7

ರಂಗೋಲಿಯ ಲೀಲೆ...

Published:
Updated:
ರಂಗೋಲಿ

ಬೆಳಗಿನ ಜಾವ ಕೋಳಿ ಕೂಗುತ್ತಿದ್ದಂತೆ ಅಂಗಳ ಸಾರಿಸಿ ರಂಗೋಲಿ ಇಡುವುದು ವಾಡಿಕೆ. ಹೊನ್ನ ರವಿಯ ಆಗಮನಕ್ಕೆ ಮೊದಲು ಹೊಸ್ತಿಲು ಸಾರಿಸಿ ರಂಗೋಲಿ ಹಾಕಿ ಅರಿಶಿಣ-ಕುಂಕುಮವಿಟ್ಟು ನಮಸ್ಕರಿಸುವುದು ಪ್ರತಿಯೊಬ್ಬರ ಮನೆಯ ದಿನಚರಿ. ಸಗಣಿ ಹಾಕಿ ಸಾರಿಸಿದ ನೆಲದಲ್ಲಿ ರಂಗೋಲಿ ಮುಗುಳ್ನಗುವುದನ್ನು ನೋಡುವುದೇ ಒಂದು ಆನಂದ.

ರಂಗೋಲಿ ಇಲ್ಲದ ದಿನವೇ ಇಲ್ಲವೆನ್ನಬಹುದು. ಯಾವುದೇ ಹಬ್ಬವಿರಲಿ, ಸಂಭ್ರಮವಿರಲಿ, ಕಾರ್ಯಕ್ರಮವಿರಲಿ ಮೊದಲು ನಮ್ಮನ್ನು ಸ್ವಾಗತಿಸುವುದೇ ರಂಗೋಲಿ. ಈ ರಂಗೋಲಿ ನಮ್ಮ ದಿನನಿತ್ಯದ ಜೀವನದಲ್ಲಿ ಹಾಸು ಹೊಕ್ಕಾಗಿದೆ.

ರಂಗೋಲಿ ಎಂದರೆ ನೆಲದ ಮೇಲೆ ಬಿಡಿಸುವ ಚಿತ್ರ. ರಂಗವಲ್ಲಿ ಎಂಬುದು ಸಂಸ್ಕೃತ ಶಬ್ದ. ಗುಡ್ಡದಲ್ಲಿರುವ ಬೆಳ್ಳನೆಯ ಕಲ್ಲನ್ನು ತೊಳೆದು ಕುಟ್ಟಿ ಪುಡಿಮಾಡಿ ಜರಡಿ ಹಿಡಿದಾಗ ಅದರಿಂದ ದೊರೆಯುವ ಪುಡಿಯೇ ರಂಗೋಲಿ. ರಂಗೋಲಿ ಹಾಕುವುದು ಭಕ್ತಿ ಪ್ರಧಾನವಾದ, ಪವಿತ್ರವಾದ ಕಲೆಯೂ ಹೌದು.

ದೇವರ ಪೂಜೆಯಲ್ಲಿ ವಿಶೇಷ ಚಿತ್ತಾರದ ರಂಗೋಲಿಗಳನ್ನು ಹಾಕುತ್ತಾರೆ. ಬೇರೆ ಬೇರೆ ಪೂಜೆಗೆ ಬೇರೆ ಬೇರೆ ಮಂಡಲಗಳು ಬಳಕೆಯಾಗುತ್ತವೆ. ಮಂಡಲವೆಂದರೆ ವೃತ್ತಾಕಾರದಲ್ಲಿ ಬಿಡಿಸಲಾಗಿರುವ ಮಾಡುವ ಪೂಜೆಗೆ ಸಂಬಂಧಪಟ್ಟಂತೆ ಬಿಡಿಸಿರುವ ರಂಗೋಲಿಗಳು. ನೈವೇದ್ಯ ಇಡುವಾಗಲೂ ಅದರ ಕೆಳಗೆ ರಂಗೋಲಿ ಹಾಕಲಾಗುತ್ತದೆ. ಇದರಿಂದಲೇ ರಂಗೋಲಿಯ ಮಹತ್ವ ಅರಿವಾಗುತ್ತದೆ.

ಸಾಮಾನ್ಯ ದಿನಗಳಲ್ಲಿ ಬಣ್ಣಗಳನ್ನು ತುಂಬಿ ಆಕರ್ಷಕವಾಗಿ ಕಾಣುವಂತೆಯೂ ಮಾಡುತ್ತಾರೆ. ಕೆಲವೂಮ್ಮೆ ಹೂವಿನ ಎಸಳುಗಳಿಂದ, ಎಲೆಗಳಿಂದ ರಂಗೋಲಿಯನ್ನು ಸಿಂಗರಿಸಲಾಗುತ್ತದೆ. ಇದರಿಂದ ಆಯಾ ಕ್ಷಣಗಳು ಮೆರುಗು ಪಡಯುತ್ತವೆ. ಮದುವೆಯ ದಿನಗಳಲ್ಲಿ ಗೋಡೆಗಳಲ್ಲಿಯೂ ರಂಗೋಲಿಯ ಚಿತ್ತಾರಗಳು ಕಾಣುತ್ತವೆ.

ಕೃಷ್ಣನ ಜನ್ಮಾಷ್ಟಮಿಯಂದು ಕೃಷ್ಣನ ಹೆಜ್ಜೆಯನ್ನು, ದೀಪಾವಾಳಿಯಂದು ಗೋವಿನ ಹೆಜ್ಜೆಯನ್ನು, ನಾಗಪಂಚಮಿಯಂದು ಹಾವುಗಳ ಚಿತ್ರವನ್ನು ಬಿಡಿಸುತ್ತಾರೆ. ಆಯಾ ಸಂದರ್ಭಕ್ಕೆ ತಕ್ಕಂತೆ ರಂಗೋಲಿ ಆಕೃತಿ ಬದಲಾಗುತ್ತದೆ.

ರಂಗೋಲಿ ಹಾಕುವ ವಿಷಯದಲ್ಲಿ ಬಡವರು ಶ್ರೀಮಂತರೆಂಬ ಭೇದವಿಲ್ಲ. ರಂಗವಲ್ಲಿ ಹಾಕಲು ಅಕ್ಕಿ ಹಿಟ್ಟು, ಮರಳನ್ನೂ ಬಳಸಲಾಗುತ್ತದೆ. ಹಬ್ಬದ ದಿನಗಳಲ್ಲಿ ಊರಿನ ರಸ್ತೆಗಳಲ್ಲಿ ಹಾಕುವ ರಂಗೋಲಿ ನೋಡುವುದೇ ಚೆನ್ನ. ರಂಗೋಲಿಯಲ್ಲಿ ಕಾಲ ಬದಲಾದಂತೆ ಬದಲಾವಣೆಯೂ ಆಗಿದೆ. ಹಿಂದೆ ಚುಕ್ಕಿಯಿಂದ ರಂಗೋಲಿ ಹಾಕಲಾಗುತ್ತಿತ್ತು. ಆದರೆ ಇಂದು ರೆಡಿಮೇಡ್ ರಂಗೋಲಿ ಹಾಳೆಗಳು ಮಾರುಕಟ್ಟೆಯಲ್ಲಿವೆ. ಇಂಥವುಗಳನ್ನು ಬಳಸುವುದರಿಂದ ಮನಸ್ಸು ಮುದಗೊಳ್ಳಲಾರದು.

ರಂಗೋಲಿ ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸಿ ನಕಾರಾತ್ಮಕ ಶಕ್ತಿಯನ್ನು ತಡೆಯುತ್ತದೆ. ರಂಗೋಲಿ ತುಂಬುವ ಒಂದೊಂದು ಬಣ್ಣವೂ ಒಂದೊಂದು ವಿಷಯವನ್ನು ಪ್ರತಿನಿಧಿಸುತ್ತದೆ. ಕೆಂಪು ಶಕ್ತಿ ಪ್ರತಿನಿಧಿಸಿದರೆ, ನೀಲಿ ಉತ್ಸಾಹ, ಹಸಿರು ಸಮೃದ್ಧಿ, ಕೇಸರಿ ತ್ಯಾಗ, ಹಳದಿ ಶ್ರೀಮಂತಿಕೆಯನ್ನು ಪ್ರತಿನಿಧಿಸುತ್ತದೆ. ಪುರಾಣಗಳ ಕಾಲದಿಂದಲೂ ರಂಗೋಲಿ ತಳುಕು ಹಾಕಿಕೊಂಡಿದೆ.

ರಾಮ ವನವಾಸ ಮುಗಿಸಿ ಕೊಂಡು ರಾಜ್ಯಕ್ಕೆ ಹಿಂದಿರುಗಿದಾಗ ಅಲ್ಲಿನ ಪ್ರತಿಯೊಂದು ಮನೆಯ ಮುಂಭಾಗದಲ್ಲೂ ವಿವಿಧ ರಂಗೋಲಿಗಳಿಂದ ಅಲಂಕರಿಸಿ ರಾಮನನ್ನು ಸ್ವಾಗತಿಸಲಾಗಿತ್ತು ಎಂದು ಪುರಾಣ ಗ್ರಂಥಗಳಲ್ಲಿ ಉಲ್ಲೇಖವಿದೆ. ಆದ್ದರಿಂದ ರಂಗೋಲಿ ಭಕ್ತಿಯ ಸಂಕೇತವೂ ಹೌದು. ಮನಸ್ಸನ್ನು ಮುದಗೊಳಿಸುವ ಭಾವ ಪ್ರಧಾನವೂ ಹೌದು.

ಇತ್ತೀಚಿನ ದಿನಗಳಲ್ಲಿ ಆದಾಯವನ್ನು ಕೊಡುವಂತಹ ಕಲೆಗಳಲ್ಲಿ ಇದೂ ಒಂದು. ಈಗೀಗ ಭಾರತೀಯರ ಈ ಕಲೆ ಹೊರದೇಶಗಳಲ್ಲೂ ಪ್ರಸಿದ್ಧಿಯಾಗಿದೆ. ಪ್ರಶಂಸೆ ಪಡೆದಿದೆ. ಈ ಕಲೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕಾಗಿದೆ. ಆದ್ದರಿಂದ ಈ ಕಲೆಯನ್ನು ಉಳಿಸಿ, ಬೆಳಸುವುದು ನಮ್ಮೆಲ್ಲರ ಕರ್ತವ್ಯ. ನಮ್ಮ ಮಕ್ಕಳಿಗೆ ಹಾಡು, ನೃತ್ಯ, ಎಲ್ಲವನ್ನು ಕಲಿಸುವ ನಾವು ಈ ಕಲೆಯನ್ನು ಕಲಿಸಲು ಮುಂದಾಗೋಣ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !