ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಗ್‌ನ ಇಣುಕುನೋಟ

Last Updated 5 ಏಪ್ರಿಲ್ 2020, 5:30 IST
ಅಕ್ಷರ ಗಾತ್ರ

ಪ್ರಾಗ್‌ ಯುರೋಪಿನ ಜೆಕ್ ರಿಪಬ್ಲಿಕ್‌ನ ರಾಜಧಾನಿ. ಪ್ರಾಗ್ ಪ್ರವೇಶಿಸುತ್ತಿದ್ದಂತೆಯೇ ಅನಿರ್ವಚನೀಯ ಅನುಭವ. ಈ ಊರಿನ ಪುರಾತನ ವಾಸ್ತುಶಿಲ್ಪವೇ ವಿಶಿಷ್ಟವಾಗಿತ್ತೆನಿಸಿತು. ನಾವು ಅಲ್ಲಿ ತಂಗಲು, ಹಾಸ್ಟೆಲ್‌ವೊಂದರಲ್ಲಿ ಎರಡು ಬೆಡ್‌ಗಳನ್ನು ಕಾಯ್ದಿರಿಸಿದ್ದೆವು. ಉಚಿತ ವೈಫೈ, ಬೆಳಿಗ್ಗಿನ ಉಪಾಹಾರದ ವ್ಯವಸ್ಥೆ ಇತ್ತು.

ಹಾಸ್ಟೆಲ್ ಸಮೀಪದಲ್ಲಿಯೇ ಹಳೆಯದಾದ ಅತಿದೊಡ್ಡ ಚೌಕವಿದೆ. ಇಲ್ಲಿ ಕ್ರಿಸ್‌ಮಸ್ ಹಾಗೂ ಈಸ್ಟರ್ ಹಬ್ಬದ ವೇಳೆ ಮಾರುಕಟ್ಟೆಯ ಮಳಿಗೆಗಳು, ಸಂಗೀತ ಸಭಾಮಂಟಪಗಳು ಸಿದ್ಧವಿರುತ್ತವೆ. ಚೌಕದ ಮಧ್ಯದಲ್ಲಿ ಮತದ ಸುಧಾರಕ ಜನಹಾಸ್‌ನ ಪ್ರತಿಮೆಯಿದೆ. ಅಲ್ಲಿ ಸಾಕಷ್ಟು ಹೂಗಿಡಗಳಿವೆ. ವೀಕ್ಷಕರಿಗೆ ಆಸೀನರಾಗಲು ಕಲ್ಲು ಆಸನಗಳು. ಅಲ್ಲಲ್ಲಿ ಪ್ರತಿಮೆಗಳಂತೆ ನಿಂತ ಮೈಗೆಲ್ಲಾ ಬೆಳ್ಳಿಬಣ್ಣ ಬಳಿದು ನಿಂತ ಜೀವಂತ ಮನುಷ್ಯರು. ಮಕ್ಕಳ ಗಮನ ಸೆಳೆಯಲು ಒಬ್ಬ ಸೋಪಿನ ನೊರೆ ಬರುವಂತಹ ಗುಳ್ಳೆ ಮಾಡಿ ಚೌಕದಲ್ಲಿ ಹಾರಿಸುತ್ತಾನೆ.

ಎರಡು ದಿಕ್ಕಿನಲ್ಲಿ ಸಾಕಷ್ಟು ತೆರೆದ ಹೋಟೆಲ್‌ಗಳು, ಹಿತವಾದ ಬಿಸಿಲಿನಲ್ಲಿ ಬೀಯರ್, ಕಾಫಿ ಹೀರುತ್ತಾ ತಿಂಡಿ ತಿನ್ನುತ್ತಾ ಆಸೀನರಾಗಿರುವ ಜನರು, ಒಂದು ಮಳಿಗೆಯಲ್ಲಿ ಜನಗಳು ದೊಡ್ಡ ಕುರ್ಚಿಯಲ್ಲಿ ಕುಳಿತು ಥಾಯ್ ಮಸಾಜ್‌ನ ಮಜಾ ಸವಿಯುತ್ತಿದ್ದರು. ಹಲವಾರು ಬಗೆಯ ಅಂಗಡಿಗಳು, ವಿದೇಶಿ ಹಣ ವಿನಿಮಯ ಕೇಂದ್ರಗಳೂ ಇದ್ದವು. ಪ್ರಯಾಣಿಗರು ಅಸಂಖ್ಯಾತ ಸಂಖ್ಯೆಯಲ್ಲಿ ನೆರೆದಿದ್ದರು. ಎಲ್ಲಿಯೂ ಕಸಕಡ್ಡಿ ಇರಲಿಲ್ಲ. ಒಂದಿಬ್ಬರು ಸುಶ್ರಾವ್ಯವಾಗಿ ವಯಲಿನ್ ನುಡಿಸುತ್ತಿದ್ದರು.

ಮತ್ತೊಂದೆಡೆ ಚರ್ಚ್ ಹಾಗೂ ಹಳೆಯದಾದ ಟೌನ್‌ಹಾಲ್‌ ಮೇಲೆ ಆರು ಶತಮಾನಗಳ ಹಿಂದಿನ ಖಗೋಳ ಗಡಿಯಾರವಿದೆ. 1410ರಲ್ಲಿ ನಿರ್ಮಿಸಿದ ಮೊಟ್ಟ ಮೊದಲನೆಯ ಖಗೋಳ ಗಡಿಯಾರ ಇದಾಗಿದೆ. 1490ರಲ್ಲಿ ಇದಕ್ಕೆ ಕ್ಯಾಲೆಂಡರ್ ಡಯಲ್ ಸೇರಿಸಿದರು. ಇದನ್ನು ನಿರ್ಮಿಸಿದ ಹಾನ್ಸನನ್ನು ಇನ್ನೊಂದು ಗಡಿಯಾರ ಮಾಡದಂತೆ ತಡೆಯಲು ಪ್ರಾಗ್‌ನ ಅಧಿಕಾರಿಗಳು ಅವನನ್ನು ಕುರುಡನನ್ನಾಗಿ ಮಾಡಿದರಂತೆ. ಪ್ರತೀಕಾರವಾಗಿ ಅವನು ಅದನ್ನ ನಡೆಯದಂತೆ ಮಾಡಿದ. ನಂತರ ಇದು ದುರಸ್ತಿಯಾಗಿದ್ದು ಶತಮಾನದ ನಂತರವೇ.

ಈ ಡಯಲ್ ಪಕ್ಕದಲ್ಲಿ ನಾಲ್ಕು ತಿರುಗಾಡುವ ಮನುಷ್ಯನಿಗೆ ನೀತಿಪಾಠ ಹೇಳುವ ಗೊಂಬೆಗಳಿವೆ. ಕನ್ನಡಿಯಲ್ಲಿ ಪ್ರತಿಬಿಂಬ ನೋಡುತ್ತಿರುವ ಗೊಂಬೆ ಮನುಷ್ಯನ ಅಹಂ, ಬಂಗಾರದ ಕೈಚೀಲ ಹಿಡಿದಿರುವ ಗೊಂಬೆ ಮನುಷ್ಯನ ದುರಾಸೆ, ಅಸ್ಥಿಪಂಜರದ ಗೊಂಬೆಯ ಚಿತ್ರ ಸಾವನ್ನು, ವಯಲಿನ್ ಹಿಡಿದಿರುವ ಗೊಂಬೆ ಇಹಲೋಕದ ಭೋಗಸುಖವನ್ನು ಪ್ರತಿಬಿಂಬಿಸುತ್ತಿದೆ. ಗಂಟೆಗೊಮ್ಮೆ ಅಸ್ಥಿಪಂಜರವುಳ್ಳ ಗೊಂಬೆ ಗಂಟೆ ಮೊಳಗಿಸುತ್ತದೆ.

ಇನ್ನೊಂದು ದಿಕ್ಕಿನಲ್ಲಿ ಹೊಸ ಟೌನಿಗೆ ದಾರಿ. ಆದರೆ, ಇದನ್ನು 1348ರಲ್ಲಿಯೇ ಚಾರ್ಲ್ಸ್‌ ನಾಲ್ಕನೇ ದೊರೆ ಆರಂಭಿಸಿದ್ದ. ಇಲ್ಲಿ ವೆನ್ಸಲಾಸ ವೃತ್ತವಿದೆ. 1989ರಲ್ಲಿ ಸ್ವಾತಂತ್ರ್ಯಕ್ಕಾಗಿ ವೆಲ್ವೆಟ್ ಕ್ರಾಂತಿ ಈ ಚೌಕದಿಂದಲೇ ಶುರುವಾಗಿತ್ತು. ಈ ವೃತ್ತದ ಬಳಿ ಹೋಟೆಲ್‌ಗಳು, ಕಚೇರಿಗಳು, ವಿದೇಶಿ ವಿನಿಮಯದ ಬೂತ್‌ಗಳು, ಚಿಲ್ಲರೆ ಅಂಗಡಿಗಳಿವೆ.

ಹಾಸ್ಟೆಲ್‌ಗೆ ಹಿಂತಿರುಗಿದಾಗ ಭಾರತೀಯ, ನಾರ್ವೆಯ ಹುಡುಗರು, ಆಸ್ಟ್ರೇಲಿಯಾದ ದಂಪತಿಯ ಪರಿಚಯವಾಗಿ ಖುಷಿಯಾಯಿತು. ಮರುದಿನ ಬೆಳಿಗ್ಗೆ ಚಾರ್ಲ್ಸ್ ಸೇತುವೆ ಸೇರಿದೆವು. ಪಕ್ಕದಲ್ಲಿ ಒಂದು ಹೋಟೆಲ್. ಅಲ್ಲಿ ತುಂಬಾ ಹೂಗಿಡಗಳು, ಪಕ್ಕದಲ್ಲಿ ನದಿ ಹರಿಯುವ ನೋಟ ತುಂಬಾ ಚೆನ್ನಾಗಿತ್ತು. ಚಾರ್ಲ್ಸ್‌ ಸೇತುವೆಯ ಮ್ಯೂಸಿಯಂನಲ್ಲಿ ಈ ಸೇತುವೆಯನ್ನು ಹೇಗೆ ಕಟ್ಟಿದರೆಂಬ ಮಾದರಿಗಳನ್ನು ಕಾಣಬಹುದು.
ಈ ಸೇತುವೆಯನ್ನು ಗೋಥಿಕ್‌ ವಾಸ್ತುಶಿಲ್ಪದಲ್ಲಿ ಕಟ್ಟಲಾಗಿದೆ.

ನಂತರ, ನಮ್ಮ ದೋಣಿವಿಹಾರ ಆರಂಭವಾಯಿತು. ಮೋಟಾರ್ ಬೋಟಿನ ಕ್ಯಾಪ್ಟನ್ ಕೊಂಚ ಇಂಗ್ಲಿಷ್‌ನಲ್ಲಿ, ಯೂರೋಪಿನ ಬೇರೆ ಭಾಷೆಯಲ್ಲಿ ವಿವರಣೆ ಕೊಡುತ್ತಾ, ಚುಕ್ಕಾಣಿಯನ್ನು ತಿರುಗಿಸತೊಡಗಿದ. ನಮಗೆ ಕಿವಿ ಫೋನಿನ ಸೌಲಭ್ಯವಿತ್ತು. ಸೇತುವೆಯ ಇತಿಹಾಸ, ರಚನೆ, ಇಲ್ಲಿಂದ ಪ್ರಾಗ್ ಕೋಟೆಯ ಬಗ್ಗೆ, ಹೊರಭಾಗ, ಇನ್ನಿತರ ಪ್ರಮುಖ ಸ್ಥಳಗಳು, ಈ ವ್ಲಾತಾವಾ ನದಿಗೆ ಪ್ರವಾಹ ಬಂದಿದ್ದರಿಂದ ಸೇತುವೆಗಾದ ಹಾನಿಯ ವಿವರಣೆ, ಈ ನದಿಗೆ ಎಲ್ಲಿ ಅಣೆಕಟ್ಟು ಕಟ್ಟಿದ್ದಾರೆ, ದೂರದಲ್ಲಿನ ದ್ವೀಪದ ಕಥೆ, ಇವೆಲ್ಲವನ್ನು ತೋರಿಸುತ್ತಾ, ವರದಿ ಮಾಡಿದ.

ನಾವು ಸೇತುವೆಯ ಕೆಳ ಹೊರಭಾಗ, ಕಮಾನುಗಳನ್ನು, ಪ್ರಾಗ್ ಕೋಟೆಯ ಹೊರಭಾಗವನ್ನು, ಈ ನದಿಗೆ ಅಡ್ಡಲಾಗಿ ಕಟ್ಟಿದ ಇನ್ನಿತರ ಸೇತುವೆಗಳನ್ನು ನೋಡುತ್ತಿದ್ದೆವು. ದೋಣಿಯ ಪಕ್ಕದಲ್ಲಿ ಈಜುತ್ತಿದ್ದ ಸಾಕಷ್ಟು ಬಾತುಕೋಳಿಗಳನ್ನು ನೋಡಿ, ನಮ್ಮ ಜೊತೆ ನದಿ ಪಯಣದಲ್ಲಿ ಅವು ಸ್ಪರ್ಧಿಸುವಂತೆ ಭಾಸವಾಗುತ್ತಿತ್ತು. ನದಿಯ ಪಕ್ಕದ ದಂಡೆಯಲ್ಲಿ ಹೂ ಬಳ್ಳಿಗಳು, ಸಾದಾ ಬಳ್ಳಿಗಳನ್ನು ಹಬ್ಬಿಸಿರುವುದನ್ನು ನೋಡಿ ಖುಷಿಯಾಯಿತು. ಹೀಗೆ ಎರಡು ಸುತ್ತಿನ ನಂತರ, ಕ್ಯಾಪ್ಟನ್ ನಮ್ಮನ್ನು ದಡ ಸೇರಿಸಿದ. ಒಂದು ಗಂಟೆ ಹೇಗೆ ಕಳೆಯಿತೆಂದು ಗೊತ್ತಾಗಲೇ ಇಲ್ಲ.

ವ್ಲಾತಾವಾ ನದಿಗೆ ಇತಿಹಾಸ ಪ್ರಸಿದ್ಧ ಪುರಾತನ ಚಾರ್ಲ್ಸ್‌ ಸೇತುವೆ ಕಟ್ಟಲಾಗಿದೆ. ಇದನ್ನು 1357ರಲ್ಲಿ ನಾಲ್ಕನೇ ಚಾರ್ಲ್ಸ್‌ನ ಆಳ್ವಿಕೆಯಲ್ಲಿ ಕಟ್ಟಲಾಯಿತು. ಸೇತುವೆ ಬಗ್ಗೆ ತುಂಬಾ ಕುತೂಹಲಕಾರಿ ಕಥೆಗಳಿವೆ. ಇದನ್ನು ಬೊಹೆಮಿಯನ್ ಮರಳು ಕಲ್ಲಿನಲ್ಲಿ ಕಟ್ಟಿದ್ದರು. ಬಲಪಡಿಸಲು ಮೊಟ್ಟೆಗಳನ್ನು ಸೇರಿಸಿದ್ದಾರೆಂಬ ಸುದ್ದಿಯೂ ಇದೆ! ಈ ಸೇತುವೆ 16 ಕಮಾನುಗಳನ್ನು, ಮೂರು ಗೋಪುರಗಳನ್ನು ಹೊಂದಿದೆ. ಈ ಸೇತುವೆ ಕೂಡ ಎರಡನೇ ಮಹಾಯುದ್ಧದ ಕಾಲದಲ್ಲಿ, ಮತ್ತೆರಡು ಬಾರಿ ನದಿ ಪ್ರವಾಹದಿಂದ ಸಾಕಷ್ಟು ಹಾನಿಗೊಳಗಾಗಿತ್ತು. ಆದರೂ ದುರಸ್ತಿ ನಡೆದು ಸುಸ್ಥಿತಿಯಲ್ಲಿದೆ. ಈಗ ಜನರು ಓಡಾಡುವುದಕ್ಕೆ ಮಾತ್ರ ಬಳಸುತ್ತಿದ್ದಾರೆ.

ಸೇತುವೆ ಮೇಲೆ ಮೂರು ಪ್ರತಿಮೆಗಳನ್ನು ನಿಲ್ಲಿಸಿದ್ದಾರೆ. ಸಂತ ನೆಪುಮಕಿನ ಜಾನ್. ಇವರು ರಾಣಿಯ ತಪ್ಪೊಪ್ಪಿಕೆಯನ್ನು ಸಂಬಂಧಪಟ್ಟವರಲ್ಲಿ ಹಂಚಿಕೊಳ್ಳಲಿಲ್ಲವೆಂಬ ಕಾರಣಕ್ಕೆ ಇವರನ್ನು ಚಿತ್ರಹಿಂಸೆಗೆ ಗುರಿಯಾಗಿಸಿ ಕೊಲ್ಲಲಾಗಿತ್ತು. ಸೇಂಟ್ಸ್‌ಗಳಾದ ವಿನ್ಸೆಂಟ್ ಫೆರರ್, ಪ್ರೊಕೊಪಿಯಸ್ ಎರಡನೇ ಪ್ರತಿಮೆ. ಸೇಂಟ್ ಲುಟ್ಗ್ರಾಡ್‌ನ ಪ್ರತಿಮೆ ಕೂಡ ಕಲಾತ್ಮಕವಾಗಿದೆ. ಇವನ್ನು ಝೆಕ್ ವಾಸ್ತುಶಿಲ್ಪಿ ನಿರ್ಮಿಸಿದ್ದಾನೆ. ಈ ಸೇತುವೆ ಪ್ರವೇಶಕ್ಕೆ ಸಮಯ ನಿರ್ಬಂಧವಿಲ್ಲ; ಶುಲ್ಕವೂ ಇಲ್ಲ. ಈ ಸೇತುವೆಯ ಮೇಲ್ಭಾಗದಿಂದ ಇಕ್ಕೆಲಗಳಲ್ಲಿ ಕಣ್ಣು ಹಾಯಿಸಿದರೆ, ಊರಿನ ಸಂಪೂರ್ಣ ಚಿತ್ರಣ ಸಿಗುತ್ತದೆ. ಎರಡು ಗುಂಪುಗಳು ವಾದ್ಯ ಸಂಗೀತ ನುಡಿಸುತ್ತಿದ್ದರು. ಮಕ್ಕಳು, ವಯಸ್ಕರು ಸಂಗೀತ ಆಲಿಸುತ್ತಾ ನಿಂತಿದ್ದರು. ಮುಂದೆ ಸಾಗುತ್ತಿದ್ದಂತೆಯೇ, ಮಹಿಳೆಯೊಬ್ಬಳು ಹುಡುಗಿಯನ್ನು ಎದುರಿಗೆ ಕುಳ್ಳಿರಿಸಿ ಭಾವಚಿತ್ರವನ್ನು ತನ್ನ ಕುಂಚದಿಂದ ಸೆರೆ ಹಿಡಿಯುತ್ತಿದ್ದಳು. ಹೀಗೆಯೇ ಅರ್ಧ ಕಿಲೋಮೀಟರ್‌ ಇರುವ ಸೇತುವೆಯಲ್ಲಿ ಸುತ್ತಾಡಿದೆವು.

ಮಧ್ಯಾಹ್ನ ಮೆಟ್ರೊದಲ್ಲಿ ಪ್ರಾಗಿನ ಹೆಸರಾಂತ ಕೋಟೆ (Castle) ನೋಡಲು ಹೋದೆವು. ಕೋಟೆಯು ನೆಲಮಟ್ಟದಿಂದ 1800 ಅಡಿ ಎತ್ತರದಲ್ಲಿತ್ತು. ಕೋಟೆಯ ವಿಸ್ತಾರ ನಮ್ಮ ಕಲ್ಪನೆಗೆ ನಿಲುಕುತ್ತಿರಲಿಲ್ಲ. ನಾವು ಇಳಿಜಾರಿನ ರಸ್ತೆಯಲ್ಲಿ ಮೆಲ್ಲ ಮೆಲ್ಲನೆ ಏರತೊಡಗಿದೆವು. ಈ ಕೋಟೆಯನ್ನು ಕ್ರಿ.ಶ.9ನೇ ಶತಮಾನದಲ್ಲಿ ಕಟ್ಟಲಾಗಿದೆ. ಚರ್ಚ್ ಆಫ್ ವರ್ಜಿನ್ ಮೇರಿ, ಬೆಸಿಲಿಕಾ ಆಫ್ ಸೇಂಟ್ ಜಾರ್ಜ್, ಬೆಸಿಲಿಕಾ ಆಫ್ ಸೇಂಟ್ ವೈಟಸ್, ನ್ಯಾಷನಲ್ ಮ್ಯೂಸಿಯಂ, ಅರಮನೆಗಳು ಇವೆಲ್ಲವೂ ಈ ಕೋಟೆಯಲ್ಲಿವೆ.

ಬಿಳಿ, ಕಪ್ಪು, ದಾಲಿಬರ್ ಗೋಪುರಗಳಿವೆ. 14ನೇ ಶತಮಾನದಲ್ಲಿ ನಾಲ್ಕನೇ ಚಾರ್ಲ್ಸ್‌ನ ಆಳ್ವಿಕೆಯಲ್ಲಿ ಸಾಕಷ್ಟು ಬದಲಾವಣೆ ಆಯಿತು. ಗೋಥಿಕ್ ವಾಸ್ತುಶಿಲ್ಪದಲ್ಲಿ ರಾಜರ ಅರಮನೆ ನಿರ್ಮಾಣವಾಯಿತು. ಅರಮನೆಯು ಮೊದಲು ಬೊಹೆಮಿಯಾದ ದೊರೆಗಳ, ನಂತರ ರೋಮನ್ ದೊರೆಗಳ ನಿವಾಸವಾಗಿತ್ತು. ಕ್ರಿ.ಶ. 1918ರಿಂದ ಝಕೊಸ್ಲೊವೊಕಿಯಾದ ರಾಷ್ಟ್ರಪತಿಯ ನಿವಾಸವಾಗಿದೆ. ಕೋಟೆಯ ಎಲ್ಲವನ್ನು ಕೂಲಂಕಷವಾಗಿ ನೋಡಲು ಒಂದು ದಿನ ಸಾಲದು. ಈ ಕೋಟೆಯ ಗೋಥಿಕ್ ಶೈಲಿಯ ಗೋಪುರಗಳು, ಅರಮನೆಯ ಹೊರಭಾಗಗಳು, ಚರ್ಚ್‌ಗಳನ್ನಾಗಲಿ, ಕೋಟೆಯ ಹೊರಭಾಗದಿಂದ ಸಿಗುವ ಪ್ರಾಗ್ ನಗರದ ದೃಶ್ಯಗಳನ್ನು ನೋಡುವುದೇ ಒಂದು ವಿಶಿಷ್ಟ ಅನುಭವ.

ಕೋಟೆಯ ಪ್ರವೇಶ ದ್ವಾರದಲ್ಲಿ ವಾಘಾ ಗಡಿಯಲ್ಲಿನ ಹಾಗೆಯೇ ಗಾರ್ಡ್‌ಗಳ ಪಥ ಸಂಚಲನ ನೋಡಿದೆವು.ಸಂಜೆ ಟ್ರಾಮೊಂದರಲ್ಲಿ ಕುಳಿತು ನಗರ ಪ್ರವಾಸಕ್ಕೆ ಹೊರಟೆವು. ನಗರದ ರಸ್ತೆಗಳು, ನದಿ ತೀರ, ಸೇತುವೆಯನ್ನು ಮತ್ತೊಮ್ಮೆ ನೋಡುವ ಅವಕಾಶವಾಯಿತು. ಪ್ರಾಗಿನ ವಿಶಾಲವಾದ, ಚಂದವಾದ ಗ್ರಂಥಾಲಯದ ದ್ವಾರದಲ್ಲಿ ಒಂದು ಪುಸ್ತಕಗಳನ್ನು ಬಾವಿಯಾಕಾರದಲ್ಲಿ ಜೋಡಿಸಿದ್ದರು. ಕೆಳಗಡೆ ಕನ್ನಡಿಯೊಂದನ್ನು ಜೋಡಿಸಿದ ಕಾರಣ, ಅಲ್ಲಿ ಇಣುಕಿ ನೋಡಿದರೆ, ಬಾವಿಯ ತುಂಬಾ ಪುಸ್ತಕವಿದ್ದಂತೆ ಭಾಸವಾಗುತ್ತಿತ್ತು.

ಪ್ರಾಗಿನ ಚೌಕ, ಕೋಟೆ, ಆ ಗಡಿಯಾರವನ್ನು ಮೆಲುಕು ಹಾಕುತ್ತಾ, ಮತ್ತೊಮ್ಮೆ ನೋಡುವ ಆಸೆಯಂದಿಗೆ ಪ್ರಾಗ್‌ಗೆ ವಿದಾಯ ಹೇಳಿದೆವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT