ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಭೂಮಿ: ಬಣ್ಣದ ಚಿಟ್ಟೆಯ ಚೆಲ್ಲಾಟ..

Last Updated 12 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ಕೋಲಾರದ ಆದಿಮ ಕುಟೀರದಲ್ಲಿ ಚಿಟ್ಟೆಯ ಚೆಲ್ಲಾಟವನ್ನು ಅಲ್ಲಿನ ಮರಗಿಡ, ಕಲ್ಲು ಬಂಡೆಗಳೂ ಕಣ್ತುಂಬಿಕೊಂಡು ಆನಂದಿಸಿರಬಹುದು. ಕಳೆದೆರಡು ವರ್ಷಗಳಿಂದ ಕೊರೊನಾ ಹೆಸರಿನಲ್ಲಿ ಇಲ್ಲಿ ಬಣ್ಣದ ಚಿಟ್ಟೆಗಳ ಚೆಲ್ಲಾಟ ನಿಂತು ಹೋಗಿ, ಆದಿಮ ಮಕ್ಕಳ ರಂಗಗುಡಿ ಮೂಕವಾಗಿತ್ತು. ಆದಿಮ ಹುಟ್ಟಿಕೊಂಡಿದ್ದೇ ಮಕ್ಕಳಲ್ಲಿ ದೇಸಿ ನೆಲಮೂಲ ಸಂಸ್ಕೃತಿಯ ಬೇರುಗಳ ಪರಿಚಯಿಸಿ ವಿವಿಧ ಸಾಂಸ್ಕೃತಿಕ ನೋಟಗಳನ್ನು ಬಿತ್ತಲು. ಆ ಕೆಲಸವನ್ನು ಚಾಚೂ ತಪ್ಪದೆ 2006ರಿಂದ ಪ್ರತಿವರ್ಷವೂ ಎಷ್ಟೇ ಕಷ್ಟವಾದರೂ ನಿಭಾಯಿಸುತ್ತಾಬಂದಿದೆ. ಮಕ್ಕಳ ಮನಸ್ಸಿನ ಅರಿವಿನ ಹಣತೆಯಾಗಿ ಬೆಳಕು ನೀಡುತ್ತಿದೆ. ಅದೇ ಮಕ್ಕಳ ಬೇಸಿಗೆ ಶಿಬಿರ ‘ಚುಕ್ಕಿಮೇಳ’.

ಕವಿ ಕೋಟಗಾನಹಳ್ಳಿ ರಾಮಯ್ಯನವರ ಪರಿಕಲ್ಪನೆಯಲ್ಲಿ ನಾಡಿನ, ನಾಡಿನಾಚೆಯ ಪ್ರತಿಭಾವಂತ ರಂಗಕರ್ಮಿಗಳು, ನೂರಾರು ಸ್ಥಳೀಯ ಕಾರ್ಯಕರ್ತರು, ಹತ್ತಾರು ವರ್ಷಗಳ ಕಾಲ ಐವತ್ತಕ್ಕೂ ಹೆಚ್ಚು ಮಕ್ಕಳ ನಾಟಕಗಳು ಆದಿಮ ರಂಗಗುಡಿಯಲ್ಲಿ ಪ್ರಯೋಗವಾಗಲು ಜೊತೆಯಾಗಿದ್ದಾರೆ. ಮಕ್ಕಳ ರಂಗಭೂಮಿಯತ್ತ ಆದಿಮಕ್ಕೆವಿಶೇಷ ಕಾಳಜಿ ಇದೆ ಎನ್ನುವುದಕ್ಕೆ ಇದೊಂದು ಉತ್ತಮ ನಿದರ್ಶನ.

ಚುಕ್ಕಿಮೇಳಕ್ಕೆ ಆದಿಮ ರಂಗು ರಂಗು ವೈಭವವಾಗಿ ಸಿಂಗಾರಗೊಳ್ಳುತ್ತದೆ. ಮಕ್ಕಳು, ಪೋಷಕರು ‘ಪಿಲಪಿಲಾ’ ಅಂತ ಓಡಾಡುತ್ತಾ, ಕುಂತು, ನಿಂತು ಮಾತಾಡೊ ದೃಶ್ಯಗಳು ಬಲುಸೊಗಸು. ಪೋಷಕರು ಬರೀ ಬಂಧುಗಳಂತೆ ಆದಿಮಕ್ಕೆ ಬಂದು ಹೋಗದೇ ನಿರಂತರ ಗುಂಪು ಗುಂಪುಗಳಾಗಿ ತೆಕ್ಕೆ ಕಟ್ಟಿಕೊಂಡು ಬರುವಾಗ ಬರಿ ಕೈನಾಗ ಬರರು. ಅವರವರ ಶಕ್ತ್ಯಾನುಸಾರ ಬುತ್ತಿ ಕಟ್ಟಿಕೊಂಡು ತಂದ ಹಣ್ಣು-ಹಂಪಲು, ತಿಂಡಿ-ತಿನಿಸುಗಳನ್ನು ಅಲ್ಲಿನ ಮಕ್ಕಳಿಗೆಲ್ಲಾ ಹಂಚಿ ಆದಿಮ ಅಂಗಳದಲ್ಲಿ ಕೂತು, ಅಲ್ಲಿನ ನಿರ್ಮಲ ನಿಷ್ಕಪಟ ಗಾಳಿಯ ಉಸಿರಾಡಿ ‘ಮತ್ತೊಮ್ಮೆ ಎಂದು, ಹೇಗೆ ಬರೋಣ’ ಎಂದೇ ಆಲೋಚಿಸುತ್ತಾ ಇರುತ್ತಾರೆ.

ನಗರ, ಪಟ್ಟಣ ಪರಿಸರದಲ್ಲಿ ಬೆಳೆದ ಕಾನ್ವೆಂಟ್ ಶಾಲೆ ಮಕ್ಕಳು, ಹಳ್ಳಿಗಾಡಿನ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆ ಮಕ್ಕಳು ಇಲ್ಲಿಗೆ ಬರುತ್ತಾರೆ. ಹಸಿವಿನ ಪರಿಚಯವಿಲ್ಲದ ಮಕ್ಕಳು, ಹಸಿವಿನಿಂದ ಪರಿತಪಿಸಿ ಬದುಕುತ್ತಿರುವ ಮಕ್ಕಳು ಒಂದು ಕಡೆ ಸೇರುತ್ತಾರೆ. ಆದಿಮ ಎನುವ ಜೇನುಗೂಡಿನಲ್ಲಿ ನೂರಾರು ಮಕ್ಕಳು ಜೇನಿಬ್ಬೆಗಳಂತೆ ಅಲ್ಲಿನ ಪರಿಸರದ ಜೊತೆ ಜೋಲಿ ಜೋತಾಡಿ ಬೆರೆತು ಹೋಗುತ್ತಾರೆ. ಸುಮಾರು ಹದಿನೈದರಿಂದ ಇಪ್ಪತ್ತು ದಿನಗಳ ಕಾಲ ಬೆಟ್ಟದ ಪರಿಸರದಲ್ಲಿ ಅವರದೇ ಲೋಕವನ್ನು ಕಟ್ಟಿಕೊಂಡು ರೆಕ್ಕೆಪುಕ್ಕ ಬಂದ ಹಕ್ಕಿಗಳಂತೆ, ಜಿಡ್ಡುಗಟ್ಟಿದ ಸಮಾಜದಲ್ಲಿ ಮೊಟ್ಟೆಗಳಾಗಿದ್ದವೆಲ್ಲಾ ಚಿಟ್ಟೆಗಳಾಗಿ ಹೊರಬಂದು ಬಣ್ಣದ ಚಿಟ್ಟೆಗಳಂತೆ ಕಲ್ಲುಬಂಡೆ, ಮರಗಿಡಗಳೊಂದಿಗೆ ಒಂದಾಗಿ ಓಡಾಡಿ, ಕೂಡಾಡಿ, ಮಾತಾಡಿ ಹಾರಾಡುತ್ತಾರೆ.

ಮಕ್ಕಳಲ್ಲಿ ಸಾಕಷ್ಟು ಬದಲಾವಣೆಯ ಚಹರೆಗಳು ಕಾಣಿಸುತ್ತವೆ. ಅವರ ಚಲನವಲನಗಳಲ್ಲಿ, ಕಲಿಕೆಯಲ್ಲಿ, ಚಟುವಟಿಕೆಗಳಲ್ಲಿ ಹೊಸ ಹುರುಪು, ಉತ್ಸಾಹ, ಉಲ್ಲಾಸ ಹೇಳತೀರದು. ಮಕ್ಕಳಲ್ಲಿ ವಿಶ್ವಮಾನವತೆಯನ್ನು ಕಾಣಲು ಇಂತಹ ಮೇಳಗಳು ಎಷ್ಟು ಮುಖ್ಯ ಅನ್ನುವುದು ತಿಳಿಯುತ್ತದೆ. ಅಷ್ಟೇ ಅಲ್ಲದೆ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿ ಅಲ್ಲಿ ನಡೆಯುವ ಸೃಜನಾತ್ಮಕ ಪ್ರಯೋಗಗಳು ಸಹಕಾರಿಯಾಗಿವೆ. ಸಮ ಸಮಾಜದ ಸಾಮಾಜಿಕ ವ್ಯವಸ್ಥೆಗೆ ಮುನ್ನುಡಿಯಾಗಿ ಹಂಚಿ ತಿನ್ನುವ, ಕೂಡಿ ಬದುಕುವ ಅರಿವು ತಾನಾಗಿ ಮಕ್ಕಳಲ್ಲಿ ಮೂಡುತ್ತದೆ.

ಕೊರೊನಾ ದುರಿತಕಾಲವೆಂದು ಎಲ್ಲವೂ ಸ್ತಬ್ಧವಾಗಿ ಎರಡು ವರ್ಷಗಳಿಂದ ಮಕ್ಕಳ ಚುಕ್ಕಿಮೇಳ ನಿರ್ವಹಿಸಲು ಸಾಧ್ಯ
ವಾಗಲಿಲ್ಲ. ಹಾಗೆಯೇ ರಂಗಭೂಮಿಯ ಚಟುವಟಿಕೆಗಳೂ ನಿಂತು ಹೋಗಿದ್ದವು. ಇತ್ತೀಚೆಗಷ್ಟೇ ಸುಮಾರು ಒಂದು ಗಂಟೆಯ ಕಾಲ ಪ್ರೇಕ್ಷಕರ ಮನಸು ಕದ್ದ ಏಕವ್ಯಕ್ತಿ ನಾಟಕ ‘ಚಿಟ್ಟೆ’.

ಆದಿಮ ಕುಟೀರದಲ್ಲಿ ಮಕ್ಕಳ ಕಲರವ, ಮಕ್ಕಳ ದನಿ, ಕುಣಿತ ಮರೆತಿವಿ ಎನ್ನುವಾಗಲೇ ಮೆಲುಕು ಹಾಕಿಸಿದ ಸಿಲಿಕಾನ್ ಸಿಟಿ ಬೆಂಗಳೂರಿನ ವಾತಾವರಣದಲ್ಲಿ ಬೆಳೆಯುತ್ತಿರುವ, ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕಂದ ಸಹೃದಯ ಗೋಕುಲನಿಂದ ‘ಚಿಟ್ಟೆ’ ಎಂಬ ಏಕವ್ಯಕ್ತಿ ನಾಟಕದ ಮೂಲಕ ಆಯಿತು.

ಚಿಟ್ಟೆ ನಾಟಕವು ಬೇಲೂರು ರಘನಂದನ್ ಅವರಿಂದ ರಚನೆ ಆಗಿದ್ದರೆ, ಅದರ ವಿನ್ಯಾಸ, ಸಂಗೀತ, ನಿರ್ದೇಶನ ಕೃಷ್ಣಮೂರ್ತಿ ಕವತ್ತಾರ್ ಅವರದಾಗಿದೆ. ಹತ್ತಾರು ಮಕ್ಕಳು ಕೂಡಿ ಮಾಡಬಹುದಾದ ವಸ್ತು ನಾಟಕದಲ್ಲಿದೆ. ಅದರಲ್ಲಿನ ಸಂಗತಿಗಳು ಸಾಮುದಾಯಿಕ, ಜಾಗತಿಕ ಮತ್ತು ಪರಿಸರದಲ್ಲಿನ ಅಸಮತೋಲನ ಕುರಿತಂತೆ ಮಾತನಾಡುತ್ತವೆ. ಆದರೆ, ಮಕ್ಕಳ ನಾಟಕದಲ್ಲಿ ಏಕಪಾತ್ರ ತಂದಿರುವ ಉದ್ದೇಶವೇ ಒಂದು ಹೊಸ ಪ್ರಯತ್ನ, ಪ್ರಯೋಗ ಅನ್ನಿಸುತ್ತದೆ ಹಾಗೂ ಅಪರೂಪವೂ ಹೌದು. ಮಕ್ಕಳ ನಾಟಕ ಅಂದಾಗ ನಾಟಕದ ವಸ್ತು, ಸಂಭಾಷಣೆ, ಹಾಡುಗಳು ರಂಜನಾತ್ಮಕವಾಗಿ ಸರಳವಾಗಿರಬೇಕು ಎನ್ನುವುದಿದೆ. ರಂಗದ ಮೇಲೆ ನಟ ಬೆಳಕಲ್ಲಿ ಪ್ರೇಕ್ಷಕ ಪ್ರಭುಗಳು ಕತ್ತಲಲ್ಲಿ ಇರುವುದರಿಂದ ಕೆಲವೊಮ್ಮೆ ಕೆಲವು ಸುಳ್ಳಾಗುವ ಸಾಧ್ಯತೆಗಳೂ ಇವೆ.

ನಾಟಕದಲ್ಲಿ ಗೋಕುಲನ ‘ಪಾಪಣ್ಣಿ’ ಪಾತ್ರ ಅತ್ತ ಗ್ರಾಮೀಣಕ್ಕೂ ಇತ್ತ ನಗರ ಜೀವನಕ್ಕೂ ಕನ್ನಡಿ ಹಿಡಿದಂತಿದೆ. ಮಕ್ಕಳ ಹಕ್ಕು, ಇವತ್ತಿನ ಆರ್ಥಿಕ ಮುಗ್ಗಟ್ಟುಗಳ ನಡುವೆ ಮಕ್ಕಳು ಎದುರಿಸುತ್ತಿರುವ ಸವಾಲು, ಮಕ್ಕಳನ್ನು ಕಾಡುವ ಬಡತನ, ಬಡತನ ತಂದೊಡ್ಡುವ ಹಸಿವು, ಶೈಕ್ಷಣಿಕ ಅವಧಿಯಲ್ಲಿ ಮಕ್ಕಳಿಗೆ ಆಗುತ್ತಿರುವ ಒತ್ತಡ ಸಾರಾಸಗಟಾಗಿ ನಾಟಕ ರಂಗದ ಮೇಲೆ ಒಂದು ಹಣತೆಯಾಗಿ ರಾರಾಜಿಸುತ್ತಾ ಸಾಗುತ್ತವೆ. ಹಾಡುಗಳಲ್ಲಿ ಪರಿಸರಕ್ಕೆ ಸಂಬಂಧಿಸಿದ ಕೆರೆ, ಕೆರೆಯ ಕೊರಗನ್ನು ರೂಪಕವಾಗಿಸಿಕೊಂಡು ‘ತುಳುಕೀ ತುಳುಕಿ ಬೇಸರವೇ ಕೆರೆಯೇ, ನೋವಾಯ್ತಾ ಕೆರೆಯೇ ನನ್ನ ಮುದ್ದು ಮರಿಯೇ’ ಎಂದು ಕಟ್ಟಿದ್ದರೆ, ‘ನಗುತಾ ಇರಬೇಕು ಅಳುವನ್ನು ಮರೀಬೇಕು’ ಎನ್ನುವ ಹಾಡೂ ಪ್ರೇಕ್ಷಕರನ್ನು ಆಪ್ತವಾಗಿಸಿಕೊಳ್ಳುತ್ತದೆ. ಮಕ್ಕಳ ಮನಸ್ಸಲ್ಲಿ ‘ಹೌದು! ಹಸಿವು ಯಾಕಾಗುತ್ತದೆ? ನನ್ನಪ್ಪನ ಸ್ವಭಾವ ಮತ್ತು ನಡತೆ ಇನ್ನೊಬ್ಬರ ಅಪ್ಪನಂತೆ ಯಾಕಿಲ್ಲ’ ಎನ್ನುವ ಪ್ರಶ್ನೆಗಳು ಮೂಡುತ್ತವೆ. ಇಂತಹ ಅಚಾತುರ್ಯಗಳಿಗೆ ಕಾರಣಗಳ ಹುಡುಕಾಟ ಮತ್ತು ಮಗು ಕದಿಯಲು ಕಾರಣ ಏನು ಎನುವಂಥದ್ದು ಪ್ರೇಕಕರನ್ನು ಕಾಡುತ್ತವೆ.

ಪುಟ್ಟ ಬಾಲಕ ಗೋಕುಲನ ಅಭಿನಯಚಾತುರ್ಯ ನಿಜಕ್ಕೂ ಬೆರಗು ಮೂಡಿಸುತ್ತದೆ. ಏರಿಳಿತಗಳ ಗಮನದಲ್ಲಿಟ್ಟುಕೊಂಡು ಆಡಿರುವ ಸಂಭಾಷಣೆ ಆಗಬಹುದು, ಹಾವಭಾವ, ದೇಹಭಾಷೆ, ಹಾಸ್ಯ ಸನ್ನಿವೇಶ, ರಂಗಪರಿಕರಗಳ ಬಳಕೆ, ಸಾಮಾನ್ಯವಾಗಿ ಆಗಬಹುದಾದ ತಾಂತ್ರಿಕ ದೋಷಗಳ ನಿವಾರಿಸಿಕೊಳ್ಳುವ ಕ್ರಿಯಾವಿಧಾನಕ್ಕೆ ಸಂಬಂಧಿಸಿ ಒಬ್ಬ ನುರಿತ ಕಲಾವಿದನಲ್ಲಿಯೂ ಕೆಲವೊಮ್ಮೆ ಕೊರತೆ ಕಾಣಿಸುತ್ತದೆ. ಆದರೆ, ಗೋಕುಲ ಎಲ್ಲಕ್ಕೂ ಮೀರಿದ ಕಲಾಪ್ರತಿಭೆ ಎನಿಸಿಕೊಂಡಿದ್ದಾನೆ. ‘ಅವನಲ್ಲಿ ಹೇಗೆ ಅಷ್ಟು ನೈಜವಾದ ಅಭಿನಯ ಪ್ರತಿಭೆ’ ಬಂತು ಎನ್ನುವುದೇ ಪ್ರೇಕ್ಷಕರ ಮಾತಾಗಿತ್ತು. ನಿರ್ದೇಶಕರು ಹೇಳಿ ಮಾಡಿಸಿದ್ದರೂ ಅವನು ಅದನ್ನು ಮೂವತ್ತನೇ ಪ್ರದರ್ಶನದಲ್ಲಿಯೂ ಅರಿವಿನ ಸೆಲೆಯಾಗಿ ಮರೆಯದೇ ನಿರ್ವಹಿಸಿರುವುದು ಅವನಲ್ಲಿನ ಆಸಕ್ತಿ, ಶ್ರದ್ಧೆ, ಶಿಸ್ತು, ಸಂಯಮಗಳನ್ನು ಎತ್ತಿ ತೋರಿಸುತ್ತದೆ.

ಕಲೆ ಎನ್ನುವುದು ಕಲಾವಿದನಲ್ಲಿ ಇದ್ದರೆ ಪ್ರತೀ ಕಲ್ಲೂ ಸುಂದರ ಶಿಲ್ಪವಾಗಲು ಸಾಧ್ಯ. ಯಾವುದೇ ಪಾತ್ರ ಕಲಾವಿದನ ಭಾವದಲ್ಲಿ ಅರಳಿ ರಂಗದ ಮೇಲೆ ಹೊರಹೊಮ್ಮುತ್ತದೆ. ಪುಟ್ಟ ಕಂದ ಗೋಕುಲನಿಂದ ಇನ್ನೂ ಹೆಚ್ಚು ನಾಟಕಗಳು, ಪಾತ್ರಗಳು ನಿರೀಕ್ಷೆ ಮಾಡುತ್ತಾ ಇರೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT