ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತ ರಸ ಋಷಿ, ರಾಗಸಂಯೋಜಕ ಬಳ್ಳಾರಿಯ ದಿ. ಎ. ಚಂದ್ರಶೇಖರ ಗವಾಯಿಗಳ ಪುಣ್ಯಸ್ಮರಣೆ

Last Updated 27 ಮೇ 2022, 13:26 IST
ಅಕ್ಷರ ಗಾತ್ರ

ಬೆಂಗಳೂರು: ಸಂಗೀತ ರಸ ಋಷಿ, ಮಾಂತ್ರಿಕ ರಾಗಸಂಯೋಜಕ ಬಳ್ಳಾರಿಯ ದಿ. ಎ. ಚಂದ್ರಶೇಖರ ಗವಾಯಿಗಳ ಪುಣ್ಯಸ್ಮರಣೆ ಸಂಗೀತೋತ್ಸವ ಕಾರ್ಯಕ್ರಮವನ್ನು ದಿನಾಂಕ 29–05–2022ರ ಬೆಂಗಳೂರಿನ ಬಸವನಗುಡಿಯ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ಆಯೋಜಿಸಲಾಗಿದೆ. ದಿನವಿಡೀ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ.

ಜೀವನದುದ್ದಕ್ಕೂ ಸಂಗೀತವನ್ನು ಉಸಿರಾಗಿಸಿಕೊಂಡು, ಸಂಗೀತವನ್ನೇ ಬದುಕಾಗಿಸಿಕೊಂಡು ಆರಾಧಿಸುತ್ತಾ ಸೇವೆಗೈದ ಹಾಗೂ ಗೈಯುತ್ತಲಿರುವ ಕಲಾವಿದರ ಪರಂಪರೆಗೆ ಸೇರಿದವರಲ್ಲಿ ಬಳ್ಳಾರಿಯ ದಿ.ಎ. ಚಂದ್ರಶೇಖರ ಗವಾಯಿಗಳು ಒಬ್ಬರು, 13/06/1933 ರಂದು ಬಳ್ಳಾರಿ ಸಮೀಪದ ಅಂತಾಪುರ ಗ್ರಾಮದಲ್ಲಿ ಜನಿಸಿದರು. ಆರಂಭಿಕ ಶಿಕ್ಷಣ ನೀಡಿದವರು ಮರಿಯಣ್ಣ ಮಾಸ್ತರು, ಮುಂದುವರಿದ ಸಂಗೀತ ಶಿಕ್ಷಣವನ್ನು ಶ್ರೀ ಸವಣೂರು ಕೃಷ್ಣಾಚಾರ್ಯ, ಶ್ರೀ ಸಿದ್ಧರಾಮ ಜಂಬಲದಿನ್ನಿ ಹಾಗೂ ಡಾ. ಪಂಡಿತ್‌ ಪುಟ್ಟರಾಜ ಗವಾಯಿಗಳವರಿಂದ ಪಡೆದರು. ಈ ಮೂರು ಗುರುಗಳ ಗರಡಿಯಲ್ಲಿ ಪಳಗುತ್ತಾ ಅವರ ಕಸುವನ್ನು ಹೀರಿಕೊಂಡು ಬೆಳೆದು ಕಲಾವಿದರಾಗಿ ರೂಪಗೊಂಡವರು ಚಂದ್ರಶೇಖರ ಗವಾಯಿಗಳು. ಕರ್ನಾಟಕ ಸಂಗೀತ ಹೆಚ್ಚು ಪ್ರಚಲಿತವಿದ್ದ ಬಳ್ಳಾರಿಯಲ್ಲಿ ಹಿಂದೂಸ್ಥಾನಿ ಸಂಗೀತವನ್ನು ಐದು ದಶಕಗಳವರೆಗೆ ಉಳಿಸಿ ಬೆಳೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರ ಪ್ರತಿಭೆಯ ಒಂದು ಅಂಶವನ್ನು ಹೇಳುವುದಾದರೆ ಒಂದು ಗೀತೆ ಇವರ ಕೈಗೆ ಸಿಕ್ಕ ಅರ್ಧ ಗಂಟೆಯೊಳಗೆ ಅದಕ್ಕೆ ಸುಂದರವಾದ ರಾಗ ಸಂಯೋಜನೆ ಮಾಡುವ ಕುಶಲತೆ ಇವರಿಗೆ ಕರತಲಾಮಲಕವಾಗಿತ್ತು. ಇವರು ಸಾಹಿತ್ಯ ಪ್ರೇಮಿಗಳೂ ಆಗಿದ್ದರು. ಭಾವಗೀತೆಗಳಲ್ಲಿ ಬರುವ ಪರಿಕಲ್ಪನೆಗಳ ಬಗ್ಗೆ ಚರ್ಚೆಯನ್ನು ಮಾಡುತ್ತಿದ್ದರು.

ಮೈಸೂರು ದಸರಾ ಉತ್ಸವ, ಹಂಪಿ ಉತ್ಸವ, ಎರಡು ಬಾರಿ ನವರಸಪುರ ಉತ್ಸವಗಳಲ್ಲಿ (ಎರಡನೆ ಬಾರಿ ಅವಕಾಶ ಸಿಗುವುದು ಅಪರೂಪ), ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯು ಏರ್ಪಡಿಸಿದ್ದ ಕಾರ್ಯಕ್ರಮಗಳು ಸೇರಿ ಹಲವು ಪ್ರತಿಷ್ಠಿತ ವೇದಿಕೆಗಳಲ್ಲಿ ಕಾರ್ಯಕ್ರಗಳನ್ನು ನೀಡಿದ ಹಿರಿಮೆ ಇವರದು.

ಹಲವು ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿದ್ದುಂಟು. ಕರ್ನಾಟಕ ಸರ್ಕಾರದ ಸಂಗೀತ ನೃತ್ಯ ಅಕಾಡೆಮಿಯಿಂದ ‘ಕರ್ನಾಟಕ ಕಲಾಶ್ರೀʼಪ್ರಶಸ್ತಿ ಹಾಗೂ ಗದುಗಿನ ವೀರೆಶ್ವರ ಪುಣ್ಯಾಶ್ರಮದ ವತಿಯಿಂದ ಪೂಜ್ಯ ಪುಟ್ಟರಾಜ ಗವಾಯಿಗಳು ನೀಡಿದ ‘ಸಂಗೀತ ಸುಧಾಕರʼಪ್ರಶಸ್ತಿ ಇವರಿಗೆ ಸಂದಿದೆ.

ಹೆಗ್ಗಳಿಕೆಗಳು:

1) ಸುಪ್ರಸಿದ್ಧ ನಟ ಹಾಗೂ ನಿರ್ದೇಶಕ ಶ್ರೀ ಸುನೀಲ್‌ ಪುರಾಣಿಕ್‌ ಅವರು ಗವಾಯಿಗಳ ಬಗ್ಗೆ 20 ನಿಮಿಷಗಳ ಒಂದು ಸಾಕ್ಷ್ಯ ಚಿತ್ರವನ್ನು ನಿರ್ಮಿಸಿದ್ದಾರೆ. ಇದಕ್ಕೆ ಕಾರಣೀಭೂತರಾದವರು ಶ್ರೀ ಮುದ್ದು ಮೋಹನ್‌ ಸರ್‌ ಅವರು.
2. ಕಲಾ ಪ್ರೇಮಿ ಸಂಘದ ಆಶ್ರಯದಲ್ಲಿ ನಡೆಯುತ್ತಿದ್ದ ಅನೇಕ ನಾಟಕಗಳಿಗೆ ಸಂಗೀತ ನಿರ್ದೇಶನ ನೀಡುತ್ತಿದ್ದರು.
3. ನೂರಾರು ಭಾವಗೀತೆ ಹಾಗೂ ಭಕ್ತಿ ಗೀತೆಗಳಿಗೆ ರಾಗ ಸಂಯೋಜನೆ ಮಾಡಿದ್ದರು. ಇವರ ರಾಗ ಸಂಯೋಜನೆಯ ಗೀತೆಗಳ ಅನೆಕ ಧ್ವನಿ ಸುರುಳಿಗಳು ಹೊರಬಂದಿವೆ.
4. ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದ ಸಂದರ್ಭದಲ್ಲಿ ವಿಶೇಷವಾಗಿ ಅಹ್ಚಾನಿತರಾಗಿ ಸನ್ಮಾನಿಸಲ್ಪಟ್ಟವರಲ್ಲಿ ಶ್ರೀ. ಚಂದ್ರಶೇಖರ ಗವಾಯಿಗಳು ಒಬ್ಬರಾಗಿದ್ದರು. ಇದು ಕೆಂದ್ರ ಸರ್ಕಾರ ತೋರಿಸಿದ ಗೌರವವಾಗಿತ್ತು.
5. ಇವರ ದಪ್ಪ, ಗಟ್ಟಿ ಹಾಗೂ ಸುಶ್ರಾವ್ಯ ಕಂಠದ ಗಾಯನ ಮುದನೀಡುವುದರ ಜೊತೆಗೆ ಒಂದು ರೋಚಕ ಅನುಭವವನ್ನೂ ಕೊಡುತ್ತಿತ್ತು.

ಚಂದ್ರಶೇಖರ ಗವಾಯಿಗಳ ಜೀವನದಲ್ಲಿ ನಡೆದ ಒಂದೆರಡು ಮಹತ್ವದ ಘಟನೆಗಳನ್ನು ಹೇಳದೆ ಹೋದರೆ ಅವರ ಬಗ್ಗೆ ಆಡುವ ಮಾತುಗಳು ಅಪೂರ್ಣವಾಗುತ್ತವೆ.
1. ಶ್ರೀಮತಿ ಸರೋಜಿನಿ ಮಹಿಷಿ ಅವರ ಸಹೋದರ ಬೆಂಗಳೂರಿನಲ್ಲಿ ಕರ್ನಾಟಕ ಸರ್ಕಾರದ ಸೀನಿಯರ್‌ ಆಂಡರ್ ಸೆಕ್ರೆಟರಿ ಆಗಿದ್ದಾಗ ಅವರು ಸರ್ಕಾರಿ ಕೆಲಸದ ನಿಮಿತ್ತ ಬಳ್ಳಾರಿಗೆ ಬಂದಿದ್ದರು. ಸಂಗೀತ ಪ್ರೇಮಿಗಳಾಗಿದ್ದ ಅವರು ವಚನಗಳನ್ನು ಹೇಳುವ ಕಲಾವಿದರು ಬಳ್ಳಾರಿಯಲ್ಲಿ ಇದ್ದಾರೆಯೇ ಎಂದು ವಿಚಾರಿಸಿದಾಗ ಅವರಿಗೆ ತಿಳಿದು ಬಂದದ್ದು ಚಂದ್ರಶೇಖರ ಗವಾಯಿಗಳ ಬಗ್ಗೆ. ತಾವು ಇಳಿದು ಕೊಂಡಿದ್ದ ಗೆಸ್ಟ್‌ ಹೌಸಿನಿಂದ ಬಳ್ಳಾರಿ ಕಲಾಪ್ರೇಮಿ ಸಂಘಕ್ಕೆ ಹೋಗಿ ಗವಾಯಿಗಳ ಭೇಟಿಯಾಗಿ ಮಾತನಾಡಿ ಅನೇಕ ಶರಣರ ವಚನಗಳನ್ನು ಅವರ ಕಂಠದಿಂದ ಕೇಳಿ ಆನಂದ ಪಟ್ಟು ಅವರನ್ನು ಕೊಂಡಾಡಿದ್ದರು. ಚಂದ್ರಶೇಖರ ಗವಾಯಿಗಳು,‘ನಾನೇ ಗೆಸ್ಟ್‌ ಹೌಸಿಗೆ ಬಂದು ಹಾಡುತ್ತಿದ್ದೆ’ಎಂದು ಸೌಜನ್ಯತೆಯಿಂದ ಹೇಳಿದ ಮಾತಿಗೆ ಅವರು ವಿನಮ್ರವಾಗಿ ಹೇಳಿದ್ದು ಹೀಗೆ ‘ನಮಗೆ ನೀರು ಬೇಕಾದರೆ ನಾವೇ ಬಾವಿಗೆ ಹೋಗಬೇಕು ಬಾವಿ ನಾವಿದ್ದಲ್ಲಿಗೆ ಬರುವುದಿಲ್ಲ’ಎಂದು. ಇವರಿಬ್ಬರಲ್ಲಿ ನಡೆದ ಸಂಭಾಷಣೆ ಒಂದು ಸಾಂಸ್ಕೃತಿಕ ವಿನಿಮಯವಾಗಿತ್ತು.
2. ಎರಡನೇ ಪ್ರಸಂಗ: ಹಿಂದೆ ಬಳ್ಳಾರಿಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಾಗಿದ್ದ ಶ್ರೀಗಗನ್‌ ದೀಪ್‌ ಸರ್‌ ಅವರು ಹಾಗೂ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯದರ್ಶಿಗಳಾಗಿದ್ದ ಶ್ರೀ ಕಾಂಬ್ಳೆ ಸರ್‌ ಅವರು ಸಂಗೀತ ಪ್ರೇಮಿಗಳಾಗಿದ್ದು ಒಂದು ವರ್ಷೊಪ್ಪತ್ತು ಶ್ರೀ ಚಂದ್ರಶೇಖರ ಗವಾಯಿಗಳಿಂದ ಸುಗಮ ಸಂಗೀತ ಅಂದರೆ ಭಕ್ತಿಗೀತೆ ಹಾಗೂ ಭಾವಗೀತೆಗಳ ಗಾಯನವನ್ನು ಕಲಿತುಕೊಂಡಿದ್ದರು. ಈ ಐ.ಎ.ಎಸ್‌ ಹಾಗೂ ಐ.ಪಿ.ಎಸ್‌ ಅಧಿಕಾರಿಗಳ ಇಚ್ಛೆಯ ಮೇರೆಗೆ ಬಳ್ಳಾರಿಯ ‘ಸ್ವರ ಸಂಗಮʼ ಎನ್ನುವ ಸಾಂಸ್ಕೃತಿಕ ಸಂಘಟನೆಯು ತನ್ನ ಲಾಂಛನದ ಅಡಿಯಲ್ಲಿ ಹಮ್ಮಿಕೊಂಡದ್ದ ಒಂದು ದೊಡ್ಡ ಕಾರ್ಯಕ್ರಮದಲ್ಲಿ ಈ ಅಧಿಕಾರಿಗಳಿಬ್ಬರೂ ಸೇರಿ ದೊಡ್ಡ ಮೊತ್ತದ ನಿಧಿಯನ್ನು ಗುರುಗಳಿಗೆ ಅರ್ಪಿಸಿದರು. ಇದೊಂದು ಕಳೆ ಕಟ್ಟಿದ ವರ್ಣರಂಜಿತ ಕಾರ್ಯಕ್ರಮವಾಗಿತ್ತಲ್ಲದೆ ಗವಾಯಿಗಳ ಜಿವನದಲ್ಲಿ ನಡೆದ ದೊಡ್ಡ ಘಟನೆಯೂ ಆಗಿತ್ತು.

ಚಂದ್ರಶೇಖರ ಗವಾಯಿಗಳ ಪ್ರಮುಖ ಶಿಷ್ಯರ ಪಟ್ಟಿ ಹೀಗಿದೆ: ನಾಡಿನ ಖ್ಯಾತ ಗಾಯಕರು ಹಾಗೂ ವಿದೇಶಗಳಲ್ಲಿಯೂ ತಮ್ಮ ಸಂಗೀತದ ಕಂಪನ್ನು ಪಸರಿಸಿದ ನಿವೃತ್ತ ಐ.ಎ.ಎಸ್‌ ಅಧಿಕಾರಿಗಳಾದ ಶ್ರೀ ಮುದ್ದುಮೋಹನ, ಬೆಂಗಳೂರಿನಲ್ಲಿ ಸ್ವರಶ್ರೀ ಮ್ಯುಜಿಕ್ ಅಕಾಡೆಮಿಯ ಮುಖ್ಯಸ್ಥರು ಹಾಗೂ ಒಳ್ಳೆಯ ಸಂಘಟಕರೂ ಆಗಿರುವ ಶ್ರೀ ಜೆ. ಆರ್‌ ಗುರುರಾಜ್‌, ಬೆಂಗಳೂರಿನ ಸುಸ್ವರ ಬಗಳದ ಮುಖ್ಯಸ್ಥರು ಹಾಗೂ ರಾಗ ಸಂಯೋಜಕರೂ ಆಗಿರುವ ಶ್ರೀ ಬಿ.ಬಿ ಕುಲಕರ್ಣಿ, ಗಾಯಕರು ತಬಲಾವಾದಕರು ಹಾಗೂ ರಾಗ ಸಂಯೋಜಕರೂ ಆಗಿರುವ ಕೆನರಾಬ್ಯಾಂಕಿನ ನಿವೃತ್ತ ಉದ್ಯೋಗಿ ಶ್ರೀ ಕೆ.ಎಸ್‌. ಸತ್ಯನಾರಾಯಣ, ನಿವೃತ್ತ ಪೊಫೆಸರ್‌ ಡಾ|| ಆರ್.‌ ಆರ್.‌ ಬಾಡಗಂಡಿ, ನಾಡಿನ ಹೆಸರಾಂತ ರಂಗನಟಿ, ಗಾನ ಕೋಗಿಲೆ ದಿ. ನಾಡೋಜ ಸುಭದ್ರಮ್ಮ ಮನ್ಸೂರ್‌ , ಪ್ರಸಿದ್ದ ಗಾಯಕಿ ದಿ. ಶ್ರೀಮತಿ ವಿಜಯ ಕಿಶೋರ್‌, ದಿ. ಸಿ.ವಿ ಆರ್‌ ವರ್ಮ, ದಿ. ತ್ರಿಕಮ್‌ಜಿ ಜೈನ್‌, ದಿ. ಜಂಬುನಾಥ, ದಿ. ರಜನೀಶ್ ಕುಲಕರ್ಣಿ, ಶ್ರೀಮತಿ ರಾಧಾ, ಶ್ರೀಮತಿ ಜಯಶ್ರೀ ಭಟ್‌, ನಿವೃತ್ತ ಜಿಲ್ಲಾ ವಾರ್ತಾಧಿಕಾರಿ ಶ್ರೀ ಚಂದ್ರಕಾಂತ್‌, ಶ್ರೀ ನಾರಾಯಣಪ್ಪ, ಶ್ರೀಮತಿ ಶೈಲಜಾ ಶ್ರೀಕಂಠ, ಶ್ರೀ ಬಸವಾರಾಜ್‌ ಮೋರಗೇರಿ, ಶ್ರೀ ಎಂ ಅಹಿರಾಜ್.‌
ಬೆಂಗಳೂರಿನ ಕವಿ, ಸಾಹಿತಿ, ನಿರೂಪಕ ಶ್ರೀ ಟಿ. ಗುರುರಾಜಾಚಾರ್‌ ಜಹಗಿರ್‌ದಾರ್‌ ಹಾಗೂ ಬಳ್ಳರಿಯ ಪೋಲಕ್ಸ್‌ ಜೀನ್ಸ್‌ ಸಿದ್ಧ ಉಡುಪುಗಳ ಪ್ರಸಿದ್ಧ ಉದ್ಯಮಿ, ಹವ್ಯಾಸಿ ಹಾರ್‌ಮೋನಿಯಮ್ ವಾದಕ ಶ್ರೀ ಎಚ್.‌ ಎಂ. ಹನುವಂತಪ್ಪ ಇವರು ಚಂದ್ರಶೇಖರ ಗವಾಯಿಗಳ ಅತ್ಮಿಯ ಸಂಗೀತ ಬಂಧುಗಳಾಗಿದ್ದವರು.

ಸುಮಾರು ಐದು ದಶಕಗಳವರೆಗೆ ಸಂಗೀತ ಶಾರದೆಯ ಕೈಂಕರ್ಯಗೈದ ಶ್ರೀ ಎ. ಚಂದ್ರಶೇಖರಗವಾಯಿಗಳು 27–05–2002ರಂದು ನಿಧನರಾಗಿದ್ದು, ಗುರುಗಳ ಪುಣ್ಯಸ್ಮರಣೆಯನ್ನು ದಿನಾಂಕ 29-5-22 ರ ಭಾನುವಾರದಂದು ಬೆಂಗಳೂರು ಬಸವನಗುಡಿಯ ‘ಇಂಡಿಯನ್‌ ಇನ್ಸ್ಟಿಟ್ಯೂಟ್‌ ಆಫ್‌ ವರ್ಲ್ಡ್ ಕಲ್ಚರ್’ಸಭಾಂಗಣದಲ್ಲಿ ‘ಕರ್ನಾಟಕ ಕಲಾಶ್ರೀ, ಗಾಯನಾಚಾರ್ಯ ಪಂಡಿತ್‌ ದಿ.ಎ. ಚಂದ್ರಶೇಖರಗವಾಯಿಗಳಪುಣ್ಯಸ್ಮರಣೆ ಸಂಗೀತೋತ್ಸವ ಸಮಿತಿ’ಹಮ್ಮಿಕೊಂಡಿದೆ.

ಟಿ. ಗುರುರಾಜಾಚಾರ್‌ ಜಹಗಿರ್‌ದಾರ್‌
ಬೆಂಗಳೂರು
9448939297

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT