ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗರಪಂಚಮಿ: ಒಂದು ಸಂಸ್ಕೃತಿ ಚಿಂತನೆ

Last Updated 12 ಜನವರಿ 2019, 19:45 IST
ಅಕ್ಷರ ಗಾತ್ರ

‘ಸರ್ಪರಾಜ್ಞಿ ಸೂರ್ಯೋವಾ’ ಎಂಬ ಋಗ್ವೇದದ ಸೂತ್ರವೊಂದು ಶಂಬಾ ಜೋಶಿಯವರನ್ನು ಕೆಣಕಿ ಬೃಹತ್ ಗ್ರಂಥ ರಚಿಸಲು ಕಾರಣವಾಯಿತು. ಸರ್ಪ-ನಾಗ-ನೀರು-ನೀರೆ ಮಾತೃ ಸಂಸ್ಕೃತಿಯ ಅಧ್ಯಯನಕ್ಕೆ ಬೆಳಕಾದವು. ಚಂದ್ರ ತಣ್ಣನೆಯ ಮಾತೃ ಸಂಸ್ಕೃತಿಯ ಪ್ರತೀಕ. ಸೂರ್ಯ ಸುಡುವ ಸಂಸ್ಕೃತಿಯ ಪಿತೃ ಪ್ರತೀಕ. ಇವೆರಡೂ ಹದವಾಗಿದ್ದರೆ ನರಜನ್ಮ ಜೀವಚಾಲನೆ. ಜನಾಂಗೀಯ ಸಂಸ್ಕೃತಿ ಅಧ್ಯಯನಕ್ಕೆ ಈ ಜನಪದೀಯ ಮೂಲಗಳೇ ಆಕರಗಳು. ಈ ಜಾಡಿನಲ್ಲಿ ನಮ್ಮ ಗ್ರಾಮೀಣ ಆಚರಣೆಗಳಲ್ಲಿರುವ ನಾಗರಪಂಚಮಿಯನ್ನು ನೋಡಬಹುದು.

ಸಂಕ್ರಾಂತಿಯ ಮೊದಲು ಬರುವ ಪಂಚಮಿಯಂದು ನನ್ನ ಅಜ್ಜಿ ಉಪವಾಸದ ಮೂಲಕ, ಸಂಜೆಯವರೆಗೂ ಮೌನವಾಗಿದ್ದು, ಸಂಜೆ ಮಿಂದು ಮಡಿಯಾಗಿ ಚರ‍್ಕಾನಿಶ್ಯಾಲೆ ಉಟ್ಟು, ಕುಕ್ಕೆಯಲ್ಲಿ ನಾಗನಿಗೆ ಹಣ್ಣು–ಹಾಲು, ಬೆಣ್ಣೆ, ಚಿಗಣಿ, ಹಸಿಅಕ್ಕಿ ತಂಬಿಟ್ಟು, ತೆಂಗಿನಕಾಯಿ, ಅಮ್ಮನೋರ ಎಚ್ಚ ಇಂಥವುಗಳನ್ನು ಇಟ್ಟುಕೊಂಡು, ಕುಕ್ಕೆಗೆ ಮಡಿಬಟ್ಟೆ ಮುಚ್ಚಿಕೊಂಡು ನಮ್ಮಂಥವರ ಕೈಲಿ ಲಾಟೀನು ಕೊಟ್ಟು ‘ಊಂ’ ಎನ್ನುತ್ತಾ ಹೊಲದ ಹುತ್ತದ ಬಳಿ ಕೆತ್ತಿ ಸಾರಿಸಿದ ಜಾಗಕ್ಕೆ ಕರೆದೊಯ್ಯುತ್ತಿದ್ದಳು.

ಮೌನವಾಗಿ ಪೂಜೆ ಮಾಡಿ ಹುತ್ತದ ಮುಂದೆ ಗಂಗಮ್ಮನನ್ನು ಪ್ರತಿಷ್ಠಾಪಿಸಿ ಆ ಗುಪ್ಪೆಯ ಮೇಲೆ ಮೂರು ಚಿಕ್ಕ ಕಲ್ಲುಗಳನ್ನು ಇರಿಸಿ, ಅಲ್ಲಿ ನಾಗರ ತಾಳಿ ಇಟ್ಟು ಹುತ್ತದ ಕ್ವಾವೆಗೆ ಹಾಲು ತುಪ್ಪ ಬಿಟ್ಟು, ತನಿ ಎರೆದು ಮೌನ ಮುರಿದು ಎಡೆಗೆ ತಂದಿದ್ದನ್ನು ಪ್ರಸಾದವಾಗಿ ನಮಗೆ ನೀಡಿ ಬರುತ್ತಿದ್ದುದುಂಟು. ಇಲ್ಲೂ ಒಕ್ಕಲಿಗರ ನಾಗರು, ಹರ‍್ವರ ನಾಗರು ಎಂಬ ನಾಗತಾಳಿಗಳಿರುತ್ತಿದ್ದವು. ಉಗ್ಗಿ ಅನ್ನ, ತರಕಾರಿ ಕೂಟು ಒಕ್ಕಲಿಗರ ತಾಳಿ ಇಡುವ ಎಡೆಗೆ ಸೇರ್ಪಡೆಯಾಗುತ್ತಿತ್ತು. ಪೂಜೆಗೆ ಹೋಗುವ ದಾರಿಯಲ್ಲಿ ದಲಿತರ ನೆರಳು ಇರುಳಿನಲ್ಲಿಯೂ ಬೀಳಬಾರದೆಂಬ ಸಂಪ್ರದಾಯವಿತ್ತು.

ಇದೊಂದು ನಿಷ್ಠೆಯ ಆಚರಣೆ. ಯಥಾಪ್ರಕಾರ ಸೂರ್ಯ ಅಥವಾ ಯಾಜ್ಞಿಕ ಸಂಪ್ರದಾಯದ ಪಿತೃ ಸಂಸ್ಕೃತಿಯ ವೈದಿಕರು ಮಾತೃ ಸಂಸ್ಕೃತಿಯ ಶೂದ್ರರ ಶೈವ ಆಚರಣೆಯೊಡನೆ ಹೇಗೆ ಮುಟ್ಟುಚ್ಚಿಟ್ಟು ಇಟ್ಟುಕೊಂಡೇ ಮಿಲನವಾದರು ಎಂಬ ಸೂಕ್ಷ್ಮ ವಿಶ್ಲೇಷಣೆ ಅದು. ಹಾವು ಕಾಮದ ಸಂಕೇತವೆನ್ನುವುದುಂಟು. ಕಾಮವು ಜಗತ್ತಿನ ಚಾಲನೆಯ ಹರಿವು. ಪುರುಷನನ್ನು ನಾಗರ ಸಂಕೇತದಲ್ಲಿ ಆಹ್ವಾನಿಸಿ, ಸ್ವೀಕರಿಸಿ, ಗುಹೆಗಳಲ್ಲಿ ವಾಸ ಮಾಡಿ, ಹಿತ್ತಲು ಬೇಸಾಯದಲ್ಲಿ ತೊಡಗಿ, ಅಡವಿಯಲ್ಲಿ ಅಡ್ಡಾಡಿ, ಗೆಡ್ಡೆ ಗೆಣಸು ಕಿತ್ತು ತಂದು ತನ್ನ ಮತ್ತು ಮಕ್ಕಳ ಹೊಟ್ಟೆ ಹೊರೆದವಳು ಹೆಣ್ಣು. ಮುಂದೆ ಸಂಸ್ಕೃತಿಯ ಹರವಿನಲ್ಲಿ ಪುರುಷನು ತನ್ನನ್ನು ಆಹ್ವಾನಿಸಿದ ಹೆಣ್ಣನ್ನೇ ಅಧೀನಗೊಳಿಸಿದ ಬಗೆಯೇ ಪಿತೃ ಸಂಸ್ಕೃತಿಯದು.

ಈ ಆಚರಣೆ ಕುರಿತು ನಮ್ಮ ಹಳ್ಳಿಗಾಡಿನಲ್ಲಿ ಒಂದು ಜನಪದ ಕತೆಯಿದೆ. ಅತ್ತೆ ಉಪವಾಸವಿದ್ದು ತನಿ ಎರೆಯಲು ಹೋಗಲೆಂದು ಬಚ್ಚಲ ಮನೆಯಲ್ಲಿ ನೀರು ಹುಯ್ದುಕೊಳ್ಳುತ್ತಾ ಇರುತ್ತಾಳೆ. ಅಳಿಯ ಬಂದ ಸಡಗರದಲ್ಲಿ ಸೀರೆ ಉಡುವುದನ್ನು ಮರೆತು ಕುಕ್ಕೆಗೆ ನಾಗಪೂಜೆ ಸಾಮಗ್ರಿ ಇಟ್ಟು ಬಟ್ಟೆ ಮುಚ್ಚಿಕೊಳ್ಳುತ್ತಾಳೆ. ಪದೇ ಪದೇ ಹೇಳಿದರೂ ‘ಆಯ್ತು’ ನಡೀರಿ ಎನ್ನುವಂತೆ ಲಾಟೀನು ಕೈಗೆ ಕೊಟ್ಟು ಅಳಿಯನಿಗೆ ಸನ್ನೆ ಮಾಡುತ್ತಾಳೆ. ಪೂಜೆ ಆಗುತ್ತದೆ. ಅಲ್ಲೊಂದು ತೊಗರಿಕೂಳೆ ಆ ಸಮಯದಲ್ಲಿ ಚುಚ್ಚಿಕೊಳ್ಳುತ್ತದೆ. ‘ಅಯ್ಯಯ್ಯೋ’ ಎಂದು ಹಿಂದೆ ಮುಂದೆ ಕೈ ಮುಚ್ಚಿಕೊಂಡು ಮನೆಕಡೆ ಓಡಿ ಬರುತ್ತಾಳೆ. ‘ಹಿಂಗೆ ತಗಾ ತನಿ ಎರೆದದ್ದು’ ಎಂದು ಕತೆಗಾರ್ತಿ ದ್ವಾಮವ್ವ ನಲವತ್ತು ವರ್ಷಗಳ ಹಿಂದೆ ಕಣ್ಣು ಮಿಟುಕಿಸಿ ಹೇಳಿದ್ದು ನನಗಿನ್ನೂ ನೆನಪಿದೆ.

‘The idea is that the female reproductive organ that exposed would enhance natural fertility’ ಎಂಬ ವಿಸ್ತೃತ ಚಿಂತನೆ ದೇವಿಪ್ರಸಾದ ಚಟ್ಟೋಪಾಧ್ಯಾಯರ ‘ಲೋಕಾಯತ’ ಗ್ರಂಥದಲ್ಲಿದೆ. ಅಂದರೆ ಈಗಲೂ ನಮ್ಮೂರ ನಿಮ್ಮೂರ ಗುಡಿಮುಂದೆ ಅರಳಿಮರದ ಬುಡಗಳಲ್ಲಿರುವ ನಾಗರ ತಳಿಕೆ ಕಲ್ಲುಗಳು, ಇಡೀ ಮಾನವ ಜನಾಂಗವು ಸರ್ಪವನ್ನು ಜೀವ ಚಾಲನೆಯ ಹಾಗೂ ಕೃಷಿ ಸಮೃದ್ಧಿಯ ಸಂಕೇತ ಎಂದು ಭಾವಿಸಿದ್ದನ್ನು ಹೇಳುತ್ತಿವೆ. ಟ್ರೋಬ್ರಿಯಾಂಡ್ ದ್ವೀಪವಾಸಿಗಳಲ್ಲಿ ಮಗಳನ್ನು ಅಳಿಯನಿಗೆ ಒಪ್ಪಿಸುವ ಮುಂಚೆ ಅತ್ತೆಯು ಲೈಂಗಿಕ ಕ್ರಿಯೆ ನಡೆಸಿ ಪಾಠ ಹೇಳುವ ಸಂಪ್ರದಾಯವುಂಟಂತೆ.

ಮೇಲಿನ ಕತೆ ಹಾಗೂ ಆಚರಣೆ ವರ್ತಮಾನದಲ್ಲಿ ಉಳಿದಿರುವ ಸಾಂಸ್ಕೃತಿಕ ಪಳೆಯುಳಿಕೆ. ಸಮಾಜವು ಪಶುಸಹಜ ವಿಧಾನ ದಾಟುತ್ತಾ ಬಹುಪತಿ, ಬಹುಪತ್ನಿತ್ವ ದಾಟಿ ಕೌಟುಂಬಿಕ ಬೆಳವಣಿಗೆಯಲ್ಲಿ ಮಹಾಭಾರತ-ರಾಮಾಯಣಗಳ ಮೂಲಕ ಸಾಂಸ್ಕತಿಕ ಕಥನ ಹೇಳುತ್ತಾ ಸಾಗಿರುವುದನ್ನು ಅರಿಯಲು ಇಲ್ಲಿ ಅವಕಾಶವಿದೆ.

ಉತ್ತರ ಕರ್ನಾಟಕದಲ್ಲಿ ಇದು ಹೆಣ್ಣು ಮಕ್ಕಳನ್ನು ತೌರಿಗೆ ಕರೆದು ಕಳುಹಿಸುವ ಬಹು ದೊಡ್ಡ ಹಬ್ಬ. ನಾಗರಪಂಚಮಿ ನಾಡಿಗೆ ದೊಡ್ಡದು ಎನ್ನುತ್ತದೆ ಕವಿವಾಣಿ. ಕರಾವಳಿಯಲ್ಲಿ ನಾಗಪೂಜೆಯಂತೂ ಸಮಾಜದೊಳಗೆ ಉಸಿರಿನಂತೆ ಅಂಟಿಕೊಂಡಿದೆ. ಅಷ್ಟೇ ಏಕೆ ಜಗದಾದ್ಯಂತ ಯಾವ ಜೀವಕ್ಕೂ ಇಲ್ಲದ ಪ್ರಾತಿನಿಧ್ಯ ಹಾಗೂ ಆಚರಣೆ ಸರ್ಪಮೂಲದಲ್ಲಿದೆ. ಸಮಾಜವೀಗ ಈ ಎಲ್ಲಾ ಆಚರಣೆಗಳನ್ನು ದಾಟಿ ವಿಜ್ಞಾನ ಯುಗದಲ್ಲಿದೆ. ವಿಜ್ಞಾನ ಯುಗದಲ್ಲೂ ಅಜ್ಞಾನವು ಪುರೋಹಿತಶಾಹಿಗೆ ಆದಾಯ ಹೆಚ್ಚಿಸುತ್ತಿದೆ. ಇದನ್ನು ಸಮಾಜ ಅರಿಯಬೇಕು. ಅದು ಮೌಢ್ಯದ ನೆರಳಾಗಬಾರದು.

ಪ್ರತಿ ಡಿಸೆಂಬರ್ ಷಷ್ಠಿ ದಿನ ಸುಬ್ಬಪ್ಪನ ಹೆಸರಿನಲ್ಲಿ ನಗರಗಳಲ್ಲೂ ಹೆಂಗಸರಿಗೆ ತನಿ ಎರೆಯುವ ಸಡಗರ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇರುವ ಹುತ್ತಪ್ಪ, ಪುಟ್ಟಪ್ಪ ಅರ್ಥಾತ್ ನಾಗಮರಿಯು ಶಿವ–ಶಿವೆಯರ ಪುಟ್ಟು ಹುಡುಗ. ಅವನೇ ದ್ರಾವಿಡರ ಮುರುಗ. ಏನಾದರಿರಲಿ ಋಗ್ವೇದದಲ್ಲಿ ಸರ್ಪಪೂಜೆ ಯಾಕಿಲ್ಲ? ಎಂದು ಶಂಬಾ ಅವರು ಪುರಾಣವನ್ನು ಅವರೆಬೇಳೆಯಂತೆ ಹಿಸುಕಿ ನೋಡಿರುವುದನ್ನು ಅವರ ಕೃತಿಯಲ್ಲೇ ಅರಿತು ಅನುಭವಿಸಬೇಕು, ಜನಪದೀಯ ಮೂಲದಿಂದ ಸಿಕ್ಕನ್ನು ಬಿಡಿಸಿ ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT