ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ‘ಡೈಮಂಡ್ ಸ್ಟ್ರೋಕ್‌‌’ ಕಲಾವಿದ ಶಿವ ಹಾದಿಮನಿ

Last Updated 8 ಏಪ್ರಿಲ್ 2021, 12:22 IST
ಅಕ್ಷರ ಗಾತ್ರ

ಕಾನ್ವಾಸ್ ಮೇಲಿನ ಈ ಚಿತ್ರಗಳನ್ನು ನೋಡಿದ ತಕ್ಷಣ ‘ಅರೆ, ಡಿಜಿಟಲ್‌ ಸಲಕರಣೆಗಳನ್ನು ಬಳಸಿ ಮಾಡಿದ ಕಲಾಕೃತಿಗಳು’ ಎಂದು ಅನ್ನಿಸಿದೇ ಇರದು. ಚಿತ್ರವನ್ನು ನೋಡಿದವರು, ಇದು ಕುಂಚದಿಂದ ಬಿಡಿಸಿದ್ದೇ ಅಥವಾ ಕಂಪ್ಯೂಟರ್‌ ಪ್ರಿಂಟೇ ಎಂಬುದನ್ನು ದೃಢ ಪಡಿಸಲು ಒಮ್ಮೆ ಕಾನ್ವಾಸ್‌ ಮೇಲೆ ಕೈ ಆಡಿಸದೇ ಇರಲಾರರು. ಈ ಕಲಾವಿದನ ಕೈಚಳಕವೇ ಅಂತಹದ್ದು.

ಇವರ ಕುಂಚದಲ್ಲಿ ಮೂಡಿದ ಚಿತ್ರಗಳು, ಕಲಾ ಜಗತ್ತಿನಲ್ಲಿ ಸದ್ಯ ಪ್ರಚಲಿತದಲ್ಲಿರುವ ಎಲ್ಲ ನಮೂನೆಯ ಚಿತ್ರಕಲೆಗಳಿಂದ ಸಂಪೂರ್ಣ ಭಿನ್ನ. ಡಿಜಿಟಲ್‌ ಚಿತ್ರ‌ಕಲೆಯಿಂದ ಪ್ರೇರೇಪಣೆ ಪಡೆದು, ಆರ್ಕಾಲಿಕ್‌ ವರ್ಣಗಳನ್ನು ಬಳಸಿ, ಗೆರೆಗಳ ರೀತಿಯಲ್ಲಿ, ವಜ್ರದ ಅಂಚುಗಳ ಮಾದರಿಯಲ್ಲಿ ಚಿತ್ರ ಬಿಡಿಸುವ ಈ ಕಲಾವಿದ ತನ್ನ ಚಿತ್ರ ಕಲಾ ಶೈಲಿಗೆ ‘ಡೈಮಂಡ್‌ ಸ್ಟ್ರೋಕ್‌’ ಎಂದು ಹೆಸರಿಟ್ಟಿದ್ದಾರೆ. ಇತರೆ ಕಲಾವಿದರು, ಚಿತ್ರಕಲಾಸಕ್ತರು ಎಲ್ಲರೂ ಇವರ ಶೈಲಿಯನ್ನು ಮೆಚ್ಚಿದ್ದಾರೆ. ನೂರಾರು ಕಲಾಕೃತಿಗಳ ರಾಶಿಯಲ್ಲಿ ಈ ಕಲಾವಿದನ ಕೈಯಲ್ಲಿ ಅರಳಿದ ಕೃತಿಗಳನ್ನು ಸುಲಭವಾಗಿ ಗುರುತಿಸಬಹುದು.

ಅಂದ ಹಾಗೆ, ಆ ಕಲಾವಿದರ ಹೆಸರು ಶಿವ ಹಾದಿಮನಿ. ಮೂಲತಃ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನವರು. 13 ವರ್ಷಗಳಿಂದ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ನೆಲೆಸಿದ್ದಾರೆ. ಚಿತ್ರಕಲಾ ಶಿಕ್ಷಕಿಯಾಗಿರುವ ಪತ್ನಿ ಶಶಿಕಲಾ ಅವರಿಗಾಗಿ ತಮ್ಮ ಕಲಾ ಪಯಣವನ್ನು ಗಡಿ ಜಿಲ್ಲೆಯಲ್ಲಿ ನಡೆಸುತ್ತಿದ್ದಾರೆ. ಚಿತ್ರ ಕಲಾ ಜಗತ್ತಿನಲ್ಲಿ ಹೆಚ್ಚು ಪರಿಚಿತರಲ್ಲ. ಆದರೆ ತಮ್ಮ ವಿಭಿನ್ನ ಶೈಲಿಯಿಂದಾಗಿ ಈಗ ಪ್ರಚಲಿತಕ್ಕೆ ಬರುತ್ತಿದ್ದಾರೆ.

ನ್ಯೂಟ್ರಲ್‌ ಕಲರ್‌ನಲ್ಲಿ (ಮಿಡಲ್‌ ಟೋನ್‌ ಎಂದು ಅವರು ಕರೆಯುತ್ತಾರೆ), ಗಮನಸೆಳೆಯುವ (ಹೈಲೈಟ್‌) ಮತ್ತು ಹೆಚ್ಚು ಗಾಢ ಬಣ್ಣಗಳನ್ನು ಬಳಸುವುದು ಶಿವ ಹಾದಿಮನಿ ಅವರ ವೈಶಿಷ್ಠ್ಯ. ಬ್ರಶ್‌ ಮತ್ತು ಪೇಟಿಂಗ್‌ ನೈಫ್‌ನಿಂದ (ಚಿತ್ರ ಬಿಡಿಸಲು ಬಳಸುವ ಚಾಕು) ಇವರು ಚಿತ್ರ ಬಿಡಿಸುತ್ತಾರೆ. ತಮ್ಮ ಖುಷಿಗಾಗಿ ಕುಂಚ ಹಿಡಿಯುವ ‌ಇವರು, ತಮಗೆ ಒಲಿದಿರುವ ಕಲೆಯನ್ನು ಸಂಪಾದನೆಯ ದಾರಿ ಎಂದು ಇನ್ನೂ ನೋಡಿಲ್ಲ. ಇವರ ಕಲಾಕೃತಿಗಳನ್ನು ಇಷ್ಟಪಟ್ಟು ಖರೀದಿಸಲು ಮುಂದಾದರೆ ಅಥವಾ ಇಂತಹದ್ದೆ ಕಲಾಕೃತಿ ಬೇಕು ಎಂದು ಹೇಳಿದರೆ, ಮಾಡಿ ಕೊಡುತ್ತಾರೆ. ಹಾದಿಮನಿ ಅವರು ಹಲವು ಹೋಟೆಲ್‌ಗಳಿಗಾಗಿ ಕಲಾಕೃತಿಗಳನ್ನು ಸೃಷ್ಟಿಸಿದ್ದಾರೆ.

ದಕ್ಷಿಣ ಕನ್ನಡ–ಉಡುಪಿ ಜಿಲ್ಲೆಯಗಳ ಜಾನಪದ ಕ್ರೀಡೆ ಕಂಬಳದ ಕಲಾಕೃತಿ
ದಕ್ಷಿಣ ಕನ್ನಡ–ಉಡುಪಿ ಜಿಲ್ಲೆಯಗಳ ಜಾನಪದ ಕ್ರೀಡೆ ಕಂಬಳದ ಕಲಾಕೃತಿ

ಬಾಲ್ಯದ ಕಲಾಸಕ್ತಿ ಹೆಮ್ಮರವಾಗಿದ್ದು...

46 ವರ್ಷದ ಶಿವ ಅವರಿಗೆ ಬಾಲ್ಯದಿಂದಲೂ ಕಲೆಯ ಮೇಲೆ ವಿಪರೀತ ಮೋಹ. ಆದರೆ, ಅವರ ಊರಿನ ಅಕ್ಕಪಕ್ಕ ಕಲಾ ಶಾಲೆಗಳು ಇರಲಿಲ್ಲ. ಇದರಿಂದಾಗಿ ಚಿಕ್ಕಂದಿನಲ್ಲಿ ಅವರಲ್ಲಿದ್ದ ಕಲೆಯ ಬೇರಿಗೆ ನೀರು ಸಿಗಲಿಲ್ಲ. ರಟ್ಟಿ ಹಳ್ಳಿ ಎಂಬಲ್ಲಿ ಕಲಾ ಕಾಲೇಜು ಒಂದು ಆರಂಭವಾಗಿದ್ದೇ ತಡ. ಅದಕ್ಕೆ ಸೇರಿಕೊಂಡರು. ಅಲ್ಲಿ ಶಿಕ್ಷಣ ಮುಗಿಸಿ ಧಾರವಾಡದಲ್ಲಿ ಮಾಸ್ಟರ್‌ ಇನ್‌ ಫೈನ್‌ಆರ್ಟ್ಸ್‌ ವ್ಯಾಸಂಗ ಮುಗಿಸಿದರು.

‘ಚಿತ್ರಕಲಾ ಶಿಕ್ಷಣ ಮುಗಿದ ನಂತರ 1996ರಿಂದ 98ರವರೆಗೆ ನಾನು ಓದಿದ ರಟ್ಟಿ ಹಳ್ಳಿ ಕಾಲೇಜಿನಲ್ಲಿ ಬೋಧಕನಾಗಿ ಸೇರಿದೆ. ಈ ವೃತ್ತಿಯ ಸಂಪಾದನೆಯಿಂದ ಜೀವನ ನಡೆಸುವುದು ಕಷ್ಟ ಎಂದುಕೊಂಡು ಆ ಕೆಲಸ ಬಿಟ್ಟು, ಡಿಜಿಟಲ್‌ ಚಿತ್ರಕಲೆಯಲ್ಲಿ ತೊಡಗಿದೆ. ಎಂಟು ವರ್ಷ ಆ ಕೆಲಸ ಮಾಡಿದೆ’ ಎಂದು ಹೇಳುತ್ತಾರೆ ಶಿವ ಹಾದಿಮನಿ.

‘2008ರಲ್ಲಿ ಪತ್ನಿಗೆ ಗುಂಡ್ಲುಪೇಟೆ ತಾಲ್ಲೂಕಿನ ತೆರಕಣಾಂಬಿಯಲ್ಲಿ ಚಿತ್ರಕಲಾ ಶಿಕ್ಷಕಿಯಾಗಿ ಕೆಲಸ ಸಿಕ್ಕಿತು. ಆಕೆಯೊಂದಿಗೆ ನಾನೂ ಇಲ್ಲಿಗೆ ಬಂದೆ. ಡಿಜಿಟಲ್‌ ಚಿತ್ರಕಲೆಯನ್ನು ಕೈಬಿಟ್ಟು, ಕುಂಚವನ್ನು ಹಿಡಿದೆ. ಎಲ್ಲರಂತೆ ಸಾಮಾನ್ಯ ಚಿತ್ರಗಳನ್ನು ಮಾಡಲು ಹೊರಟೆ. ಯಾಕೋ ಸಮಾಧಾನವಾಗಲಿಲ್ಲ. ಬೇರೆ ಏನಾದರೂ ಮಾಡಬೇಕು ಎಂದುಕೊಂಡೆ. ಯಾರ ಪೇಂಟಿಂಗ್‌ ಅನ್ನೂ‌ ನೋಡದೇ ನನ್ನದೇ ಸ್ವಂತ ಶೈಲಿ ಇರಬೇಕು ಎಂದು ಪ್ರಯತ್ನ ಪಟ್ಟೆ.ಬಣ್ಣಗಳಲ್ಲಿ ತಿಂಗಳುಗಟ್ಟಲೆ ಪ್ರಯೋಗ ಮಾಡಿದೆ. ಯಶಸ್ಸು ಸಿಗದೇ ಇದ್ದಾಗ ನೋವು, ಹತಾಶೆ, ದುಃಖ ಎಲ್ಲವೂ ಆಯಿತು’ ಎಂದು ಪಟ್ಟ ಶ್ರಮವನ್ನು ಸ್ಮರಿಸುತ್ತಾರೆ ಅವರು.

ಕೊಯಮತ್ತೂರಿನ ಈಶಾ ಫೌಂಡೇಷನ್‌ನ ಆವರಣದಲ್ಲಿರುವ ಆದಿಯೋಗಿ ಶಿವನ ಕಲಾಕೃತಿ
ಕೊಯಮತ್ತೂರಿನ ಈಶಾ ಫೌಂಡೇಷನ್‌ನ ಆವರಣದಲ್ಲಿರುವ ಆದಿಯೋಗಿ ಶಿವನ ಕಲಾಕೃತಿ

‘ಡೈಮಂಡ್‌ ಸ್ಟ್ರೋಕ್‌‌’ ಹೆಸರು ಬಂದಿದ್ದು...

‘ಪಟ್ಟು ಬಿಡದೇ ಒಂದು ತಿಂಗಳು ಒಂದೇ ಚಿತ್ರ ಮಾಡಿದೆ. ಸ್ವಲ್ಪ ಖುಷಿಯಾಯಿತು. ದೆಹಲಿಯಲ್ಲಿ ಪ್ರದರ್ಶನವನ್ನೂ ಮಾಡಿದೆ. ಆದರೂ ಯಶಸ್ವಿಯಾಗಲಿಲ್ಲ. ವಾಪಸ್‌ ಬಂದು ಮತ್ತೆ ಪ್ರಯತ್ನಪಟ್ಟೆ. ಎರಡು ವರ್ಷಗಳ ಕಾಲ ನಿರಂತವಾಗಿ ಶ್ರಮ ಹಾಕಿದೆ. ನಂತರ ಯಶಸ್ಸು ಸಿಕ್ಕಿತು. ಕಲಾವಿದರು ಸೇರಿದಂತೆ ಚಿತ್ರಗಳನ್ನು ನೋಡಿದವರೆಲ್ಲರೂ ಇದು ಯಾವ ಶೈಲಿ ಎಂದು ಕೇಳುತ್ತಿದ್ದರು. ಗೆರೆಗಳು ಇವೆ. ವಜ್ರದ (ಡೈಮಂಡ್‌) ರೀತಿಯಲ್ಲಿ ಕಾಣುತ್ತಿವೆ ಎಂದು ಹೇಳತೊಡಗಿದರು. ಇದನ್ನೆಲ್ಲ ಗಮನಿಸಿ ನಾನೇ, ಈ ಶೈಲಿಗೆ ಡೈಮಂಡ್‌ ಸ್ಟ್ರೋಕ್‌’ ಎಂದು ಹೆಸರಿಟ್ಟೆ’ ಎಂದು ಚಿತ್ರಕಲಾ ಶೈಲಿಗೆ ಹೊಸ ಹೆಸರು ಇಟ್ಟ ಸನ್ನಿವೇಶವನ್ನು ವಿವರಿಸುತ್ತಾರೆ ಶಿವ ಹಾದಿಮನಿ.

2011ರಿಂದ ಅವರು ಹೊಸ ಶೈಲಿಯಲ್ಲಿ ಚಿತ್ರ ಬಿಡಿಸುತ್ತಿದ್ದಾರೆ. 2014ರಿಂದೀಚೆಗೆ ಡೈಮಂಡ್‌ ಸ್ಟ್ರೋಕ್‌ ಕಲೆಯಲ್ಲಿ ಹಾದಿಮನಿ ಪಳಗಿದ್ದಾರೆ. ಚಿತ್ರಕಲೆಯಲ್ಲಿ ತೊಡಗಿಕೊಳ್ಳಲು ಆರಂಭಿಸಿದಾಗಿನಿಂದ ಇದುವರೆಗೂ 20ಕ್ಕೂ ಹೆಚ್ಚು ಕಡೆ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿದ್ದಾರೆ. ರಾಜ್ಯ ಮಾತ್ರವಲ್ಲದೇ, ದೆಹಲಿ, ಮುಂಬೈ ಕೊಯಮತ್ತೂರು ಸೇರಿದಂತೆ ಹೊರ ರಾಜ್ಯಗಳ ಕಲಾವಿದರು ಹಾಗೂ ಕಲಾಸಕ್ತರ ಮುಂದೆ ತಮ್ಮ ಕಲಾ ಸಾಮರ್ಥ್ಯ ಅನಾವರಣಗೊಳಿಸಿದ್ದಾರೆ. ಗಡಿ ಜಿಲ್ಲೆಯಲ್ಲಿ 13 ವರ್ಷಗಳಿಂದ ನೆಲೆಸಿದ್ದರೂ, ಅವರ ಚಿತ್ರಗಳ ಒಂದು ಪ್ರದರ್ಶನವೂ ನಡೆದಿರಲಿಲ್ಲ. ಅದು ಕೂಡ ಈಗ ನೆರವೇರಿದೆ. ಜಿಲ್ಲಾಡಳಿತ ಭವನದ ಆವರಣದಲ್ಲಿ ಏಪ್ರಿಲ್‌ 7 ಮತ್ತು 8ರಂದು ಎರಡು ದಿನಗಳ ಏಕವ್ಯಕ್ತಿ ಚಿತ್ರ ಕಲಾ ಪ್ರದರ್ಶನ ನಡೆದಿದೆ.

ಕುರುಕ್ಷೇತ್ರ ಯುದ್ಧದ ಸನ್ನಿವೇಶ: ಅರ್ಜುನನ ರಥಕ್ಕೆ ಸಾರಥಿಯಾದ ಕೃಷ್ಣ
ಕುರುಕ್ಷೇತ್ರ ಯುದ್ಧದ ಸನ್ನಿವೇಶ: ಅರ್ಜುನನ ರಥಕ್ಕೆ ಸಾರಥಿಯಾದ ಕೃಷ್ಣ
ಕಲಾವಿದ ಶಿವ ಹಾದಿಮನಿ
ಕಲಾವಿದ ಶಿವ ಹಾದಿಮನಿ

ನಟರಾಜ, ತಾಂಡವವಾಡುತ್ತಿರುವ ಶಿವ, ಧ್ಯಾನಸ್ಥ ಶಿವ, ಶ್ರೀರಾಮ, ಕಂಬಳ, ಹುಲಿ ವೇಷಧಾರಿ, ರಾಘವೇಂದ್ರ ಸ್ವಾಮಿ, ರಾಧಾ ಕೃಷ್ಣ, ಅರ್ಜುನನ ರಥವನ್ನು ಮುನ್ನಡೆಸುತ್ತಿರುವ ಕೃಷ್ಣ... ಸೇರಿದಂತೆ 45 ಆಕರ್ಷಕ ಕಲಾಕೃತಿಗಳನ್ನು ಜಿಲ್ಲೆಯ ಜನರಿಗೆ ತೋರಿಸಿದ್ದಾರೆ.

ಶಿವ ಹಾದಿಮನಿ ಅವರ ವಿಭಿನ್ನ ಚಿತ್ರಕಲಾ ಶೈಲಿಯನ್ನು ‘ಪ್ರಜಾವಾಣಿ’ ಕೂಡ ಗುರುತಿಸಿದೆ. ಕಳೆದ ವರ್ಷದ ದೀಪಾವಳಿ ವಿಶೇಷಾಂಕದ ಮುಖಪುಟದ ‘ಅಗಣಿತ ರಾಮ’ ಚಿತ್ರವು ಇವರ ಕುಂಚದಲ್ಲಿ ಮೂಡಿತ್ತು. ಚಿತ್ರವು ಓದುಗರ ಮೆಚ್ಚುಗೆಗೂ ಪಾತ್ರವಾಗಿತ್ತು.

ಗುಂಡ್ಲುಪೇಟೆ ಊಟಿ ರಸ್ತೆಯಲ್ಲಿ ಸುಸಜ್ಜಿತ ಚಿತ್ರಕಲಾ ಸ್ಟುಡಿಯೊ ನಿರ್ಮಿಸಿ, ತಮ್ಮ ಕಲಾಕೃತಿಗಳ ಶಾಶ್ವತ ಪ್ರದರ್ಶನ ಮತ್ತು ಮಾರಾಟ ಮಾಡುವ ಮಹದಾಸೆ ಶಿವ ಹಾದಿಮನಿ ಅವರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT