ಭಾನುವಾರ, ಮಾರ್ಚ್ 7, 2021
25 °C

ಕತ್ತಲ ಒಡಲೊಳಗೆ ಬೆಳಕಿನ ಹುಡುಕಾಟ

ರಾಘವೇಂದ್ರ ಕೆ. Updated:

ಅಕ್ಷರ ಗಾತ್ರ : | |

Deccan Herald

ಹಿರಿಯ ಪೋಟೋ ಪತ್ರಕರ್ತ ಕೆ. ವೆಂಕಟೇಶ್‌ ತಮ್ಮ ವೃತ್ತಿಯನ್ನು ಚಟವಾಗಿ ರೂಪಾಂತರಿಸಿಕೊಂಡವರು. ಅವರ ಚಿತ್ರಗಳು ವರ್ತಮಾನದ ರಾಜಕೀಯ ಮತ್ತು ಸಾಮಾಜಿಕ ಸಂದರ್ಭವನ್ನೂ ಮೀರಿ ಸಾರ್ವಕಾಲಿಕ ಅನನ್ಯತೆಯ ಬಿಂಬಗಳಂತೆ ಗೋಚರಿಸುತ್ತವೆ.

ಮನುಷ್ಯನ ವೇದನೆಯನ್ನು ತಮ್ಮ ಅಂತರಾಳದಿಂದ ನೋಡುವ ಪ್ರವೃತ್ತಿಯನ್ನು ಅವರು ಬೆಳೆಸಿಕೊಂಡಿ
ದ್ದಾರೆ. ಹಾಗೆಂದು ಅವರಿಗೆ ನಿಸರ್ಗದ ಸೊಬಗನ್ನು ಸೆರೆ ಹಿಡಿಯುವ ಆಸಕ್ತಿ ಇಲ್ಲ ಎಂದು ಆರೋಪಿಸುವಂತಿಲ್ಲ. ಏಕೆಂದರೆ ನಿಸರ್ಗ ರಮಣೀಯ ಋತುಮಾನಗಳ ನವಪಲ್ಲವಿಯ ಸ್ಥಿರ ಚಿತ್ರಗಳೂ ಅವರ ಕ್ಯಾಮೆರಾದಲ್ಲಿ ಅರಳಿವೆ. ಬೆಂಗಳೂರು ಮೆಟ್ರೋ ಕಾಮಗಾರಿಯ ಸಂದರ್ಭದಲ್ಲಿ ಅವರು ತೆಗೆದ ಚಿತ್ರಗಳು ಕೆಲವೇ ದಿನಗಳಲ್ಲಿ ಚಾರಿತ್ರಿಕ ಮಹತ್ವಕ್ಕೆ ಸಾಕ್ಷಿಯಾಗಿವೆ. 

ಅಲಕ್ಷಿತ ಬದುಕಿಗೆ ಲಕ್ಷ್ಯ ಕೊಟ್ಟು ಅದಕ್ಕೊಂದು ಮಾನವೀಯ ಜೀವ ತುಂಬಬೇಕು ಎನ್ನುವುದು ವೆಂಕಟೇಶ್‌ ಅವರ ಕನಸು. ಅದೇ ಕಾರಣದಿಂದ ಸುಮಾರು ವರ್ಷಗಳ ಹಿಂದೆ ತೃತೀಯ ಲಿಂಗಿ ರೂಪದರ್ಶಿಗಳ ಛಾಯಾಚಿತ್ರ ಪ್ರದರ್ಶನ ನೀಡಿದ್ದರು. ಅದಕ್ಕಾಗಿ ಐತಿಹಾಸಿಕ ಮಹತ್ವದ ಹಂಪಿಯಲ್ಲಿ ಹತ್ತಾರು ದಿನಗಳ ಚಿತ್ರ ಹುಡುಕಾಟವನ್ನೂ ಮಾಡಿದ್ದರು. ನೋಟು ಅಮಾನಿಕರಣದ ಸಂದರ್ಭದಲ್ಲಿ ಊರೂರು ಸುತ್ತಿ ಅವರು ಸೆರೆ ಹಿಡಿದ ಚಿತ್ರಗಳು ಇಂದೂ ಕರುಣಾಜನಕ ಕಥೆಗಳನ್ನು ಹೇಳುತ್ತವೆ. ಪ್ರತಿವರ್ಷವೂ ಯಾವುದಾದರೊಂದು ‘ಥೀಮ್‌’ ಇಟ್ಟುಕೊಂಡು ಫೋಟೋಗ್ರಫಿ ಮಾಡುವುದು ಅವರ ಪ್ಯಾಶನ್‌. ತಮ್ಮ ಕೆಲಸದ ಗುಟ್ಟನ್ನು ಯಾರಿಗೂ ಬಿಟ್ಟುಕೊಡದೆ, ಕೆಲಸ ಪೂರೈಸಿದ ಬಳಿಕ ಅದಕ್ಕೊಂದು ಚೌಕಟ್ಟು ರೂಪಿಸಿ ಬಹಿರಂಗಗೊಳಿಸುವುದು ಅವರ ಗುಣ. 

ಕೃಷಿ ಉತ್ಪನ್ನ ಮಾರುಕಟ್ಟೆ ಚಿಕ್ಕವ್ಯಾಪಾರಿಗಳಿಗೆ ಮತ್ತು ಉತ್ಪಾದಕ ಶಕ್ತಿಯಾದ ರೈತರಿಗೆ ಮೋಸದ ಕೇಂದ್ರ ಎನ್ನುವ ಆರೋಪ ಜನಜನಿತ. ಅಂತಹ ಮಾರುಕಟ್ಟೆಯ ಮಾಫಿಯಾದೊಳಗಿನ ಕರಾಳ ಕತ್ತಲೆಯಲ್ಲಿ ಬೆಳಕ ಅರಸುವ ಶ್ರಮಿಕರು, ರೈತರಿದ್ದಾರೆ. ಕತ್ತಲೊಡನೆ ಕಚ್ಚಾಡಿ ಬೆಳಕಿಗೆ ಹಂಬಲಿಸುವ ಅವರ ಉಸಿರು ವೆಂಕಟೇಶ್‌ ಚಿತ್ರಗಳಲ್ಲಿ ಢಾಳಾಗಿ ಕಾಣಿಸುತ್ತಿದೆ. ಬೆಂಗಳೂರಿನ ಕೃಷ್ಣರಾಜೇಂದ್ರ ಮಾರುಕಟ್ಟೆ ದೊಡ್ಡದು ಮಾತ್ರವಲ್ಲ. ಅದು ನೂರಾರು ನಿಗೂಢ ಕಥನಕಗಳ ಗೂಡು ಹೌದು. 

 ‘ಸೂಪರ್‌ ಎಷ್ಟು ಸಖತ್ತಾಗಿದೆ ಚಿತ್ರ’ ಎಂದು ಉದ್ಗರಿಸಿ ಪ್ರಶಂಸಿಸುವ ಪಟ ಇವಲ್ಲ. ಇಲ್ಲಿ ಚಿಂತನೆ, ವೇದನೆ, ಕರಣೆಯ ಕಾರ್ಮೋಡ   ಕವಿದ ಮಾಗಿದ ನೋವಿನ ಚಿತ್ರಗಳು ಅನಾವರಣವಾಗುತ್ತಿವೆ. ವೆಂಕಟೇಶ್‌ ಅವರ ಕ್ಯಾಮೆರಾ ಕಣ್ಣಿನ ಕಾವ್ಯವಸ್ತು ಶೃಂಗಾರದ ರಸಗಳಿಗೆಯಲ್ಲ. ತುತ್ತು ಅನ್ನಕ್ಕೂ ಬೆವರು ಸುರಿಸುವ ದೀರ್ಘಕಾಲದ ಬವಣೆಯನ್ನು ವಸ್ತುವನ್ನಾಗಿ ಆರಿಸಿಕೊಂಡಿದ್ದಾರೆ. ಅದಕ್ಕಾಗಿ ಅವರೂ ಹಲವು ದಿನಗಳ ದೀರ್ಘ ಸಮಯವನ್ನು ವ್ಯಯಿಸಿದ್ದಾರೆ. ನಾಟಕೀಯವಲ್ಲದ, ಫೋಜು ನೀಡುವ ಭಂಗಿಯಲ್ಲದ ಸಹಜ ಚಲನೆಯ ಚಿತ್ರಗಳನ್ನು ಕಾದು ಕುಳಿತು ಸೆರೆ ಹಿಡಿದಿದ್ದಾರೆ.   

ಇಲ್ಲಿನ ಒಂದೊಂದು ಚಿತ್ರಗಳಿಗೂ ಒಂದೊಂದು ಕಥೆಯನ್ನು ಅವರು ಹೇಳುತ್ತಾರೆ. ಪ್ರತಿ ಚಿತ್ರಗಳು ಹುಟ್ಟಿದ ಕ್ಷಣವನ್ನು ಅವರು ವಿವರಿಸು
ವಾಗ ಕೇಳುಗನ ಕಥನ ಕುತೂಹಲವನ್ನು ಉದ್ದೀಪಿಸು
ತ್ತದೆ. ಹೊತ್ತಿನ ತುತ್ತಿಗಾಗಿ ಮಣಗಳ ಭಾರದ ಮೂಟೆ ಹೊತ್ತವರು, ನಾಳೆಯೇ ತಮ್ಮ ಬದುಕು ಹೂವಿನಷ್ಟು ಸುಕೋಮಲ ಸುಂದರಗೊಳ್ಳಬಹುದೆಂಬ ಕನಸ ಹರಡಿ ಕುಳಿತ ಹೂವಾಡಿಗರ ಚಿತ್ರಗಳು, ತಮ್ಮ ಬದುಕ ಮಾಗಿಸಿ ಸವಿ ಹಣ್ಣಿನ ಸವಿಯಲು ಬಿಕರಿಗಿಟ್ಟ ವ್ಯಾಪಾರಿಗಳು,  ಭರವಸೆಯ ಕನವರಿಕೆಯ ಮೂಟೆಯನ್ನು ನೂಕುವ ಹಮಾಲಿಗಳು, ಲಘುಬಗೆಯಿಂದ ಖರೀದಿಯ ಭರಾಟೆಗಿಳಿದ ಚಿಲ್ಲರೆ ವ್ಯಾಪಾರಿಗಳು. ಚುಮುಚುಮು ಬೆಳಕಲ್ಲಿ ಕೊರೆಯುವ ಚಳಿಯಲ್ಲಿ ಬೆಚ್ಚನೆಯ ಬಯಕೆಯನ್ನು ಬದಿಗೊತ್ತಿ ವೇಗದ ಬದುಕಿಗೆ ಚಕ್ರವಾದ ವ್ಯಕ್ತಿತ್ವಗಳು ಇಲ್ಲಿವೆ. 

ವೆಂಕಟೇಶ್‌ ‘ಕೆ.ಆರ್‌. ಮಾರುಕಟ್ಟೆಯಲ್ಲಿ ಕತ್ತಲೆಯೊಡನೆ ಬೆಳಕಿನಾಟ’ ಎಂಬ ಶೀರ್ಷೀಕೆಯಡಿ ಇಂದಿನಿಂದ (ಸೋಮವಾರ) ಮತ್ತು ಬುಧವಾರವರೆಗೆ ಬೆಂಗಳೂರಿನ ಕುಮಾರ ಕೃಪ ರಸ್ತೆಯಲ್ಲಿರುವ ಚಿತ್ರ ಕಲಾ ಪರಿಷತ್‌ನಲ್ಲಿ ಅವರು ತೆಗೆದ ‘ಕಪ್ಪು– ಬಿಳುಪಿನ’ ಚಿತ್ರ ಪ್ರದರ್ಶನವನ್ನು ಏರ್ಪಡಿಸಿದ್ದಾರೆ. ಬೆಳಗ್ಗೆ 10ರಿಂದ 7.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.