ಸೋಮವಾರ, ಮಾರ್ಚ್ 8, 2021
24 °C

ನೇಯ್ಗೆಯಲ್ಲಿ ನಿಪುಣ ಗೀಜಗ

ಕೆ.ಎಸ್.ರಾಜಾರಾಮ್ Updated:

ಅಕ್ಷರ ಗಾತ್ರ : | |

ನೇಯ್ಗಾರ ಪಕ್ಷಿ, ವೈಜ್ಞಾನಿಕ ಹೆಸರು Ploceus philippinus. ಗೀಜಗ ಎಂದೇ ಹೆಚ್ಚು ಪರಿಚಿತ ಈ ಸುಂದರ ಪುಟ್ಟ ಹಕ್ಕಿ. ಇವು ಊರು, ಪೇಟೆ- ಪಟ್ಟಣಗಳ ಹೊರವಲಯದ ನೀರಿನ ತಾಣಗಳ, ಹೊಲ ಗದ್ದೆ ತೋಟಗಳ, ಈಚಲು, ತೆಂಗು, ಮುಳ್ಳು ಮರ ಇತ್ಯಾದಿ ಹೇರಳವಾಗಿ ಬೆಳೆದ ಪ್ರದೇಶಗಳಲ್ಲಿ ಗುಂಪು- ಗುಂಪಾಗಿ ಕಂಡು ಬರುತ್ತವೆ.  

ಎರಡಂತಸ್ತಿನ ವಾಸ್ತು ಶಿಲ್ಪ ರಚನೆ ಇವುಗಳದ್ದು. ಬೇಸಿಗೆಯ ಪ್ರಾರಂಭದಲ್ಲಿ ಸಂಸಾರ ಹೂಡಲು ಜೊತೆಗಾರ್ತಿಯನ್ನು ಆಕರ್ಷಿಸುವ ಸಲುವಾಗಿ, ಸೂಕ್ತ ಜಾಗ ಹುಡುಕಿ, ಕಾಮಗಾರಿಯನ್ನು ಗಂಡು ಪ್ರಾರಂಭಿಸುತ್ತದೆ. ಕೆಳಗಿನಿಂದ,  ಆಚೀಚೆಯಿಂದ ಹಾವು, ಇಲಿ ಇತ್ಯಾದಿ ವೈರಿಗಳು ಸಲೀಸಾಗಿ  ಬಾರದ ಹಾಗೆ ಎತ್ತರದ ರೆಂಬೆಯನ್ನು ಹುಡುಕಿ ಕೆಲಸ ಶುರು ಮಾಡುತ್ತದೆ. ಮೊದಲೇ ಯೋಜಿಸಿದ ವಾಸ್ತು- ವಿನ್ಯಾಸಕ್ಕೆ ಸರಿಯಾಗಿ ಗಟ್ಟಿಯಾದ ಹುಲ್ಲುಕಡ್ಡಿ, ಈಚಲು ಎಲೆ, ನಾರು ಮತ್ತು ಫೈಬರ್ ಯುಕ್ತ ಗಿಡದ ದಂಟನ್ನು ಕೊಕ್ಕಿನಲ್ಲಿ ಸೀಳಿ ಹಿಡಿದು ತಂದು, ಗೂಡಿಗೆ ‘ಮೇಲಿನಿಂದಲೇ ಪಾಯ’ ಹಾಕಿ ಕೈಮಗ್ಗದಂತೆ ಕೊಕ್ಕಿನ ಮಗ್ಗವನ್ನು ಚಕ ಚಕನೆ ಚುರುಕುಗೊಳಿಸಿ ಇದು ಹೆಣಿಗೆ ಮಾಡುವುದನ್ನು ನೋಡುವುದೇ ಚನ್ನ!

ಮೇಲ್ಮಹಡಿ ತಯಾರಾಗುತ್ತಿದ್ದಂತೆಯೇ ಗಂಡಿಗೆ ಪರೀಕ್ಷೆ ಶುರು. ಹೆಣ್ಣು ಬಂದು ನೋಡಿ ಅದನ್ನು ಒಪ್ಪಿದರೆ, ಕೆಲಸ ಮುಂದುವರಿಕೆ ಮತ್ತು ಅವುಗಳ ಮಿಲನ ಕೂಡ.. ಗೂಡು ತಯಾರಾದಂತೆಯೇ, ಹೆಣ್ಣು ಮೊಟ್ಟೆ ಇಟ್ಟು ಅಲ್ಲೇ ವಾಸಿಸುವುದು ಇದ್ದದ್ದೇ. ಗಂಡು ಮತ್ತೊಂದು ಗೂಡಿನ ತಯಾರಿ‌ ಮತ್ತು ಮಗದೊಂದು ಜೊತೆಗಾರ್ತಿಯ ಹುಡುಕಾಟ ನಡೆಯುತ್ತಲೇ ಸಾಗುವುದು ಇವುಗಳ ಜೀವನ ಕ್ರಮ. ‌

ಅಂತಹುದ್ದೊಂದು ಗೂಡಿನ ಇನ್‌ಸ್ಪೆಕ್ಷನ್‌ ನಡೆಯುತ್ತಿರುವ ಈ ದೃಶ್ಯವನ್ನು ನಗರದ ಸಮೀಪದ ಗಾಣಕಲ್ಲು ಹಳ್ಳಿಯ ಬಳಿ ಇತ್ತೀಚೆಗೊಂದು ಬೆಳಿಗ್ಗೆ ಕ್ಯಾಮೆರಾದಲ್ಲಿ ಸೆರೆಹಿಡಿದವರು ಇನ್ಫೋಸಿಸ್‌ನಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್ ಗಿರೀಶ್ ಬಿ. ಕುಮಾರ್. ಅವರು ಚಾಮರಾಜಪೇಟೆಯ ನಿವಾಸಿ. ಎರಡು ವರ್ಷಗಳಿಂದ ಪಕ್ಷಿಗಳು, ಪ್ರಕೃತಿ, ರಸ್ತೆ ಬದಿ, ಸೂರ್ಯೋದಯ, ಸೂರ್ಯಾಸ್ತ ಛಾಯಾಗ್ರಹಣದಲ್ಲಿ ಹವ್ಯಾಸ ಬೆಳೆಸಿಕೊಂಡಿರುವ ಅವರು ಬಳಸಿದ ಕ್ಯಾಮೆರಾ, ನಿಕಾನ್ ಡಿ.3200,  ಜೊತೆಗೆ 55 – 300 ಎಂ.ಎಂ. ಜೂಂ ಲೆನ್ಸ್. ಅವರ ಎಕ್ಸ್ ಪೋಶರ್ ವಿವರ ಇಂತಿವೆ : 300 ಎಂ.ಎಂ ಫೋಕಲ್ ಲೆಂಗ್ತ್ ನಲ್ಲಿ  ಅಪರ್ಚರ್  ಎಫ್ 5.6, ಶಟರ್ ವೇಗ 1 / 800 ಸೆಕೆಂಡ್ , ಐ. ಎಸ್. ಒ 400.  ಫ್ಲಾಶ್, ಟ್ರೈಪಾಡ್ ಬಳಸಿಲ್ಲ.

ಈ ಚಿತ್ರದೊಂದಿಗೆ ತಾಂತ್ರಿಕ ಮತ್ತು ಕಲಾತ್ಮಕ ಅನುಸಂಧಾನದ ಕೆಲವು ಅಂಶಗಳು ಇಂತಿವೆ:

* ತಾಂತ್ರಿಕವಾಗಿ ಎಲ್ಲ ಅಂಶಗಳೂ ಸಮರ್ಪಕವಾಗಿವೆ. ಕ್ಯಾಮೆರಾದ ಕೋನವನ್ನು ಸ್ವಲ್ಪ ಆಚೀಚೆಯಾಗಿಸಿದ್ದರೆ ಹಿಂಭಾಗದ ಮರಗಳ ರೆಂಬೆಗಳ ಮಧ್ಯೆ ನುಸುಳುತ್ತಿರುವ ಆಕಾಶದ ಬಿಳುಚನ್ನು ಗೂಡಿನಿಂದ ತಪ್ಪಿಸಬಹುದಿತ್ತು.

* ದೊಡ್ದಳತೆಯ ಅಪರ್ಚರ್ ಬಳಸಿರುವುದರಿಂದ ಗೀಜಗ ಮತ್ತು ಗೂಡು ಸರಿಯಾಗಿ ಕೇಂದ್ರೀಕೃತವಾಗಿ ಹಿಂದಿರುವ ಮರ ಎಲೆಗಳಭಾಗ ಸಂಕುಚಿತವಾದ ಸಂಗಮ ವ್ಯಾಪ್ತಿಯು ( ಡೆಪ್ತ್ ಆಫ್ ಫೀಲ್ಡ್ ) ಉಂಟಾಗಿರುವ ದೆಸೆಯಿಂದ ಔಟ್ ಆಫ್ ಫೋಕಸ್ ಆಗಿ, ಮುಖ್ಯ ವಸ್ತುವಿಗೆ ಹೆಚ್ಚು ಪುಷ್ಟಿ ನೀಡಿದೆ.

* ನೆಲದಿಂದ ಕೈಗೆಟುಕದ ಬಹಳ ಮೇಲೆ ಈ ಗೂಡುಗಳನ್ನು ಅಪಾಯ ತಪ್ಪಿಸಲು ಕಟ್ಟುವ ಹಕ್ಕಿಯ ಜಾಣತನವನ್ನು ಗಿರೀಶ್ ಅವರ ಚಿತ್ರದ ಅಂತರಭಾಸ ( ಪರ್ ಸ್ಪೆಕ್ಟಿವ್ ) ಸರಿಯಾಗಿ ರೂಪಿಸಿರುವುದು ಅದರ ಜೀವನ ಕ್ರಮವನ್ನು ಸಾದರ ಪಡಿಸುತ್ತಿದೆ. ಹಾಗಾಗಿ ಇದು ಪ್ರಶಂಸನೀಯ, ಇದೇ ಚಿತ್ರವನ್ನು ದಾಖಲೆಯ ದೃಷ್ಟಿಯಿಂದ ಪಕ್ಕದ ಎತ್ತರದ ಜಾಗದಿಂದ ಸಮಾನಾಂತರ ಸೆರೆಹಿಡಿದಿದ್ದರೆ, ಶಾಲಾ ಮಕ್ಕಳ ಪಕ್ಷಿ- ಮಾಹಿತಿ ಪುಸ್ತಕಕ್ಕೆ ಸೀಮಿತವಾಗಬಹುದಿತ್ತು.

* ಚಿತ್ರ ಸಂಯೋಜನೆಯೂ ಸಮರ್ಪಕವಾಗಿದೆ, ಕಾರಣ ಪಕ್ಷಿ ದೂರದಿಂದ ಹಾರಿಬಂದು ಗೂಡಿನ ಬಾಯಿಗೆ ಜೋತುಬಿದ್ದು, ಅದರ ಎದುರು ಭಾಗದಲ್ಲಿ ಸಾಕಷ್ಟು ಜಾಗ (ರಿಲೀಫ್) ಬಿಟ್ಟಿರುವುದು, ಪಕ್ಷಿಯ ಮುಂದಿನ ಚಲನೆಗೆ ಸಹಕಾರವಾಗಿರುವಂತೆ ನೋಡುಗನ ಕಣ್ಣಿಗೆ ಕಾಣಿಸುವುದು ಸಾಧ್ಯವಾಗಿದೆ.

* ಪರೀಕ್ಷೆಗಾಗಿ ಬಂದಿರುವ ಹೆಣ್ಣು ಹಕ್ಕಿ ಕೂಡಾ ಅದೇ ಬಾಯನ್ನೇ ಅಗಲಿಸಿ ನೋಟವನ್ನು ಗೂಡಿನೊಳಗೆ ನಾಟಿಸಿರುವುದು, ಸಹಜವಾದ ಭಾವನೆಗಳನ್ನು ನೋಡುಗನಲ್ಲಿ ಉದ್ದೀಪನವಾಗಿಸುವಂತಿದೆ ಮತ್ತು ಆ ಪುಟ್ಟ ಬಾಯಿನ ಅಘಾದ ಶಕ್ತಿಯನ್ನೂ ಸಾದರಪಡಿಸುತ್ತದೆ.

* ಗೂಡಿನ ಮೇಲ್ತುದಿ ಕೂಡಾ ಮುಖ್ಯವೇ. ಇಲ್ಲಿ ಅದರ ಭಾಗವನ್ನು ತುಂಡರಿಸಲಾಗಿದೆ. ಅದರ ಮೂಲವೂ ( ಅಡಿಪಾಯ ) ಕಾಣಿಸಬೇಕಿತ್ತು. . ಇನ್ನೂ ಆರು- ಎಂಟು ಇಂಚು ಮೇಲೆಯೂ ಚಿತ್ರವನ್ನು ಸಂಯೋಜಿಸಿದ್ದರೆ, ಇಡೀ ಚೌಕಟ್ಟಿಗೆ ಹೆಚ್ಚು ಅರ್ಥ ಬರುತ್ತಿತ್ತು.


ಗಿರೀಶ್ ಬಿ. ಕುಮಾರ್

***
ಬೆಂಗಳೂರಿನ ಬದುಕನ್ನು ಬಿಂಬಿಸುವ ಛಾಯಾಚಿತ್ರಗಳನ್ನು ‘ಚೌಕಟ್ಟು’ ಅಂಕಣಕ್ಕೆ ನೀವೂ ಕಳುಹಿಸ ಬಹುದು. ಅನುಭವಿಗಳ ವಿಶ್ಲೇಷಣೆಯೊಂದಿಗೆ ಪ್ರಕಟಿಸಲಾಗುವುದು. ಇಮೇಲ್ metropv@prajavani.co.in

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.