ಪ್ರಕಾಶ್‌ ಸೊಂಟಕ್ಕೆ ಹಾಡೊಳು ಬೆಂಗಳೂರಿನ ಭಾವ ಬಣ್ಣ

7

ಪ್ರಕಾಶ್‌ ಸೊಂಟಕ್ಕೆ ಹಾಡೊಳು ಬೆಂಗಳೂರಿನ ಭಾವ ಬಣ್ಣ

Published:
Updated:
Deccan Herald

* ‘ಗಾಂಧಿ ಬಜಾರ್‌ನ ‘ವಿದ್ಯಾರ್ಥಿ ಭವನ’ದಲ್ಲಿ ಪಕ್ಕನೆ ಒಂದು ಮಸಾಲೆ ದೋಸೆ ತಿಂದು ಮುಂದಿನ ಕೆಲಸ ನೋಡ್ಕೊಳ್ಳೋಣ’ ಅಂದ್ಕೊಂಡು ಧಾವಿಸುತ್ತೇವೆ. ಅವಸರದಲ್ಲೇ ‘ಒಂದು ಮಸಾಲೆ’ ಎನ್ನುತ್ತೇವೆ. ಅವರು ‘ಐದ್ನಿಮಿಷ’ ಎನ್ನುತ್ತಾರೆ. ಈ ಐದು ನಿಮಿಷ ಬರಿಯ ಕಾಯುವಿಕೆಯ ಪ್ರತೀಕವಲ್ಲ, ನಮ್ಮ ಅವಸರದ ದ್ಯೋತಕವೂ ಹೌದಲ್ಲ?

* ರಸ್ತೆಯಲ್ಲಿ ಒಂದಾದರೂ ವಾಹನ ಸಾವಕಾಶವಾಗಿ ಹೋಗುವುದನ್ನು ಈಗ ಕಾಣುತ್ತೇವಾ? ಎಲ್ಲರೂ ಓವರ್‌ಟೇಕ್ ವೀರರೇ. ಹಾಗೆ ಅತಿ ವೇಗದಿಂದ ಬಂದವರು ಮನೆಯಲ್ಲಿ ಬಂದು ಸುಮ್ಮನೆ ಟಿ.ವಿ ನೋಡುತ್ತಾ ಕೂರುತ್ತೇವೆ! ಹಾಗಿದ್ದರೆ ಆ ವೇಗ, ಅವಸರಕ್ಕೆ ಅರ್ಥವೇನು?

* ನಮ್ಮ ತಂದೆ ತಾಯಿಯನ್ನು ಬದುಕಿರುವಷ್ಟು ದಿನ ಅಗತ್ಯ ಕಾಳಜಿ ಮಾಡದೇ ಇರುವವರು, ಅವರು ಸತ್ತ ತಕ್ಷಣ ಅಯ್ಯೋ ನಾನು ಹಾಗೆ ನೋಡಿಕೊಳ್ಳಬೇಕಿತ್ತು, ಹೀಗೆ ಮಾಡಬೇಕಿತ್ತು ಎಂದು ಕೊರಗುತ್ತಾರೆ. ಬದುಕಿರುವಾಗ ಅರ್ಥವಾಗದ ವ್ಯಕ್ತಿಯ, ಸಂಬಂಧದ ಬೆಲೆ ಅವರು ಸತ್ತ ತಕ್ಷಣ ಗೊತ್ತಾಗಿಬಿಟ್ಟಿತಾ?

* ಧರ್ಮದ ಕಣ್ಣಿನಿಂದ ಕರ್ಮವನ್ನು ನೋಡಬೇಕಾ, ಕರ್ಮದ ಮೂಲಕ ಧರ್ಮಪಾಲನೆ ಮಾಡಬೇಕಾ?

* ಅಂತರರಾಷ್ಟ್ರೀಯ ಖ್ಯಾತಿಯ ಗಿಟಾರ್‌ ವಿದ್ವಾಂಸ, ಸಂಗೀತಗಾರ ಪ್ರಕಾಶ್‌ ಸೊಂಟಕ್ಕೆ ಅವರು, ತಮ್ಮ ಹೊಸ ಆಲ್ಬಂ ‘ಸತ್‌ರಂಗ್‌’ನಲ್ಲಿ ವಿಶ್ಲೇಷಿಸಿರುವ ಬದುಕಿನ ಸತ್ಯಗಳಿವು.

ಹಾಡುಗಳು ಹಿಂದಿಯಲ್ಲಿರುವ ಕಾರಣ ‘ಸತ್‌ರಂಗ್‌’ ಅಂದರೆ ಏಳು ಬಣ್ಣ ಎಂದು ಸೀಮಿತಗೊಳಿಸಬೇಕಿಲ್ಲ. ಹಾಡು ಕೇಳುತ್ತಾ ಶ್ರೋತೃಗಳ ಭಾವಕೋಶದಲ್ಲಿ ಎಷ್ಟು ಬಣ್ಣ ಅರಳಿದರೂ ಸರಿಯೇ ಎಂದು ನಗುತ್ತಾರೆ, ಸೊಂಟಕ್ಕೆ.

ಬೆಂಗಳೂರಿನ ಬಣ್ಣಗಳು ಹಾಡುಗಳಾದ ಬಗೆ...

ಇತರ ಯಾವುದೇ ಮೆಟ್ರೊಪಾಲಿಟನ್‌ ನಗರಗಳಿಗಿಂತ ವಿಭಿನ್ನವಾದ ಸಾಂಸ್ಕೃತಿಕ ಛಾಪು ಬೆಂಗಳೂರಿಗಿದೆ. ಅವುಗಳನ್ನು ಹಾಡುಗಳಲ್ಲಿ ಕಟ್ಟಿಕೊಡುವುದು ನನ್ನ ಉದ್ದೇಶ. ಒಂದೊಂದು ಹಾಡಿನ ಸಾಹಿತ್ಯಕ್ಕೂ ಒಂದೊಂದು ಹಿನ್ನೆಲೆಯಿದೆ, ಅಣಕಗಳಿವೆ. 

ಉದಾಹರಣೆಗೆ, ‘ಮುಸಾಫಿರ್‌’ ಹಾಡಿನಲ್ಲಿ ನಮ್ಮ ಪ್ರವಾಸದ ಶೋಕಿಯ ಅಣಕವಿದೆ. ಜೀವನವೇ ಒಂದು ಪಯಣ. ಈ ಪ್ರಯಾಣದಲ್ಲಿ ಅಪರಿಚಿತರು ಭೇಟಿಯಾಗುತ್ತಲೇ ಇರುತ್ತಾರೆ, ಬಿಟ್ಟಿರಲಾಗದಷ್ಟು ಆಪ್ತರೂ ಆಗುತ್ತಾರೆ. ಬೆಂಗಳೂರು ಉದ್ಯಾನ ಮತ್ತು ಕೆರೆಗಳ ಆಗರವಾಗಿತ್ತು. ಆಧುನಿಕತೆಗೆ ಬಲಿಯಾಗಿರುವ ಕೆರೆಗಳನ್ನು ಕುರಿತ ಹಾಡು ಇದೆ. ಇಡೀ ಕುಟುಂಬದ ಕಾಳಜಿ ಮಾಡುವ ಮಹಿಳೆಯನ್ನು ಅದೇ ಮಂದಿ ಅಷ್ಟು ಕಾಳಜಿ ಮಾಡುವುದಿಲ್ಲ. ಹಾಗಾಗಿ ಇಲ್ಲಿ ಮಹಿಳೆಯನ್ನು ರೂಪಕವಾಗಿಸಿದ್ದೇನೆ. ನೋಟು ಅಮಾನ್ಯೀಕರಣದ ಪ್ರಸಂಗ, ಮಕ್ಕಳು ಭುಜ ಭುಜ ಹಿಡಿದು ಆಡುತ್ತಿದ್ದ ಚುಕುಬುಕು ರೈಲಿನ ಆಟ ಮತ್ತು ಇಂದಿನ ವೇಗದ ರೈಲುಗಳು... ಹೀಗೆ ಬದುಕಿನ ಸ್ಥಿತ್ಯಂತರಗಳನ್ನು ಹಾಡಾಗಿಸಿದ್ದೇನೆ.

ಬೆಂಗಳೂರಿನ ಬಣ್ಣಗಳು ಹಿಂದಿಯಲ್ಲೇಕೆ?

ಈ ಪ್ರಶ್ನೆಯನ್ನು ಶ್ರೋತೃಗಳು ಕೆಲವರು ಕೇಳಿದ್ದಾರೆ. ಬೆಂಗಳೂರಿನ ಸಾಂಸ್ಕೃತಿಕ ಮತ್ತು ಸಾಮಾಜಿಕ ಬದುಕನ್ನು ಬೆಂಗಳೂರಿನವರಷ್ಟೇ ಅಲ್ಲ ಬೇರೆಯವರೂ ತಿಳಿದುಕೊಳ್ಳಬೇಕು ಎಂಬ ಕಾರಣಕ್ಕೆ ಹಿಂದಿಯಲ್ಲಿ ಬರೆದೆ. ಇದನ್ನು ನ್ಯಾಷನಲ್‌ ಅಪೀಲ್‌ ಎನ್ನುತ್ತೇನೆ. ಹಾಗೆ ನೋಡಿದರೆ, 24 ವರ್ಷಗಳಿಂದ ನಾನು ಕನ್ನಡದಲ್ಲಿ ಬರೆದದ್ದು, ಹಾಡಿದ್ದು ಜಾಸ್ತಿ. ಏಳು ಹಾಡುಗಳಲ್ಲಿ ಆರು ಹಾಡು ನನ್ನದು. ಒಂದು ಹಾಡನ್ನು ಉಮಾ ಸುಧೀಂದ್ರ ಬರೆದಿದ್ದಾರೆ. 

ಸೊಂಟಕ್ಕೆ ಬ್ಯಾಂಡ್‌ನ ಸದಸ್ಯರಾದ ಕಾರ್ತಿಕ್‌ ಮಣಿ (ಡ್ರಮ್‌ ಮತ್ತು ತಾಳವಾದ್ಯ), ಶೇಡ್ರಾಕ್‌ ಸೊಲೊಮನ್‌ (ಕೀಬೋರ್ಡ್‌), ಕೇದಾರ್‌ ನಾಯಕ್‌  (ಬೇಸ್‌ ಗಿಟಾರ್‌) ಹಿಮ್ಮೇಳದಲ್ಲಿದ್ದಾರೆ. ಹಾಡುಗಳನ್ನು ಸೊಂಟಕ್ಕೆ ಅವರೊಂದಿಗೆ ಪತ್ನಿ ಚೈತ್ರಾ, ಮಗ ಅನುರಾಗ್‌, ಮಗಳು ಅಪರ್ಣಾ, ಚೈತ್ರಾ ಕಳಾಕೃಷ್ಣನ್ (ಪಾಶ್ಚಾತ್ಯ) ಹಾಡಿದ್ದಾರೆ. ಪ್ರಭಾತ್‌ ಗೋಪಾಲ್‌ (ಸಿತಾರ್‌), ಮಧುಸೂಧನ್‌ (ತಾಳವಾದ್ಯ), ಬಾಲಸುಬ್ರಹ್ಮಣ್ಯ (ಆಫ್ಘಾನಿಸ್ತಾನದ ತಂತಿ ವಾದ್ಯ ರುಬಾಬ್‌) ನೆರವು ನೀಡಿದ್ದಾರೆ.

ಆಲ್ಬಂ ಆನ್‌ಲೈನ್‌ ಪೋರ್ಟಲ್‌ಗಳಲ್ಲಿ ಸಿ.ಡಿ ರೂಪದಲ್ಲಿ ‘ಸತ್‌ರಂಗ್‌’ ಲಭ್ಯ. ಬೆಲೆ ₹120. iTunes, Amazon, Saavn and Gaana ಪೋರ್ಟಲ್‌ಗಳಲ್ಲಿ ‘satrang prakash’ ಎಂದು ಹುಡುಕಬಹುದು. www.prakashsontakke.com

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !