಈ ಸೈಕಲ್ಲು ಕಲೆಯ ಬಲೆಯು

Published:
Updated:
Deccan Herald

ನಗರ – ಪಟ್ಟಣಗಳಲ್ಲಿ ಈಚಿನ ದಿನಗಳಲ್ಲಿ ಸೈಕಲ್ ಸವಾರಿಗೆ ಉತ್ತೇಜನ ದೊರಕುತ್ತಿರುವುದು ಆಶಾದಾಯಕವೇ. ಸಣ್ಣಪುಟ್ಟ ತಿರುಗಾಟವಿರಲಿ, ಶಾಲೆಗೆ ದೌಡಾಯಿಸುವುದಿರಲಿ, ಮನೆ- ತೋಟದ ಸಾಮಗ್ರಿ ಸಾಗಣೆ ಇರಲಿ, ಅನಾರೋಗ್ಯಪೀಡಿತರನ್ನು  ತುರ್ತಾಗಿ ಹೊತ್ತೊಯ್ಯುವುದಿರಲಿ, ಕಾಲುದಾರಿಯಿರಲಿ, ಮಳೆಗಾಲದ ನೀರು ಹರಿಯುವ ಹಳ್ಳಕೊಳ್ಳವಿರಲಿ,  ಬೆಂಗಳೂರಿನ ಆಸುಪಾಸಿನ ಮಂದಿಗೆ  ಈ ಸೈಕಲ್ ಅತ್ಯಾವಶ್ಯಕ ಸ್ನೇಹಿತ.

ನಾಯಂಡಹಳ್ಳಿಯ ಸುತ್ತಮುತ್ತ ಇನ್ನೂ ಕೆಲವು ರೈತಾಪಿ ಕುಟುಂಬಗಳು ಜೀವಿಸುತ್ತಿದ್ದಾರೆ. ಅಲ್ಲಲ್ಲಿ ಉಳಿದಿರುವ ಗದ್ದೆ- ತೋಟಗಳ ವ್ಯವಸಾಯದಲ್ಲೂ ತೊಡಗಿದ್ದಾರೆ. ಅಲ್ಲಿನ ಹಳ್ಳಿ ಮನೆಗೆ ತಾಗಿದ ಶೆಡ್ ಒಂದರ ಎದುರು  ಯುವಕನೊಬ್ಬ ತನ್ನ ಸೈಕಲ್ ಸರ್ವೀಸನ್ನು ಬಕೆಟ್‌ನಲ್ಲಿ ನೀರು ತುಂಬಿ ಸ್ವಚ್ಛಗೊಳಿಸುತ್ತಿದ್ದ. ಈ ದೃಶ್ಯವನ್ನು, ಬನಶಂಕರಿ ಐದನೇ ಹಂತದ ನಿವಾಸಿ , ಎ.ಎಸ್. ನಂದಕುಮಾರ್ ತುಸುದೂರದಿಂದಲೇ  ಕ್ಯಾಮೆರಾದಲ್ಲಿ ಸೆರೆಹಿಡಿದರು. ಬರಿ ಕಣ್ಣಿಗೆ ಕಂಡದ್ದಕ್ಕಿಂತ ಸುಂದರವಾದ ಕಲಾಕೃತಿಯ ಛಾಯೆ ಅಲ್ಲಿ ಮೈತಳೆದದ್ದನ್ನು ದಾಖಲಿಸಿಯೇ ಬಿಟ್ಟಿತ್ತು ಅವರ ಕ್ಯಾಮೆರಾ!

 ಕಳೆದ 30 ವರ್ಷಗಳಿಂದ ಕ್ಯಾಲಿಗ್ರಫಿ  ಮತ್ತು ಛಾಯಾಗ್ರಹಣದಲ್ಲಿ ತೊಡಗಿರುವ ಅವರು ಬಳಸಿದ ಕ್ಯಾಮೆರಾ, ನಿಕಾನ್ 300 ಎಸ್., ಜೊತೆಗೆ70 – 300 ಎಂ.ಎಂ. ಜೂಂ ಲೆನ್ಸ್.

ಎಕ್ಸ್ಪೋಶರ್ ವಿವರ ಇಂತಿವೆ : ಲೆನ್ಸ್ ಫೋಕಲ್ ಲೆಂಗ್ತ್‌ 105 ಎಂ.ಎಂ.ನಲ್ಲಿ ಅಪರ್ಚರ್ ಎಫ್. 18,  ಶಟರ್ ವೇಗ  1/60 ಸೆಕೆಂಡ್, ಐ.ಎಸ್.ಒ, 400, ಪ್ಯಾಟ್ರನ್- ಮೀಟರಿಂಗ್ ಮೋಡ್, ಫ್ಲಾಶ್ ಬಳಸಿಲ್ಲ. ಟ್ರೈಪಾಡ್ ಬದಲು ತೋಟದ ಬದಿಯ ಬೇಲಿಯ ಕಂಬದ ಆಶ್ರಯಪಡೆದದ್ದು.

ಈ ಚಿತ್ರದೊಂದಿಗೆ ತಾಂತ್ರಿಕ ಮತ್ತು ಕಲಾತ್ಮಕ ಅನುಸಂಧಾನದ ಕೆಲವು ಅಂಶಗಳು ಇಂತಿವೆ

* ವಸ್ತುವಿನ ಹಿಂಬದಿಯಿಂದ ಬರುತ್ತಿರುವ ಮುಂಜಾನೆಯ ಸೂರ್ಯಕಿರಣಗಳು ಯುವಕನ ಮೈಯ್ಯಿನ ಹಿಂಭಾಗವನ್ನು ತಾಗಿ, ಸೈಕಲ್‌ನ ತಿರುಗುವ ಚಕ್ರದ ರಭಸಕ್ಕೆ ಅನುಗುಣವಾಗಿ ಚಿಮ್ಮಿದ ನೀರಿನ ಗೆರೆಗಳನ್ನೆಲ್ಲಾ ಬೆಳಗಿಸುವ ಪರಿಯನ್ನು,  ಕಡುನೆರಳಲ್ಲಿ  ಮಂದವಾಗಿ ಕಾಣಿಸುವ ಗೋಡೆಯ  ಇರುವಿಕೆಯು ಮತ್ತಷ್ಟು ಪ್ರಬಲವಾಗಿ ಸ್ಫುಟಗೊಂಡಂತೆ ಮಾಡಿದೆ.ಅದಾಗಿ, ಕ್ಯಾಮೆರಾದ ಕೋನ ಸರಿಯಾಗಿದೆ. ಮಧ್ಯಮ ಅಳತೆಯ  ಶಟರ್ ವೇಗ ( ಸ್ಲೋ ಶಟರ್ ಸ್ಪೀಡ್)    ಎಫ್ 1/60  ಸೆಕೆಂಡ್ ಇಲ್ಲಿ  ಸಹಾಯ ಮಾಡಿದೆ. ಅದರಿಂದಾಗಿಯೇ  ಚಿಮ್ಮಿದ ನೀರಿನ ಹನಿಗಳು ಗೀರು- ಗೀರಾಗಿ ಕಾಣಿಸುವಂತಾಗಿ, ಅವುಗಳ ಚಲನೆಯನ್ನು ಸುಂದರವಾಗಿ ದಾಖಲಿಸಿದೆ.  ಇನ್ನೂ ನಿಧಾನ ಗತಿಯ ಶಟರ್ ವೇಗ (  1/10 ,  1/ 30 ಸೆಕೆಂಡ್) ಬಳಸಿದ್ದರೆ  ಯುವಕನ  ಮೈ- ಕೈಭಾಗಗಳು  ಹೆಚ್ಚು  ಔಟ್ ಆಫ್  ಫೋಕಸ್ ಆಗಿ,  ಚಿತ್ರ ಕೆಡುತ್ತಿತ್ತು. ಅಪರ್ಚರ್ ಎಫ್ 18 ಅಂದರೆ ಸಾಮಾನ್ಯವಾಗಿ ಬಹಳ ಸಣ್ಣದಾದ ಅಳತೆಯದ್ದು. ಇಲ್ಲಿ ನಿಧಾನಗತಿಯ  ಶಟರ್ ವೇಗ ಮತ್ತು ಹೆಚ್ಚಿನ ಐ.ಎಸ್.ಒ ಸೆನ್ಸಿಟಿವಿಟಿಯನ್ನು ಅಳವಡಿಸಿರುವುದು ಅನಿವಾರ್ಯವಾಗಿದ್ದರಿಂದ, ಒಟ್ಟಾರೆ ಎಕ್ಸ್‌‍ಪೋಷರ್ ಹೊಂದಿಸಲು,  ಅಪರ್ಚರ್ ರಂಧ್ರ ಚಿಕ್ಕದ್ದಾಗಿರುವುದು ಸಮರ್ಪಕವಾಗಿದೆ.

* ನಿಧಾನ ಗತಿಯ ಎಕ್ಸ್‌ಪೋಷರ್ ಇದಾದ್ದರಿಂದ, ಕ್ಯಾಮೆರಾವನ್ನು ಟ್ರೈಪಾಡ್ ಮೇಲೆ ಅಲುಗಾಡದಂತೆ ದೃಢಪಡಿಸಿಕೊಳ್ಳುವುದು ಅವಶ್ಯಕ. ನಂದಕುಮಾರ್ ಅವರ ಅನುಭವ ಇಲ್ಲಿ  ಸಮಯ ಪ್ರಜ್ಞೆ ಮೂಡಿಸಿದೆ. ದೂರದಿಂದಲೇ  ಯುವಕನಿಗೆ ತಿಳಿಯದಂತೆ ಕ್ಲಿಕ್ಕಿಸುವುದಾದ್ದರಿಂದ, ಪಕ್ಕದಲ್ಲೇ ಇದ್ದ ಬೇಲಿಯ ಕಂಬವೊಂದರ ಆಧಾರ ಪಡೆದು ಕ್ಯಾಮೆರಾವನ್ನು ಅಲುಗಾಡದಂತೆ ಮಾಡಿರುವುದು, ಪ್ರಶಂಸಾರ್ಹ.

* ಕಲಾತ್ಮಕವಾಗಿ, ಇದೊಂದು ಉತ್ತಮವಾದ ಕ್ಯಾಂಡಿಡ್ ಛಾಯಾಚಿತ್ರಣ. ತುಸು ಹಿಂಬದಿಯಿಂದ ಹಾಗೂ ಎಡ ಓರೆಯಿಂದ ಬೀಳುತ್ತಿರುವ ಸಹಜ ಸೂರ್ಯನ ಮುಂಜಾನೆಯ ಬೆಳಕು ಚಿಮ್ಮಿದ ನೀರಿನ ರಭಸವನ್ನು ವೃತ್ತಾಕಾರದಲ್ಲಿ ಇರಿಸಿ, ಪ್ರತಿಯೊಂದು ಹನಿ – ಹನಿಯನ್ನೂ ಸರಿಯಾಗಿ ಫೋಕಸ್ ಮಾಡಿ ( ಅತಿ ಸಣ್ಣ ಅಪರ್ಚರ್ ಎಫ್ 18  ಇಲ್ಲಿ ಸೂಕ್ತ) ಅವುಗಳ ಚಲನೆಯ ಗತಿಯನ್ನು ಎಳೆ ಎಳೆಯಾಗಿಸಿ, ಸುಂದರವಾದ ಕಸೂತಿ ಹೆಣೆದಂತೆ ಇಡೀ ಚೌಕಟ್ಟಿಗೇ ಜೀವತುಂಬಿರುವುದು, ಛಯಾಚಿತ್ರಕಾರರ ಕಲಾ ನೈಪುಣ್ಯಕ್ಕೆ ಸಾಕ್ಷಿಯಾಗಿದೆ.

* ಈ ಚಿತ್ರದ ಮತ್ತೊಂದು ಆಕರ್ಷಣೆಯೆಂದರೆ, ಚಕ್ರದ ಬಳಿಯ ನೀರು ತುಂಬಿದ ಕೆಂಪು ಬಕೆಟ್ಟು.  ಇಡೀ ಚಿತ್ರದ  ವರ್ಣ ಛಾಯಾಂತರವು ಹೆಚ್ಚಾಗಿ ಏಕವರ್ಣವಾಗಿದ್ದಾಗ್ಯೂ (ಮೋನೋಕ್ರೋಮ್ಯಟಿಕ್), ಆ ಪುಟ್ಟ ತಾಜಾ ಕೆಂಪು ಬಣ್ಣವು ಇಡೀ ಚೌಕಟ್ಟಿನ ಆಶಯಕ್ಕೆ ಪೂರಕವಾದ ವರ್ಣ ಸಾಮರಸ್ಯವನ್ನು ನೀಡಿರುವುದು ಗಮನಾರ್ಹ. ಅಂತೆಯೇ, ಚಿತ್ರ ಸಂಯೋಜನೆಯ ಅಶ್ಲೇಷಣೆಯಲ್ಲೂ ಇದೊಂದು ಉತ್ತಮವಾದ ಕಲಾನಿರೂಪಣೆಯ ಅಂಶವೇ  ಆಗಿದೆ.

*

–ನಂದಕುಮಾರ್

***
ಬೆಂಗಳೂರಿನ ಬದುಕನ್ನು ಬಿಂಬಿಸುವ ಛಾಯಾಚಿತ್ರಗಳನ್ನು ‘ಚೌಕಟ್ಟು’ ಅಂಕಣಕ್ಕೆ ನೀವೂ ಕಳುಹಿಸಬಹುದು. ಗುಣಮಟ್ಟದ ಚಿತ್ರಗಳನ್ನು ಆಯ್ಕೆಮಾಡಿ, ಅನುಭವಿಗಳ ವಿಶ್ಲೇಷಣೆಯೊಂದಿಗೆ ಪ್ರಕಟಿಸಲಾಗುವುದು. ಇಮೇಲ್: metropv@prajavani.co.in

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !